Monday, February 27, 2012

ಬಿಡುಗಡೆ


ಉರಿವ ಸೂರ್ಯನ ಜತೆ ಗುದ್ದಾಡಿ
ಹಿಡಿ ಬೆಳಕ ತಂದಿದ್ದೇನೆ
ಮುಡಿಸಲೇ ನಿನ್ನ ತುರುಬಿಗೆ?

ಚೈತನ್ಯ ಬೆಳಕಿಗೆ ಮಾತ್ರವಲ್ಲ
ಅದನ್ನು ಮುಡಿದ ತುರುಬಿಗೂ

ಬಾ ಜಡೆ ಹೆಣೆಯುತ್ತೇನೆ
ಬೆಳಕಿನ ಎಳೆಗಳನ್ನು
ಒಂದರ ಮೇಲೊಂದು ಪೇರಿಸಿ
ಕಾಮನಬಿಲ್ಲು ಮೂಡಲಿ ನಿನ್ನ ಹೆರಳಲ್ಲಿ

ಇಕಾ, ಹಿಡಿ ನಿನ್ನ ಕೈಗೆ
ಹೃದಯದ ಬಣ್ಣದ ಗೋರಂಟಿ ಹಚ್ಚುತ್ತೇನೆ
ಅಂಗೈ ಮೇಲೆ ನಕ್ಷತ್ರಗಳ ಚಿತ್ತಾರ
ಮಿನುಗುತ್ತಿರಲಿ ಪಳಪಳ

ನಾನು ಖಾಲಿಖಾಲಿ
ನನ್ನದೇನೂ ಉಳಿದಿಲ್ಲ
ಅನ್ನುವಷ್ಟು ಖಾಲಿ

ನಿನ್ನ ಕಣ್ಣಬೆಳಕಲ್ಲಿ
ಇನ್ನೂ ಒಂದಿಷ್ಟು ದೂರ
ಹಿಂಗೇ ತೆವಳಿ ನಡೆದಿದ್ದೇನೆ

ಬಾ, ನನ್ನ ತೋಳೊಳಗೆ ಹುದುಗಿ
ಕೊಂಚ ನಿದ್ದೆ ಮಾಡು
ಪ್ರೀತಿಯೆಂದರೆ ವಿಸ್ಮೃತಿ ಕಣೇ
ಅಲ್ಲಿ ಎಲ್ಲ ತರ್ಕಗಳ ಸೋಲು

ಹಣೆಯ ಮೇಲೆ ಬೆವರ ಹನಿಗಳ ಸಾಲಾಗಿ
ನೋವೆಲ್ಲ ಹರಿದುಬಿಡಲಿ...
ಹೀರುತ್ತೇನೆ, ಗುಟುಕು ಗುಟುಕಾಗಿ

ಒಂದು ನಗೆಯರಳಿದರೆ ಸಾಕು ನಿನ್ನ ಮೊಗದಲ್ಲಿ
ನಾನು ಬಿಡುಗಡೆಯಾಗುತ್ತೇನೆ

Friday, February 24, 2012

ಹಡಬೆ ಕನಸುಗಳು


ಈಗೀಗ ರಾತ್ರಿಗಳೂ ನಿರಾಳವಲ್ಲ
ಹಡಬೆ ಕನಸುಗಳು
ಛಾತಿಯ ಮೇಲೆ ಕುಕ್ಕರಿಸುತ್ತವೆ

ಸೀಳುನಾಯಿಯಂತೆ ನಾನು
ಯಾರದೋ ಮಾಂಸ ಹರಿದು ತಿಂದಿದ್ದೇನೆ
ಕೈಗಳಲ್ಲಿ ಕೆಂಪುರಕ್ತ

ಹೆಣಗಳ ವಾಸನೆ ತಾಳಲಾರೆ
ಧೂಪದ ಬಿರುಗಾಳಿಯಲ್ಲಿ
ಹೂವುಗಳ ಕಮಟು ಅತ್ತರು

ನಡುಬೀದಿಯಲ್ಲಿ ಬೆತ್ತಲು ನಿಂತಿದ್ದೇನೆ
ಸಾವಿರ ಸಾವಿರ ಕೆಮರಾಗಳು
ಒಮ್ಮಿಂದೊಮ್ಮಿಗೇ ಫೊಟೋ ಕ್ಲಿಕ್ಕಿಸುತ್ತಿವೆ

ಇದು ನಾನಲ್ಲ, ನಾನಲ್ಲ
ಎಂದು ಕಿರುಚುತ್ತಿದ್ದೇನೆ
ಧ್ವನಿ ಕವಾಟವೇ ಒಡೆದುಹೋಗಿದೆ

ಎದ್ದು ಪೂರಾ ಪ್ರಜ್ಞೆಗೆ ಬರುವಾಗ
ಬೆವರಲ್ಲಿ ತೋಯ್ದ ದೇಹ
ಹಣೆಯನ್ನು ತಬ್ಬಿದ ಇವಳ ಅಂಗೈ

ಬಚ್ಚಲ ನಳದಲ್ಲಿ ಕೈಯೊಡ್ಡಿ ನಿಂತಿದ್ದೇನೆ
ಎಷ್ಟು ಉಜ್ಜಿ ತೀಡಿದರೂ
ಮಾಸದ ರಕ್ತದ ಕಲೆ

ನಾನು ಎಂಬುದು ಒಂದೇ, ಎರಡೇ, ಹಲವೇ
ಬೆತ್ತಲಾಗಿ ನಿಂತವನ ತಲೆಯಲ್ಲಿ ಪ್ರಶ್ನೆ
ನರನರಗಳಲ್ಲಿ ಸಣ್ಣ ಮಿಡುಕಾಟ

ರಾತ್ರಿಯೆಂದರೆ ಭಯ ಕಣೇ ಎನ್ನುತ್ತೇನೆ
ಎದೆಯೊಳಗೆ ಮುಖ ಹುದುಗಿಸಿಕೊಂಡು
ಇವಳು ಖಿಲ್ಲನೆ ನಗುತ್ತಾಳೆ

ನನಗೆ ಈಗ ಸಣ್ಣ ಬುದ್ಧನಿದ್ರೆ
ಎದ್ದು ನೋಡಿದರೆ ಕೈಗಳ ಕಲೆ ಮಾಯ
ನಿದ್ದೆ ಹೋದ ಇವಳ ಮೊಗದಲ್ಲಿ ತುಂಟ ನಗೆ

Monday, February 20, 2012

ದಾಕ್ಷಾಯಿಣಿಯ ನೆನೆದು...


ಮಹಾಕೋಪಕ್ಕೆ ರೂಪಕ ಶಿವ
ಮೂರನೇ ಕಣ್ಣು ತೆರೆದನೆಂದರೆ ಜಗತ್ತು ಸರ್ವನಾಶ
ಹಾಗಂತ ನಂಬಿಕೆ

ಸಿಟ್ಟು ಬಂದಾಗ ತಾಂಡವನೃತ್ಯಗೈಯುವ ಶಿವ
ನಿಂತ ನೆಲವೇ ಅವನಿಗೆ ದಕ್ಷಬ್ರಹ್ಮನ ಯಜ್ಞಕುಂಡ
ಕುಣಿಯುವ ಕಾಲಿಗೆ ಪದೇ ಪದೇ ಎಡತಾಕಿದ್ದು
ಬ್ರಾಹ್ಮಣ್ಯದ ಬೆಂಕಿಗೆ ಸಿಕ್ಕು ಚಿಟಪಟನೆ ಬೆಂದುಹೋದ
ದಾಕ್ಷಾಯಿಣಿಯ ನೆನಪು
ನಡುಗುವ ತೊಡೆಗಳಲ್ಲಿ ಅವಳ ಆತ್ಮಸಂಚಾರ

ಇಕೋ, ಮೂರನೇ ಕಣ್ಣನೂ ತೆರೆದುಬಿಟ್ಟ
ಆ ಕಣ್ಣೋ ಲಾವಾರಸ ಸುರಿಸುವ ಅಗ್ನಿಕುಂಡ
ಅಲ್ಲಿ ದಾಕ್ಷಾಯಿಣಿ ಬೆಳಕಾಗಿ ಹರಿಯುತ್ತಾಳೆ

ಅಹಲ್ಯಾ ದ್ರೌಪದೀ ಸೀತಾ ತಾರಾ ಮಂಡೋದರೀ
ಪಂಚ ಪತಿವ್ರತೆಯರ ಪಟ್ಟಿಯಲ್ಲಿ ಇಲ್ಲದ ಹೆಸರು ದಾಕ್ಷಾಯಿಣಿ
ಹೇಗೆ ಸೇರಿಸಿಯಾರು?
ಅಪ್ಪನ ಗೊಡ್ಡು ಕಂದಾಚಾರ ಮೀರಿ ಅಂತರ್ಜಾತೀಯ ಮದುವೆಯಾದಳು
ಸ್ಮಶಾನವಾಸಿಯನ್ನು ಕೂಡಿ ಅಪ್ಪನ ಬ್ರಾಹ್ಮಣ್ಯದ ಸೊಕ್ಕನ್ನು ಮುರಿದವಳು
ಗಂಡನ ಮಾತು ಮೀರಿ ಅಪ್ಪನ ಯಜ್ಞ ನೋಡಲು ಬಂದವಳು
ಬಂದ ತಪ್ಪಿಗೆ ಅಪಮಾನಿತಳಾಗಿ ಯಜ್ಞ ಕುಂಡದಲ್ಲೇ ಬಿದ್ದು ಸತ್ತವಳು
ನ ಸ್ತ್ರೀ ಸ್ವಾತಂತ್ರ್ಯಂ ಅರ್ಹತಿ!

ಪುರುಷಾಹಂಕಾರ ಮೆಟ್ಟಿ ನಿಂತ ತಪ್ಪಿಗೆ
ಧೂರ್ತ ಆಚಾರಗಳನ್ನು ಧಿಕ್ಕರಿಸಿದ ತಪ್ಪಿಗೆ
ಅವಳಿಗೆ ಪೂಜೆಯಿಲ್ಲ, ಪುರಸ್ಕಾರವಿಲ್ಲ
ಗಂಗೆ-ಗೌರಿಯರ ಮಧ್ಯೆ ಇವಳಿಗೊಂದು ಜಾಗವೇ ಇಲ್ಲ

ಶಿವ ಕುಣಿಯುತ್ತಲೇ ಇದ್ದಾನೆ
ಎದೆಯಲ್ಲಿ ದಾಕ್ಷಾಯಿಣಿಯ ಪೂರ್ಣಾಹುತಿಯ ಬೆಂಕಿ
ರುದ್ರತಾಂಡವ ನಿಲ್ಲಿಸಲು ತಾಯ್ಗಂಡ ದೇವತೆಗಳು
ಮೇನಕೆಯರನ್ನು ಬೆತ್ತಲೆ ನಿಲ್ಲಿಸಬಹುದು

ದೇವತೆಗಳ ವ್ಯಭಿಚಾರದ ನಡುವೆ
ದಾಕ್ಷಾಯಿಣಿಯ ಮರ್ಯಾದಾ ಹತ್ಯೆಗಳು ನಡೆಯುತ್ತಲೇ ಇರುತ್ತದೆ

Thursday, February 16, 2012

ರಾತ್ರಿ


ನನ್ನಿಡೀ ದಿನವನ್ನು
ನಗರದ ಟ್ರಾಫಿಕ್ಕು ಸಂದಣಿಯಲ್ಲಿ
ಎಷ್ಟೋ ವಾಹನಗಳು ತುಳಿದು ಹೋದವು

ಈಗ ರಾತ್ರಿ

ಗೀ ಗೀ ಎನ್ನುವ
ಹುಳುಗಳ ಹಾಡು
ಅದೇನು ಮೈಥುನದ ಚಡಪಡಿಕೆಯೋ?

ಎಲ್ಲ ಮಲಗಿದಂತಿದೆ
ಯಾರದೋ ಗೊರಕೆಯ ನಡುವೆ
ಮತ್ತೆ ಯಾರದೋ
ನಿಟ್ಟುಸಿರ ಏರಿಳಿತ

ಯಾವುದೋ ಮಗು
ಕೆಟ್ಟ ಕನಸು ಕಂಡು
ಕಿಟಾರನೆ ಕಿರುಚಿ ಎದ್ದಿದೆ
ತಾಯ ಮೊಲೆ ಕವುಚಿಕೊಂಡು
ಮತ್ತೆ ನಿದ್ದೆಗೆ ಜಾರಿದೆ

ನಾಯಿಯೊಂದರ ಆರ್ತನಾದ
ಎಂಥ ನೋವೋ?
ಅದರ ಯಜಮಾನ ರೇಗಿದ್ದಾನೆ
ಅದೀಗ ಸುಮ್ಮನೆ ಮಲಗಿದೆ

ಹೊರಗೆ ಗಾಳಿ
ಈ ರಾತ್ರಿಯಲ್ಲೂ ಯಾರೋ ಮಿಡುಕಿ ಬಿದ್ದಂತೆ
ಮುಚ್ಚಿದ ಕಿಟಕಿಗಳನ್ನು ದಾಟಿ
ಒಳಬರಲು ಹವಣಿಸುತ್ತಿದೆ

ಎಲ್ಲ ಶಬ್ದಗಳನ್ನು
ಒಂದಕ್ಕೊಂದು ಹೆಣೆಯುತ್ತಿದ್ದೇನೆ
ಅಪೂರ್ಣ ಪದ್ಯಗಳಿಗೆ
ಹೊಸ ಪದಗಳನ್ನು ಹುಡುಕುತ್ತಿದ್ದೇನೆ

ಸತ್ತು ಹೋದ ದಿನಕ್ಕೆ
ಇನ್ನೂ ಸಂಸ್ಕಾರ ಮುಗಿದಿಲ್ಲ
ಆಗಲೇ ರಾತ್ರಿ
ಅದು ಬದುಕಿರುವುದಕ್ಕೆ ನನ್ನ ಉಸಿರಷ್ಟೇ ಸಾಕ್ಷಿ

ಆಗಾಗ ರೆಪ್ಪೆಗಳ ನರ್ತನ
ಒಡಲಲ್ಲಿ ಬೇಯುವ ಬೆಂಕಿ
ಮಗ್ಗುಲು ಬದಲಾಯಿಸಿದಾಗ
ಪಥ ಬದಲಿಸುವ ನೆತ್ತರು

ರಾತ್ರಿ ಇನ್ನೂ ಬೆಳೆದಿದೆ
ಈಗ ಕನವರಿಕೆ, ಆಗಾಗ ಒಂದು ಸಣ್ಣನಗು
ಮುಷ್ಠಿ ಸಡಿಲಗೊಂಡು
ಬೆರಳುಗಳಿಗೆ ದಿಢೀರನೆ ಬಿಡುಗಡೆ

ದೇಹ ಹಗುರವಾಗುತ್ತಿದೆ
ನಿದ್ದೆ ಹತ್ತುತ್ತಿರಬೇಕು
ಬೆಳಗ್ಗಿನವರೆಗೂ ನಾನು ನಿಶ್ಚಿಂತ
ನನ್ನ ರಾತ್ರಿ ಸಾಯುವುದು ನನಗೆ ಗೊತ್ತಾಗುವುದಿಲ್ಲ

Thursday, February 9, 2012

ಗೀಜಗ


ಸಣ್ಣ ಗೀಜಗದ ಮರಿ
ಚಿನ್ನದ ಗರಿ
ಕೆದರಿಕೊಂಡು
ಹಾರಿ ಹೋಗಿದೆ

ಇಲ್ಲೇ ಆಟವಾಡುತ್ತಿತ್ತು
ಮಂಜಿನ ಹನಿಗಳ ಕೊಡವಿ
ಚಿತ್ತಾರ ಮೂಡಿಸುತ್ತ ಲಗಾಟಿ ಹೊಡೆಯುತ್ತಿತ್ತು
ನನ್ನ ಬಿಸಿಯುಸಿರ ಶಾಖದಲ್ಲಿ ಬೆಚ್ಚಗಿತ್ತು

ನನ್ನ ಅಂಗಳಕ್ಕೆ ಬಂದಾಗ ಮಂಕೋಮಂಕು
ಗಾಯವಾಗಿತ್ತೇ? ಏಟು ತಿಂದಿತ್ತೇ?
ವ್ರಣ-ಕೀವು
ತನಗೆ ತಾನೇ ಶುಶ್ರೂಶೆ ಮಾಡಿಕೊಳ್ಳುತ್ತಿತ್ತು

ನನಗೋ ರೆಕ್ಕೆ ತಡವಿ ಸಂತೈಸುವ ಆಸೆ
ಹುಲುಮಾನವರು ಸ್ಪರ್ಶಿಸಿದ ಹಕ್ಕಿಯನ್ನು ಅದರ ಪರಿವಾರವೇ ದೂರ ತಳ್ಳುತ್ತದಂತೆ
ಹೆದರಿ ಸುಮ್ಮನಾದೆ
ಮನುಷ್ಯರೆಂದರೆ ಹಕ್ಕಿಗಳಿಗೂ ಅಲರ್ಜಿ

ನೋಡನೋಡುತ್ತ
ಗೀಜಗನ ಕಣ್ಣಲ್ಲಿ ಬಂಗಾರದ ಮಿಂಚು
ರೆಕ್ಕೆಗಳಿಗೋ ಥಳಥಳ ಮೆರುಗು
ಕುಕಿಲಲ್ಲಿ ಆತ್ಮವಿಶ್ವಾಸದ ರಂಗು

ಅದರ ಖುಷಿಯನ್ನು ಸಂಭ್ರಮಿಸುವುದರೊಳಗೆ
ಇವತ್ತು
ಗೀಜಗ ಹಾರಿ ಹೋಗಿದೆ
ಪುಕ್ಕವೊಂದು ಉಳಿಸಿ ಹೋಗಿದೆ ನನ್ನ ನೆನಪಿಗೆ

ಕಣ್ಣು ಸಾಗುವಷ್ಟು ದೂರ ನೋಡುತ್ತಿದ್ದೇನೆ
ಹಕ್ಕಿ ಕಾಣುತ್ತಿಲ್ಲ
ಆಕಾಶವನ್ನು ಭೂಮಿಗೆ ಎಳೆತರುವ ಉಮ್ಮೀದಿನಲ್ಲಿ
ಲಗಾಟಿ ಹೊಡೆಯುತ್ತಿರಬಹುದು
ಸೂರ್ಯನನ್ನೊಮ್ಮೆ ಮುಟ್ಟಿ ಬರೋಣ
ಎಂದು ಕನಸು ಕಟ್ಟಿ ಕುಣಿಯುತ್ತಿರಬಹುದು

ಬಾ ಎಂದೊಮ್ಮೆ ಕೂಗಿದೆ
ಬರಲಾರದೇನೋ ದೂರ ಸಾಗಿರಬಹುದು

ಬಂದರೂ ಬರಬಹುದು
ಬಂದಾಗ ನಾನಿಲ್ಲದೇ ಹೋದರೆ?
ಆಡಿ ಬೆಳೆದ ಮರದಲ್ಲೊಮ್ಮೆ ಜೋಲಿ ಹೊಡೆಯಬಯಸಿದರೆ?
ಮಡಿಲು ಇಲ್ಲದಂತಾಗಬಾರದು

ಕಾಯುತ್ತಿದ್ದೇನೆ
ಆಕಾಶದಲ್ಲಿ ಕಣ್ಣುನೆಟ್ಟು


ಚಿತ್ರ: ವಿಕಿಪೀಡಿಯಾ