Wednesday, January 7, 2009

ಕಾಮಾಟಿಪುರದ ವಾಸನೆಪ್ರಿಯರ ಸುತ್ತ...

ಭಾರತೀಯ ವಿಚಾರವಂತರ ವೇದಿಕೆ ಎಂಬ ಹೊಸ ಸಂಘಟನೆ ಭಾನುವಾರ ಆಯೋಜಿಸಿದ್ದ ‘ಮತಾಂತರ-ಸತ್ಯದ ಮೇಲೆ ಹಲ್ಲೆ ಎಂಬ ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಶತಾವಧಾನಿ ಡಾ. ಆರ್.ಗಣೇಶ್ ಎಂಬುವವರು ‘ಬುದ್ಧಿಜೀವಿಗಳ ಬಾಯಿಯಲ್ಲಿ ಮುಂಬೈಯ ಕಾಮಾಟಿಪುರದ ವಾಸನೆ ಬರುತ್ತದೆ. ಅವರು ಬೌದ್ಧಿಕ ವ್ಯಭಿಚಾರ ಮಾಡುತ್ತಿದ್ದಾರೆ.’ ಎಂದು ಹೇಳಿದ್ದಾರೆ. (ಪ್ರಜಾವಾಣಿ: ೫-೧-೨೦೦೯, ಪುಟ: ೨ಬಿ)

ಇದಕ್ಕೆ ಪ್ರೊ. ಚಂದ್ರಶೇಖರ ಪಾಟೀಲರು ಪ್ರಜಾವಾಣಿ ವಾಚಕರ ವಾಣಿಯಲ್ಲಿ (೭-೧-೨೦೦೯) ಪ್ರತಿಕ್ರಿಯಿಸಿದ್ದು ಹೀಗೆ: ‘ ಶತಾವಧಾನಿ ಆರ್.ಗಣೇಶ್ ಅವರು, ಮುಂಬೈಯ ಕಾಮಾಟಿಪುರದ ವಾಸನೆ ಕುರಿತು ಪ್ರಸ್ತಾಪಿಸಿದ್ದು ಮಜಾ ಅನಿಸಿತು. ಬ್ರಹ್ಮಚಾರಿ ಎಂದೆ ಖ್ಯಾತನಾಗಿರುವ ಗಣೇಶನಿಗೂ ಕಾಮಾಟಿಪುರಕ್ಕೂ ಇರಬಹುದಾದ ಎತ್ತಣಿಂದೆತ್ತಣ ಸಂಬಂಧವನ್ನು ಆ ಭೈರವೇಶ್ವರನೇ ಬಲ್ಲ. ಅಂದ ಹಾಗೆ ಇನ್ನು ಮೇಲೆ ನಮ್ಮ ಶತಾವಧಾನಿ ಗಣೇಶರನ್ನು ಕಾಮಾಟಿಪುರದ ಗಣೇಶ ಎಂದು ಕರೆಯೋಣವೇ?’

ನಾಲಗೆ ವ್ಯಕ್ತಿಯ ಸಂಸ್ಕಾರ, ಗುಣಮಟ್ಟವನ್ನು ಹೇಳುತ್ತದೆ. ಅಸಲಿಗೆ ಕಾಮಾಟಿಪುರದ ವಾಸನೆ ಎಂಬ ಪ್ರಯೋಗವೇ ಅಮೂರ್ತ. ಮುಂಬೈನ ಕಾಮಾಟಿಪುರ ಎಂದರೆ ಸೂಳೆಗೇರಿ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಸೂಳೆಗೇರಿಗೊಂದು ವಾಸನೆ ಇರುತ್ತದೆಯೇ? ಇದ್ದರೆ ಅದು ಹೇಗಿರುತ್ತದೆ? ಅದನ್ನು ಶತಾವಧಾನಿಗಳು ಆಘ್ರಾಣಿಸಿ ಬಂದಿದ್ದು ಯಾವಾಗ?

ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅತಿಥಿಗಳೆಲ್ಲ ಮನುವಾದಿಗಳು. ಈ ಪೈಕಿ ಎಸ್.ಎಲ್.ಭೈರಪ್ಪ ಎಲ್ಲ ಮನುವಾದಿಗಳಿಗೂ ಗ್ಯಾಂಗ್‌ಲೀಡರ್ ಹಾಗೆ ಇತ್ತೀಚಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಕರ್ನಾಟಕದಲ್ಲಿ ವೈದಿಕಧರ್ಮವನ್ನು ಯಾ ಮನುಧರ್ಮವನ್ನು ಸಮರ್ಥಿಸಿಕೊಳ್ಳುವ ಗುಂಪಿನ ಮುಖಂಡರಂತಿದ್ದ ಪೇಜಾವರ ಶ್ರೀಗಳನ್ನೂ ಸಹ ಭೈರಪ್ಪ ಹಿಂದಿಕ್ಕಿದ್ದಾರೆ. ಇನ್ನು ಸಂಶೋಧಕ ಚಿದಾನಂದಮೂರ್ತಿಯವರು ತಮ್ಮ ಜೀವನ ಹಿಂದೂ ಧರ್ಮ ರಕ್ಷಣೆಗೆ ಮೀಸಲು ಎಂದು ಘೋಷಿಸಿದ್ದಾರೆ. ಯಾವ ಹಿಂದೂ ಧರ್ಮದ ಕಂದಾಚಾರಗಳ ವಿರುದ್ಧ ವೀರಶೈವ ಧರ್ಮವನ್ನು ಬಸವಣ್ಣ ಚಾಲನೆಗೆ ತಂದರೋ ಅದೇ ಧರ್ಮದಲ್ಲಿ ಹುಟ್ಟಿರುವ ಚಿದಾನಂದಮೂರ್ತಿ ಈಗಲೂ ವೀರಶೈವವನ್ನು ಹಿಂದೂ ಧರ್ಮದ ಒಂದು ಭಾಗ ಎಂದೇ ಭ್ರಮಿಸಿಕೊಂಡಿದ್ದಾರೆ. ಇದನ್ನು ಅಜ್ಞಾನವೆನ್ನುವುದೋ, ಹುಚ್ಚಾಟವೆನ್ನುವುದೋ ಇಲ್ಲ ತಿಳಿಗೇಡಿತನ ಎನ್ನುವುದೋ ನನಗಂತೂ ತಿಳಿಯದು.

ಹಾರನಹಳ್ಳಿ ರಾಮಸ್ವಾಮಿ ಎಂಬ ಮನುಷ್ಯ ಕಾಂಗ್ರೆಸ್ ಪಕ್ಷದಲ್ಲಿ ಇವತ್ತೂ ಇದ್ದಾರೆ. ಸಂಘಪರಿವಾರದ ಮನಸ್ಥಿತಿಯವರು ಆಗಾಗ ಹೇಳುವ ವಿದೇಶಿ ಮಹಿಳೆ ಅಧ್ಯಕ್ಷೆಯಾಗಿರುವ ಪಕ್ಷವೇ ಅವರ ವಾಸಸ್ಥಾನ. ಕಾಂಗ್ರೆಸ್ ಪಕ್ಷವೂ ಅವರ ಯೋಗ್ಯತೆ ಮೀರಿ ಅವಕಾಶಗಳನ್ನು ನೀಡಿದೆ. ಮಂತ್ರಿಯಾಗಿಯೂ ಅವರು ರಾಜ್ಯದಲ್ಲಿ ಕೆಲಸ ಮಾಡಿದ್ದಾರೆ. ಇಳಿಗಾಲದಲ್ಲಿ ರಾಮಸ್ವಾಮಿಯವರಿಗೆ ಹಿಂದೂಧರ್ಮ ರಕ್ಷಣೆಯ ಹುಚ್ಚು ಹಿಡಿದುಕೊಂಡಿದೆ. ‘ಕೋಮುವಾದ ವಿರೋಧಿಗಳು ಹಾಗು ಬುದ್ಧಿಜೀವಿಗಳಿಂದಲೇ ಮತಾಂತರ, ಭಯೋತ್ಪಾದನೆ ಹೆಚ್ಚುತ್ತಿದೆ’ ಎಂದು ಅವರು ತಿಕ್ಕಲುತಿಕ್ಕಲಾಗಿ ಹೇಳಿದ್ದಾರೆ.

ಹಾರನಹಳ್ಳಿಯವರ ಪ್ರಕಾರ ಕೋಮುವಾದ ಉಳಿಯಬೇಕು, ಮಾನವತೆ ಅಳಿಯಬೇಕು! ಇಂಥ ಮಾತುಗಳನ್ನು ಬಹಿರಂಗವಾಗಿ ಹೇಳುವಷ್ಟು ನಾಚಿಕೆಗೆಟ್ಟ ಜನರಿದ್ದಾರಲ್ಲ ಎಂದು ಆಶ್ಚರ್ಯವಾಗುತ್ತದೆ.

ನವರತ್ನ ರಾಜಾರಾಂ ಎಂಬ ಇನ್ನೊಂದು ಮುಖವೂ ಈ ಗೋಷ್ಠಿಯಲ್ಲಿ ಮಿರಿಮಿರಿ ಮಿಂಚಿದೆ. ಭೈರಪ್ಪ ಬರೆಯುವ ಮುಸ್ಲಿಂ, ಕ್ರಿಶ್ಚಿಯನ್ ದ್ವೇಷಿ ಬರೆಹಗಳಿಗೆಲ್ಲ ನವರತ್ನ ರಾಜಾರಾಂ ಅವರ ಸಂಶೋಧನೆಯೇ ಆಕರ. ಭೈರಪ್ಪ ಹಾಗು ನವರತ್ನ ಸುಳ್ಳು ಹೇಳುವುದಕ್ಕೆ ಒಬ್ಬರನ್ನು ಒಬ್ಬರು ಆಶ್ರಯಿಸಿಕೊಳ್ಳುತ್ತಾರೆ. ಹೀಗಾಗಿ ಭೈರಪ್ಪ ಇದ್ದ ಮೇಲೆ ನವರತ್ನ ಇರಬೇಕು ಎಂದೇನಿಲ್ಲ, ನವರತ್ನ ಇದ್ದಮೇಲೆ ಭೈರಪ್ಪ ಇರಬೇಕು ಎಂದೇನಿಲ್ಲ. ಇಬ್ಬರೂ ಒಟ್ಟಿಗೆ ವೈನಾಗಿ ವೇದಿಕೆ ಮೇಲೆ ಕುಳಿತಿದ್ದಾರೆ, ಫೈನ್.

ಇನ್ನು ಗಣೇಶ್ ಕುರಿತು ಹೆಚ್ಚು ಹೇಳಬೇಕಾಗಿಲ್ಲ. ವಾಸನೆ ಪ್ರವೀಣ ಗಣೇಶ್ ಇನ್ನೇನೇನು ವಾಸನೆಗಳನ್ನು ಕಂಡುಹಿಡಿದಿದ್ದಾರೋ? ಆ ಕುರಿತು ಭೈರಪ್ಪಾದಿ ವಿಪ್ರೋತ್ತಮರು ಸಂಶೋಧನೆ ನಡೆಸಿದರೆ ಒಳ್ಳೆಯದು. ಕಾಮಾಟಿಪುರದ ವಾಸನೆ ಹಾಗು ಗೋವಾ ಬೈನಾ ಬೀಚ್ ವಾಸನೆಗಳ ಕುರಿತು ತೌಲನಿಕ ಅಧ್ಯಯನ ನಡೆಸಿದರೆ ಗಣೇಶ್‌ಗೆ ಇನ್ನೊಂದು ಡಾಕ್ಟರೇಟ್ ಸಿಕ್ಕರೂ ಸಿಗಬಹುದು. ಹೊರದೇಶಗಳಿಗೂ ಗಣೇಶ್ ಪ್ರವಾಸ ಹೊರಟು ಕಾಮಾಟಿಪುರ ತರಹದ ಪ್ರದೇಶಗಳ ವಾಸನೆಗಳನ್ನು ಕಂಡುಹಿಡಿದು ಅವುಗಳ ಕುರಿತೂ ಸಂಶೋಧನೆ ನಡೆಸಬಹುದು.

*****

ಭೈರಪ್ಪಾದಿ ಹಿಂದೂ ಧರ್ಮರಕ್ಷಕರ ‘ಕಾಮಾಟಿಪುರ ತರ್ಕ’ಗಳು ಏನೇ ಇರಲಿ. ಈ ಎಲ್ಲ ಮಹಾನುಭಾವರು ಮತಾಂತರ ನಿಷೇಧ ಕಾನೂನು ಜಾರಿಗೆ ತರಬೇಕು ಎಂದು ಏಕಾಭಿಪ್ರಾಯದಲ್ಲಿ ಗಂಟಲು ಹರಿದುಕೊಳ್ಳುತ್ತಿದ್ದಾರೆ. ದಲಿತರೇ ಅತಿಹೆಚ್ಚು ಮತಾಂತರಗೊಳ್ಳುತ್ತಿದ್ದಾರೆ ಎಂಬುದು ಇವರಿಗೆ ಗೊತ್ತಿದ್ದರೂ, ಇವರ ವೇದಿಕೆಯಲ್ಲಿ ಒಬ್ಬನೇ ಒಬ್ಬ ದಲಿತನಿಲ್ಲ. ಇವರು ಕರೆದರೂ ಬರುವವರೂ ಇಲ್ಲ ಎಂಬುದು ಬೇರೆ ಮಾತು ಬಿಡಿ.

ಐವರು ಮಹಾನುಭಾವರಲ್ಲಿ ನಾಲ್ವರು ಬ್ರಾಹ್ಮಣರು ಮತ್ತೊಬ್ಬರು ವೀರಶೈವರು. ಇವರ ಜಾತಿಬಾಂಧವರು ಮತಾಂತರ ಹೊಂದುತ್ತಿದ್ದರೆ ಇವರು ತಳಮಳಗೊಳ್ಳುವುದಕ್ಕೆ ಕಾರಣವಿರುತ್ತಿತ್ತು. ದಲಿತರೂ ಸೇರಿದಂತೆ ಕೆಳಜಾತಿಯವರು ಆಶ್ರಯಿಸುತ್ತಿರುವ ಮತಾಂತರದ ಬಗ್ಗೆ ಇವರು ಯಾಕೆ ಮಾತನಾಡುತ್ತಾರೆ. ಹಾಗೆ ಮಾತನಾಡುವ ಹಕ್ಕನ್ನು ಇವರಿಗೆ ಕೊಟ್ಟವರಾದರೂ ಯಾರು?

ಭೈರಪ್ಪಾದಿಗಳೆಲ್ಲ ಹಿಂದೂ ಎಂದು ಕರೆಯಲಾಗುವ ಮನುಧರ್ಮದ ರಕ್ಷಣೆಗೆ ಟೊಂಕಕಟ್ಟಿ ನಿಂತವರು. ಮನುಧರ್ಮ ದಲಿತರನ್ನು ತನ್ನ ಧರ್ಮದ ಕಕ್ಷೆಯೊಳಗೆ ತೆಗೆದುಕೊಂಡೇ ಇಲ್ಲ. ಈ ದೇಶದ ದಲಿತರು ಧರ್ಮಹೀನರು. ಅವರು ತನಗಿಷ್ಟವಾಗುವ ಜಗತ್ತಿನ ಯಾವುದೇ ಧರ್ಮಕ್ಕೆ ಮತಾಂತರವಾದರೆ ಇವರ ಗಂಟೇನು ಹೋಗುತ್ತದೆ?

ಭೈರಪ್ಪಾದಿಗಳ ಚಿಂತನೆಗಳಿಗೆ ಮೂಲಧಾತುವಾಗಿರುವ ಮನುಸ್ಮೃತಿಯ ಕೆಲವು ಇಂಟರೆಸ್ಟಿಂಗ್ ಕಾನೂನು ಕಟ್ಟಳೆಗಳು ಹೀಗಿವೆ ನೋಡಿ:

ನ ವಿಪ್ರಂ ಸ್ವೇಷು ತಿಷ್ಠತ್ಸು ಮೃತಂ ಶೂದ್ರೇಣ ನಾಯಯೇತ್
ಅಸ್ವರ್ಗ್ಯಾ ಹ್ಯಾಹುತಿಃ ಸಾ ಸ್ಯಾಚ್ಛೂದ್ರಸಂಸ್ಪರ್ಶದೂಷಿತಾ
(ಬ್ರಾಹ್ಮಣನು ಸತ್ತಾಗ ಹೊರಲು ಅವನ ಜಾತಿಯವರೇ ಇದ್ದಾಗ ಶೂದ್ರನಿಂದ ಆ ಶವವನ್ನು ಹೊರಿಸಬಾರದು. ಏಕೆಂದರೆ ಶೂದ್ರನ ಸ್ಪರ್ಶದಿಂದ ದೂಷಿತವಾದ ಆ ಶವದ ಆಹುತಿಯು ಸ್ವರ್ಗಫಲವನ್ನು ಉಂಟುಮಾಡಲಾರದು.)

ಯೋ ಹೃಸ್ಯ ಧರ್ಮಮಾಚಷ್ಟೇ ಯಶ್ಚೈವಾದಿಶತಿ ವ್ರತಂ
ಸೋಸಂವೃತಂ ನಾಮ ತಮಃ ಸಹ ತೇನೈವ ಮಜ್ಜತಿ
(ಶೂದ್ರನಿಗೆ ಧರ್ಮೋಪದೇಶ ಮಾಡುವವನು, ವ್ರತಾಚರಣೆಗಳನ್ನು ಹೇಳಿ ಕೊಡುವವನು ಆ ಶೂದ್ರನ ಜತೆಗೆ ಸೇರಿ ತಾನೂ ಸಹಿತ ಅಸಂವೃತವೆಂಬ ನರಕಕ್ಕೆ ಹೋಗುತ್ತಾನೆ)

ನ ಶೂದ್ರಾಯ ಮತಿಂ ದದ್ಯಾನ್ನೋಚ್ಛಿಷ್ಟಂ ನ ಹವಿಷ್ಕೃತಂ
ನ ಚಾಸ್ಯೋಪದಿಶೇದ್ಧರ್ಮಂ ನಚಾಸ್ಯ ವ್ರತಮಾದಿಶೇತ್
(ಶೂದ್ರನಿಗೆ ಓದು ಕಲಿಸಬಾರದು. ಯಜ್ಞದ ಹವಿಸ್ಸಿನ ಶೇಷವನ್ನು ಹಾಗು ಎಂಜಲನ್ನು ಕೊಡಬಾರದು. ಧರ್ಮೋಪದೇಶ ಮಾಡಬಾರದು. ವ್ರತಾಚರಣೆಯನ್ನು ಹೇಳಿ ಕೊಡಬಾರದು)

ವಿಪ್ರಾಣಾಣ ಜ್ಞಾನತೋ ಜ್ಯೈಷ್ಟ್ಯಂ ಕ್ಷತ್ರಿಯಾಣಾಂ ತು ವೀರ್ಯತಃ
ವೈಶ್ಯಾನಾಂ ಧಾನ್ಯಧನತಃ ಶೂದ್ರಾಣಾಮೇವ ಜನ್ಮತಃ
(ಬ್ರಾಹ್ಮಣನಿಗೆ ಜ್ಞಾನದಿಂದ, ಕ್ಷತ್ರಿಯನಿಗೆ ವೀರತನದಿಂದ, ವೈಶ್ಯನಿಗೆ ಧನಧಾನ್ಯ ಸಂಪತ್ತಿನಿಂದ ಹಾಗು ಶೂದ್ರನಿಗೆ ವಯಸ್ಸಿನಿಂದ ಮಾತ್ರವೇ ಶ್ರೇಷ್ಠತೆ ಹಾಗು ಜ್ಯೇಷ್ಠತೆಗಳು ಲಭಿಸುತ್ತವೆ.

ಮಂಗಲ್ಯಂ ಬ್ರಾಹ್ಮಣಸ್ಯ ಸ್ಯಾತ್ಕ್ಷತ್ರಿಯಸ್ಯ ಬಲಾನ್ವಿತಂ
ವೈಶಸ್ಯ ಧನಸಂಯುಕ್ತಂ ಶೂದ್ರ ಸ್ಯ ತು ಜಿಗುಪ್ಸಿತಂ
(ಬ್ರಾಹ್ಮಣನಿಗೆ ಮಂಗಲಸೂಚಕವಾದ, ಕ್ಷತ್ರಿಯನಿಗೆ ಬಲಸೂಚಕವಾದ, ವೈಶ್ಯನಿಗೆ ಧನಸೂಚಕವಾದ ಹಾಗು ಶೂದ್ರನಿಗೆ ಜಿಗುಪ್ಸಾ ಸೂಚಕವಾದ ಹೆಸರುಗಳನ್ನು ಇಡಬೇಕು.)

ಇಡೀ ಮನುಸ್ಮೃತಿಯಲ್ಲಿ ಇಂಥ ಹೀನಾತಿಹೀನ ಸಾಲುಗಳೇ ತುಂಬಿಕೊಂಡಿವೆ. ಹುಟ್ಟಿನಿಂದಲೇ ಮನುಷ್ಯನ ಯೋಗ್ಯತೆಯನ್ನು ನಿಶ್ಚಯಿಸುವ ಮನುಸಿದ್ಧಾಂತವನ್ನೇ ಹಿಂದೂ ಧರ್ಮ ಇವತ್ತಿಗೂ ಆಧಾರವಾಗಿ ಹೊಂದಿದೆ. ಶೂದ್ರರು, ದಲಿತರಿಗೆ ಯಾವತ್ತೂ ಸ್ಥಾನವೇ ಇಲ್ಲದ ಮನುಧರ್ಮದಲ್ಲಿ ಇರುವುದೆಲ್ಲ ಅಮಾನವೀಯ ನಡಾವಳಿಗಳೇ.

ಮನುಶಾಸ್ತ್ರವನ್ನು ಇವತ್ತು ಸಂಪೂರ್ಣ ಯಥಾವತ್ತಾಗಿ ಈಗ ಯಾರೂ ಪಾಲಿಸದೇ ಇರಬಹುದು. ಆದರೆ ಅದು ಬೇರೆ ಬೇರೆ ರೂಪದಲ್ಲಿ ಕಾಡುತ್ತಲೇ ಇದೆ. ಮತಾಂತರ ನಿಷೇಧದ ಬಗ್ಗೆ ಮಾತನಾಡುವ ಭೈರಪ್ಪಾದಿಗಳು ಎಂದಿಗೂ ಮನುಶಾಸ್ತ್ರದ ಅಮಾನವೀಯತೆಗಳ ಕುರಿತು ಮಾತನಾಡಿದವರೇ ಅಲ್ಲ. ಅವರು ಮಾತನಾಡುವುದೂ ಇಲ್ಲ.

ಅಂಬೇಡ್ಕರ್ ಸಂವಿಧಾನ ಇವರಿಗೆ ಅಪಥ್ಯ. ಇವರ ಅಂತಿಮ ಉದ್ದೇಶವಿರುವುದು ಮನುಶಾಸ್ತ್ರವನ್ನೇ ಮತ್ತೆ ಜಾರಿಗೆ ತರುವುದು. ಒಂದು ವೇಳೆ ದಲಿತರು, ಶೂದ್ರರೆಲ್ಲಿ ಹಿಂದೂ ಧರ್ಮವನ್ನು ಬಿಟ್ಟು ಹೋದರೆ ಇವರು ಸಹಜವಾಗಿ ಅಲ್ಪಸಂಖ್ಯಾತರಾಗುತ್ತಾರೆ. ಇವರ ಧರ್ಮಬೋಧೆಗಳನ್ನು ಕೇಳಲು ಯಾರೂ ಉಳಿದಿರುವುದಿಲ್ಲ. ವಂಚನೆ, ಶೋಷಣೆಗಳಿಗೆ ಅವಕಾಶವೂ ಇರುವುದಿಲ್ಲ. ಹೀಗಾಗಿ ಈ ಜನ ಮತಾಂತರ ಕೂಡದು ಎಂದು ಈ ದೇಶದ ಧರ್ಮರಹಿತ ಜನರಿಗೆ ಹೇಳುತ್ತಿದ್ದಾರೆ ಮತ್ತು ಅವರನ್ನು ಹಿಂದೂ ಧರ್ಮದ ಚೌಕಟ್ಟಿನಲ್ಲಿ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ.

ಮತಾಂತರ ನಿಲ್ಲಿಸಬೇಕು ಎಂಬ ಕಾಳಜಿಯಿದ್ದರೆ, ಹಿಂದೂ ಧರ್ಮ ಉಳಿಸಿಕೊಳ್ಳಲೇಬೇಕು ಎಂಬ ಆಸೆಯಿದ್ದರೆ ಭೈರಪ್ಪಾದಿಗಳಿಗೆ ಈಗ ಉಳಿದಿರುವುದು ಒಂದೇ ದಾರಿ.

ವರ್ಣಾಶ್ರಮ ವ್ಯವಸ್ಥೆಯ, ಜಾತಿ ವ್ಯವಸ್ಥೆಯ ಹೇಸಿಗೆಯನ್ನು ಹೊರೆಸಿರುವ ಮನುಸ್ಮೃತಿಯ ವಿರುದ್ಧ ಭೈರಪ್ಪಾದಿಗಳೆಲ್ಲ ಮೊದಲು ಚಳವಳಿ ಹೂಡಲಿ. ಭಾರತೀಯ ವಿಚಾರವಂತರ ವೇದಿಕೆ ಮನುಸ್ಮೃತಿಯ ವಿರುದ್ಧ ಇಡೀ ದೇಶದಲ್ಲಿ ಒಂದು ಪ್ರಚಾರಾಂದೋಲನ ಮಾಡಲಿ. ಪುಸ್ತಕ, ಪತ್ರಿಕೆಗಳನ್ನು ಸುಡುವ ಪರಿಪಾಠ ಸರಿಯಲ್ಲವಾದ್ದರಿಂದ ಎಲ್ಲ ಭಾಷೆಗಳಲ್ಲಿ ಪ್ರಕಟವಾಗಿರುವ ಮನುಸ್ಮೃತಿ ಪುಸ್ತಕಗಳನ್ನು ಹರಿದು ನಾಶಪಡಿಸುವ ಕೆಲಸ ಆರಂಭಿಸಲಿ. ಬ್ರಾಹ್ಮಣರನ್ನು ಹೊರತುಪಡಿಸಿ ಹಿಂದೂಗಳನ್ನೆಲ್ಲ ಪ್ರಾಣಿ, ಕ್ರಿಮಿ, ಕೀಟಗಳಿಗಿಂತ ಕಡೆಯಾಗಿ ನೋಡುವ ಈ ಮನುಸ್ಮೃತಿಯನ್ನು ಎಲ್ಲ ಸರ್ಕಾರಗಳು ನಿಷೇಧಿಸಲು ವಿಚಾರವಂತರ ವೇದಿಕೆ ಆಂದೋಲನ ಆರಂಭಿಸಲಿ.

ಮನುವಾದಿ ವರ್ಣಾಶ್ರಮ ವ್ಯವಸ್ಥೆಯ ತಳಹದಿ ಮೇಲೆ ನಿಂತಿರುವ ಮಠಪೀಠಗಳು, ದೇವಸ್ಥಾನಗಳನ್ನೆಲ್ಲ ತಳವರ್ಗದ ಜನರಿಗೆ ಬಿಟ್ಟುಕೊಡುವ ಅಭಿಯಾನವನ್ನು ಇದೇ ವಿಚಾರವಂತರು ಆರಂಭಿಸಲಿ. ಇದೆಲ್ಲವುಗಳನ್ನು ಸಾಧ್ಯಮಾಡಲು ಸರ್ಕಾರದ ಮೇಲೆ ಮೊದಲು ಒತ್ತಡ ತರಲಿ. ಧರ್ಮದ ಹೆಸರಲ್ಲಿ, ದೇವರ ಹೆಸರಲ್ಲಿ ಮೌಢ್ಯಗಳನ್ನು ಹೇರುತ್ತ ಪೌರೋಹಿತ್ಯ, ಜೋತಿಷ್ಯ, ವಾಸ್ತು, ಪವಾಡ, ಮಾಟ-ಮಂತ್ರಗಳ ಮೂಲಕ ಜನರನ್ನು ಬೆದರಿಸುವ ಪರಾವಲಂಬಿ ಮನುಷ್ಯರು ಮೈಬಗ್ಗಿಸಿ ದುಡಿಯುವಂತೆ ಮಾಡಲು ಇಂಥ ಚಟುವಟಿಕೆಗಳ ಮೇಲೆಲ್ಲ ನಿಷೇಧ ಹೇರುವ ಕೆಲಸಕ್ಕಾಗಿ ಒತ್ತಾಯಿಸಲಿ.

ಅಸ್ಪೃಶ್ಯತೆ ಆಚರಿಸುವವರನ್ನು, ಜಾತಿ ಕಾರಣಕ್ಕಾಗಿ ದಲಿತರ ಮೇಲೆ ದೌರ್ಜನ್ಯವೆಸಗುವವರನ್ನು ಭಯೋತ್ಪಾದಕರೆಂದು ಪರಿಗಣಿಸುವ ಕಾನೂನು ರೂಪುಗೊಳಿಸಲು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಿ.

ಇದೆಲ್ಲವೂ ಆದ ಮೇಲೆ ಭೈರಪ್ಪಾದಿಗಳು ಮತಾಂತರ ನಿಷೇಧದ ಬಗ್ಗೆ ಮಾತನಾಡಲಿ. ಇದ್ಯಾವುದನ್ನೂ ಮಾಡದೆ ಹಿಂದೂಧರ್ಮ ರಕ್ಷಕರು ‘ಕಾಮಾಟಿಪುರದ ವಾಸನೆ’ಯನ್ನು ಆಘ್ರಾಣಿಸುತ್ತ ಸಂತೋಷಪಡುತ್ತಿದ್ದರೆ ಅವರನ್ನು ಕಾಮಾಟಿಪುರದ ಗಿರಾಕಿಗಳೆಂದೇ ಪರಿಗಣಿಸಿ ನಿರ್ಲಕ್ಷ್ಯ ಮಾಡುವುದು ಒಳ್ಳೆಯದು.

4 comments:

hanumantha said...

Good response. But people like byrappa (small letter intentional), chimu, satavadani do not read other writings. It is one way traffic. they do not consider other side of the coin.

Anonymous said...

helo,

mathantharada bagge bobbe hodeyo hindu mulabhuthavadigalannu kamati purada girakigalendu ellaru bhavisi summanaguvude lesu.
adharu elle meeri samajavannu guthige padedavarante varthiso e mukhedigalige shasthi maduvaryaru?
idakke khone yendu? khevala vaicharika niluvuglu inthavarige bhuddi kalisadu? paryayada bagge ondastu ella samana manaskharu chinthisa bhekhagide allave?
olle lekhana.

*akshara dhas

Anonymous said...

ಬರೀ ಇದೇ ಆಯ್ತು. ಏನಾದರೂ ಒಳ್ಳೆಯ ವಿಷಯ ಬರೆಯೋಕಾಗತ್ತಾ ನೋಡಿ.

-Ajay

govind said...

Neevu heliddellavoo nijave...adaroo dalitaru shudraru ennuva mulaka shudraralle eradu varga irabahudeno ennuvante annisuttideyalla