ಟೊಲೆಡೋದಲ್ಲಿ ಹುಲಿಯೊಂದನ್ನು ಆತ ಪಳಗಿಸಿ ಪ್ರದರ್ಶಿಸುತ್ತಿದ್ದಾನೆ. ಹೊಸ ಜಗತ್ತಿನಿಂದ ರಾಜನಿಗೆ ಸಂದ ಕಾಣಿಕೆ ಅದು. ಸರಪಳಿಯಲ್ಲಿ ಥೇಟು ನಾಯಿಮರಿಯಂತೆ ವಿಧೇಯವಾಗಿ ನಡೆದು ಬರುತ್ತಿದೆ.
ಗೊನ್ಸಾಲೋ ಡಿ ಒವಿಡೋ, ಟೊಲೆಡೋದ ರಾಜ್ಯಪಾಲ, ಹುಲಿಯನ್ನು ಗಮನಿಸುತ್ತಾನೆ. ಅವನ ರಕ್ತ ಹೆಪ್ಪುಗಟ್ಟುತ್ತದೆ. ಜಾಗುವಾರ್‌ನ ನಿಲುವೇ ಅಂಥಾದ್ದು. ಆತ ಹೇಳುತ್ತಾನೆ. ‘ಈ ಪ್ರಾಣಿಯನ್ನು ಪೂರಾ ನಂಬಕೂಡದು. ಸ್ನೇಹದಲ್ಲಿ ಇರಕೂಡದು. ಮನುಷ್ಯರ ಸಂಗಕ್ಕೆ ಹೇಳಿದ ಪ್ರಾಣಿ ಇದಲ್ಲ...
ಹುಲಿಯಾಡಿಸುವಾತ ನಗುತ್ತಾನೆ. ಸರಪಳಿ ಬಿಚ್ಚಿ ಅದರ ಬೆನ್ನು ಸವರುತ್ತಾನೆ. ಹುಲಿ ಗುರುಗುಡುತ್ತದೆ. ಭೂಮಿಯೊಡಲ ಕಂಪನದಂತೆ ಅದು ಒವಿಡೋನ ಗರ್ಭಕ್ಕೇ ಇಳಿಯುತ್ತಿದೆ.
ಕೋರೆಹಲ್ಲಿನ ಈ ಗುರುಗಾಟ ಕೇಡಿನ ಸಂಜ್ಞೆಯಂತಿದೆ. ಒಂದಲ್ಲ ಒಂದು ದಿನ ಹುಲಿಯಾಡಿಸುವಾತ ಅದಕ್ಕೆ ಬಲಿಯಾಗಲೇಬೇಕು. ತಟ್ಟೆಯಲ್ಲಿ ವಿಧೇಯವಾಗಿ ಅನ್ನ ನೆಕ್ಕಲೆಂದು ಆ ದೇವರು ಈ ಭೀಕರ ಪ್ರಾಣಿಗೆ ಹಲ್ಲು ಉಗುರು ದೈತ್ಯ ಶಕ್ತಿ ನೀಡಿದ್ದಾನೆಯೇ? ಈ ಹುಲಿಯ ವಂಶದವರಾರೂ ತಟ್ಟೆಯಲ್ಲಿ ಉಂಡವರಲ್ಲ. ಬಗೆದು ಸೀಳಿ ಜಗಿದು ನುಂಗುವುದು ಬಿಟ್ಟರೆ ಇನ್ನಾವ ನಡವಳಿಕೆ ಈ ಹುಲಿಗೆ ಗೊತ್ತು? ಹುಲಿಯಾಡಿಸುವಾತ ಇನ್ನೂ ನಗುತ್ತಿದ್ದಾನೆ. ಒವಿಡೋನಲ್ಲಿ ಅಲೆಅಲೆಯಾಗಿ ಯೋಚನೆ, ಅಸಹನೆ ಹೊಗೆಯಾಡುತ್ತಿದೆ.
ಹುಲಿಯಾಡಿಸುವಾತ ಈಗ ಕೆಂಪನೆ ಮಾಂಸದ ರಾಶಿಯಂತೆ ಕಾಣಿಸುತ್ತಿದ್ದಾನೆ. ಹೊಸ ಪ್ರಪಂಚದ ಹಿಂಸ್ರ ಸಾರ್ವಭೌಮ, ಸಾಕು ಪ್ರಾಣಿಯಾಗಲು ಸಾಧ್ಯವೇ ಇಲ್ಲ.
ಒವಿಡೋ ಸ್ಫೋಟಗೊಂಡಂತೆ ಮುಖ ತಿರುವಿ ಆಜ್ಞಾಪಿಸುತ್ತಾನೆ. ‘ಅದರ ಉಗುರು ಕಿತ್ತುಹಾಕಿ, ಹಲ್ಲುಗಳನ್ನು ಕಿತ್ತು ಬಿಡಿ
*****
ಎಡುವರ್ಡೊ ಗೆಲಿಯಾನೋ ಬರೆದ ಮೆಮೊರಿ ಆಫ್ ಫೈರ್‌ನ ಒಂದು ಅಧ್ಯಾಯದಲ್ಲಿ ಕಾಣಿಸುವ ಬರೆಹವಿದು. (ಕೆ.ಪಿ.ಸುರೇಶ್ ಅವರ ಅನುವಾದ: ಬೆಂಕಿಯ ನೆನಪು)
ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಈಗಿನ ಪರಿಸ್ಥಿತಿ ಹೀಗೆಯೇ ಇದೆ. ಅವರೀಗ ಕೆಂಪನೆ ಮಾಂಸದ ರಾಶಿಯಂತೆ ಕಾಣುತ್ತಿದ್ದಾರೆ. ಯಡಿಯೂರಪ್ಪ ಅವರ ಮೈ ತುಂಬ ಬಳ್ಳಾರಿಯ ರೆಡ್ಡಿಗಳು ಪರಚಿದ, ಗೀರಿದ ಗಾಯದ ಗುರುತುಗಳು.
ಬಳ್ಳಾರಿಯ ರೆಡ್ಡಿಗಳು ಆಕ್ರಮಣಶೀಲರು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಜೆಡಿಎಸ್-ಬಿಜೆಪಿ ಮೈತ್ರಿಕೂಟದ ಸರ್ಕಾರ ಅಸ್ತಿತ್ವದಲ್ಲಿದ್ದಾಗ ವಿಧಾನಪರಿಷತ್‌ನಲ್ಲಿ ತಮ್ಮದೇ ಸರ್ಕಾರದ ಮುಖ್ಯಮಂತ್ರಿಯ ವಿರುದ್ಧ ೧೫೦ ಕೋಟಿ ರೂ. ಭ್ರಷ್ಟಾಚಾರದ ಆರೋಪವನ್ನು ಹೇರಿದಾತ ಜನಾರ್ದನ ರೆಡ್ಡಿ. ಕಾಲು ಕೆರೆದು ಜಗಳಕ್ಕೆ ನಿಂತರೆ ರೆಡ್ಡಿಗಳು ಥೇಟ್ ತೆಲುಗು ಸಿನಿಮಾದ ವಿಲನ್‌ಗಳಂತೆ ಆಡುತ್ತಾರೆ (ಹೀರೋಗಳಂತೆ ಭಾವಿಸಿಕೊಂಡಿರುತ್ತಾರೆ).ಇದ್ಯಾವುದೂ ಯಡಿಯೂರಪ್ಪ ಅವರಿಗೆ ಗೊತ್ತಿರದ ವಿಷಯಗಳೇನೂ ಆಗಿರಲಿಲ್ಲ.
ಜೆಡಿಎಸ್ ಜತೆ ಮೈತ್ರಿ ಮುರಿದು ಬಿದ್ದ ನಂತರ ರೆಡ್ಡಿಗಳನ್ನು ಅಗತ್ಯಕ್ಕಿಂತ ಹೆಚ್ಚು ಮುದ್ದು ಮಾಡಿದ ಯಡಿಯೂರಪ್ಪ ವಿಧಾನಸಭೆ ಚುನಾವಣೆಯಲ್ಲಿ ಒಂದೇ ಕುಟುಂಬ ನಾಲ್ವರಿಗೆ ಟಿಕೆಟ್ ನೀಡಿದರು. ಬಿಜೆಪಿ ಅಭ್ಯರ್ಥಿಗಳಿಗೆ ಫಂಡು ಕೊಡಿಸಿ ಸ್ವತಃ ತಾವೂ ಹಾಗು ಅಭ್ಯರ್ಥಿಗಳು ಏಕಕಾಲಕ್ಕೆ ಅವರ ಹಂಗಿಗೆ ಬಿದ್ದರು. ಬಹುಮತಕ್ಕೆ ಕೆಲಸ್ಥಾನಗಳು ಕಡಿಮೆ ಬಂದಾಗ ಆರು ಮಂದಿ ಪಕ್ಷೇತರರನ್ನು ಕೊಂಡುಕೊಳ್ಳುವ ಕೆಲಸವನ್ನೂ ರೆಡ್ಡಿಗಳ ಸುಪರ್ದಿಗೇ ಬಿಟ್ಟರು.
ಚುನಾವಣೆಯಲ್ಲಿ ಬಂಡವಾಳ ಹೂಡಿದ ಕಾರಣಕ್ಕಾಗಿ ಒಂದೇ ಕುಟುಂಬದ ಮೂವರಿಗೆ ಸಚಿವಗಿರಿಯನ್ನು ಕೊಡಲಾಯಿತು. ಕಂದಾಯ, ಆರೋಗ್ಯ, ಪ್ರವಾಸೋದ್ಯಮ ಖಾತೆಗಳು ರೆಡ್ಡಿಗಳ ಪಾಲಾಯಿತು.
ಇದಾದ ತರುವಾಯ ನಡೆದದ್ದು ಆಪರೇಷನ್ ಕಮಲ. ಜೆಡಿಎಸ್-ಕಾಂಗ್ರೆಸ್ ಪಕ್ಷಗಳಿಂದ ಶಾಸಕರನ್ನು ಹಿಡಿದು ತಂದು, ರಾಜೀನಾಮೆ ಕೊಡಿಸಿ ಮತ್ತೆ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸುವ ಕೆಲಸವನ್ನೂ ರೆಡ್ಡಿಗಳೇ ವಹಿಸಿಕೊಂಡರು. ಕೆಲವು ಆಪರೇಷನ್ ಮುಖ್ಯಮಂತ್ರಿ ಇಶಾರೆಯ ಮೇರೆಗೆ ನಡೆದರೆ ಮತ್ತೆ ಕೆಲವು ರೆಡ್ಡಿಗಳ ಮರ್ಜಿಗೆ ತಕ್ಕಂತೆ ನಡೆದವು.
ಅಲ್ಲಿಗೆ ಮುಖ್ಯಮಂತ್ರಿ ಬಳ್ಳಾರಿಯ ಗಣಿ ದಂಧೆಕೋರರ ಎದುರು ಸಂಪೂರ್ಣ ತಲೆಬಾಗಿಸಿ ನಿಂತಾಗಿತ್ತು. ಬಿಜೆಪಿಯ ಸಾಕಷ್ಟು ಸಂಖ್ಯೆಯ ಶಾಸಕರು, ಸಚಿವರು ರೆಡ್ಡಿಗಳ ಆಜ್ಞಾನುಧಾರಕರಾಗಿ ಬದಲಾಗಿ ಹೋಗಿದ್ದರು. ಅರ್ಥಾತ್ ತಮ್ಮನ್ನು ತಾವು ಸಂಪೂರ್ಣ ರೆಡ್ಡಿಗಳಿಗೆ ಮಾರಿಕೊಂಡಿದ್ದರು.
****
ಇದೆಲ್ಲ ಮುಗಿದ ಮೇಲೆ ನಡೆದದ್ದು ವಿರಸಪರ್ವ. ಅದನ್ನು ಎಲ್ಲರೂ ಊಹಿಸಿದ್ದರು. ರೆಡ್ಡಿಗಳಿಗೆ ಸಂಪೂರ್ಣ ಸರ್ಕಾರವನ್ನೇ ತಮ್ಮ ತೆಕ್ಕೆಗೆ ತಂದುಕೊಳ್ಳುವ ಆತುರ. ಬಂಡವಾಳಶಾಹಿಯ ಮನಸ್ಥಿತಿ ಅದು. ಅದರಲ್ಲೂ ದಿನಕ್ಕೆ ಕೋಟ್ಯಂತರ ರೂ. ದುಡಿಯುವ ರೆಡ್ಡಿಗಳಿಗೆ ಎಲ್ಲರನ್ನೂ ಕೊಂಡುಕೊಳ್ಳುವ ದುರಹಂಕಾರ. ಯಡಿಯೂರಪ್ಪ ಜತೆ ಜಗಳಕ್ಕೆ ಬಿದ್ದರು. ಸಿಟ್ಟಿನ ಮಲ್ಲ ಯಡಿಯೂರಪ್ಪ ಸುಮ್ಮನಿದ್ದಾರೆಯೇ? ಅವರೂ ಜಗಳಕ್ಕೆ ನಿಂತರು.
ಉತ್ತರ ಕರ್ನಾಟಕದಲ್ಲಿ ಭೀಕರ ನೆರೆ. ಅದನ್ನು ಯಾರೂ ಊಹಿಸಿರಲಿಲ್ಲ. ಮುಖ್ಯಮಂತ್ರಿ ಬೆಂಗಳೂರಿನ ಬೀದಿಬೀದಿಯಲ್ಲಿ ಜನರಿಂದ ಭಿಕ್ಷಾಟನೆಗೆ ನಿಂತರೆ ಅತ್ತ ರೆಡ್ಡಿಗಳು ಬಳ್ಳಾರಿ ಗಣಿ ದಂಧೆಕೋರರನ್ನು ಜಿಲ್ಲಾಧಿಕಾರಿ ಕಚೇರಿಗೆ ಕರೆಸಿ ೫೦ ಕೋಟಿ ರೂ. ಸಂಗ್ರಹಿಸಿದರು.
ಉತ್ತರ ಕರ್ನಾಟಕದ ಜನತೆ ನೆರೆಯಿಂದ ಕಂಗೆಟ್ಟಿರುವಾಗ, ಯಡ್ಡಿ-ರೆಡ್ಡಿಗಳು ಒಂದಾಗಿ ಕೆಲಸ ಮಾಡಬೇಕಾದ ಅಗತ್ಯವಿತ್ತು. ಮಾನವೀಯವಾಗಿ ಯೋಚಿಸುವವರು ಇದನ್ನೇ ಮಾಡುತ್ತಿದ್ದರು. ಪರಸ್ಪರ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಳ್ಳಲು ನೆರೆ ಪರಿಹಾರದ ಕಾರ್ಯಕ್ರಮಗಳು ಉಭಯ ಬಣದವರಿಗೂ ಒಂದು ವೇದಿಕೆಯಾಗಬೇಕಿತ್ತು. ಆದರೆ ನೆರೆಯನ್ನೇ ವಿಷಯವಾಗಿಟ್ಟುಕೊಂಡು ಮತ್ತಷ್ಟು ದೂರಾದರು.
ನಂತರದ್ದು ಶಕ್ತಿ ಪ್ರದರ್ಶನ. ನೆರೆಯಲ್ಲಿ ನಲುಗುತ್ತಿರುವ ಜನಪ್ರತಿನಿಧಿಗಳು ಗೋವಾ-ಹೈದರಾಬಾದ್‌ಗಳಿಗೆ ಧಾವಿಸಿದರು. ಅಲ್ಲಿ ಅವರಿಗೆ ಸಂಪೂರ್ಣ ಮೋಜು-ಮಸ್ತಿ.
*****
ಬೆಂಗಳೂರಿನಲ್ಲಿ ಅಧಿಕಾರ ಹಿಡಿದು ಕುಳಿತಿರುವ ನೀಚರು... ಕಂಸನ ಸಂಹಾರವಾಗಬೇಕು... ನಮ್ಮ ಕೆಲಸಗಳಿಗೆ ಅಡ್ಡಗಾಲು ಹಾಕುತ್ತಿರುವ ನರಿಗಳು... ಇತ್ಯಾದಿ ಇತ್ಯಾದಿಯಾಗಿ ರೆಡ್ಡಿಗಳು ಮುಖ್ಯಮಂತ್ರಿಯನ್ನೇ ತಿವಿದು ಮಾತನಾಡುತ್ತಿದ್ದಾರೆ. ಹುಲಿಗೆ ಸೀಳಿ, ಜಗಿಯುವುದನ್ನು ಬಿಟ್ಟರೆ ಬೇರೇನು ಗೊತ್ತು? ಅದು ತನ್ನ ಸಹಜ ಕರ್ಮವನ್ನೇ ಆರಂಭಿಸಿದೆ. ಸೀಳುತ್ತಿದೆ, ಜಗಿಯುತ್ತಿದೆ, ಗೀರುತ್ತಿದೆ.
ತಮ್ಮ ವಿರುದ್ಧ ಇಷ್ಟೆಲ್ಲ ಮಾತನಾಡಿದರೂ ಯಡಿಯೂರಪ್ಪ ಅಸಹಾಯಕರು. ಸಂಧಾನ ಸಂಪೂರ್ಣ ಮುರಿದು ಬೀಳುವ ಕಡೆ ಗಳಿಗೆಯವರೆಗೆ ರೆಡ್ಡಿಗಳನ್ನು ಅವರು ಸಂಪುಟದಿಂದ ಕೈ ಬಿಡಲಾರರು. ಎಲ್ಲ ಸ್ವಯಂಕೃತಾಪರಾಧ.
ಈ ನಡುವೆ ಉತ್ತರ ಕರ್ನಾಟಕದ ಜನ ಏನು ಮಾಡಬೇಕು? ಅವರ ಕಷ್ಟಗಳನ್ನು ಕೇಳುವವರು ಯಾರು? ಅಲ್ಲಿ ಮುರಿದು ಬಿದ್ದಿರುವ ಮನೆಗಳನ್ನು ಕಟ್ಟಿಕೊಡುವವರು ಯಾರು? ನಲುಗಿ ಹೋಗಿರುವ ಬದುಕನ್ನು ರಿಪೇರಿ ಮಾಡುವವರು ಯಾರು?
ಸರ್ಕಾರ ಪರಿಹಾರ ನೀಡುತ್ತದೆ, ಅದು ಜನರ ಹಕ್ಕು. ಆದರೆ ರೆಡ್ಡಿಗಳಂತವರು ತಮ್ಮ ಜೇಬಿನಿಂದ ಹಣ ನೀಡಿದರೆ ಅದು ಭಿಕ್ಷೆ. ಜನರೂ ಸಹ ಮಾರಾಟದ ಸರಕುಗಳಾಗುತ್ತಾರೆ. ರೆಡ್ಡಿಗಳು ಈಗಾಗಲೇ ಪರ್ಯಾಯ ಸರ್ಕಾರದಂತೆ ಫೋಸು ಕೊಡುತ್ತಿದ್ದಾರೆ. ತಾವೇ ಮಂತ್ರಿಗಳಾಗಿರುವ ಸರ್ಕಾರವನ್ನೇ, ತಮ್ಮ ಮುಖ್ಯಮಂತ್ರಿಯನ್ನೇ ಗೇಲಿ ಮಾಡಿ, ಕುಸಿದು ಬಿದ್ದಿರೋದು ೫೦,೦೦೦ ಸಾವಿರ ಮನೆಗಳು; ಅವನ್ನು ನಮ್ಮ ಸ್ವಂತ ಹಣದಲ್ಲಿ, ತಮ್ಮ ಗಣಿ ದಂಧೆಕೋರ ಗಣದ ಹಣದಲ್ಲಿ ಕಟ್ಟಿಸ್ತೀವಿ ಬಿಡ್ರೀ ಎಂದು ಗುಟುರು ಹಾಕುತ್ತಿದ್ದಾರೆ.
ಯಡ್ಡಿ-ರೆಡ್ಡಿಗಳು ಇಬ್ಬರೂ ಸೇರಿ ಜನರನ್ನು ಭಿಕ್ಷಕುರನ್ನಾಗಿಸಿದ್ದಾರೆ. ಇದಕ್ಕಿಂತ ಹೀನ, ಅಮಾನವೀಯ ನಡೆ ಇನ್ನೇನಿರಲು ಸಾಧ್ಯ?
*****
ಉತ್ತರ ಕರ್ನಾಟಕದಲ್ಲಿ ಅಪ್ಪಳಿಸಿದ ನೆರೆ, ಮತ್ತದರ ನಂತರದ ಬೆಳವಣಿಗಳು ಗಾಬರಿ ಹುಟ್ಟಿಸುವಂತಿದೆ. ಜನ ನಿಜಕ್ಕೂ ತಬ್ಬಲಿಗಳಾಗಿದ್ದಾರೆ. ತಾವು ಬೀದಿಗೆ ಬಿದ್ದಿದ್ದರೂ, ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಉಳಿತಾನೇನ್ರೀ ಎಂದು ಕೇಳುವಷ್ಟು ಅವರು ಅಮಾಯಕರು. ಈಗಾಗಲೇ ಋಣಕ್ಕೆ ಬಿದ್ದಿರುವ ಸಾಕಷ್ಟು ಜನರಿಗೆ ರೆಡ್ಡಿ-ಶ್ರೀರಾಮುಲುಗಳೇ ದೇವರು. ಅತ್ಯಂತ ಸಭ್ಯ, ಪ್ರಾಮಾಣಿಕ ಜನರನ್ನೂ ಭ್ರಷ್ಟರಾಗಿಸಿದ ಕೀರ್ತಿ ರೆಡ್ಡಿಗಳದು.
ಇದರ ನಡುವೆ ನೆರೆಯ ನಂತರದ ಕಟ್ಟುವ ಕೆಲಸ ಹೇಗೆ ಸಾಗಿದೆ? ಅದನ್ನು ನಿರ್ವಹಿಸುವವರು ಯಾರು? ಹೇಗೆ? ಈ ಕೆಲಸದಲ್ಲೂ ನಡೆಯುತ್ತಿರುವ ಸ್ವಜನ ಪಕ್ಷಪಾತ, ಸಾಮಾಜಿಕ ತಾರತಮ್ಯದ ಸ್ವರೂಪಗಳು ಎಂಥವು. ಗ್ರಾಮೀಣ ಆರ್ಥಿಕತೆಯ ಎಬಿಸಿಡಿ ಗೊತ್ತಿಲ್ಲದವರು ಅಲ್ಲಿ ಏನನ್ನು ಮಾಡಬಲ್ಲರು? ಸ್ಥಳಾಂತರಗೊಳ್ಳಬೇಕಾದ ಹಳ್ಳಿಗಳ ಜನರ ಕಥೆಗಳೇನು? ನಿಜಕ್ಕೂ ಈ ಗ್ರಾಮಗಳು ಸ್ಥಳಾಂತರಗೊಳ್ಳಬೇಕೆ? ಇಂಥ ನೂರಾರು ಪ್ರಶ್ನೆಗಳನ್ನು ಇಟ್ಟುಕೊಂಡು ಸಂವಹನ ಸಂಘಟನೆ ಇದೇ ೧೨ ರಂದು ಗುರುವಾರ ಇಡೀ ದಿನ ಬೆಂಗಳೂರಿನ ಸೆಂಟ್ರಲ್ ಕಾಲೇಜು ಆವರಣದ ಸೆನೆಟ್ ಸಭಾಂಗಣದಲ್ಲಿ ಚಿಂತನಾ ಗೋಷ್ಠಿ ಇಟ್ಟುಕೊಂಡಿದೆ.
ಡಾ.ಯು.ಆರ್.ಅನಂತಮೂರ್ತಿ ಗೋಷ್ಠಿಯನ್ನು ಉದ್ಘಾಟಿಸುತ್ತಾರೆ. ನಾಡಿನ ವಿವಿಧ ಕ್ಷೇತ್ರದ ಗಣ್ಯರು ಗೋಷ್ಠಿಯಲ್ಲಿ ಪಾಲ್ಗೊಳ್ಳುತ್ತಾರೆ. ನೀವೆಲ್ಲರೂ ಈ ಗೋಷ್ಠಿಗೆ ಬನ್ನಿ ಎಂಬುದು ನನ್ನ ಪ್ರೀತಿಯ ಮನವಿ.
ಹೆಚ್ಚಿನ ವಿವರಗಳು ಸಂವಹನ ಬ್ಲಾಗ್‌ನಲ್ಲಿದೆ. ಅಲ್ಲೂ ಒಮ್ಮೆ ಹೋಗಿ ಬನ್ನಿ