ಸಂವಹನ ಸಂಘಟನೆ ಏರ್ಪಡಿಸಿರುವ ಮೊದಲ ಚಿಂತನಾ ಗೋಷ್ಠಿ ಏ.೫ ರಂದು ಬೆಳಿಗ್ಗೆ ೧೦-೩೦ರಿಂದ ಬೆಂಗಳೂರಿನ ಯವನಿಕ ಸಮ್ಮೇಳನ ಸಭಾಂಗಣದಲ್ಲಿ ನಡೆಯಲಿದೆ.
ಸಾಮಾಜಿಕ ನ್ಯಾಯ ಮತ್ತು ಶಿಕ್ಷಣ ಎಂಬುದು ಗೋಷ್ಠಿಯ ವಿಷಯ. ಗೋಷ್ಠಿಯಲ್ಲಿ ಶಿಕ್ಷಣ ತಜ್ಞರು, ವಿಚಾರವಾದಿಗಳು, ಸಾಹಿತಿಗಳು, ಕಲಾವಿದರು ಪಾಲ್ಗೊಳ್ಳಲಿದ್ದಾರೆ. ನಿಮ್ಮೆಲ್ಲರಿಗೂ ಕಾರ್ಯಕ್ರಮಕ್ಕೆ ಆತ್ಮೀಯ ಸ್ವಾಗತ.
Monday, March 30, 2009
Wednesday, March 25, 2009
`ಇಂದು ಸಂಜೆ' ಮೂರನೇ ವಾರ್ಷಿಕೋತ್ಸವದ ಸಡಗರ, ಸಂಭ್ರಮ
Sunday, March 22, 2009
ಲೋಹಿಯಾ ಮತ್ತೆ ಮತ್ತೆ ನೆನಪಾಗುತ್ತಾರೆ...
ಮೊನ್ನೆ ಮೊನ್ನೆ ತಾನೇ ವರುಣ್ ಗಾಂಧಿ `ಮುಸ್ಲಿಮರ ಕೈಗಳನ್ನು ಕಡಿಯುವ ಮಾತನ್ನಾಡಿದ್ದಾನೆ. ಇದು ವರುಣ್ ಒಬ್ಬನ ಮಾತು ಆಗಿರಲು ಸಾಧ್ಯವೇ ಇಲ್ಲ. ಆತ ಒಂದು ವರ್ಗದ ಜನರ ಹೊಟ್ಟೆಯ ಮಾತನ್ನು ಹೇಳಿದ್ದಾನೆ. ಹೀಗಾಗಿ ವರುಣ್ ಕುರಿತು ಸಹಾನುಭೂತಿಯ ಮಾತುಗಳೂ ಅಲ್ಲಲ್ಲಿ ಕೇಳುಬರುತ್ತಿವೆ ಹಾಗು ಆತನ ಮಾತುಗಳನ್ನು ಎಲ್ಲರೂ ಟೀಕಿಸುವ ಮನಸ್ಸು ಮಾಡುತ್ತಿಲ್ಲ. ಇದು ಭಾರತದ ರಾಜಕಾರಣ ಹಿಡಿದಿರುವ ದುಷ್ಟಮಾರ್ಗದ ಒಂದು ಸ್ಯಾಂಪಲ್ ಅಷ್ಟೆ. ಇಂಥ ಮಾತುಗಳನ್ನು ಈ ಹಿಂದೆಯೂ ಹಲವರು ಆಡಿದ್ದಾರೆ. ಶಿವಸೇನೆಯ ಬಾಳಠಾಕ್ರೆಯಿಂದ ಹಿಡಿದು ಪ್ರವೀಣ್ ತೊಗಾಡಿಯಾವರೆಗೆ ಇಂಥ ಮಾತುಗಳನ್ನು ಆಡಿ ದಕ್ಕಿಸಿಕೊಂಡವರ ಪಟ್ಟಿಯೇ ದೊಡ್ಡದಿದೆ. `ಮನುಸ್ಮೃತಿಯನ್ನು ಪಠ್ಯದಲ್ಲಿ ಅಳವಡಿಸಬೇಕು ಎಂದು ಹೇಳುವ ನಮ್ಮವರೇ ಆದ ರಾಮಜೋಯಿಸರ ಮಾತಿನಲ್ಲೂ ಇದೇ ಕ್ರೌರ್ಯವೇ ಒಳಗುಟ್ಟಾಗಿ ಕಾಣಿಸುತ್ತದೆ.
ಡಾ.ರಾಮಮನೋಹರ ಲೋಹಿಯಾ ಅವರು ಸಕಾರಣವಾಗಿ ಪದೇ ಪದೇ ನೆನಪಾಗುತ್ತಾರೆ. ಗಾಂಧೀಜಿಯವರ ನಂತರ ದೇಶದ ರಾಜಕೀಯದಲ್ಲಿ ಒಂದು ಹೊಸ ಆದರ್ಶವನ್ನು ಹುಟ್ಟುಹಾಕಿದವರು ಲೋಹಿಯಾ. ಇವತ್ತಿನ ರಾಜಕಾರಣವು ಧರ್ಮದ ಕುತ್ತಿಗೆಗೆ ನೇಣುಬಿದ್ದಿರುವ ಸಂದರ್ಭದಲ್ಲಿ, ಹಣದ ಥೈಲಿಯಲ್ಲೇ ಉಸಿರುಗಟ್ಟಿರುವ ಸಂದರ್ಭದಲ್ಲಿ, ಜಾಗತೀಕರಣದ ಬಣ್ಣದ ಲೋಕದಲ್ಲಿ ತನ್ನನ್ನು ತಾನು ಮಾರಿಕೊಂಡಿರುವ ಸಂದರ್ಭದಲ್ಲಿ ಲೋಹಿಯಾ ನೆನಪಾಗುತ್ತಾರೆ.
ದೇಶದ ಸಾಮಾನ್ಯ ಜನರು ದಿನಕ್ಕೆ ಮೂರು ಆಣೆಯಷ್ಟು ಖರ್ಚು ಮಾಡುವ ಯೋಗ್ಯತೆ ಇಲ್ಲದಿದ್ದಾಗ ಪ್ರಧಾನ ಮಂತ್ರಿಗೆ ೨೫,೦೦೦ ರೂ. ಖರ್ಚು ಮಾಡುವುದು ಎಷ್ಟು ಸರಿ ಎಂದು ಜಗಳಕ್ಕೆ ನಿಂತವರು ಲೋಹಿಯಾ. ಈ ಲೆಕ್ಕಾಚಾರದಿಂದ ಪ್ರಧಾನಿ ಜವಹರಲಾಲ್ ನೆಹರೂ ಕಂಗೆಟ್ಟರು. ಆದರೆ ಲೋಹಿಯಾ ವಾದ ಎಷ್ಟು ಸಮರ್ಥವಾಗಿತ್ತೆಂದರೆ, ಯೋಜನಾ ಆಯೋಗ ನೀಡಿದ ಲೆಕ್ಕಾಚಾರದ ಪ್ರಕಾರ ಜನರ ತಲಾದಾಯ ೧೫ ಆಣೆ ಎಂಬುದನ್ನು ಸುಳ್ಳು ಎಂದು ನಿರೂಪಿಸಲಾಯಿತು.
ನೆಹರೂ ವಿಷಯದಲ್ಲಿ ಮಾತ್ರ ಲೋಹಿಯಾ ಹೀಗೆ ಮಾತನಾಡಿದ್ದಾರೆ ಎನ್ನುವಂತೆಯೇ ಇಲ್ಲ. ತಮ್ಮ ಅಂತಿಮ ದಿನಗಳಲ್ಲಿ ಅನಾರೋಗ್ಯಪೀಡಿತರಾದಾಗ ಲೋಹಿಯಾ ಗಣ್ಯ ವ್ಯಕ್ತಿಗಳಿಗೆ ಲಭ್ಯವಾಗುವ ಚಿಕಿತ್ಸೆಯನ್ನು ಪಡೆಯಲಿಲ್ಲ. ಸಾಮಾನ್ಯ ವ್ಯಕ್ತಿಯೊಬ್ಬನಿಗೆ ಎಂಥ ಚಿಕಿತ್ಸೆ ಲಭ್ಯವೋ ಅಷ್ಟನ್ನೇ ಪಡೆದರು. ಸರಿಯಾದ ಚಿಕಿತ್ಸೆಯಿಲ್ಲದೆ ಬಹುಬೇಗನೆ ತೀರಿ ಹೋದರು.
ಲೋಹಿಯಾ ಅವರಿಗೆ ಜವಹರಲಾಲ್ ನೆಹರೂ ಆತ್ಮೀಯ ಗೆಳೆಯರಾಗಿದ್ದರು. ಆದರೆ ನೆಹರೂ ಪ್ರಧಾನಿಯಾಗಿದ್ದಾಗ ಅವರ ದೇಶಕಟ್ಟುವ ಪರಿಯನ್ನು ಲೋಹಿಯಾ ಅವರಷ್ಟು ಟೀಕಿಸಿದವರು ಮತ್ತೊಬ್ಬರಿರಲಿಲ್ಲ. ಲೋಹಿಯಾ ನಿಜ ಅರ್ಥದಲ್ಲಿ ನೆಹರೂ ಅವರಿಗೆ ಒಂದು ವಿರೋಧಪಕ್ಷವಾಗಿದ್ದರು. ಹೀಗಾಗಿಯೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅನುಭವಿಸದಷ್ಟು ಹಿಂಸೆ, ನೋವನ್ನು ಅವರು ಸ್ವಾತಂತ್ರ್ಯೋತ್ತರದಲ್ಲಿ ಅನುಭವಿಸಬೇಕಾಯಿತು.
ಲೋಹಿಯಾ ಪ್ರತಿಪಾದಿಸಿದ್ದು ಸಮಾಜವಾದ. ಅವರಿಗೆ ಬಂಡವಾಳಶಾಹಿ ವ್ಯವಸ್ಥೆ ಹಾಗು ಮಾರ್ಕಿಸಂ ಎರಡೂ ಏಕಕಾಲಕ್ಕೆ ಅಪಥ್ಯವಾಗಿತ್ತು. ಐರೋಪ್ಯ ಸಮುದಾಯ ಏಷಿಯಾ ವಿರುದ್ಧ ಬಳಸುತ್ತಿರುವ ಕಡೆಯ ಅಸ್ತ್ರವೇ ಮಾರ್ಕಿಸಂ ಎಂದು ಅವರು ಭಾವಿಸಿದ್ದರು. ಭಾರತದ ಸಮಾಜದ ಸಂರಚನೆಯು ವರ್ಗದಿಂದಾಗಿಲ್ಲ, ಜಾತಿಯಿಂದಾಗಿದೆ ಎಂದು ಅವರು ನಂಬಿದ್ದರು, ಹಾಗೆಯೇ ಪ್ರತಿಪಾದಿಸಿದ್ದರು. ಭಾರತದ ಪ್ರಗತಿಗೆ ಜಾತಿಯೇ ಬಹುದೊಡ್ಡ ಅಡ್ಡಿ ಎಂದು ಅವರು ಸರಿಯಾಗಿಯೇ ಗುರುತಿಸಿದ್ದರು.
`ಜಾತಿ ಅವಕಾಶಗಳನ್ನು ಮಿತಿಗೊಳಿಸುತ್ತದೆ. ಅವಕಾಶಗಳ ಮಿತಿಯು ವ್ಯಕ್ತಿಯ ಸಾಮರ್ಥ್ಯವನ್ನು ಹಾಳುಗೆಡವುತ್ತದೆ. ಸಾಮರ್ಥ್ಯದ ಕೊರತೆಯು ಮತ್ತೆ ಅವಕಾಶಗಳನ್ನು ಇಲ್ಲವಾಗಿಸುತ್ತದೆ ಎಂದ ಲೋಹಿಯಾ `ರೋಟಿ ಮತ್ತು ಬೇಟಿ ಎಂಬ ಘೋಷಣೆಯನ್ನು ಹೊರಡಿಸಿದ್ದರು. ರೋಟಿ ಎಂದರೆ ಎಲ್ಲ ಜಾತಿಯವರು ಒಟ್ಟಿಗೆ ಕುಳಿತು ಊಟ ಮಾಡುವಂಥ ವ್ಯವಸ್ಥೆ ನಿರ್ಮಾಣವಾಗುವುದು ಹಾಗು ಬೇಟಿ ಎಂದರೆ ಎಲ್ಲ ಜಾತಿಯವರು ಪರಸ್ಪರ ವೈವಾಹಿಕ ಸಂಬಂಧಗಳನ್ನು ಬೆಳೆಸುವುದು.
ದೇಶದ ನಾಗರಿಕರು ತಮ್ಮನ್ನು ತಾವು ಭಾರತೀಯರು ಎಂದು ಗುರುತಿಸಿಕೊಳ್ಳುವುದಕ್ಕಿಂತ ಹೆಚ್ಚು ಇಂಥ ಜಾತಿಯವರು ಎಂದು ಗುರುತಿಸಿಕೊಳ್ಳಲು ಇಷ್ಟ ಪಡುತ್ತಾರೆ ಎಂಬುದನ್ನು ಲೋಹಿಯಾ ಗಮನಿಸಿದ್ದರು. ಜಾತಿಯ ಕೊಳಕನ್ನು ನಿವಾರಿಸುವ ಉದ್ದೇಶದಿಂದಲೇ ಲೋಹಿಯಾ ತಮ್ಮ ಸೋಷಿಯಲಿಸ್ಟ್ ಪಕ್ಷದಲ್ಲಿ ಕೆಳ ಜಾತಿಗಳ ನಾಯಕರಿಗೆ ಅವಕಾಶ ನೀಡಿದ್ದರು. ತಮ್ಮ ಪಕ್ಷದಿಂದ ಸ್ಪರ್ಧಿಸಲು ಈ ಸಮುದಾಯಗಳ ಅಭ್ಯರ್ಥಿಗಳಿಗೇ ಹೆಚ್ಚು ಟಿಕೆಟ್ ನೀಡಿದ್ದರು. ದೇಶವನ್ನು ಪ್ರಬಲವಾಗಿ ಕಟ್ಟಬೇಕೆಂದರೆ ಈ ಕಟ್ಟುವ ಕಾರ್ಯದಲ್ಲಿ ಎಲ್ಲ ಜಾತಿಯ ಜನರೂ ಭಾಗವಹಿಸಬೇಕು ಎಂದು ಅವರು ಬಲವಾಗಿ ನಂಬಿದ್ದರು.
ಲೋಹಿಯಾ ಇಂಗ್ಲಿಷ್ ಬಳಕೆಯನ್ನು ತೀವ್ರವಾಗಿ ವಿರೋಧಿಸಿದ್ದರು. ಹಿಂದಿ ಭಾಷಿಕ ಪ್ರದೇಶಗಳಲ್ಲಿ ಹಿಂದಿ ಹಾಗು ಇತರ ಭಾಷೆಗಳು ಆಡುಮಾತಿರುವ ಪ್ರದೇಶಗಳಲ್ಲಿ ಅದೇ ಭಾಷೆಗಳನ್ನು ಬೆಳೆಸಬೇಕು ಎಂದು ಅವರು ಹೇಳುತ್ತಿದ್ದರು. ಇಂಗ್ಲಿಷ್‌ನಿಂದಾಗಿ ಶಿಕ್ಷಿತರು ಹಾಗು ನಿರಕ್ಷರಿಗಳ ನಡುವೆ ಕಂದರ ಉಂಟಾಗುತ್ತದೆ. ಇದು ಮೇಲರಿಮೆ, ಕೀಳರಿಮೆಗಳಿಗೆ ದಾರಿ ಮಾಡಿಕೊಡುತ್ತದೆ. ಈ ಹಿನ್ನೆಲೆಯಲ್ಲಿ ಪ್ರಾದೇಶಿಕ ಭಾಷೆಗಳನ್ನೇ ಬೆಳಸಬೇಕು, ಬಳಸಬೇಕು ಎಂದು ಲೋಹಿಯಾ ಅಭಿಪ್ರಾಯಪಡುತ್ತಿದ್ದರು.
ದೇಶ ಕಟ್ಟುವ ನೆಹರೂ ಮಾದರಿಯನ್ನು ಲೋಹಿಯಾ ಪ್ರಬಲವಾಗಿ ವಿರೋಧಿಸುತ್ತಿದ್ದರು. ದೇಶಕಟ್ಟುವ ಕೆಲಸದಲ್ಲಿ ಜನಸಾಮಾನ್ಯರೂ ಪಾಲ್ಗೊಳ್ಳುವಂತಾಗಬೇಕು ಎಂದು ಅವರು ಭಾವಿಸಿದ್ದರು. ತಮ್ಮ ನೆರೆಯ ರಸ್ತೆ, ಬಾವಿ, ಕಾಲುವೆಗಳನ್ನು ನಿರ್ಮಿಸುವ ಕೆಲಸಗಳಲ್ಲಿ ಜನರೇ ತೊಡಗಿಕೊಳ್ಳುವಂತಾಗಬೇಕು ಎಂದು ಅವರು ಹೇಳುತ್ತಿದ್ದರು. ತಮ್ಮ ಈ ಆಲೋಚನೆಯನ್ನು ಅವರು ಕ್ರಿಯೆಗೂ ಇಳಿಸಿ ಪನಿಯಾರಿ ಎಂಬ ನದಿಗೆ ಅಣೆಕಟ್ಟು ಕೆಲಸವನ್ನು ಜನರೊಂದಿಗೆ ಪ್ರಾರಂಭಿಸಿದರು. ಅಣೆಕಟ್ಟು ಇವತ್ತಿಗೂ ಲೋಹಿಯಾ ಸಾಗರ್ ಡ್ಯಾಮ್ ಎಂದೇ ಹೆಸರಾಗಿದೆ. ಕ್ರಿಯಾತ್ಮಕ ಚಟುವಟಿಕೆಗಳಿಲ್ಲ ಸತ್ಯಾಗ್ರಹ, ಕ್ರಿಯಾಪದವಿಲ್ಲದ ವಾಕ್ಯದಂತೆ ಎಂದು ಲೋಹಿಯಾ ಈ ಹಿನ್ನೆಲೆಯಲ್ಲೇ ಹೇಳಿದ್ದರು.
ಲೋಹಿಯಾ ತಾವು ಬದುಕಿದ್ದ ಕಾಲಘಟ್ಟದ ಎಲ್ಲ ಸಮಸ್ಯೆಗಳನ್ನೂ ಎದುರಿಸಿದ್ದರು, ಅವುಗಳಿಗೆ ಸಮಾಜವಾದಿ ನೆಲೆಯಲ್ಲಿ ಉತ್ತರ ಕಂಡುಕೊಳ್ಳಲು ಯತ್ನಿಸಿದ್ದರು. ಆಶ್ಚರ್ಯವೆಂದರೆ ಅವರು ಗತಿಸಿ ೪೨ ವರ್ಷಗಳು ಕಳೆಯುತ್ತ ಬಂದರೂ ಇವತ್ತಿನ ಎಲ್ಲ ಸಮಸ್ಯೆಗಳಿಗೂ ಲೋಹಿಯಾ ಅವರ ಮಾತುಗಳಲ್ಲಿ ಉತ್ತರವಿದೆ.
ಜಾಗತಿಕ ಸಮುದಾಯ ಆರ್ಥಿಕ ಹಿಂಜರಿತದ ಸಂಕಷ್ಟದಲ್ಲಿ ಮುಳುಗಿರುವಾಗ, ಭಾರತದ ರಾಜಕಾರಣ ಧರ್ಮ-ಜಾತಿಯ ನೆಲೆಯಲ್ಲಿ ಛಿದ್ರಗೊಂಡಿರುವಾಗ ಲೋಹಿಯಾ ಅವರಲ್ಲಿ ಉತ್ತರ ಹುಡುಕಿಕೊಳ್ಳುವ ಪ್ರಯತ್ನಗಳಾದರೂ ಆಗಬಾರದೆ ಎಂಬ ಆಶೆ ಲೋಹಿಯಾವಾದಿಗಳದ್ದು. ಆದರೆ ಲೋಹಿಯಾವಾದಿಗಳೇ ಅಧಿಕಾರ ರಾಜಕಾರಣದ ಬೆನ್ನು ಬಿದ್ದು ಭ್ರಷ್ಟರಾಗಿರುವ, ಕೋಮುವಾದಿಗಳ ತೆಕ್ಕೆಗೆ ಸರಿದಿರುವ ಈ ಕಾಲದಲ್ಲಿ ಹೊಸ ಪೀಳಿಗೆಯೇ `ಸಮಾಜವಾದದ ಕನಸುಗಳನ್ನು ನನಸಾಗಿಸಬಲ್ಲದೇನೋ?
ಮಾರ್ಚ್ ೨೩ ಲೋಹಿಯಾ ಜನ್ಮದಿನ. ಇಡೀ ಜಗತ್ತೇ ಸಂಕಟದಲ್ಲಿ ಮುಳುಗಿರುವಾಗ ಲೋಹಿಯಾ ಸಕಾರಣವಾಗಿ ನೆನಪಾಗುತ್ತಾರೆ. ಎಲ್ಲ ಪ್ರಶ್ನೆಗಳಿಗೆ ಲೋಹಿಯಾ ಉತ್ತರವಾಗಬಲ್ಲರಾದರೂ ಆ ಉತ್ತರಗಳಾದರೂ ಯಾರಿಗೆ ಬೇಕಿದೆ?
ಮುಸ್ಲಿಮರ ವಿರುದ್ಧವೋ, ಕ್ರಿಶ್ಚಿಯನ್ನರ ವಿರುದ್ಧವೋ ದ್ವೇಷಕಾರುವ ಒಂದು ಭಾಷಣ ಮಾಡಿ ರಾತ್ರೋರಾತ್ರಿ ಒಬ್ಬ ರಾಜಕಾರಣಿ ಸೃಷ್ಟಿಯಾಗುವ ಈ ಕಾಲದಲ್ಲಿ ಲೋಹಿಯಾ ಕಾಣಿಸಿದ ಬೆಳಕಿನ ದಾರಿ ಯಾರಿಗೆ ಬೇಕಾಗಿದೆ?
Monday, March 16, 2009
Wednesday, March 11, 2009
ಸಮಾನತೆಯ ಬೆಳಕಿಗಾಗಿ ಹಂಬಲಿಸುತ್ತ...
ಮಠಾಧೀಶರು ಸಮಾಜದ ಶತ್ರುಗಳೇ? ಎಂಬ ನನ್ನ ಲೇಖನಕ್ಕೆ ಅಮೆರಿಕದ ರವಿಕೃಷ್ಣಾರೆಡ್ಡಿಯವರು ಪ್ರತಿಕ್ರಿಯಿಸಿ ಶಿಕ್ಷಣದ ರಾಷ್ಟ್ರೀಕರಣ ಕುರಿತಂತೆ ವಿಚಾರ ಸಂಕಿರಣ ಏರ್ಪಡಿಸಲು ಸಾಧ್ಯವೇ, ನೋಡಿ ಎಂದು ಸೂಚಿಸಿದ್ದರು. ಈ ಬಗ್ಗೆ ಗೆಳೆಯರ ಜತೆ ಮಾತನಾಡಿದೆ. ಅವರೂ ಆಸಕ್ತಿ ತೋರಿಸಿದರು.
ಏ.೫ರಂದು `ಸಾಮಾಜಿಕ ನ್ಯಾಯ ಮತ್ತು ಶಿಕ್ಷಣ ಎಂಬ ವಿಷಯವನ್ನು ಪ್ರಧಾನವಾಗಿಟ್ಟುಕೊಂಡು ವಿಚಾರಸಂಕಿರಣ ಆಯೋಜಿಸಿದ್ದೇವೆ. ಇದು ಇಡೀ ಒಂದು ದಿನದ ಕಾರ್ಯಕ್ರಮ. ಶಿಕ್ಷಣ ತಜ್ಞರು, ಗಣ್ಯರು, ಸಾಹಿತಿಗಳು ಈ ಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮವನ್ನು ಸಂಯೋಜಿಸುತ್ತಿರುವುದು `ಸಂವಹನ ಸಂಘಟನೆ. ಬಹುತೇಕ ಮೀಡಿಯಾ ಮಿತ್ರರೇ ತಮ್ಮೊಳಗಿನ ಸಂವಹನಕ್ಕಾಗಿ ಆರಂಭಿಸಿದ ಸಂಘಟನೆ ಇದು. ಸಂಘಟನೆಯಲ್ಲಿ ಅಧ್ಯಕ್ಷರು, ಕಾರ್ಯದರ್ಶಿ, ಖಜಾಂಚಿ ಇತ್ಯಾದಿ ಸಾಂಪ್ರದಾಯಿಕ ಹುದ್ದೆಗಳು ಇರುವುದಿಲ್ಲ. ಇದರಲ್ಲಿ ತೊಡಗಿಸಿಕೊಂಡವರ ಐಡೆಂಟಿಟಿಗಳೂ ಅನಗತ್ಯ ಎಂದೇ ಭಾವಿಸಿದ್ದೇವೆ.
ಸಂವಹನದ ಚಟುವಟಿಕೆಗಳಿಗೆ ಸಂಬಂಧಿಸಿದ ಎಲ್ಲ ವಿವರಗಳು ಸಂವಹನ ಬ್ಲಾಗ್‌ನಲ್ಲಿ ಲಭ್ಯ. ನಾವು ಎತ್ತಿಕೊಂಡಿರುವ ವಿಷಯದ ಕುರಿತೂ ಇಲ್ಲಿ ಚರ್ಚೆ ನಡೆಯುತ್ತದೆ. ಆಸಕ್ತರು ಇದರಲ್ಲಿ ಪಾಲ್ಗೊಳ್ಳಬಹುದು. `ಸಂವಹನದಲ್ಲಿ ತೊಡಗಿಕೊಳ್ಳಬಯಸುವವರಿಗೂ ಸ್ವಾಗತ. ಸಮಾನತೆ ಹಾಗು ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿರುವ ಎಲ್ಲರೂ ನಮ್ಮೊಂದಿಗೆ ಕೈಜೋಡಿಸಬಹುದು. ಇದಕ್ಕಾಗಿ samvahanablr@gmail.com ಸಂಪರ್ಕಿಸಬಹುದು.

Friday, March 6, 2009
ಮಠಗಳೇ, ಮಠಗಳಿಂದ, ಮಠಗಳಿಗಾಗಿ...
ಮಠಾಧೀಶರ ಕುರಿತಾದ ಚರ್ಚೆ ಅವಧಿಯಲ್ಲಿ ಮುಂದುವರೆದಿದೆ. ಈ ನಡುವೆ ಮೈಸೂರಿನ ಗೆಳೆಯ ಹೆಗ್ಗೆರೆ ರೇಣುಕಾರಾಧ್ಯ ತಮ್ಮ ಮೈಸೂರ್ ಮೇಲ್‌ನಲ್ಲಿ ಈ ಚರ್ಚೆಯನ್ನು ಮುಂದುವರೆಸಿದ್ದಾರೆ. ಬಜೆಟ್‌ನಲ್ಲಿ ಈ ಬಾರಿಯೂ ಮಠ ಮಾನ್ಯಗಳಿಗೆ ಹಣ ಸುರಿದಿರುವುದನ್ನು ಅವರು ತೀಕ್ಷ್ಣವಾಗಿ ವಿಶ್ಲೇಷಿಸಿದ್ದಾರೆ. ಓವರ್ ಟು ರೇಣುಕಾರಾಧ್ಯ...
***
ನಮ್ಮ ಪವಿತ್ರ ಸಂವಿಧಾನದಲ್ಲಿ ಉಲ್ಲೇಖಿಸಿರುವ ಸರಕಾರದ ಕರ್ತವ್ಯಗಳನ್ನು ಮಠ ಮಾನ್ಯಗಳ ಪದತಲದಲ್ಲಿ ಅಡವಿಟ್ಟು ಉದ್ದುದ್ದ ಮಲಗಿ ಪ್ರಜಾತಂತ್ರ ಎಂದರೆ, ಮಠಗಳಿಂದ, ಮಠಗಳಿಗಾಗಿ, ಮಠಗಳಿಗೋಸ್ಕರ ಎಂಬ ನೂತನ ಘೋಷಣೆ ಮಾಡುವುದನ್ನು ರಾಜ್ಯದ ಬಿಜೆಪಿ ಸರಕಾರ ಬಾಕಿ ಉಳಿಸಿಕೊಂಡಿದೆ.ಇನ್ನಾರು ತಿಂಗಳಲ್ಲಿ ಅದು ಆಗಬಹುದು ಯಾರಿಗೆ ಗೊತ್ತು?
ಈ ಕೆಳಗಿನ ಎರಡು ಘಟನೆಗಳನ್ನು ಓದಿ.
ನಿಮ್ಮ ೧೨ ವರ್ಷದ ಹುಡುಗನೊಬ್ಬ ತನ್ನದೇ ಊರಿನ ದಲಿತರ ಕೇರಿಯ ೬೦ ವರ್ಷದ ವ್ಯಕ್ತಿಯೊಬ್ಬನನ್ನು ಲೋ ಮಾರ, ಲೋ ಸಿದ್ಧ ಎಂದು ಏಕವಚನದಲ್ಲಿ ಅತ್ಯಂತ ವ್ಯಂಗ್ಯವಾಗಿ ಮಾತನಾಡಿಸುತ್ತಾನೆ. ಆದರೆ, ಆ ಹಿರಿಯ ವ್ಯಕ್ತಿಯನ್ನು ಹಾಗೆ ಏಕವಚನದಲ್ಲಿ ಸಂಬೋಧಿಸಬಾರದು ಎಂದು ನೀವು ಎಲ್ಲೂ ನಿಮ್ಮ ಮಕ್ಕಳಿಗೆ ಹೇಳಿ ಕೊಡಲಿಲ್ಲ. ಅದನ್ನೇ ಈ ನಾಡಿನ ಸವರ್ಣೀಯರು ಸಂಸ್ಕಾರವೆಂಬಂತೆ ನಡೆದುಕೊಂಡು ಬಂದರು. ನಿಮ್ಮ ಎದೆ ಮುಟ್ಟಿಕೊಂಡು ಹೇಳಿ, ಲೋ ಮಾರ, ಲೋ ಸಿದ್ಧ, ಲೋ ಕೆಂಚ ಎಂದು ಆ ದಲಿತ ವರ್ಗದ ಹಿರೀಕರನ್ನು ಕರೆವ ನಿಮ್ಮ ಮಕ್ಕಳಿಗೆ ಅದು ತಪ್ಪು ಎಂದು ಎಂದಾದರೂ ಹೇಳಿಕೊಟ್ಟಿದ್ದೀರಾ..? ಎಲ್ಲ ಜಾತಿಯವರನ್ನು ಒಳಗೊಂಡ ಅನುಭವ ಮಂಟಪ ಕಟ್ಟಿದ ಆ ಬಸವಣ್ಣ ಎದುರಿಗೆ ಬಂದವರು ಯಾರೇ ಆದರೂ, ಶರಣು ಎಂದರೆ, ಶರಣು ಶರಣಾರ್ಥಿ ಎಂದು ಎರಡು ಬಾರಿ ಹೇಳುತ್ತಿದ್ದರಂತೆ. ಅಂತಹ ಬಸವಣ್ಣನವರ ಲಿಂಗಾಯಿತ ಧರ್ಮವನ್ನು ನೀವು ಜಾತಿ ಎಂಬ ಪಟ್ಟ ಕಟ್ಟಿ ಕರ್ನಾಟಕದೊಳಕ್ಕೆ ಕಟ್ಟಿ ಹಾಕಿದಿರಿ. ಲಿಂಗಾಯಿತ ಅಥವಾ ವೀರಶೈವ ಎನ್ನುವುದನ್ನು ಎಂದೂ ಧರ್ಮವನ್ನಾಗಿಸಲು ನೀವು ಬಿಡಲೇ ಇಲ್ಲ. ಹಾಗೊಂದು ಪಕ್ಷ ಬಸವಣ್ಣನ ನಡೆಗಳು ನಿಮ್ಮ ಎದೆಯೊಳಗೆ ಮೂಡಿದ್ದರೇ ಅದು ಇವತ್ತು ವಿಶ್ವಧರ್ಮವಾಗಿರುತ್ತಿತ್ತು
೧೯೯೬ರಲ್ಲಿ ನಂಜನಗೂಡಿನ ಸಮಾರಂಭವೊಂದರಲ್ಲಿ ಸಂವೇದನಾಶೀಲ ರಾಜಕಾರಣಿ ವಿ.ಶ್ರೀನಿವಾಸ ಪ್ರಸಾದ್ ಹೇಳಿದ ಮಾತುಗಳಿವು. ಬಹುಶಃ ಅವತ್ತಿನ ಸಮಾರಂಭದಲ್ಲಿ ಸುಮಾರು ೧೦ ಸಾವಿರಕ್ಕೂ ಹೆಚ್ಚು ಮಂದಿ ನೆರೆದಿದ್ದರು. ಅದರಲ್ಲಿ ಸವರ್ಣೀಯರೇ ಹೆಚ್ಚಿದ್ದರು. ಎಲ್ಲದಕ್ಕಿಂತ ಮುಖ್ಯವಾಗಿ ಕರಾಳ ನೆನಪು ಎನಿಸಿದ ಬದನವಾಳು ಘಟನೆ ನಡೆದು ಮೂರು ವರ್ಷ ಕಳೆದಿತ್ತು. ಹಗೆಯ ಹಸಿ ಹಸಿ ವಾಸನೆ ಅಲ್ಲಲ್ಲಿ ಉಳಿದಿತ್ತು. ಅಂತಹ ಸಂದರ್ಭದಲ್ಲಿ ಶ್ರೀನಿವಾಸ್ ಪ್ರಸಾದ್ ಬಸವಣ್ಣನವರ ವಿಚಾರಗಳನ್ನು ಪ್ರಸ್ತಾಪ ಮಾಡುತ್ತಲೇ ದಲಿತರನ್ನು ಕಡೆಗಣನೆಯಿಂದ ನೋಡುವವರ ಆತ್ಮಭಿಮಾನವನ್ನು ಪ್ರಶ್ನೆ ಮಾಡುತ್ತಾ ಹೋದರು. ಅದು ಇಂದಿಗೂ ನೆನಪಿನಲ್ಲಿ ಉಳಿಯುವ ಭಾಷಣ.
***
ಮೈಸೂರಿನ ಪ್ರಸಿದ್ಧ ಮಠವೊಂದಕ್ಕೆ ಹೋದಾಗ ಅಲ್ಲಿ ಸುಮಾರು ೧೦೦ ಕ್ಕೂ ಹೆಚ್ಚು ಮಂದಿ ಸ್ವಾಮಿಗಳನ್ನು ನೋಡಲು ಕಾಯುತ್ತಿದ್ದಾರೆ. ಮಠದ ಸಹಾಯಕರು ಒಬ್ಬೊಬ್ಬರಂತೆ ಎಲ್ಲರನ್ನು ಒಳಬಿಡುತ್ತಿದ್ದಾರೆ. ಇದು ಮಧ್ಯಾಹ್ನ ಮೂರು ಗಂಟೆಯವರೆಗೆ ನಡೆಯುತ್ತಲೇ ಇತ್ತು. ಹಾಗೆ ಜನರು ಸ್ವಾಮಿಗಳನ್ನು ನೋಡಲು ಬರುತ್ತಲೇ ಇದ್ದರು. ಬಂದವರಲ್ಲಿ ಕೆಲವರು ಅವರ ಮಕ್ಕಳಿಗೆ ಮಠದ ಶಾಲೆಯಲ್ಲಿ ಸೀಟು ಕೊಡಿಸಲು, ಕೆಲಸ ಕೇಳಲು ಬಂದಿದ್ದರು. ಅವರವರ ಭಕುತಿಗೆ ತಕ್ಕಂತೆ ಸ್ವಾಮೀಜಿಗಳಿಂದ ಆಶೀರ್ವಾದವು ದೊರೆಯುತ್ತಿತ್ತು. ಇದನ್ನು ನೋಡಿದಾಗ, ಸರಕಾರದ ಆಡಳಿತ ಯಂತ್ರವೊಂದು ಮಾಡಬೇಕಾದ ಕೆಲಸವನ್ನು ಸ್ವಾಮೀಜಿಯವರ ಮಾಡುತ್ತಿದ್ದಾರೆ ಎಂದು ಮೇಲ್ನೋಟಕ್ಕೆ ಅನ್ನಿಸದೆ ಇರಲಾರದು. ಆದರೆ, ಅಲ್ಲಿ ಆಗಿರುವುದೇನು ಎಂಬುದನ್ನು ಹುಡುಕುತ್ತಾ ಹೋದರೆ, ಬಹುಶಃ ಅದು ಈ ನಾಡಿನ ಪ್ರಜಾತಂತ್ರ ವ್ಯವಸ್ಥೆಗೆ ಬಂದಿರುವ ಗಂಡಾಂತಾರ ಎನ್ನುವುದು ನೀವು ಸೂಕ್ಷ್ಮ ಮತಿಗಳಾಗಿದ್ದರೆ ತಿಳಿದು ಹೋಗುತ್ತದೆ.
***
ಮೇಲಿನ ಎರಡು ವಿಚಾರಗಳು ಬೇರೆ ಬೇರೆಯಾಗಿದ್ದರೂ, ಸಾರಾಂಶ ಒಂದೇ. ಎಲ್ಲರಿಗೂ ಶಿಕ್ಷಣ, ಆರೋಗ್ಯ, ವಸತಿ ಮತ್ತು ಬದುಕಲು ಆಹಾರ ನೀಡಬೇಕೆಂಬುದು ನಮ್ಮ ಪ್ರಜಾತಂತ್ರ ವ್ಯವಸ್ಥೆಯ ಆಶಯಗಳಲ್ಲಿ ಪ್ರಮುಖ. ಆದರೆ, ಶಿಕ್ಷಣ ಮತ್ತು ಆರೋಗ್ಯ ಮಠ ಮಾನ್ಯಗಳು ಮತ್ತು ಹಣವಂತರ ಕೈಗೆ ಸಿಲುಕಿ ಹೋಗಿದೆ. ಈ ನಾಡಿನ ದಲಿತನೊಬ್ಬ ಸುಲಭವಾಗಿ ಶಿಕ್ಷಣ ಪಡೆಯಲು ಇನ್ನೂ ಸಾಧ್ಯವಿಲ್ಲ ಎಂಬಂತಹ ಸ್ಥಿತಿ ನಿರ್ಮಾಣವಾಗುತ್ತಿದೆ. ಅಂತಹದರಲ್ಲಿ ಎಲ್ಲ ಜಾತಿ ಜನಾಂಗದ ಪ್ರಜೆಗಳಿಂದ ಆರಿಸಿದ ಹೋದ ನೀವು ಸಮಾನತೆಯ ತತ್ವ ಬೋಧಿಸುವ ಸಂವಿಧಾನದ ನೀತಿ ನಿಯಮಾವಳಿಗಳನ್ನು ಹೇಗೆ ಪಾಲಿಸುತ್ತಿದ್ದೀರಿ? ಆಯವ್ಯಯದಲ್ಲಿ ಮಠ ಮಾನ್ಯಗಳೇ ತಮ್ಮ ಆಯ್ಕೆಗೆ ಕಾರಣ ಎಂಬಂತೆ ಮುಖ್ಯಮಂತ್ರಿ ಯಡಿಯೂರಪ್ಪ ತೆರಿಗೆ ಹಣವನ್ನು ಪುಕ್ಕಟ್ಟೆ ಹಂಚಿದ್ದಾರೆ. ಹಾಗಾದರೆ, ಮತದಾರ ಮಹಾಪ್ರಭು ಎಂಬ ಮಾತು ಈ ರಾಜಕಾರಣಿಗಳಿಗೆ ಇಷ್ಟು ಬೇಗ ಮರೆತು ಹೋಯಿತೇ? ಅಥವಾ ಮರೆಗುಳಿಗಳು ಮಾತ್ರ ರಾಜಕಾರಣಿಗಳಾಗಲು ಸಾಧ್ಯವೇ?
***
ಮಠಗಳ ಬಗ್ಗೆ ಹಿರಿಯ ಸಾಹಿತಿ ಡಾ.ಎಲ್.ಬಸವರಾಜು ಅವರು ಆಡಿದ ಮಾತುಗಳು ಎಷ್ಟು ಪ್ರಸ್ತುತವಾಗಿದೆ ಎಂಬುದು ಈ ಬಾರಿ ಆಯವ್ಯಯವನ್ನು ನೋಡಿದರೆ ತಿಳಿದು ಹೋಗುತ್ತದೆ. ಯಡಿಯೂರಪ್ಪ ಅದರಲ್ಲಿಯೂ ಜಾಣರು, ತಾವು ಯಾವ ಜಾತಿ ಜನಾಂಗವನ್ನು ಎದುರು ಹಾಕಿಕೊಳ್ಳದೆ ಎಲ್ಲರಿಗೂ ಹಣವನ್ನು ಕೋಟಿಗಳ ಲೆಕ್ಕದಲ್ಲಿ ಹಂಚಿದ್ದಾರೆ. ಮಠಗಳು ತೃಪ್ತಿಯಾದರೆ, ಇಡಿ ನಾಡಿನ ಜನತೆ ತೃಪ್ತರಾದಂತೆ ಎಂಬುದು ಅವರ ಸಾದಾ ಲೆಕ್ಕಾಚಾರ. ಆದರೆ, ಅವರಿಗೆ ತಿಳಿಯದೇ ಇರುವ ಒಂದು ಸತ್ಯವೆಂದರೆ ಹೀಗೆ ಹಣ ಪಡೆಯುವ ಮಠಗಳ್ಯಾವುವೂ ನಾಡಿನ ಜನತೆಗೆ ಪುಕ್ಕಟ್ಟೆಯಾಗಿ ಸೇವೆ ಮಾಡುವುದಿಲ್ಲ. ಅಥವಾ ಜನಸೇವೆ ಎಂಬುದನ್ನು ಎಂದೋ ಮರೆತು ಹೋಗಿವೆ. ಅಷ್ಟಕ್ಕೂ ಮಠಗಳ ಹಾಗೂ ಹಣವಂತರ ಸುರ್ಪದಿಯಲ್ಲಿಯೇ ಮೆಡಿಕಲ್ ಕಾಲೇಜುಗಳು, ಎಂಜನಿಯರಿಂಗ್ ಕಾಲೇಜುಗಳು ಇರಬೇಕು ಯಾಕೆ? ಪ್ರಜಾತಂತ್ರ ವ್ಯವಸ್ಥೆಯಲ್ಲಿನ ಸರಕಾರದ ಕರ್ತವ್ಯಗಳಾದರೂ ಏನು? ಈ ಪ್ರಶ್ನೆ ಕೇಳುವ ಧ್ವನಿಯನ್ನು ನಮ್ಮ ನಾಡಿನ ಚಳವಳಿಗಳು ಕಳೆದುಕೊಂಡಿವೆ ಅಥವಾ ಚದುರಿ ಹೋಗಿವೆ..!
***
ಎಲ್ಲವನ್ನು ಸರಕಾರವೇ ಮಾಡಲು ಸಾಧ್ಯವಿಲ್ಲ, ಈ ಮಠ ಮಾನ್ಯಗಳು ಇರುವುದರಿಂದಲೇ ನಾವಿಷ್ಟು ಸುಭಿಕ್ಷವಾಗಿದ್ದೇವೆ. ಹೀಗೆಂದು ಭಾಷಣ ಬಿಗಿಯುತ್ತಲೇ ದುಂಡಗಾಗುವ ರಾಜಕಾರಣಿಗಳು ಪ್ರಜಾತಂತ್ರ ವ್ಯವಸ್ಥೆಯ ಕತ್ತು ಹಿಸುಕುವ ಕೆಲಸವನ್ನು ಮಾಡುತ್ತಿದ್ದಾರೆ. ಅದನ್ನು ಬಿಜೆಪಿ ಇನ್ನಷ್ಟು ಪ್ರಭಾವಶಾಲಿಯಾಗಿ ತೋರಿಸುತ್ತಿದೆಯಷ್ಟೇ. ವಿಷಾದವೆಂದರೆ ಕರ್ನಾಟಕದಲ್ಲಿ ಜಾತಿಯ ಮಠಗಳು ಶ್ರೀಮಂತ. ಆ ಜಾತಿಯ ಜನರು ಮಾತ್ರ ಬಡವರು. ವಿಷಯವನ್ನು ಇನ್ನೂ ನೇರವಾಗಿ ಹೇಳುವುದಾದರೆ, ನಾಡನ್ನು ಆಳುತ್ತಿರುವುದು ಪ್ರಬಲ ಜಾತಿಯ ಮಠಗಳು, ನಮ್ಮದು ಪ್ರಜಾತಂತ್ರ ವ್ಯವಸ್ಥೆಯ ಸರಕಾರವಲ್ಲ. ಇದು ನಿಜವಾದ ವೈರುಧ್ಯ.
***
ಬಸವಣ್ಣನವರು ಅನುಭವ ಮಂಟಪ ಕಟ್ಟಿದಾಗ ಅಲ್ಲಿ ಜಾತಿಯ ಗೌಜುಗಳಿರಲಿಲ್ಲ, ಮಾದಾರ ಚೆನ್ನಯ್ಯ, ಡೋಹಾರ ಕಕ್ಕಯ್ಯ ಹೀಗೆ ಎಲ್ಲರು ಶರಣರಾಗಿದ್ದರು. ಆದರೆ, ಆ ಶರಣ ಎಂಬ ಸಂಸ್ಕೃತಿ ಒಂದೊಂದು ಮಠದ ವ್ಯಾಪ್ತಿಗೆ ಸೀಮಿತವಾಗಿ ಸರಕಾರವನ್ನು ಶರಣು ಮಾಡಿಸಿಕೊಂಡಿದೆ. ಲಿಂಗಾಯಿತರು ಎಂಬ ಕಾರಣಕ್ಕಾಗಿ ಯಡಿಯೂರಪ್ಪನವರ ಆಪ್ತ ವ್ಯಾಪ್ತಿಯ ಅಧಿಕಾರಿಗಳೆಲ್ಲಾ ಅದೇ ಜಾತಿಯವರಾಗಿರುತ್ತಾರೆ. ದೇಶಪ್ರೇಮ ಹೇಳುವ ಬಿಜೆಪಿಯವರು ಜಾತಿ ಮೀರಿದ ರಾಜಕಾರಣವನ್ನು ಮಾಡಿ ತೋರಿಸಬಹುದಿತ್ತು. ಅದಕ್ಕೊಂದು ಸದಾವಕಾಶವೂ ಇತ್ತು. ಆದರೆ, ಅವರೂ ಮಾಡಿದ್ದು ಕಾಂಗ್ರೆಸ್ ಹಾಗೂ ಜನತಾದಳಗಳ ಕೆಲಸವನ್ನೆ.
ಈ ಹಿಂದೆ ಕಾಂಗ್ರೆಸ್ ಹಾಗೂ ದಳ ಮಠ ಮಾನ್ಯಗಳನ್ನು ಹಚ್ಚಿಕೊಂಡಿದ್ದವಾದರೂ, ನೆಚ್ಚಿಕೊಂಡಿರಲಿಲ್ಲ. ಹೀಗೆ ಮನಸೋ ಇಚ್ಛೆ ಬೊಕ್ಕಸದ ಹಣವನ್ನು ಧಾರೆಯೆರದಿರಲಿಲ್ಲ. ಯಡಿಯೂರಪ್ಪನವರು ಮುಂದಿನ ದಿನಗಳಲ್ಲಿ ಮಠ, ಮಂದಿರಗಳನ್ನು ಇನ್ನಷ್ಟು ಉದ್ಧಾರ ಮಾಡುವ ಕಾರ್ಯಕ್ರಮಗಳನ್ನು ಘೋಷಿಸಿದ್ದಾರೆ. ಅದು ಅವರ ಲೋಕಸಭೆ ಎಲೆಕ್ಷನ್ ಲೆಕ್ಕಾಚಾರ ಆಗಿರಬಹುದು. ಆದರೆ, ಮುಂದೊಂದು ದಿನ ಇದೇ ಮಠಗಳ ಯಜಮಾನರು ಪಾಳೆಗಾರರಂತೆ ನಾಡನ್ನು ಆಳುವಾಗ ಪರಿತಪಿಸುವ ಜನ ಶಪಿಸುವುದು ರಾಜಕಾರಣಿಗಳನ್ನೆ ಎಂಬುದನ್ನು ಅವರು ಮರೆತಂತಿದೆ.
***
ಮೇಲ್ವರ್ಗದ ಮಠವೊಂದರ ಶಿಕ್ಷಣ ಸಂಸ್ಥೆಯಲ್ಲಿ ದಲಿತನೊಬ್ಬ ಅತ್ಯಂತ ಸುಲಭವಾಗಿ ಕೆಲಸ ಪಡೆಯಲು ಸಾಧ್ಯವೇ? ಅಂತಹ ಸಾಧ್ಯತೆಗಳು ಶೇ ೨ ರಷ್ಟ್ಟೂ ಇರಲಾರದು. ಹಾಗೆಂದು ಸರಕಾರಿ ಕೆಲಸಕ್ಕೆ ಪ್ರಯತ್ನ ಮಾಡಲು ಹೊರಟರೆ, ಕೆಪಿಎಸ್‌ಸಿ ಎಂಬ ಕಿತ್ತುತಿನ್ನುವ ನರರಾಕ್ಷಸ ಸೌಧದಲ್ಲಿ ಗರಿಗರಿಯ ನೋಟುಗಳನ್ನು ಎಣಿಸಿಕೊಳ್ಳಲು ಹರಿವಾಣ ಮುಂದಿಟ್ಟು ಕುಳಿತುಕೊಂಡಿದೆ ವ್ಯವಸ್ಥೆ. ಶಿಕ್ಷಣ ಸಂಸ್ಥೆಗಳನ್ನೆಲ್ಲಾ ಸರಕಾರ ಹೀಗೆ ಮಠಗಳಿಗೆ ಧಾರೆಯೆರೆದಿರುವಾಗ ಆದೇ ದಲಿತ ತನ್ನ ಹೊಟ್ಟೆಗಾಗಿ ಸನಾತನ ಧರ್ಮಕ್ಕೆ ತಲೆಬಾಗಲೇಬೇಕು. ಸವರ್ಣೀಯ ವ್ಯವಸ್ಥೆಗೆ ತಲೆಬಾಗುವ ಪದ್ಧತಿ ಅನೂಚಾನವಾಗಿ ಅವರ ಮುಂದಿನ ಪೀಳಿಗೆಗೆ ಮುಂದುವರಿಯಬೇಕು. ಹಾಗಾಗಿ ಮಠಗಳು ಹಾಗೂ ಸ್ವಾಮೀಜಿಗಳು ಜಗದ್ಗುರುಗಳಾಗಿ ಈ ಸರಕಾರದ ನೀತಿ ನಿಯಮಗಳನ್ನು ರೂಪಿಸುವವವರಾಗುತ್ತಾರೆ. ಅದನ್ನು ಈ ನಾಡಿನ ಎಲ್ಲ ಶ್ರೀಸಾಮಾನ್ಯರು ಪಾಲಿಸಬೇಕಾಗುತ್ತದೆ.
ನಾಡಿನ ಮಠಮಂದಿರಗಳಲ್ಲಿ sಸ್ವಾಮೀಜಿ ಆನಂತರ ಇರುವ ಪ್ರಮುಖ ಸ್ಥಾನಗಳಲ್ಲಿ ಅನ್ಯ ಜಾತಿಯವರು ಇದ್ದಾರಾ..ಅಥವಾ ಭಕ್ತರು ಇದ್ದಾರಾ ಎಂದು ನೋಡಿದರೆ, ಊಹೂಂ ಇಲ್ಲ. ಯಾರು ಸ್ವಾಮೀಜಿಗಳಾಗಿದ್ದರೂ, ಅವರ ಕುಟುಂಬದ ಪರಂಪರಾಗತ ಸ್ವತ್ತಾಗಿ ಮಠದ ಪ್ರಮುಖ ಸ್ಥಾನಗಳು ಪರಿಗಣಿತವಾಗಿರುತ್ತದೆ. ಆ ಸ್ವಾಮೀಜಿಯ ಇಡೀ ಕುಟುಂಬದ ಸದಸ್ಯರೇ ಮಠದ ಒಂದೊಂದು ಜವಾಬ್ದಾರಿಯನ್ನು ತೆಗೆದುಕೊಂಡಿರುತ್ತಾರೆ!
***
ನೈತಿಕತೆಯ ಬಗ್ಗೆ ಜನರಲ್ಲಿ ಪ್ರಜ್ಞೆ ಮೂಡಿಸಬೇಕಾದ ಮಠಗಳೆಲ್ಲಾ ಇಂದು ಜಾಗತೀಕರಣದ ನೆಪದಲ್ಲಿ ಹಣ ವಸೂಲಿ ಮಾಡುವ ಸೇವಾ ಕೇಂದ್ರಗಳಾಗಿ ಪರಿವರ್ತನೆಯಾಗಿವೆ. ಸ್ನೇಹಿತರೊಬ್ಬರು ಹೇಳುತ್ತಿದ್ದು ಈಗಲೂ ಪ್ರಸ್ತುತವೆನಿಸುತ್ತದೆ. ಕರ್ನಾಟಕವೂ ಸೇರಿದಂತೆ ಭಾರತದಲ್ಲಿನ ಕೆಲವು ಶ್ರೀಮಂತ ಮಠಗಳ ಸ್ವಾಮೀಜಿಗಳು ಜಗತ್ತಿನ ಅತ್ಯುತ್ತಮ ಸಿಇಓಗಳು ಎಂದು. ಹೌದು, ಅಧ್ಯಾತ್ಮಿಕ ಅನುಭವಗಳ ಶ್ರೀಮಂತಿಕೆಯನ್ನು ಕಟ್ಟಿಕೊಡುವ ಬದಲು, ಎಂಜನಿಯರಿಂಗ್, ಮೆಡಿಕಲ್ ಕಾಲೇಜುಗಳ ವ್ಯವಹಾರವೇ ಪ್ರಸ್ತುತ ಎನಿಸುವ ಅವರ ಕಾರ್ಯವೈಖರಿ, ಶಿಕ್ಷಣ ಕ್ಷೇತ್ರದ ಅಷ್ಟೂ ವ್ಯವಸ್ಥೆಯನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಬೇಕು ಎನ್ನುವ ಅವರ ಹಪಾಪಿತನದ ಬಗ್ಗೆ ಖೇದವೆನಿಸುತ್ತದೆ. ಇದಕ್ಕೆ ಅವಕಾಶ ಮಾಡಿಕೊಡುವ ಸರಕಾರ ಇನ್ನಾವ ಜನಕಲ್ಯಾಣ ಮಾಡಲು ಸಾಧ್ಯ ಎನ್ನುವುದನ್ನು ನಾವು ಆಲೋಚನೆ ಮಾಡುವ ಕಾಲ ಹತ್ತಿರ ಬಂದಿದೆ.
ಇಂತಹ ಸಂದರ್ಭದಲ್ಲಿ ನನಗೆ ನನ್ನ ಗುರುಗಳಾದ ಪ್ರೊ.ಕೆ.ರಾಮದಾಸ್ ನೆನಪಾಗುತ್ತಾರೆ. ಯಡಿಯೂರಪ್ಪನವರ ಆಯವ್ಯಯ ನೋಡಿದ್ದರೆ, ಅವರೊಬ್ಬರಾದರೂ ಧ್ವನಿಯೆತ್ತಿ ಸರಕಾರದ ಮಠಗಳ ಓಲೈಕೆ ಕ್ರಮವನ್ನು ಬಹಿರಂಗವಾಗಿ ಖಂಡಿಸುತ್ತಿದ್ದರು. ಸರಕಾರದ ನೈತಿಕತೆಯನ್ನು ಪ್ರಶ್ನೆ ಮಾಡುತ್ತಿದ್ದರು. ಜನರ ತೆರಿಗೆ ಹಣವನ್ನು ಬಿಜೆಪಿ ತನ್ನ ಪಕ್ಷದ ಸ್ವತ್ತು ಎಂಬ ಧಾಟಿಯಲ್ಲಿ ಹಂಚಿಕೆ ಮಾಡಲು ಹೋರಟಿರುವುದನ್ನು ವಿರೋಧಿಸಿ ಹೋರಾಟವನ್ನಾದರೂ ಮಾಡುತ್ತಿದ್ದರು. ಈಗ ಅಂತಹ ಧ್ವನಿಯೆತ್ತಲು ನಮ್ಮಲ್ಲಿ ಯಾರೂ ಇಲ್ಲವೇ ಎಂಬ ಪ್ರಶ್ನೆ ಎದುರಾಗುತ್ತದೆ. ಕನಿಷ್ಟ ಪಕ್ಷ ಅದನ್ನು ಉಗ್ರವಾಗಿ ವಿರೋಧಿಸುವ ತಾಕತ್ತು ಕಾಂಗ್ರೆಸ್ ಹಾಗೂ ಜಾ.ದಳ ಪಕ್ಷಗಳು ಕಳೆದುಕೊಂಡಿವೆಯಲ್ಲ ಎಂಬ ನೋವು ಕಾಡುತ್ತದೆ.
***
ದಲಿತರು,ಹಿಂದುಳಿದವರ ಹೆಸರನ್ನು ಹೇಳಿಕೊಂಡು ಅಧಿಕಾರಕ್ಕೆ ಬಂದ ಯಾವ ಸರಕಾರಗಳೂ ಅವರಿಗೆ ಕಿಂಚಿತ್ತ್ತೂ ಒಳ್ಳೆಯದನ್ನು ಮಾಡಲು ಪ್ರಯತ್ನ ಮಾಡಿಲ್ಲ, ಮಾಡಿದ್ದರೂ, ಅದು ಮಧ್ಯವರ್ತಿಗಳ ಪಾಲಾಗಿದೆ. ಅದನ್ನು ಗಮನಿಸಿಯಾದರೂ, ಯಡಿಯೂರಪ್ಪನವರು ಇನ್ನೂ ಉತ್ತಮ ಕಾರ್ಯಕ್ರಮ ಹಮ್ಮಿಕೊಳ್ಳಬಹುದಿತ್ತು. ಮಠಗಳಿಗೆ ಕೊಡುವ ಹಣವನ್ನೆ ಜಿಲ್ಲೆಗೊಂದರಂತೆ ಗುಡಿಕೈಗಾರಿಕೆಗಳ ಅಭಿವೃದ್ಧಿಗೆ ಬಳಸಬಹುದಿತ್ತು. ಅಥವಾ ನಿರುದ್ಯೋಗಿಗಳ ನೆರವಿಗೆ ಹೊಸ ಕಾರ್ಯಕ್ರಮ ರೂಪಿಸಬಹುದಿತ್ತು. ಎಲ್ಲರಂತೆ ತಮ್ಮ ಜಾತಿಯ ಅಂಧಾನುಕರಣೆಯಲ್ಲಿ ಮುಳುಗಿ ಹೋಗಿರುವ ಅವರು ಮತ್ತು ಅವರ ಪಕ್ಷ ಜನರನ್ನು ವಂಚಿಸುವ ಇನ್ನೊಂದು ಸರಕಾರವಾಗಿ ಇತಿಹಾಸದಲ್ಲಿ ದಾಖಲಾಗಿ ಹೋಗುತ್ತದೆ ಎನ್ನುವುದಂತೂ ದಿಟ.
-ಹೆಗ್ಗೆರೆ ರೇಣುಕಾರಾಧ್ಯ

Subscribe to:
Posts (Atom)