Saturday, July 2, 2011

ಜನರಲ್ ವಾರ್ಡಿನಲ್ಲಿ...


ಜನರಲ್ ವಾರ್ಡಿನ ತುಂಬ ಸಾವಿನ ವಾಸನೆ
ಗೂರಲು ಕೆಮ್ಮಿನ ಮುದುಕ ಬೆಳಿಗ್ಗೆಯಷ್ಟೆ ತೀರಿದ್ದಾನೆ
ಅವನು ಮಲಗಿದ್ದ ಹಾಸಿಗೆಗೆ ಹೊಸ ಬೆಡ್‌ಶೀಟು ಬಂದಿದೆ

ನಿನ್ನೆಯಷ್ಟೆ ಸುಟ್ಟುಕೊಂಡು ಬಂದ ಹೆಣ್ಮಗಳ ಸುತ್ತ ಪರದೆ
ಅಸಹ್ಯ ಕಮಟು. ರಕ್ತವೇ ಬಿಳಿಬಿಳಿಯಾಗಿ ಜಿನುಗುತ್ತಿರಬಹುದು
ಸಾವು ನಾಳೆಯೋ ನಾಡಿದ್ದೋ ಯಾರಿಗೆ ಗೊತ್ತು?

ಹೊಸದೊಂದು ಮಗು ಹುಟ್ಟಿದೆ
ತಾಯಿ ಹಾಲೂಡಿಸುತ್ತಿದ್ದಾಳೆ ಎಲ್ಲರೆದುರೇ
ನಾಚಿಕೆ ಕಳೆದುಕೊಂಡ ಹುಡುಗಿ ಈಗ ಹೆಂಗಸಾಗಿದ್ದಾಳೆ

ನನ್ನ ಕರುಳ ಹುಣ್ಣು ಕತ್ತರಿಸಿಯಾಗಿದೆ
ಬಿದ್ದುಕೊಂಡಿದ್ದೇನೆ, ಅಲ್ಲಾಡದಂತೆ ಹೊಲಿಗೆ ಬಿಚ್ಚದಂತೆ
ಮಂಚದ ಕೆಳಗೆ ಯಳನೀರು ಬುರುಡೆ, ಕಪಾಟಿನಲ್ಲಿ ಗ್ಲೂಕೋಸು ಬಾಟಲಿಗಳು

ಕೊಯ್ಯುವಾಗ ಹೇಳಿದ್ದರು ಡಾಕ್ಟರು;
ಸ್ವಲ್ಪ ತಡಮಾಡಿದ್ದರು ಹುಣ್ಣು ಸಿಡಿದು ವಿಷವಾಗಿ
ಸತ್ತೇ ಹೋಗುತ್ತಿದ್ದೆನಂತೆ, ಸಾವು ಕದ ತಟ್ಟಿ ಬಂದಿತ್ತೆ?

ಹೊಸ ಪೇಶೆಂಟು ಬಂದಂತಿದೆ
ಹಳೇ ಡಾಕ್ಟರುಗಳು ಸುತ್ತ ಮುತ್ತಿಕೊಂಡಿದ್ದಾರೆ
ಬಿಳಿ ಬಟ್ಟೆಯ ನರ್ಸುಗಳು ಅದೇನೇನೋ ಬರೆದುಕೊಳ್ಳುತ್ತಿದ್ದಾರೆ

ಸಾವು ಇಲ್ಲಿ ಮಾಮೂಲು, ಹುಟ್ಟೂ ನಿತ್ಯದ ದಿನಚರಿ
ಹುಟ್ಟು-ಸಾವುಗಳ ಅಂಗಡಿಯಲ್ಲಿ ಬೇಕಾದ್ದನ್ನು ಪಡೆಯುವಂತಿಲ್ಲ
ಕೊಟ್ಟಿದ್ದನ್ನು ಒಪ್ಪಿಕೊಂಡು ಹೋಗಬೇಕು

ಜನರಲ್ ವಾರ್ಡಿನ ತುಂಬ ಈಗ ಅದೆಂಥದೋ ಔಷಧಿಯ ಕಮಟು ವಾಸನೆ
ದೇಹ ಕಿತ್ತೆಸೆದು ಹೊರಡುವ ಆತ್ಮಕ್ಕೆ
ದೇಹ ಧರಿಸಿ ಬರುವ ಜೀವಕ್ಕೆ ಗಂಧವಿದೆಯೇ?

ಮಳೆ ಅಂದರೆ ನೀನಷ್ಟೆ ಕಣೆ...


ಮೊನ್ನೆ ಸಂಜೆ ಇಲ್ಲಿ ಮೊದಲ ಮಳೆ
ಎದೆ ತೋಯ್ದು ತೊಟ್ಟಿಕ್ಕುವಾಗ
ನಿನ್ನದೇ ನೆನಪು...

ಮಳೆ ಅಂದರೆ ಹಾಗೆ,
ನಿನ್ನ ಮಡಿಲಲ್ಲಿ ಹೀರಿದ
ಹಸಿ ಮಣ್ಣಿನ ಪರಿಮಳ..

ನಿನ್ನ ಒಳಗೆ ನಿಂತು
ನನ್ನ ಜೀವರಸವನ್ನೆಲ್ಲ ಹರಿಸುವಾಗ
ಹರಡಿದ ಗಮ್ಮನೆಯ ಅಧ್ಯಾತ್ಮ

ಮಳೆ ಅಂದರೆ,
ನಿನ್ನೊಳಗೆ ಜೀವ ತೇಕಿ, ದೇಹ ಜೀಕಿ
ಚಿಮ್ಮನೆ ಚೆಲ್ಲಿದ ಹುಡಿಹುಡಿ ಮಾತುಗಳು;
ಹಿಂದೆ ಬಿಮ್ಮನೆ ನಿಂತ ಕನವರಿಕೆಗಳು

ಮಳೆ ಅಂದರೆ,
ಹಣೆಯ ಸಿಂಧೂರ ತೋಯಿಸಿದ ಬೆವರು
ಎದೆಯ ಸೀಳಲ್ಲಿ ಕವಲಾಗಿ ಹರಿದ ಬಿಸಿಯುಸಿರು
ನಿನ್ನೊಳಗೆ ಜಾಗೃತಗೊಂಡ ತೇವ
ನನ್ನೊಳಗಿಂದ ನದಿಯಾಗಿ ಹರಿದ ಕಾವ್ಯ

ಮಳೆ ಅಂದರೆ,
ತುಟಿ ಒತ್ತಿದಾಗ ಉಳಿದ ಎಂಜಲ ಅಂಟು
ಮೊಲೆ ಹೀರುವಾಗ ಸಣ್ಣಗೆ ಜಿನುಗಿದ ಹಾಲು
ದೇಹವೇ ಇಡಿಯಾಗಿ ಚೀರಿ ಚಿಮ್ಮಿದ ಜೀವಚೈತನ್ಯ

ಮಳೆ ಅಂದರೆ,
ನೀನು
ಮತ್ತು ನೀನಷ್ಟೆ ಕಣೆ.....

ಕುಲುಮೆಯಲ್ಲಿ ಉರಿದುರಿದು....


-೧-
ಸಿಟ್ಟು ಸೆಡವು ಹತಾಶೆ ನೋವಿನಲ್ಲೂ ನೀನು
ಮೇಣದಂತೆ ಉರಿದುರಿದು
ಬೆಳಕಿಗಾಗಿ ಹಂಬಲಿಸುತ್ತೀ...
ಬೆಳಕಿಗೆ ಮೇಣ ಬೇಕು, ಮೇಣಕ್ಕೆ ಬೆಳಕಲ್ಲ.
ಉರಿಯುತ್ತ ಉರಿಯುತ್ತ ಮೇಣವೇ ಬೆಳಕಾಗುವ ವಿಸ್ಮಯ
ಅದ ನೋಡಿ ನಾನು ಬರಿದೇ ಬೂದಿಯಾಗುತ್ತಿದ್ದೇನೆ

-೨-
ನೀನು ನನ್ನ ಭೂತವಲ್ಲ, ಕನಸಲ್ಲ, ಬದುಕಲ್ಲ, ಭವಿಷ್ಯವಲ್ಲ
ಗುರಿಯಲ್ಲ, ಅಸ್ಮಿತೆಯಲ್ಲ...
ಏನೂ ಅಲ್ಲದಿರುವ ನೀನು ನನ್ನ
ಆತ್ಮವಿಶ್ವಾಸವಾದೀಯೆಂಬ ಭೀತಿ ನನಗೆ

-೩-
ಪ್ರೀತಿ, ಪ್ರೇಮ, ಮೋಹ, ಕಾಮಾದಿಗಳೆಲ್ಲವೂ ನಿರರ್ಥಕ
ನನಗೆ, ನಿನಗೆ ಬೇಕಿರುವುದು ಆತ್ಮಸಾಂಗತ್ಯ
ಅದಿರುವುದು ವಾಸ್ತವದ ಬೆಂಕಿಯ ಕುಲುಮೆಯಲ್ಲಿ
ಅಲ್ಲಿ ಬೇಯಬೇಕು, ಬೆಂದು ಉರಿದು ಹೋಗಬೇಕು

-೪-
ಕಲ್ಲು ಅಹಲ್ಯೆಗೆ ಮನುಷ್ಯಳಾಗುವ ತವಕ,
ನನಗೆ ಕಲ್ಲಾಗುವ ಆಶೆ
ಯಾಕೆಂದರೆ ಕಲ್ಲು ಕರಗುವುದಿಲ್ಲ
ಧ್ಯಾನಕ್ಕೆ ಬಿದ್ದ ಮನಸ್ಸು ಕರಗಲಾರದು
ಕರಗದ ಕಾಯ ನಿರಾಕಾರವಾಗಿ, ವಿಸ್ಮಯವಾಗಿ
ಅನಂತವಾಗಬೇಕು

-೫-
ನನ್ನ ದೇಹ, ಭಾವ, ಮಾತು, ಬುದ್ಧಿಯನ್ನು ಮೆಚ್ಚಬೇಡ
ಮೆಚ್ಚುವುದಿದ್ದರೆ ನನ್ನ ಚೈತನ್ಯವನ್ನು ಮೆಚ್ಚು
ಅದೊಂದೇ ಅವಿನಾಶಿ

-೬-
ನಾನು ಬೋಧಕನೂ ಅಲ್ಲ, ಬಾಧಕನೂ ಅಲ್ಲ
ಕಾಲಾಗ್ನಿಯಲ್ಲಿ ದಹಿಸಿಕೊಳ್ಳುತ ಕುಳಿತ
ಭೈರಾಗಿಯಂಥವನು
ನನಗೆ ಬೂದಿಯೇ ಬೆಳಕು
ಈ ಬೆಳಕಿನಿಂದಲೇ ಬದುಕನ್ನು ನೋಡಬಯಸುವೆ

-೭-
ಯಾರು ಯಾರನ್ನೂ ಬೆಳಗಿಸಲಾಗದು
ಬೆಳಗಲು ಬಯಸುವವರು ಕುಲುಮೆಯಲ್ಲಿ ಬೇಯಬೇಕು
ಉರಿಯಬೇಕು
ತಾನೇ ಬೇಯಲು ಹೊರಟವನು ಏನನ್ನು ಬೆಳಗಿಸಬಹುದು?