Sunday, December 28, 2008

ರಾಮಚಂದ್ರಗೌಡರ ‘ಬ್ರಾಹ್ಮಿನ್ ಫೋಬಿಯಾ’

‘ಜಗತ್ತಿಗೆ ಆದರ್ಶಪ್ರಾಯರೆನಿಸಿದ ಬ್ರಾಹ್ಮಣರಿಗೆ ಬಿಜೆಪಿ ಹೆಚ್ಚಿನ ಆದ್ಯತೆ ನೀಡಿದೆ. ಒಟ್ಟು ೧೧ ಮಂದಿ ಬ್ರಾಹ್ಮಣರಿಗೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ನೀಡಿ ಮೇಲ್ಪಂಕ್ತಿ ಹಾಕಲಾಗಿದೆ. ಹಾಗಾಗಿ ನಮ್ಮದು ಬ್ರಾಹ್ಮಣರ ಸರ್ಕಾರ.’

‘ಬ್ರಾಹ್ಮಣರು ಈ ರೀತಿಯ ಸ್ಥಾನಮಾನ ಪಡೆಯಲು ಅರ್ಹರು. ಏಕೆಂದರೆ ಬ್ರಾಹ್ಮಣರು ಚಿಂತನೆ ಮಾಡುವ ಜನ. ಅವರಿಗೆ ಸಾಧಿಸುವ ಛಲವಿದೆ. ಅಸಾಧ್ಯವಾದುದನ್ನು ಸಾಧಿಸುವ ಯುಕ್ತಿ ಶಕ್ತಿ ಇದೆ. ಸರ್ಕಾರಕ್ಕೆ ಬ್ರಾಹ್ಮಣರ ಮಾರ್ಗದರ್ಶನ ಅಗತ್ಯವಾಗಿದೆ. ಹಾಗೆಯೇ ಸ್ವಾಮೀಜಿಗಳ ಸಹಕಾರ ಕೂಡ ಬೇಕಿದೆ.’

ಕೂಟ ಮಹಾಜಗತ್ತು ಸಾಲಿಗ್ರಾಮ ಹಾಗು ಕೂಟ ಸಮಾಜ ಸಂಸ್ಥೆಗಳ ಒಕ್ಕೂಟ ಡಿ.೨೭ರ ಶನಿವಾರ ಏರ್ಪಡಿಸಿದ್ದ ೨ನೇ ವಿಶ್ವಕೂಟ ಸಮ್ಮೇಳನದಲ್ಲಿ ಭಾಗವಹಿಸಿದ್ದ ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರಗೌಡ ಹೇಳಿರುವ ಮಾತುಗಳು ಇವು. (ಪ್ರಜಾವಾಣಿ/೨೮-೧೨-೨೦೦೮, ಪುಟ-೯)

ನಿಸ್ಸಂಶಯವಾಗಿ ಇದು ಅನಾಗರಿಕ ಮಂತ್ರಿಯೊಬ್ಬ ನೀಡಬಹುದಾದ ಅನಾಗರಿಕ ಹೇಳಿಕೆ. ನೇರವಾಗಿ ಇದು ಪ್ರಜಾಪ್ರಭುತ್ವದ ಅವಹೇಳನ. ತೀರಾ ಬ್ರಾಹ್ಮಣ ಸಮುದಾಯದ ಜನರೇ ಮುಜುಗರ ಪಟ್ಟುಕೊಳ್ಳುವಂತೆ, ಅಸಹ್ಯ ಪಟ್ಟುಕೊಳ್ಳುವಂತಿದೆ ಈ ಹೇಳಿಕೆ. ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಟ್ಟ ಒಬ್ಬನೇ ಒಬ್ಬ ಒಳ್ಳೆಯ ಬ್ರಾಹ್ಮಣನೂ ರಾಮಚಂದ್ರ ಗೌಡರ ಈ ಭಟ್ಟಂಗಿತನವನ್ನು ಒಪ್ಪಲಾರ ಎಂಬುದು ಸತ್ಯ. ಅದರರ್ಥ ಇದು ಬ್ರಾಹ್ಮಣರಿಗೇ ಅಪಥ್ಯವಾಗುವ, ಅಸಹನೀಯ ಅನಿಸುವ ಹೇಳಿಕೆ.

ಕರ್ನಾಟಕ ಸರ್ಕಾರವನ್ನು ಬ್ರಾಹ್ಮಣರ ಸರ್ಕಾರ ಎಂದು ಹೇಳುವ ಮೂಲಕ ಶೇ.೯೭ರಷ್ಟು ಬ್ರಾಹ್ಮಣೇತರರನ್ನು ಅವಮಾನಿಸಿ ರಾಮಚಂದ್ರಗೌಡರು ಹೊಸಮಾರ್ಗವೊಂದನ್ನು ತುಳಿದಿದ್ದಾರೆ. ಇಂಡಿಯಾದ ಇತಿಹಾಸದಲ್ಲಿ ಒಬ್ಬನೇ ಒಬ್ಬ ಮಂತ್ರಿಯೂ ತಾನು ಪ್ರತಿನಿಧಿಸುವ ಸರ್ಕಾರವನ್ನು ಬ್ರಾಹ್ಮಣರ ಸರ್ಕಾರ ಎಂತಲೋ, ಒಕ್ಕಲಿಗರ ಸರ್ಕಾರ ಎಂದೋ, ಬನಿಯಾಗಳ ಸರ್ಕಾರ ಎಂದೋ, ಮಾರ್ವಾಡಿಗಳ ಸರ್ಕಾರ ಎಂದೋ, ಹೊಲೆಯರ ಸರ್ಕಾರ ಎಂದೋ ಕರೆದಿರಲಿಲ್ಲ. ರಾಮಚಂದ್ರಗೌಡರು ಒಂದು ರಾಜ್ಯಸರ್ಕಾರವನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸುವ ಮೂಲಕ ಇತಿಹಾಸದಲ್ಲಿ ದಾಖಲಾಗುವಂಥ ಹೇಳಿಕೆ ನೀಡಿದ್ದಾರೆ; ತನ್ಮೂಲಕ ತಾವೂ ಸಹ ಇತಿಹಾಸದ ಪುಟಗಳನ್ನು ಸೇರಿದ್ದಾರೆ. ರಾಜ್ಯ ಸರ್ಕಾರ ಬ್ರಾಹ್ಮಣರದ್ದು ಎಂದು ಹೇಳಿದರೆ ಬ್ರಾಹ್ಮಣೇತರರು ಏನಂದುಕೊಂಡಾರು ಎಂಬ ಕನಿಷ್ಠ ಪ್ರಜ್ಞೆಯೂ ಇಲ್ಲದ ರಾಮಚಂದ್ರಗೌಡರು ಮುಂದೆ ತಮ್ಮ ಹೇಳಿಕೆಯನ್ನು ಹೇಗೆ ಸಮರ್ಥಿಸಿಕೊಳ್ಳುತ್ತಾರೋ ಕಾದು ನೋಡಬೇಕು.

ರಾಮಚಂದ್ರಗೌಡರು ಹೇಳಿದಂತೆ ಬ್ರಾಹ್ಮಣರು ಇವತ್ತಿನ ರಾಜ್ಯ ಸರ್ಕಾರದಲ್ಲಿ ತಮ್ಮ ಸಂಖ್ಯಾಬಲವನ್ನು ಮೀರಿ ಆದ್ಯತೆ ಪಡೆದುಕೊಂಡಿದ್ದಾರೆ. ಸಹಜವಾಗಿ ಬ್ರಾಹ್ಮಣರಿಗೆ ಕೊಡಮಾಡಲಾದ ಹೆಚ್ಚುವರಿ ಸ್ಥಾನಮಾನಗಳು ಇತರ ಸಮುದಾಯಗಳ ಪಾಲು ಎಂದು ಬೇರೆ ಹೇಳಬೇಕಾಗಿಲ್ಲ. ಇದಕ್ಕಾಗಿ ರಾಮಚಂದ್ರಗೌಡರಾದಿಯಾಗಿ ಸರ್ಕಾರದ ಮುಖ್ಯಸ್ಥರು ಪಶ್ಚಾತ್ತಾಪಪಡಬೇಕೆ ಹೊರತು ಹೀಗೆ ನಿರ್ಲಜ್ಜೆಯಿಂದ ಸಮರ್ಥಿಸಿಕೊಳ್ಳಬೇಕಾಗಿರಲಿಲ್ಲ.
ಸರ್ಕಾರಕ್ಕೆ ಬ್ರಾಹ್ಮಣರ ಮಾರ್ಗದರ್ಶನ ಅಗತ್ಯವಾಗಿದೆ ಎಂದು ರಾಮಚಂದ್ರಗೌಡರು ಫರ್ಮಾನು ಹೊರಡಿಸಿದ್ದಾರೆ. ಹಾಗಿದ್ದರೆ ಸರ್ಕಾರಕ್ಕೆ ದಲಿತರ ಮಾರ್ಗದರ್ಶನ ಬೇಡವೆ? ಹಿಂದುಳಿದ ಜಾತಿಜನರ ಮಾರ್ಗದರ್ಶನ ಬೇಡವೆ? ಒಕ್ಕಲಿಗರು-ಲಿಂಗಾಯಿತರ ಮಾರ್ಗದರ್ಶನ ಬೇಡವೆ? ಕ್ರಿಶ್ವಿಯನ್ನರು-ಮುಸ್ಲಿಮರ ಮಾರ್ಗದರ್ಶನ ಬೇಡವೆ? ಆದಿವಾಸಿಗಳು-ಅಲೆಮಾರಿಗಳ ಮಾರ್ಗದರ್ಶನ ಬೇಡವೆ? ರಾಮಚಂದ್ರಗೌಡರ ಮಾತಿನಲ್ಲೇ ಹೇಳುವುದಾದರೆ ಈ ಎಲ್ಲ ಸಮುದಾಯಗಳ ಜನರಿಗೆ ಸಾಧಿಸುವ ಛಲವಿಲ್ಲವೆ, ಯುಕ್ತಿ-ಶಕ್ತಿ ಇಲ್ಲವೆ?

ರಾಮಚಂದ್ರಗೌಡರು ಹೀಗೆ ಹೊಣೆಗೇಡಿಯಂತೆ ಹೇಳಿಕೆ ನೀಡುತ್ತಿರುವುದು ಇದೇ ಮೊದಲೇನಲ್ಲ. ಯಡಿಯೂರಪ್ಪನವರ ಸಂಪುಟದ ಸದಸ್ಯರಲ್ಲಿ ಹಲವರು ಪದೇ ಪದೇ ಹೀಗೆ ಅಪ್ರಬುದ್ಧ, ಅವಾಂತರಕಾರಿ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದಾರೆ. ಸ್ವತಃ ಯಡಿಯೂರಪ್ಪನವರೇ ಆಗಾಗ ಇಂಥ ಹೇಳಿಕೆ ನೀಡುವ ಮೂಲಕ ತನ್ನ ಸ್ಥಾನದ ಘನತೆಯನ್ನು ಕೆಳಕ್ಕೆ ಇಳಿಸುತ್ತ ಬಂದಿದ್ದಾರೆ. ಹಾಗಾಗಿ ರಾಮಚಂದ್ರಗೌಡರ ಮಾತುಗಳು ಹೆಚ್ಚು ಆಶ್ಚರ್ಯವನ್ನೇನೂ ಉಂಟುಮಾಡುವುದಿಲ್ಲವಾದರೂ ಸರ್ಕಾರದ ಘನತೆಯ ಪ್ರಶ್ನೆಯನ್ನು ಹರಾಜಿಗಿಡುವ, ಸಂವಿಧಾನದ ಸಮಾನತೆಯ ತಳಹದಿಯನ್ನು ಅಭದ್ರಗೊಳಿಸುವ ಇಂಥ ಪ್ರಯತ್ನಗಳು ಪ್ರಜಾಪ್ರಭುತ್ವವಾದಿ ಮನಸ್ಸುಗಳನ್ನು ಘಾಸಿಗೊಳಿಸುತ್ತಲೇ ಇರುತ್ತವೆ.

ರಾಮಚಂದ್ರಗೌಡರಿಗೆ ಆಗಿರುವುದಾದರೂ ಏನು? ಯಾಕೆ ಅವರು ಬ್ರಾಹ್ಮಣರನ್ನು ಮಾತ್ರ ಸರ್ವಶ್ರೇಷ್ಠರೆಂದು ಭಾವಿಸುತ್ತಾರೆ? ಎಲ್ಲ ಸಮುದಾಯಗಳ ಜನರು ಆಯ್ಕೆ ಮಾಡಿ ಕಳುಹಿಸಿದ ಸರ್ಕಾರವನ್ನು ‘ಬ್ರಾಹ್ಮಣರ ಸರ್ಕಾರ’ ಎಂದು ಕರೆಯುವ ಮೂಲಕ ಅವರು ಯಾಕೆ ಬ್ರಾಹ್ಮಣೇತರರನ್ನು ಕ್ಷುಲ್ಲಕವಾಗಿ ನೋಡುತ್ತಾರೆ? ಕರ್ನಾಟಕದ ಆರು ಕೋಟಿಗೂ ಹೆಚ್ಚು ಜನಸಂಖ್ಯೆಯ ಪ್ರತಿಯೊಬ್ಬ ವ್ಯಕ್ತಿಗೂ ಈ ಸರ್ಕಾರ ಉತ್ತರದಾಯಿಯಾಗಿರುತ್ತದೆ, ಮಾತ್ರವಲ್ಲದೆ ಆ ಎಲ್ಲ ಜನಸಮುದಾಯಗಳ ಪಾಲಿಗೆ ಇದು ಅವರದೇ ಸರ್ಕಾರ ಎಂದು ರಾಮಚಂದ್ರಗೌಡರಿಗೆ ಯಾಕೆ ಅನಿಸುವುದಿಲ್ಲ?

ನನಗನ್ನಿಸುವ ಮಟ್ಟಿಗೆ ರಾಮಚಂದ್ರಗೌಡರು ತೀವ್ರ ಸ್ವರೂಪದ ‘ಬ್ರಾಹ್ಮಿನ್ ಫೋಬಿಯಾ’ಗೆ ಒಳಗಾಗಿದ್ದಾರೆ. ಇದು ಒಂದು ಬಗೆಯ ಖಾಯಿಲೆ. ಸಮಾಜಶಾಸ್ತ್ರೀಯ ಅಧ್ಯಯನದಲ್ಲಿ ತೊಡಗಿಕೊಂಡಿರುವ ಚಿಂತಕ ಡಾ.ಸಿ.ಜಿ.ಲಕ್ಷ್ಮಿಪತಿಯವರು ತಮ್ಮ ಕ್ಯಾಸ್ಟ್ ಕೆಮಿಸ್ಟ್ರಿ ಎಂಬ ಕೃತಿಯಲ್ಲಿ ಈ ‘ಬ್ರಾಹ್ಮಿನ್ ಫೋಬಿಯಾ’ ಕುರಿತು ಉಲ್ಲೇಖಿಸಿದ್ದಾರೆ. ಅವರ ಪ್ರಕಾರ ‘ಬ್ರಾಹ್ಮಿನ್ ಫೋಬಿಯಾ’ ಎಂದರೆ ಬ್ರಾಹ್ಮಣರ ಕುರಿತು ಬ್ರಾಹ್ಮಣೇತರರಿಗೆ ಇರಬಹುದಾದ ಅಂಜಿಕೆ, ಅಗಾಧ ಭಯ, ಅಳುಕು, ಕೀಳರಿಮೆ, ಬಲಿಪಶುತನದ ಕಲ್ಪನೆ ಹಾಗು ಅನುಭವಿಸುವಿಕೆ, ಮುಂದೆ ಎಂದಾದರೂ ಬ್ರಾಹ್ಮಣರಿಂದ ತೊಂದರೆಗೋ, ಕುತಂತ್ರಕ್ಕೋ ಒಳಗಾಗಬಹುದೆಂಬ ಅನುಮಾನಿತ ಸತ್ಯ, ಇತ್ಯಾದಿ.

‘ಬ್ರಾಹ್ಮಿನ್ ಫೋಬಿಯಾ’ಗೆ ಕೇವಲ ರಾಮಚಂದ್ರಗೌಡರು ಒಳಗಾಗಿದ್ದಾರೆ ಎಂದು ಭಾವಿಸಬೇಕಾಗಿಲ್ಲ. ಹಾಲಿ ಮುಖ್ಯಮಂತ್ರಿ ಯಡಿಯೂರಪ್ಪ ಆದಿಯಾಗಿ ಸಾಕಷ್ಟು ಮಂದಿ ಈ ಬಗೆಯ ಖಾಯಿಲೆಯಿಂದ ನರಳುತ್ತಿದ್ದಾರೆ. ಹೊಸದಾಗಿ ಈಗ ‘ಮಠಾಧೀಶರ ಫೋಬಿಯಾ’ ಸಹ ನಮ್ಮ ಮುಖಂಡರನ್ನು ಆವರಿಸಿಕೊಂಡಿದೆ. ಎಲ್ಲೋ ಒಬ್ಬ ಎಚ್.ವಿಶ್ವನಾಥ್ ಅಂಥವರು ಇದನ್ನು ಮೀರಿದರಾದರೂ ಕರ್ನಾಟಕದ ಸಂದರ್ಭದಲ್ಲಿ ಮಠಾಧೀಶರ ಫೋಬಿಯಾದಿಂದ ತಪ್ಪಿಸಿಕೊಳ್ಳದ ಜನನಾಯಕರೇ ಇಲ್ಲ.

ಡಾ.ಸಿ.ಜಿ.ಲಕ್ಷ್ಮಿಪತಿಯವರು ಅಧಿಕಾರಶಾಹಿಯ ‘ಬ್ರಾಹ್ಮಿನ್ ಫೋಬಿಯಾ’ ಕುರಿತು ಹೀಗೆ ಬರೆಯುತ್ತಾರೆ: “ಮಧ್ಯಮ ವರ್ಗ/ಅಧಿಕಾರಶಾಹಿಯಲ್ಲಿರುವ ಬ್ರಾಹ್ಮಣೇತರರು ‘ಬ್ರಾಹ್ಮಿನ್ ಫೋಬಿಯಾ’ದಿಂದ ನರಳುತ್ತಿರುವ ಗುಂಪಿನಲ್ಲಿ ಪ್ರಥಮಸ್ಥಾನದಲ್ಲಿ ನಿಲ್ಲುತ್ತಾರೆ. ಅಧಿಕಾರಶಾಹಿಯ ಉನ್ನತಸ್ಥಾನದಲ್ಲಿ ಬ್ರಾಹ್ಮಣರು ಇರುವುದರಿಂದಲೂ, ಪರಂಪರಾನುಗತವಾಗಿ ಸರ್ಕಾರಿ ಕಾನೂನುಗಳನ್ನು ಬಲ್ಲ ಬ್ರಾಹ್ಮಣ ಜಾತಿಯವರನ್ನು ಜ್ಞಾನಿಗಳೆಂದು ಭಾವಿಸುವ ಬ್ರಾಹ್ಮಣೇತರರು ಕಾನೂನಿನಲ್ಲಿ ಅವರನ್ನು ಮೀರಿಸುವವರೇ ಇಲ್ಲವೆಂದು ಭಾವಿಸಿ ಅವರು ಹೇಳಿದ್ದನ್ನು ಸರಿಯಿರಲಿ, ತಪ್ಪಿರಲಿ, ಸತ್ಯವೆಂದೇ ಗ್ರಹಿಸುತ್ತಾರೆ.”

ರಾಮಚಂದ್ರಗೌಡರು ಹೇಳಿಕೇಳಿ ಭಾರತೀಯ ಜನತಾ ಪಕ್ಷದ ಮುಖಂಡ. ಹೀಗಾಗಿ ಗೌಡರಿಗೆ ‘ಕೇಶವಶಿಲ್ಪ’ದವರನ್ನು ಒಲಿಸಿಕೊಳ್ಳುವ ಧಾವಂತ. ಕೇಶವಶಿಲ್ಪದವರನ್ನು ಮೆಚ್ಚಿಸಲು ಬ್ರಾಹ್ಮಣರನ್ನು ಹೊಗಳಬೇಕು ಎಂದು ರಾಮಚಂದ್ರಗೌಡರು ಭಾವಿಸಿದ್ದರೆ ಆಶ್ಚರ್ಯವೇನಿಲ್ಲ. ಕೆಲ ದಿನಗಳ ಹಿಂದೆ ರಾಮಚಂದ್ರಗೌಡರನ್ನು ಸಂಪುಟದಿಂದ ಕೈಬಿಡಲಾಗುವುದು ಎಂಬ ವದಂತಿಗಳು ಹಬ್ಬಿದ್ದವು. ಯಾರನ್ನೇ ಆಗಲಿ ಸಂಪುಟಕ್ಕೆ ಸೇರಿಸಿಕೊಳ್ಳಲು ಅಥವಾ ಸಂಪುಟದಿಂದ ಕೈಬಿಡಲು ‘ಕೇಶವಶಿಲ್ಪ’ದ ಅನುಮತಿ ಬೇಕು ಎಂಬುದು ರಹಸ್ಯವೇನಲ್ಲ. ರಾಮಚಂದ್ರಗೌಡರು ಇಂಥ ಹೇಳಿಕೆಗಳನ್ನು ನೀಡುವ ಮೂಲಕ ಯಾರ ಮನವೊಲಿಸಲು ಯತ್ನಿಸುತ್ತಿದ್ದಾರೆ ಎಂದು ಬಿಡಿಸಿ ಹೇಳಬೇಕಾಗಿಲ್ಲ.

ಗೌಡರಿಗೆ ಬಹುಶಃ ತೀವ್ರ ಸ್ವರೂಪದ ಕೀಳರಿಮೆಯೂ ಕಾಡುತ್ತಿರಬಹುದು. ಯಾವತ್ತೂ ರಾಮಚಂದ್ರಗೌಡರು ತಮ್ಮ ಜಾತಿಯ ಸಭೆಯಲ್ಲಿ ಭಾಗವಹಿಸಿ, ‘ಒಕ್ಕಲಿಗರು ಯಾರಿಗೂ ಏನೂ ಕಡಿಮೆಯಿಲ್ಲ, ನಾವು ಎಲ್ಲದಕ್ಕೂ ಸಮರ್ಥರು’ ಎಂದು ಹೇಳಿಕೆ ನೀಡಿದ ನೆನಪು ನನಗಿಲ್ಲ. ಹಾಗೆ ನೋಡಿದರೆ ಇಂಥ ವಿಶ್ವಾಸದ ನುಡಿಗಳು ಬೇಕಾಗಿರುವುದು ಈಗೀಗ ಪ್ರವರ್ಧಮಾನಕ್ಕೆ ಬರುತ್ತಿರುವ ಒಕ್ಕಲಿಗ ಸಮುದಾಯಕ್ಕೇ ಹೊರತು, ಬ್ರಾಹ್ಮಣ ಸಮುದಾಯಕ್ಕಲ್ಲ.

ತಮಾಶೆಯೆಂದರೆ ಈ ಬ್ರಾಹ್ಮಿನ್ ಫೋಬಿಯಾ ಕೇವಲ ರಾಜಕಾರಣಿಗಳನ್ನು ಮಾತ್ರ ಭಾದಿಸುತ್ತಿಲ್ಲ. ಕೆಳಸಮುದಾಯಗಳ ಮಠಾಧೀಶರೂ ಈ ಖಾಯಿಲೆಯಿಂದ ನರಳುತ್ತಿದ್ದಾರೆ. ಒಕ್ಕಲಿಗ ಮಠಾಧೀಶರೊಬ್ಬರು ಹಿಂದೆ ಬ್ರಾಹ್ಮಣ ಮಠಾಧೀಶರ ಕಾಲಿಗೆ ಎರಗಿದಾಗ ಒಬ್ಬರು ಅವರಿಗೆ ಹೀಗೆ ಪ್ರಶ್ನೆ ಕೇಳಿದರಂತೆ: ‘ಸ್ವಾಮೀಜಿ, ನೀವೂ ಸಹ ಜಗದ್ಗುರುಗಳು, ಅವರೂ (ಬ್ರಾಹ್ಮಣ ಮಠಾಧೀಶರು) ಸಹ ಜಗದ್ಗುರುಗಳು. ಹೀಗಿರುವಾಗ ನೀವು ಅವರ ಪಾದಕ್ಕೆ ನಮಸ್ಕರಿಸಿದ್ದು ತಪ್ಪಲ್ಲವೆ?’

ಈ ಪ್ರಶ್ನೆಗೆ ಒಕ್ಕಲಿಗ ಸ್ವಾಮೀಜಿಯ ಉತ್ತರ ಹೀಗಿತ್ತು: ‘ನೀವು ಹೇಳುವುದು ಸರಿ. ನಾವಿಬ್ಬರೂ ಜಗದ್ಗುರುಗಳೇ ಹೌದು. ಆದರೆ ಅವರು ಬ್ರಾಹ್ಮಣರಾದ್ದರಿಂದ ಅವರ ಪಾದಕ್ಕೆ ನಮಸ್ಕರಿಸಿದೆ!’

ಜನಸಾಮಾನ್ಯರಲ್ಲಿರುವ ‘ಬ್ರಾಹ್ಮಿನ್ ಫೋಬಿಯಾ’ ಬಗ್ಗೆ ಹೊಸದಾಗಿ ಏನೂ ಹೇಳಬೇಕಾಗಿಲ್ಲ. ‘ಬ್ರಹ್ಮಹತ್ಯೆ ಮಹಾಪಾಪ’ ಎಂಬ ಭಾವ ಈ ದೇಶದ ಶೂದ್ರರ ನರನಾಡಿಗಳಲ್ಲೂ ಸೇರಿಹೋಗಿದೆ. ಬ್ರಾಹ್ಮಣನನ್ನು ದೈಹಿಕವಾಗಿ ಅಥವಾ ಮಾನಸಿಕವಾಗಿ ನೋಯಿಸುವುದನ್ನು ಈ ಜನ ಕಲ್ಪಿಸಿಕೊಳ್ಳಲಿಕ್ಕೂ ಬೆದರುತ್ತಾರೆ. ಬ್ರಾಹ್ಮಣರಿಗೆ ಎಲ್ಲ ಕ್ಷೇತ್ರಗಳಲ್ಲೂ ಮೊದಲ ಆದ್ಯತೆ ಎಂಬ ಮಂತ್ರವನ್ನು ಎಲ್ಲ ಸಮುದಾಯಗಳೂ ಪ್ರತಿಭಟನೆಯೇ ಇಲ್ಲದಂತೆ ಒಪ್ಪಿಕೊಂಡಿವೆ. ಪಂಚಾಂಗ, ಜ್ಯೋತಿಷ್ಯ, ವಾಸ್ತು, ಭೂತಪ್ರೇತ, ಸ್ವರ್ಗ-ನರಕಗಳು, ಸ್ಮೃತಿ-ಪುರಾಣಗಳು ಬ್ರಾಹ್ಮಣೇತರರು ಬ್ರಾಹ್ಮಣರನ್ನು ಭೀತಿಯಿಂದ, ಒಂದು ಬಗೆಯ ಕೀಳರಿಮೆಯಿಂದ ಬೆದರುವಂತೆ ಮಾಡಿವೆ. ರಾಮಚಂದ್ರಗೌಡರು ಸಹ ಈ ನರಕದಲ್ಲೇ ಬದುಕುತ್ತಿದ್ದಾರೆ.

ರಾಮಚಂದ್ರಗೌಡರ ಹೇಳಿಕೆಯನ್ನು ಮತ್ತೆಮತ್ತೆ ಬೇರೆಬೇರೆ ಆಯಾಮಗಳಲ್ಲಿ ಪರಿಶೀಲಿಸಿ ನೋಡಿದಾಗ ಅವರನ್ನು ಕಾಡುತ್ತಿರುವುದು ‘ಬ್ರಾಹ್ಮಿನ್ ಫೋಬಿಯಾ’ ಎಂಬ ಖಾಯಿಲೆ ಎಂದು ಮನದಟ್ಟಾಗಿ, ಇಷ್ಟೆಲ್ಲ ಬರೆದಿದ್ದೇನೆ. ಸರ್ಕಾರವನ್ನು ಒಂದು ಜಾತಿಯ ತಲೆಗೆ ಕಟ್ಟಿದ ಮಂತ್ರಿಯನ್ನು ಇನ್ನೂ ಸಂಪುಟದಲ್ಲೇ ಇಟ್ಟುಕೊಂಡರೆ ಅದು ಯಡಿಯೂರಪ್ಪನವರಿಗೇ ಅವಮಾನ. ಯಡಿಯೂರಪ್ಪ ರಾಜ್ಯದ ಎಲ್ಲ ಬ್ರಾಹ್ಮಣೇತರರಲ್ಲೂ ಕ್ಷಮೆ ಯಾಚಿಸುವ ಜತೆಗೆ ರಾಮಚಂದ್ರಗೌಡರ ಹೇಳಿಕೆಯಿಂದ ಕಿರಿಕಿರಿ ಅನುಭವಿಸಿರಬಹುದಾದ ಸಜ್ಜನ ಬ್ರಾಹ್ಮಣರಲ್ಲೂ ಕ್ಷಮೆ ಕೋರಬೇಕು. ಆದರೆ ಇವತ್ತಿನ ರಾಜಕೀಯ ವ್ಯವಸ್ಥೆಯಲ್ಲಿ, ಇಂಥದ್ದನ್ನೆಲ್ಲ ತಿಪ್ಪೆ ಸಾರಿಸುವ ಪರಿಪಾಠವೇ ನಡೆದಿರುವುದರಿಂದ ಏನನ್ನೂ ನಿರೀಕ್ಷಿಸುವಂತಿಲ್ಲ. ಹಾಗಿದ್ದೂ ರಾಜ್ಯದ ಪ್ರಜ್ಞಾವಂತ ಜನರು ತಮ್ಮ ಸಿಟ್ಟನ್ನು ದಾಖಲಿಸದೇಹೋದಲ್ಲಿ ರಾಮಚಂದ್ರಗೌಡರಂಥವರನ್ನು ಸಾರಾಸಗಟಾಗಿ ಎಲ್ಲರೂ ಒಪ್ಪಿಕೊಂಡಂತಾಗುತ್ತದೆ.

‘ಬ್ರಾಹ್ಮಿನ್ ಫೋಬಿಯಾ’ಗೆ ಒಳಗಾಗಿರುವ ರಾಮಚಂದ್ರಗೌಡರ ಕುರಿತು ಇನ್ನೇನು ಹೇಳುವುದು? ಈ ಕ್ಷಣಕ್ಕೆ ಅವರ ಕುರಿತು ನನಗಂತೂ ಸಿಟ್ಟು ಬರುತ್ತಿಲ್ಲ, ಅನುಕಂಪವಾಗುತ್ತಿದೆ. ಬೇಗ ಅವರು ತಮ್ಮ ಖಾಯಿಲೆಯಿಂದ ಗುಣಮುಖರಾಗಲಿ.

ಗೆಟ್ ವೆಲ್ ಸೂನ್ ಮಿ.ರಾಮಚಂದ್ರಗೌಡ!

8 comments:

Anonymous said...

A well-knit intellectual reply to Ramachandra Gowda's statement. A commendable point in the write-up is that you have not restricted yourself to criticise R Gowda. You have analysed what made him to say so.
It is sad that a communication with 3 pc gets 13 positions of cabinet rank. It is high time that other communities get up and demand their rights.
- Annamahadeva

Ashok Uchangi said...

ಇದರ ಬಗ್ಗೆ ಇಷ್ಟೊಂದು ತಲೆಕೆಡೆಸಿಕೊಳ್ಳಬೇಕಾದ ಅಗತ್ಯವಿಲ್ಲ ಎನಿಸುತ್ತೆ.ಬಿಜೆಪಿ ಬ್ರಾಹ್ಮಣರದ್ದು(ವೀರಶೈವರದ್ದೂ?!)ಜೆಡಿಎಸ್ ಗೌಡರದ್ದು,ಕಾಂಗ್ರೆಸ್ ಹಿಂದುಳಿದವರು ಮತ್ತು ಅಲ್ಪಸಂಖ್ಯಾತರದ್ದು ಎಂಬುದು ಜನಮನದಲ್ಲಿ ಬೇರೂರಿಲ್ಲವೇ?
ಅಶೋಕ ಉಚ್ಚಂಗಿ
http://mysoremallige01.blogspot.com/

ದಿನೇಶ್ ಕುಮಾರ್ ಎಸ್.ಸಿ. said...

ಪ್ರಿಯ ಅಶೋಕ್,
ನಿಮ್ಮ ಬ್ಲಾಗ್ ನೋಡಿದೆ, ಖುಷಿಯಾಯಿತು. ನೀವು ಸಕಲೇಶಪುರದವರು ಎಂಬುದು ಖುಷಿಗೆ ಕಾರಣ.
ಇನ್ನು ನಿಮ್ಮ ಪ್ರತಿಕ್ರಿಯೆಯ ಕುರಿತು ಹೇಳುವುದಾದರೆ ರಾಮಚಂದ್ರಗೌಡರು ಒಂದು ವೇಳೆ ಬಿಜೆಪಿ ಬ್ರಾಹ್ಮಣರ ಪಕ್ಷ ಎಂದು ಹೇಳಿದ್ದರೆ ನಿಮ್ಮ ಮಾತಿನಂತೆ ತಲೆಕೆಡಿಸಿಕೊಳ್ಳಬೇಕಾಗಿರಲಿಲ್ಲ.
ಅವರ ಹೇಳಿಕೆಯನ್ನು ಸ್ಪಷ್ಟವಾಗಿ ಗಮನಿಸಿ. ಇದು ಬ್ರಾಹ್ಮಣರ ಸರ್ಕಾರ ಎಂದು ಹೇಳಿದ್ದಾರೆ. ಪಕ್ಷ ಬೇರೆ, ಸರ್ಕಾರ ಬೇರೆ.
ಪಕ್ಷ ಎಲ್ಲರದ್ದೂ ಆಗಿರದಿದ್ದರೆ ಅದು ಅವರ ಪಾಡು, ಅವರ ಮಿತಿ, ಸರ್ಕಾರ ಹಾಗಲ್ಲ; ಅದು ಎಲ್ಲರದ್ದೂ ಆಗಿರುತ್ತದೆ.
ನಿಮ್ಮ ಬ್ಲಾಗ್‌ನಲ್ಲಿ ಎಲ್ಲ ಹೂವುಗಳು ಘಮಗುಡುತ್ತಿರಲಿ ಎಂದು ಆಶಿಸುತ್ತ,
ಪ್ರೀತಿಯಿಂದ
ದಿನೇಶ್

Anonymous said...

ಏನೇ ಬರೆದರೂ ಕನ್ವಿನ್ಸಿಂಗ್ ಅಗಿ ಬರೆಯುತ್ತೀರಿ.
ರಾಮಚಂದ್ರಗೌಡರಿಗೆ ಸಂವಿಧಾನ, ಪ್ರಜಾಪ್ರಭುತ್ವ ಎಂದರೆ ಏನೇನೂ ಅರ್ಥವಾಗುವುದಿಲ್ಲ. ಅಲ್ಪನಿಗೆ ಅಧಿಕಾರ ಸಿಕ್ಕಂತಾಗಿದೆ ಅವರ ಕಥೆ.
ಪ್ರಜಾಪ್ರಭುತ್ವದ ಅ ಆ ಇ ಈ ಗೊತ್ತಿಲ್ಲದ ಇಂಥವರು ಮಂತ್ರಿಯಾಗಿದ್ದಾರೆ ಎಂಬುದೇ ದುರಂತ.
ರಾಮಚಂದ್ರಗೌಡ ವಿರುದ್ಧ ವಿಪಕ್ಷಗಳ ನಾಯಕರೂ ಏನನ್ನೂ ಮಾತನಾಡದೇ ಇರಬಹುದು. ಯಾಕೆಂದರೆ ಅವರೂ ಸಹ ನೀವು ಹೇಳಿದಂತೆ ಬ್ರಾಹ್ಮಿನ್ ಫೋಬಿಯಾಗೆ ಒಳಗಾದವರೇ ಆಗಿರುತ್ತಾರೆ.

Ittigecement said...

ಸರಿಯಾದ.. ಸಮರ್ಥ ಉತ್ತರ.. ರಾಮಚಂದ್ರೆಗೌಡರಿಗೆ..

ನಿಮ್ಮ ಲೇಖನ ನನಗಿಷ್ಟವಾಯಿತು..

ವಂದನೆಗಳು..

Anonymous said...

ರಾಜಕಾರಣಿಗಳು, ಮಂತ್ರಿಗಳು ಆಯಾ ಸಮುದಾಯದ ಸಮಾರಂಭಗಳಿಗೆ ಹೋದಾಗ ಈ ರೀತಿ ಹೇಳುವುದು ಸಾಮಾನ್ಯ. ತಮ್ಮದು ಹಿಂದುಳಿದವರ ಪಾರ್ಟಿ, ದಲಿತರ ಪಾರ್ಟಿ ಅಂತ ಹೇಳಿಕೊಂಡು ಓಡಾಡುವುದಿಲ್ಲವೇ ಎಷ್ಟೋ ಜನ.
ಆದರೆ ಬ್ರಾಹ್ಮಣರ ಬಗ್ಗೆ ಹೇಳಿದಾಗ ಮಾತ್ರ ಕೆಂಗಣ್ಣು ಯಾಕೆ?
ಮಾಯಾವತಿ ದಲಿತರ ಸರ್ಕಾರ ಅಂತ ಹೇಳಿಕೊಂಡಾಗ ನೀವು ಹುಟ್ಟಿರಲಿಲ್ಲವಾ ಇನ್ನೂ?! ಅಥವಾ ಬುದ್ಧಿ ಬೆಳೆದಿರಲಿಲ್ಲವಾ?

ಬ್ರಾಹ್ಮಣರ ಮಾರ್ಗದರ್ಶನ ಬೇಕು ಅಂದರೆ ಒಕ್ಕಲಿಗರ ಮಾರ್ಗದರ್ಶನ ಬೇಡ ಎಂದು ಅರ್ಥ ಹೇಗೆ ಆಗುತ್ತದೆ? ಒಬ್ಬರದ್ದು ಬೇಕು ಅಂದರೆ ಇನ್ನೊಬ್ಬರದ್ದು ಬೇಡ ಎಂದು ಅರ್ಥವಲ್ಲ. ಬ್ರಾಹ್ಮಣ ಮಾರ್ಗದರ್ಶನ ಮಾತ್ರ ಬೇಕು ಎಂದಿದ್ದರೆ ಆಗ ತಪ್ಪಾಗುತ್ತಿತ್ತು. ವಿಷಯ ತಿರುಚಿದ್ದೀರಿ.

ಬ್ರಾಹ್ಮಣರಿಗೆ ಎಲ್ಲ ಕ್ಷೇತ್ರಗಳಲ್ಲೂ ಮೊದಲ ಆದ್ಯತೆ ಎಂಬ ಮಂತ್ರವನ್ನು ಎಲ್ಲ ಸಮುದಾಯಗಳೂ ಪ್ರತಿಭಟನೆಯೇ ಇಲ್ಲದಂತೆ ಒಪ್ಪಿಕೊಂಡಿವೆ ಇದ್ಯಾವ ದೇಶದಲ್ಲಿ ಅಂತ ಸ್ವಲ್ಪ ಹೇಳ್ತೀರಾ? ತಮಾಷೆಯಾಗಿದೆ. ನಾನಂತೂ ನೋಡಿಲ್ಲ.

‘ಬ್ರಹ್ಮಹತ್ಯೆ ಮಹಾಪಾಪ’ ಎಂಬ ಭಾವ ಈ ದೇಶದ ಶೂದ್ರರ ನರನಾಡಿಗಳಲ್ಲೂ ಸೇರಿಹೋಗಿದೆ. ಬ್ರಾಹ್ಮಣನನ್ನು ದೈಹಿಕವಾಗಿ ಅಥವಾ ಮಾನಸಿಕವಾಗಿ ನೋಯಿಸುವುದನ್ನು ಈ ಜನ ಕಲ್ಪಿಸಿಕೊಳ್ಳಲಿಕ್ಕೂ ಬೆದರುತ್ತಾರೆ.
ಸ್ವಾಮಿ , ಇಂತಹುದನ್ನು ನೀವು ಬ್ರಾಹ್ಮಿನ್ ಫೋಬಿಯಾಗೆ ಸಮರ್ಥನೆಯನ್ನಾಗಿ ಬಳಸಿಕೊಂಡಿರುವುದು ಕೀಳು ಮನಸ್ಥಿತಿಯನ್ನು ತೋರಿಸುತ್ತದೆ. ಮನುಷ್ಯ ಮನುಷ್ಯನನ್ನು ಕೊಲ್ಲುವುದು, ಹಿಂಸಿಸುವುದು ತಪ್ಪು. ಅದಕ್ಕೂ ಜಾತಿಯ ಬಣ್ಣ ಹಚ್ಚಬೇಡಿ. ಹಾಗಿದ್ದರೆ ನಿಮ್ಮದೇ ರೀತಿಯಲ್ಲಿ ಹೇಳಲು ಹೋದರೆ ’ಬ್ರಹ್ಮಹತ್ಯೆ’ ತಪ್ಪು ಅಲ್ಲವಾ?

ಖಂಡಿತ ಬ್ರಾಹ್ಮಣರಿಗೆ ಮತ್ತು ಇತರ ಸಮುದಾಯದವರಿಗೆ ಇವಳ ಹೇಳಿಕೆಯಿಂದ ಕಿರಿಕಿಯಾಗುವುದಿಲ್ಲ ಆದರೆ ಇದಕ್ಕೆ ಬೇರೆ ಬೇರೆಯ ಬಣ್ಣ , ಮಸಾಲೆ ಅರೆಯುವ ತಮ್ಮಂತವರಿಂದ ಕಿರಿಕಿಯಾಗುವುದು ಮತ್ತು ಜಾತಿದ್ವೇಷ ಮನಸ್ತಾಪ ಬೆಳೆಯುತ್ತದೆ.

ಬ್ರಾಹ್ಮಣರ ಸರ್ಕಾರ ಅಂತ ಹೇಳಿದ್ದರೆ ಅದು ಮಾತ್ರ ಖಂಡಿತ ತಪ್ಪು. ಅದನ್ನು ಬ್ರಾಹ್ಮಣರಾದಿಯಾಗಿ ಎಲ್ಲರೂ ಖಂಡಿಸುವಂತದ್ದೇ. ಆದರೆ ಉಳಿದ ದೇಸೀ ಮಾತೆಲ್ಲವೂ ಬ್ರಾಹ್ಮಣ ವಿರೋಧೀ ಪೂರ್ವಗ್ರಹದಿಂದಲೇ ಬರೆದಂತಿದೆ.

ದಿನೇಶ್ ಕುಮಾರ್ ಎಸ್.ಸಿ. said...

ಪ್ರಿಯ ಶ್ರೀಕಾಂತ್,
ತುಂಬ ಭಾವುಕರಾಗಿ ಪ್ರತಿಕ್ರಿಯಿಸಿದ್ದೀರಿ ಅನಿಸುತ್ತದೆ. ದಲಿತ, ಹಿಂದುಳಿದ ಶಬ್ದಗಳು ಜಾತಿಯನ್ನು ಸೂಚಿಸುವುದಿಲ್ಲ, ವರ್ಗವನ್ನು ಸೂಚಿಸುತ್ತವೆ. ಇಂಥ ಸಣ್ಣಪುಟ್ಟ ವಿಷಯಗಳನ್ನಾದರೂ ಅಧ್ಯಯನ ಮಾಡಿ ನಿಮ್ಮ ಅಭಿಪ್ರಾಯ ಹೇಳಿದ್ದರೆ ಚೆನ್ನಾಗಿರುತ್ತಿತ್ತು. ಅಷ್ಟಕ್ಕೂ ಪಕ್ಷಗಳು ಜಾತಿಯ ಹಣೆಪಟ್ಟಿ ಅಂಟಿಸಿಕೊಳ್ಳುವ ಕುರಿತು ನಾನು ಬರೆದಿಲ್ಲ. ರಾಮಚಂದ್ರಗೌಡರ ‘ಬ್ರಾಹ್ಮಣ ಸರ್ಕಾರ ಎಂಬ ಪ್ರಯೋಗದ ಕುರಿತು ನಾನು ಪರಿಶೀಲಿಸಿದ್ದೇನೆ.
ಮಾಯಾವತಿ ಸರ್ಕಾರ ಬಂದಾಗ ನಾನು ಹುಟ್ಟಿದ್ದೆ ಹಾಗು ಬುದ್ಧಿಯೂ ಬೆಳೆದಿತ್ತು. ಆಗ ನಾನು ಏನನ್ನು ಬರೆದಿದ್ದೆ ಎಂಬ ಕುತೂಹಲವಿದ್ದರೆ ಬಿಡುವಾದಾಗ ಬನ್ನಿ, ಹಳೆಯ ಲೇಖನಗಳ ಕಟಿಂಗ್ಸ್ ತೋರಿಸುವೆ.
ಒಂದು ನಿರ್ದಿಷ್ಟ ಜಾತಿಯ ಮಾರ್ಗದರ್ಶನವನ್ನು ರಾಮಚಂದ್ರಗೌಡರು ಬಯಸುತ್ತಿದ್ದಾರೆ ಎಂದಾದರೆ ಉಳಿದವರ ಮಾರ್ಗದರ್ಶನವನ್ನು ನಿರಾಕರಿಸುತ್ತಿದ್ದಾರೆ ಎಂದೇ ಅರ್ಥ. ಜಾತಿಯ ಆಧಾರದಲ್ಲಿ ಸರ್ಕಾರಗಳು ಮಾರ್ಗದರ್ಶನ ಪಡೆಯುವುದೇ ನೀಚತನ. ಸರ್ಕಾರಕ್ಕೆ ಕಟ್ಟಕಡೆಯ ಮನುಷ್ಯನವರೆಗೆ ಎಲ್ಲರೂ ಮಾರ್ಗದರ್ಶನ ನೀಡುವಂತಾಗುವುದೇ ನಿಜವಾದ ಪ್ರಜಾಪ್ರಭುತ್ವ. ಇದು ರಾಮಚಂದ್ರಗೌಡರಂಥವರಿಗೆ, ನಿಮ್ಮಂಥವರಿಗೆ ಅರ್ಥವಾಗದಿದ್ದರೆ ಯಾರೇನು ಮಾಡಲು ಸಾಧ್ಯ ಹೇಳಿ.
ಮನುಷ್ಯ ಮನುಷ್ಯನನ್ನು ಹಿಂಸಿಸುವುದು ತಪ್ಪು, ಕೊಲ್ಲುವುದು ತಪ್ಪು. ನಾನು ಅದನ್ನು ಸರಿ ಎಂದು ನನ್ನ ಲೇಖನದಲ್ಲಿ ಹೇಳಿಲ್ಲ. ಆದರೆ ಯಾಕೆ ಈ ದೇಶದಲ್ಲಿ ಪ್ರತಿನಿತ್ಯ ಜಾತಿಯ ಕಾರಣಕ್ಕೆ ದಲಿತರ ಕೊಲೆ, ಅತ್ಯಾಚಾರ ನಡೆಯುತ್ತಲೇ ಬಂದಿದೆ? ಈ ಬಗ್ಗೆ ಎಂದಾದರೂ ಗಂಭೀರವಾಗಿ ಯೋಚಿಸಿದ್ದೀರಾ? ಬ್ರಾಹ್ಮಣನನ್ನು ಹಿಂಸಿಸುವುದು ತಪ್ಪು, ದಲಿತನನ್ನು ಹಿಂಸಿಸುವುದು ಸರಿ ಎಂಬ ಮನಸ್ಥಿತಿ ಸರಿಯೇ? ಇದನ್ನು ಫೋಬಿಯಾ ಅನ್ನದೆ ಇನ್ನೇನನ್ನುವುದು? ದಲಿತರ ಮೇಲೆ ಹಿಂಸಾ ಪ್ರಯೋಗ ಆಗುತ್ತಿದೆ ಎಂಬ ಕಾರಣಕ್ಕೆ ಬ್ರಾಹ್ಮಣರ ಮೇಲೂ ಆಗಬೇಕು ಎಂದೇನು ನಾನು ಸೂಚಿಸುತ್ತಿಲ್ಲ. ಆದರೆ ಹಿಂಸೆಗೆ ಜಾತಿಯ ಮುಖವೂ ಇರುತ್ತದೆ ಎಂಬುದನ್ನು ಗುರುತಿಸಬೇಕು ಎಂದಷ್ಟೇ ಹೇಳುತ್ತಿದ್ದೇನೆ.
ನಿಮಗೆ ಇಡೀ ಲೇಖನ ಬ್ರಾಹ್ಮಣ ವಿರೋಧಿ ಪೂರ್ವಾಗ್ರಹದಿಂದಲೇ ಬರೆದಂತೆ ಕಂಡರೆ ಅದು ನಿಮ್ಮ ದೃಷ್ಟಿದೋಷವನ್ನು ಸೂಚಿಸುತ್ತದೆ. ರಾಮಚಂದ್ರಗೌಡರು ಇದು ವೀರಶೈವರ ಸರ್ಕಾರ ಅಂತಲೋ ಒಕ್ಕಲಿಗರ ಸರ್ಕಾರ ಅಂತಲೋ ಕರೆದಿದ್ದರೂ ನಾನು ಹೀಗೇ ಬರೆಯುತ್ತಿದ್ದೆ.
ಪ್ರಿಯ ಶ್ರೀಕಾಂತ್, ದೇಶದ ಸಾಮಾಜಿಕ ಇತಿಹಾಸದ ಕುರಿತಾಗಿ ಒಂದಷ್ಟು ಅಧ್ಯಯನ ಮಾಡಲು ಯತ್ನಿಸಿ. ಡಾ.ಬಿ.ಆರ್.ಅಂಬೇಡ್ಕರ್, ಡಾ.ರಾಮಮನೋಹರ್ ಲೋಹಿಯಾ ಅವರ ಕೃತಿಗಳನ್ನು ಒಂದಷ್ಟು ಓದಿ. ಓದಿದ ಮೇಲೆ ನಿಮ್ಮ ಅಭಿಪ್ರಾಯಗಳು ಬದಲಾಗಬಹುದು. ನಿಮಗೆ ಒಳ್ಳೆಯದಾಗಲಿ.
ಪ್ರೀತಿಯಿಂದ,

cmariejoseph.blogspot.com said...

ದೇಸೀಮಾತು ಒಂದು ವಿಚಾರಪರ ವಿಷಯವನ್ನೆತ್ತಿಕೊಂಡು ಬಹು ಚೆನ್ನಾಗಿ ವಿಶ್ಲೇಷಿಸಿದೆ. ಅಲ್ಲಾ ಸ್ವಾಮಿ, ಸಂವಿಧಾನವನ್ನು ಗೌರವಿಸುತ್ತೇನೆ ಎಂದು ಪ್ರಮಾಣ ಮಾಡಿ ಅಧಿಕಾರಗ್ರಹಣ ಮಾಡಿದ ರಾಮಚಂದ್ರೇಗೌಡರು ಈ ರೀತಿಯಾಗಿ ಓಲೈಕೆಯ ಮಾತುಗಳನ್ನಾಡಬಾರದಿತ್ತು. ಅವರು ಅವಿದ್ಯಾವಂತರೇನಲ್ಲ, ಹಾಗಾಗಿ ಯಾವುದೋ ವೇದಿಕೆಯಲ್ಲಿ ಕೆಲವರನ್ನಷ್ಟೇ ತೃಪ್ತಿಪಡಿಸಲು ಅವರಾಡಿದ ಮಾತು ಅವರ ಬಗ್ಗೆ ಮಾತ್ರವಲ್ಲ ಅವರ ಸರ್ಕಾರದ ಬಗ್ಗೆಯೂ ಹೇಸಿಗೆ ಮೂಡಿಸುತ್ತದೆ. ಎಂಥೆಂಥ ನಾಯಕರು ಆಳಿದ ಕನ್ನಡ ನಾಡಿನಲ್ಲಿ ಎಂಥ ನಸುಗುನ್ನಿ ನಾಯಕರು ಅವತರಿಸಿದ್ದಾರಲ್ಲಾ ಎಂಬ ಖೇದವೂ ನಮ್ಮ ಮನದಲ್ಲಿ ಮೂಡುತ್ತದೆ.
ಕರ್ನಾಟಕ ವಿಧಾನಸಭೆಯ ಸ್ಪೀಕರ್‍ ಅವರು ಈ ಕೂಡಲೇ ಆ ಭಾಷಣದ ಪ್ರತಿಯನ್ನು ತರಿಸಿಕೊಂಡು ಆ ಶಾಸಕರಿಗೆ ಛೀಮಾರಿ ಹಾಕಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು.