Thursday, January 15, 2009

‘ನಿಜ ಮನುಷ್ಯ’ರ ಹುಡುಕಾಟದಲ್ಲಿ ‘ಮುತ್ತಾಗದ ಮಳೆಹನಿ’

ಶೃಂಗೇರಿ ಹತ್ತಿರದ ದಟ್ಟ ಕಾನನದ ಪುಟ್ಟ ಮಲೆನಾಡು ತೊರೆದು ಅಕ್ಷರಗಳನ್ನು ಜತೆ ಕಟ್ಟಿಕೊಂಡು ಹೊಟ್ಟೆಪಾಡಿಗಾಗಿ ಶಿವಮೊಗ್ಗೆ, ಬೆಂಗಳೂರಂಥ ನಿರ್ಜನ ನಗರಿಗಳಲ್ಲಿ ಗೂಡು ಕಟ್ಟಲಾರಂಭಿಸಿದಾಗ ನನ್ನೊಳಗೆ ತೆರೆದುಕೊಂಡ ಅಕ್ಷರ ರೂಪಗಳಿವು... ಎನ್ನುತ್ತ ತಮ್ಮ ಕಥಾಸಂಕಲನವನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿರುವ ವೈ.ಗ.ಜಗದೀಶ್ ಕನ್ನಡದ ಹೊಸ ತಲೆಮಾರಿನ ಸಮರ್ಥ, ಶಕ್ತಿಶಾಲಿ ಕಥೆಗಾರನಾಗಿ ಹೊರಹೊಮ್ಮಿದ್ದಾರೆ.

‘ಮುತ್ತಾಗದ ಮಳೆ ಹನಿ ಜಗದೀಶ್ ಅವರ ಕಥಾ ಸಂಕಲನ ಶೀರ್ಷಿಕೆ. ಇದು ಇದೇ ಶೀರ್ಷಿಕೆಯ ಕಥೆಯೊಂದು ಸಂಕಲನದಲ್ಲಿದೆ. ಹೊಸ ಸಂಕ್ರಮಣಗಳಿಗೆ ತೆರೆದುಕೊಂಡಿರುವ ಮಲೆನಾಡಿನ ಸಂಕೀರ್ಣ ಬದುಕನ್ನು ಅನಾವರಣಗೊಳಿಸುವ ಇಲ್ಲಿನ ಕಥೆಗಳು ಒಂದೊಂದೂ ಒಂದೊಂದು ಮುತ್ತುಗಳೇ.

ಜಗದೀಶ್ ಅವರ ಒಳಕಾಣ್ಕೆಗಳು ಇಲ್ಲಿ ವಿಸ್ತಾರವಾಗಿ ಹರಡಿಕೊಂಡಿವೆ. ಹೀಗಾಗಿಯೇ ಅವರಿಗೆ ಬೆಂಗಳೂರು, ಶಿವಮೊಗ್ಗದಂಥ ನಗರಗಳು ಅವರಿಗೆ ನಿರ್ಜನ ನಗರಿಗಳಂತೆ ಕಾಣಿಸುತ್ತವೆ. ಇಂಥ ನಿರ್ಜನ ನಗರಿಗಳ ಕಥೆಗಳನ್ನು ಬಿಟ್ಟು, ಜಗದೀಶ್ ನೇರವಾಗಿ ತಮ್ಮ ಕರುಳು ಬಳ್ಳಿ ತೊಡರಿಕೊಂಡಿರುವ ಮಲೆನಾಡಿನ ಗರ್ಭಕ್ಕೇ ಇಳಿದು ಕಥೆಗಳನ್ನು ಹೆಕ್ಕಿ ತಂದು ಇಲ್ಲಿ ಹರವಿದ್ದಾರೆ.



ಜಗದೀಶ್ ತಮ್ಮ ಕಥೆಗಳ ಕುರಿತು ತಾವೇ ಬರೆದುಕೊಳ್ಳುವುದು ಹೀಗೆ: “ಸಂಬಂಧ, ವೈವಿಧ್ಯತೆ, ಬಣ್ಣಗಳೇ ಇಲ್ಲದ ಏಕಾಕೃತಿಯ ಮನುಷ್ಯರನ್ನು ಕಂಡು ನಿರ್ವಿಣ್ಣನಾದಾಗಲೆಲ್ಲ ನನ್ನ ಮನಸ್ಸು ಏಕಾಂತಕ್ಕೆ ಸರಿದು, ಬಾಲ್ಯದಲ್ಲಿ ಕಂಡ ಸೊಬಗು, ಚಿತ್ರ ಚಿತ್ತಾರದ ಗಮ್ಯದ ಕಡೆಗೆ ಹೋಗಿಬಿಡುತ್ತದೆ. ಏರಿಳಿತ, ಸಿಟ್ಟು ಸೆಡವಿರದ ಟಿವಿ ಜಾಹೀರಾತಿನ ಲಲನೆಯರಂತೆ ಸದಾ ಹುಸಿನಗುವ ನಿರ್ಭಾವದ ನಗರದ ಬೊಂಬೆಗಳನ್ನು ಕಂಡಾಗಲೆಲ್ಲ ಎಳೆವೆಯಲ್ಲಿ ಕಂಡ ನಡೆದಾಡುವ, ಜಗಳಾಡುವ, ಮುನಿಸು ತೋರುವ, ಅಕ್ಕರೆ-ಕಕ್ಕುಲಾತಿಯಿಂದ ಪ್ರೀತಿಸುವ ನಿಜ ಮನುಷ್ಯರು ಕಣ್ಮುಂದೆ ಸುಳಿದಾಡುತ್ತಾರೆ. ಅಬ್ಬಾ, ಅಂತೂ ಮನುಷ್ಯರು ಸಿಕ್ಕರಲ್ಲ ಎಂದು ಹಿಡಿದುಕೊಳ್ಳುವಷ್ಟರಲ್ಲಿ ಅದು ಭ್ರಮೆಯೆನ್ನಿಸಿ ಸತ್ಯ ಗೋಚರವಾಗಿಬಿಡುತ್ತದೆ.’’

ಒಂದರ್ಥದಲ್ಲಿ ಇಡೀ ಸಂಕಲನದಲ್ಲಿ ಜಗದೀಶ್ ‘ನಿಜ ಮನುಷ್ಯ’ರನ್ನು ಹುಡುಕಿಕೊಂಡು ಹೋಗಿದ್ದಾರೆ. ಈ ಹುಡುಕಾಟದ ದಾರಿಯ ತೇವಗೊಂಡ ನೆನಪುಗಳು, ಪುಳಕ, ರೋಮಾಂಚನ, ನಿರಾಸೆ, ನೋವು ಎಲ್ಲವೂ ಇಲ್ಲಿ ಹರಳುಗಟ್ಟಿವೆ.

ವೈ.ಗ.ಜಗದೀಶ್ ಹೊಸ ತಲೆಮಾರಿನ ಕಥೆಗಾರರು. ಅವರಿಗೆ ಈ ತಲೆಮಾರಿನ ಸಂಕಟಗಳೆಲ್ಲವೂ ಕಾಡಿವೆ. ಜಾಗತೀಕರಣ ಹಾಗು ಕೋಮುವಾದದ ಬಾಹುಗಳು ಮನುಷ್ಯರ ಮೈ ಮನಸ್ಸುಗಳನ್ನು ಆವರಿಸಿಕೊಳ್ಳುತ್ತಿರುವುದನ್ನು ಅವರು ಬಲ್ಲರು. ಅದರಲ್ಲೂ ಮಲೆನಾಡಿನಲ್ಲಿ ಉದ್ಭವವಾಗಿರುವ ಹಳೇ ಸಮಸ್ಯೆಗಳ ಹೊಸ ಮುಖಗಳು, ಹೊಸ ಸಮಸ್ಯೆಗಳ ಹಳೆ ಮುಖಗಳನ್ನು ಅವರು ಸ್ಪಷ್ಟವಾಗಿ ಗುರುತಿಸಿಕೊಂಡಿದ್ದಾರೆ. ಈ ಸಮಸ್ಯೆಗಳು ಅವರನ್ನು ಕಾಡಿವೆ, ಕೆಣಕಿವೆ. ಹೀಗಾಗಿ ಜಗದೀಶ್ ಅವರ ಕಥೆಗಳಲ್ಲಿ ಕಾಣಿಸಿಕೊಳ್ಳುವುದು ಹೊಸ ಮಲೆನಾಡು.

ಸಂಕಲನಕ್ಕೆ ಮುನ್ನುಡಿ ಬರೆಯುತ್ತ ಡಾ.ಕೇಶವ ಶರ್ಮ ಅವರು ಇದನ್ನು ಗುರುತಿಸಿದ್ದಾರೆ. ‘ಮಲೆನಾಡು ನಾವು ಗ್ರಹಿಸಿದಷ್ಟು ಸುಂದರವಾಗಿಲ್ಲ. ಮಲೆನಾಡಿನ ಹೃದಯದ ಆಳದಲ್ಲಿ ಒಂದು ಕ್ರೌರ್‍ಯವಿದೆ. ಈ ವಾಸ್ತವವನ್ನು ಎಲ್ಲೂ ವಾಚ್ಯಗೊಳಿಸದೆ ಈ ಕತೆಗಳಲ್ಲಿ ಹೇಳಿರುವುದು ಗಮನಾರ್ಹ.

ಲೇಖಕ ತನ್ನ ಬದ್ಧತೆಯನ್ನು ಇಟ್ಟುಕೊಂಡರೂ ಅದನ್ನು ಕರಪತ್ರವಾಗಿಸದೇ ಬರೆಯುವುದು ಅಗತ್ಯ. ಈ ಕಲೆಯು ಜಗದೀಶರಿಗೆ ಸಿದ್ಧಿಸಿದೆ. ಏಕೆಂದರೆ ಎಲ್ಲವನ್ನೂ ಕತೆಯೊಳಗೆ ತಂದು ಹಾಕಬೇಕೆಂಬ ತುರಾತುರಿಯೂ ಅವರಿಗಿಲ್ಲ.’ ಎಂದು ಅವರು ಅಭಿಪ್ರಾಯಪಡುತ್ತಾರೆ.

ಜಗದೀಶ್ ಸಮಕಾಲೀನ ಸಮಸ್ಯೆಗಳನ್ನು ಅನಾವರಣಗೊಳಿಸುತ್ತಲೇ, ಸಮಸ್ಯೆಗಳ ಹಿನ್ನೆಲೆಯಲ್ಲೇ ಜಟಿಲಗೊಳ್ಳುತ್ತಿರುವ ಮನುಷ್ಯ ಸಂಬಂಧಗಳ ಕುರಿತು ಮಾತನಾಡುತ್ತಾರೆ. ತನ್ನ ಅಭಿಪ್ರಾಯವನ್ನು ಓದುಗರ ಮೇಲೆ ಹೇರುವ ಸಾಹಸಕ್ಕೆ ಕೈಹಾಕದೆ, ಓದುಗರಲ್ಲೇ ಹೊಸಹೊಸ ಅಭಿವ್ಯಕ್ತಿಗಳನ್ನು ಚಿಮ್ಮಿಸುವಷ್ಟು ಶಕ್ತಿಶಾಲಿಯಾಗಿ ಈ ಕಥೆಗಳು ಹೆಣೆದುಕೊಂಡಿವೆ.

ವೈ.ಗ.ಜಗದೀಶ್ ವೃತ್ತಿಯಿಂದ ಪತ್ರಕರ್ತರು. ಹೀಗಾಗಿ ಇಲ್ಲಿನ ಕೆಲವು ಕಥೆಗಳಲ್ಲಿ ಪತ್ರಕರ್ತನ ಕುತೂಹಲಗಳೂ ಅಲ್ಲಲ್ಲಿ ಕಾಣಿಸುತ್ತವೆ. ಆದರೆ ಕಥೆಗಾರ, ಪತ್ರಕರ್ತನ ವ್ಯಾಪ್ತಿಗಳನ್ನು ಮೀರಿ ಜಗದೀಶ್ ‘ಸಹಜ ಮನುಷ್ಯ’ರನ್ನು ಹುಡುಕಿಕೊಂಡು ಹೋಗುವ ಮೂಲಕ ಅಸಹಜ ವ್ಯಕ್ತಿ-ಭಾವನೆಗಳ ಜಗತ್ತಿಗೆ ಸವಾಲೊಡ್ಡುತ್ತಾರೆ.

ಜಗದೀಶ್ ಭಾಷೆಯನ್ನು ತಮ್ಮ ಕಥಾನಕಗಳ ಸೃಷ್ಟಿಗೆ ಒಗ್ಗುವಂತೆ ಬಳಸಿಕೊಳ್ಳುವುದನ್ನು ರೂಡಿಸಿಕೊಂಡಿದ್ದಾರೆ. ಸಂಕಲನದ ಕಡೆಯ ಕಥೆ ‘ಉರಿಯ ಬೆಂಕಿಗೆ ಮೈಯೆಲ್ಲಾ ನಾಲಿಗೆಯಲ್ಲಿನ ಕೆಲವು ಸಾಲುಗಳು ಹೀಗಿವೆ:

“..ಚಣಹೊತ್ತು ಸುಮ್ಮನಿದ್ದ ಜ್ಯೋತಿಯು ಒಳಗಣ್ಣ ತೆರೆಯಿತು. ಬೆಳ್ಳಂಬೆಳಕಿನಲ್ಲಿ ಕತ್ತಲೆಯಾಯಿತು. ಗವ್ವಗತ್ತಲೆಯಲ್ಲಿ ದೀಪವಾಯಿತು. ಗಾಳಿಯಲ್ಲಿ ಉಸಿರಾಯಿತು. ನೀರಲ್ಲಿ ಆವಿಯಾಯಿತು. ಕೊನೆಯರಿಯದ ಸಮುದ್ರವಾಯಿತು. ಗಿಡದೆಲೆಯ ಹಸಿರಾಯಿತು. ಅಳತೆಗೆ ನಿಲುಕದ ಆಗಸವಾಯಿತು. ಎಣಿಸಲಾರದ ನಕ್ಷತ್ರವಾಯಿತು. ಜಗದಗಲ ಮುಗಿಲಗಲ ಕಣ್ಣು ಗೆಜ್ಜೆಗಳ ಸಪ್ಪಳವಾಯಿತು. ಹಕ್ಕಿಯ ಉಲಿಯಾಯಿತು. ಅಮ್ಮನ ಎದೆಹಾಲಾಯಿತು. ಅಳುವ ಕಂದನ ಕೊರಳ ದನಿಯಾಯಿತು. ಮೌನದೊಳಗಿನ ನಿಶ್ಯಬ್ದವಾಯಿತು. ಶಬ್ದದೊಳಗಣ ಗದ್ದಲವಾಯಿತು... ಜ್ಯೋತಿಯು.....’’

ಅಂದ ಹಾಗೆ ಜಗದೀಶ್ ಅವರ ಕೃತಿಯನ್ನು ಪ್ರಕಟಿಸಿರುವುದು ಬೆಂಗಳೂರಿನ ಅನು ಪ್ರಕಾಶನ. ಪುಸ್ತಕದ ಬೆಲೆ ೬೦ ರುಪಾಯಿ.

2 comments:

Anonymous said...

vaiga jagadeesh avarige abhinandanegalu.
-vasanth

Anonymous said...

vaiga avara pustakavannu kutoohaladinda odide. avara srujanasheelathe, shaily, bhashe, roopaka shaily ella mechide. aadare, dalitha athava bandaya sahityavendare, dalithara gandasu brahmana sthree jote malaguvudu mathrave? vaiga bareda bahuteka kathegalalli ondadaroo hadarada prasanga iruvudu ee anumana moodisithu.
-Rattamartanda