Sunday, June 19, 2011

ಆ ನದಿಯಲ್ಲಿ..


ಹಾವಿನಂತೆ ಬಿದ್ದುಕೊಂಡ
ದೂರದ ಬೈಪಾಸ್ ರಸ್ತೆಯಲ್ಲಿ
ಭಾರಹೊತ್ತ ಲಾರಿಯೊಂದು
ದಮ್ಮುಕಟ್ಟಿ ದಬಾಯಿಸಿ
ಮುನ್ನುಗ್ಗುವ ಸದ್ದಾಗುತ್ತಿದೆ,
ಮಟಮಟ ಉರಿವ
ಬಿಸಿಲಿಗೆ ಪೈಪೋಟಿಯಲಿ
ಗುಂಯ್ಯನೆ ಬೀಸುವ ಗಾಳಿ
-ಗೆ ಅಲುಗುವ
ತೆಂಗಿನ ಗರಿಗಳ ಚಟಚಟ, ಪಟಪಟ.

ನನ್ನ ಸಾವಿನ ಚಿತ್ರ
ನಿನ್ನ ಕಣ್ಣುಗಳಿಗೆ ತರಿಸಿದ
ನೀರಿಗೆ ಬಣ್ಣವಿಲ್ಲ,
ಕೊರೆದು ಚೂಪಾದ
ಬಂಡೆಗಳ ತುದಿಯಲಿ ಹನಿಯುವ
ಎತ್ತರದ ಜಲಪಾತದೊಂದು
ಹನಿಗೂ ಬಣ್ಣವಿಲ್ಲ.

ರಾತ್ರಿಯ ಕಪ್ಪು, ಕಡುಗಪ್ಪು ಮೋಡದೊಳಗೆ
ಮೆಲ್ಲಮೆಲ್ಲನೆ ಸರಿಯುವ
ಚಂದಿರನ ಕಾಲ್ಸಪ್ಪಳ,
ನೋವ ಸುಖದಲ್ಲಿ
ಮೌನವಾಗಿ ಹರಿದ
ಮೈಥುನ ನಿನಾದ,
ಭೂಮಿಯಾಳ ಆಳಕ್ಕಿಳಿದ
ಕಾಣದ ಬೇರು; ಮೇಲೆ ಹಸಿರ ಚಿಗುರು.

*****

ಬೆಣಚು ಕಲ್ಲುಗಳ ಮೇಲೆ
ಹರಿಯುವ ಶೀತಲ ನೀರಿಗೆ
ಕಾಲಿಳೆಬಿಟ್ಟು ನೀರು ಚಿಮ್ಮುತ್ತ,
ಉಗ್ಗುತ್ತ ಎಗ್ಗಿಲ್ಲದೆ ನುಗ್ಗುವ
ಆ ನದಿ
ಕನಸಲ್ಲಿ ಹರಿದಿತ್ತು...

ಮಧ್ಯರಾತ್ರಿ ಕಳೆದಿತ್ತು,
ಮಲಗುವ ಮುನ್ನ
ಮುಚ್ಚಲು ಮರೆತಿದ್ದ
ಕೋಣೆಯ ಕಿಟಕಿಗಳ ಹೊರಗೆ
ನಿಬ್ಬೆರಗಾಗಿಸುವ ಆಕಾಶ,
ಲಕಲಕಿಸುವ ಗೊಂಚಲು ಗೊಂಚಲು ತಾರೆಗಳು,
ಇರುಳು ಮೀಯಲು ಇಳಿದಂತೆ
ಆ ನದಿಯೊಳಗೆ...

ಒಂದರೆಗಳಿಗೆ
ನಾನೂ ಮಿಂದೆದ್ದೆ
ಅಸಂಖ್ಯ ತಾರೆಗಳ ಕೊಳದಲ್ಲಿ,
ದೂರ ಬೆಟ್ಟದ ಪರಿಮಳ,
ಓಡಿದಷ್ಟು ಬೆನ್ನು ಹತ್ತುವ, ಮುತ್ತುವ
ಕಾಡುಗುಲಾಬಿಯ ಸುಗಂಧ,
ಭೂಮಿಯುಸಿರಿನ ಸುವಾಸನೆಯಲಿ
ಮಣ್ಣ ತೊಟ್ಟಿಲು ಜೋ...ಜೋಗುಳ
ಹಾಡುತ್ತಿದ್ದಂತೆ
ಮಿಂದ ಮೈ ಮನಸ್ಸು
ನಿಧಾನ, ಧ್ಯಾನ... ಮಂಪರು, ನಿದ್ದೆ...

No comments: