ಮುಂಬೈ ಇತಿಹಾಸದ ಕರಾಳ ದಿನಗಳು ಕಳೆದ ನಂತರ ಈಗ ಎಲ್ಲೆಡೆ ದೂಷಣೆಯ ಆಟಗಳು ನಡೆಯುತ್ತಿವೆ. ಎಲ್ಲ ಟಿವಿ ಚಾನೆಲ್ಗಳು ನೇರವಾಗಿ ರಾಜಕಾರಣಿಗಳನ್ನು ಟಾರ್ಗೆಟ್ ಮಾಡಿಕೊಂಡು ಬಯ್ಗುಳಗಳ ಸುರಿಮಳೆ ಕರೆಯುತ್ತಿವೆ.
ಜನ ಆಕ್ರೋಶಗೊಂಡಿರುವುದು ನಿಜ. ಮುಂಬೈ ಭಯೋತ್ಪಾದನೆಯ ನಂತರ ಜನರ ವಿಶ್ವಾಸವೇ ಕುಸಿಯುತ್ತಿದೆ. ದೇಶದ ಪಾಲಿಗೆ ಸಂಕಟದ ದಿನಗಳು ಇವು. ಭಯೋತ್ಪಾದನೆಯ ಪೀಡೆಗೆ ಉತ್ತರಗಳನ್ನು ಹುಡುಕಿಕೊಳ್ಳಲು ನಮ್ಮ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂಬುದು ಅಕ್ಷರಶಃ ನಿಜ.
ಆದರೆ ಯಾಕೆ ಇಂಥ ಆರೋಪಗಳೆಲ್ಲ ಕೇವಲ ರಾಜಕಾರಣಿಗಳನ್ನೇ ಕೇಂದ್ರೀಕರಿಸಿವೆ? ಶಾಸನ ರೂಪಿಸುವ ಜನ ರಾಜಕಾರಣಿಗಳಾದರೂ ಅದನ್ನು ಅನುಷ್ಠಾನಗೊಳಿಸುವವರು ಆಡಳಿತಶಾಹಿ ವ್ಯವಸ್ಥೆಯಲ್ಲವೆ? ಯಾಕೆ ಯಾರೂ ಸಹ ಬ್ಯೂರಾಕ್ರಸಿ ವಿರುದ್ಧ ಮಾತನಾಡುತ್ತಿಲ್ಲ.?
‘ಲಿಪ್ಸ್ಟಿಕ್ ಹಾಕಿಕೊಂಡ, ಕೋಟು ಧರಿಸಿಕೊಂಡ ಕೆಲವರು ಬೀದಿಗಿಳಿದರೆ ಅವರು ಇಡೀ ದೇಶದ ಪ್ರತಿನಿಧಿಗಳಾಗಲು ಸಾಧ್ಯವೆ? ಭಯೋತ್ಪಾದನೆ ನಡೆಸುತ್ತಿರುವುದು ಪಾಕಿಸ್ತಾನದ ಕೆಲವರು ಮತ್ತು ಅದಕ್ಕೆ ಪ್ರೇರಣೆ ನೀಡುತ್ತಿರುವುದು ಐಎಸ್ಐ. ರಾಜಕಾರಣಿಗಳ ಮೇಲೆ ಯಾಕೆ ಇಷ್ಟು ಆಕ್ರೋಶ?
ಹೀಗೆ ಭಾರತೀಯ ಜನತಾ ಪಕ್ಷದ ಮುಖಂಡ ಮುಕ್ತಾರ್ ಅಬ್ಬಾಸ್ ನಕ್ವಿ ಹೇಳುತ್ತಿದ್ದಂತೆ ಟೈಮ್ಸ್ ನೌ ಚಾನೆಲ್ನಲ್ಲಿ ಪ್ರತಿಕ್ರಿಯೆಗಳ ಸುರಿಮಳೆ. ಎಲ್ಲರೂ ನಕ್ವಿಯನ್ನು ವಾಚಾಮಗೋಚರ ಬೈಯುವವರೇ.
ಆದರೆ ಆಳಕ್ಕಿಳಿದು ಯೋಚಿಸುವುದಾದರೆ ನಮ್ಮ ಸೋ ಕಾಲ್ಡ್ ಸುಶಿಕ್ಷಿತ ಜನರು ಎಂದಾದರೂ ಮತಗಟ್ಟೆಗೆ ಬಂದು ಮತಚಲಾಯಿಸಿದ ಉದಾಹರಣೆ ಇದೆಯೇ? ಚುನಾವಣೆಗೆ ನಿಲ್ಲುವವರೆಲ್ಲ ಕೊಳಕರು ಎಂದು ಸಾರಾಸಗಟಾಗಿ ಹೇಳುವ ಇದೇ ಜನ ಎಂದಾದರೂ ಕನಿಷ್ಠ ನಗರಪಾಲಿಕೆ ಚುನಾವಣೆಯಲ್ಲಿ ನಿಲ್ಲುವ ಧೈರ್ಯ ತೋರಿದ್ದಾರೆಯೇ? ಜನಪ್ರತಿನಿಧಿಗಳ ಆಯ್ಕೆ ವಿಷಯದಲ್ಲಿ ಯಾವತ್ತೂ ಮುಗುಮ್ಮಾಗಿ ಇರುವ ಈ ಜನರು ಈಗ ರಾಜಕಾರಣಿಗಳ ವಿರುದ್ಧ ಆಕ್ರೋಶ ತೋಡಿಕೊಂಡರೆ ಪ್ರಯೋಜನವೇನು?
******
ಎನಫ್ ಈಸ್ ಎನಫ್, ಇಂಡಿಯಾಸ್ ೯/೧೧, ಸ್ಪಿರಿಟ್ ಆಫ್ ಮುಂಬೈ... ಇಂಥ ಸವಕಲು ಶಬ್ದಗಳನ್ನೇ ನಮ್ಮ ಟಿವಿ ಚಾನೆಲ್ಗಳು ಧಾರಾಳವಾಗಿ ಬಳಸುತ್ತಿವೆ. ವೀ ನೀಡ್ ಆಕ್ಷನ್ ಎಂದು ಒಂದೇ ಸಮನೆ ಚಾನೆಲ್ಗಳ ನಿರೂಪಕರು, ವರದಿಗಾರರು ಅಬ್ಬರಿಸುತ್ತಿದ್ದಾರೆ.
ಮುಂಬೈನ ಲೋಕಲ್ ಟ್ರೈನ್ಗಳಲ್ಲಿ ಭೀಕರ ಸ್ಫೋಟಗಳು ನಡೆದ ಘಟನೆಯ ನಂತರ ಮಾರನೇ ದಿನವೇ ಮುಂಬೈ ನಿವಾಸಿಗಳು ಮತ್ತೆ ದೈನಂದಿನ ಬದುಕಿಗೆ ಹಿಂತಿರುಗಿದರು. ಆಗ ಹುಟ್ಟಿಕೊಂಡಿದ್ದು ಸ್ಪಿರಿಟ್ ಆಫ್ ಮುಂಬೈ ಎಂಬ ಪದಪುಂಜ. ಆದರೆ ಮುಂಬೈ, ಬೆಂಗಳೂರಿನಂಥ ನಗರಗಳಲ್ಲಿ ಎಂಥ ಸ್ಫೋಟಗಳು ಸಂಭವಿಸಿದರೂ ಮಾರನೇ ದಿನ ಹೊಟ್ಟೆಪಾಡಿನ ಕೆಲಸಗಳಿಗೆ ಹೋಗಲೇಬೇಕಾದ ಅನಿವಾರ್ಯತೆ ಸಾಮಾನ್ಯ ಜನರದ್ದು. ಸ್ಪಿರಿಟ್ ಎನ್ನುವುದಕ್ಕಿಂತ ಅದು ಬದುಕಿನ ಅನಿವಾರ್ಯತೆ.
ಆದರೆ ಈ ಎಲ್ಲ ಚಾನೆಲ್ಗಳು ಮರೆಮಾಚುತ್ತಿರುವ ಅಂಶವೆಂದರೆ ಮುಂಬೈ ಮೇಲೆ ನಡೆದ ದಾಳಿಯನ್ನು ಅಗತ್ಯಕ್ಕಿಂತ ಹೆಚ್ಚು ವೈಭವೀಕರಿಸುವುದರೊಂದಿಗೆ ಭಯೋತ್ಪಾದಕರ ಉದ್ದೇಶವನ್ನು ಸಫಲಗೊಳಿಸಿದ್ದು ಇದೇ ಚಾನೆಲ್ಗಳು! ಉಗ್ರಗಾಮಿಗಳೆಂಬ ನರರಾಕ್ಷಸರು ನಡೆಸಿದ ಭಯೋತ್ಪಾದನೆಯದ್ದು ಒಂದು ತೂಕವಾದರೆ ಇಡೀ ದೇಶದ ಜನರಲ್ಲಿ ಭೀತಿ, ಆತಂಕ ಹುಟ್ಟಿಸಿದ ಚಾನೆಲ್ಗಳ ಭಯೋತ್ಪಾದನೆಯದ್ದು ಇನ್ನೊಂದು ತೂಕ.
*******
ಶುಕ್ರವಾರ ಎನ್ಎಸ್ಜಿ ಕಮ್ಯಾಂಡೋಗಳು ನಾರಿಮನ್ ಹೌಸ್, ತಾಜ್, ಒಬೆರಾಯ್ಗಳಲ್ಲಿ ಅಂತಿಮ ಕಾರ್ಯಾಚರಣೆ ನಡೆಸುತ್ತಿದ್ದ ಹೊತ್ತಿನಲ್ಲೇ ಮಧ್ಯಾಹ್ನದ ಸುಮಾರಿಗೆ ಎಲ್ಲ ಚಾನೆಲ್ಗಳು ಬ್ರೇಕಿಂಗ್ ನ್ಯೂಸ್ ಹೆಸರಿನಲ್ಲಿ ವಿಟಿ ಸ್ಟೇಷನ್ನಲ್ಲಿ ಮತ್ತೆ ಗುಂಡಿನ ದಾಳಿ ಎಂಬ ಸುದ್ದಿ ಬಿತ್ತರಿಸತೊಡಗಿದವು.
ಎರಡು ಸುತ್ತಿನ ಗುಂಡಿನ ದಾಳಿ ನಡೆದಿದೆ. ಜನ ಭಯಭೀತರಾಗಿ ಓಡುತ್ತಿದ್ದಾರೆ ಎಂದು ಪುಂಖಾನುಪುಂಖ ವರದಿಗಳು ಪ್ರಸಾರವಾದವು. ಇಡೀ ಮುಂಬೈಗೆ ಹುಚ್ಚು ಹಿಡಿಸುವಂಥ ಸನ್ನಿವೇಶ ಅದು. ಇನ್ನೇನು ಕಮ್ಯಾಂಡೋ ಆಪರೇಷನ್ ಮುಗಿದು ಎಲ್ಲವೂ ಸರಿಹೋಗಲಿದೆ ಎಂದುಕೊಂಡಿದ್ದ ಮುಂಬೈ ನಿವಾಸಿಗಳು ಸ್ಫೋಟಗೊಳ್ಳಲು ಮತ್ತೇನು ಬೇಕಿತ್ತು?
ಕೆಲಕ್ಷಣಗಳಲ್ಲೇ ಮುಂಬೈ ಪೊಲೀಸರು ಈ ಸುದ್ದಿ ಸುಳ್ಳು ಎಂಬ ಪ್ರಕಟಣೆ ನೀಡಿದರು. ಹಾಗೆ ಪ್ರಕಟಣೆ ನೀಡಿದ ನಂತರವೂ ಹೊಸದಾಗಿ ದಾಳಿ ನಡೆದಿರುವುದು ನಿಜ ಎಂದೇ ಚಾನೆಲ್ಗಳು ಹೇಳುತ್ತಿದ್ದವು.
ಟೈಮ್ಸ್ ನೌ ಚಾನೆಲ್ನಲ್ಲಿ ವರದಿಗಾರ್ತಿಯೊಬ್ಬಳು ಅಕ್ಷರಶಃ ಅಳುತ್ತ, ‘ಅರ್ನಾಬ್ ನಾನು ವಿಟಿ ಸ್ಟೇಷನ್ ಬಳಿ ಇದ್ದೇನೆ. ಎರಡು ಸುತ್ತಿನ ಗನ್ ಫೈರ್ ಮುಗಿದು ಈಗ ಮೂರನೇ ಸುತ್ತಿನ ಫೈರಿಂಗ್ ನಡೆಯುತ್ತಿದೆ. ಜನ ದಿಕ್ಕಾಪಾಲಾಗಿ ಓಡುತ್ತಿದ್ದಾರೆಎಂದು ವದರಲಾರಂಭಿಸಿದ್ದಳು.
ಆದರೆ ವಿಚಿತ್ರವೆಂದರೆ ಫೈರಿಂಗ್ ನಡೆದೇ ಇರಲಿಲ್ಲ; ಮತ್ತು ಅದನ್ನು ಮಹಾರಾಷ್ಟ್ರ ಪೊಲೀಸರು ಪದೇಪದೇ ಚಾನೆಲ್ಗಳಿಗೆ ಹೇಳಿದರೂ ಅವರು ನಂಬುವ ಸ್ಥಿತಿಯಲ್ಲಿ ಇರಲಿಲ್ಲ. ನಡೆಯದ ಗುಂಡಿನ ದಾಳಿಯನ್ನು ನೋಡಿ ಚಾನೆಲ್ ವರದಿಗಾರ್ತಿ ಅಳುತ್ತಾ ವರದಿ ಮಾಡುತ್ತಾಳೆ ಎಂದರೆ ಅದನ್ನು ಹೇಗೆ ಕಲ್ಪಿಸಿಕೊಳ್ಳುವುದು? ಒಂದೇ ಆಕೆ ಮಾನಸಿಕ ಸ್ಥಿಮಿತ ಕಳೆದುಕೊಂಡಿರಬಹುದು. ಅಥವಾ ಆಕೆಯನ್ನು ನಂಬುವವರಿಗೆ ತಲೆಕೆಟ್ಟಿರಬೇಕು.
ಇದಾದ ಕೆಲವು ಕ್ಷಣಗಳಲ್ಲಿ ಸಿಎನ್ಎನ್ ಐಬಿಎನ್ನ ರಾಜದೀಪ್ ಸರದೇಸಾಯಿ ಇಂಥ ಸುದ್ದಿಯನ್ನು ತಮ್ಮ ಚಾನೆಲ್ನಲ್ಲೂ ಪ್ರಸಾರ ಮಾಡಿದ್ದಕ್ಕಾಗಿ ಎಲ್ಲ ವೀಕ್ಷಕರ ಕ್ಷಮೆ ಕೋರುವುದಾಗಿ ಹೇಳಿದರು. ಪೊಲೀಸ್ ಇಲಾಖೆಯ ಒತ್ತಡದಿಂದಾಗಿ ಅರ್ನಾಬ್ ಗೋಸ್ವಾಮಿ ಸಹ ನಾವು ಸ್ಪೆಕ್ಯುಲೇಷನ್ ಮಾಡುವುದಿಲ್ಲ ಎಂದು ಪದೇ ಪದೇ ಹೇಳಿದರು.
ಆದರೆ ಅಷ್ಟು ಹೊತ್ತಿಗೆ ಅನಾಹುತ ಸಂಭವಿಸಿತ್ತು. ವಿಟಿ ಸ್ಟೇಷನ್ ಬಳಿ ಜನ ದಿಕ್ಕೆಟ್ಟು ಓಡತೊಡಗಿದ್ದರು. ಸಮೀಪದ ಆಸ್ಪತ್ರೆಯಿಂದ ರೋಗಿಗಳ ಸಮೇತ ಎಲ್ಲರೂ ಜೀವ ಕೈಯಲ್ಲಿ ಹಿಡಿದು ದಿಕ್ಕಾಪಾಲಾಗಿ ಓಡಿದರು. ಇದನ್ನೂ ಸಹ ಈ ಚಾನೆಲ್ಗಳು ಪ್ರಸಾರ ಮಾಡಿ ‘ಪುಣ್ಯ ಕಟ್ಟಿಕೊಂಡವು.
********
ಚಾನೆಲ್ಗಳು ಸಹ ಭಯೋತ್ಪಾದನೆಯಲ್ಲಿ ತೊಡಗಿರುವುದನ್ನು ಗಮನಿಸಿದ ಮುಂಬೈ ಪೊಲೀಸರು ಇಡೀ ನಗರದಾದ್ಯಂತ ಕೇಬಲ್ ಟಿವಿಗಳನ್ನು ಬಂದ್ ಮಾಡಿಸಿದರು. ಚಾನೆಲ್ಗಳ ಹರಡುವ ಸುಳ್ಳು ಸುದ್ದಿಯನ್ನು ತಡೆಯುವ ಸಾಹಸ ಮಾಡುವುದಕ್ಕಿಂತ ಚಾನೆಲ್ಗಳ ಪ್ರಸಾರ ಬಂದ್ ಮಾಡುವುದೇ ಸುಲಭ ಎಂದು ಅವರು ಭಾವಿಸಿರಬೇಕು.
ಸ್ಪೆಕ್ಯುಲೇಷನ್ ಮಾಡುವುದಿಲ್ಲ ಎಂದು ಘೋಷಿಸುತ್ತ ಕುಳಿತಿದ್ದ ಅರ್ನಾಬ್ ಮತ್ತೆ ತಮ್ಮ ಹಳೆ ವರಸೆಗೆ ಹಿಂದಿರುಗಿದರು. ಮುಂಬೈನಲ್ಲಿ ಚಾನೆಲ್ಗಳನ್ನು ಬಂದ್ ಮಾಡಲಾಗಿದೆಯಂತೆ. ನನ್ನ ಮೊಬೈಲ್ಗೆ ಎಸ್ಎಂಎಸ್ಗಳ ಸುರಿಮಳೆಯಾಗುತ್ತಿದೆ.
ಇದು ಮುಂಬೈ ಇತಿಹಾಸದ ಕರಾಳ ದಿನ, ಮಾಧ್ಯಮಗಳ ಇತಿಹಾಸದ ಕರಾಳ ದಿನ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದೆಲ್ಲಾ ಅರಚಾಡತೊಡಗಿದರು.
ಚಾನೆಲ್ಗಳು ಬಂದ್ ಆದರೆ ಜನ ಇನ್ನಷ್ಟು ಭೀತರಾಗಬಹುದು. ಏನೋ ಅನಾಹುತ ನಡೆದಿದೆ ಎಂದು ಜನ ಭಾವಿಸಲು ಅವಕಾಶವಿದೆ. ನಾವು ಸಂಯಮದಿಂದಲೇ ವರದಿ ಮಾಡುತ್ತೇವೆ. ಪೊಲೀಸ್ ಇಲಾಖೆಯವರು ಚಾನೆಲ್ಗಳನ್ನು ತೆರಯಲಿ ಎಂದು ರಾಜ್ದೀಪ್ ಸರ್ದೇಸಾಯಿ ಕೊಂಚ ವಿನಯದಿಂದಲೇ ಸಿಎನ್ಎನ್ ಐಬಿಎನ್ನಲ್ಲಿ ಹೇಳುತ್ತಿದ್ದರು.
********
ತಾಜ್ ಹೋಟೆಲ್ನಲ್ಲಿ ನಡೆದ ಕಾರ್ಯಾಚರಣೆ ಸಂದರ್ಭದಲ್ಲಿ ಮೀಡಿಯಾಗಳೆಲ್ಲ ಏನು ಮಾಡುತ್ತಿದ್ದವು? ಕೇವಲ ನೂರು ಅಡಿ ಅಂತರದಲ್ಲಿ ನಾವಿದ್ದೇವೆ ಎನ್ನುತ್ತ ಮಲಗಿಕೊಂಡೇ ವರದಿ ಮಾಡಿದರು ನಮ್ಮ ವರದಿಗಾರರು. ಅವರ ಸಾಹಸಕ್ಕೆ ಮೆಚ್ಚೋಣ. ಆದರೆ ಅಂಥ ಹುಚ್ಚಾಟ ಬೇಕಿತ್ತೆ?
ಒಂದು ಗುಂಡು ಮೊಳಗಿದ ತಕ್ಷಣ ತಾಜ್ ಬಳಿ ಮಲಗಿದ ವರದಿಗಾರರು ಟಿವಿ ಪರದೆಗಳ ಮುಂದೆ ಪ್ರತ್ಯಕ್ಷರಾಗಿ ತಾಜಾ ಸುದ್ದಿ ಹೇಳುತ್ತಿದ್ದರು. ಇಡೀ ದೇಶ ಇದನ್ನು ನೋಡುತ್ತಿರುತ್ತದೆ ಎಂಬ ಪರಿವೆಯೇ ಇಲ್ಲದಂತೆ ತಮ್ಮ ಸಾಹಸ ಪ್ರದರ್ಶನಕ್ಕೇ ಎಲ್ಲ ಚಾನೆಲ್ಗಳು ಮುಗಿಬಿದ್ದಿದ್ದವು.
ಪೊಲೀಸರು ಪದೇ ಪದೇ ಬಂದು ಮೀಡಿಯಾದವರನ್ನು ಅಲ್ಲಿಂದ ದೂರ ಕಳಿಸಲು ನಡೆಸಿದ ಎಲ್ಲ ಯತ್ನಗಳು ವಿಫಲವಾದವು. ತಮ್ಮ ಸಿಬ್ಬಂದಿ ಭಯೋತ್ಪಾದಕರ ಗುಂಡಿಗೆ ಬಲಿಯಾಗಿ ಹುತಾತ್ಮರಾಗಲಿ ಎಂದು ಚಾನೆಲ್ಗಳ ಒಡೆಯರು ಬಯಸಿದ್ದರೆ?
ಈ ಚಿತ್ರ ಕೇವಲ ನಮ್ಮ ಬಳಿ ಇದೆ, ಈ ಸುದ್ದಿಯನ್ನು ನಾವೇ ಮೊದಲು ಬ್ರೇಕ್ ಮಾಡಿದ್ದು, ನಮ್ಮ ವರದಿಗಾರರು ಕೆಲವೇ ಅಡಿ ದೂರದಲ್ಲಿದ್ದು ವರದಿ ಮಾಡಿದರು, ಒಂದು ಗುಂಡು ನಮ್ಮ ಕ್ಯಾಮೆರಾ ಕ್ರೂ ಸಮೀಪವೇ ಹಾದಿ ಹೋಯಿತು... ಎಂದೆಲ್ಲ ತೀರಾ ಅಸಹ್ಯಕರವಾಗಿ ತಮ್ಮ ಚಾನೆಲ್ಗಳ ಟಿಆರ್ಪಿ ಹೆಚ್ಚಿಸಿಕೊಳ್ಳಲು ಯತ್ನಿಸಿದ್ದು ಬೆಂದ ಮನೆಯಲ್ಲಿ ಗಳ ಹಿರಿದಂತೆ ಅಲ್ಲವೆ?
ಮೀಡಿಯಾದವರು ಇದ್ದಾರೆ ಎಂಬ ಕಾರಣಕ್ಕೆ ಉಗ್ರರು ಆ ಭಾಗದಲ್ಲೇ ಹೆಚ್ಚು ಬಾಂಬ್ಗಳನ್ನು ಸಿಡಿಸಿದರು, ಗುಂಡಿನ ದಾಳಿ ನಡೆಸಿದರು. ತನ್ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಪ್ರಚಾರ ಗಳಿಸಿದರು ಎಂದು ಬ್ಲಾಗ್ ಒಂದರಲ್ಲಿ ಬರೆದಿದ್ದನ್ನು ಗಮನಿಸಿದೆ. ಯಾಕೆ, ಮೀಡಿಯಾದವರಿಗೆ ಇಷ್ಟು ಸರಳ ಸೂಕ್ಷ್ಮಗಳು ಅರ್ಥವಾಗಲಿಲ್ಲವೆ?
ದಾಳಿಯಿಂದ ಬದುಕುಳಿದ ಬಂದ ಕೆಲ ಅಮೆರಿಕನ್ ಪ್ರಜೆಗಳು ಸಿಎನ್ಎನ್ ಚಾನೆಲ್ನಲ್ಲಿ ತಾವು ಯಾವ ಕೊಠಡಿಯಲ್ಲಿ ಇದ್ದೆವು ಎಂದು ಪ್ರಸಾರ ಮಾಡಿದ್ದರಿಂದಾಗಿ ಜೀವ ಉಳಿಸಿಕೊಂಡಿದ್ದೇ ಹೆಚ್ಚು ಎಂದು ಹೇಳಿಕೊಂಡಿದ್ದಾರೆ. ಅಲ್ಲಿ ಸಿಕ್ಕಿಬಿದ್ದಿದ್ದ ಜನರ ಪ್ರಾಣದ ಬೆಲೆಗಿಂತ ರೋಚಕ ಸುದ್ದಿಗಳನ್ನು ಉಣಬಡಿಸುವ ಚಾನೆಲ್ಗಳ ರಕ್ತದಾಹದ ಅಬ್ಬರವೇ ಹೆಚ್ಚಾಗಿ ಹೋಯಿತಲ್ಲ?
ಭಯೋತ್ಪಾದಕರು ಈ ಬಾರಿ ಮುಂಬೈಗೆ ಕಾಲಿಟ್ಟಾಗಲೇ ವಿದೇಶೀಯರನ್ನು ಗುರಿಯಾಗಿರಿಸಿಕೊಂಡಿದ್ದರು. ಸಾಕಷ್ಟು ವಿದೇಶೀಯರನ್ನು ಕೊಂದು ಹಾಕುವಲ್ಲಿ ಸಫಲರಾದರು. ವಿಶ್ವವೇ ತಮ್ಮನ್ನು ಗಮನಿಸಿಬೇಕು ಎಂದು ಅವರು ಬಯಸಿದ್ದರು. ಅವರ ಬಯಕೆಯಂತೆ ನಮ್ಮ ಮೀಡಿಯಾಗಳು ಭಯೋತ್ಪಾದಕರ ವಿಧ್ವಂಸಕ ದೃಶ್ಯಗಳನ್ನು ಲೈವ್ ಪ್ರಸಾರ ಮಾಡಿದವು. ಮತ್ತು ಅವರ ಉದ್ದೇಶವನ್ನು ಈಡೇರಿಸಿದವು.
*******
ಮೀಡಿಯಾಗಳು ಯಾವ ಪರಿಯ ಭಯೋತ್ಪಾದನೆ ಹುಟ್ಟು ಹಾಕಿದವೆಂದರೆ ಗಾನಕೋಗಿಲೆ ಲತಾ ಮಂಗೇಶ್ಕರ್ ಟಿವಿಗಳನ್ನು ನೋಡುತ್ತ ೩೦೦ ಬಾರಿ ಅತ್ತುಬಿಟ್ಟೆ ಎಂದು ಹೇಳಿಕೆ ನೀಡಿದರು. ಪಾಪ ಅವರಿಗೆ ಗೊತ್ತಿರದ ವಿಷಯವೆಂದರೆ ಟಿವಿ ಚಾನೆಲ್ಗಳು ಒಂದೇ ದೃಶ್ಯವನ್ನು ಸಾವಿರ ಬಾರಿ ತೋರಿಸಿ, ಅದನ್ನು ಈಗಷ್ಟೆ ನಡೆದಿದೆ ಎಂಬಂತೆ ಬಿಂಬಿಸುತ್ತಾರೆ. ಕಡೇ ಪಕ್ಷ ಆ ದೃಶ್ಯದ ಮೇಲ್ಭಾಗದಲ್ಲಿ ಕಾಣಿಸುವ ಲೈವ್ ಎಂಬ ಅಕ್ಷರಗಳನ್ನು ಕಿತ್ತುಹಾಕಬೇಕೆನ್ನುವ ಸೌಜನ್ಯವೂ ಅವರಿಗಿರುವುದಿಲ್ಲ.
ಟಿವಿಗಳ ಮುಂದೆ ಕುಳಿತ ಅಮಾಯಕ ಜನರು, ಇನ್ನೊಂದು ಗುಂಡು ಬಿತ್ತು, ಇನ್ನೊಂದು ಬಾಂಬು ಸ್ಫೋಟಿಸಿತು ಎಂದು ಗಾಬರಿಪಡುತ್ತಲೇ, ಬೆದರುತ್ತಲೇ ಕಾಲ ಕಳೆಯುತ್ತಾರೆ.
ಹಾಗಂತ ಮುಂಬೈನಲ್ಲಿ ನಡೆದ ಘಟನೆ ಸಾಮಾನ್ಯ ಪ್ರಮಾಣದ್ದು ಎಂದೇನು ಹೇಳುತ್ತಿಲ್ಲ. ನಿಸ್ಸಂಶಯವಾಗಿ ಇದು ಭಾರತದ ಮೇಲೆ ನಡೆದ ಬಹುದೊಡ್ಡ ಆಕ್ರಮಣ. ಇದನ್ನು ಸುಲಭವಾಗಿ ಅರಗಿಸಿಕೊಳ್ಳುವುದು ಸಾಧ್ಯವಿಲ್ಲ. ಆದರೆ ಚಾನೆಲ್ಗಳು ಇಂಥ ದೊಡ್ಡ ಆಕ್ರಮಣವೊಂದನ್ನು ಇನ್ನಷ್ಟು ಬೆಳೆಸಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಯತ್ನಿಸಿದವು.
*******
ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸ್ ರಾವ್ ದೇಶಮುಖ್ ಕಾರ್ಯಾಚರಣೆ ಮುಗಿದ ನಂತರ ತಾಜ್ ಹೋಟೆಲಿಗೆ ಭೇಟಿ ನೀಡಿದರು. ಆಗ ಅವರೊಂದಿಗೆ ಪುತ್ರ, ಬಾಲಿವುಡ್ ನಟ ರಿತೇಶ್ ದೇಶಮುಖ್ ಇದ್ದರು. ಅವರೊಂದಿಗೆ ಬಾಲಿವುಡ್ ನಿರ್ದೇಶಕ, ನಿರ್ಮಾಪಕ ರಾಮ್ಗೋಪಾಲ್ ವರ್ಮಾ ಸಹ ಇದ್ದರು.
ದೇಶಮುಖ್ ತಮ್ಮೊಂದಿಗೆ ಹಿರಿಯ ಅಧಿಕಾರಿಗಳನ್ನು ಕರೆದೊಯ್ದಿದ್ದರೆ, ಸಚಿವ ಸಂಪುಟದ ಸದಸ್ಯರನ್ನು ಕರೆದೊಯ್ದಿದ್ದರೆ ಯಾರ ಆಕ್ಷೇಪಣೆಯೂ ಇರಲಿಲ್ಲ. ರಿತೇಶ್ಗೆ, ವರ್ಮಾಗೆ ಅಲ್ಲೇನು ಕೆಲಸವಿತ್ತು. ಸಹಜವಾಗಿಯೇ ಇದು ವಿವಾದಕ್ಕೆ ಕಾರಣವಾಯಿತು. ದೇಶಮುಖ್ ಉದ್ದೇಶಪೂರ್ವಕವಾಗಿ ಅವರನ್ನು ಕರೆದೊಯ್ದಿರಲಿಲ್ಲ ಎಂದು ಸ್ಪಷ್ಟನೆ ನೀಡಿದರು. ಉದ್ದೇಶಪೂರ್ವಕವಾಗಿ ಕರೆದೊಯ್ಯದಿದ್ದರೂ ಅದು ಅಕ್ಷಮ್ಯ ಎಂಬುದರಲ್ಲಿ ಎರಡು ಮಾತಿಲ್ಲ.
ಚಾನೆಲ್ಗಳು ಯಥಾಪ್ರಕಾರ ದೇಶಮುಖ್ ವಿರುದ್ಧ ಹರಿಹಾಯುತ್ತಿವೆ. ವರ್ಮಾ ಮುಂದಿನ ಸಿನಿಮಾಗೆ ತಯಾರಿ ನಡೆಸಲು ಅಲ್ಲಿಗೆ ಹೋಗಿದ್ದಾನೆ ಎಂಬಲ್ಲಿಂದ ಹಿಡಿದು, ಟೆರರ್ ಟೂರಿಸಮ್, ಪಿಕ್ನಿಕ್ ಮಾಡಿದರು ಎನ್ನುವವರೆಗೆ ಟೀಕೆಗಳು ಮುಂದುವರೆಯುತ್ತಿವೆ. ದೇಶಮುಖ್ ಅವರನ್ನು ಎಲ್ಲರೂ ಖಂಡಿಸಬೇಕು, ನಿಜ.
ಆದರೆ ಇದೇ ಚಾನೆಲ್ಗಳು ಮುಂಬೈನಲ್ಲಿ ನಡೆದ ಇಡೀ ದೃಶ್ಯಾವಳಿಗಳನ್ನು ಡಾಕ್ಯುಮೆಂಟರಿ ರೂಪದಲ್ಲಿ ಪ್ರಸ್ತುತಪಡಿಸುತ್ತ ಇದೇ ವರ್ಮಾನ ಅಂಡರ್ವರ್ಲ್ಡ್ ಸಿನಿಮಾಗಳ ಮ್ಯೂಸಿಕ್ ಟ್ಯೂನ್ಗಳನ್ನು ಹಿನ್ನೆಲೆಯಲ್ಲಿ ಬಳಸಿ ಮಾಡಿದ್ದೇನು? ಇಡೀ ಮುಂಬೈ ದೃಶ್ಯಾವಳಿಗಳನ್ನು ಇವರು ಹಾಲಿವುಡ್ ಆಕ್ಷನ್ ಸಿನಿಮಾಗಳ ಹಾಗೇ ತೋರಿಸಲಿಲ್ಲವೆ?
ಸಿನಿಮಾಗಳಲ್ಲಿ ಇರುವ ನಾಟಕೀಯತೆ, ಹಿನ್ನೆಲೆ ಸಂಗೀತ, ವೈಭವ ಎಲ್ಲವೂ ಇವರು ತೋರಿಸುವ ತುಣುಕುಗಳಲಿಲ್ಲವೆ?
*******
ಜನ ಆಕ್ರೋಶಗೊಂಡಿದ್ದಾರೆ. ಸಿಟ್ಟು ನೆತ್ತಿಗೇರಿದೆ. ತಮ್ಮನ್ನು ರಕ್ಷಿಸುವ ಜನರೆಲ್ಲ ಎಲ್ಲಿ ಹೋದರು ಎಂದು ಕೇಳುತ್ತಿದ್ದಾರೆ. ಟಿವಿ ಚಾನೆಲ್ಗಳು ಇದನ್ನು ಬಳಸಿಕೊಂಡು ಈಗ ರಾಜಕಾರಣಿಗಳ ವಿರುದ್ಧ ಯುದ್ಧ ಸಾರಿವೆ.
ಈ ಪ್ರಕ್ರಿಯೆಯಲ್ಲಿ ಹರಿದುಬರುತ್ತಿರುವ ಪ್ರತಿಕ್ರಿಯೆಗಳನ್ನು ಗಮನಿಸಿ. ದೇಶದ ಆಡಳಿತ ಸೂತ್ರವನ್ನು ಎನ್ಎಸ್ಜಿಯೇ ನಡೆಸಬೇಕು, ಮಿಲಿಟರಿ ಆಡಳಿತ ಬರಬೇಕು, ಅಮೆರಿಕ ದೇಶವು ಇರಾಕ್ ಹಾಗು ಅಫಘಾನಿಸ್ತಾನಗಳ ಮೇಲೆ ನಡೆಸಿದಂತೆ ಭಾರತ ಪಾಕಿಸ್ತಾನದ ಮೇಲೆ ದಾಳಿ ಮಾಡಬೇಕು, ರಾಜಕಾರಣಿಗಳಿಗೆ ಇರುವ ಭದ್ರತೆ ತೆಗೆದುಹಾಕಿ ಅವರನ್ನು ಸಾಯಲು ಬಿಡಬೇಕು... ಇಂಥದ್ದೇ ತಲೆಬುಡವಿಲ್ಲದ ಸುಧಾರಣಾ ಪ್ರಸ್ತಾಪಗಳು.
ಬೆಂಗಳೂರಿನಲ್ಲಿ ೧೧-೩೦ಕ್ಕೆ ಡಿಸ್ಕೋಥೆಕ್ಗಳನ್ನು ಬಂದ್ ಮಾಡಿ ಎಂದರೆ ಗಾಂಧಿ ಪ್ರತಿಮೆ ಬಳಿ ಬಂದು ಪ್ರತಿಭಟನೆ ನಡೆಸುವ ಜನರೇ ಇಂಥ ಪ್ರಸ್ತಾಪಗಳನ್ನು ಒಡ್ಡುತ್ತಿದ್ದಾರೆ ಎಂಬುದು ವಿಶೇಷ. ಒಂದು ಹೊಟೆಲ್ನಲ್ಲಿ ಸಣ್ಣ ಚೆಕಿಂಗ್ ವ್ಯವಸ್ಥೆಗೆ ಒಳಗಾಗಲು ಕೊಸರಾಡುವ ಜನ ಮಿಲಿಟರಿ ಆಡಳಿತದ ಬಗ್ಗೆ ಮಾತನಾಡುತ್ತಾರೆ ಎಂಬುದೇ ದೊಡ್ಡ ತಮಾಶೆ. ಮಿಲಿಟರಿ ಆಡಳಿತವು ದೇಶದ ಜನರ ಬದುಕುವ ಹಕ್ಕನ್ನು ನಿರಾಕರಿಸುತ್ತದೆ ಎಂಬ ಸರಳ ಸತ್ಯ ಈ ಪುಣ್ಯಾತ್ಮರಿಗೆ ಗೊತ್ತಿಲ್ಲದಿರುವಷ್ಟು ಅಮಾಯಕರೆ ಈ ಜನ? ಮಹಾತ್ಮಗಾಂಧಿ, ಇಂದಿರಾಗಾಂಧಿ, ರಾಜೀವ್ಗಾಂಧಿ..ಹೀಗೆ ಹಲವು ಮಂದಿ ಈಗಾಗಲೇ ಭಯೋತ್ಪಾದಕರ ಗುಂಡಿಗೆ ಬಲಿಯಾಗಿದ್ದಾರೆ. ನಮ್ಮ ವಿಐಪಿಗಳ ಭದ್ರತೆ ಹಿಂದಕ್ಕೆ ತೆಗೆದುಕೊಂಡು, ಅವರುಗಳೂ ಸತ್ತುಹೋದರೆ ದೇಶ ಉದ್ಧಾರವಾಗುತ್ತದೆಯೇ?
ಪಾಕಿಸ್ತಾನ ಒಂದು ಅಣು ರಾಷ್ಟ್ರ. ಹೆಸರಿಗೆ ಅಲ್ಲಿರುವುದು ಪ್ರಜಾಪ್ರಭುತ್ವ ಸರ್ಕಾರವಾದರೂ ಅಲ್ಲಿರುವುದು ಅರಾಜಕ ವ್ಯವಸ್ಥೆ. ಆ ದೇಶದ ಅಧ್ಯಕ್ಷನಿಗೆ ಮಾನಸಿಕ ಸ್ಥಿಮಿತ ಇಲ್ಲ ಎಂಬ ಮಾಹಿತಿಗಳಿವೆ. ಐಎಸ್ಐ, ಸೇನೆಯಂಥ ಅಪಾಯಕಾರಿ ಅಂಗಗಳೂ ಸಹ ಅಧ್ಯಕ್ಷ, ಪ್ರಧಾನಿಯ ಹಿಡಿತದಲ್ಲಿ ಇಲ್ಲ.
ಆ ದೇಶ ಎಂಥ ದುರ್ಗತಿಯಲ್ಲಿದೆ ಎಂದರೆ ಭಾರತದ ವಿರುದ್ಧ ಗಡಿಯಾಚೆಗಿನ ಭಯೋತ್ಪಾದನೆಗೆ ತಯಾರಿಸಲಾದ ಮುಜಾಹಿದಿನ್ಗಳು ಇವತ್ತು ಪಾಕಿಸ್ತಾನವನ್ನೇ ನುಂಗುವಷ್ಟು ಬೆಳೆದಿದ್ದಾರೆ. ಅವರು ಸಾಕಿದ ಘಟಸರ್ಪಗಳು ಅವರನ್ನೇ ಕಡಿಯುತ್ತಿವೆ. ಇಂಡಿಯಾದಲ್ಲಿ ನಡೆಯುವ ಹಾಗೆಯೇ ಪಾಕಿಸ್ತಾನದಲ್ಲೂ ಭಯೋತ್ಪಾದಕರ ಸಾವಿನ ಆಟಗಳು ನಡೆಯುತ್ತಿವೆ.
ಒಂದೆಡೆ ಚೀನಾ, ಮತ್ತೊಂದೆಡೆ ಅಮೆರಿಕದ ಚದುರಂಗದ ಆಟದ ಕಾಯಿಯಾಗಿರುವ ಪಾಕಿಸ್ತಾನ ನಿಜಕ್ಕೂ ಕ್ಷೆಭೆಯಲ್ಲಿದೆ. ಇಂಥ ಅಸ್ವಸ್ಥ ಮನಸ್ಸಿನ ರಾಷ್ಟ್ರವೊಂದರ ಮೇಲೆ ಏಕಾಏಕಿ ಯುದ್ಧ ಹೂಡಿದರೆ, ಒಂದೊಮ್ಮೆ ಅದು ತನ್ನಲ್ಲಿನ ಅಣ್ವಸ್ತ್ರವನ್ನು ಭಾರತದ ಮೇಲೆ ಪ್ರಯೋಗಿಸಿದರೆ ಅದರ ಪರಿಣಾಮಗಳೇನಾಗುತ್ತವೆ? ಅದರ ಬಗ್ಗೆ ಯೋಚಿಸುವವರ್ಯಾರು?
******
ಟಿವಿ ಚಾನೆಲ್ಗಳಲ್ಲಿ ಇಂಥ ವಿಷಯಗಳನ್ನು ಚರ್ಚೆ ಮಾಡಲು ಬರುತ್ತಿರುವ ಎಕ್ಸ್ಪರ್ಟ್ಗಳಾದರೂ ಯಾರು? ಕಿರುತೆರೆ ನಟಿ ಸ್ಮೃತಿ ಇರಾನಿ, ಬಾಲಿವುಡ್ ನಟ ರಾಹುಲ್ ಬೋಸ್ ತರಹದ ಸಿನಿಮಾ ಮುಖಗಳು, ಪ್ರಸಾದ್ ಬಿದ್ದಪ್ಪನ ತರಹದ ಫ್ಯಾಷನ್ ಗುರುಗಳು, ದೇಶದ ಸಾಮಾಜಿಕ ಬದುಕಿನ ಚಿತ್ರವೇ ಗೊತ್ತಿಲ್ಲದ ಒಂದಷ್ಟು ಟೆಕ್ಕಿಗಳು, ಉದ್ಯಮಿಗಳು, ಡಿಜೆಗಳು, ಎನ್ಜಿಓಗಳ ಹೆಸರಿನ ಕೆಲ ಸಮಾಜಸೇವಕರು...
ಯಾಕೆ ತಮ್ಮ ಪ್ಯಾನೆಲ್ನಲ್ಲಿ ಒಬ್ಬ ರಿಕ್ಷಾವಾಲನನ್ನು, ಒಬ್ಬ ಕೂಲಿ ಕಾರ್ಮಿಕನನ್ನು, ಒಬ್ಬ ಬಸ್ ಡ್ರೈವರನ್ನು, ಒಬ್ಬ ಕೊಳಗೇರಿ ಹೆಂಗಸನ್ನು ಇವರು ಕೂಡಿಸಿಕೊಳ್ಳುವುದಿಲ್ಲ? ಯಾಕೆ ಅವರ ಅಭಿಪ್ರಾಯಗಳನ್ನು ಪಡೆಯುವುದಿಲ್ಲ? ಅವರ್ಯಾರೂ ಈ ದೇಶದ ಪ್ರಜೆಗಳಲ್ಲವೆ? ಈ ದೇಶದ ಬಡ ಶ್ರಮಿಕ ಜನವರ್ಗದ ಅಭಿಪ್ರಾಯಗಳನ್ನು ಕೇಳಿ ನೋಡಿ, ಈ ಟಿವಿ ಚಾನೆಲ್ಗಳ ಪ್ಯಾನೆಲ್ಗಳಲ್ಲಿ ಕುಳಿತು ಮಾತನಾಡುವ ಪ್ರಭೃತಿಗಳಿಗಿಂತ ಸೆನ್ಸಿಬಲ್ ಆಗಿ ಅವರು ಮಾತನಾಡಬಲ್ಲರು.
ವಿ ನೀಡ್ ಟು ಡು ಸಮ್ಥಿಂಗ್ ಎಂದು ಸಾರಿ ಹೋಗುವ ಈ ಜನರು ಜವಾಬ್ದಾರಿ ತಮ್ಮ ಮೇಲೆ ತೆಗೆದುಕೊಳ್ಳಲು ಹಿಂಜರಿಯುವವರು. ಚುನಾವಣೆಗೆ ಸ್ಪರ್ಧಿಸಿ ಎಂದರೆ ಮುಖಮುಚ್ಚಿಕೊಳ್ಳುವವರು. ಕಡೆ ಪಕ್ಷ ಮತದಾನವನ್ನಾದರೂ ಮಾಡಿ ಅಂದರೆ ಅವರಿಗೆ ಚುನಾವಣೆಯ ದಿನ ಬ್ಯುಸಿ ಷೆಡ್ಯೂಲ್ಗಳಿರುತ್ತವೆ!
ಎನ್ಡಿಟಿವಿಯ ಬರ್ಖಾ ದತ್ ದಾಳಿಯ ನಂತರ ನಡೆಸಿಕೊಟ್ಟ ವಿ ದ ಪೀಪಲ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಏಕೈಕ ರಾಜಕಾರಣಿ ಅಭಿಷೇಕ್ ಸಿಂಗ್ವಿ. ಈ ಕಾರ್ಯಕ್ರಮಕ್ಕೆ ಬಂದರೆ ಜನರ ಕೈಯಲ್ಲಿ ಹೊಡೆಸಿಕೊಳ್ಳಬೇಕಾಗುತ್ತದೆ ಎಂದು ಯಾರೂ ಬಂದಿಲ್ಲ ಎಂದು ಬರ್ಖಾ ಬಾಲಿಷವಾಗಿ ಹೇಳಿ ಜನರನ್ನು ಕೆರಳಿಸುತ್ತಿದ್ದರು.
ಎಲೆಕ್ಟ್ರಾನಿಕ್ ಮಾಧ್ಯಮಗಳ ಕೆಲ ಪತ್ರಕರ್ತರು ದೇಶದ ಶ್ರೇಷ್ಠ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಮತ್ತು ಅದೇ ರೀತಿಯ ಉನ್ನತ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇವರಿಗೆ ಇಂಥ ಪ್ರಶಸ್ತಿ ಕೊಟ್ಟವರು ಯಥಾಪ್ರಕಾರ ರಾಜಕಾರಣಿಗಳೇ.
ರಾಜಕಾರಣಿಗಳ ವಿರುದ್ಧ ಹರಿಹಾಯುತ್ತಿರುವ ಈ ಪತ್ರಕರ್ತರಲ್ಲಿ ಕೆಲವರಾದರೂ ತಮ್ಮ ಪ್ರಶಸ್ತಿಗಳನ್ನು ವಾಪಾಸು ಮಾಡಿ ಪ್ರತಿಭಟನೆ ದಾಖಲಿಸುವರೋ ಎಂದು ಕಾಯುತ್ತಿದ್ದೇನೆ!
**********
ಮುಂಬೈ ಬಾಂಬ್ ಸ್ಫೋಟದ ಪರಿಣಾಮಗಳು ವಿಪರೀತ. ತೀರಾ ಗಂಭೀರವೆಂದರೆ ದೇಶದಲ್ಲಿ ಮತ್ತೆ ಧರ್ಮದ ಹೆಸರಿನಲ್ಲಿ ಧ್ರುವೀಕರಣ ನಡೆಯುತ್ತಿದೆ. ಮುಸ್ಲಿಮರು ಸುಲಭವಾಗಿ ಹಿಂದೂ ಮೂಲಭೂತವಾದಿಗಳ ಸಾಫ್ಟ್ ಟಾರ್ಗೆಟ್ ಆಗುವ ಸಾಧ್ಯತೆಗಳೂ ಇವೆ.
ನಿಜ, ಭಾರತೀಯ ಮುಸ್ಲಿಮರಲ್ಲೂ ಭಯೋತ್ಪಾದಕರನ್ನು ಬೆಂಬಲಿಸುವ, ಭಯೋತ್ಪಾದನೆಯಲ್ಲಿ ತೊಡಗಿಕೊಂಡಿರುವ ಸಣ್ಣ ಗುಂಪೊಂದಿದೆ. ಗಡಿಯಾಚೆಗಿನ ಭಯೋತ್ಪಾದನೆ ಇಂದು ದೇಶದ ಒಳಗಿನ ಭಯೋತ್ಪಾದನೆಯಾಗಿ ರೂಪಾಂತರಗೊಳ್ಳುತ್ತಿದೆ. ಅದೇ ಸಂದರ್ಭದಲ್ಲಿ ಮುಸ್ಲಿಮರು ನಡೆಸುವ ಭಯೋತ್ಪಾದನೆಗೆ ಪ್ರತಿಯಾಗಿ ಹಿಂದೂಗಳ ಭಯೋತ್ಪಾದನೆಯೂ ಆರಂಭಗೊಂಡಿದೆ.
ಮಾಲೇಗಾಂವ್ ಸ್ಫೋಟದ ಪ್ರಕರಣ ಹಿಂದೂ ಭಯೋತ್ಪಾದನೆಯ ಮೊದಲ ಪ್ರಕರಣ ಎಂದು ಸುಳ್ಳು ಸುಳ್ಳೇ ಹೇಳುವುದು ಬೇಡ. ಬಾಬರಿ ಮಸೀದಿ ಧ್ವಂಸದಿಂದ ಹಿಡಿದು ಗುಜರಾತ್ ನರಮೇಧದವರೆಗೆ ಹಿಂದೂ ಮೂಲಭೂತವಾದಿಗಳು ನಡೆಸಿದ ದುಷ್ಕೃತ್ಯಗಳೂ ಸಹ ಭಯೋತ್ಪಾದನೆಯೇ ಎಂಬುದನ್ನು ಮರೆಮಾಚುವಂತಿಲ್ಲ.
ಮಾಲೆಗಾಂವ್ ಸ್ಫೋಟದ ತನಿಖೆ ನಡೆಸಿದ್ದ ಮುಂಬೈ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ಭಯೋತ್ಪಾದಕರ ಗುಂಡಿಗೆ ಬಲಿಯಾದರು. ಒಂದು ವೇಳೆ ಅವರು ಬದುಕಿದ್ದರೆ ಇವತ್ತು ಅವರನ್ನು ಹೀರೋ ಮಾಡಿರುವ ಜನರೆಲ್ಲ ಅವರ ವಿರುದ್ಧ ಕೊಳಕುಶಬ್ದಗಳಲ್ಲಿ ಮಾತನಾಡುತ್ತಿದ್ದರು. ಇಡೀ ಮುಂಬೈ ದಾಳಿಯ ಹೊಣೆಯನ್ನು ಕರ್ಕರೆ ತಲೆಗೆ ಹೊರಿಸಿ, ಆತನನ್ನು ಮಾನಸಿಕವಾಗಿ ಸಾಯಿಸಿಬಿಡುತ್ತಿದ್ದರು. ಇದರ ಅರಿವಿರುವ ಕರ್ಕರೆ ಪತ್ನಿ ನರೇಂದ್ರ ಮೋದಿ ಕೊಡಲು ಬಯಸಿದ್ದ ಭಕ್ಷೀಸನ್ನು ತಿರಸ್ಕರಿಸಿದರು.
ದೇಶ ಇಂದು ಒಗ್ಗಟ್ಟಾಗಿ, ಎದುರಾಗಿರುವ ಸಂಕಟಗಳಿಗೆ ಉತ್ತರ ಕಂಡುಕೊಳ್ಳಬೇಕು. ದೇಶಕ್ಕಾಗಿ ಮಡಿದ ವೀರಯೋಧರ ತ್ಯಾಗ-ಬಲಿದಾನಗಳು ವ್ಯರ್ಥವಾಗದಂತೆ ನಮ್ಮ ಆಡಳಿತ ವ್ಯವಸ್ಥೆ ಕ್ರಮಕೈಗೊಳ್ಳಬೇಕು. ದೇಶದ ಆಂತರಿಕ ಭದ್ರತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಏನೇನು ಮಾಡಲು ಸಾಧ್ಯವೋ ಅದೆಲ್ಲವನ್ನೂ ನಮ್ಮ ಸರ್ಕಾರಗಳು ಮಾಡಬೇಕು. ಸಿನಿಕ ಪ್ರತಿಕ್ರಿಯೆಗಳ ಅಬ್ಬರದಲ್ಲಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳುಗೆಡಹುವ ಪ್ರಯತ್ನಗಳು ಸಲ್ಲದು. ದೇಶದ ಧರ್ಮದ ಹೆಸರಿನಲ್ಲಿ ಸಂಪೂರ್ಣ ಒಡೆದುಹೋಗದಂತೆ ತಡೆಯಬೇಕಾಗಿರುವುದು ತಕ್ಷಣದ ಅಗತ್ಯ. ಹಿಂದೂಗಳು ತಮ್ಮೊಳಗಿನ ಭಯೋತ್ಪಾದಕರ ವಿರುದ್ಧ, ಮುಸ್ಲಿಮರು ತಮ್ಮೊಳಗಿನ ಭಯೋತ್ಪಾದಕರ ವಿರುದ್ಧ ಹೋರಾಡುವಂತಾಗಬೇಕು. ಚಾನೆಲ್ಗಳು ಇಂಥ ವಿಷಯಗಳಿಗೆ ಆದ್ಯತೆ ನೀಡುವ ಬದಲು ನಕ್ವಿ, ಆರ್.ಆರ್.ಪಾಟೀಲ್, ದೇಶಮುಖ್, ಅಚ್ಯುತಾನಂದನ್ ಇತ್ಯಾದಿ ವ್ಯಕ್ತಿಗಳ ವಿರುದ್ಧ ಸಮರ ಸಾರುತ್ತಲೇ ಕುಳಿತಿದ್ದರೆ ಅವರ ಟಿಆರ್ಪಿ ಹೆಚ್ಚುತ್ತದೆಯೇ ಹೊರತು ದೇಶ ಉದ್ಧಾರವಾಗಲಾರದು.
ಇಡೀ ಜಗತ್ತಿಗೆ ಬುದ್ಧಿ ಹೇಳುವ ಚಾನೆಲ್ಗಳ ಜನ ಇದನ್ನು ಗಮನಿಸುವರೆ?
ಚಾನೆಲ್ಗಳು ಹೇಳುತ್ತಿರುವ ಮಾತನ್ನು ಅವರಿಗೇ ಅನ್ವಯಿಸಿ ಹೇಳುವುದಾದರೆ...
enough is enough!
********
14 comments:
a very well written, in-depth article. i too watched Arnab's show on Times Now. He ended discussion with two senior journalists abruptly, without even thanking them for joining him on the show. both of them expressed their disappointment about the way the channels were trying to agitate the public. Arnab repeatedly said his channel was not trying to agitate the public. but the public were agitated and they should be agitated over comments made by politicians. Is this journalism? Enough is enough, it is time to review how channels are working.
satish
೧೦೦% ಸರಿಯಾಗಿ ಹೇಳಿದ್ದಿರ.
ಮಾಧ್ಯಮಗಳೇ ನಿಜವಾದ ಭಯೋತ್ಪಾದಕರಾಗಿದ್ದು ದುರಂತ. ಉಗ್ರಗಾಮಿಗಳು ಮಾಧ್ಯಮಗಳಿಗೆ ಥ್ಯಾಂಕ್ಸ್ ಹೇಳಬೇಕು. ಗನ್ನಿಗಿಂತ ಕ್ಯಾಮರಾ ಭಯೋತ್ಪಾದನೆ ಹೆಚ್ಚಾಗಿದೆ ದೇಶದಲ್ಲಿ.
ನಾರಿಮನ್ ಬಿಲ್ಡಿಂಗ್ನಲ್ಲಿ, ತಾಜ್-ಒಬೆರಾಯ್-ಟ್ರೈಡೆಂಟ್ ಹೋಟೆಲುಗಳಲ್ಲಿ ಸತ್ತವರ ಬಗ್ಗೆ ಎಷ್ಟೊಂದು ಸುದ್ದಿ ಮಾಡಿದವು ಈ ಚಾನೆಲ್ಗಳು.
ಟೌಮ್ಸ್ ನೌನಲ್ಲಿ ಬಚಾಯಿಸಿಕೊಂಡು ಬಂದ ಒತ್ತೆಯಾಳುಗಳ ಹೆಸರುಗಳನ್ನು ಪದೇ ಪದೇ ಓದಲಾಯಿತು. ಇದೆಲ್ಲ ಸರಿ.
ಆದರೆ ಛತ್ರಪತಿ ಶಿವಾಜಿ ಟರ್ಮಿನಲ್ನಲ್ಲಿ ಸತ್ತವರ ಬಗ್ಗೆ ಯಾಕೆ ಸುದ್ದಿಯೇ ಇಲ್ಲ. ಅಲ್ಲಿ ಸತ್ತವರೆಲ್ಲ ಬಡವರು-ಮಧ್ಯಮವರ್ಗದವರು ಎಂದೇ?
ರೈಲ್ವೆ ನಿಲ್ದಾಣದಲ್ಲಿ ಸತ್ತವರ ಶವಗಳು ವಾರಸುದಾರರಿಲ್ಲದೆ ಆಸ್ಪತ್ರೆಗಳಲ್ಲಿ ಕೊಳೆಯುತ್ತ ಬಿದ್ದಿದ್ದವು. ಆ ಬಗ್ಗೆ ಹೆಚ್ಚು ವರದಿಗಳು ಯಾಕೆ ಪ್ರಸಾರವಾಗಲಿಲ್ಲ?
ನಮ್ಮ ಚಾನೆಲ್ನವರಿಗೆ ಕಾರ್ಪರೇಟ್ ಜಗತ್ತಿನ ಹಿತಾಸಕ್ತಿಗಳೇ ಹೆಚ್ಚು ಮುಖ್ಯ, ಬಡ-ಜನಸಾಮಾನ್ಯರದ್ದು ಅಲ್ಲ ಎಂಬುದು ಸ್ಪಷ್ಟವಾಯಿತಲ್ಲವೆ?
ಈ ಲೇಖನಕ್ಕೆ ಎನಫ್ ಈಸ್ ಎನಫ್ ಎಂಬ ತಲೆಬರೆಹದ ಬದಲು ಮಾಧ್ಯಮಗಳ ಭಯೋತ್ಪಾದನೆ ಎಂದು ಇಡಬೇಕಿತ್ತು.
ನೀವು ಹೇಳಿದಂತೆ ಭಯೋತ್ಪಾದಕರ ಉದ್ದೇಶಗಳನ್ನು ಸಫಲಗೊಳಿಸಿದ್ದು ಈ ಚಾನೆಲ್ಗಳು.
ಶೇಮ್ ಶೇಮ್!
-ಮಲ್ಲಿಕಾರ್ಜುನ ಬೇಗೂರು
ಮುಂಬೈ ಘಟನೆಯನ್ನು ರೋಮ್ಯಾಂಟಿಸೈಸ್ ಮಾಡಿದವರು ನ್ಯೂಸ್ ಚಾನೆಲ್ನವರೇ ಹೌದು.
ಅದರಲ್ಲೂ ತಮ್ಮ ಚಾನಲ್ಲೇ ಗ್ರೇಟು, ನಾವೇ ಚೆನ್ನಾಗಿ ಕವರೇಜ್ ಮಾಡಿದ್ದು ಎಂದು ಪದೇ ಪದೇ ಬೆನ್ನು ತಟ್ಟಿಕೊಂಡ ಈ ಚಾನೆಲ್ಗಳು ಟಿಆರ್ಪಿಗಾಗಿ ಏನೆಲ್ಲಾ ನಾಟಕವಾಡಿದವು?
ಜನ ನಿಜಕ್ಕೂ ಸಿಟ್ಟಾಗಬೇಕಿರುವುದು ಈ ಚಾನೆಲ್ಗಳ ಮೇಲೆ.
duradrashta endare neevu saha madhyama lokadalle iddeeri.
nale neevu yavudaadaru chanel sedirare neevu bere vidhiyillade ivaru madidanne madabekaguttade.
-mujamil
ನಿಮ್ಮ ಲೇಖನದ ದಾಟಿ ಹೇಗಿದೆಯೆಂದರೆ ನಕ್ವಿ, ವಿಲಾಸ್ರಾವ್, ಪಾಟೀಲ್, ಅಚ್ಯುತಾನಂದನ್ ಮಾಡಿದ್ದೇ ಸರಿ ಅನ್ನುವ ಹಾಗಿದೆ.
ಮಾಧ್ಯಮಗಳು ಮಾಡಿದ್ದು ಸರಿಯಿಲ್ಲದಿರಬಹುದು, ಆದರೆ ಈ ಹೊಲಸು ರಾಜಕಾರಣಿಗಳನ್ನೇಕೆ ಸಮರ್ಥಿಸಿಕೊಳ್ಳುತ್ತೀರಿ? ಸಮರ್ಥಿಸಿಕೊಂಡಿಲ್ಲ ಎಂದು ನೀವು ಹೇಳಬಹುದಾದರೂ ಒಂದು ಲೆಕ್ಕದಲ್ಲಿ ಅವರ ಪರವಾಗೇ ಬರೆದಂತಿದೆಯಲ್ಲ?
ಮುಂಬೈ ಉಗ್ರರ ದಾಳಿ ವೇಳೆ ದೃಶ್ಯ ಮಾದ್ಯಮಗಳ ಅತಿರೇಕದ ವರ್ತನೆ ಕುರಿತು ತಮ್ಮ ಎನಫ್ ಈಸ್ ಎನಫ್ ಲೇಖನ ಸವಿಸ್ತಾರವಾಗಿ ಮೂಡಿ ಬಂದಿದೆ. ವಾಸ್ತವ ಸಂಗತಿಗಳನ್ನು ಬಿತ್ತರಿಸಬೇಕಾದ ಮಾಧ್ಯಮಗಳು ನೋಡುಗರ ಸಂಖ್ಯೆ ಹೆಚ್ಚಿಸಿಕೊಳ್ಳಲು ಹರಸಾಹಸ ಪಡುತ್ತಿದ್ದವು ಎಂಬುದು ಜಗಜ್ಜಾಹೀರಗೊಂಡಿದೆ. ಮಾಧ್ಯಮಗಳಾಗಲಿ, ಸಾಮಾನ್ಯ ಜನತೆಯಾಗಲಿ ಎಲ್ಲದಕ್ಕೂ ಜನಪ್ರತಿನಿಧಿಗಳನ್ನು ದೂಷಿಸುವುದರಲ್ಲಿ ನಿಜಕ್ಕೂ ಅರ್ಥವಿಲ್ಲ ಅನಿಸುತ್ತದೆ.
ದಿನೇಶ್ ಅವರೇ,
ಉಗ್ರರ ದಾಳಿಯನ್ನು ಮಾದ್ಯಮಗಳು ವೈಭವೀಕರಿಸಿದ ರೀತಿ ಉಗ್ರರ ಆಶಯಗಳಿಗೆ ಪೂರಕವಾಗಿತ್ತು ಎಂಬ ನನ್ನ ಅಬಿಪ್ರಾಯಕ್ಕೆ ತಕ್ಕಂತೆ ತಮ್ಮ ಲೇಖನ ಮೂಡಿ ಬಂದಿದೆ.
ದೇಶದ ಒಟ್ಟು ವ್ಯವಸ್ಥೆಯ ವೈಫಲ್ಯದಿಂದಾಗಿ ಇಂತಹ ಅವಘಡಗಳು ಮರುಕಳುಹಿಸುತ್ತಿವೆ ಅನಿಸುತ್ತದೆ ಅಲ್ಲವೇ?
ಭಯೋತ್ಪಾದನೆಯನ್ನು ಧರ್ಮದ ಮುಖವಾಡ ಹಾಕಿ ನೋಡುವುದು ಸರಿಯಲ್ಲ. ಮನುಷ್ಯ ವಿರೋಧಿ ಭಯೋತ್ಪಾದನೆಯನ್ನು ಇಡೀ ಜಗತ್ತೇ ಬುಡಸಮೇತ ಕೀಳ ಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
-ರಾಗಿಣಿ
ಸಿನಿಕ ಪ್ರತಿಕ್ರಿಯೆಗಳ ಅಬ್ಬರದಲ್ಲಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳುಗೆಡಹುವ ಪ್ರಯತ್ನಗಳು ಸಲ್ಲದು. ದೇಶದ ಧರ್ಮದ ಹೆಸರಿನಲ್ಲಿ ಸಂಪೂರ್ಣ ಒಡೆದುಹೋಗದಂತೆ ತಡೆಯಬೇಕಾಗಿರುವುದು ತಕ್ಷಣದ ಅಗತ್ಯ. ಹಿಂದೂಗಳು ತಮ್ಮೊಳಗಿನ ಭಯೋತ್ಪಾದಕರ ವಿರುದ್ಧ, ಮುಸ್ಲಿಮರು ತಮ್ಮೊಳಗಿನ ಭಯೋತ್ಪಾದಕರ ವಿರುದ್ಧ ಹೋರಾಡುವಂತಾಗಬೇಕು.
- E salugalu 100% sariyage ide sir.. Naavu cinikatan bittu yochisbeku... Ega rajakarnigalannu baittiruvavar yarigu vote madoku time iralla. higiruvaaga evaru hege politicianagal mele blame madatare...??
ಮಾಲೆಗಾಂವ್ ಸ್ಫೋಟದ ತನಿಖೆ ನಡೆಸಿದ್ದ ಮುಂಬೈ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ಭಯೋತ್ಪಾದಕರ ಗುಂಡಿಗೆ ಬಲಿಯಾದರು. ಒಂದು ವೇಳೆ ಅವರು ಬದುಕಿದ್ದರೆ ಇವತ್ತು ಅವರನ್ನು ಹೀರೋ ಮಾಡಿರುವ ಜನರೆಲ್ಲ ಅವರ ವಿರುದ್ಧ ಕೊಳಕುಶಬ್ದಗಳಲ್ಲಿ ಮಾತನಾಡುತ್ತಿದ್ದರು. ಇಡೀ ಮುಂಬೈ ದಾಳಿಯ ಹೊಣೆಯನ್ನು ಕರ್ಕರೆ ತಲೆಗೆ ಹೊರಿಸಿ, ಆತನನ್ನು ಮಾನಸಿಕವಾಗಿ ಸಾಯಿಸಿಬಿಡುತ್ತಿದ್ದರು. ಇದರ ಅರಿವಿರುವ ಕರ್ಕರೆ ಪತ್ನಿ ನರೇಂದ್ರ ಮೋದಿ ಕೊಡಲು ಬಯಸಿದ್ದ ಭಕ್ಷೀಸನ್ನು ತಿರಸ್ಕರಿಸಿದರು.
ತುಂಬ ಸೂಕ್ಷ್ಮವಾಗಿ ಗಮನಿಸಿ ಬರೆದಿದ್ದೀರಿ.
ಹೌದಲ್ಲವೇ? ಒಂದು ವೇಳೆ ಕರ್ಕರೆ ಸಾವಿಗೀಡಾಗದೇ ಇದ್ದಿದ್ದರೆ ಆತನ ಮೇಲೆ ಇವರೆಲ್ಲ ಹೇಗೆ ಮುಗಿಬೀಳುತ್ತಿದ್ದರು ಅಲ್ಲವೆ?
ನೀವು ಮಾಧ್ಯಮಗಳ ಬಗ್ಗೆ ಬರೆದದ್ದು ಒಪ್ಪತಕ್ಕ ವಿಷಯಗಳೇ. ಆದರೆ ರಾಜಕಾರಣಿಗಳ ವಿಷಯ ಹಾಗಲ್ಲ.ಈ ದೇಶದಲ್ಲಿ ಅಂತಿಮವಾಗಿ ಅವರೇ ದಾರಿ, ನಿಜ. ಮೊನ್ನೆ ಘಟನೆ ನಡೆದಾಗ ಕೆಲ ರಾಜಕಾರಣಿಗಳು ಜವಾಬ್ದಾರಿಯುತವಾಗಿ ಮಾತನಾಡಲು ಹೊರಟಿದ್ದರು..ಆದರೆ ಟಿವಿ ಮಂದಿ ಅದನ್ನು ತಡೆದರು.
ಒಂದು ವೇಳೆ ಅವರಿಗೆ ಸಾಕಷ್ಟು ಸಮಯ ಟಿವಿಯಲ್ಲಿ ಸಿಕ್ಕಿದ್ದಿದ್ದರೆ ಉಳಿದ ತಲೆ ಮಾಸಿದ ಪುಡಾರಿ ಪಡೆ ಪುಂಖಾನುಪುಂಖವಾಗಿ ನಾಲಿಗೆ ವಿಸ್ತರಿಸಿ, ಪಾವನರಾಗುತ್ತಿದ್ದರು. ಯೋಗ್ಯರ ಮಾತಿನ ಜೊತೆ ಅಯೋಗ್ಯರ ಬ್ಯಾಂಡು,ವಾಲಗದ ಶಬ್ದ ಕೇಳಿ ಕಿವಿ ತೂತು ಬೀಳುತ್ತಿತ್ತು.
ಪ್ರತಿಯೊಬ್ಬರು ಮತದಾನ ಮಾಡಿದರೆ ಕೊನೇಪಕ್ಷ ಕಡಿಮೆ ಬ್ರಷ್ಟರನ್ನು ಆರಿಸಬಹುದು ಅಲ್ವಾ???
ಬೆಂಗಳೂರಿನಲ್ಲಿ ೧೧-೩೦ಕ್ಕೆ ಡಿಸ್ಕೋಥೆಕ್ಗಳನ್ನು ಬಂದ್ ಮಾಡಿ ಎಂದರೆ ಗಾಂಧಿ ಪ್ರತಿಮೆ ಬಳಿ ಬಂದು ಪ್ರತಿಭಟನೆ ನಡೆಸುವ ಜನರೇ ಇಂಥ ಪ್ರಸ್ತಾಪಗಳನ್ನು ಒಡ್ಡುತ್ತಿದ್ದಾರೆ ಎಂಬುದು ವಿಶೇಷ
:) well written.
ನಿಮ್ಮ ಕೋಪ ಪ್ರತಿ ಬರೆಹದಲ್ಲೂ ತಿಳಿಯುವಂತಿರುತ್ತದೆ ! ಆದರೆ ಸರಿಯಾದ ವಿಷಯಗಳಿಗೇ ನೀವು ಸಿಟ್ಟು ಮಾಡಿಕೊಳ್ಳುತ್ತಿರುವುದರಿಂದ ಓದುವಾಗ ಸಂತೋಷವೇ ಆಗುತ್ತದೆ ! ಈ ಟಿವಿ ವಾಹಿನಿಗಳ ಟ್ರೆಂಡ್ ಸೆಟ್ಟಿಂಗ್ ಅಂತೂ ಭಯಂಕರವಾಗಿದೆ.
Post a Comment