ಗೆಳೆಯರೆ,
ಬೆಳಗಾವಿಯಲ್ಲಿ ಎಂಟು ದಿನ ಕಳೆದು, ಬೆಂಗಳೂರು ತಲುಪಿಕೊಂಡರೆ ಬಾಕಿ ಉಳಿದ ಕೆಲಸಗಳ ಸಾಲುಸಾಲು. ಅದರ ನಡುವೆ ಬ್ಲಾಗ್ ಅಪಡೇಟ್ ಮಾಡಲು ಸಾಧ್ಯವಾಗಲಿಲ್ಲ. ಬರೆದರೆ ಬೆಳಗಾವಿ ಅನುಭವಗಳದ್ದೇ ಒಂದು ರಾಶಿ ಬರೆಯಬಹುದಿತ್ತು. ಈಗ ಬರೆಯಲು ಹೊರಟರೆ ಎಲ್ಲವೂ ಔಟ್‌ಡೇಟೆಡ್ ಅನ್ನಿಸುತ್ತಿದೆ. ಬೆಳಗಾವಿಯಿಂದ ತಂದ ಕುಂದ, ಕರದಂಟೂ ಖಾಲಿಯಾಗಿದೆ.
ಒಂದು ಖುಷಿಯ ವಿಚಾರ: ದೇಸೀಮಾತು ಪುಸ್ತಕ ರೂಪದಲ್ಲಿ ಹೊರಬಂದಿದೆ. ಈ ಬ್ಲಾಗ್‌ನಿಂದ ಕೆಲವು ಲೇಖನಗಳನ್ನು ಹೆಕ್ಕಿ, ಮತ್ತಷ್ಟನ್ನು ಸೇರಿಸಿ ಈ ಪುಸ್ತಕ ಪೂರೈಸಿದ್ದೇನೆ. ಪುಸ್ತಕವನ್ನು ಪ್ರಕಾಶಿಸಿರುವುದು ಬೆಂಗಳೂರು ಪ್ರೆಸ್ ಕ್ಲಬ್ ಪ್ರಕಾಶನ. ಬಿಡುಗಡೆಯೂ ಪ್ರೆಸ್ ಕ್ಲಬ್‌ನಲ್ಲೇ, ಜ.೩೧ರಂದು ಶನಿವಾರ ಸಂಜೆ ೬ ಗಂಟೆಗೆ.
ಬಿಡುವು ಮಾಡಿಕೊಂಡು ಖಂಡಿತ ಬನ್ನಿ.
ಅಂದಹಾಗೆ ಕೃತಿಗೆ ಮುನ್ನುಡಿ ಬರೆದಿರುವುದು ಜನಪರ ಪತ್ರಕರ್ತ ಎನ್.ಎ.ಎಂ.ಇಸ್ಮಾಯಿಲ್ ಅವರು. ಕೃತಿಯ ಬೆನ್ನುಡಿಯಲ್ಲಿ ಗೆಳೆಯ ಡಾ.ಶತೇಂದ್ರ ಕುಮಾರ್ ಹೀಗೆ ಬರೆದಿದ್ದಾರೆ:
ಪತ್ರಕರ್ತ ಎಸ್.ಸಿ.ದಿನೇಶ್ ಕುಮಾರ್ ಅವರ ದೇಸೀಮಾತು ಕೃತಿ ಹಲವು ದೃಷ್ಟಿಯಲ್ಲಿ ಮಹತ್ವದ ಕೃತಿ. ವ್ಯವಸ್ಥೆಯ ಸೋಗಲಾಡಿತನವನ್ನು ಬಯಲಾಗಿಸುವ ಇಲ್ಲಿನ ಲೇಖನಗಳು ನಮ್ಮ ವರ್ತಮಾನದ ತಲ್ಲಣಗಳನ್ನು ಹಸಿಹಸಿಯಾಗಿ ಧ್ವನಿಸುತ್ತವೆ. ಮತಾಂಧತೆ, ಮಠಾಧೀಶರ ಕಪಟಗಳು, ಕಾರ್ಪರೇಟ್ ಸಂಸ್ಕೃತಿಯ ವೈರುಧ್ಯಗಳು, ಹಿಂದುಳಿದವರ ಸಮಸ್ಯೆಗಳು, ಸಮೂಹಮಾಧ್ಯಮಗಳ ಗೋಸುಂಬೆತನ, ಕನ್ನಡತನದ ಪ್ರಶ್ನೆಗಳು ಇಲ್ಲಿನ ಲೇಖನಗಳಲ್ಲಿ ಚರ್ಚೆಗೆ ಒಳಗಾಗಿವೆ.
ದಿನೇಶ್ ಅವರು ಮೂಲತಃ ಕವಿ, ಭಾವಜೀವಿ. ಪತ್ರಿಕಾರಂಗದ ಚೌಕಟ್ಟಿಗೆ ಒಳಪಟ್ಟು ಅವರೊಳಗಿನ ಕವಿ ತನ್ನ ವ್ಯಾಪ್ತಿಯನ್ನು ವಿಶಾಲಗೊಳಿಸಿಕೊಂಡಂತೆ ಕಾಣುತ್ತಾನೆ. ಅವರ ಗದ್ಯ ಬರವಣಿಗೆ ಸರಳ, ಸ್ಪಷ್ಟ ಹಾಗು ನೇರವಾಗಿ ಎದೆಗೆ ತಾಕುವಂಥದ್ದು. ಇಲ್ಲಿ ಅತಿರಂಜಕತೆ, ಜಟಿಲ ವಾಕ್ಯಸಂಯೋಜನೆ, ಅಸ್ಪಷ್ಟ ಅಭಿವ್ಯಕ್ತಿಗಳನ್ನು ಹುಡುಕಿದರೂ ಸಿಗುವುದಿಲ್ಲ. ತನಗೆ ಅನಿಸಿದ್ದನ್ನು ನೇರವಾಗಿ, ರಮ್ಯ ಉಪಮೆಗಳ ನೆರವಿಲ್ಲದೆ ಹೇಳುವ ಕಲೆಗಾರಿಕೆ ಅವರಿಗೆ ಸಿದ್ಧಿಸಿದೆ. ಹೀಗಾಗಿ ಇಲ್ಲಿನ ಲೇಖನಗಳು ಪಂಡಿತರಿಗಷ್ಟೇ ಅಲ್ಲದೆ ಸಾಮಾನ್ಯ ಓದುಗನಿಗೂ ಸುಲಭವಾಗಿ ತಲುಪುತ್ತವೆ.
ಕಳೆದ ಆರೇಳು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆ ನಿಂತಿರುವ ಮಲೆನಾಡ ಪ್ರತಿಭೆ ದಿನೇಶ್ ಕುಮಾರ್ ಪ್ರವಾಹಕ್ಕೆ ವಿರುದ್ಧವಾಗಿ ಈಜುವ ಸವಾಲನ್ನು ಯಶಸ್ವಿಯಾಗಿ ಎದುರಿಸಿದವರು. ಲೇಖಕನ-ಪತ್ರಕರ್ತನ ವ್ಯಾಪ್ತಿಯನ್ನು ಮೀರಿ ಸಾಮಾಜಿಕ ಚಳವಳಿಯಲ್ಲಿ ಗುರುತಿಸಿಕೊಂಡಿರುವ ಅವರಿಗೆ ಬರವಣಿಗೆ ಸಹ ಚಳವಳಿಯ ಒಂದು ಭಾಗ ಎನಿಸಿದೆ.
ತಮ್ಮ ದೇಸೀಮಾತು ಬ್ಲಾಗ್ ಮೂಲಕ ಅಂತರ್ಜಾಲ ಜಗತ್ತಿನಲ್ಲೂ ಬಹುಬೇಗ ಓದುಗರನ್ನು ಸಂಪಾದಿಸಿರುವ ದಿನೇಶ್ ‘ಇಂದು ಸಂಜೆ‘ ಪತ್ರಿಕೆಯ ಸಂಪಾದಕರಾಗಿ ಹೊಸಸಾಧ್ಯತೆಗಳ ಕಡೆ ತೆರೆದುಕೊಳ್ಳಲು ಯತ್ನಿಸುತ್ತಲೇ ಇದ್ದಾರೆ. ‘ದೇಸೀಮಾತು ಅಪ್ಪಟ ದೇಸೀಪ್ರತಿಭೆಯ ಸಹಜ ಅಭಿವ್ಯಕ್ತಿಯ ಅನಾವರಣ. ಜನಪರ ಪತ್ರಿಕಾವೃತ್ತಿಯ ಹೊಸ ಪರಿಭಾಷೆಯನ್ನು ಕಟ್ಟಿಕೊಟ್ಟಿರುವ ಈ ಕೃತಿ ಹೆಚ್ಚು ಹೆಚ್ಚು ಜನರನ್ನು ತಲುಪಬೇಕಾಗಿದೆ.
-ಡಾ. ಶತೇಂದ್ರ ಕುಮಾರ್
ಕಾರ್ಯಕ್ರಮಕ್ಕೆ ಬನ್ನಿ ಎಂದು ಮತ್ತೊಮ್ಮೆ ನಿಮ್ಮೆಲ್ಲರನ್ನು ಆಹ್ವಾನಿಸುತ್ತ
ಪ್ರೀತಿಯಿಂದ
ದಿನೇಶ್ ಕುಮಾರ್ ಎಸ್.ಸಿ.
(ದಿನೂ ಸ.ಚಂ.)
Wednesday, January 28, 2009
Thursday, January 15, 2009
‘ನಿಜ ಮನುಷ್ಯ’ರ ಹುಡುಕಾಟದಲ್ಲಿ ‘ಮುತ್ತಾಗದ ಮಳೆಹನಿ’
ಶೃಂಗೇರಿ ಹತ್ತಿರದ ದಟ್ಟ ಕಾನನದ ಪುಟ್ಟ ಮಲೆನಾಡು ತೊರೆದು ಅಕ್ಷರಗಳನ್ನು ಜತೆ ಕಟ್ಟಿಕೊಂಡು ಹೊಟ್ಟೆಪಾಡಿಗಾಗಿ ಶಿವಮೊಗ್ಗೆ, ಬೆಂಗಳೂರಂಥ ನಿರ್ಜನ ನಗರಿಗಳಲ್ಲಿ ಗೂಡು ಕಟ್ಟಲಾರಂಭಿಸಿದಾಗ ನನ್ನೊಳಗೆ ತೆರೆದುಕೊಂಡ ಅಕ್ಷರ ರೂಪಗಳಿವು... ಎನ್ನುತ್ತ ತಮ್ಮ ಕಥಾಸಂಕಲನವನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿರುವ ವೈ.ಗ.ಜಗದೀಶ್ ಕನ್ನಡದ ಹೊಸ ತಲೆಮಾರಿನ ಸಮರ್ಥ, ಶಕ್ತಿಶಾಲಿ ಕಥೆಗಾರನಾಗಿ ಹೊರಹೊಮ್ಮಿದ್ದಾರೆ.
‘ಮುತ್ತಾಗದ ಮಳೆ ಹನಿ ಜಗದೀಶ್ ಅವರ ಕಥಾ ಸಂಕಲನ ಶೀರ್ಷಿಕೆ. ಇದು ಇದೇ ಶೀರ್ಷಿಕೆಯ ಕಥೆಯೊಂದು ಸಂಕಲನದಲ್ಲಿದೆ. ಹೊಸ ಸಂಕ್ರಮಣಗಳಿಗೆ ತೆರೆದುಕೊಂಡಿರುವ ಮಲೆನಾಡಿನ ಸಂಕೀರ್ಣ ಬದುಕನ್ನು ಅನಾವರಣಗೊಳಿಸುವ ಇಲ್ಲಿನ ಕಥೆಗಳು ಒಂದೊಂದೂ ಒಂದೊಂದು ಮುತ್ತುಗಳೇ.
ಜಗದೀಶ್ ಅವರ ಒಳಕಾಣ್ಕೆಗಳು ಇಲ್ಲಿ ವಿಸ್ತಾರವಾಗಿ ಹರಡಿಕೊಂಡಿವೆ. ಹೀಗಾಗಿಯೇ ಅವರಿಗೆ ಬೆಂಗಳೂರು, ಶಿವಮೊಗ್ಗದಂಥ ನಗರಗಳು ಅವರಿಗೆ ನಿರ್ಜನ ನಗರಿಗಳಂತೆ ಕಾಣಿಸುತ್ತವೆ. ಇಂಥ ನಿರ್ಜನ ನಗರಿಗಳ ಕಥೆಗಳನ್ನು ಬಿಟ್ಟು, ಜಗದೀಶ್ ನೇರವಾಗಿ ತಮ್ಮ ಕರುಳು ಬಳ್ಳಿ ತೊಡರಿಕೊಂಡಿರುವ ಮಲೆನಾಡಿನ ಗರ್ಭಕ್ಕೇ ಇಳಿದು ಕಥೆಗಳನ್ನು ಹೆಕ್ಕಿ ತಂದು ಇಲ್ಲಿ ಹರವಿದ್ದಾರೆ.
ಜಗದೀಶ್ ತಮ್ಮ ಕಥೆಗಳ ಕುರಿತು ತಾವೇ ಬರೆದುಕೊಳ್ಳುವುದು ಹೀಗೆ: “ಸಂಬಂಧ, ವೈವಿಧ್ಯತೆ, ಬಣ್ಣಗಳೇ ಇಲ್ಲದ ಏಕಾಕೃತಿಯ ಮನುಷ್ಯರನ್ನು ಕಂಡು ನಿರ್ವಿಣ್ಣನಾದಾಗಲೆಲ್ಲ ನನ್ನ ಮನಸ್ಸು ಏಕಾಂತಕ್ಕೆ ಸರಿದು, ಬಾಲ್ಯದಲ್ಲಿ ಕಂಡ ಸೊಬಗು, ಚಿತ್ರ ಚಿತ್ತಾರದ ಗಮ್ಯದ ಕಡೆಗೆ ಹೋಗಿಬಿಡುತ್ತದೆ. ಏರಿಳಿತ, ಸಿಟ್ಟು ಸೆಡವಿರದ ಟಿವಿ ಜಾಹೀರಾತಿನ ಲಲನೆಯರಂತೆ ಸದಾ ಹುಸಿನಗುವ ನಿರ್ಭಾವದ ನಗರದ ಬೊಂಬೆಗಳನ್ನು ಕಂಡಾಗಲೆಲ್ಲ ಎಳೆವೆಯಲ್ಲಿ ಕಂಡ ನಡೆದಾಡುವ, ಜಗಳಾಡುವ, ಮುನಿಸು ತೋರುವ, ಅಕ್ಕರೆ-ಕಕ್ಕುಲಾತಿಯಿಂದ ಪ್ರೀತಿಸುವ ನಿಜ ಮನುಷ್ಯರು ಕಣ್ಮುಂದೆ ಸುಳಿದಾಡುತ್ತಾರೆ. ಅಬ್ಬಾ, ಅಂತೂ ಮನುಷ್ಯರು ಸಿಕ್ಕರಲ್ಲ ಎಂದು ಹಿಡಿದುಕೊಳ್ಳುವಷ್ಟರಲ್ಲಿ ಅದು ಭ್ರಮೆಯೆನ್ನಿಸಿ ಸತ್ಯ ಗೋಚರವಾಗಿಬಿಡುತ್ತದೆ.’’
ಒಂದರ್ಥದಲ್ಲಿ ಇಡೀ ಸಂಕಲನದಲ್ಲಿ ಜಗದೀಶ್ ‘ನಿಜ ಮನುಷ್ಯ’ರನ್ನು ಹುಡುಕಿಕೊಂಡು ಹೋಗಿದ್ದಾರೆ. ಈ ಹುಡುಕಾಟದ ದಾರಿಯ ತೇವಗೊಂಡ ನೆನಪುಗಳು, ಪುಳಕ, ರೋಮಾಂಚನ, ನಿರಾಸೆ, ನೋವು ಎಲ್ಲವೂ ಇಲ್ಲಿ ಹರಳುಗಟ್ಟಿವೆ.
ವೈ.ಗ.ಜಗದೀಶ್ ಹೊಸ ತಲೆಮಾರಿನ ಕಥೆಗಾರರು. ಅವರಿಗೆ ಈ ತಲೆಮಾರಿನ ಸಂಕಟಗಳೆಲ್ಲವೂ ಕಾಡಿವೆ. ಜಾಗತೀಕರಣ ಹಾಗು ಕೋಮುವಾದದ ಬಾಹುಗಳು ಮನುಷ್ಯರ ಮೈ ಮನಸ್ಸುಗಳನ್ನು ಆವರಿಸಿಕೊಳ್ಳುತ್ತಿರುವುದನ್ನು ಅವರು ಬಲ್ಲರು. ಅದರಲ್ಲೂ ಮಲೆನಾಡಿನಲ್ಲಿ ಉದ್ಭವವಾಗಿರುವ ಹಳೇ ಸಮಸ್ಯೆಗಳ ಹೊಸ ಮುಖಗಳು, ಹೊಸ ಸಮಸ್ಯೆಗಳ ಹಳೆ ಮುಖಗಳನ್ನು ಅವರು ಸ್ಪಷ್ಟವಾಗಿ ಗುರುತಿಸಿಕೊಂಡಿದ್ದಾರೆ. ಈ ಸಮಸ್ಯೆಗಳು ಅವರನ್ನು ಕಾಡಿವೆ, ಕೆಣಕಿವೆ. ಹೀಗಾಗಿ ಜಗದೀಶ್ ಅವರ ಕಥೆಗಳಲ್ಲಿ ಕಾಣಿಸಿಕೊಳ್ಳುವುದು ಹೊಸ ಮಲೆನಾಡು.
ಸಂಕಲನಕ್ಕೆ ಮುನ್ನುಡಿ ಬರೆಯುತ್ತ ಡಾ.ಕೇಶವ ಶರ್ಮ ಅವರು ಇದನ್ನು ಗುರುತಿಸಿದ್ದಾರೆ. ‘ಮಲೆನಾಡು ನಾವು ಗ್ರಹಿಸಿದಷ್ಟು ಸುಂದರವಾಗಿಲ್ಲ. ಮಲೆನಾಡಿನ ಹೃದಯದ ಆಳದಲ್ಲಿ ಒಂದು ಕ್ರೌರ್‍ಯವಿದೆ. ಈ ವಾಸ್ತವವನ್ನು ಎಲ್ಲೂ ವಾಚ್ಯಗೊಳಿಸದೆ ಈ ಕತೆಗಳಲ್ಲಿ ಹೇಳಿರುವುದು ಗಮನಾರ್ಹ.
ಲೇಖಕ ತನ್ನ ಬದ್ಧತೆಯನ್ನು ಇಟ್ಟುಕೊಂಡರೂ ಅದನ್ನು ಕರಪತ್ರವಾಗಿಸದೇ ಬರೆಯುವುದು ಅಗತ್ಯ. ಈ ಕಲೆಯು ಜಗದೀಶರಿಗೆ ಸಿದ್ಧಿಸಿದೆ. ಏಕೆಂದರೆ ಎಲ್ಲವನ್ನೂ ಕತೆಯೊಳಗೆ ತಂದು ಹಾಕಬೇಕೆಂಬ ತುರಾತುರಿಯೂ ಅವರಿಗಿಲ್ಲ.’ ಎಂದು ಅವರು ಅಭಿಪ್ರಾಯಪಡುತ್ತಾರೆ.
ಜಗದೀಶ್ ಸಮಕಾಲೀನ ಸಮಸ್ಯೆಗಳನ್ನು ಅನಾವರಣಗೊಳಿಸುತ್ತಲೇ, ಸಮಸ್ಯೆಗಳ ಹಿನ್ನೆಲೆಯಲ್ಲೇ ಜಟಿಲಗೊಳ್ಳುತ್ತಿರುವ ಮನುಷ್ಯ ಸಂಬಂಧಗಳ ಕುರಿತು ಮಾತನಾಡುತ್ತಾರೆ. ತನ್ನ ಅಭಿಪ್ರಾಯವನ್ನು ಓದುಗರ ಮೇಲೆ ಹೇರುವ ಸಾಹಸಕ್ಕೆ ಕೈಹಾಕದೆ, ಓದುಗರಲ್ಲೇ ಹೊಸಹೊಸ ಅಭಿವ್ಯಕ್ತಿಗಳನ್ನು ಚಿಮ್ಮಿಸುವಷ್ಟು ಶಕ್ತಿಶಾಲಿಯಾಗಿ ಈ ಕಥೆಗಳು ಹೆಣೆದುಕೊಂಡಿವೆ.
ವೈ.ಗ.ಜಗದೀಶ್ ವೃತ್ತಿಯಿಂದ ಪತ್ರಕರ್ತರು. ಹೀಗಾಗಿ ಇಲ್ಲಿನ ಕೆಲವು ಕಥೆಗಳಲ್ಲಿ ಪತ್ರಕರ್ತನ ಕುತೂಹಲಗಳೂ ಅಲ್ಲಲ್ಲಿ ಕಾಣಿಸುತ್ತವೆ. ಆದರೆ ಕಥೆಗಾರ, ಪತ್ರಕರ್ತನ ವ್ಯಾಪ್ತಿಗಳನ್ನು ಮೀರಿ ಜಗದೀಶ್ ‘ಸಹಜ ಮನುಷ್ಯ’ರನ್ನು ಹುಡುಕಿಕೊಂಡು ಹೋಗುವ ಮೂಲಕ ಅಸಹಜ ವ್ಯಕ್ತಿ-ಭಾವನೆಗಳ ಜಗತ್ತಿಗೆ ಸವಾಲೊಡ್ಡುತ್ತಾರೆ.
ಜಗದೀಶ್ ಭಾಷೆಯನ್ನು ತಮ್ಮ ಕಥಾನಕಗಳ ಸೃಷ್ಟಿಗೆ ಒಗ್ಗುವಂತೆ ಬಳಸಿಕೊಳ್ಳುವುದನ್ನು ರೂಡಿಸಿಕೊಂಡಿದ್ದಾರೆ. ಸಂಕಲನದ ಕಡೆಯ ಕಥೆ ‘ಉರಿಯ ಬೆಂಕಿಗೆ ಮೈಯೆಲ್ಲಾ ನಾಲಿಗೆಯಲ್ಲಿನ ಕೆಲವು ಸಾಲುಗಳು ಹೀಗಿವೆ:
“..ಚಣಹೊತ್ತು ಸುಮ್ಮನಿದ್ದ ಜ್ಯೋತಿಯು ಒಳಗಣ್ಣ ತೆರೆಯಿತು. ಬೆಳ್ಳಂಬೆಳಕಿನಲ್ಲಿ ಕತ್ತಲೆಯಾಯಿತು. ಗವ್ವಗತ್ತಲೆಯಲ್ಲಿ ದೀಪವಾಯಿತು. ಗಾಳಿಯಲ್ಲಿ ಉಸಿರಾಯಿತು. ನೀರಲ್ಲಿ ಆವಿಯಾಯಿತು. ಕೊನೆಯರಿಯದ ಸಮುದ್ರವಾಯಿತು. ಗಿಡದೆಲೆಯ ಹಸಿರಾಯಿತು. ಅಳತೆಗೆ ನಿಲುಕದ ಆಗಸವಾಯಿತು. ಎಣಿಸಲಾರದ ನಕ್ಷತ್ರವಾಯಿತು. ಜಗದಗಲ ಮುಗಿಲಗಲ ಕಣ್ಣು ಗೆಜ್ಜೆಗಳ ಸಪ್ಪಳವಾಯಿತು. ಹಕ್ಕಿಯ ಉಲಿಯಾಯಿತು. ಅಮ್ಮನ ಎದೆಹಾಲಾಯಿತು. ಅಳುವ ಕಂದನ ಕೊರಳ ದನಿಯಾಯಿತು. ಮೌನದೊಳಗಿನ ನಿಶ್ಯಬ್ದವಾಯಿತು. ಶಬ್ದದೊಳಗಣ ಗದ್ದಲವಾಯಿತು... ಜ್ಯೋತಿಯು.....’’
ಅಂದ ಹಾಗೆ ಜಗದೀಶ್ ಅವರ ಕೃತಿಯನ್ನು ಪ್ರಕಟಿಸಿರುವುದು ಬೆಂಗಳೂರಿನ ಅನು ಪ್ರಕಾಶನ. ಪುಸ್ತಕದ ಬೆಲೆ ೬೦ ರುಪಾಯಿ.

Sunday, January 11, 2009
ಈ ಹೆಣ್ಣುಮಗಳ ಜೀವ ಉಳಿಸುವಿರಾ ಪ್ರಿಯ ದೇಶಭಕ್ತ ಬಂಧುಗಳೇ?
ಪ್ರಿಯ ದೇಶಭಕ್ತರೇ, ರಾಜಕೀಯ ನಾಯಕರುಗಳೇ, ಮೀಡಿಯಾ ಮೇಧಾವಿಗಳೇ, ಸಾಹಿತಿಗಳೇ, ಕಲಾವಿದರೇ, ಕ್ರೀಡಾಪಟುಗಳೇ, ಬುದ್ಧಿಜೀವಿಗಳೇ, ಸಮಾಜವಿಜ್ಞಾನಿಗಳೇ, ಮಾನವಹಕ್ಕು ಹೋರಾಟಗಾರರೇ, ಸ್ತ್ರೀವಾದಿ ಚಿಂತಕರೇ, ಎಲ್ಲ ಬಗೆಯ ಸಂಘಟನೆಗಳ ಮುಖಂಡರೇ, ಕ್ರಿಯಾಶೀಲ ಬ್ಲಾಗರ್‌ಗಳೇ, ಅನಿವಾಸಿ ಭಾರತೀಯರೆ, ಸಾಮಾನ್ಯ ನಾಗರಿಕರೇ, ಮಾನವತೆಯಲ್ಲಿ ವಿಶ್ವಾಸವಿಟ್ಟ ಎಲ್ಲ ಜೀವಗಳೇ ನಿಮ್ಮೆಲ್ಲರಲ್ಲಿ ಒಂದು ಮನವಿ: ಈ ಹೆಣ್ಣುಮಗಳ ಜೀವ ಉಳಿಸಿ.
ಈಕೆಯ ಪ್ರಾಣ ಉಳಿಯಬೇಕು. ಉಳಿಸುವ ಹೊಣೆ ಎಲ್ಲ ಭಾರತೀಯರದು. ಆಕೆ ಉಳಿಯುವ ಮೂಲಕ ಮಾನವೀಯತೆ ಉಳಿಯಬೇಕು. ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶಗಳಲ್ಲಿ ಒಂದಾಗಿರುವ ಇಂಡಿಯಾದ ಮಾನ ಉಳಿಯಬೇಕು. ಮಾನವ ಹಕ್ಕು ಎಂಬ ಶಬ್ದಕ್ಕೆ ಅರ್ಥವಾದರೂ ಉಳಿಯಬೇಕು.
ಈಕೆ ಆತಂಕವಾದಿಯಲ್ಲ, ಬಂಡುಕೋರಳಲ್ಲ, ಕೋಮುವಾದಿಯಲ್ಲ, ಸಮಾಜಘಾತಕಳಲ್ಲ. ಈಕೆಯ ಹೆಸರು ಐರೋಮ್ ಶರ್ಮಿಳಾ ಚಾನು. ನಮ್ಮ- ನಿಮ್ಮ ಮನೆಯ ಹೆಣ್ಣು ಮಕ್ಕಳಂಥವಳು. ಭಾರತೀಯಳು. ಇಂಡಿಯಾದ ಆಭರಣ ಎಂದು ಕರೆಯಲ್ಪಡುವ (ಈ ವಿಶೇಷಣ ಮಣಿಪುರಿಗಳ ಪಾಲಿಗೆ ಎಂಥ ಕ್ಲೀಷೆ ಎನ್ನುವುದು ಬೇರೆ ವಿಷಯ) ಮಣಿಪುರ ರಾಜ್ಯದವಳು.
ಶರ್ಮಿಳಾಗೆ ಆಗಿರುವುದು ಏನೆಂದರೆ ಈಕೆ ಆಹಾರ ಸೇವಿಸುತ್ತಿಲ್ಲ. ಅರ್ಥಾತ್ ಉಪವಾಸ ಸತ್ಯಾಗ್ರಹ ನಿರತಳಾಗಿದ್ದಾಳೆ. ಒಂದೆರಡು ದಿನಗಳ ಉಪವಾಸವಲ್ಲ ಇದು, ತಿಂಗಳುಗಳ ಉಪವಾಸವೂ ಅಲ್ಲ. ಸುದೀರ್ಘ ಎಂಟು ವರ್ಷಗಳಿಂದ ಈಕೆ ಏನನ್ನೂ ಸೇವಿಸಿಲ್ಲ ಎಂದರೆ ನೀವು ನಂಬಲೇಬೇಕು. ಆಕೆ ಆಮರಣಾಂತ ಉಪವಾಸಕ್ಕೆ ಕುಳಿತಿದ್ದು ೨೦೦೦ನೇ ಇಸವಿಯ ನವೆಂಬರ್ ತಿಂಗಳಿನಲ್ಲಿ. ಅಲ್ಲಿಂದ ಈಚೆಗೆ ಸತ್ಯಾಗ್ರಹ ಮುಂದುವರೆದೇ ಇದೆ.
ಸದ್ಯಕ್ಕೆ ಈಕೆಗೆ ಇಂಫಾಲದ ಜವಹರಲಾಲ್ ನೆಹರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಲವಂತವಾಗಿ ಮೂಗಿನ ಮೂಲಕ ದ್ರವಾಹಾರಗಳನ್ನು ನೀಡಲಾಗುತ್ತಿದೆ. ಎಷ್ಟು ಒತ್ತಾಯಿಸಿದರೂ ಬಾಯಿ ತೆರೆಯದ ಕಾರಣಕ್ಕಾಗಿ ಈ ವ್ಯವಸ್ಥೆ. ವೈದ್ಯರ ಪ್ರಕಾರ ಅವಳ ಬದುಕು ಇನ್ನು ತೀರಾ ಕಷ್ಟ. ಆಹಾರ ಸೇವಿಸದ ಹಿನ್ನೆಲೆಯಲ್ಲಿ ಆಕೆಯ ದೇಹದ ಆರೋಗ್ಯ ಸಂಪೂರ್ಣ ಹದಗೆಟ್ಟಿದೆ. ಬೇರೆ ಬೇರೆ ಖಾಯಿಲೆಗಳಿಗೆ ದಾರಿಮಾಡಿಕೊಟ್ಟಿದೆ. ಬಹುಶಃ ಇದೇ ವ್ಯವಸ್ಥೆ ಮುಂದುವರೆದರೆ ಆಕೆ ಇನ್ನು ಬದುಕುವುದು ಸಾಧ್ಯವಿಲ್ಲ.
ಅದಕ್ಕಾಗಿ ಕಳೆದ ಡಿಸೆಂಬರ್‌ನಿಂದ ಆಕೆಯ ಅಭಿಮಾನಿಗಳು ‘ಶರ್ಮಿಳಾ ಉಳಿಸಿ ಎಂಬ ಮ್ಯಾರಥಾನ್ ಧರಣಿ ಆರಂಭಿಸಿದ್ದಾರೆ. ದಿನವೂ ಒಂದಷ್ಟು ಸಂಘಟನೆಗಳು ಆಕೆಯ ಜೀವ ಉಳಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲು ಸರಣಿ ಧರಣಿ ನಡೆಸುತ್ತಿವೆ.
ಇಡೀ ಜಗತ್ತಿನ ಇತಿಹಾಸದಲ್ಲಿ ಸರ್ಕಾರದ ಮುಂದೆ ಒಂದೇ ಒಂದು ಬೇಡಿಕೆ ಇರಿಸಿ ಎಂಟು ವರ್ಷಗಳ ಕಾಲ ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡಿರುವ ಉದಾಹರಣೆಯೇ ಇಲ್ಲ. ಅಹಿಂಸಾತ್ಮಕ ಹೋರಾಟದ ಹಾದಿಯಲ್ಲಿ ಯಾರೂ ಮುಟ್ಟಲಾಗದ ಎತ್ತರವನ್ನು ಶರ್ಮಿಳಾ ಏರಿದ್ದಾಳೆ. ಬಹುಶಃ ಇನ್ನೊಬ್ಬ ಶರ್ಮಿಳಾ ಜಗತ್ತಿನಲ್ಲಿರಲು ಸಾಧ್ಯವೇ ಇಲ್ಲ, ಮುಂದೆ ಹುಟ್ಟಲೂ ಸಾಧ್ಯವಿಲ್ಲ. ಹಾಗಾಗಿ ಇಡೀ ಮಣಿಪುರವೇ ಶರ್ಮಿಳಾ ಬದುಕುವಂತಾಗಲಿ ಎಂದು ಹಾರೈಸುತ್ತಿದೆ.
*****
ಶರ್ಮಿಳಾ ಕಥಾನಕ ಕೇಳುವ ಮುನ್ನ ಮಣಿಪುರದ ಹಿನ್ನೆಲೆ ಕೇಳಬೇಕು. ಮಾಯನ್ಮಾರ್ ಗಡಿಗೆ ಹೊಂದಿಕೊಂಡಿರುವ ಮಣಿಪುರ ೨೨,೩೨೭ ಚದರ ಕಿ.ಮೀ ವ್ಯಾಪ್ತಿಯ ಪುಟ್ಟ ರಾಜ್ಯ. ೨೦೦೧ರ ಜನಗಣತಿ ಪ್ರಕಾರ ರಾಜ್ಯದ ಒಟ್ಟು ಜನಸಂಖ್ಯೆ ೨೨ ಲಕ್ಷ. ಮಣಿಪುರಿ ಇಲ್ಲಿನ ರಾಜ್ಯಭಾಷೆ. ಶೇ.೬೦ರಷ್ಟು ಸಾಕ್ಷರತೆ ಪ್ರಮಾಣವಿದೆ.
ನೀಲಿಬಣ್ಣದ ಪರ್ವತ ಶ್ರೇಣಿಗಳ ನಡುವೆ ಇರುವ ಮಣಿಪುರ ನಿಸರ್ಗ ರಮಣೀಯತೆಯ ಅದ್ಭುತ ಪ್ರದೇಶ. ಹಾಗೆಂದೇ ಪಂಡಿತ್ ಜವಹರಲಾಲ್ ನೆಹರೂ ಮಣಿಪುರವನ್ನು ‘ಭಾರತದ ಆಭರಣ ಎಂದು ಬಣ್ಣಿಸಿದ್ದರು.
೧೮೯೧ರದಲ್ಲಿ ಮಣಿಪುರವನ್ನು ಬ್ರಿಟಿಷರು ಯುದ್ಧದ ಮೂಲಕ ವಶಪಡಿಸಿಕೊಂಡಿದ್ದರು. ಭಾರತ ಗಣರಾಜ್ಯಕ್ಕೆ ಮಣಿಪುರ ಸೇರ್ಪಡೆಯಾಗಿದ್ದು ೧೯೪೯ರ ಅಕ್ಟೋಬರ್ ೧೫ರಂದು. ೧೯೭೨ರ ಜನವರಿ ೨೧ರಂದು ಮಣಿಪುರಕ್ಕೆ ಪೂರ್ಣಪ್ರಮಾಣದ ರಾಜ್ಯದ ಸ್ಥಾನಮಾನ ದೊರೆಯಿತು.
ಮಣಿಪುರದಲ್ಲಿ ಮೀಟೀ, ನಾಗ, ಕುಕಿ, ಪಂಗಾಲ್ ಮತ್ತಿತರ ಹಲವು ಸಮುದಾಯಗಳು ಶತಮಾನಗಳಿಂದ ಬದುಕುತ್ತ ಬಂದಿವೆ. ಎಲ್ಲ ಸಮುದಾಯಗಳೂ ತಮ್ಮದೇ ಆದ ಸಂಸ್ಕೃತಿ, ಆಚರಣೆಗಳನ್ನು ಹೊಂದಿವೆ. ಇಲ್ಲಿನ ಜನ ಸಾಂಸ್ಕೃತಿಕವಾಗಿ ಶ್ರೀಮಂತರು. ಜಾನಪದ ನೃತ್ಯ, ಹಾಡು, ಕಲೆ ಎಲ್ಲವೂ ಇಲ್ಲಿವೆ. ಜನ ಕರಕುಶಲ ವಸ್ತುಗಳನ್ನು ತಯಾರಿಸುವಲ್ಲಿ ಸಿದ್ಧಹಸ್ತರು.
ಮಣಿಪುರ ಹಬ್ಬಗಳ ನಾಡು. ವರ್ಷಪೂರ್ತಿ ಒಂದಲ್ಲ ಒಂದು ಹಬ್ಬ ಇಲ್ಲಿ ಆಚರಣೆಯಾಗುತ್ತವೆ. ಮಣಿಪುರಿಗಳ ಸಾಂಸ್ಕೃತಿಕ ವೈಭವಕ್ಕೆ ಈ ಹಬ್ಬಗಳು ಸಾಕ್ಷಿ. ಮಣಿಪುರದಲ್ಲಿರುವ ಬುಡಕಟ್ಟು ಸಮುದಾಯಗಳು ಹಾಡು, ನೃತ್ಯಗಳ ಮೂಲಕವೇ ಹಬ್ಬಗಳನ್ನು ಆಚರಿಸಿಕೊಳ್ಳುತ್ತವೆ.
ಇಂಥ ಮಣಿಪುರ ಸ್ವಾತಂತ್ರ್ಯ ಬಂದಾಗಿನಿಂದಲೂ ನೆಮ್ಮದಿಯಾಗಿಲ್ಲ. ಸ್ವಾತಂತ್ರ್ಯ ಎಂಬ ಪದದ ಅರ್ಥವೇ ಗೊತ್ತಿಲ್ಲದಷ್ಟು ಅಲ್ಲಿನ ಜನರು ಅಭದ್ರತೆಯಿಂದ ನರಳುತ್ತಿದ್ದಾರೆ. ನಮ್ಮ ಕೇಂದ್ರ ಸರ್ಕಾರದ ಪ್ರಕಾರ ಮಣಿಪುರ ಗಲಭೆಗ್ರಸ್ಥ ಪ್ರದೇಶ. ಹಾಗಾಗಿ ಅಲ್ಲಿ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ(೧೯೫೮) ಜಾರಿಯಲ್ಲಿದೆ. ಈ ಕಾಯ್ದೆ ಜಾರಿಯಾಗಿದ್ದು ೧೯೮೦ರಲ್ಲಿ. ಅಲ್ಲಿಂದ ಈಚೆಗೆ ನಮ್ಮ ಸೇನಾಪಡೆಯ ತುಕಡಿಗಳು ಮಣಿಪುರದಲ್ಲಿ ಕಾರ್ಯನಿರ್ವಹಿಸುತ್ತಿವೆ. ಜನರ ಬದುಕು ಮೂರಾಬಟ್ಟೆಯಾಗಿ ಹೋಗಿದೆ.
ಇದೇ ಕಾಯ್ದೆಯನ್ನು ಹಿಂತೆಗೆದುಕೊಳ್ಳಿ ಎಂದು ಒತ್ತಾಯಿಸಿ, ಶರ್ಮಿಳಾ ೨೦೦೦ನೇ ಇಸವಿಯ ಡಿಸೆಂಬರ್‌ನಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತ ಬಂದಿದ್ದಾಳೆ. ಉಪವಾಸ ಮುಂದುವರೆಸಿದರೆ ಆಕೆ ಬಹುಶಃ ಈ ವರ್ಷವೇ ಸತ್ತುಹೋಗಲಿದ್ದಾಳೆ!
****
ಸಶಸ್ತ್ರಪಡೆಗಳ ವಿಶೇಷಾಧಿಕಾರ ಕಾಯ್ದೆ (೧೯೫೮) (ಸವಿಕಾ) ದೇಶದ ಕ್ರೂರ ಕಾಯ್ದೆಗಳಿಗೆ ತಾಯಿಯಿದ್ದಂತೆ. ಈಶಾನ್ಯ ರಾಜ್ಯಗಳಲ್ಲಿ ನಾಗಾ ಬುಡಕಟ್ಟು ಜನರ ಹೋರಾಟದ ಹಿನ್ನೆಲೆಯಲ್ಲಿ ೧೯೫೮ರಲ್ಲಿ ಜಾರಿಗೆ ತಂದ ಕಾಯ್ದೆ ಇದು. ಸರಳವಾಗಿ ಹೇಳುವುದಾದರೆ ಈ ಕಾಯ್ದೆ ಪ್ರಜಾಪ್ರಭುತ್ವ ವ್ಯವಸ್ಥೆಯೊಳಗೆ ಮಿಲಿಟರಿ ಆಡಳಿತಕ್ಕೆ ಅವಕಾಶ ಕಲ್ಪಿಸುತ್ತದೆ. ಯಾವ ದಿಕ್ಕಿನಿಂದ ನೋಡಿದರೂ ಪೋಟಾ, ಟಾಡಾ ಇತ್ಯಾದಿಗಳಿಗಿಂತ ಸವಿಕಾ ಭೀಕರ ಕಾಯ್ದೆ.
ಕಾಯ್ದೆಯ ಪ್ರಕಾರ ಅಪರಾಧ ಚಟುವಟಿಕೆ ನಡೆಸಿದ ವ್ಯಕ್ತಿ ಅಥವಾ ಅಪರಾಧಕ್ಕೆ ಹೊಂಚು ಹಾಕಿರುವ ವ್ಯಕ್ತಿಯನ್ನು ಯಾವುದೇ ವಾರೆಂಟ್ ಇಲ್ಲದೆ ಬಂಧಿಸಲು ಸೇನೆಗೆ ಅವಕಾಶವಿರುತ್ತದೆ. ಯಾವುದೇ ಪ್ರದೇಶಕ್ಕೆ, ಮನೆಗೆ, ಕಛೇರಿಗೆ ವಾರೆಂಟ್ ಇಲ್ಲದೆ ಪ್ರವೇಶಿಸುವ ಅಧಿಕಾರವೂ ಲಭ್ಯವಾಗಿರುತ್ತದೆ.
ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಭದ್ರತಾ ಪಡೆಗಳು ಗಲಭೆಗ್ರಸ್ಥರ ಮೇಲೆ ದಾಳಿ ನಡೆಸಿ, ಗಾಯಗೊಳಿಸುವ ಅಥವಾ ಸಾಯಿಸುವ ಅಧಿಕಾರವನ್ನೂ ಹೊಂದಿರುತ್ತವೆ. ಸಶಸ್ತ್ರ ಬಂಡುಕೋರರ ನೆಲೆ ಎಂಬ ಅನುಮಾನದ ಹಿನ್ನೆಲೆಯಲ್ಲಿ ಯಾವುದೇ ಕಟ್ಟಡವನ್ನು ಧ್ವಂಸಗೊಳಿಸುವ ಸ್ವಾತಂತ್ರ್ಯವನ್ನೂ ಈ ಕಾಯ್ದೆಯಡಿ ನೀಡಲಾಗಿದೆ.
ಒಂದು ವೇಳೆ ಸೇನಾಪಡೆಗಳಿಂದ ಅಮಾಯಕರ ಮೇಲೆ ದೌರ್ಜನ್ಯ ನಡೆದರೆ ತನಿಖೆ ನಡೆಸಲು ರಾಜ್ಯ ಸರ್ಕಾರಕ್ಕೆ, ಪೊಲೀಸ್ ಇಲಾಖೆಗೆ ಅಥವಾ ಇತರ ಯಾವುದೇ ವಿಚಾರಣಾ ಸಮಿತಿ, ಆಯೋಗಕ್ಕೆ ಕೇಂದ್ರ ಸರ್ಕಾರದಿಂದ ಅನುಮತಿ ಕಡ್ಡಾಯ.
ಮಣಿಪುರದ ಮೇಲೆ ಸವಿಕಾ ಹೇರಲಾಗಿದ್ದು ೧೯೮೦ರಲ್ಲಿ. ಅಲ್ಲಿಂದ ಇಲ್ಲಿಯವರೆಗೆ ಒಟ್ಟು ೨೮ ವರ್ಷಗಳು ಕಳೆದು ಹೋಗಿವೆ. ಈ ೨೮ ವರ್ಷಗಳಲ್ಲಿ ಮಣಿಪುರದಲ್ಲಿ ನಡೆದ ಸಂಘರ್ಷಗಳಲ್ಲಿ ಒಟ್ಟು ೨೦,೦೦೦ ಮಂದಿ ಬಲಿಯಾಗಿದ್ದಾರೆ. ಈ ಪೈಕಿ ೧೨,೦೦೦ ಮಂದಿ ಬಂಡುಕೋರ ಸಂಘಟನೆಗಳ ಕಾರ್ಯಕರ್ತರು ಹಾಗು ಭದ್ರತಾ ಪಡೆಗಳ ಸಿಬ್ಬಂದಿಗಳು. ಇವರಲ್ಲದೆ ವಿನಾಕಾರಣ ಪ್ರಾಣತೆತ್ತ ಸಾಮಾನ್ಯ, ಅಮಾಯಕ ನಾಗರಿಕರ ಸಂಖ್ಯೆ ಎಂಟು ಸಾವಿರ. ಇದು ಸರ್ಕಾರಿ ಲೆಕ್ಕ. ಮಣಿಪುರ ಮುಖ್ಯಮಂತ್ರಿ ಐಬೋಬಿ ಸಿಂಗ್ ನೀಡಿರುವ ಅಧಿಕೃತ ಹೇಳಿಕೆ.
೧೯೮೦ರ ಸೆ.೮ರಂದು ಸವಿಕಾ ಮಣಿಪುರದಲ್ಲಿ ಜಾರಿಯಾದಾಗ ಆ ರಾಜ್ಯದಲ್ಲಿ ಇದ್ದದ್ದು ನಾಲ್ಕು ಬಂಡುಕೋರ ಗುಂಪುಗಳು. ಯುನೈಟೆಡ್ ನ್ಯಾಷನಲ್ ಲಿಬರೇಷನ್ ಫ್ರಂಟ್, ಪೀಪಲ್ಸ್ ರೆವಲೂಷನರಿ ಪಾರ್ಟಿ, ಪೀಪಲ್ಸ್ ಲಿಬರೇಷನ್ ಆರ್ಮಿ ಹಾಗು ನ್ಯಾಷನಲ್ ಸೋಷಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್ ಎಂಬ ನಾಲ್ಕು ಬಂಡುಕೋರ ಗುಂಪುಗಳು ಮಣಿಪುರದಲ್ಲಿ ಸಕ್ರಿಯವಾಗಿದ್ದವು. ೨೮ ವರ್ಷಗಳ ಬಳಿಕ ಮಣಿಪುರದಲ್ಲಿ ಇರುವ ಬಂಡುಕೋರ ಗುಂಪುಗಳ ಸಂಖ್ಯೆ ಸರ್ಕಾರಿ ಮಾಹಿತಿಯ ಪ್ರಕಾರವೇ ಕನಿಷ್ಠ ೨೪. ಅದರರ್ಥ ಕಾಯ್ದೆ ಜಾರಿಯಾದ ಬಳಿಕ ಬಂಡುಕೋರರ ಸಂಖ್ಯೆ ತೀವ್ರಗತಿಯಲ್ಲಿ ಏರುತ್ತಲೇ ಹೋಗಿದೆ. ಕಾಯ್ದೆ ಜಾರಿಯಾಗಿ ೨೮ ವರ್ಷಗಳಾದರೂ ೨೦ ಲಕ್ಷ ಜನಸಂಖ್ಯೆಯ ರಾಜ್ಯವೊಂದರಲ್ಲಿ ನೆಮ್ಮದಿ ಸಾಧ್ಯವಾಗಿಲ್ಲ, ಬದಲಾಗಿ ಸಮಸ್ಯೆಯನ್ನು ಇನ್ನೂ ಹತ್ತು ಪಟ್ಟು ಹೆಚ್ಚಿಸಿದೆ.
******
ಸ್ವಾತಂತ್ರ್ಯಾನಂತರ ಇತರ ಭಾಗಗಳು ಭಾರತ ಒಕ್ಕೂಟಕ್ಕೆ ಸೇರ್ಪಡೆಯಾದಷ್ಟು ಸಲೀಸಾಗಿ, ತನ್ನ ಅಸ್ತಿತ್ವವನ್ನು ರೂಪಿಸಿಕೊಂಡಷ್ಟು ವೇಗವಾಗಿ ಈಶಾನ್ಯ ರಾಜ್ಯಗಳ ವಿಲೀನ ಸಾಧ್ಯವಾಗಲಿಲ್ಲ. ಅದಕ್ಕೆ ಕಾರಣಗಳು ಹಲವಾರು. ಈ ಸಪ್ತಸೋದರಿ ರಾಜ್ಯಗಳ ಸಂಸ್ಕೃತಿ, ಆಚರಣೆ, ಭಾಷೆ ಎಲ್ಲವೂ ಭಿನ್ನ. ಭಾವೈಕ್ಯತೆಯ ಸಂಭ್ರಮದಲ್ಲಿ ಏಕಭಾಷೆ, ಏಕಧರ್ಮ, ಏಕಸಂಸ್ಕೃತಿಗಳ ಹೇರಿಕೆ ಸ್ವಾತಂತ್ರ್ಯೋತ್ತರ ಕಾಲಘಟ್ಟದಲ್ಲಿ ನಡೆಯುತ್ತಲೇ ಬಂದಿದೆ. ಅದರಲ್ಲೂ ಈ ಬಲವಂತದ ಹೇರಿಕೆಗೆ ಬಲಿಯಾಗಿದ್ದು ಈಶಾನ್ಯ ರಾಜ್ಯಗಳು.
ಈ ರಾಜ್ಯಗಳ ಬುಡಕಟ್ಟು ಜನರ ಸಾಂಸ್ಕೃತಿಕ ಅನನ್ಯತೆಗಳು ದೇಶದ ‘ಮುಖ್ಯವಾಹಿನಿಯ ಪರಿಭಾಷೆಯಿಂದ ಹೊರಗೇ ಇದ್ದವು. ವಿಚಿತ್ರವೆಂದರೆ ಬುಡಕಟ್ಟು ಸಮುದಾಯಗಳೆಲ್ಲವೂ ಸ್ವಾತಂತ್ರ್ಯೋತ್ತರದಲ್ಲಿ ಒಂದೊಂದು ಧರ್ಮವನ್ನು ಆಶ್ರಯಿಸಿ ನಿಂತಿವೆ. ಈ ಬುಡಕಟ್ಟುಗಳೂ ಸಹ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಆಗಿ ವಿಂಗಡಣೆಯಾಗಿವೆ. ಸ್ವಾತಂತ್ರ್ಯಪೂರ್ವದಲ್ಲಿ ಪರಸ್ಪರ ಸಹಿಷ್ಣುತೆ, ಸಹಬಾಳ್ವೆಯಲ್ಲೇ ಇದ್ದ ಸಮುದಾಯಗಳು ಸ್ವಾತಂತ್ರ್ಯಾನಂತರ ಕಾದಾಟಕ್ಕೆ ಇಳಿದಿವೆ.
ಭಾರತ ಒಕ್ಕೂಟದಿಂದ ಮಣಿಪುರವನ್ನು ಬೇರ್ಪಡೆಗೊಳಿಸಿ ಪ್ರತ್ಯೇಕ ರಾಷ್ಟ್ರ ಸ್ಥಾಪಿಸಬೇಕು ಎಂಬ ಉದ್ದೇಶದಿಂದ ೧೯೬೪ರ ನವೆಂಬರ್ ೨೪ರಂದು ಸಮರೇಂದ್ರ ಸಿಂಗ್ ಎಂಬಾತ ಯುನೈಟೆಡ್ ನ್ಯಾಷನಲ್ ಲಿಬರೇಷನ್ ಫ್ರಂಟ್ ಎಂಬ ಬಂಡುಕೋರ ಗುಂಪೊಂದನ್ನು ಸ್ಥಾಪಿಸಿದ. ಇದರ ಬೆನ್ನಲ್ಲೇ ಒಂದಾದ ಮೇಲೊಂದರಂತೆ ಮೂರು ಬಂಡುಕೋರ ಸಂಘಟನೆಗಳು ಇದೇ ಉದ್ದೇಶದಿಂದ ಸ್ಥಾಪನೆಯಾದವು.
ಈ ಗುಂಪುಗಳನ್ನು ಹತ್ತಿಕ್ಕಲೆಂದೇ ೧೯೮೦ರಲ್ಲಿ ಸವಿಕಾ ಜಾರಿಯಾಯಿತು. ಆದರೆ ಕಾಯ್ದೆ ಜಾರಿಯಾದ ಮೇಲೆ ಬಂಡುಕೋರ ಗುಂಪುಗಳು ಕಡಿಮೆಯಾಗುವ ಬದಲಾಗಿ ಹೆಚ್ಚುತ್ತಲೇ ಬಂದಿವೆ.
ಮೊದಲು ಬಂಡುಕೋರ ಗುಂಪುಗಳನ್ನು ರಚಿಸಿದ್ದು ಮೀಟಿ ಸಮುದಾಯದವರು. ಆದರೆ ಪಂಗಾಲರೆಂದು ಕರೆಯಲ್ಪಡುವ ಮಣಿಪುರ ಮುಸ್ಲಿಮರು ಹಾಗು ಹಿಂದೂ ವೈಷ್ಣವರ ಗುಂಪಾದ ಮೀಟೀಗಳ ನಡುವೆ ಸಂಘರ್ಷಗಳು ನಡೆದ ಪರಿಣಾಮ ಹೊಸ ಗುಂಪುಗಳು ಸೃಷ್ಟಿಯಾದವು. ಪಂಗಾಲರು ವಿವಿಧ ಹೆಸರುಗಳಲ್ಲಿ ತಮ್ಮದೇ ಆದ ಬಂಡುಕೋರ ಸಶಸ್ತ್ರ ಪಡೆಗಳನ್ನು ಕಟ್ಟಿಕೊಂಡರು. ನಾಗಾ ಸಮುದಾಯದ ಸುಮಾರು ೨೦ ವಿವಿಧ ಹೆಸರಿನ ಬುಡಕಟ್ಟುಗಳು ಮಣಿಪುರದಲ್ಲಿವೆ. ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ ಹಾಗು ನಾಗಾಲ್ಯಾಂಡ್‌ನ ನಾಗಾ ಪ್ರಾಬಲ್ಯದ ಪ್ರದೇಶಗಳನ್ನು ಸೇರಿಸಿ ಗ್ರೇಟರ್ ನಾಗಾಲ್ಯಾಂಡ್ ರಚಿಸಬೇಕೆಂಬ ಬೇಡಿಕೆ ಮುಂದಿಟ್ಟು ನಾಗಾ ಸಮುದಾಯದ ಕೆಲ ಬಂಡುಕೋರ ಗುಂಪುಗಳೂ ಇಲ್ಲಿ ಕಾರ್ಯಾಚರಣೆ ಮಾಡುತ್ತಿವೆ. ನಾಗಾ ಸಮುದಾಯದ ಈ ಬೇಡಿಕೆಯನ್ನು ಸುತಾರಾಂ ಒಪ್ಪಲು ತಯಾರಿಲ್ಲದ ಕುಕಿ ಸಮುದಾಯದ ಕೆಲ ಬಂಡುಕೋರ ಗುಂಪುಗಳು ೧೯೯೦ರ ನಂತರ ರಚನೆಯಾದವು.
ಇವುಗಳಲ್ಲದೆ ಸುಮಾರು ಮೂವತ್ತಕ್ಕೂ ಹೆಚ್ಚು ಬುಡಕಟ್ಟು ಸಮುದಾಯಗಳನ್ನು ಕ್ರಿಶ್ಚಿಯನ್ ಧರ್ಮವನ್ನು ಅನುಸರಿಸುತ್ತಿವೆ. ಮೀಟಿ, ನಾಗ, ಕುಮಿ ಸಮುದಾಯಗಳಲ್ಲದೆ ಪೇಟ್ಸ್, ಥಾಡೋಸ್, ಸಿಮ್ಟಿಸ್, ವೈಪೀಸ್, ರಾಲ್ಟೇಸ್, ಗಾಂಗ್ಟೇಸ್ ಮತ್ತಿತರ ಸಮುದಾಯಗಳೂ ಇಲ್ಲಿವೆ.
ಸ್ವಾತಂತ್ರ್ಯಾನಂತರ ಆದ ಬದಲಾವಣೆಯೆಂದರೆ ಎಲ್ಲ ಬುಡಕಟ್ಟು ಸಮುದಾಯಗಳು ತಮ್ಮ ಅಸ್ಮಿತೆಯನ್ನು ಉಳಿಸಿಕೊಳ್ಳಲು ಪ್ರಭುತ್ವದೊಂದಿಗೆ ಹೋರಾಡುತ್ತಲೇ ತಮ್ಮೊಳಗೇ ಕದನ ಆರಂಭಿಸಿದ್ದು. ತತ್ಪರಿಣಾಮವಾಗಿ ಭಾರತ ಸರ್ಕಾರದ ಕೆಂಗಣ್ಣಿಗೆ ಮಣಿಪುರ ಗುರಿಯಾಯಿತು. ಈ ಬೆಳವಣಿಗೆಗಳಿಂದಾಗಿ ಪ್ರತ್ಯೇಕ ರಾಷ್ಟ್ರದ ಹೋರಾಟಗಳು ಆರಂಭಗೊಂಡು ಬಂಡುಕೋರ ಸಂಘಟನೆಗಳು ಒಂದಕ್ಕೆ ಒಂದಂತೆ ಒಡೆದು, ಹಲವು ಗುಂಪುಗಳಾಗಿ ಇಡೀ ರಾಜ್ಯದ ನೆಮ್ಮದಿಯೇ ಹಾಳಾಗಿ ಹೋಯಿತು.
ಒಂದೆಡೆ ಪರಮಾಧಿಕಾರ ಪಡೆದು ಬಂದು ಕುಳಿತಿರುವ ಸೇನಾಪಡೆ ಇನ್ನೊಂದೆಡೆ ಸ್ವಾತಂತ್ರ್ಯ ಕೊಡಿಸುತ್ತೇವೆ ಎಂದು ಬಂದೂಕು-ಬಾಂಬು ಹಿಡಿದು ಅಬ್ಬರಿಸುವ ಬಂಡುಕೋರರು. ಇಬ್ಬರ ನಡುವೆ ಜೀವಚ್ಛವವಾದವರು ಮಣಿಪುರಿ ಸಾಮಾನ್ಯ ಜನರು. ಸ್ಟೇಟ್ ಆಕ್ಟರ್‌ಗಳು ಹಾಗು ನಾನ್ ಸ್ಟೇಟ್ ಆಕ್ಟರ್‌ಗಳ ನಡುವೆ ಇಲ್ಲಿ ಅಂಥ ವ್ಯತ್ಯಾಸವೇನಿಲ್ಲ. ಎರಡೂ ಗುಂಪು ಅಮಾಯಕ ಜನರನ್ನು ಕೊಲ್ಲುತ್ತಲೇ ಬಂದಿವೆ.
******
ಮಣಿಪುರದಲ್ಲಿ ಆರಂಭಗೊಂಡಿದ್ದ ನಾಲ್ಕು ಬಂಡುಕೋರ ಗುಂಪುಗಳನ್ನು ದಮನ ಮಾಡಲು, ಅಥವಾ ಅವುಗಳೊಂದಿಗೆ ಚರ್ಚಿಸಿ ಸಮಸ್ಯೆಯನ್ನು ಬಗೆಹರಿಸಲು ಕೇಂದ್ರ ಸರ್ಕಾರಕ್ಕೆ ಸಾಧ್ಯವೇ ಇರಲಿಲ್ಲವೆ? ಸಮಸ್ಯೆ ಬಗೆಹರಿಸಲು ಕ್ರೂರಾತಿಕ್ರೂರ ಸವಿಕಾ ಜಾರಿಗೊಳಿಸುವುದು ಅನಿವಾರ್ಯವಾಗಿತ್ತೆ? ಕೇವಲ ಒಂದು ವರ್ಷದ ಮಟ್ಟಿಗೆ ಎಂದು ಹೇರಲಾದ ಕಾಯ್ದೆ ಇಪ್ಪತ್ತೆಂಟು ಸುದೀರ್ಘ ವರ್ಷಗಳು ಕಳೆದರೂ ಜಾರಿಯಲ್ಲಿರುವುದು ಏಕೆ? ಹಾಗೆ ಜಾರಿಯಲ್ಲಿದ್ದರೂ ಮಣಿಪುರದಲ್ಲಿ ಬಂಡುಕೋರ ಹುಟ್ಟಡಗಿಲ್ಲವೇಕೆ? ಬದಲಾಗಿ ಕಾಯ್ದೆ ಜಾರಿಯಾದ ಮೇಲೆ ಬಂಡುಕೋರರ ಸಂಖ್ಯೆ ಜಾಸ್ತಿಯಾಗಿದ್ದು ಯಾಕೆ? ಇಂಥ ಪ್ರಶ್ನೆಗಳ ಸುಳಿಯಲ್ಲೇ ಮಣಿಪುರದ ನಾಗರಿಕರು ಸಿಲುಕಿದ್ದಾರೆ.
ಇಂಥ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಶರ್ಮಿಳಾ ಯತ್ನಿಸಿದಳು. ಸೊಳ್ಳೆ, ತಿಗಣೆಗಳಂತೆ ತನ್ನ ನಾಡಿನ ಅಮಾಯಕ ಜನರನ್ನು ಹೊಸಕಿ ಹಾಕುವಂತೆ ಕೊಲ್ಲುವುದನ್ನು ನೋಡಿ ಆಕೆ ನೊಂದಿದ್ದಳು.
೨೦೦೦ನೇ ಇಸವಿಯ ನವೆಂಬರ್ ಎರಡನೇ ತಾರೀಖು ಮಣಿಪುರದ ಪಾಲಿಗೆ ಮತ್ತೊಂದು ದುರಂತದ ದಿನ. ಅಂದು ರಾಜಧಾನಿ ಇಂಫಾಲದಿಂದ ಸುಮಾರು ೧೫ ಕಿ.ಮೀ ದೂರದಲ್ಲಿರುವ ಮಾಲೋಮ್ ಎಂಬ ಊರಿನ ಬಸ್ ನಿಲ್ದಾಣದಲ್ಲಿ ಸೇನಾಪಡೆ ಸಿಬ್ಬಂದಿ ಗುಂಡಿನ ದಾಳಿ ನಡೆಸಿದರು. ಸತ್ತು ಹೋಗಿದ್ದು ಹತ್ತು ಮಂದಿ ಅಮಾಯಕ ನಾಗರಿಕರು. ಮಾಲೋಮ್‌ನ ರಸ್ತೆಗಳು ರಕ್ತದೋಕುಳಿಯಿಂದ ತುಂಬಿಹೋಗಿತ್ತು. ಮಣಿಪುರದಲ್ಲಿ ಇದು ಸಾಮಾನ್ಯ ಘಟನೆ. ಭಯೋತ್ಪಾದಕರೆಂಬ ಶಂಕೆಯ ಮೇಲೆ ಸೇನಾಪಡೆ ಯಾರ ಮೇಲೆ ಬೇಕಾದರೂ ಗುಂಡಿಟ್ಟು ಕೊಲ್ಲಬಹುದು. ಅದನ್ನು ಯಾರೂ ಪ್ರಶ್ನಿಸುವಂತೆಯೂ ಇಲ್ಲ.
ಆದರೆ ಶರ್ಮಿಳಾ ಸುಮ್ಮನಿರಲಿಲ್ಲ. ತನ್ನವರು ಹೀಗೆ ಸಾಯುತ್ತಿರುವಾಗ ಸುಮ್ಮನಿರುವುದು ಆಕೆಗೆ ಸಾಧ್ಯವಾಗಲಿಲ್ಲ. ಅವಳು ಬಂಡುಕೋರ ಗುಂಪನ್ನು ಸೇರಿ ಸೈನ್ಯದ ವಿರುದ್ಧ ಸೇಡು ತೀರಿಸಿಕೊಳ್ಳಬಹುದಿತ್ತು. ಆದರೆ ಹಾಗೆ ಮಾಡಲಿಲ್ಲ. ಆಕೆ ಆಯ್ದುಕೊಂಡಿದ್ದು ಮಣಿಪುರದ ಜನರಿಗೆ ಬಹುತೇಕ ಅಪರಿಚಿತವಾಗಿದ್ದ ಗಾಂಧಿ ಮಾರ್ಗವನ್ನು.
‘ಅಮ್ಮಾ, ಮನುಷ್ಯತ್ವವನ್ನು ಉಳಿಸುವ ಕಾರ್ಯಕ್ಕಾಗಿ ಹೊರಡುತ್ತಿದ್ದೇನೆ, ಆಶೀರ್ವಾದ ಮಾಡು ಎಂದು ತಾಯಿ ಐರೋಮ್ ಸಾಖಿ ದೇವಿಗೆ ಹೇಳಿದ ಶರ್ಮಿಳಾ ಎಲ್ಲಿ ರಕ್ತಪಾತವಾಗಿ, ಅಮಾಯಕ ಜನರು ವಿನಾಕಾರಣ ಪ್ರಾಣ ಕಳೆದುಕೊಂಡಿದ್ದರೋ ಅದೇ ಪ್ರದೇಶಕ್ಕೆ ಹೋಗಿ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿಬಿಟ್ಟಳು.
ಜನರನ್ನು ಕ್ರೂರವಾಗಿ ಕೊಲ್ಲುತ್ತಿರುವ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯನ್ನು ಹಿಂದಕ್ಕೆ ಪಡೆಯಬೇಕು ಎಂಬುದು ಆಕೆಯ ಬೇಡಿಕೆ. ಅದು ಸರಳ ಮತ್ತು ಸ್ಪಷ್ಟ. ಆದರೆ ಆಕೆಯ ಬೇಡಿಕೆಯನ್ನು ಈಡೇರಿಸುವುದು ಕೇಂದ್ರ ಸರ್ಕಾರಕ್ಕೆ ಅಷ್ಟು ಸರಳವಾಗಿರಲಿಲ್ಲ.
ಶರ್ಮಿಳಾ ಉಪವಾಸಕ್ಕೆ ಕುಳಿತಾಗ ಜನ ಇದು ಹೆಚ್ಚು ದಿನ ನಡೆಯುವುದಿಲ್ಲ ಎಂದುಕೊಂಡಿದ್ದರು. ಅಂಥ ಪರಿಸ್ಥಿತಿಯಲ್ಲಿ ಅಹಿಂಸಾತ್ಮಕ ಹೋರಾಟಕ್ಕೆ ಅರ್ಥವಿಲ್ಲ ಎಂದೇ ಬಗೆದಿದ್ದರು. ದಿನ ಕಳೆದಂತೆ ಶರ್ಮಿಳಾ ಅಲ್ಲೇ ತಳವೂರಿದಳು. ಆಕೆಯ ದೇಹಸ್ಥಿತಿ ಹದಗೆಡತೊಡಗಿತು. ಮಣಿಪುರ ಸರ್ಕಾರ ನಿಧಾನವಾಗಿ ತಲೆಕೆಡಿಸಿಕೊಳ್ಳಲು ಆರಂಭಿಸಿತು.
ಇನ್ನೇನು ಶರ್ಮಿಳಾ ಸತ್ತೇ ಹೋಗುತ್ತಾಳೆ ಅನಿಸಿದ ನಂತರ ನ.೨೧ರಂದು ಆಕೆಯನ್ನು ಸ್ಥಳೀಯ ಆಡಳಿತ ಇಂಫಾಲದ ಆಸ್ಪತ್ರೆಗೆ ದಾಖಲಿಸಿತು. ಶರ್ಮಿಳಾ ಆಹಾರ ಸೇವಿಸಲು ನಿರಾಕರಿಸಿದಳು. ಬಲವಂತವಾಗಿ ಆಕೆಗೆ ಮೂಗಿನ ಮೂಲಕ ದ್ರವಾಹಾರ ಕೊಡಲಾಯಿತು.
ಶರ್ಮಿಳಾ ವಿರುದ್ಧ ‘ಆತ್ಮಹತ್ಯೆ ಯತ್ನದ ಕೇಸು ಜಡಿಯಲಾಯಿತು. ಈ ಕೇಸಿನಡಿ ವ್ಯಕ್ತಿಯೊಬ್ಬನಿಗೆ ಗರಿಷ್ಠ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಬಹುದು. ಶರ್ಮಿಳಾಗೆ ಒಂದು ವರ್ಷದ ಜೈಲು ಶಿಕ್ಷೆಯಾಯಿತು. ಅವಳಿದ್ದ ಆಸ್ಪತ್ರೆಯೇ ಅವಳಿಗೆ ಜೈಲು. ಕಳೆದ ಎಂಟು ವರ್ಷಗಳಲ್ಲಿ ಇಂಥ ಒಂದು ವರ್ಷದ ಜೈಲು ಶಿಕ್ಷೆಗಳನ್ನು ಆಕೆಗೆ ಎಂಟು ಬಾರಿ ನೀಡಲಾಗಿದೆ!
*****
ಶರ್ಮಿಳಾ ಉಪವಾಸ ಸತ್ಯಾಗ್ರಹ ಆರಂಭಿಸಿ ನಾಲ್ಕು ವರ್ಷ ಕಳೆದ ಬಳಿಕ ಮಣಿಪುರದಲ್ಲಿ ಮತ್ತೊಂದು ಭಯಾನಕ ಘಟನೆ ಸಂಭವಿಸಿತು. ಈ ಘಟನೆಯ ಕೇಂದ್ರಬಿಂದು ಆಗಿದ್ದವಳು ತಂಗ್‌ಜಮ್ ಮನೋರಮಾ ದೇವಿ. ಮಣಿಪುರಿ ಜನರ ಪಾಲಿಗೆ ಶರ್ಮಿಳಾ ಒಬ್ಬ ದೇವತೆಯಾದರೆ ಮನೋರಮಾ ಮತ್ತೊಬ್ಬ ದೇವತೆ. ಇದಕ್ಕೆ ಸಾಕ್ಷಿಯಾಗಿ ಮನೋರಮಾಳ ಮನೆಯ ಎದುರಿಗೇ ಅವಳ ದೇವಸ್ಥಾನವೊಂದು ನಿರ್ಮಾಣಗೊಂಡಿದೆ. ಈ ಇಬ್ಬರು ಹೆಣ್ಣುಮಕ್ಕಳು ಮಣಿಪುರದ ಸಮಸ್ಯೆಗಳಿಗೆ ಸಂಕೇತ. ಇಡೀ ಜಗತ್ತು ಇಂದು ಮಣಿಪುರದ ಸಮಸ್ಯೆಗಳನ್ನು ಈ ಇಬ್ಬರು ಹೆಣ್ಣುಮಕ್ಕಳ ಮೂಲಕವೇ ಗಮನಿಸುತ್ತಿದೆ.
೨೦೦೪ರ ಜುಲೈ ೧೫ರಂದು ಭಾರತೀಯ ಭೂಸೇನೆಯ ಭಾಗವಾಗಿರುವ ಅಸ್ಸಾಂ ರೈಫಲ್ಸ್‌ನ ೧೭ನೇ ಬೆಟಾಲಿಯನ್ ಕೇಂದ್ರ ಸ್ಥಾನದ ಎದುರು ಸುಮಾರು ೧೨ಕ್ಕೂ ಹೆಚ್ಚು ಮಹಿಳೆಯರು ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆ ಸಾಮಾನ್ಯದ್ದಾಗಿರಲಿಲ್ಲ. ಸ್ತ್ರೀಯನ್ನು ದೇವತೆಯೆಂದು ಪೂಜಿಸುವ ಭಾರತದ ಭೂಭಾಗದಲ್ಲಿ ಈ ಹೆಣ್ಣುಮಕ್ಕಳು ಸಂಪೂರ್ಣ ಬೆತ್ತಲಾಗಿ ನಿಂತು ಪ್ರತಿಭಟನೆ ನಡೆಸಿದರು. ಅವರ ಮೈಮೇಲೆ ಒಂದು ಎಳೆ ದಾರವೂ ಇರಲಿಲ್ಲ.
ಅವರ ಕೈಯಲ್ಲಿದ್ದ ಬ್ಯಾನರ್‌ಗಳಲ್ಲಿ ‘ಇಂಡಿಯನ್ ಆರ್ಮಿ ರೇಪ್ ಅಸ್, ‘ಇಂಡಿಯನ್ ಆರ್ಮಿ ಟೇಕ್ ಅವರ್ ಫ್ಲೆಷ್ ಎಂದು ಬರೆಯಲಾಗಿತ್ತು.
ಇಂಥ ಹೃದಯ ತಲ್ಲಣಿಸುವ ಪ್ರತಿಭಟನೆ ನಡೆಯಲು ಕಾರಣವಾಗಿದ್ದು ಅದೇ ಅಸ್ಸಾಂ ರೈಫಲ್ಸ್ ಪಡೆ. ಜುಲೈ ೧೦ರಂದು ಇದೇ ಪಡೆ ತಂಗ್‌ಜಮ್ ಮನೋರಮಾ ದೇವಿ ಎಂಬ ೩೨ ವರ್ಷದ ಹೆಣ್ಣುಮಗಳನ್ನು ಅಮಾನುಷವಾಗಿ ಕೊಂದು ಹಾಕಿದೆ ಎಂಬುದು ಅವರ ಆರೋಪವಾಗಿತ್ತು.
ಮನೋರಮಾ ಅವರ ಕಿರಿಯ ಸೋದರ ದೊಲೇಂದ್ರೋ ಸಿಂಗ್ ಹೇಳುವ ಪ್ರಕಾರ ಅಸ್ಸಾಂ ರೈಫಲ್ಸ್‌ನ ಹಲವು ಯೋಧರು ಮಧ್ಯರಾತ್ರಿ ಮನೆಯೊಳಗೆ ಪ್ರವೇಶಿಸಿದರು. ಮನೋರಮಾ ತಾಯಿ ತಂಗ್‌ಜಮ್ ಖುಮಾನ್ಲೇಮಾಯಿ ದೇವಿಯ ಹಣೆಗೆ ಬಂದೂಕು ಇಟ್ಟು ನಿಮ್ಮ ಮಗಳು ಎಲ್ಲಿ ಎಂದು ಪ್ರಶ್ನಿಸಿದರು. ಮನೋರಮಾ ಎದ್ದು ಬಂದಳು. ಮನೋರಮಾಳನ್ನು ಎಳೆದು ಮನೆಯಿಂದ ಹೊರಗೆ ತರಲು ಯತ್ನಿಸಿದರು. ಈ ಸಂದರ್ಭದಲ್ಲಿ ಪ್ರಶ್ನಿಸಿದ ಸೋದರರನ್ನು ಥಳಿಸಲಾಯಿತು. ತಾಯಿ ಹಾಗು ಪುತ್ರರನ್ನು ಹೊರಗೆ ಕಳುಹಿಸಿ ಮನೋರಮಾ ವಿಚಾರಣೆ ಆರಂಭಿಸಲಾಯಿತು. ಹೊರಗಿದ್ದ ನಮಗೆ ನನ್ನ ಸೋದರಿಯ ಚೀತ್ಕಾರ ಕೇಳಿಸುತ್ತಿತ್ತು. ಅವರು ಆಕೆಗೆ ವಿಪರೀತ ಹಿಂಸೆ ನೀಡುತ್ತಿದ್ದರು ಎನ್ನುತ್ತಾರೆ ದೊಲೇಂದ್ರೋ ಸಿಂಗ್.
ಬೆಳಗಿನ ಜಾವ ೩-೩೦ರ ಸುಮಾರಿಗೆ ಮನೆಯಿಂದ ಹೊರ ಬಂದ ಸೈನಿಕರು ಮನೋರಮಾಳನ್ನು ವಿಚಾರಣೆಗಾಗಿ ಹೊರಗೆ ಕರೆದೊಯ್ಯುತ್ತಿರುವುದಾಗಿ ಹೇಳಿದರು. ಹವಾಲ್ದಾರ್ ಸುರೇಶ್ ಕುಮಾರ್ ಬಂಧನ ನೋಟಿಸ್‌ಗೆ ಸಹಿ ಮಾಡಿದರು. ರೈಫಲ್‌ಮ್ಯಾನ್‌ಗಳಾದ ಟಿ.ಲೋಥಾ ಹಾಗು ಅಜಿತ್ ಸಿಂಗ್ ಸಾಕ್ಷಿಗಳಾಗಿ ಸಹಿ ಹಾಕಿದರು.
ಮನೋರಮಾಳನ್ನು ಅಲ್ಲಿಂದ ಕರೆದೊಯ್ಯುವಾಗ ಆಕೆ ಜೀವಂತವಾಗಿಯೇ ಇದ್ದಳು. ಆದರೆ ಬೆಳಿಗ್ಗೆ ೫-೩೦ರ ಹೊತ್ತಿಗೆ ಆಕೆಯ ಮನೆಯಿಂದ ಸುಮಾರು ನಾಲ್ಕು ಕಿ.ಮೀ. ದೂರದ ಎನ್. ಮಾರಿಂಗ್ ಎಂಬ ಹಳ್ಳಿಯ ಬಳಿ ಆಕೆ ಶವವಾಗಿ ಪತ್ತೆಯಾಗಿದ್ದಳು. ಆಕೆಯ ದೇಹದ ಮೇಲೆ ಗುಂಡುಗಳ ಮಳೆಯನ್ನೇ ಸುರಿಸಲಾಗಿತ್ತು. ಚಾಕುವಿನಿಂದ ಆಕೆಯ ಎದೆಗೆ ಚುಚ್ಚಲಾಗಿತ್ತು. ತೀರಾ ಅಮಾನವೀಯವೆಂದರೆ ಆಕೆಯ ಖಾಸಗಿ ಅಂಗವನ್ನು ಗುಂಡಿನ ದಾಳಿಯಿಂದ ಛಿದ್ರಗೊಳಿಸಲಾಗಿತ್ತು. ಆಕೆಯ ಮೇಲೆ ಅಮಾನುಷವಾಗಿ ಸಾಮೂಹಿಕ ಅತ್ಯಾಚಾರ ನಡೆದ ಹಿನ್ನೆಲೆಯಲ್ಲಿ ಸಾಕ್ಷ್ಯ ದೊರೆಯದಂತೆ ಆಕೆಯ ಮರ್ಮಾಂಗವನ್ನೇ ಗುಂಡಿನಿಂದ ಸುಡಲಾಗಿತ್ತು.
ಜು.೧೫ರಂದು ಬೆತ್ತಲೆ ಪ್ರತಿಭಟನೆ ನಡೆಸಿದ ಮಹಿಳೆಯರಲ್ಲಿ ಒಬ್ಬರಾದ ಎಲ್.ಗ್ಯಾನೇಶ್ವರಿ ಹೇಳುವುದು ಹೀಗೆ: “ಮನೋರಮಾ ಕಗ್ಗೊಲೆ ನಮ್ಮ ಹೃದಯಗಳನ್ನು ಒಡೆದು ಹಾಕಿದೆ. ಬಂಧಿಸುವಾಗ ಬಂಧನ ನೋಟಿಸ್ ನೀಡಬೇಕು ಎಂದು ಒತ್ತಾಯಿಸಿ ನಾವು ಹಿಂದೆ ಪ್ರತಿಭಟನೆ ನಡೆಸಿದ್ದೆವು. ಆದರೆ ಬಂಧನ ನೋಟಿಸ್ ನೀಡಿಯೂ ಮನೋರಮಾ ಅತ್ಯಾಚಾರ, ಕೊಲೆಗೆ ಈಡಾದಳು. ಅವರು ಆಕೆಯ ದೇಹವನ್ನು ಛಿದ್ರಗೊಳಿಸಿದ್ದಲ್ಲದೆ, ಆಕೆಯ ಖಾಸಗಿ ಅಂಗಕ್ಕೂ ಗುಂಡಿಟ್ಟರು.
ನಾವು, ತಾಯಂದಿರು ಅಳುತ್ತಿದ್ದೇವೆ. ಈಗ ನಮ್ಮ ಹೆಣ್ಣುಮಕ್ಕಳೂ ಸಹ ಮಾನಭಂಗಕ್ಕೆ ಒಳಗಾಗಬಹುದು. ಅವರನ್ನು ಯಾವುದೇ ಪ್ರಮಾಣದಲ್ಲೂ ಹಿಂಸೆಗೆ ಈಡು ಮಾಡಬಹುದು. ಮಣಿಪುರದ ಎಲ್ಲ ಹೆಣ್ಣುಮಕ್ಕಳ ಬದುಕೂ ಅಭದ್ರಗೊಂಡಿದೆ. ನಾವು ನಮ್ಮ ಬಟ್ಟೆಯನ್ನೆಲ್ಲ ಕಳಚಿ ಸೇನಾಕಛೇರಿ ಎದುರು ನಿಂತೆವು. ನಾವು ಹೇಳಿದೆವು: ನಾವು, ತಾಯಂದಿರು ಬಂದಿದ್ದೇವೆ. ನಮ್ಮ ರಕ್ತವನ್ನು ಕುಡಿಯಿರಿ. ನಮ್ಮ ಮಾಂಸವನ್ನು ತಿನ್ನಿ. ಬಹುಶಃ ಇದನ್ನು ಮಾಡಿದರೆ ನೀವು ನಮ್ಮ ಹೆಣ್ಣುಮಕ್ಕಳನ್ನು ಬಿಡಬಹುದೇನೋ?
ಮನೋರಮಾ ಸತ್ತು ನಾಲ್ಕೂವರೆ ವರ್ಷಗಳಾಗಿ ಹೋಗಿದೆ. ಆದರೆ ಆಕೆಗೆ ಇನ್ನೂ ನ್ಯಾಯ ದೊರೆತಿಲ್ಲ. ಆಕೆಯನ್ನು ಕೊಂದವರಿಗೆ ಶಿಕ್ಷೆಯಾಗಿಲ್ಲ. ಗ್ಯಾನೇಶ್ವರಿ ಇದನ್ನು ನೆನಪಿಸಿಕೊಂಡು ಹೇಳುತ್ತಾರೆ: “ ಆ ಸೈನಿಕರಿಗೆ ಇನ್ನೂ ಶಿಕ್ಷೆಯಾಗಿಲ್ಲ. ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯಿಂದ ಮಣಿಪುರ ಮಹಿಳೆಯರು ಬಿಡುಗಡೆ ಹೊಂದಿಲ್ಲ. ನಾವು ಇನ್ನೂ ಬೆತ್ತಲಾಗೇ ಇದ್ದೇವೆ!
ಮನೋರಮಾ ದೇಹ ಪತ್ತೆಯಾದ ನಂತರ ಆಕೆಯ ಸಹೋದರ ದೋಲೇಂದ್ರೋ ಸಿಂಗ್ ಇರಿಲ್‌ಬಂಗ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿದರು. ತನ್ನ ಸೋದರಿಯ ಮೇಲೆ ಅತ್ಯಾಚಾರ ನಡೆಸಿ ಕೊಲ್ಲಲಾಗಿದೆ ಎಂದು ಆರೋಪಿಸಿದರು. ಆತನ ದೂರಿನ ಆಧಾರದಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿದರು. ಆಕೆಯ ಮೇಲೆ ಅತ್ಯಾಚಾರ ನಡೆದಿರುವುದನ್ನು ಖಚಿತಪಡಿಸಿಕೊಳ್ಳಲು ಡಿಎನ್‌ಎ ಪರೀಕ್ಷೆಯೂ ಸೇರಿದಂತೆ ವೈಜ್ಞಾನಿಕ ಪರೀಕ್ಷೆಗಳಿಗೆ ಮುಂದಾದರು.
ಕೇಂದ್ರೀಯ ವಿಧಿವಿಜ್ಞಾನ ಪ್ರಯೋಗಾಲಯವು ಮನೋರಮಾ ಪೆಟಿಕೋಟ್ ಮೇಲೆ ಇದ್ದ ವೀರ್‍ಯದ ಕಲೆಗಳನ್ನು ಪರಿಶೀಲಿಸಿ ಆಕೆಯ ಮೇಲೆ ಅತ್ಯಾಚಾರ ನಡೆದಿರುವ ಸಾಧ್ಯತೆಯನ್ನು ಒಪ್ಪಿಕೊಂಡಿತು. ಮರಣೋತ್ತರ ಪರೀಕ್ಷೆಯ ನಂತರ ಮನೋರಮಾ ಶವವನ್ನು ಮನೆಯವರಿಗೆ ನೀಡಲು ಪೊಲೀಸರು ಯತ್ನಿಸಿದರು. ಆದರೆ ಆಕೆಯ ಮನೆಯವರು ಶವವನ್ನು ಪಡೆಯಲಿಲ್ಲ. ಪೊಲೀಸರೇ ಆಕೆಯ ಅಂತ್ಯಸಂಸ್ಕಾರ ನಡೆಸಿದರು.
ಮನೋರಮಾ ಬಂಡುಕೋರರ ಜತೆ ಸಖ್ಯ ಬೆಳೆಸಿದ್ದಳು. ಈ ಹಿನ್ನೆಲೆಯಲ್ಲಿ ಆಕೆಯ ವಿಚಾರಣೆ ನಡೆಸುತ್ತಿದ್ದೆವು. ಆಕೆ ಓಡಿಹೋಗಲು ಯತ್ನಿಸಿದಾಗ ಗುಂಡು ಹಾರಿಸಲಾಯಿತು. ಏನೇ ಆದರೂ ಮನೋರಮಾ ಹತ್ಯೆ ಪ್ರಕರಣ ದುರದೃಷ್ಟಕರ ಎಂದು ಸೇನಾಧಿಕಾರಿಗಳು ತಿಪ್ಪೆ ಸಾರಿಸಿದರು.
*****
ಮನೋರಮಾ ಹತ್ಯೆ ನಡೆದು, ಅದನ್ನು ಖಂಡಿಸಿ ಮಣಿಪುರದ ತಾಯಂದಿರು ನಗ್ನರಾಗಿ ಪ್ರತಿಭಟಿಸಿದ ನಂತರ ಇಡೀ ಮಣಿಪುರದಲ್ಲಿ ಜನ ಬಂಡೆದ್ದರು. ಬೀದಿಬೀದಿಗಳಲ್ಲಿ ಪ್ರತಿಭಟನೆಗಳಾದವು. ಕಾಯ್ದೆಯನ್ನು ವಾಪಾಸ್ ತೆಗೆದುಕೊಳ್ಳಲು ಒತ್ತಾಯಿಸಿ ಉಗ್ರಸ್ವರೂಪದ ಹೋರಾಟಗಳು ನಡೆದವು.
ತಾಯಂದಿರ ಪ್ರತಿಭಟನೆ ಹಿನ್ನೆಲೆಯಲ್ಲಿ ಕಾಂಗ್ಲಾ ಕೋಟೆಯಲ್ಲಿದ್ದ ಅಸ್ಸಾಂ ರೈಫಲ್ಸ್‌ನ ೧೭ನೇ ತುಕಡಿಯನ್ನು ಕೇಂದ್ರ ಸರ್ಕಾರ ಹಿಂದಕ್ಕೆ ಪಡೆಯಿತು. ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ ಕುರಿತು ಮರುಪರಿಶೀಲನೆ ನಡೆಸಲು ಜೀವನ್ ರೆಡ್ಡಿ ಆಯೋಗವನ್ನು ನೇಮಿಸಿತು.
ರಾಜ್ಯ ಸರ್ಕಾರ ಆದೇಶವೊಂದನ್ನು ಹೊರಡಿಸಿ ಮನೋರಮಾ ಹತ್ಯೆ ಪ್ರಕರಣ ನಿವೃತ್ತ ನ್ಯಾಯಾಧೀಶ ಸಿ.ಉಪೇಂದ್ರ ಸಿಂಗ್ ಅವರ ನೇತೃತ್ವದಲ್ಲಿ ತನಿಖಾ ಆಯೋಗವೊಂದನ್ನು ರಚಿಸಿತು. ಆದರೆ ಆಯೋಗಕ್ಕೆ ಅಸ್ಸಾಂ ರೈಫಲ್ಸ್ ಸಹಕರಿಸಲಿಲ್ಲ. ಸಮನ್ಸ್ ಕಳುಹಿಸಿದರೂ ಆರೋಪಿಗಳು ನ್ಯಾಯಾಧೀಶರ ಮುಂದೆ ಹಾಜರಾಗಲಿಲ್ಲ. ನ್ಯಾಯಾಧೀಶರು ಬೇರೆ ವಿಧಿಯಿಲ್ಲದೆ ಪತ್ರಿಕೆಗಳಲ್ಲಿ ಪ್ರಕಟಣೆ ಹೊರಡಿಸಿದರು. ಆದರೆ ಅದೂ ಪ್ರಯೋಜನವಾಗಲಿಲ್ಲ.
ಅಸ್ಸಾಂ ರೈಫಲ್ಸ್ ಗುವಾಹಟಿ ಹೈಕೋರ್ಟ್‌ನಲ್ಲಿ ದಾವೆ ಹೂಡಿ ವಿಚಾರಣಾ ಆಯೋಗವೇ ಅಸಿಂಧು ಎಂದು ವಾದಿಸಿತು. ಸವಿಕಾ ಪ್ರಕಾರ ಕೇಂದ್ರ ಸರ್ಕಾರದ ಅನುಮತಿಯಿಲ್ಲದೆ ನಮ್ಮ ವಿರುದ್ಧ ತನಿಖೆ ನಡೆಸುವಂತಿಲ್ಲ ಎಂದು ಕಾಯ್ದೆಯನ್ನೇ ಗುರಾಣಿಯಾಗಿ ಬಳಸಿತು. ಹೈಕೋರ್ಟ್ ಪ್ರಕರಣದ ತನಿಖೆ ನಡೆಸಲು ಆಯೋಗಕ್ಕೆ ಅನುಮತಿ ನೀಡಿತಾದರೂ ವರದಿಯನ್ನು ಅಂತಿಮ ಆದೇಶದವರೆಗೆ ಬಹಿರಂಗಗೊಳಿಸದಿರಲು ಹೇಳಿತು.
ಪ್ರಕರಣ ಇನ್ನೂ ಬಗೆಹರಿದಿಲ್ಲ. ಆಯೋಗ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಸವಿಕಾ ಕಟ್ಟುಪಾಡುಗಳ ಹಿನ್ನೆಲೆಯಲ್ಲಿ ಅದಕ್ಕೆ ಮೋಕ್ಷ ಸಿಕ್ಕೀತೆಂಬ ನಂಬಿಕೆ ಯಾರಲ್ಲೂ ಇಲ್ಲ.
ಮನೋರಮಾ ಹತ್ಯೆಯ ನಂತರ ಸವಿಕಾ ಹಿಂದಕ್ಕೆ ಪಡೆಯಬೇಕೆಂದು ಒತ್ತಾಯಿಸಿ ಮಣಿಪುರಿಗಳು ಹೋರಾಟ ತೀವ್ರಗೊಳಿಸಿದರು. ಆಗಸ್ಟ್ ೧೫ರಂದು ಮಣಿಪುರ ವಿದ್ಯಾರ್ಥಿ ಫೆಡರೇಷನ್‌ನ ಚಿತ್ತರಂಜನ್ ಎಂಬ ಯುವಕ ಮೈಮೇಲೆ ಬೆಂಕಿ ಹಾಕಿಕೊಂಡು ಪ್ರಾಣತೆತ್ತ. ಆತ ಹಾಗೆ ಪ್ರಾಣ ಕಳೆದುಕೊಳ್ಳುವುದನ್ನು ಪೊಲೀಸರು, ಮಾಧ್ಯಮದವರು ಯಾವುದೋ ಸಿನಿಮಾ ದೃಶ್ಯ ನೋಡುವಂತೆ ನೋಡಿ ಸುಮ್ಮನಿದ್ದರು.
ಒತ್ತಡಗಳು ಹೆಚ್ಚಿದ ನಂತರ ಮುಖ್ಯಮಂತ್ರಿ ಐಬೋಬಿ ಸಿಂಗ್ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯನ್ನು ಇಂಫಾಲ ನಗರದ ಮಟ್ಟಿಗೆ ಹಿಂದಕ್ಕೆ ಪಡೆಯಲು ನಿರ್ಧರಿಸಿದರು. ಆದರೆ ಕಾಯ್ದೆ ರಾಜ್ಯದಿಂದ ಸಂಪೂರ್ಣ ತೊಲಗಬೇಕು ಎಂದು ಪ್ರತಿಭಟನಾಕಾರರು ಪಟ್ಟುಹಿಡಿದರು.
ನವೆಂಬರ್ ಹೊತ್ತಿಗೆ ಪ್ರಧಾನಿ ಡಾ.ಮನಮೋಹನ ಸಿಂಗ್ ಮಣಿಪುರಕ್ಕೆ ಭೇಟಿ ನೀಡಿದರು. ಮನೋರಮಾ ಹತ್ಯೆ, ಚಿತ್ತರಂಜನ್ ಆತ್ಮಾಹುತಿಯ ಕಾವು ಮಣಿಪುರದಲ್ಲಿ ಇನ್ನೂ ಆರಿರಲಿಲ್ಲ. ಆಗಲೂ ದಿನನಿತ್ಯ ಪ್ರತಿಭಟನೆಗಳು ನಡೆಯುತ್ತಲೇ ಇದ್ದವು. ಪ್ರಧಾನಿ ಈ ಸಂದರ್ಭದಲ್ಲಿ ಮಹತ್ವದ ಘೋಷಣೆ ಮಾಡಿ, ಕಾಯ್ದೆಯ ಮರುಪರಿಶೀಲನೆ ನಡೆಸಿ, ಮಾನವ ಹಕ್ಕುಗಳನ್ನು ರಕ್ಷಿಸುವ ಅಂಶಗಳನ್ನು ಅಳವಡಿಸಲಾಗುವುದು ಎಂದು ಹೇಳಿ ಹೋದರು.
*****
ಇದೆಲ್ಲದರ ನಡುವೆ ಶರ್ಮಿಳಾ ಮೌನವಾಗಿ ತನ್ನ ಪ್ರತಿಭಟನೆ ಮುಂದುವರೆಸಿದಳು. ಆಕೆಯ ಹೋರಾಟಕ್ಕೆ ಕೊನೆಯೇ ಇರಲಿಲ್ಲ. ಮನೋರಮಾ ಹತ್ಯೆ ಶರ್ಮಿಳಾಳನ್ನು ಇನ್ನಿಲ್ಲದಂತೆ ಕಾಡಿತು. ಮಾತ್ರವಲ್ಲದೆ ಆಕೆಯ ಹೋರಾಟಕ್ಕೆ ಇನ್ನಷ್ಟು ತೀವ್ರತೆಯನ್ನೂ ನೀಡಿತು.
ಮನೋರಮಾ ಹತ್ಯೆ ಖಂಡಿಸಿ ಪ್ರತಿಭಟನೆ ನಡೆಸಿದ ತಾಯಂದಿರು ನಿಧಾನವಾಗಿ ಶರ್ಮಿಳಾ ಹೋರಾಟದಲ್ಲಿ ಧ್ವನಿಗೂಡಿಸಿದರು. ಆಲ್ ಮಣಿಪುರ ವಿಮೆನ್ ಸೋಷಿಯಲ್ ರಿಫಾರ್‍ಮೇಷನ್ ಅಂಡ್ ಡೆವೆಲಪ್‌ಮೆಂಟ್ ಸಮಾಜ ಎಂಬ ಸಂಘಟನೆಯಡಿ ಈ ತಾಯಂದಿರು ಕೆಲಸ ಮಾಡುತ್ತಿದ್ದರು. ಕುಡಿತ ಬಿಡಿಸುವುದೂ ಸೇರಿದಂತೆ ಹಲವು ಸಾಮಾಜಿಕ ಅನಿಷ್ಠಗಳ ವಿರುದ್ಧ ಹೋರಾಡುತ್ತಿದ್ದ ಸಂಘಟನೆ ಇದು. ಐತಿಹಾಸಿಕ ಪ್ರತಿಭಟನೆಯ ನಂತರ ಈ ಸಂಘಟನೆಯನ್ನು ಮದರ್‍ಸ್ ಫ್ರಂಟ್ ಎಂದೇ ಕರೆಯಲಾಗುತ್ತಿದೆ.
ತಮಾಶೆ ಎಂದರೆ ಈ ಎಲ್ಲ ಹೆಣ್ಣುಮಕ್ಕಳನ್ನು ಬೆತ್ತಲೆ ಪ್ರತಿಭಟನೆ ನಡೆಸಿದ ತಪ್ಪಿಗೆ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿಸಿ ಜೈಲಿಗೆ ತಳ್ಳಲಾಗಿತ್ತು. ಭಯೋತ್ಪಾದಕರ ಮೇಲೆ ಹೂಡುವ ಕೇಸುಗಳನ್ನು ಇವರ ಮೇಲೆ ಹೂಡಲಾಗಿತ್ತು. ತಾಯಂದಿರು ಅಂಜಲಿಲ್ಲ, ಅಳುಕಲಿಲ್ಲ. ಜಾಮೀನಿಗೆ ಅರ್ಜಿಯನ್ನೂ ಹಾಕಲಿಲ್ಲ.
ನ್ಯಾಯಾಲಯದ ಮುಂದೆ ಪ್ರಕರಣ ಬಂದಾಗ ಇವರ ವಿರುದ್ಧದ ಆರೋಪಗಳನ್ನು ರುಜುವಾತು ಮಾಡಲು ಪೊಲೀಸರ ಬಳಿ ಯಾವ ಸಾಕ್ಷ್ಯವೂ ಇರಲಿಲ್ಲ. ನ್ಯಾಯಾಲಯ ಎಲ್ಲರನ್ನೂ ಬಿಡುಗಡೆ ಮಾಡಿತು.
ಶರ್ಮಿಳಾ ಬೆನ್ನಿಗೆ ನಿಂತಿರುವ ಈ ತಾಯಂದಿರು ತಮ್ಮ ಎಂದಿನ ದಿಟ್ಟನುಡಿಗಳಲ್ಲಿ ವ್ಯವಸ್ಥೆಯನ್ನು ಟೀಕಿಸುತ್ತಾರೆ. ತಾಯಂದಿರ ಸಂಘಟನೆಯ ಮುಖ್ಯಸ್ಥೆ ರಮಣಿ ದೇವಿ ಹೀಗೆನ್ನುತ್ತಾರೆ: “ಜನರಿಗಾಗಿ ಶರ್ಮಿಳಾ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾಳೆ. ಒಬ್ಬ ಮನುಷ್ಯ ಆಹಾರವಿಲ್ಲದೆ ಎಷ್ಟು ದಿನಗಳ ಕಾಲ ಬದುಕಬಲ್ಲ ಎಂಬ ಸಂಶೋಧನೆ ನಡೆಸಲು ಆಕೆಯನ್ನು ಆಸ್ಪತ್ರೆಯಲ್ಲಿ ಇಟ್ಟುಕೊಳ್ಳಲಾಗಿದೆ ಎಂದು ನಮಗನ್ನಿಸುತ್ತಿದೆ. ಆದರೂ ಸರ್ಕಾರ ಕಾಯ್ದೆಯನ್ನು ಕಿತ್ತುಹಾಕುತ್ತದೆ, ಶರ್ಮಿಳಾ ಸಹಜ ಸ್ಥಿತಿಗೆ ಮರಳುತ್ತಾರೆ ಎಂಬ ಆಶಾವಾದ ಇನ್ನೂ ನಮಗಿದೆ
*****
ಐರೋಮ್ ನಂದಾ ಹಾಗು ಐರೋಮ್ ಸಾಖಿ ದೇವಿ ದಂಪತಿಗಳ ಕಿರಿಯ ಪುತ್ರಿ ಶರ್ಮಿಳಾ. ಅಕ್ಕ ವೈಜಯಂತಿ ಹಾಗು ಅಣ್ಣ ಸಿಂಘಜಿತ್‌ಗೆ ಈಕೆ ನೆಚ್ಚಿನ ತಂಗಿ. ಚಿಕ್ಕಂದಿನಿಂದಲೂ ಆಕೆ ಸಾಹಸಪ್ರಿಯೆ. ಬಹುಮುಖ ವ್ಯಕ್ತಿತ್ವದ ಪ್ರತಿಭೆ. ಶರ್ಮಿಳಾಗೆ ಯೋಗದಲ್ಲಿ ಆಸಕ್ತಿ. ಮಣಿಪುರದ ಸಾಹಿತಿಗಳಿಗೆ ಗೊತ್ತಿರುವ ವಿಷಯವೇನೆಂದರೆ ಆಕೆ ಉದಯೋನ್ಮುಖ ಕವಯಿತ್ರಿ. ಆಕೆ ನೂರಾರು ಕವಿತೆಗಳನ್ನು ಬರೆದಿದ್ದಾಳಾದರೂ ಒಂದೇ ಒಂದು ಕವನ ಸಂಕಲನ ಮಾತ್ರ ಬಿಡುಗಡೆಯಾಗಿದೆ.
ಮಣಿಪುರಿಗಳ ಪಾಲಿಗೆ ಆಕೆ ಕೇವಲ ಐರೋಮ್ ಶರ್ಮಿಳಾ ಚಾನು ಅಲ್ಲ, ಆಕೆ ಮಣಿಪುರದ ಉಕ್ಕಿನ ಮಹಿಳೆ. ಈಶಾನ್ಯ ರಾಜ್ಯಗಳ ಸಮಸ್ಯೆ ಗೊತ್ತಿಲ್ಲದ ಇತರ ದೇಶವಾಸಿಗಳಿಗೆ ಶರ್ಮಿಳಾ ಒಂದೇ ಗುಕ್ಕಿಗೆ ಅರ್ಥವಾಗುವಂಥವಳೂ ಅಲ್ಲ. ಶರ್ಮಿಳಾ ಇಂಥ ದೊಡ್ಡ ಸಾಹಸಕ್ಕೆ ಕೈಹಾಕಿದ್ದು ಹೇಗೆ ಎನ್ನುವ ಕುರಿತು ಒಂದೇ ಒಂದು ನ್ಯಾಷನಲ್ ಮೀಡಿಯಾ ಕೂಡ ಇದುವರೆಗೆ ಒಂದು ವರದಿ ಪ್ರಕಟಿಸುವ ಸಾಹಸ ಮಾಡಿಲ್ಲ.
ಶರ್ಮಿಳಾ ದೇಹಸ್ಥಿತಿ ವಿಷಮಸ್ಥಿತಿ ತಲುಪಿದಾಗ ಆಕೆಯನ್ನು ದೇಶದ ಅತಿಶ್ರೇಷ್ಠ ವೈದ್ಯಕೀಯ ವಿಜ್ಞಾನ ಸಂಸ್ಥೆ ನವದೆಹಲಿಯ ಏಮ್ಸ್‌ಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಆಕೆ ರಾಜಘಾಟ್‌ಗೆ (೨೦೦೬ ಅಕ್ಟೋಬರ್ ೪) ಭೇಟಿ ನೀಡಿದಳು. ಅದು ಪೂರ್ವನಿಯೋಜಿತ ಕಾರ್ಯಕ್ರಮವೇನೂ ಆಗಿರಲಿಲ್ಲ. ಈ ಸಂದರ್ಭದಲ್ಲಿ ಶರ್ಮಿಳಾ ಹೇಳಿದ್ದು ಹೀಗೆ: “ಒಂದು ವೇಳೆ ಮಹಾತ್ಮ ಗಾಂಧೀಜಿ ಬದುಕಿದ್ದರೆ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ ಹಿಂದಕ್ಕೆ ಪಡೆಯಲು ಆಗ್ರಹಿಸಿ ಹೋರಾಟ ಆರಂಭಿಸಿರುತ್ತಿದ್ದರು. ಈ ಕ್ರೂರ ಕಾಯ್ದೆ ವಿರುದ್ಧ ದೇಶದ ಎಲ್ಲ ನಾಗರಿಕರು ಒಂದು ಅಭಿಯಾನ ಆರಂಭಿಸಲಿ ಎಂದು ಮನವಿ ಮಾಡುತ್ತೇನೆ
*****
ಶರ್ಮಿಳಾ ಹೋರಾಟ ನಿರ್ಣಾಯಕ ಹಂತ ತಲುಪಿದೆ. ಆಕೆಯ ಮನೋಧೈರ್ಯವೇ ಆಕೆಯನ್ನು ಇಷ್ಟು ವರ್ಷಗಳ ಕಾಲ ಕಾಪಾಡಿದೆ. ಆದರೆ ಆಕೆಯ ದೇಹ ಸಹಕರಿಸುತ್ತಿಲ್ಲ. ವೈದ್ಯರ ಪ್ರಕಾರ ಇನ್ನು ಉಪವಾಸವನ್ನು ನಿಭಾಯಿಸುವುದು ಆಕೆಯಿಂದ ಸಾಧ್ಯವಿಲ್ಲ. ಅರ್ಥಾತ್ ಸತ್ಯಾಗ್ರಹ ಮುಂದುವರೆದರೆ ಆಕೆ ಬದುಕುವ ಸಾಧ್ಯತೆ ತೀರಾ ಕಡಿಮೆ.
ಹೀಗಾಗಿ ಮಣಿಪುರದ ಜನರು ಮತ್ತೆ ಚಳವಳಿಗೆ ಇಳಿದಿದ್ದಾರೆ. ಶರ್ಮಿಳಾ ಪ್ರಾಣ ಉಳಿಸಿ ಎಂಬ ಕಳೆದ ಡಿಸೆಂಬರ್‌ನಿಂದ ಆರಂಭಗೊಂಡಿದೆ. ದಿನಕ್ಕೊಂದು ಸಂಘಟನೆ ಪ್ರತಿಭಟನೆಯಲ್ಲಿ ಪಾಲ್ಗೊಂಡು ಶರ್ಮಿಳಾಗೆ ಬೆಂಬಲ ಸೂಚಿಸುತ್ತಿದೆ.
ಇತ್ತ ಸರ್ಕಾರ ರಚಿಸಿದ್ದ ಜೀವನ್ ರೆಡ್ಡಿ ಆಯೋಗ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ. ಕಾಯ್ದೆಯ ಕ್ರೂರ ಅಂಶಗಳನ್ನು ಆಯೋಗ ಎತ್ತಿತೋರಿಸಿದೆ ಎಂದು ಮಾಧ್ಯಮವರದಿಗಳು ಹೇಳುತ್ತವೆ. ಡಾ.ಮನಮೋಹನ ಸಿಂಗ್ ಅವರ ಸರ್ಕಾರ ಏನು ಮಾಡುತ್ತದೆ ಎಂಬ ಕುತೂಹಲ ಮಾತ್ರ ಉಳಿದಿದೆ.
ಶರ್ಮಿಳಾ ಉಳಿಯಬೇಕು, ಉಳಿಯಲೇಬೇಕು. ಯಾಕೆಂದರೆ ಆಕೆ ಸತ್ತರೆ ಮಾನವೀಯತೆ ಸತ್ತಂತೆ, ಮಾನವ ಹಕ್ಕುಗಳು ಸತ್ತಂತೆ. ಆಕೆ ಉಳಿಯದಿದ್ದರೆ ನಮ್ಮದು ಪ್ರಜಾಪ್ರಭುತ್ವ ದೇಶ ಎಂದು ಹೇಳಿಕೊಳ್ಳುವ ಹೆಮ್ಮೆಯೂ ನಮ್ಮದಲ್ಲವಾಗುತ್ತದೆ.
ಕಾಕತಾಳೀಯ ನೋಡಿ, ಮಣಿಪುರಿ ಹೆಣ್ಣುಮಕ್ಕಳ ಹೆಸರುಗಳೆಲ್ಲ ಹೆಚ್ಚಾಗಿ ದೇವಿ ಎಂದೇ ಕೊನೆಗೊಳ್ಳುತ್ತದೆ. ಹೆಂಗಸರನ್ನು ದೇವಿಯರೆಂದು ಪೂಜಿಸುವ ದೇಶ ಇದು. ಮನೋರಮಾ ದೇವಿ ನಮ್ಮದೇ ಸೈನ್ಯಕ್ಕೆ ಬಲಿಯಾದಳು. ಇನ್ನೊಬ್ಬ ಶರ್ಮಿಳಾ ದೇವಿ ಸಾವಿನ ಅಂಚಿಗೆ ತಲುಪಿದ್ದಾಳೆ. ಇಬ್ಬರೂ ಸಹಸ್ರಾರು ಮಣಿಪುರಿಗಳ ಸಾವಿಗೆ, ನೋವಿಗೆ ಸಂಕೇತ ಅಷ್ಟೆ. ಮಣಿಪುರದ ದೇವಿಯರು ಸಾರ್ವಜನಿಕವಾಗಿ ಬೆತ್ತಲಾಗಿದ್ದಾರೆ. ನಾವು ನಿರ್ಲಜ್ಜರಾಗಿ ಅದನ್ನು ನೋಡುತ್ತಿದ್ದೇವೆ.
ಇಂಡಿಯಾವೆಂದರೆ ಕೇವಲ ಉತ್ತರಪ್ರದೇಶ, ಮಧ್ಯಪ್ರದೇಶ, ಬಿಹಾರ ದೆಹಲಿ, ಮಹಾರಾಷ್ಟ್ರ ಎಂಬ ಭ್ರಮೆ ನಮ್ಮ ಕೇಂದ್ರ ಸರ್ಕಾರಕ್ಕಿದೆ. ದೊಡ್ಡ ರಾಜ್ಯಗಳು ತಮ್ಮ ಪಾಲು ದಕ್ಕಿಸಿಕೊಳ್ಳಲು ವಶೀಲಿಬಾಜಿ ನಡೆಸುತ್ತವೆ. ಪ್ರಜಾಪ್ರಭುತ್ವವೆಂದರೆ ಸಂಖ್ಯೆಯ ಆಟವಲ್ಲವೆ? ಮಣಿಪುರಿಗಳ ಕೈಯಲ್ಲಿ ಸಂಖ್ಯೆ ಇಲ್ಲ. ಅವರು ಇಬ್ಬರು ಸಂಸದರನ್ನು ಮಾತ್ರ ಆರಿಸಿಕಳಿಸಬಲ್ಲರು. ಆ ಇಬ್ಬರು ಕೇಂದ್ರ ಸರ್ಕಾರವನ್ನು ಉರುಳಿಸುವ ಅಥವಾ ಉಳಿಸುವ ಆಟದಲ್ಲಿ ಮಹತ್ವದ ಪಾತ್ರ ವಹಿಸಲು ಸಾಧ್ಯವೇ ಇಲ್ಲ. ತಮಿಳುನಾಡಿನಂಥ, ಬಿಹಾರದಂಥ ರಾಜ್ಯಗಳು ಇಂಥ ಆಟಗಳನ್ನು ಆಡಿ ಗೆಲ್ಲುತ್ತ ಬಂದಿವೆ.
ಮಣಿಪುರದಲ್ಲಿ ಹಿಂದಿ ಭಾಷೆ ಇಲ್ಲ. ಮಣಿಪುರಿ ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಅಲ್ಲಿನ ಜನರು ಭಾರೀ ಸ್ವರೂಪದ ಚಳವಳಿ ನಡೆಸಬೇಕಾಯಿತು. ಹೀಗಾಗಿ ಮಣಿಪುರದ ಜನರು ರಾಜಕೀಯವಾಗಿ ದುರ್ಬಲರು. ಕೆಂಪುಕೋಟೆಯ ಮೇಲೆ ಪ್ರಭಾವ ಬೀರುವ ಶಕ್ತಿ ಅವರಲ್ಲಿ ಇಲ್ಲ.
ದೇಶವಾಸಿಗಳ ಲೆಕ್ಕದಲ್ಲಿ ಮಣಿಪುರ ಈ ದೇಶದ ಅಂಗವೇ ಅಲ್ಲ. ಒಂದು ವೇಳೆ ತಾಯಂದಿರ ಪ್ರತಿಭಟನೆ ಮುಂಬೈನಲ್ಲೋ, ದೆಹಲಿಯಲ್ಲೋ, ಕೋಲ್ಕತ್ತಾದಲ್ಲೋ ನಡೆದಿದ್ದರೆ ಅದರ ಪರಿಣಾಮಗಳೇ ಬೇರೆಯಾಗಿರುತ್ತಿತ್ತು. ಆದರೆ ಬಡಪಾಯಿ ಮಣಿಪುರಿ ಹೆಣ್ಣುಮಕ್ಕಳ ಧ್ವನಿ ಕೇಳುವವರ್‍ಯಾರು?
ಬೆಂಗಳೂರಿನಲ್ಲಿ ಓದುವ ಮಣಿಪುರಿ ಹೆಣ್ಣುಮಗಳೊಬ್ಬಳು ತನ್ನ ಬ್ಲಾಗ್‌ನಲ್ಲಿ ಹೀಗೆ ಬರೆಯುತ್ತಾಳೆ: ರಸ್ತೆಯಲ್ಲಿ ನಡೆಯುವಾಗ ನನ್ನನ್ನು ವಿಚಿತ್ರ ಪ್ರಾಣಿಯಂತೆ ನೋಡಲಾಗುತ್ತದೆ. ಬೇರೆಯವರು ಸ್ಕರ್ಟ್ ಧರಿಸಿ ಓಡಾಡಿದರೆ ಅವರನ್ನು ಗೌರವದಿಂದ ನೋಡಲಾಗುತ್ತದೆ. ಆದರೆ ನಾವು, ಮಣಿಪುರದ ಹುಡುಗಿಯರು ಸ್ಕರ್ಟ್ ಧರಿಸಿ ಓಡಾಡಿದರೆ ಕಿತ್ತು ತಿನ್ನುವಂತೆ ನೋಡುತ್ತಾರೆ.
ನಾನು ಓದುವ ಕಾಲೇಜಿನ ಉಪನ್ಯಾಸಕಿ ನನ್ನ ಬಗ್ಗೆ ವಿಚಾರಿಸುವಾಗ ಎಲ್ಲಿಂದ ಬಂದಿದ್ದೀ ಎಂದು ಪ್ರಶ್ನಿಸಿದರು. ಮಣಿಪುರ ಎಂದು ಉತ್ತರಿಸಿದೆ. ಅದೆಲ್ಲಿದೆ? ಎಂದು ಮರುಪ್ರಶ್ನಿಸಿದರು. ಕಾಲೇಜು ಉಪನ್ಯಾಸಕರಿಗೇ ಮಣಿಪುರ ಎಲ್ಲಿದೆ ಎಂಬುದು ಗೊತ್ತಿಲ್ಲ. ನಾವು ಭಾರತೀಯರೆ ಎಂಬ ಅನುಮಾನ ನಮಗೇ ಮೂಡುವಂತಾಗಿದೆ.
ಮಣಿಪುರವೂ ಒಂದು ರಾಜ್ಯ. ಅದೂ ಸಹ ಭಾರತ ಒಕ್ಕೂಟದ ಭಾಗ. ಅಲ್ಲಿನ ಜನರು ಸಾಂಸ್ಕೃತಿಕವಾಗಿ ಶ್ರೀಮಂತರು. ಅವರಿಗೆ ಅವರದೇ ಆದ ಭಾಷೆ, ಸಂಪ್ರದಾಯ, ಸಂಸ್ಕೃತಿಗಳಿವೆ. ಅವುಗಳನ್ನು ನಾವು ಗೌರವಿಸಬೇಕು. ತಮ್ಮ ಎಲ್ಲ ಅನನ್ಯತೆಗಳ ಜತೆಗೇ ಅವರು ಭಾರತೀಯ ಒಕ್ಕೂಟದಲ್ಲಿ ಗುರುತಿಸಿಕೊಳ್ಳಬೇಕು ಎಂಬುದನ್ನು ನಾವೇಕೆ ಅರ್ಥಮಾಡಿಕೊಳ್ಳುವುದಿಲ್ಲ?
*****
ಈ ಸುದೀರ್ಘ ಬರೆಹದ ಆರಂಭದಲ್ಲೇ ಎಲ್ಲ ದೇಶಭಕ್ತರಿಗೂ ನನ್ನ ಮನವಿಯನ್ನು ಸಲ್ಲಿಸಿದ್ದೆ. ಅಂತ್ಯದಲ್ಲೂ ಅದನ್ನೇ ಹೇಳುತ್ತಿದ್ದೇನೆ. ಶರ್ಮಿಳಾ ಎಂಬ ಹುಡುಗಿಯ ಪ್ರಾಣ ಉಳಿಸುವ ಹೊಣೆ ನಮ್ಮೆಲ್ಲರದು. ಅದು ಅಸಾಧ್ಯವೇನೂ ಅಲ್ಲ.
ವಿವಿಧತೆಯಲ್ಲಿ ಏಕತೆ ಎಂದು ಕಾಟಾಚಾರಕ್ಕೆ ಹೇಳುತ್ತ ಭಾವೈಕ್ಯತೆಯ ಬೊಗಳೆಯಲ್ಲಿ ಕಾಲ ಕಳೆಯುವ ಮುನ್ನ ನಮ್ಮದೇ ದೇಶದ, ನಮ್ಮ ಅಕ್ಕ-ತಂಗಿಯಂಥ ಹುಡುಗಿಯ ಪ್ರಾಣರಕ್ಷಣೆಗೆ ಮಾನವೀಯತೆಯಲ್ಲಿ ನಂಬಿಕೆ ಇಟ್ಟ ಒಂದಷ್ಟು ಮಂದಿಯಾದರೂ ಧ್ವನಿಯೆತ್ತಲಿ ಎಂಬುದು ನನ್ನ ಬಯಕೆ.
ನಮ್ಮ ಎಲೆಕ್ಟ್ರಾನಿಕ್ ಮಾಧ್ಯಮಗಳು ಅರುಷಿ ಎಂಬ ಬಾಲಕಿಯ ಮರ್ಡರ್ ಕೇಸ್‌ನಲ್ಲಿ ತೋರಿಸಿದ ನೂರನೇ ಒಂದು ಭಾಗದ ಆಸಕ್ತಿಯನ್ನು ಶರ್ಮಿಳಾ ಸತ್ಯಾಗ್ರಹದ ವಿಷಯದಲ್ಲಿ ತೋರಿದರೆ ಸಮಸ್ಯೆ ಪರಿಹಾರವಾಗಬಹುದೇನೋ?
ಮನೋರಮಾ ದೇವಿಯ ಶವವನ್ನು ನೋಡಿದ ಮಣಿಪುರದ ಮಹಿಳೆಯೊಬ್ಬರು ಅದನ್ನು ಬಣ್ಣಿಸಿದ್ದು ಹೀಗೆ: ‘ಆಕೆಯ ಮೃತದೇಹ ರಕ್ತಸಿಕ್ತ ಯುದ್ಧಭೂಮಿಯಂತಿತ್ತು.
ಮತ, ಧರ್ಮ, ಸಿದ್ಧಾಂತಗಳ ಕಿತ್ತಾಟದಲ್ಲಿ ದೇಶವೇ ಒಂದುಬಗೆಯ ಯುದ್ಧಭೂಮಿಯಂತೆ ಕಾಣುತ್ತಿರುವ ಹೊತ್ತು ಇದು. ಈ ಸಂದರ್ಭದಲ್ಲಿ ಶರ್ಮಿಳಾಳನ್ನು ಉಳಿಸಿಕೊಳ್ಳುವಂತಾದರೆ, ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ ಎಂಬ ಕ್ರೂರ ಕಾನೂನು ನಾಶವಾದರೆ ಮನುಷ್ಯತ್ವ ಗೆಲುವು ಸಾಧಿಸಿದಂತಾಗುತ್ತದೆ.
ನೀವೇನು ಹೇಳುತ್ತೀರಿ?
Wednesday, January 7, 2009
ಕಾಮಾಟಿಪುರದ ವಾಸನೆಪ್ರಿಯರ ಸುತ್ತ...
ಭಾರತೀಯ ವಿಚಾರವಂತರ ವೇದಿಕೆ ಎಂಬ ಹೊಸ ಸಂಘಟನೆ ಭಾನುವಾರ ಆಯೋಜಿಸಿದ್ದ ‘ಮತಾಂತರ-ಸತ್ಯದ ಮೇಲೆ ಹಲ್ಲೆ ಎಂಬ ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಶತಾವಧಾನಿ ಡಾ. ಆರ್.ಗಣೇಶ್ ಎಂಬುವವರು ‘ಬುದ್ಧಿಜೀವಿಗಳ ಬಾಯಿಯಲ್ಲಿ ಮುಂಬೈಯ ಕಾಮಾಟಿಪುರದ ವಾಸನೆ ಬರುತ್ತದೆ. ಅವರು ಬೌದ್ಧಿಕ ವ್ಯಭಿಚಾರ ಮಾಡುತ್ತಿದ್ದಾರೆ.’ ಎಂದು ಹೇಳಿದ್ದಾರೆ. (ಪ್ರಜಾವಾಣಿ: ೫-೧-೨೦೦೯, ಪುಟ: ೨ಬಿ)
ಇದಕ್ಕೆ ಪ್ರೊ. ಚಂದ್ರಶೇಖರ ಪಾಟೀಲರು ಪ್ರಜಾವಾಣಿ ವಾಚಕರ ವಾಣಿಯಲ್ಲಿ (೭-೧-೨೦೦೯) ಪ್ರತಿಕ್ರಿಯಿಸಿದ್ದು ಹೀಗೆ: ‘ ಶತಾವಧಾನಿ ಆರ್.ಗಣೇಶ್ ಅವರು, ಮುಂಬೈಯ ಕಾಮಾಟಿಪುರದ ವಾಸನೆ ಕುರಿತು ಪ್ರಸ್ತಾಪಿಸಿದ್ದು ಮಜಾ ಅನಿಸಿತು. ಬ್ರಹ್ಮಚಾರಿ ಎಂದೆ ಖ್ಯಾತನಾಗಿರುವ ಗಣೇಶನಿಗೂ ಕಾಮಾಟಿಪುರಕ್ಕೂ ಇರಬಹುದಾದ ಎತ್ತಣಿಂದೆತ್ತಣ ಸಂಬಂಧವನ್ನು ಆ ಭೈರವೇಶ್ವರನೇ ಬಲ್ಲ. ಅಂದ ಹಾಗೆ ಇನ್ನು ಮೇಲೆ ನಮ್ಮ ಶತಾವಧಾನಿ ಗಣೇಶರನ್ನು ಕಾಮಾಟಿಪುರದ ಗಣೇಶ ಎಂದು ಕರೆಯೋಣವೇ?’
ನಾಲಗೆ ವ್ಯಕ್ತಿಯ ಸಂಸ್ಕಾರ, ಗುಣಮಟ್ಟವನ್ನು ಹೇಳುತ್ತದೆ. ಅಸಲಿಗೆ ಕಾಮಾಟಿಪುರದ ವಾಸನೆ ಎಂಬ ಪ್ರಯೋಗವೇ ಅಮೂರ್ತ. ಮುಂಬೈನ ಕಾಮಾಟಿಪುರ ಎಂದರೆ ಸೂಳೆಗೇರಿ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಸೂಳೆಗೇರಿಗೊಂದು ವಾಸನೆ ಇರುತ್ತದೆಯೇ? ಇದ್ದರೆ ಅದು ಹೇಗಿರುತ್ತದೆ? ಅದನ್ನು ಶತಾವಧಾನಿಗಳು ಆಘ್ರಾಣಿಸಿ ಬಂದಿದ್ದು ಯಾವಾಗ?
ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅತಿಥಿಗಳೆಲ್ಲ ಮನುವಾದಿಗಳು. ಈ ಪೈಕಿ ಎಸ್.ಎಲ್.ಭೈರಪ್ಪ ಎಲ್ಲ ಮನುವಾದಿಗಳಿಗೂ ಗ್ಯಾಂಗ್‌ಲೀಡರ್ ಹಾಗೆ ಇತ್ತೀಚಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಕರ್ನಾಟಕದಲ್ಲಿ ವೈದಿಕಧರ್ಮವನ್ನು ಯಾ ಮನುಧರ್ಮವನ್ನು ಸಮರ್ಥಿಸಿಕೊಳ್ಳುವ ಗುಂಪಿನ ಮುಖಂಡರಂತಿದ್ದ ಪೇಜಾವರ ಶ್ರೀಗಳನ್ನೂ ಸಹ ಭೈರಪ್ಪ ಹಿಂದಿಕ್ಕಿದ್ದಾರೆ. ಇನ್ನು ಸಂಶೋಧಕ ಚಿದಾನಂದಮೂರ್ತಿಯವರು ತಮ್ಮ ಜೀವನ ಹಿಂದೂ ಧರ್ಮ ರಕ್ಷಣೆಗೆ ಮೀಸಲು ಎಂದು ಘೋಷಿಸಿದ್ದಾರೆ. ಯಾವ ಹಿಂದೂ ಧರ್ಮದ ಕಂದಾಚಾರಗಳ ವಿರುದ್ಧ ವೀರಶೈವ ಧರ್ಮವನ್ನು ಬಸವಣ್ಣ ಚಾಲನೆಗೆ ತಂದರೋ ಅದೇ ಧರ್ಮದಲ್ಲಿ ಹುಟ್ಟಿರುವ ಚಿದಾನಂದಮೂರ್ತಿ ಈಗಲೂ ವೀರಶೈವವನ್ನು ಹಿಂದೂ ಧರ್ಮದ ಒಂದು ಭಾಗ ಎಂದೇ ಭ್ರಮಿಸಿಕೊಂಡಿದ್ದಾರೆ. ಇದನ್ನು ಅಜ್ಞಾನವೆನ್ನುವುದೋ, ಹುಚ್ಚಾಟವೆನ್ನುವುದೋ ಇಲ್ಲ ತಿಳಿಗೇಡಿತನ ಎನ್ನುವುದೋ ನನಗಂತೂ ತಿಳಿಯದು.
ಹಾರನಹಳ್ಳಿ ರಾಮಸ್ವಾಮಿ ಎಂಬ ಮನುಷ್ಯ ಕಾಂಗ್ರೆಸ್ ಪಕ್ಷದಲ್ಲಿ ಇವತ್ತೂ ಇದ್ದಾರೆ. ಸಂಘಪರಿವಾರದ ಮನಸ್ಥಿತಿಯವರು ಆಗಾಗ ಹೇಳುವ ವಿದೇಶಿ ಮಹಿಳೆ ಅಧ್ಯಕ್ಷೆಯಾಗಿರುವ ಪಕ್ಷವೇ ಅವರ ವಾಸಸ್ಥಾನ. ಕಾಂಗ್ರೆಸ್ ಪಕ್ಷವೂ ಅವರ ಯೋಗ್ಯತೆ ಮೀರಿ ಅವಕಾಶಗಳನ್ನು ನೀಡಿದೆ. ಮಂತ್ರಿಯಾಗಿಯೂ ಅವರು ರಾಜ್ಯದಲ್ಲಿ ಕೆಲಸ ಮಾಡಿದ್ದಾರೆ. ಇಳಿಗಾಲದಲ್ಲಿ ರಾಮಸ್ವಾಮಿಯವರಿಗೆ ಹಿಂದೂಧರ್ಮ ರಕ್ಷಣೆಯ ಹುಚ್ಚು ಹಿಡಿದುಕೊಂಡಿದೆ. ‘ಕೋಮುವಾದ ವಿರೋಧಿಗಳು ಹಾಗು ಬುದ್ಧಿಜೀವಿಗಳಿಂದಲೇ ಮತಾಂತರ, ಭಯೋತ್ಪಾದನೆ ಹೆಚ್ಚುತ್ತಿದೆ’ ಎಂದು ಅವರು ತಿಕ್ಕಲುತಿಕ್ಕಲಾಗಿ ಹೇಳಿದ್ದಾರೆ.
ಹಾರನಹಳ್ಳಿಯವರ ಪ್ರಕಾರ ಕೋಮುವಾದ ಉಳಿಯಬೇಕು, ಮಾನವತೆ ಅಳಿಯಬೇಕು! ಇಂಥ ಮಾತುಗಳನ್ನು ಬಹಿರಂಗವಾಗಿ ಹೇಳುವಷ್ಟು ನಾಚಿಕೆಗೆಟ್ಟ ಜನರಿದ್ದಾರಲ್ಲ ಎಂದು ಆಶ್ಚರ್ಯವಾಗುತ್ತದೆ.
ನವರತ್ನ ರಾಜಾರಾಂ ಎಂಬ ಇನ್ನೊಂದು ಮುಖವೂ ಈ ಗೋಷ್ಠಿಯಲ್ಲಿ ಮಿರಿಮಿರಿ ಮಿಂಚಿದೆ. ಭೈರಪ್ಪ ಬರೆಯುವ ಮುಸ್ಲಿಂ, ಕ್ರಿಶ್ಚಿಯನ್ ದ್ವೇಷಿ ಬರೆಹಗಳಿಗೆಲ್ಲ ನವರತ್ನ ರಾಜಾರಾಂ ಅವರ ಸಂಶೋಧನೆಯೇ ಆಕರ. ಭೈರಪ್ಪ ಹಾಗು ನವರತ್ನ ಸುಳ್ಳು ಹೇಳುವುದಕ್ಕೆ ಒಬ್ಬರನ್ನು ಒಬ್ಬರು ಆಶ್ರಯಿಸಿಕೊಳ್ಳುತ್ತಾರೆ. ಹೀಗಾಗಿ ಭೈರಪ್ಪ ಇದ್ದ ಮೇಲೆ ನವರತ್ನ ಇರಬೇಕು ಎಂದೇನಿಲ್ಲ, ನವರತ್ನ ಇದ್ದಮೇಲೆ ಭೈರಪ್ಪ ಇರಬೇಕು ಎಂದೇನಿಲ್ಲ. ಇಬ್ಬರೂ ಒಟ್ಟಿಗೆ ವೈನಾಗಿ ವೇದಿಕೆ ಮೇಲೆ ಕುಳಿತಿದ್ದಾರೆ, ಫೈನ್.
ಇನ್ನು ಗಣೇಶ್ ಕುರಿತು ಹೆಚ್ಚು ಹೇಳಬೇಕಾಗಿಲ್ಲ. ವಾಸನೆ ಪ್ರವೀಣ ಗಣೇಶ್ ಇನ್ನೇನೇನು ವಾಸನೆಗಳನ್ನು ಕಂಡುಹಿಡಿದಿದ್ದಾರೋ? ಆ ಕುರಿತು ಭೈರಪ್ಪಾದಿ ವಿಪ್ರೋತ್ತಮರು ಸಂಶೋಧನೆ ನಡೆಸಿದರೆ ಒಳ್ಳೆಯದು. ಕಾಮಾಟಿಪುರದ ವಾಸನೆ ಹಾಗು ಗೋವಾ ಬೈನಾ ಬೀಚ್ ವಾಸನೆಗಳ ಕುರಿತು ತೌಲನಿಕ ಅಧ್ಯಯನ ನಡೆಸಿದರೆ ಗಣೇಶ್‌ಗೆ ಇನ್ನೊಂದು ಡಾಕ್ಟರೇಟ್ ಸಿಕ್ಕರೂ ಸಿಗಬಹುದು. ಹೊರದೇಶಗಳಿಗೂ ಗಣೇಶ್ ಪ್ರವಾಸ ಹೊರಟು ಕಾಮಾಟಿಪುರ ತರಹದ ಪ್ರದೇಶಗಳ ವಾಸನೆಗಳನ್ನು ಕಂಡುಹಿಡಿದು ಅವುಗಳ ಕುರಿತೂ ಸಂಶೋಧನೆ ನಡೆಸಬಹುದು.
*****
ಭೈರಪ್ಪಾದಿ ಹಿಂದೂ ಧರ್ಮರಕ್ಷಕರ ‘ಕಾಮಾಟಿಪುರ ತರ್ಕ’ಗಳು ಏನೇ ಇರಲಿ. ಈ ಎಲ್ಲ ಮಹಾನುಭಾವರು ಮತಾಂತರ ನಿಷೇಧ ಕಾನೂನು ಜಾರಿಗೆ ತರಬೇಕು ಎಂದು ಏಕಾಭಿಪ್ರಾಯದಲ್ಲಿ ಗಂಟಲು ಹರಿದುಕೊಳ್ಳುತ್ತಿದ್ದಾರೆ. ದಲಿತರೇ ಅತಿಹೆಚ್ಚು ಮತಾಂತರಗೊಳ್ಳುತ್ತಿದ್ದಾರೆ ಎಂಬುದು ಇವರಿಗೆ ಗೊತ್ತಿದ್ದರೂ, ಇವರ ವೇದಿಕೆಯಲ್ಲಿ ಒಬ್ಬನೇ ಒಬ್ಬ ದಲಿತನಿಲ್ಲ. ಇವರು ಕರೆದರೂ ಬರುವವರೂ ಇಲ್ಲ ಎಂಬುದು ಬೇರೆ ಮಾತು ಬಿಡಿ.
ಐವರು ಮಹಾನುಭಾವರಲ್ಲಿ ನಾಲ್ವರು ಬ್ರಾಹ್ಮಣರು ಮತ್ತೊಬ್ಬರು ವೀರಶೈವರು. ಇವರ ಜಾತಿಬಾಂಧವರು ಮತಾಂತರ ಹೊಂದುತ್ತಿದ್ದರೆ ಇವರು ತಳಮಳಗೊಳ್ಳುವುದಕ್ಕೆ ಕಾರಣವಿರುತ್ತಿತ್ತು. ದಲಿತರೂ ಸೇರಿದಂತೆ ಕೆಳಜಾತಿಯವರು ಆಶ್ರಯಿಸುತ್ತಿರುವ ಮತಾಂತರದ ಬಗ್ಗೆ ಇವರು ಯಾಕೆ ಮಾತನಾಡುತ್ತಾರೆ. ಹಾಗೆ ಮಾತನಾಡುವ ಹಕ್ಕನ್ನು ಇವರಿಗೆ ಕೊಟ್ಟವರಾದರೂ ಯಾರು?
ಭೈರಪ್ಪಾದಿಗಳೆಲ್ಲ ಹಿಂದೂ ಎಂದು ಕರೆಯಲಾಗುವ ಮನುಧರ್ಮದ ರಕ್ಷಣೆಗೆ ಟೊಂಕಕಟ್ಟಿ ನಿಂತವರು. ಮನುಧರ್ಮ ದಲಿತರನ್ನು ತನ್ನ ಧರ್ಮದ ಕಕ್ಷೆಯೊಳಗೆ ತೆಗೆದುಕೊಂಡೇ ಇಲ್ಲ. ಈ ದೇಶದ ದಲಿತರು ಧರ್ಮಹೀನರು. ಅವರು ತನಗಿಷ್ಟವಾಗುವ ಜಗತ್ತಿನ ಯಾವುದೇ ಧರ್ಮಕ್ಕೆ ಮತಾಂತರವಾದರೆ ಇವರ ಗಂಟೇನು ಹೋಗುತ್ತದೆ?
ಭೈರಪ್ಪಾದಿಗಳ ಚಿಂತನೆಗಳಿಗೆ ಮೂಲಧಾತುವಾಗಿರುವ ಮನುಸ್ಮೃತಿಯ ಕೆಲವು ಇಂಟರೆಸ್ಟಿಂಗ್ ಕಾನೂನು ಕಟ್ಟಳೆಗಳು ಹೀಗಿವೆ ನೋಡಿ:
ನ ವಿಪ್ರಂ ಸ್ವೇಷು ತಿಷ್ಠತ್ಸು ಮೃತಂ ಶೂದ್ರೇಣ ನಾಯಯೇತ್
ಅಸ್ವರ್ಗ್ಯಾ ಹ್ಯಾಹುತಿಃ ಸಾ ಸ್ಯಾಚ್ಛೂದ್ರಸಂಸ್ಪರ್ಶದೂಷಿತಾ
(ಬ್ರಾಹ್ಮಣನು ಸತ್ತಾಗ ಹೊರಲು ಅವನ ಜಾತಿಯವರೇ ಇದ್ದಾಗ ಶೂದ್ರನಿಂದ ಆ ಶವವನ್ನು ಹೊರಿಸಬಾರದು. ಏಕೆಂದರೆ ಶೂದ್ರನ ಸ್ಪರ್ಶದಿಂದ ದೂಷಿತವಾದ ಆ ಶವದ ಆಹುತಿಯು ಸ್ವರ್ಗಫಲವನ್ನು ಉಂಟುಮಾಡಲಾರದು.)
ಯೋ ಹೃಸ್ಯ ಧರ್ಮಮಾಚಷ್ಟೇ ಯಶ್ಚೈವಾದಿಶತಿ ವ್ರತಂ
ಸೋಸಂವೃತಂ ನಾಮ ತಮಃ ಸಹ ತೇನೈವ ಮಜ್ಜತಿ
(ಶೂದ್ರನಿಗೆ ಧರ್ಮೋಪದೇಶ ಮಾಡುವವನು, ವ್ರತಾಚರಣೆಗಳನ್ನು ಹೇಳಿ ಕೊಡುವವನು ಆ ಶೂದ್ರನ ಜತೆಗೆ ಸೇರಿ ತಾನೂ ಸಹಿತ ಅಸಂವೃತವೆಂಬ ನರಕಕ್ಕೆ ಹೋಗುತ್ತಾನೆ)
ನ ಶೂದ್ರಾಯ ಮತಿಂ ದದ್ಯಾನ್ನೋಚ್ಛಿಷ್ಟಂ ನ ಹವಿಷ್ಕೃತಂ
ನ ಚಾಸ್ಯೋಪದಿಶೇದ್ಧರ್ಮಂ ನಚಾಸ್ಯ ವ್ರತಮಾದಿಶೇತ್
(ಶೂದ್ರನಿಗೆ ಓದು ಕಲಿಸಬಾರದು. ಯಜ್ಞದ ಹವಿಸ್ಸಿನ ಶೇಷವನ್ನು ಹಾಗು ಎಂಜಲನ್ನು ಕೊಡಬಾರದು. ಧರ್ಮೋಪದೇಶ ಮಾಡಬಾರದು. ವ್ರತಾಚರಣೆಯನ್ನು ಹೇಳಿ ಕೊಡಬಾರದು)
ವಿಪ್ರಾಣಾಣ ಜ್ಞಾನತೋ ಜ್ಯೈಷ್ಟ್ಯಂ ಕ್ಷತ್ರಿಯಾಣಾಂ ತು ವೀರ್ಯತಃ
ವೈಶ್ಯಾನಾಂ ಧಾನ್ಯಧನತಃ ಶೂದ್ರಾಣಾಮೇವ ಜನ್ಮತಃ
(ಬ್ರಾಹ್ಮಣನಿಗೆ ಜ್ಞಾನದಿಂದ, ಕ್ಷತ್ರಿಯನಿಗೆ ವೀರತನದಿಂದ, ವೈಶ್ಯನಿಗೆ ಧನಧಾನ್ಯ ಸಂಪತ್ತಿನಿಂದ ಹಾಗು ಶೂದ್ರನಿಗೆ ವಯಸ್ಸಿನಿಂದ ಮಾತ್ರವೇ ಶ್ರೇಷ್ಠತೆ ಹಾಗು ಜ್ಯೇಷ್ಠತೆಗಳು ಲಭಿಸುತ್ತವೆ.
ಮಂಗಲ್ಯಂ ಬ್ರಾಹ್ಮಣಸ್ಯ ಸ್ಯಾತ್ಕ್ಷತ್ರಿಯಸ್ಯ ಬಲಾನ್ವಿತಂ
ವೈಶಸ್ಯ ಧನಸಂಯುಕ್ತಂ ಶೂದ್ರ ಸ್ಯ ತು ಜಿಗುಪ್ಸಿತಂ
(ಬ್ರಾಹ್ಮಣನಿಗೆ ಮಂಗಲಸೂಚಕವಾದ, ಕ್ಷತ್ರಿಯನಿಗೆ ಬಲಸೂಚಕವಾದ, ವೈಶ್ಯನಿಗೆ ಧನಸೂಚಕವಾದ ಹಾಗು ಶೂದ್ರನಿಗೆ ಜಿಗುಪ್ಸಾ ಸೂಚಕವಾದ ಹೆಸರುಗಳನ್ನು ಇಡಬೇಕು.)
ಇಡೀ ಮನುಸ್ಮೃತಿಯಲ್ಲಿ ಇಂಥ ಹೀನಾತಿಹೀನ ಸಾಲುಗಳೇ ತುಂಬಿಕೊಂಡಿವೆ. ಹುಟ್ಟಿನಿಂದಲೇ ಮನುಷ್ಯನ ಯೋಗ್ಯತೆಯನ್ನು ನಿಶ್ಚಯಿಸುವ ಮನುಸಿದ್ಧಾಂತವನ್ನೇ ಹಿಂದೂ ಧರ್ಮ ಇವತ್ತಿಗೂ ಆಧಾರವಾಗಿ ಹೊಂದಿದೆ. ಶೂದ್ರರು, ದಲಿತರಿಗೆ ಯಾವತ್ತೂ ಸ್ಥಾನವೇ ಇಲ್ಲದ ಮನುಧರ್ಮದಲ್ಲಿ ಇರುವುದೆಲ್ಲ ಅಮಾನವೀಯ ನಡಾವಳಿಗಳೇ.
ಮನುಶಾಸ್ತ್ರವನ್ನು ಇವತ್ತು ಸಂಪೂರ್ಣ ಯಥಾವತ್ತಾಗಿ ಈಗ ಯಾರೂ ಪಾಲಿಸದೇ ಇರಬಹುದು. ಆದರೆ ಅದು ಬೇರೆ ಬೇರೆ ರೂಪದಲ್ಲಿ ಕಾಡುತ್ತಲೇ ಇದೆ. ಮತಾಂತರ ನಿಷೇಧದ ಬಗ್ಗೆ ಮಾತನಾಡುವ ಭೈರಪ್ಪಾದಿಗಳು ಎಂದಿಗೂ ಮನುಶಾಸ್ತ್ರದ ಅಮಾನವೀಯತೆಗಳ ಕುರಿತು ಮಾತನಾಡಿದವರೇ ಅಲ್ಲ. ಅವರು ಮಾತನಾಡುವುದೂ ಇಲ್ಲ.
ಅಂಬೇಡ್ಕರ್ ಸಂವಿಧಾನ ಇವರಿಗೆ ಅಪಥ್ಯ. ಇವರ ಅಂತಿಮ ಉದ್ದೇಶವಿರುವುದು ಮನುಶಾಸ್ತ್ರವನ್ನೇ ಮತ್ತೆ ಜಾರಿಗೆ ತರುವುದು. ಒಂದು ವೇಳೆ ದಲಿತರು, ಶೂದ್ರರೆಲ್ಲಿ ಹಿಂದೂ ಧರ್ಮವನ್ನು ಬಿಟ್ಟು ಹೋದರೆ ಇವರು ಸಹಜವಾಗಿ ಅಲ್ಪಸಂಖ್ಯಾತರಾಗುತ್ತಾರೆ. ಇವರ ಧರ್ಮಬೋಧೆಗಳನ್ನು ಕೇಳಲು ಯಾರೂ ಉಳಿದಿರುವುದಿಲ್ಲ. ವಂಚನೆ, ಶೋಷಣೆಗಳಿಗೆ ಅವಕಾಶವೂ ಇರುವುದಿಲ್ಲ. ಹೀಗಾಗಿ ಈ ಜನ ಮತಾಂತರ ಕೂಡದು ಎಂದು ಈ ದೇಶದ ಧರ್ಮರಹಿತ ಜನರಿಗೆ ಹೇಳುತ್ತಿದ್ದಾರೆ ಮತ್ತು ಅವರನ್ನು ಹಿಂದೂ ಧರ್ಮದ ಚೌಕಟ್ಟಿನಲ್ಲಿ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ.
ಮತಾಂತರ ನಿಲ್ಲಿಸಬೇಕು ಎಂಬ ಕಾಳಜಿಯಿದ್ದರೆ, ಹಿಂದೂ ಧರ್ಮ ಉಳಿಸಿಕೊಳ್ಳಲೇಬೇಕು ಎಂಬ ಆಸೆಯಿದ್ದರೆ ಭೈರಪ್ಪಾದಿಗಳಿಗೆ ಈಗ ಉಳಿದಿರುವುದು ಒಂದೇ ದಾರಿ.
ವರ್ಣಾಶ್ರಮ ವ್ಯವಸ್ಥೆಯ, ಜಾತಿ ವ್ಯವಸ್ಥೆಯ ಹೇಸಿಗೆಯನ್ನು ಹೊರೆಸಿರುವ ಮನುಸ್ಮೃತಿಯ ವಿರುದ್ಧ ಭೈರಪ್ಪಾದಿಗಳೆಲ್ಲ ಮೊದಲು ಚಳವಳಿ ಹೂಡಲಿ. ಭಾರತೀಯ ವಿಚಾರವಂತರ ವೇದಿಕೆ ಮನುಸ್ಮೃತಿಯ ವಿರುದ್ಧ ಇಡೀ ದೇಶದಲ್ಲಿ ಒಂದು ಪ್ರಚಾರಾಂದೋಲನ ಮಾಡಲಿ. ಪುಸ್ತಕ, ಪತ್ರಿಕೆಗಳನ್ನು ಸುಡುವ ಪರಿಪಾಠ ಸರಿಯಲ್ಲವಾದ್ದರಿಂದ ಎಲ್ಲ ಭಾಷೆಗಳಲ್ಲಿ ಪ್ರಕಟವಾಗಿರುವ ಮನುಸ್ಮೃತಿ ಪುಸ್ತಕಗಳನ್ನು ಹರಿದು ನಾಶಪಡಿಸುವ ಕೆಲಸ ಆರಂಭಿಸಲಿ. ಬ್ರಾಹ್ಮಣರನ್ನು ಹೊರತುಪಡಿಸಿ ಹಿಂದೂಗಳನ್ನೆಲ್ಲ ಪ್ರಾಣಿ, ಕ್ರಿಮಿ, ಕೀಟಗಳಿಗಿಂತ ಕಡೆಯಾಗಿ ನೋಡುವ ಈ ಮನುಸ್ಮೃತಿಯನ್ನು ಎಲ್ಲ ಸರ್ಕಾರಗಳು ನಿಷೇಧಿಸಲು ವಿಚಾರವಂತರ ವೇದಿಕೆ ಆಂದೋಲನ ಆರಂಭಿಸಲಿ.
ಮನುವಾದಿ ವರ್ಣಾಶ್ರಮ ವ್ಯವಸ್ಥೆಯ ತಳಹದಿ ಮೇಲೆ ನಿಂತಿರುವ ಮಠಪೀಠಗಳು, ದೇವಸ್ಥಾನಗಳನ್ನೆಲ್ಲ ತಳವರ್ಗದ ಜನರಿಗೆ ಬಿಟ್ಟುಕೊಡುವ ಅಭಿಯಾನವನ್ನು ಇದೇ ವಿಚಾರವಂತರು ಆರಂಭಿಸಲಿ. ಇದೆಲ್ಲವುಗಳನ್ನು ಸಾಧ್ಯಮಾಡಲು ಸರ್ಕಾರದ ಮೇಲೆ ಮೊದಲು ಒತ್ತಡ ತರಲಿ. ಧರ್ಮದ ಹೆಸರಲ್ಲಿ, ದೇವರ ಹೆಸರಲ್ಲಿ ಮೌಢ್ಯಗಳನ್ನು ಹೇರುತ್ತ ಪೌರೋಹಿತ್ಯ, ಜೋತಿಷ್ಯ, ವಾಸ್ತು, ಪವಾಡ, ಮಾಟ-ಮಂತ್ರಗಳ ಮೂಲಕ ಜನರನ್ನು ಬೆದರಿಸುವ ಪರಾವಲಂಬಿ ಮನುಷ್ಯರು ಮೈಬಗ್ಗಿಸಿ ದುಡಿಯುವಂತೆ ಮಾಡಲು ಇಂಥ ಚಟುವಟಿಕೆಗಳ ಮೇಲೆಲ್ಲ ನಿಷೇಧ ಹೇರುವ ಕೆಲಸಕ್ಕಾಗಿ ಒತ್ತಾಯಿಸಲಿ.
ಅಸ್ಪೃಶ್ಯತೆ ಆಚರಿಸುವವರನ್ನು, ಜಾತಿ ಕಾರಣಕ್ಕಾಗಿ ದಲಿತರ ಮೇಲೆ ದೌರ್ಜನ್ಯವೆಸಗುವವರನ್ನು ಭಯೋತ್ಪಾದಕರೆಂದು ಪರಿಗಣಿಸುವ ಕಾನೂನು ರೂಪುಗೊಳಿಸಲು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಿ.
ಇದೆಲ್ಲವೂ ಆದ ಮೇಲೆ ಭೈರಪ್ಪಾದಿಗಳು ಮತಾಂತರ ನಿಷೇಧದ ಬಗ್ಗೆ ಮಾತನಾಡಲಿ. ಇದ್ಯಾವುದನ್ನೂ ಮಾಡದೆ ಹಿಂದೂಧರ್ಮ ರಕ್ಷಕರು ‘ಕಾಮಾಟಿಪುರದ ವಾಸನೆ’ಯನ್ನು ಆಘ್ರಾಣಿಸುತ್ತ ಸಂತೋಷಪಡುತ್ತಿದ್ದರೆ ಅವರನ್ನು ಕಾಮಾಟಿಪುರದ ಗಿರಾಕಿಗಳೆಂದೇ ಪರಿಗಣಿಸಿ ನಿರ್ಲಕ್ಷ್ಯ ಮಾಡುವುದು ಒಳ್ಳೆಯದು.

Subscribe to:
Posts (Atom)