Monday, August 29, 2011
ಸಾವು: ಕೆಲವು ಚಿತ್ರಗಳು...
-೧-
ಮೇಲೆ ನೆತ್ತಿಯ ಮೇಲೆ
ಸಾವಿನ ರೆಕ್ಕೆಗಳು ಫಡಫಡಿಸುವಾಗ
ನೆಲದ ಮೇಲೆ ವಿಕಾರ ನೆರಳು
ತುಳಿಯಲು ಬಯಸುತ್ತೇನೆ
ಕ್ಷಣಕ್ಕೊಂದು ಆಕಾರ ನೆರಳಿಗೆ
ಅದು ಓಡಿದಂತೆಲ್ಲ ನಾನೂ ಓಡೋಡಿ
ಬೆವರಾಗಿ, ಬಸಿದು ಹೋಗಿ
ಮತ್ತೆ ನಭದತ್ತ ಕತ್ತೆತ್ತಿ ನಿಡುಸುಯ್ಯುತ್ತೇನೆ
ಅಬ್ಬಾ, ದೈತ್ಯ ರೆಕ್ಕೆಗಳು
ಒಮ್ಮೆ ಅಲುಗಾಡಿದಂತೆಲ್ಲ, ಇಲ್ಲಿ ಭೀಕರ ಬಿರುಗಾಳಿ
ಚೈತನ್ಯದ ಬೇರನ್ನೇ ಎಳೆದೆಸೆಯುತ್ತದೆ
-೨-
ತಡಿ, ಸ್ವಲ್ಪ ತಡಿ
ಸಾವನ್ನು ಆಲಂಗಿಸುವ ಆತುರ ಬೇಡ
ಸಾವು ರಕ್ತದಿಂದಾಗಿದೆಯೇ?
ಮಾಂಸದಿಂದಾಗಿದೆಯೇ?
ಅದಕ್ಕೆ ಕಣ್ಣು, ಕಿವಿ, ಮೂಗು, ಚರ್ಮವಿದೆಯೇ?
ಅಥವಾ ಅದು ನಿರಾಕಾರವೇ? ನಿರ್ಗುಣಿಯೇ?
ಅದು ಚೈತನ್ಯ ಸ್ವರೂಪಿಯೇ?
ಆದರೂ ಒಂದಾಸೆ ಕಣೆ,
ತಬ್ಬಿದರೆ ಸಾವನ್ನೇ ಬೆಚ್ಚಿಸುವಂತೆ
ಆಳವಾಗಿ ಅಪ್ಪಿಕೊಳ್ಳಬೇಕು
ಬದುಕಿನ ಏನೇನೂ ಶೇಷವಾಗದಂತೆ
ಹಾಗೆ ಸಾವನ್ನೇ ತಬ್ಬಲು
ಪ್ರೀತಿ ಬೇಕು ಕಣೇ ಪ್ರೀತಿ
ಸಾವಂಥ ಸಾವನ್ನೇ ಪ್ರೀತಿಸುವ ಪ್ರೀತಿ
***
-೩-
ಅಗೋ ಅಲ್ಲಿ ಯಾರದ್ದೋ ಸಾವು ಸಂಭವಿಸಿದೆ
ಮೂಗಿಗೆ ಹತ್ತಿ
ತೆರೆದ ಬಾಯಿ ಮುಚ್ಚಿಸಲು
ಮಫ್ಲರಿನಂತೆ ಕಟ್ಟಿದ ಬ್ಯಾಂಡೇಜು
ಕೈ ಕಾಲು ಮುರಿದವರಿಗೆ
ಕ್ರೂರಿಗಳು ಎನ್ನಬೇಡ
ಹಾಗೆ ಮುರಿಯದಿದ್ದರೆ
ಹೆಣವನ್ನು ಸಂಭಾಳಿಸಲಾಗುವುದಿಲ್ಲ
ಸತ್ತವರ ಸಂಬಂಧಿಗಳ್ಯಾರೋ
ಎಳೆದೆಳೆದು ಮಾತನಾಡಿಸಲು ಯತ್ನಿಸುತ್ತಾರೆ
ಇದು ಮಿಸುಕಾಡೋದೇ ಇಲ್ಲ
ಸಾವೆಂದರೆ ಹಾಗೆ,
ಶುದ್ಧ ಮೌನ
ನ್ಯೂಟನ್ನನನ್ನೂ ಸುಳ್ಳು ಮಾಡುವ
ಕ್ರಿಯೆಗಿಲ್ಲದ ಪ್ರತಿಕ್ರಿಯೆ
ಕ್ರಿಯೆ ಇಲ್ಲದೆ
ಪ್ರತಿಕ್ರಿಯೆ ಇಲ್ಲದೆ
ಹೀಗೆ ಪವಡಿಸುವುದೂ
ಒಂದು ಬಗೆಯ ಅಖಂಡ ಧ್ಯಾನ
Subscribe to:
Posts (Atom)