Sunday, October 19, 2008
ಮುಸ್ಲಿಂ ರಾಜಕಾರಣದಲ್ಲಿ ಒಂದು ಸುತ್ತು.....
ಮೆರಾಜುದ್ದೀನ್ ಪಟೇಲರು ಈಗ ಬರೀ ನೆನಪು. ಅವರು ನಿಜವಾದ ಅರ್ಥದಲ್ಲಿ ಸರಳ, ಸಜ್ಜನಿಕೆಯ ರಾಜಕಾರಣಿ. ಜೆಡಿಎಸ್ ರಾಜ್ಯಾಧ್ಯಕ್ಷ ಪಟ್ಟ ಅವರಿಗೆ ಬಯಸದೇ ಬಂದ ಪಟ್ಟ. ಜನತಾದಳದೊಂದಿಗಿನ ಹಾಗು ದೇವೇಗೌಡರ ಕುಟುಂಬದೊಂದಿಗಿನ ನಿಷ್ಠೆ ಅವರನ್ನು ಆ ಗಾದಿಗೆ ತಂದಿತ್ತು. ಆದರೆ ಜೆಡಿಎಸ್‌ನಲ್ಲಿ ದೇವೇಗೌಡರ ಕುಟುಂಬದ ಬಿಗಿಹಿಡಿತದಿಂದಾಗಿ ಯಾರು ಯಾವ ಪಟ್ಟ ಅಲಂಕರಿಸಿದರೂ, ಅವರು ಗೌಡರ ಆಣತಿಯಂತೇ ಕಾರ್ಯ ನಿರ್ವಹಿಸಬೇಕಾದ ಅನಿವಾರ್ಯತೆ ಇರುವುದರಿಂದ ಮೆರಾಜುದ್ದೀನ್ ಅಂಥವರು ಅಲಂಕಾರದ ಬೊಂಬೆಯಾಗುವ ಅಪಾಯ ತಪ್ಪಿದ್ದಲ್ಲ. ಇದೆಲ್ಲ ಗೊತ್ತಿದ್ದೂ ಮೆರಾಜುದ್ದೀನ್ ಉತ್ಸಾಹದಿಂದ ಓಡಾಡಿಕೊಂಡಿದ್ದರು. ಅವರ ನಿರ್ಗಮನ ಆ ಪಕ್ಷವನ್ನಂತೂ ಭಾದಿಸುತ್ತದೆ.
ಮೆರಾಜುದ್ದೀನ್ ಸಕ್ಕರೆ ಕಾರ್ಖಾನೆಯ ಸಮಸ್ಯೆಗಳಿಗೆ ಸಿಲುಕಿ ಕೈ ಸುಟ್ಟುಕೊಂಡಿದ್ದರು. ಮನೆ ತುಂಬ ಹೆಣ್ಣುಮಕ್ಕಳು. ಒಮ್ಮೆ ಹೃದಯಾಘಾತವಾಗಿತ್ತು. ಅವರು ಇನ್ನಷ್ಟು ವರ್ಷ ಬದುಕಿದ್ದರೆ ಇನ್ನಷ್ಟು ಎತ್ತರಕ್ಕೆ ಬೆಳೆಯುತ್ತಿದ್ದರಾ? ಒಂದೊಮ್ಮೆ ಮುಂದೆ ರಾಜಕೀಯ ಪಲ್ಲಟಗಳಾಗಿ ಜೆಡಿಎಸ್‌ಗೆ ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿ ಹುದ್ದೆ ದಕ್ಕಿದ್ದರೆ ಅವರನ್ನು ಗೌಡರು ಮತ್ತವರ ಮಕ್ಕಳು ಆ ಸ್ಥಾನಕ್ಕೆ ನಿಯೋಜಿಸುತ್ತಿದ್ದರಾ? ಉತ್ತರ ಹುಡುಕುವುದು ಬಲು ಕಷ್ಟವೇನಲ್ಲ. ಆ ಬಗ್ಗೆ ಇಲ್ಲಿ ಚರ್ಚೆ ಬೇಡ.
**********
ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿಯುವ ಹೆಸರು ನಜೀರ್ ಸಾಬ್ ಅವರದ್ದು. ಅಸಮಾನ್ಯ ದೂರದೃಷ್ಟಿಯ ಅಪರೂಪದ ನಾಯಕ ಅವರು. ಯಾರಿಗೂ ಬೇಡವಾಗಿದ್ದ ಗ್ರಾಮೀಣಾಭಿವೃದ್ಧಿ ಖಾತೆಯನ್ನು ಕೇಳಿ ಪಡೆದು ಹೆಗಡೆ ಸಂಪುಟದಲ್ಲಿ ನೀರು ಸಾಬ್ ಎಂದೇ ಹೆಸರಾದವರು ಅವರು.
ಕುಡಿಯುವ ನೀರಿಗಾಗಿ ಪರದಾಡುತ್ತಿದ್ದ ಜನರಿಗೆ ನೀರು ಕೊಟ್ಟಿದ್ದು ನಜೀರ್ ಸಾಬ್ ಅವರ ಸಾಧನೆ. ನಜೀರ್ ಹಳ್ಳಿ ಹಳ್ಳಿಗಳಲ್ಲೂ ಬೋರ್‌ವೆಲ್‌ಗಳನ್ನು ಕೊರೆಸಿದರು. ಪಂಚಾಯತ್ ರಾಜ್ ವ್ಯವಸ್ಥೆಯ ಕುರಿತಾಗಿ ಅವರಿಗೆ ಸ್ಪಷ್ಟ ಕಲ್ಪನೆಯಿತ್ತು. ಅಧಿಕಾರ ವಿಕೇಂದ್ರೀರಣದ ಕಲ್ಪನೆಯನ್ನು ಸಾಧ್ಯವಾಗಿಸಿ, ಇಡೀ ದೇಶಕ್ಕೆ ಮಾದರಿಯಾಗಿದ್ದು ಕರ್ನಾಟಕ. ನಜೀರ್ ಸಾಬ್ ಅವರಂಥವರಿಂದಲೇ ಇದೆಲ್ಲವೂ ಸಾಧ್ಯವಾಗಿದ್ದು.
ಆದರೆ ಮುಸ್ಲಿಂ ಸಮುದಾಯ ನಜೀರ್ ಸಾಬ್‌ರನ್ನು ತಮ್ಮ ನಾಯಕ ಎಂದು ಒಪ್ಪಿಕೊಂಡಿತ್ತೆ? ಈ ಪ್ರಶ್ನೆಗೆ ಉತ್ತರ ಸಿಗುವುದು ಕಷ್ಟ. ಯಾರು ಮುಸ್ಲಿಂ ಸಮುದಾಯದೊಳಗೆ ನಾಯಕರಾಗಿ ರೂಪುಗೊಳ್ಳುತ್ತಾರೋ ಅವರು ಇಡೀ ಸಮಾಜದ ನಾಯಕರಾಗಿ ಹೊರಹೊಮ್ಮಿದ ಉದಾಹರಣೆಗಳು ಬಹಳ ಕಡಿಮೆ. ಇಡೀ ಸಮಾಜದ ಮುಖಂಡರಾಗಿ ರೂಪುಗೊಂಡ ಮುಸ್ಲಿಂ ರಾಜಕಾರಣಿಯನ್ನು ಮುಸ್ಲಿಂ ಸಮುದಾಯ ಒಪ್ಪಿಕೊಳ್ಳುವುದು ಕಷ್ಟ.
ಇವತ್ತಿಗೂ ಮುಸ್ಲಿಂ ಸಮುದಾಯದ ನಾಯಕತ್ವ ಇರುವುದು ಆ ಸಮುದಾಯದ ರಾಜಕಾರಣಿಗಳ ಬಳಿಯಲ್ಲ. ಮೌಲ್ವಿಗಳೇ ಆ ಸಮುದಾಯದ ನಾಯಕರು. ರಾಜಕೀಯ ಮುಖಂಡರ ಭವಿಷ್ಯವನ್ನು ನಿರ್ಧರಿಸುವ, ಬದಲಿಸುವ ಶಕ್ತಿಯೂ ಇವರಿಗಿದೆ. ಧರ್ಮದ ಕಟ್ಟುಪಾಡುಗಳನ್ನು ಮೀರಿ ಒಬ್ಬ ಮುಸ್ಲಿಂ ರಾಜಕಾರಣಿ ಬೆಳೆದ ಉದಾಹರಣೆಗಳು ಕಡಿಮೆ.
*******
ಜಾಫರ್ ಷರೀಫ್ ಈಗ ಹಣ್ಣಾಗಿದ್ದಾರೆ. ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಅವರು ಎಚ್.ಟಿ.ಸಾಂಗ್ಲಿಯಾನ ಎದುರು ಸೋಲು ಅನುಭವಿಸಿದರು. ಪರೋಕ್ಷವಾಗಿ ಷರೀಫರನ್ನು ಸೋಲಿಸಿದವರು ಸಿ.ಎಂ.ಇಬ್ರಾಹಿಂ ಎಂಬ ಮತ್ತೊಬ್ಬ ಮುಸ್ಲಿಂ ಮುಖಂಡ. ಇಬ್ರಾಹಿಂ ಸ್ಪರ್ಧೆಯಲ್ಲಿ ಇರದೇ ಹೋಗಿದ್ದರೆ ಷರೀಫ್ ಗೆಲ್ಲುತ್ತಿದ್ದರೇನೋ?
ಒಂದೊಮ್ಮೆ ಷರೀಫರು ಗೆದ್ದಿದ್ದರೆ ಕೇಂದ್ರದ ಯುಪಿಎ ಸರ್ಕಾರದಲ್ಲಿ ಸಂಪುಟ ದರ್ಜೆ ಸಚಿವರಾಗುವ ಅವಕಾಶಗಳಿದ್ದವು. ಸೋಲಿನಿಂದಾಗಿ ನಷ್ಟ ಅನುಭವಿಸಿದ್ದು ಕರ್ನಾಟಕ ರಾಜ್ಯ. ಯಾಕೆಂದರೆ ಕಾಂಗ್ರೆಸ್‌ನಿಂದ ಗೆದ್ದವರ ಪೈಕಿ ಯುಪಿಎ ಸರ್ಕಾರಕ್ಕೆ ಕರ್ನಾಟಕದಿಂದ ಸಂಪುಟ ದರ್ಜೆ ಸಚಿವರಾಗುವ ಯೋಗ್ಯತೆಯ ಒಬ್ಬ ಮನುಷ್ಯನೂ ಕಾಣಿಸಲಿಲ್ಲ!
ಷರೀಫ್ ಕೇಂದ್ರ ರೈಲ್ವೆ ಸಚಿವರಾಗಿದ್ದಾಗಲೇ ಕರ್ನಾಟಕ ರೈಲ್ವೆ ಅಲ್ಪಸ್ವಲ್ಪ ಉದ್ಧಾರವಾಗಿದ್ದು. ಕನ್ನಡಿಗರಿಗೆ ರೈಲ್ವೆಯಲ್ಲಿ ಉದ್ಯೋಗ ದೊರೆತಿದ್ದು. ಜಾಫರ್ ಷರೀಫ್ ಹಟ ಹಿಡಿದು ಬೆಂಗಳೂರಿಗೆ ಅಚ್ಚು ಮತ್ತು ಗಾಲಿ ಕಾರ್ಖಾನೆ ತಂದರು. ಅಲ್ಲೂ ಸಹ ಕನ್ನಡಿಗರಿಗೆ ತಕ್ಕಮಟ್ಟಿಗೆ ಉದ್ಯೋಗ ದೊರೆಯಿತು. ಇತರೆ ರಾಜ್ಯಗಳವರ ಕಿರಿಕಿರಿ, ಆರೋಪಗಳನ್ನೆಲ್ಲ ಸಮರ್ಥವಾಗಿ ಎದುರಿಸುತ್ತಲೇ ಷರೀಫ್ ಕರ್ನಾಟಕಕ್ಕೆ ಏನೇನು ಮಾಡಲು ಸಾಧ್ಯವಿತ್ತೋ ಎಲ್ಲವನ್ನೂ ಮಾಡಿದರು.
ಷರೀಫ್ ತಮಗೆ ಅನಿಸಿದ್ದನ್ನು ನೇರವಾಗಿ ಹೇಳುವವರು. ಹಾಗೆಯೇ ಮಾಡುವವರು. ಕಾಂಗ್ರೆಸ್ ಪಕ್ಷದಲ್ಲಿ ಷರೀಫ್ ಒಳಬಂಡಾಯಗಾರ. ಅದಕ್ಕಾಗಿ ಅವರು ಕಳೆದುಕೊಂಡಿದ್ದೇ ಹೆಚ್ಚು. ಪಕ್ಷದಲ್ಲಿ ಮೂಲೆಗುಂಪಾದ ಷರೀಫ್ ಒಮ್ಮೆ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಬಿಎಸ್ಪಿ ಸಮಾವೇಶಕ್ಕೆ ಹೋಗಿ ಕುಳಿತಿದ್ದರು. ಮಾಯಾವತಿ ಷರೀಫರನ್ನು ಗುರುತಿಸಿ ಅವರನ್ನು ವೇದಿಕೆಯಲ್ಲೇ ತಮ್ಮ ಪಕ್ಕದಲ್ಲೇ ಕೂರಿಸಿಕೊಂಡಿದ್ದರು. ಈ ಘಟನೆಯಿಂದ ರಾಜ್ಯದ ಕಾಂಗ್ರೆಸ್ ಮುಖಂಡರೆಲ್ಲ ಕಕ್ಕಾಬಿಕ್ಕಿಯಾಗಿದ್ದರು.
ಷರೀಫರ ಮೇಲಿರುವ ಗಂಭೀರ ಆರೋಪವೆಂದರೆ ಅವರು ಎರಡನೇ ಸಾಲಿನ ಮುಸ್ಲಿಂ ಮುಖಂಡರನ್ನು ಬೆಳೆಸದೇ ಹೋದರು ಎಂಬುದು. ಈಗಲೂ ರಾಜ್ಯವ್ಯಾಪಿಯಾಗಿ ಅವರಿಗೆ ತಮ್ಮದೇ ಆದ ಅಭಿಮಾನಿಗಳ, ಅನುಯಾಯಿಗಳ ಬಳಗವಿಲ್ಲ. ಹೊಸ ಮುಖಂಡರನ್ನು ಸಿದ್ಧಪಡಿಸುವಲ್ಲಿ ಅವರು ತೋರಿದ ನಿರ್ಲಕ್ಷ್ಯಕ್ಕೆ ಕಾರಣವೇನು ಎಂಬುದನ್ನು ಅವರೇ ಹೇಳಬೇಕು.
ಷರೀಫರ ಮಕ್ಕಳು ಅವರ ಸ್ಥಾನ ತುಂಬುವ ಯಾವ ಯತ್ನವನ್ನೂ ಮಾಡಲಿಲ್ಲ. ಒಬ್ಬ ಮಗ ತೀರಿಹೋದರು. ಇನ್ನೊಬ್ಬ ಮಗನೂ ರಾಜಕೀಯವಾಗಿ ಬೆಳೆಯಲಿಲ್ಲ. ಇಬ್ಬರೂ ವ್ಯಸನಗಳಿಗೆ ಸಿಕ್ಕು ಅವಕಾಶಗಳನ್ನು ತಪ್ಪಿಸಿಕೊಂಡರು ಎಂದೇ ಅವರ ಸುತ್ತಲಿನ ಜನರು ಹೇಳುತ್ತಾರೆ. ಈಗ ಅವರ ಮೊಮ್ಮಗ ರೆಹಮಾನ್ ಷರೀಫ್ ಅಖಾಡಕ್ಕೆ ಇಳಿದಿದ್ದಾರೆ. ಅವರಿಗಾದರೂ ರಾಜಕೀಯ ದೂರದೃಷ್ಟಿಯಿದೆಯಾ? ಕಾಲವೇ ಹೇಳಬೇಕು.
ಷರೀಫ್ ಅದ್ಭುತವಾಗಿ ಕನ್ನಡ ಮಾತನಾಡುತ್ತಾರೆ. ಕಾವೇರಿ ನ್ಯಾಯಮಂಡಳಿಯ ಅಂತಿಮ ತೀರ್ಪಿನ ವಿರುದ್ಧ ಕರ್ನಾಟಕ ಬಂದ್ ಕರೆ ನೀಡಿದಾಗ, ಬಂದ್ ಯಶಸ್ಸುಗೊಳಿಸಲು ಕನ್ನಡ ಸಂಘಟನೆಗಳು ಎಲ್ಲೆಡೆ ಸಭೆಗಳನ್ನು ನಡೆಸುತ್ತಿದ್ದವು. ಟಿ.ಎ.ನಾರಾಯಣಗೌಡರ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ ಶಿವಾಜಿನಗರದಲ್ಲಿ ಬಂದ್ ಹಿಂದಿನ ರಾತ್ರಿ ಸಭೆ ನಡೆಸಿತ್ತು. ಷರೀಫರು ಆ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ರಾಜಕೀಯ ವ್ಯವಸ್ಥೆ ನೋಡಿ ಜಿಗುಪ್ಸೆ ಬಂದಿದೆ. ಇದೆಲ್ಲವನ್ನು ಗಮನಿಸಿದರೆ ಸುಮ್ಮನೆ ನಾರಾಯಣಗೌಡರ ರಕ್ಷಣಾ ವೇದಿಕೆಯಲ್ಲಿ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡಿಕೊಂಡು ಹೋಗುವ ಆಸೆಯಾಗುತ್ತಿದೆ ಎಂದಿದ್ದರು ಅವರು. ಷರೀಷ್ ಅವರ ಮಾತಿನಲ್ಲಿ ಕೃತ್ತಿಮತೆ ಇದ್ದಂತೆ ಕಾಣಲಿಲ್ಲ. ಷರೀಫರು ಸೊಗಸಾಗಿ ಕನ್ನಡ ಮಾತನಾಡುತ್ತಾರೆ. ಹಾಗೆಯೇ ಕನ್ನಡವನ್ನು ಪ್ರೀತಿಸುತ್ತಾರೆ.
ಅದೇ ಸಭೆಯಲ್ಲಿ ಮಾತನಾಡುತ್ತಾ ನಾನು ಹೇಳಿದೆ. ಮುಸ್ಲಿಮರಿಗೆ ಲಾಡೆನ್, ಸದ್ದಾಂ ಆದರ್ಶವಾಗಬಾರದು. ಕನ್ನಡದ ನೆಲದಲ್ಲಿ ಹುಟ್ಟಿದ ಶಿಶುನಾಳ ಷರೀಫ, ಇಮಾಮ್ ಸಾಬ್, ನಜೀರ್ ಸಾಬ್‌ರಂಥವರು ಆದರ್ಶವಾಗಬೇಕು.. ಕನ್ನಡ ನಾಡಿಗೆ ಮುಸ್ಲಿಂ ಸಂತರು, ಕವಿಗಳು, ಸೂಫಿ ಚಿಂತಕರು ನೀಡಿದ ಕೊಡುಗೆ ಅಪಾರ. ತಮಾಶೆಯೆಂದರೆ ಈಗಲೂ ಸಾಮಾನ್ಯ ಮುಸ್ಲಿಮರಲ್ಲಿ ಬಹುತೇಕ ಮಂದಿಗೆ ಸಂತ ಶಿಶುನಾಳ ಷರೀಫರೂ ಗೊತ್ತಿಲ್ಲ, ಜಾನಪದ ಜಂಗಮ ಎಸ್.ಕೆ.ಕರೀಂಖಾನರೂ ಗೊತ್ತಿಲ್ಲ. ಹಾಗಾಗಬಾರದು.
ಷರೀಫ್ ಬಗ್ಗೆ ಪತ್ರಕರ್ತ ಎನ್.ಎ.ಎಂ.ಇಸ್ಮಾಯಿಲ್ ಅವರು ಕೆಂಡಸಂಪಿಗೆಯಲ್ಲಿ ಈ ಹಿಂದೆಯೇ ಬರೆದಿದ್ದಾರೆ. ಜಾಫರ್ ಷರೀಫ್ ತಮಗೆ ಬೇಕಾದಾಗ ಮಾತ್ರ ಮುಸ್ಲಿಂ ಮುಖಂಡ ಎನ್ನುವುದು ಲೇಖನದ ಶೀರ್ಷಿಕೆ. ಷರೀಫ್ ವ್ಯಕ್ತಿತ್ವ ಕುರಿತ ಇನ್ನಷ್ಟು ಚಿತ್ರಣ ಇಲ್ಲಿದೆ.
***********
ನಕ್ಸಲ್ ಮುಖಂಡ ಸಾಕೇತ್ ರಾಜನ್ ಅವರನ್ನು ಧರ್ಮಸಿಂಗ್ ಸರ್ಕಾರವಿದ್ದಾಗ ಪೊಲೀಸರು ಗುಂಡಿಟ್ಟು ಕೊಂದರು. ಆಗ ರೋಷನ್ ಬೇಗ್ ಧರ್ಮಸಿಂಗ್ ಸಂಪುಟದಲ್ಲಿದ್ದರು. ಸಾಕೇತ್ ರಾಜನ್ ಅವರ ಶವವನ್ನು ಸ್ವೀಕರಿಸಲು ಅವರ ತಾಯಿಯೇ ನಿರಾಕರಿಸಿದರು. ಸಾಕೇತ್ ಅವರ ಸ್ನೇಹಿತರು, ಕೆಲ ಮಾವೋವಾದಿ ಚಿಂತನೆಯ ಬುದ್ಧಿಜೀವಿಗಳು ಶವ ಪಡೆಯಲು ಯತ್ನಿಸಿದರಾದರೂ ಪೊಲೀಸರು ಕೊಡಲು ಒಪ್ಪಲಿಲ್ಲ.
ಆಶ್ಚರ್ಯವೆಂದರೆ ರೋಷನ್ ಬೇಗ್ ಅವರು ಇದ್ದಕ್ಕಿದ್ದಂತೆ ತಮಗೆ ಶವ ಕೊಡಲು ಕೇಳಿಕೊಂಡರು. ತಾವೇ ಅಂತ್ಯಸಂಸ್ಕಾರ ಮಾಡುವುದಾಗಿ ಹೇಳಿದರು. ಬೇಗ್ ಹೀಗೇಕೆ ಕೇಳುತ್ತಿದ್ದಾರೆ ಎಂಬ ಆಶ್ಚರ್ಯ ಎಲ್ಲರದಾಗಿತ್ತು.
ಸಾಕೇತ್ ಸಹ ಹೋರಾಟಗಾರ. ಸಮಾಜದ ಒಳಿತಿಗಾಗಿ ಜೀವ ಸವೆಸಿದವರು. ಅವರು ಆಯ್ಕೆ ಮಾಡಿಕೊಂಡ ದಾರಿ ಸರಿಯಲ್ಲದಿರಬಹುದು, ಆದರೆ ಅವರ ಜನಪರ ಕಾಳಜಿಯನ್ನು ಅನುಮಾನಿಸಲು ಸಾಧ್ಯವಿಲ್ಲ. ಹೀಗಾಗಿ ನಾನು ಶವ ಕೇಳಿದೆ ಎಂದು ಬೇಗ್ ತಮ್ಮ ಆಪ್ತರಲ್ಲಿ ಹೇಳಿದ್ದರಂತೆ. ಹೀಗೆ ಒಬ್ಬ ನಕ್ಸಲ್ ನಾಯಕನ ಶವಸಂಸ್ಕಾರ ತಾನೇ ಮಾಡುವುದಾಗಿ ಹೇಳಲು ಬೇಗ್ ಎಂಥ ಗುಂಡಿಗೆ ಹೊಂದಿದ್ದರು ಎಂಬುದನ್ನು ಗಮನಿಸಬೇಕು.
ರೋಷನ್ ಬೇಗ್ ಸ್ವಭಾವವೇ ಹಾಗೆ. ಅವರು ಹಿಂದೂ ಮಿಲಿಟೆಂಟ್‌ಗಳನ್ನು ಎದುರಿಸುವ ಹಾಗೆಯೇ ಮುಸ್ಲಿಂ ಸಂಪ್ರದಾಯವಾದಿಗಳನ್ನೂ ಎದುರಿಸುತ್ತಾರೆ. ಹಾಗಾಗಿ ತಮ್ಮ ಸಮುದಾಯದೊಳಗೂ ಅಸಮಾಧಾನ, ವಿರೋಧಗಳನ್ನು ಎದುರಿಸಿದವರು. ಬೇಗ್ ಶಾಸಕರಾದ ನಂತರ ಶಿವಾಜಿನಗರ ಮತ್ತು ಸುತ್ತಮುತ್ತ ಕೋಮುಗಲಭೆಗಳೆಲ್ಲ ನಿಂತುಹೋಗಿದ್ದು ಕಾಕತಾಳೀಯವೇನೂ ಅಲ್ಲ. ಬೇಗ್ ಅವರ ಶ್ರಮ ಅದಕ್ಕೆ ಕಾರಣ.
ಹಿಂದೊಮ್ಮೆ ಪ್ರವೀಣ್ ತೊಗಾಡಿಯಾ ಹಾಗೆಯೇ ಒಬ್ಬ ಮುಸ್ಲಿಂ ಗುರು ಪ್ರಚೋದನಕಾರಿ ಉಪನ್ಯಾಸ ನೀಡುತ್ತಿದ್ದುದನ್ನು ಗಮನಿಸಿದ ಬೇಗ್ ಕೂಡಲೇ ಆ ಗುರುವನ್ನು ಜಾಗಖಾಲಿ ಮಾಡಿಸಿದರು. ಇದಕ್ಕಾಗಿ ವಿರೋಧ ಎದುರಾದರೂ ಅವರು ಲೆಕ್ಕಿಸಿರಲಿಲ್ಲ.
ಬೇಗ್ ಸುವರ್ಣ ರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ಶಿವಾಜಿನಗರದಲ್ಲಿ ಸಾವಿರಾರು ಮುಸ್ಲಿಮರನ್ನು ಸೇರಿಸಿ ಅಭೂತಪೂರ್ವ ರಾಜ್ಯೋತ್ಸವ ಮಾಡಿ ಸೈ ಎನಿಸಿಕೊಂಡವರು. ಮದರಸಾಗಳಲ್ಲಿ ಕೇವಲ ಧಾರ್ಮಿಕ ಶಿಕ್ಷಣ ಕೊಟ್ಟರೆ ಸಾಲದು, ಟಿವಿ-ಕಂಪ್ಯೂಟರ್‌ಗಳೂ ಅಲ್ಲಿಗೆ ಬರಬೇಕು. ನಮ್ಮ ಮಕ್ಕಳೂ ಆಧುನಿಕ ಶಿಕ್ಷಣ ಪಡೆಯಬೇಕು ಎಂದು ಬೇಗ್ ಹೇಳಿದಾಗಲೂ ಪ್ರತಿರೋಧ ಎದುರಿಸಬೇಕಾಯಿತು. ಆದರೆ ಬೇಗ್ ಕಟ್ಟರ್‌ಧಾರ್ಮಿಕರ ವಿರೋಧ ಎದುರಿಸುತ್ತಲೇ, ಅವರನ್ನು ಮನವೊಲಿಸಿ ಬದಲಾವಣೆಗಳನ್ನು ತರಲು ಯತ್ನಿಸಿದರು. ತಕ್ಕ ಮಟ್ಟಿಗೆ ಯಶಸ್ವಿಯೂ ಆದವರು.
ರೋಷನ್ ಬೇಗ್ ಅವರಿಗೆ ಹಿಂದೂ-ಮುಸ್ಲಿಂ ಸಾಮರಸ್ಯದ ಅಗತ್ಯಗಳು ಚೆನ್ನಾಗಿ ಗೊತ್ತು. ಈ ಸಾಮರಸ್ಯಕ್ಕಾಗಿ ಹೇಗೆ ಹೆಣಗಬೇಕು ಎಂಬುದೂ ಗೊತ್ತು. ವಿರೋಧಗಳನ್ನು ಹೇಗೆ ಸಂಭಾಳಿಸಬೇಕು ಎಂಬುದೂ ಗೊತ್ತು. ಹೀಗಾಗಿ ಎಲ್ಲಾದರೂ ಕೋಮುಗಲಭೆಯ ವಾಸನೆ ಗೊತ್ತಾದರೂ ಅಲ್ಲಿ ಬೇಗ್ ಹಾಜರ್. ಕೆಲಕ್ಷಣಗಳಲ್ಲೇ ಅದನ್ನು ತಿಳಿಗೊಳಿಸುವ ಶಕ್ತಿಯೂ ಅವರಿಗಿರುವುದರಿಂದ ಪೊಲೀಸರೂ ಸಹ ಬೇಗ್ ಬರುವುದನ್ನೇ ಕಾಯುತ್ತಾರೆ.
ಇಂಥ ರೋಷನ್ ಬೇಗ್ ಛಾಪಾ ಕಾಗದ ಹಗರಣದಲ್ಲಿ ಹೆಸರು ಕೆಡಿಸಿಕೊಂಡರು. ಅವರು ಹಗರಣದಲ್ಲಿ ಕ್ಲೀನ್ ಚಿಟ್ ಪಡೆದುಕೊಂಡರೂ ಹಗರಣದಲ್ಲಿ ತಮ್ಮ ಹೆಸರು ಥಳುಕು ಹಾಕಿಕೊಂಡಿದ್ದರಿಂದ ಅನುಭವಿಸಿದ ಕಷ್ಟ-ಕೋಟಲೆಗಳು ನೂರಾರು. ಈಗಲೂ ಆ ಹಗರಣದ ನೆರಳಿನಿಂದ ಹೊರಬರಲು ಬೇಗ್ ಅವರಿಗೆ ಸಂಪೂರ್ಣ ಸಾಧ್ಯವಾಗಿಲ್ಲ.
ಬೇಗ್ ಕಾಂಗ್ರೆಸ್ ಪಕ್ಷದ ಪ್ರಮುಖ ಮುಖಂಡರನ್ನೇ ಎದುರುಹಾಕಿಕೊಂಡವರು. ಈಗಲೂ ಆ ಜಿದ್ದಾಜಿದ್ದಿ ಮುಂದುವರೆದೇ ಇದೆ. ಅವರು ಇಡೀ ರಾಜ್ಯದ ಮುಸ್ಲಿಮರಿಗೆ ನಾಯಕತ್ವ ನೀಡುವ ಮುಖಂಡರಾಗಿ ಹೊರಹೊಮ್ಮುತ್ತಾರಾ? ಕಾದು ನೋಡಬೇಕು.
*******
ಅಹಿಂದ ಮುಖಂಡ ಸಿ.ಎಂ.ಇಬ್ರಾಹಿಂ ಅವರದ್ದು ವರ್ಣರಂಜಿತ ವ್ಯಕ್ತಿತ್ವ. ಗುಂಡೂರಾಯರ ಸರ್ಕಾರದಲ್ಲಿ ಇಬ್ರಾಹಿಂ ಮಿಂಚಿದ್ದೇ ಮಿಂಚಿದ್ದು. ಯಾವಾಗ ಇಡೀ ರಾಜ್ಯದ ಜನ ಗುಂಡೂರಾಯರ ಜನವಿರೋಧಿ ಸರ್ಕಾರದ ವಿರುದ್ಧ ತಿರುಗಿಬಿತ್ತೋ ಇಬ್ರಾಹಿಂ ಆದಿಯಾಗಿ ಎಲ್ಲರೂ ಮನೆ ಸೇರಿದರು. ಆಮೇಲೆ ಇಬ್ರಾಹಿಂ ಸಾಹೇಬರು ಮಾಡಿದ್ದೆಲ್ಲಾ ಹಿಂಬಾಗಿಲ ರಾಜಕಾರಣ.
ಮುಂಬಾಗಿಲ ರಾಜಕಾರಣ ಇಬ್ರಾಹಿಂ ಅವರಿಗೆ ಇಷ್ಟವಿಲ್ಲ ಎಂದೇನಲ್ಲ. ಆದರೆ ೮೦ರ ದಶಕದಿಂದ ಈಚೆಗೆ ಅವರು ನೇರ ಚುನಾವಣೆಗಳಲ್ಲಿ ನಿಂತು ನಿಂತು ಸೋತು ಹೈರಾಣಾಗಿ ಹೋಗಿದ್ದಾರೆ. ಹಾಗೆ ನೋಡಿದರೆ ಅವರು ನಿಜಲಿಂಗಪ್ಪ, ವಿರೇಂದ್ರ ಪಾಟೀಲ್, ಹೆಗಡೆ, ದೇವೇಗೌಡ, ಬೊಮ್ಮಾಯಿ ಹೀಗೆ ಹಲವು ಘಟಾನುಘಟಿಗಳ ಗರಡಿಗಳಲ್ಲಿ ಪಳಗಿದವರು. ಯಾರ ಜತೆಯೂ ಪರ್ಮನೆಂಟ್ ಸ್ನೇಹ, ಪರ್ಮನೆಂಟ್ ದುಷ್ಮನಿ ಉಳಿಸಿಕೊಂಡವರಲ್ಲ.
ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಚಿಟಿಕೆ ಹೊಡೆಯುವಷ್ಟರಲ್ಲಿ ಹುಬ್ಬಳ್ಳಿಯ ಈದ್ಗಾ ಮೈದಾನ ವಿವಾದವನ್ನು ಬಗೆಹರಿಸಿದ ಖ್ಯಾತಿ ಇಬ್ರಾಹಿಂ ಅವರದ್ದು. ಗೌಡರು ಪ್ರಧಾನಿಯಾಗುತ್ತಿದ್ದಂತೆ ಅವರ ಪಂಚೆಯ ಚುಂಗು ಹಿಡಿದು ದಿಲ್ಲಿಗೆ ಹೋದ ಇಬ್ರಾಹಿಂ ಕೇಂದ್ರ ಸಂಪುಟದಲ್ಲಿ ಸಚಿವರಾಗಿ ಫಳಫಳಿಸಿದರು.
ಗೌಡರು ಗಾದಿ ಕಳೆದುಕೊಂಡು ವಾಪಾಸು ಬಂದಮೇಲೆ ಇಬ್ರಾಹಿಂ ಹುಡುಕಿಕೊಂಡ ಹೊಸ ಜತೆಗಾರ ಸಿದ್ಧರಾಮಯ್ಯ. ಅಲ್ಲೇ ಹುಟ್ಟಿಕೊಂಡ ಐಡಿಯಾ ಅಹಿಂದ. ಅಸಾಧ್ಯ ವಾಗ್ಪಟು ಇಬ್ರಾಹಿಂ ಸಾವಿರಸಾವಿರ ಸಂಖ್ಯೆಯ ಪ್ರೇಕ್ಷಕರನ್ನು ನಿಬ್ಬೆರಗಾಗಿಸುವಂತೆ ಮಾತನಾಡಬಲ್ಲರು. ಬಸವಣ್ಣನವರ ವಚನಗಳನ್ನು ಹೇಳುತ್ತಲೇ ಎದುರಾಳಿ ರಾಜಕಾರಣಿಗಳನ್ನು ತಮ್ಮ ಮಾತಿನಲ್ಲೇ ಕುಟ್ಟಿ ಬಿಸಾಡಬಲ್ಲವರು.
ಇಬ್ರಾಹಿ ಜಾತಿ ಸಮೀಕರಣದಲ್ಲಿ ಅತಿ ಹೆಚ್ಚು ನಂಬಿಕೆಯಿಟ್ಟವರು. ದೇವೇಗೌಡರ ಹಾಗೆಯೇ ಎಲ್ಲ ಜಾತಿಗಳ ಹೆಸರುಗಳನ್ನು ಬರೆದು ಕಳೆದು, ಕೂಡಿಸಿ, ಭಾಗಿಸಿ ತಮ್ಮ ಅನುಕೂಲದ ಲೆಕ್ಕಾಚಾರ ಹಾಕುವವರು. ಸಿದ್ಧರಾಮಯ್ಯ ಅವರ ತಲೆಗೂ ಈ ಸಮೀಕರಣವನ್ನು ತುಂಬಿಸಿ ಅವರ ರಾಜಕೀಯ ಜೀವನದ ದಿಕ್ಕನ್ನೇ ಬದಲಾಯಿಸಿದರು ಎಂಬ ಆರೋಪವೂ ಇದೆ.
ಇಂಥ ಇಬ್ರಾಹಿಂ ಸಾಹೇಬರು ಇವತ್ತು ಬೆಂಗಳೂರಿನಲ್ಲಿದ್ದರೆ ನಾಳೆ ಕೇರಳದ ಯಾವುದೋ ಊರಿನಲ್ಲಿರುತ್ತಾರೆ, ನಾಡಿದ್ದು ದಿಲ್ಲಿ, ಮತ್ತೊಂದು ದಿನ ತಮಿಳುನಾಡು. ಅವರ ಹೆಜ್ಜೆ ಜಾಡು ಕಂಡುಹಿಡಿಯುವುದು ಕಷ್ಟ. ಅವರ ಆಸ್ತಿಪಾಸ್ತಿ ಲೆಕ್ಕಾಚಾರವೂ ಅಷ್ಟು ಸುಲಭವಲ್ಲ ಎನ್ನುತ್ತಾರೆ ಬಲ್ಲವರು.
ಇಷ್ಟೆಲ್ಲ ಇದ್ದರೂ ಇಬ್ರಾಹಿಂ ಅವರನ್ನು ೮೦ರ ದಶಕದಿಂದೀಚೆಗೆ ಜನ ತಿರಸ್ಕರಿಸುತ್ತಲೇ ಬರುತ್ತಿದ್ದಾರೆ. ಜನ ತಿರಸ್ಕರಿಸಿದ ನಾಯಕ ಎಷ್ಟೇ ತಂತ್ರ ಮಾಡಿ ರಾಜ್ಯಸಭೆ, ವಿಧಾನಪರಿಷತ್ತು ಸೀಟುಗಳನ್ನು ಗಿಟ್ಟಿಸಿಕೊಂಡರೂ ಆತನನ್ನು ಪರಿಪೂರ್ಣ ರಾಜಕಾರಣಿ ಎನ್ನಲು ಸಾಧ್ಯವಿಲ್ಲ.
ಇಬ್ರಾಹಿಂ ಅವರಿಗೆ ಒಂದೇ ಒಂದು ಗೆಲುವಿನ ತುರ್ತು ಅಗತ್ಯವಿದೆ. ಅದು ಸಾಧ್ಯವಾಗದೇ ಹೋದರೆ ಸಿದ್ಧರಾಮಯ್ಯ ದಂಡಿನೊಂದಿಗೆ ಜನರನ್ನು ಸೆಳೆಯಲು ಒಬ್ಬ ಸಿನಿಮಾ ಹೀರೋ ಹಾಗೆ ಇಬ್ರಾಹಿಂ ಸುತ್ತುತ್ತಿರಬೇಕು ಅಷ್ಟೆ.
**********
ಇದಿನಬ್ಬ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು. ಅವರು ಅಧ್ಯಕ್ಷರಾಗುವ ಹೊತ್ತಿಗೆ ಅವರಿಗೆ ವೃದ್ಧಾಪ್ಯ ಆವರಿಸಿತ್ತು. ಕೆಲ ಕನ್ನಡದ ಸಾಹಿತಿಗಳು ಪ್ರಾಧಿಕಾರಕ್ಕೆ ಹೀಗೆ ವಯಸ್ಸಾದ ವ್ಯಕ್ತಿ ಬೇಕಿತ್ತೇ ಎಂದು ವ್ಯಂಗ್ಯವಾಡಿದ್ದರು.
ಆದರೆ ಇದಿನಬ್ಬ ವಿಧಾನಮಂಡಲದಲ್ಲಿ ಆಡಿದ್ದ ಭಾಷಣಗಳು ಆ ಕಾಲಕ್ಕೆ ಅದ್ಭುತ. ಹೇಳಿಕೇಳಿ ಇದಿನಬ್ಬ ಆಶುಕವಿ. ಸಮಸ್ಯೆಗಳನ್ನು ತಮ್ಮ ಕವಿತ್ವದಿಂದಲೇ ಸಭೆಯ ಗಮನಕ್ಕೆ ತರುತ್ತಿದ್ದ ಇದಿನಬ್ಬ ಅಪ್ಪಟ ಗಾಂಧಿವಾದಿ.
ತೀರಾ ಧಾರ್ಮಿಕ ಮನಸ್ಸಿನವರೂ ಆಗಿದ್ದ ಇದಿನಬ್ಬ ಅವರಿಗೆ ಸರಿಯಾಗಿ ಉರ್ದು ಬರುತ್ತಿರಲಿಲ್ಲ. ಅವರ ಮಾತೃಭಾಷೆ ಕನ್ನಡ. ದಕ್ಷಿಣ ಕನ್ನಡದಲ್ಲಿ ಹೀಗೆ ಕನ್ನಡವನ್ನೇ ಮಾತೃಭಾಷೆಯಾಗಿ ಹೊಂದಿರುವ ಮುಸ್ಲಿಮರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ.
ಇದಿನಬ್ಬ ಕನ್ನಡದವರಾಗಿದ್ದರಿಂದ ಅವರು ಉರ್ದು ಮಾತನಾಡುವ ಮುಸ್ಲಿಮರ ಜತೆ ಸಂವಹಿಸಲು ಸ್ವಲ್ಪ ಪ್ರಯಾಸಪಡಬೇಕಾಗಿತ್ತು.
ಕರ್ನಾಟಕ ರಾಜಕಾರಣದಲ್ಲಿ ಕೆಲ ಕಾಲ ಒಂದಷ್ಟು ಮೆರೆದ ಮತ್ತೊಬ್ಬ ಮುಸ್ಲಿಂ ರಾಜಕಾರಣಿ ನಜೀರ್ ಅಹಮದ್. ಕೋಲಾರದ ನಜೀರ್ ಅವರು ಬಂಗಾರಪ್ಪ ಅವರ ಸಂಪುಟದಲ್ಲಿ ಸಣ್ಣ ಕೈಗಾರಿಕೆ ಸಚಿವರಾಗಿದ್ದವರು. ನಜೀರ್ ಹಾಗು ಎಸ್.ರಮೇಶ್ ಇಬ್ಬರೂ ಬಂಗಾರಪ್ಪ ಅವರಿಗೆ ಬಲಗೈ- ಎಡಗೈ ಹಾಗಿದ್ದವರು.
ಸಾಕಷ್ಟು ಆಸ್ತಿ ಸಂಪಾದಿಸಿರುವ ನಜೀರ್ ದಾನ-ಧರ್ಮದಲ್ಲಿ ಎತ್ತಿದ ಕೈ. ಹೀಗಾಗಿ ಮುಸ್ಲಿಂ ಸಮುದಾಯದಲ್ಲಿ ಪ್ರೀತಿ ಗಳಿಸಿಕೊಂಡಿದ್ದಾರೆ. ಆದರೆ ಬಂಗಾರಪ್ಪ ನಿರ್ಗಮನದ ನಂತರ ನಜೀರ್ ರಾಜಕೀಯ ಜೀವನದ ಸುಖಪರ್ವವೆಲ್ಲ ಮುಗಿದುಹೋಗಿತ್ತು. ವಿಧಾನಪರಿಷತ್ ಸದಸ್ಯರಾಗಿರುವ ನಜೀರ್ ತಮ್ಮ ವ್ಯಾಪ್ತಿ, ಮಿತಿಯನ್ನು ಮೀರಿ ಬೆಳೆಯಲು ಯತ್ನಿಸಿದ ಉದಾಹರಣೆಗಳು ಕಡಿಮೆ.
ಖಮರುಲ್ ಇಸ್ಲಾಂ ಸಮಸ್ಯೆ ಇರುವುದೇ ಅವರ ಕನ್ನಡ ಭಾಷಾ ಅಜ್ಞಾನದಲ್ಲಿ. ಕನ್ನಡ ಬಾರದ ಯಾವುದೇ ಧರ್ಮದ ರಾಜಕಾರಣಿ ಕರ್ನಾಟಕದಲ್ಲಿ ಬೆಳೆಯುವುದು ಸಾಧ್ಯವೇ ಇಲ್ಲ. ಅಂಥ ಉದಾಹರಣೆಗಳೂ ಇಲ್ಲ. ಆದರೆ ಖಮರುಲ್ ಅವರಿಗೆ ಕನ್ನಡ ಮಾತನಾಡಲು ಬರುವುದಿಲ್ಲ. ಕಲಿಯುವ ಪ್ರಯತ್ನವನ್ನೂ ಆ ವ್ಯಕ್ತಿ ಮಾಡಿದ ಹಾಗೆ ಕಾಣುವುದಿಲ್ಲ.
ಕನ್ನಡ ಕಲಿಯದೇ ಹೋದರೆ ಖಮರುಲ್ ಮುಂದೆ ಇನ್ನಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇತರರ ಕತೆ ಹಾಗಿರಲಿ ಕನ್ನಡ ಬಾರದ ಶಾಸಕ-ಮಂತ್ರಿ-ಜನಪ್ರತಿನಿಧಿಯನ್ನು ಮುಸ್ಲಿಮರೇ ಒಪ್ಪುವ ಸಾಧ್ಯತೆಗಳು ಕಡಿಮೆ.
ಸಲೀಂ ಅಹಮದ್ ಅವರಿಗೆ ಹಿಂಬಾಗಿಲ ರಾಜಕಾರಣ ಒಗ್ಗಿ ಹೋದಂತಿದೆ. ಹಿಂದೊಮ್ಮೆ ಸಲೀಂ ಬಿನ್ನಿಪೇಟೆಯಲ್ಲಿ ನಿಂತು ಸೋತಿದ್ದರು. ಆಮೇಲೆ ವಿಧಾನಪರಿಷತ್‌ಗೆ ಬಂದರು, ಮುಖ್ಯ ಸಚೇತಕರಾಗಿಯೂ ಇದ್ದವರು. ಆದರೆ ಸಲೀಂ ತಮ್ಮದೇ ಒಂದು ಕ್ಷೇತ್ರ ಗುರುತಿಸಿಕೊಳ್ಳದೇ ಹೋದರೆ ಮುಂದೆ ಅವರು ರಾಜಕೀಯ ಭೂಪಟದಲ್ಲಿ ಕಣ್ಮರೆಯಾಗುವ ಸಾಧ್ಯತೆಗಳೇ ಹೆಚ್ಚು.
***********
ಮುಮ್ತಾಜ್ ಅಲಿ ಖಾನ್ ಈಗ ಬಿಜೆಪಿ ಸರ್ಕಾರದಲ್ಲಿ ಮಂತ್ರಿ. ಭಾರತೀಯ ಜನತಾ ಪಕ್ಷದಲ್ಲಿ ಮಂತ್ರಿಯಾಗಲು ಸಾಧ್ಯವಿದ್ದ ಮುಸ್ಲಿಮರು ಇಬ್ಬರೇ. ಒಬ್ಬಾತ ಅಬ್ಬಾಸ್ ಅಲಿ ಬೋಹ್ರಾ. ಈತ ಮಂಡ್ಯದಲ್ಲಿ ಟಿಕೆಟ್ ಸಿಗಲಿಲ್ಲವೆಂಬ ಕಾರಣಕ್ಕೆ ಬಂಡಾಯವೆದ್ದು ಸ್ಪರ್ಧಿಸಿ ಸೋತವರು. ಹೀಗಾಗಿ ಉಳಿದುಕೊಂಡಿದ್ದು ಮುಮ್ತಾಜ್ ಅಲಿ ಖಾನ್ ಮಾತ್ರ.
ಮುಮ್ತಾಜ್ ಸಹೃದಯಿ, ಸರಳ, ಸಂಪನ್ನರು. ಅದರಲ್ಲಿ ಎರಡು ಮಾತಿಲ್ಲ. ಪಿಎಚ್‌ಡಿ ಮಾಡಿದ್ದಾರೆ, ಹಲವಾರು ಡಿಗ್ರಿಗಳನ್ನು ಪಡೆದಿದ್ದಾರೆ.
ಇದೆಲ್ಲಕ್ಕಿಂತ ಹೆಚ್ಚಾಗಿ ಮುಮ್ತಾಜ್ ಆರ್‌ಎಸ್‌ಎಸ್-ಬಿಜೆಪಿ ವಕ್ತಾರರ ಹಾಗೆ ಪದೇ ಪದೇ ಪತ್ರಿಕೆಗಳ ವಾಚಕರ ವಾಣಿಗಳಲ್ಲಿ ಬರೆದು ಸುದ್ದಿಯಾದವರು. ಅದೇ ಕಾರಣಕ್ಕೆ ಮುಸ್ಲಿಮರ ಕೋಪಕ್ಕೂ ಗುರಿಯಾದವರು. ತಾವೇ ಸಿಕ್ಕಿಬಿದ್ದಿರುವ ಆರ್‌ಎಸ್‌ಎಸ್ ಜಾಲದಿಂದ ಅವರು ಹೊರಬರಲಾರರು.
ಇನ್ನು ಅವರು ಮಂತ್ರಿಯಾಗಿರುವ ವಕ್ಫ್ ಖಾತೆಯ ನಿರ್ವಹಣೆಯಲ್ಲಿ ಅದ್ಭುತವಾದುದ್ದೇನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಪರಭಾರೆಯಾಗಿರುವ ವಕ್ಫ್ ಆಸ್ತಿ ಬಿಡಿಸಿಕೊಳ್ಳಲು ಹೋದರೆ ಮುಮ್ತಾಜ್ ಅವರಿಗೆ ಮುಂದಿನ ಐದು ವರ್ಷ ಅದೇ ಕೆಲಸ ಆಗಿಹೋಗುತ್ತದೆ. ಅಂಥ ಸಾಹಸವನ್ನು ಅವರಿಗೆ ಮಾಡಲು ಆ ಸಮುದಾಯದ ಪಟ್ಟಭದ್ರರು ಬಿಡುವುದೂ ಅಷ್ಟು ಸಾಧ್ಯವೇನಲ್ಲ.
********
ಜಗಳೂರು ಇಮಾಮ್ ಸಾಬ್ ಅವರ ಬಗ್ಗೆ ಹೊಸ ತಲೆಮಾರಿನ ಮುಸ್ಲಿಂ ಯುವಕರಿಗೆ ಗೊತ್ತಿಲ್ಲದೇ ಇರಬಹುದು. ಇಮಾಮ್ ಸಾಬರು ಚಿತ್ರದುರ್ಗದಿಂದ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿ ಹೋದವರು. ಯುವಮುಸ್ಲಿಂ ಮುಖಂಡರಿಗೆ ಇಮಾಮ್ ಸಾಬ್ ಅವರು ಆದರ್ಶ ಆಗಬಲ್ಲರು ಅನಿಸುತ್ತದೆ.
ಕೆಂಗಲ್ ಹನುಮಂತಯ್ಯನವರ ಸಂಪುಟದಲ್ಲಿ ಇಮಾಮ್ ಸಾಬ್ ಅವರು ಸಾರಿಗೆ ಸಚಿವರಾಗಿದ್ದರಂತೆ. ಆದರೆ ದುರಂತವೆಂದರೆ ಅವರು ತೀರಿಕೊಂಡಾಗ ಅಂತ್ಯಸಂಸ್ಕಾರ ಮಾಡಲೂ ಅವರ ಕುಟುಂಬದವರ ಬಳಿ ಹಣವಿರಲಿಲ್ಲ.
ಇಮಾಮ್ ಸಾಬ್ ಅವರಂಥ ಪ್ರಾಮಾಣಿಕರು ಮುಸ್ಲಿಂ ಸಮುದಾಯದಲ್ಲಿ ಮಾತ್ರವಲ್ಲ, ಎಲ್ಲ ಸಮುದಾಯಗಳಲ್ಲೂ ಅಪರೂಪ.
*******
ಅಜೀಜ್ ಸೇಟ್ ಅವರ ಬಗ್ಗೆ ಬರೆಯದೇ ಹೋದರೆ ಅಪಚಾರವಾದೀತು. ಅಜೀಜ್ ಸೇಟ್ ನಿಜವಾದ ಅರ್ಥದಲ್ಲಿ ಸಮಾಜವಾದಿ. ಅವರು ಜನಮುಖಿ ಆಗಿದ್ದರಿಂದಲೇ ಪ್ರಗತಿಯ ಕಡೆಗೆ ಮುಕ್ತ ಮನಸ್ಸು ಹೊಂದಿದ್ದರು. ಮುಸ್ಲಿಮರ ನಡುವೆ ಇಂಥ ಅಪ್ಪಟ ಸಮಾಜವಾದಿ ಹುಟ್ಟುಕೊಂಡರೆ ಹಿಂದೂ ಕಟ್ಟರ್‌ವಾದಿಗಳು ಸಹಿಸುವುದಿಲ್ಲ. ಈ ಕಾರಣದಿಂದಲೇ ಅವರನ್ನು ತುಳಿಯುವ ಎಲ್ಲ ಯತ್ನಗಳು ಪದೇ ಪದೇ ನಡೆದವು.
ಎಸ್.ಎಂ.ಕೃಷ್ಣ, ಶಾಂತವೇರಿ ಗೋಪಾಲಗೌಡರ ಹಾಗೆ ಸೋಷಿಯಲಿಸ್ಟ್ ಪಾರ್ಟಿಯಿಂದಲೇ ರಾಜಕಾರಣಕ್ಕೆ ಬಂದ ಅಜೀಜ್ ಸೇಟ್ ಕಡೆಯವರೆಗೂ ಸಮಾಜವಾದಿ ಮೌಲ್ಯಗಳನ್ನು ಬಿಟ್ಟುಕೊಟ್ಟವರಲ್ಲ. ಅಜೀಜ್ ಸೇಟ್ ಎಂಥ ಕನ್ನಡಪ್ರೇಮಿ ಎಂದರೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ರ್‍ಯಾಂಕ್ ಪಡೆದವರಿಗೆ ಸ್ವಂತ ಖರ್ಚಿನಲ್ಲಿ ಚಿನ್ನದ ಪದಕ ಕೊಡುತ್ತಿದ್ದರು. ಆದರೆ ಇದೇ ಸೇಟರನ್ನು ಕನ್ನಡವಿರೋಧಿ ಎಂದು ಹುಯಿಲೆಬ್ಬಿಸಿ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಯತ್ನ ನಡೆದಿತ್ತು.
ಅಜೀಜ್ ಸೇಟರ ಪುತ್ರ ತನ್ವೀರ್ ಸೇಟ್ ಅವರು ಈಗ ರಾಜಕಾರಣದಲ್ಲಿದ್ದಾರೆ. ಅವರಿಗೆ ತಂದೆಯ ಹಾಗೆ ಸಮಾಜವಾದಿ ಸಂಸ್ಕಾರವಿಲ್ಲ. ಹೀಗಿದ್ದರೂ ಸಮುದಾಯದ ಮುಖಂಡರಾಗಿ ಬೆಳೆಯಲು ಎಲ್ಲ ಅವಕಾಶಗಳೂ ಅವರಿಗಿವೆ.
*******
ಮುಸ್ಲಿಂ ರಾಜಕಾರಣದಲ್ಲಿ ಹೊಸ ಧ್ರುವತಾರೆಗಳಂತೆ ಉದ್ಭವಿಸಿದವರು ಅಬ್ದುಲ್ ಅಜೀಂ ಹಾಗು ಬಿ.ಜಡ್.ಜಮೀರ್ ಅಹಮದ್ ಖಾನ್. ಇವರಲ್ಲಿ ಅಜೀಂ ದೇವೇಗೌಡರ ನೆರಳಿನಂತೆ ಇದ್ದುಬಿಟ್ಟಿದ್ದಾರೆ. ಒಮ್ಮೆ ಬಿನ್ನಿಪೇಟೆಯಲ್ಲಿ ವಿಜಯನಗರದ ವೀರಪುತ್ರ ಸೋಮಣ್ಣನವರ ಎದುರಿನಲ್ಲಿ ಅಗ್ನಿಪರೀಕ್ಷೆಗೆ ಒಡ್ಡಿಕೊಂಡು ಸೋತವರು. ಸೋತರೆಂಬ ಅನುಕಂಪದಿಂದ ವಿಧಾನಪರಿಷತ್‌ಗೆ ನಾಮಕರಣವಾದವರು.
ಅಜೀಂ ನಾವೆಲ್ಲರೂ ಕಂಡಂತೆ ಉತ್ತಮ ಪೊಲೀಸ್ ಅಧಿಕಾರಿ. ರೌಡಿಗಳಿಗೆ ನಡುಕ ಹುಟ್ಟಿಸಿದವರು. ಆದರೆ ಒಳ್ಳೆಯ ರಾಜಕಾರಣಿಯಾಗುವುದು ಅಷ್ಟು ಸುಲಭವೇನಲ್ಲ. ಅಜೀಂ ಪೊಲೀಸ್ ಅಧಿಕಾರಿಯಾಗುವುದಕ್ಕೆ ಮುನ್ನವೇ ಶ್ರೀಮಂತರು. ರಾಜಕಾರಣದಲ್ಲಿ ಹಣ ಉಳ್ಳವರು ಹೇಗೆ ಹೇಗೋ ಬಳಕೆಯಾಗುತ್ತಾರೆ. ಅಜೀಂ ಹಾಗಾಗದಿರಲಿ.
ಇನ್ನು ಜಮೀರ್ ಅಹಮದ್ ಖಾನ್ ಆಗಾಗ ಕಾರ್ಟೂನ್ ಸಿನಿಮಾದ ಪಾತ್ರವೊಂದರ ಹಾಗೆ ಕಾಣುತ್ತಾರೆ. ದಿಢೀರನೆ ಯಶಸ್ಸು ಗಳಿಸಿದವರು ಜಮೀರ್. ಎಸ್.ಎಂ.ಕೃಷ್ಣ ರಾಜೀನಾಮೆ ನೀಡಿ ತೆರವಾದ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಆರ್.ವಿ.ದೇವರಾಜ್‌ಗೆ ನೀರಿಳಿಸಿದವರು. ಗೆದ್ದ ಕೆಲ ದಿನಗಳಲ್ಲೇ ಮಂತ್ರಿಯಾದವರು. ನಂತರ ಈಗ ಎರಡನೇ ಅವಧಿಗೆ ಮತ್ತೆ ಶಾಸಕರಾಗಿದ್ದಾರೆ.
ಜಮೀರ್ ಅವರಿಗೆ ಇನ್ನೂ ಹುಡುಗುಬುದ್ಧಿ ಎಂದು ಅವರನ್ನು ಗಮನಿಸಿದವರಿಗೇ ಗೊತ್ತಾಗುತ್ತದೆ. ಯಾವ ಕುಮಾರಣ್ಣನ ಹೆಸರಿನಲ್ಲಿ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರೋ, ಅದೇ ಕುಮಾರಣ್ಣನ ವಿರುದ್ಧ ಬಂಡೆದ್ದು ರಾಜೀನಾಮೆ ಬಿಸಾಕಿದವರು ಜಮೀರ್. ತದನಂತರ ಅದೇ ಕುಮಾರಣ್ಣನ ಜತೆ ಅಷ್ಟೇ ಬೇಗ ರಾಜಿಯಾದವರೂ ಅವರೇ.
ಅವರು ಪ್ರಬುದ್ಧರಾಗುವವರೆಗೆ ಕಾಯಬೇಕು, ಅಷ್ಟೆ.
*******
ಕನ್ನಡ ಚಳವಳಿಯ ಇತಿಹಾಸದಲ್ಲಿ ತಮ್ಮ ಹೆಸರನ್ನು ಉಳಿಸಿಹೋಗಿರುವ ರೆಹಮಾನ್ ಖಾನ್ ಅವರಿಗೆ ರಾಜಕೀಯ ಖಯಾಲಿಗಳಿರಲಿಲ್ಲ. ಬಯಸಿದ್ದರೆ ಅವರು ರಾಜಕಾರಣಕ್ಕೆ ಇಳಿಯಬಹುದಿತ್ತು. ಜೆ.ಎಚ್.ಪಟೇಲರೇ ಅವರಿಗೆ ರಾಜಕಾರಣ ಸೇರಲು ಆಹ್ವಾನ ನೀಡಿದ್ದರಂತೆ. ಆದರೆ ಆ ಜೀವ ಕಡೆಯವರೆಗೆ ಕನ್ನಡಕ್ಕೆ ಹೋರಾಡಿ, ತನ್ನ ಸಮುದಾಯದವರನ್ನು ಎದುರು ಹಾಕಿಕೊಂಡು ಬದುಕಿದರು. ಕನ್ನಡಕ್ಕಾಗಿಯೇ ಜೀವ ತೆತ್ತರು.
ರೆಹಮಾನ್ ಖಾನ್ ಅವರ ತಮ್ಮ ಸಮೀಯುಲ್ಲಾ ಖಾನ್ ಸಹ ಅಪರಿಮಿತ ಕನ್ನಡ ಪ್ರೇಮಿ. ಹಾಗೆಯೇ ಸಮುದಾಯದ ಒಳಗೂ ಈ ಕನ್ನಡಪ್ರೇಮವನ್ನು ಬೆಳೆಸುತ್ತ ಬಂದವರು. ಮದರಸಾಗಳಲ್ಲಿ ಕನ್ನಡ ಕಲಿಸಬೇಕು ಎಂದು ಹೋರಾಟ ನಡೆಸಿದವರು.
ಮೊನ್ನೆ ರಂಜಾನ್ ಸಂದರ್ಭದಲ್ಲಿ ಮತ್ತೀಕೆರೆಯಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆ ಸಂದರ್ಭದಲ್ಲಿ ಸುಮಾರು ಐದು ಸಾವಿರ ಮಂದಿ ಸೇರಿದ್ದರು. ಆ ಪ್ರಾರ್ಥನೆಗೆ ಅಲ್ಲಿನ ಸ್ಥಳೀಯ ಪೊಲೀಸ್ ಅಧಿಕಾರಿಯೇ ಅತಿಥಿ. ಸ್ವಾಗತ, ಭಾಷಣ ಎಲ್ಲವೂ ಕನ್ನಡದಲ್ಲೇ ನಡೆದಿದ್ದನ್ನು ನೋಡಿ ಆ ಅಧಿಕಾರಿ ಹೌಹಾರಿದರಂತೆ. ಸಮೀಯುಲ್ಲಾ ಅವರ ಕನ್ನಡಪ್ರೇಮದ ಪರಿಣಾಮವಿದು.
ಸಮೀಯುಲ್ಲಾ ಪ್ರತಿವರ್ಷ ಇಡೀ ರಾಜ್ಯದಲ್ಲಿ ಕನ್ನಡ ಭಾಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿ-ವಿದ್ಯಾರ್ಥಿಯರನ್ನೆಲ್ಲ ತಮ್ಮ ಸ್ವಂತ ಖರ್ಚಿನಲ್ಲಿ ಬೆಂಗಳೂರಿಗೆ ಕರೆಸಿಕೊಂಡು ಅವರಿಗೆ ಬಹುಮಾನ, ಪ್ರಶಸ್ತಿ ಪತ್ರ ಕೊಟ್ಟು ಕಳಿಸುತ್ತಾರೆ. ಮತ್ತೀಕೆರೆಯ ಮಸೀದಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲು ಕಾರಣವಾದವರೂ ಇವರೇ. ಮಸೀದಿಗಳಿಗೆ ಹಿಂದೂ ಧರ್ಮದ ಮಠಾಧೀಶರನ್ನು ಕರೆದುಕೊಂಡು ಹೋಗಿ ಭಾಷಣ ಮಾಡಿಸಿದವರೂ ಇವರೇ.
ಹೀಗೆಲ್ಲ ಇರುವ ಸಮೀಯುಲ್ಲಾ ಅವರಿಗೆ ರಾಜಕೀಯ ಸೇರಿಕೊಳ್ಳಿ ಎಂದು ಹೇಳುತ್ತಿರುತ್ತೇನೆ. ಆದರೆ ಸಮೀಯುಲ್ಲಾ ತಮ್ಮ ಅಣ್ಣನ ಹಾಗೆ ವಿನಯದಿಂದ ಅದೆಲ್ಲ ನಮಗೆ ಸರಿಹೋಗಲ್ಲ ಎನ್ನುತ್ತಾರೆ.
*******
ಇನ್ನೊಬ್ಬ ಗೆಳೆಯನಿದ್ದಾನೆ. ಸರಿಸುಮಾರು ಹತ್ತು ವರ್ಷಗಳ ಕಾಲ ಸಕಲೇಶಪುರ ತಾಲ್ಲೂಕು ಬಹುಜನ ಸಮಾಜ ಪಕ್ಷದ ಅಧ್ಯಕ್ಷನಾಗಿದ್ದವನು. ಹೆಸರು ಮೆಹಬೂಬ್. ಅಲ್ಲಯ್ಯಾ, ಈ ಪಕ್ಷದಲ್ಲಿ ಎಷ್ಟು ವರ್ಷ ಇನ್ನೂ ಮಣ್ಣು ಹೊರುತ್ತೀಯಾ? ಬೇರೆ ಪಕ್ಷ ಸೇರಿ ಭವಿಷ್ಯ ರೂಪಿಸಿಕೊಳ್ಳಬಹುದಲ್ಲ? ಎಂದು ಆಗಾಗ ನಾನು ಕಾಲೆಳೆಯುತ್ತೇನೆ. ಆತ ಅಷ್ಟೇ ತಮಾಶೆಯಾಗಿ ಹೇಳುತ್ತಾನೆ: ಮಾಯಾವತಿ ನಮ್ಮ ಅಕ್ಕ, ಅವರನ್ನು ಬಿಟ್ಟು ಬೇರೆ ಪಕ್ಷಕ್ಕೆ ಹೋಗೋದಿಲ್ಲ. ಭವಿಷ್ಯ ಹಾಳಾದರೂ ಚಿಂತೆಯಿಲ್ಲ, ಸಿದ್ಧಾಂತ ಬಿಡೋದಿಲ್ಲ....
******
ಕೆ.ಎಫ್.ಡಿ ಹಾಗು ಪಿಎಫ್‌ಐ ಈ ಎರಡು ಸಂಘಟನೆಗಳು ಈಗ ಕರ್ನಾಟಕದ ಮುಸ್ಲಿಂ ಜಗತ್ತಿನಲ್ಲಿ ಸಾಕಷ್ಟು ಕ್ರಿಯಾಶೀಲವಾಗಿವೆ. ಈ ಸಂಘಟನೆಗಳು ಕೇರಳ ಮೂಲದಿಂದ ಬಂದವುಗಳು ಎನ್ನುತ್ತಾರೆ. ನನ್ನ ಮುಸ್ಲಿಂ ಗೆಳೆಯರೇ ಹೇಳುವಂತೆ ಈ ಸಂಘಟನೆಗಳು ಆರ್‌ಎಸ್‌ಎಸ್‌ನ ಇನ್ನೊಂದು ರೂಪ. ಆ ಅನುಮಾನ ನನಗೂ ಇದೆ.
ಕೆ.ಎಫ್.ಡಿ, ಪಿಎಫ್‌ಐಗಳಲ್ಲಿ ಹೊಸ ಮುಖಂಡರು ಹುಟ್ಟಬಹುದೆ? ಧರ್ಮದ ಆಮಲು ತುಂಬಿಕೊಂಡ ನಾಯಕರು ಜನನಾಯಕರಾಗಲು ಸಾಧ್ಯವೆ? ನಾಯಕರಾದರೂ ಮುಸ್ಲಿಮೇತರರಿಗೂ ನಾಯಕತ್ವ ನೀಡುವ ಹಂತಕ್ಕೆ ಬೆಳೆಯಬಲ್ಲರೆ? ಒಂದು ವೇಳೆ ಈ ಸಂಘಟನೆಗಳಿಂದ ರಾಜಕೀಯ ಶಕ್ತಿಯೊಂದು ಹುಟ್ಟಿದರೂ ಅದು ಬಿಜೆಪಿಗಿಂತ ಭಿನ್ನವಾಗಿರಲು ಸಾಧ್ಯವೆ? ಈ ಪ್ರಶ್ನೆಗಳನ್ನು ಕೆಎಫ್‌ಡಿ ಮುಖಂಡರೇ ಕೇಳಿಕೊಳ್ಳಬೇಕಾಗಿದೆ.
ಕೆಎಫ್‌ಡಿ ತತ್ವ-ಸಿದ್ಧಾಂತಗಳ ಬಗ್ಗೆ ನನಗಿನ್ನೂ ಅಷ್ಟಾಗಿ ತಿಳಿದಿಲ್ಲ. ಆದರೆ ಆ ಸಂಘಟನೆಗಳ ಹುಡುಗರ ಅಗ್ರೆಷನ್ ಗಮನಿಸಿದ್ದೇನೆ. ಈ ಅಗ್ರೆಷನ್ ಒಳ್ಳೆಯ ಕೆಲಸಕ್ಕೆ ಬರುವಂತಾಗಬೇಕು. ಸದ್ಯಕ್ಕೆ ಇಷ್ಟನ್ನು ಮಾತ್ರ ಹೇಳಬಲ್ಲೆ.
******
ಇನ್ನಷ್ಟು ಬರೆಯುತ್ತಾ ಹೋಗಬಹುದು. ಇನ್ನಷ್ಟು ಜನರ ಹೆಸರು ಗೊತ್ತಿದ್ದರೂ ಬಿಟ್ಟಿದ್ದೇನೆ. ಇಲ್ಲಿ ಬರೆದಿದ್ದನ್ನು ಬೇರೆಯವರು ಬೇರೆ ಅರ್ಥದಲ್ಲಿ ಗ್ರಹಿಸುವ ಅಪಾಯವೂ ಇದೆ.
ಇಡೀ ಕರ್ನಾಟಕಕ್ಕೆ ನಾಯಕತ್ವ ನೀಡುವ ಮುಸ್ಲಿಂ ಮುಖಂಡರ ತಲಾಷ್ ನನ್ನದು ಅಷ್ಟೆ, ಕಡೇ ಪಕ್ಷ ಇನ್ನು ಹತ್ತು ವರ್ಷದೊಳಗಾದರೂ ಅಂಥ ನಾಯಕತ್ವ ನೀಡುವಾತ ಎದ್ದು ನಿಲ್ಲಲಿ ಎಂಬುದು ದೂರದ ಆಶೆ.
ರಾಜ್ಯದ ಎಲ್ಲರ ನಾಯಕನಾಗಬಲ್ಲ ಒಬ್ಬ ಮುಸ್ಲಿಂ ಮುಖ್ಯಮಂತ್ರಿ ಸ್ಥಾನ ಏರುವಂತಾದರೆ ಅದೊಂದು ಪವಾಡವಾದೀತು. ಅಂಥದ್ದೊಂದು ಸಾಧ್ಯತೆಯನ್ನು ನಮ್ಮ ಯುವ ಮುಸ್ಲಿಂ ಮನಸ್ಸುಗಳು ನಿಜ ಮಾಡಲಿ ಎಂಬುದು ನನ್ನ ಆಸೆ.
ಮುಸ್ಲಿಮರು ಹೆಚ್ಚು ಹೆಚ್ಚು ರಾಜಕೀಯವಾಗಿ ಬೆಳೆದರೆ ಸಹಜವಾಗಿಯೇ ಆ ಸಮುದಾಯ ಮೌಲ್ವಿಗಳ ಹಿಡಿತದಿಂದ ಬಿಡಿಸಿಕೊಳ್ಳುತ್ತದೆ. ಪರಿಣಾಮವಾಗಿ ಆ ಧರ್ಮದ ಒಳಗಿನ ಮತಾಂಧರ ಸಂಖ್ಯೆ ಕಡಿಮೆಯಾಗುತ್ತದೆ. ಮುಸ್ಲಿಮರು ರಾಜಕೀಯವಾಗಿ ಬೆಳೆದಂತೆ ಸಾಮಾಜಿಕವಾಗಿಯೂ, ಆರ್ಥಿಕವಾಗಿಯೂ ಬೆಳವಣಿಗೆ ಸಾಧಿಸಲು ಅನುಕೂಲವಾಗುತ್ತದೆ. ಈ ಕಾರಣಕ್ಕಾಗಿಯಾದರೂ ಒಬ್ಬ ಮುಸ್ಲಿಂ ಮುಖಂಡ ಪ್ರಜ್ವಲಿಸಬೇಕಾಗಿದೆ.
Thursday, October 16, 2008
ಒಬ್ಬ ಜರ್ನಲಿಸ್ಟ್ ಆಕ್ಟಿವಿಸ್ಟ್ ಆಗಿರಬಾರದೆ?
ಗೆಳೆಯರು, ವಿಶೇಷವಾಗಿ ಪತ್ರಕರ್ತ ಮಿತ್ರರು ಕಳೆದ ಮೂರು ದಿನಗಳಿಂದ ಅಭಿನಂದಿಸುತ್ತಿದ್ದಾರೆ. ನಿಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ, ಮುಂದೇನು ಮಾಡ್ತೀರಿ ಎಂದು ಪ್ರಶ್ನಿಸುತ್ತಿದ್ದಾರೆ. ರಾಜ್ಯದ ೬ಕೋಟಿಗೂ ಹೆಚ್ಚು ಜನರ ಸಂಪೂರ್ಣ ಸಾಮಾಜಿಕ, ಆರ್ಥಿಕ ಮಾಹಿತಿಗಳನ್ನು ಸಂಗ್ರಹಿಸುವ ಜಾತಿವಾರು ಸಮೀಕ್ಷೆಯನ್ನು ಖಾಸಗಿ ಸಂಸ್ಥೆಗಳಿಗೆ ಒಪ್ಪಿಸದಿರಲು ರಾಜ್ಯ ಸರ್ಕಾರ ತೀರ್ಮಾನಿಸುವುದರೊಂದಿಗೆ ಒಂದು ಹೋರಾಟ ಯಶಸ್ವಿಯಾದಂತಾಗಿದೆ. ಒಂದು ಚಳವಳಿ ಯಶಸ್ವಿಯಾಗುವುದು ಇವತ್ತಿನ ಸಂದರ್ಭದಲ್ಲಿ ಅಪರೂಪ. ನಮ್ಮ ಚಳವಳಿ ಗೆದ್ದಿದೆ. ಸಂಭ್ರಮ ಪಡುವುದಕ್ಕೆ ಒಂದು ಕಾರಣ ಸಿಕ್ಕಿದೆ.
*****
ಇದೆಲ್ಲ ಶುರುವಾಗಿದ್ದು ಇಂಗ್ಲಿಷ್ ನಿಯತಕಾಲಿಕೆಗಳ ಪೈಕಿ ನಾವು ಹೆಚ್ಚು ನಂಬಲು ಸಾಧ್ಯವಿರುವ ಔಟ್‌ಲುಕ್‌ನಲ್ಲಿ ಕಾಣಿಸಿಕೊಂಡ ಒಂದು ಲೇಖನದ ಮೂಲಕ. ದೇಶದ ಸಾಮಾಜಿಕ ಸ್ಥಿತಿಗತಿಯ ಬಗ್ಗೆ ಒಳನೋಟ ಹೊಂದಿರುವ ಪತ್ರಕರ್ತ ಸುಗತ ಶ್ರೀನಿವಾಸರಾಜು ಔಟ್‌ಲುಕ್‌ನಲ್ಲಿ ಜಾತಿವಾರು ಸಮೀಕ್ಷೆಗೆ ಎದ್ದಿರುವ ವಿರೋಧಗಳ ಬಗ್ಗೆ ತಲಸ್ಪರ್ಶಿಯಾಗಿ ಬರೆದಿದ್ದರು. ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ ಆರಂಭಿಸಿರುವ ಜಾತಿವಾರು ಸಮೀಕ್ಷೆಗೆ ಎದ್ದಿರುವ ವಿರೋಧಗಳ ಬಗ್ಗೆ, ಅದರಲ್ಲೂ ವಿಶೇಷವಾಗಿ ಕಾರ್ಪರೇಟ್ ಸಂಸ್ಥೆಗಳು ಆಯೋಗಕ್ಕೆ ಮಾಹಿತಿ ನೀಡಲು ಹಿಂಜರಿಯುತ್ತಿರುವುದನ್ನು ಗುರುತಿಸಿ ಅವರು ಬರೆದಿದ್ದರು. ಇದೇ ಲೇಖನವನ್ನು ಆಧಾರವಾಗಿಟ್ಟುಕೊಂಡು ನಾನು ‘ಜಾತಿವಾರು ಸಮೀಕ್ಷೆಗೆ ಯಥಾಸ್ಥಿತಿವಾದಿಗಳ ಅಡ್ಡಿ ಎಂಬ ವರದಿ ಬರೆದಿದ್ದೆ. ಈ ಬ್ಲಾಗ್ ಮಾತ್ರವಲ್ಲದೆ ಇಂದು ಸಂಜೆ ದೈನಿಕ ಹಾಗು ಅಭಿಮನ್ಯು ಪಾಕ್ಷಿಕ ಪತ್ರಿಕೆಗಳಲ್ಲಿ ಇದೇ ವರದಿಯನ್ನು ವಿಸ್ತರಿಸಿ ಬರೆದಿದ್ದೆ.
ಸುಗತ ತಮ್ಮ ಲೇಖನದಲ್ಲಿ ಸಮೀಕ್ಷೆಯನ್ನು ಖಾಸಗಿ ಸಂಸ್ಥೆಗೆ ಒಪ್ಪಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಸೂಚ್ಯವಾಗಿ ಬರೆದಿದ್ದರು. ಕೆಲದಿನಗಳಲ್ಲಿ ಸುಗತ ಬರೆದಿದ್ದು ನಿಜವಾಗಿತ್ತು. ಪ್ರಜಾವಾಣಿಯಲ್ಲಿ ಈ ಕುರಿತಾದ ಟೆಂಡರ್ ಪ್ರಕಟಣೆಯೂ ಕಾಣಿಸಿಕೊಂಡಿತು.
ತಕ್ಷಣ ಕಾರ್ಯೋನ್ಮುಖರಾದವರು ಯುವಜನ ಜಾಗೃತಿ ವೇದಿಕೆಯ ಅಧ್ಯಕ್ಷರೂ, ಅಭಿಮನ್ಯು ಪಾಕ್ಷಿಕ ಪತ್ರಿಕೆಯ ಸಂಪಾದಕರೂ ಆದ ಬಿ.ಎನ್.ರಮೇಶ್ ಅವರು. ಹಲವು ಯಶಸ್ವಿ ಚಳವಳಿಗಳನ್ನು ಮುನ್ನಡೆಸಿದ ಹಿನ್ನೆಲೆ ಅವರದು. ಸದಾ ಜನಪರವಾಗಿ ಯೋಚಿಸುವ ರಮೇಶ್ ಅವರು ಆ ಜಾಹೀರಾತು ಪ್ರಕಟವಾದ ಕೂಡಲೇ ಮಾಡಿದ ಕೆಲಸವೇನೆಂದರೆ ಸಮೀಕ್ಷೆ ಖಾಸಗೀಕರಣ ಬೇಡ ಎಂಬ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು.
ಆನಂತರ ಜಾತಿವಾರು ಸಮೀಕ್ಷೆ ಖಾಸಗೀಕರಣದಿಂದ ಆಗುವ ಅಪಾಯಗಳ ಕುರಿತು ಎಲ್ಲ ಪಕ್ಷಗಳ ಪ್ರಮುಖ ರಾಜಕೀಯ ಮುಖಂಡರಿಗೆ ಮನವರಿಕೆ ಮಾಡಿಕೊಡಲು ಯತ್ನಿಸಿದೆವು. ಹಲವು ರಾಜಕಾರಣಿಗಳನ್ನು ಹುಡುಕಿಕೊಂಡು ಹೋಗಿ ಈ ಸಂಬಂಧ ಮಾತನಾಡಿಸಿದೆವು. ಎಲ್ಲರಿಂದಲೂ ಪೂರಕವಾದ ಪ್ರತಿಕ್ರಿಯೆ ಲಭ್ಯವಾಯಿತು.
ನಮ್ಮೆಲ್ಲರ ಹಿರಿಯಣ್ಣನ ಹಾಗೆ ಇರುವ ಸಮತಾ ಸೈನಿಕ ದಳದ ಎಂ.ವೆಂಕಟಸ್ವಾಮಿ ಅಖಾಡಕ್ಕೆ ಇಳಿದರು. ಹಿಂದುಳಿದ ಜಾತಿಗಳ ಸಂಘಟನೆಗಳು ಮೀನಮೇಷ ಎಣಿಸುತ್ತಿದ್ದಾಗ ವೆಂಕಟಸ್ವಾಮಿಯವರು ನಮ್ಮ ಬೆಂಬಲಕ್ಕೆ ನಿಂತರು. ಒಂದೆರಡು ಸಭೆಗಳೂ ನಡೆದವು. ನಂತರ ಯುವಜನ ಜಾಗೃತಿ ವೇದಿಕೆಯ ಅಡಿಯಲ್ಲಿ ಮಹಾತ್ಮಗಾಂಧಿ ಪ್ರತಿಮೆ ಮುಂಭಾಗ ಒಂದು ಧರಣಿಯನ್ನೂ ನಡೆಸಿದೆವು. ವಿಧಾನಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಜೆ.ಶ್ರೀನಿವಾಸನ್, ಅಹಿಂದ ಅಧ್ಯಕ್ಷ ಮುಕುಡಪ್ಪ, ಸವಿತಾ ಸಮಾಜದ ಮುಖಂಡ ಪ್ರೊ.ಎನ್.ವಿ.ನರಸಿಂಹಯ್ಯ, ಬಲಿಜ ಸಂಘದ ಮುಖಂಡ ಡಾ.ಜಗನ್ನಾಥ್, ಗಾಣಿಗರ ಸಂಘದ ಮುಖಂಡ ಅಮರನಾಥ್, ದಸಂಸ ಸಂಚಾಲಕ ಮಾವಳ್ಳಿ ಶಂಕರ್, ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಜೆ.ಎಂ.ವೀರಸಂಗಯ್ಯ ಹೀಗೆ ವಿವಿಧ ಸಂಘಟನೆಗಳ ಪ್ರಮುಖರು ಧರಣಿಯಲ್ಲಿ ಪಾಲ್ಗೊಂಡಿದ್ದರು.
ನಂತರ ಚಳವಳಿ ನಿಧಾನವಾಗಿ ಎಲ್ಲ ಜಿಲ್ಲೆಗಳಿಗೂ ವ್ಯಾಪಿಸತೊಡಗಿದವು. ಕೋಲಾರದಲ್ಲಿ ವೆಂಕಟಸ್ವಾಮಿಯವರ ಸಮತಾ ಸೈನಿಕ ದಳ ಹಾಗು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಸಂಘಟನೆಗಳ ಆಶ್ರಯದಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಎದುರು ಧರಣಿ ನಡೆಯಿತು. ಶಿವಮೊಗ್ಗದಲ್ಲಿ ಹಿಂದುಳಿದ ಜಾತಿಗಳ ಸಂಘಟನೆಗಳ ಪ್ರಮುಖರು ಧರಣಿ ನಡೆಸಿದರು. ಮೈಸೂರು, ಮಂಡ್ಯ, ಹಾಸನ, ತುಮಕೂರು, ಚಿತ್ರದುರ್ಗಗಳಲ್ಲೂ ಪ್ರತಿಭಟನೆಗಳಿಗೆ ದಿನಾಂಕ ನಿಗದಿಯಾಗಿತ್ತು. ಕೋಲಾರ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲೂ ಚಳವಳಿ ನಡೆಸಲು ವೆಂಕಟಸ್ವಾಮಿಯವರು ತಯಾರಿ ನಡೆಸಿದ್ದರು.
ಅಷ್ಟರೊಳಗೆ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಿತು. ಆಯೋಗದಿಂದಲೇ ಸಮೀಕ್ಷೆ ನಡೆಸುವುದಾಗಿ ಸರ್ಕಾರದ ಅಧಿಕೃತ ಪ್ರಕಟಣೆ ಹೊರಗೆ ಬರುವುದರೊಂದಿಗೆ ಒಂದು ಅಸಂಬದ್ಧ, ಅನ್ಯಾಯದ, ಅಧಿಕಪ್ರಸಂಗದ ನಿರ್ಧಾರವೊಂದಕ್ಕೆ ತಡೆ ಒಡ್ಡಿದಂತಾಯಿತು.
*****
ಸರ್ಕಾರ ಈ ನಿರ್ಧಾರ ಪ್ರಕಟಿಸುತ್ತಿದ್ದಂತೆ ಎಲ್ಲ ಮಾಧ್ಯಮಗಳಲ್ಲೂ ಈ ವಿಷಯ ವರದಿಯಾಯಿತು. ಟಿವಿ೯ ಮಧ್ಯಾಹ್ನದ ಸುದ್ದಿಯಲ್ಲಿ ಸರ್ಕಾರದ ನಿರ್ಧಾರವನ್ನು ಬಿತ್ತರಿಸಿದಾಗ ನನ್ನನ್ನು ಫೋನ್ ಮೂಲಕ ಮಾತನಾಡಿಸಿದರು. (ಎಲೆಕ್ಟ್ರಾನಿಕ್ ಮಾಧ್ಯಮಗಳ ಭಾಷೆಯಲ್ಲಿ ಇದನ್ನು ‘ಫೋನೋ ಎನ್ನುತ್ತಾರೆ.) ಆಗ ಸುದ್ದಿವಾಚಕ ರೆಹಮಾನ್ ಹಾಸನ್ ನನ್ನನ್ನು ಕೇಳಿದರು: ಖಾಸಗಿಯವರು ಸಮೀಕ್ಷೆ ಮಾಡಿದರೆ ಅದು ಪಾರದರ್ಶಕವಾಗಿ, ಪರಿಪೂರ್ಣವಾಗಿ, ವೈಜ್ಞಾನಿಕವಾಗಿ ಹೊರಬರುವುದಿಲ್ಲ ಎನ್ನುತ್ತೀರಿ. ಹಾಗಿದ್ದರೆ ಸರ್ಕಾರ ಪಾರದರ್ಶಕವಾಗಿ ಸಮೀಕ್ಷೆ ಮಾಡುತ್ತದೆ ಎಂದು ಹೇಗೆ ಹೇಳುತ್ತೀರಿ?
ನಾನು ಉತ್ತರಿಸಿದೆ: ಸರ್ಕಾರ ಸಮೀಕ್ಷೆ ಮಾಡಿದಾಗಲೂ ಲೋಪದೋಷ ಆಗುವುದಿಲ್ಲ ಎಂದೇನಲ್ಲ. ಆದರೂ ಅದು ತೀರಾ ಕಡಿಮೆ. ಎಲ್ಲೋ ಒಂದು ಪರ್ಸೆಂಟ್, ಎರಡು ಪರ್ಸೆಂಟ್ ದೋಷಗಳಾಗಬಹುದು. ಆದರೆ ಸರ್ಕಾರ ಯಾವತ್ತಿದ್ದರೂ ನಮ್ಮ ಸರ್ಕಾರ. ಅದು ಪ್ರಜೆಗಳಿಗೆ ಯಾವತ್ತಿಗೂ ಉತ್ತರದಾಯಿಯಾಗಿರುತ್ತದೆ. ತಪ್ಪಾದರೆ ನಾವು ನಿಲ್ಲಿಸಿ ಕೇಳಬಹುದು. ಅಲ್ಲದೆ ಪ್ರತಿ ಹತ್ತು ವರ್ಷಕ್ಕೊಮ್ಮೆ ನಡೆಯುವ ಸಾಮಾನ್ಯ ಜನಗಣತಿಯನ್ನು ನಿರ್ವಹಿಸುವುದೂ ನಮ್ಮ ಸರ್ಕಾರವೇ. ಇಂಥ ಗಣತಿಯನ್ನು ಮಾಡಿದ ಅನುಭವ ಇರುವ ಶಾಲಾಶಿಕ್ಷಕರು, ವಿವಿಧ ಸ್ವಯಂಸೇವಾ ಸಂಘಟನೆಗಳು, ಸರ್ವಶಿಕ್ಷ ಅಭಿಯಾನ, ಎನ್‌ಎಸ್‌ಎಸ್ ಕಾರ್ಯಕರ್ತರು, ಗ್ರಾಮಪಂಚಾಯ್ತಿ ಕಾರ್ಯದರ್ಶಿಗಳು, ಕಂದಾಯ ಇಲಾಖೆಯ ನೌಕರರು... ಹೀಗೆ ಸರ್ಕಾರದ ಬಳಿ ಸಾಕಷ್ಟು ಮಾನವ ಸಂಪನ್ಮೂಲವಿದೆ. ಆದ್ದರಿಂದ ಸಮೀಕ್ಷೆಯನ್ನು ಆಯೋಗವೇ ಸರ್ಕಾರದ ಸಹಕಾರದೊಂದಿಗೆ ನಡೆಸಬೇಕು.
******
ಇದಾದ ನಂತರ ಒಂದೆಡೆ ಸಮೀಕ್ಷೆಯ ಖಾಸಗೀಕರಣ ನಿಲ್ಲಿಸುತ್ತಲೇ ಮತ್ತೊಂದೆಡೆ ಆಯೋಗದ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕಾನಾಥ್ ಅವರನ್ನು ಬದಲಿಸುವ ಕೆಲಸ ನಡೆಯುತ್ತಿದೆ ಎಂಬ ಗುಮಾನಿಗಳು ಹುಟ್ಟಿಕೊಂಡವು. ಈ ಕುರಿತು ಟಿವಿ೯ ವಾಹಿನಿಯಲ್ಲಿ ಒಂದು ಸುದ್ದಿಯೂ ಪ್ರಸಾರವಾಯಿತು. ಟಿವಿ೯ನ ಜನಪರ ಪತ್ರಕರ್ತ ಲಕ್ಷ್ಮಣ್ ಹೂಗಾರ್ ಈ ಸಂಬಂಧ ನನ್ನ ಬೈಟ್ ಪಡೆದರು. ಆಗ ನಾನು ಹೇಳಿದೆ: ಒಂದು ವೇಳೆ ದ್ವಾರಕಾನಾಥ್ ಅವರನ್ನು ಬದಲಿಸಲು ಸರ್ಕಾರ ಹೊರಟರೆ ಜೇನುಗೂಡಿಗೆ ಕಲ್ಲು ಹೊಡೆದಂತೆ ಆಗುತ್ತದೆ. ಸರ್ಕಾರ ಈಗಾಗಲೇ ಅಲ್ಪಸಂಖ್ಯಾತರ ವಿರೋಧಿ ಎಂಬ ಹಣೆಪಟ್ಟಿ ಹೊತ್ತುಕೊಂಡಿದೆ. ಇಂಥ ದುಸ್ಸಾಹಸಕ್ಕೆ ಕೈ ಹಾಕಿದರೆ ಹಿಂದುಳಿದ ಜಾತಿಗಳ ವಿರೋಧಿ ಎಂದು ಬ್ರಾಂಡ್ ಆಗಬೇಕಾಗುತ್ತದೆ. ಸರ್ಕಾರ ಹಾಗೆ ಮಾಡದಿರಲಿ. ದ್ವಾರಕಾನಾಥ್ ಒಂದು ವರ್ಷದಿಂದ ಸಮೀಕ್ಷೆಯ ತಯಾರಿ ನಡೆಸಿದ್ದಾರೆ. ಸಮೀಕ್ಷೆ ಮುಗಿಯುವವರೆಗೆ ಸರ್ಕಾರ ಎಚ್ಚರಿಕೆಯಿಂದಿರಲಿ.
ಹಿಂದುಳಿದ ವರ್ಗಗಳ ಸಮೀಕ್ಷೆ ಖಾಸಗಿ ಸಂಸ್ಥೆಗೆ ಕೊಡುವ ವಿಷಯವನ್ನು ಕಟುವಾಗಿ ಟೀಕಿಸಿ ಕಸ್ತೂರಿ ವಾಹಿನಿ ಅಗ್ರ ಸುದ್ದಿ ಪ್ರಕಟಿಸಿತ್ತು. ಖಾಸಗೀಕರಣ ರದ್ದಾದ ಮೇಲೆ ಆ ಚಾನೆಲ್‌ನವರು ಬೈಟ್ ಪಡೆದಾಗ ನಾನು ಹೇಳಿದ್ದಿಷ್ಟು: ಸರ್ಕಾರ ಒಳ್ಳೆ ನಿರ್ಧಾರ ಕೈಗೊಂಡಿದೆ. ಅದು ಅನಿವಾರ್ಯವೂ ಆಗಿತ್ತು. ಇಡೀ ರಾಷ್ಟ್ರದಲ್ಲಿ ಸ್ವಾತ್ರಂತ್ರ್ಯ ಪಡೆದ ನಂತರ ಎಲ್ಲೂ ನಡೆಯದ ಸರ್ವೆ ಕರ್ನಾಟಕದಲ್ಲಿ ನಡೆಯುತ್ತಿದೆ. ಆದಷ್ಟು ಶೀಘ್ರ ಈ ಸಮೀಕ್ಷೆಯನ್ನು ಸರ್ಕಾರ ಮಾಡಿ ಮುಗಿಸಿದರೆ ಬಿಜೆಪಿಗೇ ಒಳ್ಳೇ ಹೆಸರು. ಕಾಲಮಿತಿ ನಿಗದಿ ಮಾಡಿಕೊಂಡು ಬೇಗನೇ ಸಮೀಕ್ಷೆ ನಡೆಸಲಿ. ಇಲ್ಲದಿದ್ದಲ್ಲಿ ಹಿಂದುಳಿದ ವರ್ಗದ ಜನರು ಬಹಳ ಸುಲಭವಾಗಿ ಈ ಸರ್ಕಾರವನ್ನು ತಮ್ಮ ವಿರೋಧಿ ಎಂದು ಭಾವಿಸಲು ಅವಕಾಶ ನೀಡಿದಂತಾಗುತ್ತದೆ.
******
ಈ ಬ್ಲಾಗ್ ಆರಂಭಿಸಬೇಕು ಎಂದುಕೊಂಡು ವರ್ಷದ ಹಿಂದೆಯೇ ಯೋಚಿಸಿದ್ದೆ, ಆದರೆ ಸಾಧ್ಯವಾಗಿರಲಿಲ್ಲ. ಸದಾ ಕನ್ನಡವನ್ನೇ ಉಸಿರಾಡುವ ಬನವಾಸಿ ಬಳಗದ ಗೆಳೆಯರೊಂದಿಗೆ ಹಲವು ಬಾರಿ ಈ ಕುರಿತು ಮಾತನಾಡಿದ್ದೆ. ಬನವಾಸಿ ಬಳಗದವರ ಒಪ್ಪಿಗೆ ಪಡೆದು ಅವರು ದಿನವೂ ಬರೆಯುವ ಏನ್‌ಗುರು ಬ್ಲಾಗಿನ ಲೇಖನಗಳನ್ನು ‘ಇಂದು ಸಂಜೆಯಲ್ಲಿ ನಿಯಮಿತವಾಗಿ ಪ್ರಕಟಿಸಲು ಆರಂಭಿಸಿದ್ದೆ. ಅಲ್ಲಿಯವರೆಗೆ ನಾನು ಗಮನಿಸಿದ್ದು, ಓದುತ್ತಿದ್ದುದ್ದು ಬನವಾಸಿ ಬಳಗದ ಬ್ಲಾಗ್ ಹಾಗು ಚುರುಮುರಿಯನ್ನು ಮಾತ್ರ. ಜುಲೈ ತಿಂಗಳಲ್ಲಿ ನಾನು ಸಹ ಬ್ಲಾಗಿಗನಾಗಿ ಪ್ರವೇಶ ಪಡೆದ ನಂತರ ಕನ್ನಡ ಬ್ಲಾಗುಗಳ ಮಹಾಲೋಕವೇ ಪರಿಚಯವಾಯಿತು.
ನಾನು ದೇಸೀಮಾತು ಆರಂಭಿಸುವಾಗ ನನ್ನ ಬರೆಹವನ್ನು ನಾನೇ ಓದಿಕೊಳ್ಳಬೇಕು ಎಂದು ಭಾವಿಸಿದ್ದೆ. ಆದರೆ ನನಗೆ ಅಪರಿಚಿತರಾದ ಹಲವಾರು ಮಂದಿ ಅದು ಹೇಗೋ ನನ್ನ ಬ್ಲಾಗಿಗೆ ಬಂದು ಪ್ರತಿಕ್ರಿಯೆ ನೀಡಲಾರಂಭಿಸಿದಾಗ ಖುಷಿಯಾಗತೊಡಗಿತು. ನಿಧಾನವಾಗಿ ಹೊಸಹೊಸ ಪರಿಚಯಗಳೂ ಆದವು. ನನ್ನ ಬ್ಲಾಗನ್ನು ತಮ್ಮ ಪಟ್ಟಿಯಲ್ಲಿ ಸೇರಿಸಿಕೊಂಡು ಹೊಸ ಓದುಗರನ್ನು ನೀಡಿದ್ದು ಬರಹ ಬಳಗದವರು. ಅವರಿಗೆ ನಾನು ಆಭಾರಿ.
ಇನ್ನಷ್ಟು ಆಪ್ತಬರೆಹಗಳ ಬ್ಲಾಗ್‌ಗಳಿವೆ. ಅವುಗಳ ಕುರಿತು ಮತ್ತೊಮ್ಮೆ ಬರೆಯುತ್ತೇನೆ.
******
ಕೆಲವು ಸಣ್ಣಪುಟ್ಟ ಖುಷಿಗಳನ್ನು ನಿಮ್ಮ ಮುಂದೆ ಹಂಚಿಕೊಳ್ಳಬೇಕು ಎನಿಸುತ್ತದೆ.
ಪ್ರಜಾವಾಣಿಯ ಒರಿಸ್ಸಾ ಪ್ರಯೋಗ ಲೇಖನ ಬರೆದಾಗ ತುಂಬ ಸಂಕಟವೆನಿಸಿತ್ತು. ಪ್ರಜಾವಾಣಿ ನಿನ್ನೆಗೂ ಇವತ್ತಿಗೂ ನಾಳೆಗೂ ನಮ್ಮ ಪತ್ರಿಕೆ. ಪ್ರಜಾವಾಣಿ ಕುರಿತು ವಿಶೇಷವಾದ ಆಕರ್ಷಣೆ ಇರುವುದರಿಂದಲೇ ಅದರಲ್ಲಿ ಏನೇನೂ ತಪ್ಪಾಗಬಾರದು ಎಂದು ಭಾವಿಸುತ್ತೇವೆ; ಅದು ಸಾಧ್ಯವಿಲ್ಲ ಎಂಬುದು ಗೊತ್ತಿದ್ದರೂ. ಪ್ರಜಾವಾಣಿಯೇ ಬಜರಂಗಿಗಳಿಗೆ ಕುಮ್ಮಕ್ಕು ನೀಡಿದರೆ ಅನಾಹುತಗಳೇ ನಡೆಯುತ್ತದೆ ಎಂದು ಊಹಿಸಲು ವಿಶೇಷ ಬುದ್ಧಿಯೇನು ಖರ್ಚು ಮಾಡಬೇಕಾಗಿಲ್ಲ.
ದುರಂತವೆಂದರೆ ಇದನ್ನು ಬರೆದ ಮುಂದಿನ ವಾರವೇ ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಚರ್ಚುಗಳ ಮೇಲೆ ದಾಳಿ ನಡೆದಿದ್ದು. ಅದು ಕಾಕತಾಳೀಯ ಅಷ್ಟೆ ಎಂದು ನಾವು ಸಮಾಧಾನಪಟ್ಟುಕೊಳ್ಳಬೇಕು. ಆದರೆ ಮತ್ತೆಂದೂ ಪ್ರಜಾವಾಣಿಯಲ್ಲಿ ಬಜರಂಗಿಗಳಿಗೆ ಕುಮ್ಮಕ್ಕು ಕೊಡುವ ಯಾವ ವರದಿಯೂ ಪ್ರಕಟಗೊಳ್ಳಲಿಲ್ಲ. ಪ್ರಜಾವಾಣಿಯಲ್ಲಿ ಜನಹಿತ ಬಯಸುವ ಪತ್ರಕರ್ತರು ಕ್ರಿಯಾಶೀಲರಾಗಿರುವುದಕ್ಕೆ ಇದು ಸಾಕ್ಷಿ.
******
ಮತ್ತೊಂದು ಸಂತಸದ ವಿಷಯ: ಕೆ.ಆರ್.ಪುರಂ.ನಲ್ಲಿರುವ ಹಿಂದುಳಿದ ವರ್ಗಗಳ ಹಾಸ್ಟೆಲ್ ಭೇಟಿ ಕುರಿತು ದೇಸೀಮಾತು ಹಾಗು ಇಂದುಸಂಜೆಯಲ್ಲಿ ಬರೆದಿದ್ದೆ. ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್, ದಿ ಹಿಂದೂ ಹಾಗು ಇನ್ನಿತರ ಪತ್ರಿಕೆಗಳಲ್ಲಿ, ಕಸ್ತೂರಿ ಟಿವಿಯಲ್ಲಿ ಈ ಕುರಿತು ವರದಿಗಳು ಪ್ರಕಟಗೊಂಡಿದ್ದವು. ಈಗ ಆ ಹಾಸ್ಟೆಲ್ ಬೇರೆ ಸುಸಜ್ಜಿತ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಮಕ್ಕಳಿಗೆ ಈಗ ಸರಿಯಾಗ ಊಟ-ತಿಂಡಿ ನೀಡಲಾಗುತ್ತಿದೆ. ಅಲ್ಲಿನ ಹುಡುಗಿಯರು ಖುಷಿಯಾಗಿದ್ದಾರೆ. ದ್ವಾರಕಾನಾಥ್ ಅವರೇ ಮತ್ತೊಮ್ಮೆ ಹಾಸ್ಟೆಲ್‌ಗೆ ಹೋಗಿ ಮಕ್ಕಳ ಜತೆ ಊಟ ಮಾಡಿ ಬಂದಿದ್ದಾರೆ.
ಹಾಸ್ಟೆಲ್ ಕಥೆಯನ್ನು ಬರೆದಾಗ ನಮ್ಮ ಪತ್ರಿಕೆಯ ಗೌರಿಬಿದನೂರು ವರದಿಗಾರ ಸಿದ್ಧಪ್ಪ ಕರೆ ಮಾಡಿದ್ದರು. ಅಲ್ಲಿ ನಮ್ಮ ಪತ್ರಿಕೆ ತಲುಪುತ್ತಿದ್ದಂತೆ ಓಬಿಸಿ ಹಾಸ್ಟೆಲ್‌ನಲ್ಲಿ ತರಾತುರಿಯಲ್ಲಿ ಹುಳುಕುಗಳನ್ನು ಮುಚ್ಚುವ ಕೆಲಸ ನಡೆಯಿತಂತೆ. ದ್ವಾರಕಾನಾಥ್ ಇಲ್ಲಿಗೂ ಬಂದರೆ ನಮ್ಮ ಕೆಲಸ ಹೋಗುತ್ತದೆ ಎಂದು ಹೆದರಿದ ಅಧಿಕಾರಿಗಳು ಹಾಸ್ಟೆಲ್‌ನಲ್ಲಿ ಮನುಷ್ಯರು ಬದುಕಲು ಸಾಧ್ಯವಿರುವ ವ್ಯವಸ್ಥೆಗಳನ್ನು ಮಾಡಿದರಂತೆ.
ಒಂದು ಕಡೆ ರಿಪೇರಿ ಮಾಡಿದರೆ ಬೇರೆ ಕಡೆ ತನ್ನಿಂತಾನೇ ರಿಪೇರಿ ಕೆಲಸಗಳು ನಡೆಯುತ್ತವೆ ಅಲ್ಲವೆ?
*****
ಮತಾಂತರ ತಪ್ಪು, ಅದರ ಹೆಸರಲ್ಲಿ ಚರ್ಚ್‌ಗಳ ಮೇಲೆ ದಾಳಿ ಮಾಡುವುದು ತಪ್ಪು ಎಂದು ಹಲವರು ಬ್ಯಾಲೆನ್ಸ್ ಮಾಡುತ್ತ ಇದ್ದಾಗ ಮತಾಂತರ ಸಹಜ ಕ್ರಿಯೆ, ಅದನ್ನು ತಡೆಯುವುದೇ ಮೂರ್ಖತನದ್ದು ಎಂದು ದೇಸೀಮಾತು ಬರೆಯುವುದರೊಂದಿಗೆ ಸಾಕಷ್ಟು ಜನರ ವಿರೋಧ ಕಟ್ಟಿಕೊಂಡಿತು.
ಆದರೆ ಈ ಬಾರಿ ಪೇಜಾವರ ನೇತೃತ್ವದಲ್ಲಿ ಸ್ವಾಮೀಜಿಗಳು ಅಸ್ಪೃಶ್ಯತೆ ಅಳಿಯಬೇಕು, ಈ ಕೆಲಸವನ್ನು ಧರ್ಮಗುರುಗಳೇ ಮಾಡಬೇಕು ಎಂದು ಫರ್ಮಾನು ಹೊರಡಿಸಿದರು. ಕನಿಷ್ಠ ಸೌಜನ್ಯಕ್ಕಾದರೂ ಅಸ್ಪೃಶ್ಯತೆ ಅಳಿಯಬೇಕು ಎಂದರಲ್ಲ ಎಂದು ನಾವು ಸಮಾಧಾನಪಟ್ಟುಕೊಳ್ಳಬೇಕು. ಹಿಂದೆ ಪೇಜಾವರರು ದಲಿತರ ಕೇರಿಯಲ್ಲಿ ಓಡಾಡಿ ತನ್ನನ್ನು ತಾನು ಪ್ರಗತಿಪರ ಎಂದು ಬಿಂಬಿಸಿಕೊಳ್ಳಲು ಯತ್ನಿಸಿದ್ದರು. ಇಂಥ ಹುಸಿನಾಟಕಗಳನ್ನು ಆಡುವ ಬದಲು ನಿಮ್ಮ ಮಠಕ್ಕೆ ದಲಿತ ಉತ್ತರಾಧಿಕಾರಿ ನೇಮಿಸಿ ಎಂದು ಕೇಳಿದರೆ ಅವರು ನಿಶ್ಯಬ್ದರಾಗುತ್ತಾರೆ. ಪಂಕ್ತಿಭೇದ ಕಿತ್ತುಹಾಕಿ ಎಂದರೆ ಒಪ್ಪುವುದಿಲ್ಲ.
ಪೇಜಾವರರು ದಲಿತರನ್ನು ತಮ್ಮ ಪೀಠಕ್ಕೆ ಉತ್ತರಾಧಿಕಾರಿ ಮಾಡುವುದು ಬೇಡ, ಎಂದೂ ಮಾಂಸಾಹಾರ ಸೇವಿಸದ, ಧರ್ಮಿಷ್ಠರಾದ ಒಬ್ಬ ಬ್ರಾಹ್ಮಣ ಮಹಿಳೆಯನ್ನು ಉತ್ತರಾಧಿಕಾರಿ ಮಾಡಲಿ ನೋಡೋಣ. ಇಂಥ ಸವಾಲುಗಳನ್ನು ಸ್ವೀಕರಿಸುವ ಎದೆಗಾರಿಕೆ ಅವರಿಗಿದೆಯೇ?
*****
ಹೋಗುವುದಿದ್ದರೆ ಮೊದಲು ತೊಲಗಿ ಪೀಡೆಗಳೆ ಎಂದು leavingbangalore.com ಕುರಿತು ಬರೆದಾಗ ನಾನು ನಿರೀಕ್ಷಿಸದಷ್ಟು ಪ್ರತಿಕ್ರಿಯೆಗಳು ಹರಿದು ಬಂದವು. ಈಗಲೂ ದಿನವೂ ಆ ಲೇಖನ ಹುಡುಕಿಕೊಂಡೇ ಸಾಕಷ್ಟು ಜನ ದೇಸೀಮಾತುಗೆ ಬರುತ್ತಿದ್ದಾರೆ.
leavingbangalore.com ಶುರುಮಾಡಿದ ಭೂಪರ ಕುರಿತು ಹಲವರು ಮಾಹಿತಿ ನೀಡಿದ್ದಾರೆ. leavingbangalore.com ಕುರಿತು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಟಿ.ಎ.ನಾರಾಯಣಗೌಡರನ್ನು ಸಂಪರ್ಕಿಸಿದಾಗ ಅವರು ಪತ್ರಿಕಾ ಹೇಳಿಕೆ ನೀಡಿದರು. ಈ ಕುರಿತು ಕೆಲ ಪೊಲೀಸ್ ಅಧಿಕಾರಿಗಳಿಗೆ ದೂರೂ ಸಹ ಹೋಯಿತು. ಕಡೆಗೆ leavingbangalore.com ಆರಂಭಿಸಿದ ಧೂರ್ತರು ತಮ್ಮ ವೆಬ್‌ಸೈಟ್ ಬಾಗಿಲು ಮುಚ್ಚಿಕೊಂಡು ಹೋಗಿದ್ದಾರೆ.
ಹೋಗುವವರನ್ನು ನಿಂದಿಸುವುದು ಬೇಡ, ಹೋಗೋರೆಲ್ಲ ಒಳ್ಳೆಯವರು ಎಂದು ಹೇಳುತ್ತ ಅವರಿಗೆ ಬೀಳ್ಕೊಡುಗೆ ಕೊಡೋಣ.
*****
ನಾನು ಬ್ಲಾಗ್ ಆರಂಭಿಸಿದಾಗಿನಿಂದ ಇತರ ಬ್ಲಾಗ್‌ಗಳೂ ಪರಿಚಯವಾದವು. ಸಹಜವಾಗಿಯೇ ಅವಧಿ, ಕೆಂಡಸಂಪಿಗೆ, ದಟ್ಸ್ ಕನ್ನಡ, ಸಂಪದ ತರಹದ ಬ್ಲಾಗ್‌ಗಳು ಇಷ್ಟವಾದವು. ಮಾತು ಎಂಬ ಕಾಮನ್ ಫ್ಯಾಕ್ಟರ್ ಇದ್ದ ಕಾರಣದಿಂದ ಸುದ್ದಿಮಾತು ಸಹ ನಾನೇ ಬರೆಯಬಹುದು ಎಂದು ಹಲವರು ಭಾವಿಸಿದ್ದರು. ನನ್ನ ಕೆಲವು ಗೆಳೆಯರಿಗೆ ‘ನಾನವನಲ್ಲ ಎಂದು ಆಣೆ ಮಾಡಿ ಹೇಳಬೇಕಾಯಿತು. ಸುದ್ದಿಮಾತು ತನ್ನ ತೀಕ್ಷ್ಣ ಬರೆಹಗಳಿಂದ ಸಿಕ್ಕಾಪಟ್ಟೆ ಪಾಪ್ಯುಲರ್ ಆಗಿದೆ. ಅದಕ್ಕಾಗಿ ಅದನ್ನು ಆರಂಭಿಸಿರುವ ಅನಾಮಿಕ ಗೆಳೆಯರಿಗೆ ಅಭಿನಂದನೆಗಳು.
ಅಮೆರಿಕ ರವಿ ಕುರಿತು ಹೆಚ್ಚೇನು ಗೊತ್ತಿರಲಿಲ್ಲ. ಆದರೆ ಆಳಕ್ಕೆ ಇಳಿದು ಬರೆಯುವ ಅವರ ಶೈಲಿ ಇಷ್ಟವಾಯಿತು. ಹಾಗೆಯೇ ಮಂಜುನಾಥಸ್ವಾಮಿಯವರ ಹಳ್ಳಿಕನ್ನಡದಲ್ಲಿ ಮಣ್ಣಿನ ವಾಸನೆ ಇದೆ. ಸುಂದರ ಹುಡುಗ ಮಲ್ಲಿಕಾರ್ಜುನ ತಿಪ್ಪಾರರ ನನ್ನ ಹಾಡು, ನಾಗೇಂದ್ರ ತ್ರಾಸಿಯವರ ಬಹುಮುಖಿ, ಲಕ್ಷ್ಮಿಕಾಂತ್ ಅವರ ಕವಿಬರಹ ನನಗಿಷ್ಟ.
ಹೊಸ ಸುದ್ದಿ ಏನೆಂದರೆ ಜನಪರ ಚಿಂತಕ, ಪತ್ರಕರ್ತ ಎಂ.ಮಂಜುನಾಥ ಅದ್ದೆ ಸದ್ಯದಲ್ಲೇ ಬ್ಲಾಗ್ ಲೋಕ ಪ್ರವೇಶಿಸುತ್ತಿದ್ದಾರೆ. ಗೆಳೆಯ, ಕಲಾವಿದ, ಪತ್ರಕರ್ತ ಹಾಗು ಸಮರ್ಥ ಲೇಖಕ ಸತೀಶ್ ಬಾಬು ಸಹ ತಮ್ಮ ಬ್ಲಾಗ್ ತೆರೆಯಲು ಸಿದ್ಧತೆ ನಡೆಸಿದ್ದಾರೆ. ಪತ್ರಕರ್ತ ಮಿತ್ರರಾದ ನ.ನಾಗೇಶ್, ಜ್ಞಾನೇಂದ್ರ ಕುಮಾರ್ ಸಹ ಬ್ಲಾಗ್ ಲೋಕ ಪ್ರವೇಶಿಸುತ್ತಿದ್ದಾರೆ. ಸದ್ಯದ ಅತ್ಯುತ್ತಮ ಕಥೆಗಾರರಲ್ಲಿ ಒಬ್ಬರಾದ ಪತ್ರಕರ್ತ ವೈ.ಗ.ಜಗದೀಶ್ ಹೊರಗಣವನು ಎಂಬ ಬ್ಲಾಗ್ ತೆರೆದು ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದಾರೆ.
ತುಂಬ ಖುಷಿಯ ವಿಚಾರವೆಂದರೆ ಕಲಾವಿದ ಪುಂಡಲೀಕ ಈಗಾಗಲೇ ಪುಂಡಲೀಕ ಕಲಾಪ್ರಪಂಚದೊಂದಿಗೆ ಪ್ರತ್ಯಕ್ಷವಾಗಿದ್ದಾರೆ. ಸಣ್ಣ ಸಣ್ಣ ಹನಿಗಳೊಂದಿಗೆ ಕೆಣಕುವ ಇವಳು ತನ್ನ ಪಾಡಿಗೆ ತಾನು ಬರೆದುಕೊಂಡಿದ್ದಾಳೆ.
ಬ್ಲಾಗ್ ಲೋಕಕ್ಕೆ ಮೊಟ್ಟಮೊದಲ ಬಾರಿಗೆ ನನ್ನನ್ನು ಸ್ವಾಗತಿಸಿದ ಡೆಕ್ಕನ್ ಹೆರಾಲ್ಡ್ ವರದಿಗಾರ ಸತೀಶ್ ಶಿಲೆ ಯಾವಾಗ ತಮ್ಮ ಬ್ಲಾಗ್ ತೆರೆಯುತ್ತಾರೆ ಅಂತ ಕಾಯುತ್ತಿದ್ದೇನೆ.
*****
ಇದೆಲ್ಲದರ ನಡುವೆ ಬಿ.ಎನ್.ರಮೇಶ್ ಅವರ ನೇತೃತ್ವದಲ್ಲಿ ಒಂದು ಹೊಸ ಸಂಘಟನೆ ರೂಪ ಪಡೆದುಕೊಳ್ಳುತ್ತಿದೆ. ‘ಸಾಮಾಜಿಕ ನ್ಯಾಯಕ್ಕಾಗಿ ಸಮಾನ ಮನಸ್ಕರ ಸಂಘಟನೆ' ಎಂಬುದು ಅವರ ಘೋಷವಾಕ್ಯ. ರಮೇಶ್ ಅವರ ಜತೆ ನಾನು ಹಾಗು ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಸಕ್ರಿಯವಾಗಿರುವ ಹೊಸ ಪೀಳಿಗೆಯ ಜನರೆಲ್ಲ ಇರುತ್ತೇವೆ. ಹಿಂದುಳಿದ ಜಾತಿಗಳು, ದಲಿತರು, ಒಕ್ಕಲಿಗರು, ಅಲ್ಪಸಂಖ್ಯಾತರು, ಲಿಂಗಾಯಿತರು, ಬ್ರಾಹ್ಮಣರು ಹೀಗೆ ಎಲ್ಲ ಸಮುದಾಯಗಳ ಯುವಮನಸ್ಸುಗಳು ಈ ಸಂಘಟನೆಯಲ್ಲಿರುತ್ತವೆ.
ಈ ಸಂಘಟನೆಗೆ ಸಂಬಂಧಿಸಿದ ಕೆಲಸಗಳೆಲ್ಲ ಒಂದೊಂದಾಗಿ ನಡೆಯುತ್ತಿವೆ. ನಾವು ಅಂದುಕೊಂಡಂತೆ ಆದರೆ ಬರುವ ನವೆಂಬರ್ ೨೮ರಂದು ಸಂಘಟನೆಯನ್ನು ನಾವೆಲ್ಲರೂ ಇಷ್ಟಪಡುವ ಅಂಬೇಡ್ಕರ್‌ವಾದಿ, ಮಾಜಿ ಕೇಂದ್ರ ಸಚಿವ ಶ್ರೀನಿವಾಸ ಪ್ರಸಾದ್ ಉದ್ಘಾಟಿಸುತ್ತಾರೆ. ಕನಿಷ್ಠ ಐದುಸಾವಿರ ಜನರು ಪಾಲ್ಗೊಳ್ಳುವ ಈ ಬಹಿರಂಗ ಸಭೆಯಲ್ಲಿ ನಾಲ್ಕು ಪುಸ್ತಕಗಳ ಬಿಡುಗಡೆಯನ್ನೂ ಇಟ್ಟುಕೊಂಡಿದ್ದೇವೆ. ಆ ಬಗ್ಗೆ ಮುಂದೆ ಇನ್ನಷ್ಟು ಬರೆಯುತ್ತೇನೆ.
******
ನೀವು ಜರ್ನಲಿಸ್ಟೋ, ಆಕ್ಟಿವಿಸ್ಟೋ ಎಂದು ನನ್ನ ಗೆಳೆಯರು ಆಗಾಗ ಕಾಲೆಳೆಯುತ್ತಿರುತ್ತಾರೆ. ನಾನೂ ಸಹ ಒಮ್ಮೊಮ್ಮೆ ಈ ಎರಡಕ್ಕೂ ವ್ಯತ್ಯಾಸವೇ ಇಲ್ಲವೇನೋ ಎಂಬಂತೆ ವರ್ತಿಸುತ್ತಿರುತ್ತೇನೆ. ಜರ್ನಲಿಸ್ಟ್ ಆದವನು ಆಕ್ಟಿವಿಸ್ಟ್ ಆಗಿರುವುದು ಸರಿಯೇ ಎಂಬುದು ಹಲವರ ಪ್ರಶ್ನೆ.
ಬಾಗೂರು ನವಿಲೆ ಹೋರಾಟದ ಸಂದರ್ಭದಲ್ಲಿ ಆಗಿನ ಹಾಸನ ಜಿಲ್ಲಾ ಮಂತ್ರಿ ಎಚ್.ಡಿ.ರೇವಣ್ಣ ಹೋರಾಟ ನಡೆಸುತ್ತಿದ್ದ ಗಂಡಸರಿಗೆ ಪೊಲೀಸರಿಂದ ಹೊಡೆಸಿ ಜೈಲಿಗಟ್ಟಿದ್ದರು. ಕೈಗೆ ಸಿಗದೆ ಉಳಿದ ಗಂಡಸರು ಊರು ಬಿಟ್ಟಿದ್ದರು.
ಆಗ ಹಾಸನ ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಪೊಲೀಸ್ ದೌರ್ಜನ್ಯ ನಡೆದ ಹಳ್ಳಿಗಳಲ್ಲಿ ಪಾದಯಾತ್ರೆ ನಡೆಸುವ ತೀರ್ಮಾನವಾಯಿತು. ಆದರೆ ಪಾದಯಾತ್ರೆ ಮಾಡಲು ಯತ್ನಿಸಿದರೆ ನಿಮ್ಮ ಮೇಲೆ ಮೊಕದ್ದಮೆ ದಾಖಲಿಸಬೇಕಾಗುತ್ತದೆ ಎಂದು ಅಲ್ಲಿ ಪೊಲೀಸ್ ಅಧಿಕಾರಿಯೊಬ್ಬ ಸಾಯಿಕುಮಾರ್ ಶೈಲಿಯಲ್ಲಿ ಅಬ್ಬರಿಸಿದ್ದ.
ತಮಾಶೆ ಎಂದರೆ ಹಾಗೆ ಪೊಲೀಸ್ ಅಧಿಕಾರಿ ಹೇಳುತ್ತಿದ್ದಂತೆ ಒಂದು ಸಣ್ಣ ಗುಂಪು ನಾವು ಇಲ್ಲಿ ಪಾದಯಾತ್ರೆಗೆ ಬಂದಿಲ್ಲ, ಫ್ಯಾಕ್ಟ್ಸ್ ಫೈಂಡಿಂಗ್‌ಗೆ ಬಂದಿದ್ದೇವೆ ಎಂದು ಚದುರಿ ಹೋಯಿತು. ಜನತಾಮಾಧ್ಯಮ ಸಂಪಾದಕ ಆರ್.ಪಿ.ವೆಂಕಟೇಶ್ ಮೂರ್ತಿಯವರ ನೇತೃತ್ವದಲ್ಲಿ ಉಳಿದ ಸುಮಾರು ನೂರಕ್ಕೂ ಹೆಚ್ಚು ಪತ್ರಕರ್ತರು ಪೊಲೀಸರ ಬೆದರಿಕೆ ಲೆಕ್ಕಿಸದೆ ಪಾದಯಾತ್ರೆ ಮಾಡಿದೆವು.
ಆಗಲೂ ನನ್ನನ್ನು ಕಾಡಿದ ಪ್ರಶ್ನೆ: ಪತ್ರಕರ್ತರು ತೀರಾ ನಿರ್ಭಾವುಕರಾಗಿ ವರದಿ ಮಾಡುವುದಕ್ಕೆ ಮಾತ್ರ ಸೀಮಿತವಾಗಬೇಕೆ? ಅನಿವಾರ್ಯ ಅನಿಸಿದಾಗ ಆಕ್ಟಿವಿಸ್ಟ್ ಆದರೆ ತಪ್ಪೇನು?
ಯಾರಾದರೂ ಉತ್ತರಿಸುವಿರಾ?

Saturday, October 4, 2008
ಹೌದು, ಮಠಾಧೀಶರೆಲ್ಲ ಸ್ವಜಾತಿ ಪ್ರೇಮಿಗಳು!
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಮೈಸೂರಿನಲ್ಲಿ ಆಡಿರುವ ಮಾತುಗಳು ವಿವಾದಕ್ಕೆ ಕಾರಣವಾಗಿದೆ. ‘ಇವರಿಗೆಲ್ಲ ಸ್ವಜಾತಿ ಪ್ರೇಮ ಹೆಚ್ಚಾಗುತ್ತಿದೆ ಎಂದು ಅವರು ಗಾಳಿಯಲ್ಲಿ ಗುಂಡು ಹೊಡೆದಿದ್ದಾರೆ. ಅವರು ಗುಂಡು ಹೊಡೆದದ್ದು ಯಾರಿಗೆ ಎಂಬುದು ಎಲ್ಲರಿಗೂ ಗೊತ್ತಿದ್ದರೂ ಅವರು ಮುಂದೆ ಅನಿವಾರ್ಯತೆ ಬಂದರೆ ತಮ್ಮ ಹೇಳಿಕೆಯನ್ನು ಬೇರೆ ಯಾರಿಗೋ ಹೇಳಿದ ಮಾತು ಎಂದು ಬಚಾಯಿಸಿಕೊಳ್ಳಬಹುದು. ಆ ವಿಷಯ ಬೇರೆ, ಆದರೆ ಅವರ ಹೇಳಿಕೆ ಒಂದಷ್ಟು ಚರ್ಚೆಗೆ ದಾರಿ ಮಾಡಿಕೊಟ್ಟಿರುವುದೇನೋ ನಿಜ.
ಕುಮಾರಸ್ವಾಮಿಯವರು ಆಡಿರುವ ಮಾತುಗಳನ್ನು ಗಮನಿಸಿ. ಸಿದ್ಧಗಂಗೆಯ ಡಾ.ಶಿವಕುಮಾರಸ್ವಾಮೀಜಿಯವರು ಕಳೆದ ಬಾರಿ ದಸರಾ ಉದ್ಘಾಟನೆಗೆ ಬಾರದೆ ಈ ಬಾರಿ ಬಂದು ಉದ್ಘಾಟಿಸಿರುವುದು ಅವರ ಅಸಮಾಧಾನಕ್ಕೆ ಕಾರಣ. ಮಠಾಧೀಶರು ಸ್ವಜಾತಿ ಪ್ರೇಮಿಗಳಾಗಿದ್ದಾರೆ ಎಂಬುದು ಕುಮಾರಸ್ವಾಮಿಯವರ ನೇರ ಆರೋಪ. ಇದು ಕೇವಲ ಶಿವಕುಮಾರ ಸ್ವಾಮೀಜಿಯವರನ್ನು ಉದ್ದೇಶಿಸಿ ಹೇಳಿದ ಮಾತುಗಳಲ್ಲ ಎಂಬುದು ಎಲ್ಲರಿಗೂ ಗೊತ್ತು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಬೆನ್ನಿಗೆ ನಿಂತಿರುವ ವೀರಶೈವ ಮಠಾಧೀಶರ ಒಂದು ದೊಡ್ಡಸಮೂಹವನ್ನೇ ಅವರು ಗುರಿಯಾಗಿಸಿಕೊಂಡು ಮಾತನಾಡಿದ್ದಾರೆ.
ಕುಮಾರಸ್ವಾಮಿಯವರು ಎತ್ತಿರುವ ಬಹುಮುಖ್ಯ ಪ್ರಶ್ನೆ ಏನೆಂದರೆ ಮಠಾಧೀಶರು ಸ್ವಜಾತಿ ಪ್ರೇಮಿಗಳೇ? ಎಂಬುದು. ಇಂಥ ಪ್ರಶ್ನೆಯನ್ನು ಎತ್ತುವ ಅರ್ಹತೆ ಕುಮಾರಸ್ವಾಮಿಯವರಿಗೆ ಇದೆಯೇ ಎಂಬುದು ಪ್ರತ್ಯೇಕವಾಗಿ ಚರ್ಚೆಯಾಗಬೇಕಾದ ವಿಷಯ. ಮಠಾಧೀಶರ ಜಾತಿಪ್ರೇಮದ ಬಗ್ಗೆ ಮಾತನಾಡುವ ಕುಮಾರಸ್ವಾಮಿಯವರು ಜಾತಿಪ್ರೇಮಿಯಲ್ಲವೆ? ಅಲ್ಲದಿದ್ದರೆ ಕುಮಾರಸ್ವಾಮಿಯವರೇ ಕೆಂಗೇರಿ ಮಠದ ಕುಮಾರಚಂದ್ರಶೇಖರನಾಥ ಸ್ವಾಮಿಗಳ ಗುರುವಂದನೆಯನ್ನು ತಮ್ಮ ಸಹಸ್ರಾರು ಬೆಂಬಲಿಗರೊಂದಿಗೆ, ಅಭೂತಪೂರ್ವವಾಗಿ ಆಚರಿಸುವ ಅಗತ್ಯವಾದರೂ ಏನಿತ್ತು? ಕುಮಾರಸ್ವಾಮಿಯವರು ತಾವು ಮುಖ್ಯಮಂತ್ರಿಗಳಾಗಿದ್ದಾಗ ಆಯಕಟ್ಟಿನ ಸ್ಥಾನಗಳಲ್ಲಿ ಒಕ್ಕಲಿಗ ಅಧಿಕಾರಿಗಳನ್ನೇ ಪ್ರತಿಷ್ಠಾಪಿಸುವ ಅಗತ್ಯವೇನಿತ್ತು? ಅವರ ಸಂಪುಟದಲ್ಲಿ ಒಕ್ಕಲಿಗ ಮಂತ್ರಿಗಳೇ ಹೆಚ್ಚು ಸಂಖ್ಯೆಯಲ್ಲಿದ್ದರು ಹಾಗು ಅವರೇ ಪ್ರಬಲ ಖಾತೆಗಳನ್ನು ಹೊಂದಿದ್ದರಲ್ಲ, ಅದಕ್ಕೇನು ಹೇಳುತ್ತಾರೆ?, ಕುಮಾರಸ್ವಾಮಿಯವರ ಅನುದಿನದ ಮಾರ್ಗದರ್ಶಿಯಾಗಿರುವ ಅವರ ತಂದೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ವೆಂಕಟಸ್ವಾಮಿ, ಚಿನ್ನಪ್ಪರೆಡ್ಡಿ ಆಯೋಗಗಳ ವಿರುದ್ಧ ಕತ್ತಿ-ಗುರಾಣಿ ಹಿಡಿದು ನಿಂತಿದ್ದು ಅಪ್ಪಟ ಜಾತಿಪ್ರೇಮದಿಂದ ಅಲ್ಲವೇ?........... ಹೀಗೆ ಕುಮಾರಸ್ವಾಮಿಯವರಿಗೆ ಇರಬಹುದಾದ ‘ಜಾತಿಪ್ರೇಮದ ಬಗ್ಗೆ ಚರ್ಚಿಸಲು ಸಾಕಷ್ಟು ವಿಷಯಗಳಿವೆ. ಹೀಗೆ ವಿಷಯಾಂತರ ಮಾಡದೇ ಕುಮಾರಸ್ವಾಮಿಯವರು ಎತ್ತಿರುವ ಈ ಕಾಲಘಟ್ಟದ ಮಹತ್ವದ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನ ನನ್ನದು.
ನಿಜ, ಡಾ.ಶಿವಕುಮಾರಸ್ವಾಮಿಯವರ ಕರ್ತೃತ್ವ ಶಕ್ತಿಯ ಬಗ್ಗೆ, ತ್ರಿವಿಧ ದಾಸೋಹದ ಬಗ್ಗೆ ಎರಡು ಮಾತಿಲ್ಲ. ಅವರಂಥ ಸಾಧಕರು ಅಪರೂಪ. ನಿಜಾರ್ಥದಲ್ಲಿ ಅವರು ಕರ್ನಾಟಕ ರತ್ನವೇ ಹೌದು. ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯೆಯನ್ನು ನೀಡಿದ ಸ್ವಾಮೀಜಿಯವರ ಸಾಧನೆಗೆ ಸರಿಸಾಟಿಯೇ ಇಲ್ಲ. ಶಿವಕುಮಾರಸ್ವಾಮಿಗಳ ಹಾಗೆ ರಾಜ್ಯದ ಬಹಳಷ್ಟು ಮಠ-ಮಾನ್ಯಗಳು ಶಿಕ್ಷಣ-ಆರೋಗ್ಯದ ಕ್ಷೇತ್ರಗಳಲ್ಲಿ ತಮ್ಮದೇ ಆದ ಸೇವೆ ಸಲ್ಲಿಸುತ್ತಿವೆ. ಅವುಗಳ ಸಾಧನೆ ಮೆಚ್ಚುವಂಥದ್ದು, ಅನುಕರಣನೀಯವಾದುದು.
ಆದರೆ ಈಗ ಉದ್ಭವಿಸಿರುವ ಪ್ರಶ್ನೆ ಅದಲ್ಲ. ಈ ಎಲ್ಲ ಮಠಾಧೀಶರಿಗೆ ಸಲ್ಲಬೇಕಾದ ಎಲ್ಲ ಗೌರವಗಳನ್ನು ಇಟ್ಟುಕೊಂಡೇ ಜಾತಿಪ್ರೇಮದ ವಿಷಯಕ್ಕೆ ಬಂದರೆ, ಹೌದು, ಈ ಎಲ್ಲ ಮಠಾಧೀಶರೂ ಜಾತಿಪ್ರೇಮಿಗಳೇ ಎಂದು ಹೇಳಬೇಕಾಗುತ್ತದೆ. ಕುಮಾರಸ್ವಾಮಿಯವರಿಗೆ ಗೊತ್ತಿಲ್ಲದ ಅಥವಾ ಗೊತ್ತಿದ್ದೂ ಅವರು ಹೇಳದ ಮತ್ತೊಂದು ಅಂಶವನ್ನು ನಾನು ಸೇರಿಸಲು ಬಯಸುತ್ತೇನೆ. ಮಠಾಧೀಶರು ಕೇವಲ ಜಾತಿಪ್ರೇಮಿಗಳು ಮಾತ್ರವಲ್ಲ, ಅವರು ನೂರಕ್ಕೆ ನೂರು ಸ್ವ ಉಪಜಾತಿ ಪ್ರೇಮಿಗಳು! ಇನ್ನೂ ಒಂದು ಹೆಜ್ಜೆ ಮುಂದುವರಿದು ಹೇಳುವುದಾದರೆ ಸ್ವ ವಂಶ ಪ್ರೇಮಿಗಳು. ಯಾರಾದರೂ ಸ್ವಾಮೀಜಿಗಳು ತಮ್ಮನ್ನು ತಾವು (ಬೆರಳೆಣಿಕೆಯ ಕೆಲವರನ್ನು ಬಿಟ್ಟು) ಜಾತಿಪ್ರೇಮಿಯಲ್ಲ ಎಂದು ಹೇಳಿಕೊಂಡರೆ ಅದಕ್ಕಿಂತ ಆತ್ಮವಂಚನೆಯ ಮಾತು ಇನ್ನೊಂದಿರಲಾರದು.
ನಮ್ಮಲ್ಲಿ ಎರಡು ಬಗೆಯ ಮಠಗಳಿವೆ. ಒಂದು ಪುತ್ರವರ್ಗ ಪರಂಪರೆಯ ಮಠಗಳು, ಮತ್ತೊಂದು ಶಿಷ್ಯವರ್ಗ ಪರಂಪರೆಯ ಮಠಗಳು. ಪುತ್ರವರ್ಗ ಪರಂಪರೆಯ ಮಠಗಳಲ್ಲಿ ಸ್ವಾಮಿಯಾದವನು ಮದುವೆಯಾಗುತ್ತಾನೆ. ಆತನ ಪುತ್ರನೇ ಮಠದ ಮುಂದಿನ ಉತ್ತರಾಧಿಕಾರಿಯಾಗುತ್ತಾನೆ. ಮತ್ತೊಂದು ಶಿಷ್ಯವರ್ಗದ ಮಠಗಳು. ಈ ಮಠಗಳಲ್ಲಿ ಸ್ವಾಮಿಗಳು ಸಂನ್ಯಾಸಿಗಳಾಗುತ್ತಾರೆ. ಹೀಗಾಗಿ ಅವರು ನಿಯೋಜಿಸುವ ಶಿಷ್ಯರು ಉತ್ತರಾಧಿಕಾರಿಗಳಾಗುತ್ತಾರೆ. ಇವತ್ತು ಅತಿ ಹೆಚ್ಚು ಚಾಲ್ತಿಯಲ್ಲಿರುವುದು, ವ್ಯಾವಹಾರಿಕವಾಗಿ ಯಶಸ್ಸು ಗಳಿಸುತ್ತಿರುವವು ಶಿಷ್ಯ ವರ್ಗ ಪರಂಪರೆಯ ಮಠಗಳೇ ಆಗಿವೆ.
ಸ್ವಾಮಿ ಎಂದರೆ ಒಡೆಯ ಎಂದರ್ಥ. ಒಡೆಯ ಎಂದಿಗೂ ಸಂನ್ಯಾಸಿಯಾಗಲು ಸಾಧ್ಯವಿಲ್ಲ. ಸ್ವಾಮಿಗಳು ಹಿಂದೆಲ್ಲಾ ಸಂನ್ಯಾಸಿಗಳಾಗಿರಲಿಲ್ಲ. ಆದರೆ ಪೊಳ್ಳು ಆದರ್ಶದ ಬೆನ್ನು ಹತ್ತಿ ಪುತ್ರವರ್ಗ ಪರಂಪರೆಯ ಮಠಗಳೂ ಶಿಷ್ಯವರ್ಗ ಪರಂಪರೆಯನ್ನೇ ಅನುಸರಿಸಿದವು. ಮಠಗಳ ಭಕ್ತರು ತಮ್ಮ ಸ್ವಾಮೀಜಿಗಳನ್ನು ತಮಗಿಂತ ಬೇರೆಯಾಗಿ ಕಾಣಲು ಬಯಸುತ್ತಾರೆ. ವಿಶೇಷತೆಯೇನನ್ನಾದರೂ ಗುರುತಿಸಲು ಬಯಸುತ್ತಾರೆ. ತಮ್ಮ ಗುರು ಸ್ಥಾನದಲ್ಲಿರುವವರು ಸಂಸಾರವನ್ನು ತ್ಯಜಿಸಿದ್ದರೆ ವಿಶೇಷ ಗೌರವಾದರಗಳು ಲಭ್ಯ. ಈ ಕಾರಣಕ್ಕಾಗಿಯೇ ಮಠಗಳು ಸಂನ್ಯಾಸವನ್ನು ಒಪ್ಪಿಕೊಂಡವು.
ಆದರೆ ಕಠೋರ ವಾಸ್ತವವೆಂದರೆ ನೂರಕ್ಕೆ ೯೯ಕ್ಕೂ ಹೆಚ್ಚು ಸ್ವಾಮೀಜಿಗಳು ಸಂನ್ಯಾಸಿಯ ಗುಣಗಳನ್ನು ಧರಿಸಿದವರಲ್ಲ. ಸಂನ್ಯಾಸಿಗೆ ರಾಗ-ದ್ವೇಷಗಳಿರಲು ಸಾಧ್ಯವಿಲ್ಲ. ಆದರೆ ನಮ್ಮ ಸ್ವಾಮಿಗಳು ಜನಸಾಮಾನ್ಯರಿಗಿಂತಲೂ ಹೆಚ್ಚು ರಾಗ-ದ್ವೇಷಗಳನ್ನು ಮೈಮೇಲೆ ಎಳೆದುಕೊಂಡವರು. ಸಂನ್ಯಾಸಿ ಅರಿಷಡ್ವರ್ಗಗಳನ್ನು ಮೀರಬೇಕು, ಆದರೆ ಇವುಗಳಲ್ಲಿ ಯಾವುದನ್ನೂ ಬಿಡಲು ಈ ಮಠಾಧೀಶರು ಒಲ್ಲರು. ಸಂನ್ಯಾಸಿಗೆ ಒಂದು ನೆಲೆ ಇರಲು ಸಾಧ್ಯವಿಲ್ಲ. ಆದರೆ ನಮ್ಮ ಸ್ವಾಮಿಗಳು ಮಠ-ಮಂದಿರಗಳೆಂಬ ಲೌಕಿಕ ಜಗತ್ತಿನಲ್ಲಿ ತಮ್ಮನ್ನು ತಾವು ಸಂಸ್ಥಾಪಿಸಿಕೊಂಡವರು.
ತ್ಯಾಗ ಸಂನ್ಯಾಸಿಯ ಬಹುಮುಖ್ಯ ಗುಣ. ಆದರೆ ಯಾವ ಸ್ವಾಮಿ ಏನನ್ನು ತ್ಯಾಗ ಮಾಡಿದ್ದಾನೆ? ನಮ್ಮ ಸ್ವಾಮಿಗಳು ಸಂಪ್ರದಾಯದ ಹೆಸರಿನಲ್ಲಿ ಸಿಂಹಾಸನಗಳ ಮೇಲೆ ಕೂರುತ್ತಾರೆ, ವಜ್ರಖಚಿತ ಚಿನ್ನದ ಕಿರೀಟಗಳನ್ನು ಧರಿಸುತ್ತಾರೆ, ಪಲ್ಲಕ್ಕಿ ಏರಿ ಮನುಷ್ಯರ ಹೆಗಲ ಮೇಲೆ ಊರೂರು ಸಂಚಾರ ಮಾಡಿ ಉಘೇ ಉಘೇ ಎಂಬ ಪರಾಕು ಕೇಳುತ್ತಾರೆ. ಕೆಲವು ಸ್ವಾಮಿಗಳು ಉಣ್ಣುವುದು ಬೆಳ್ಳಿ ತಟ್ಟೆಯಲ್ಲಿ, ಕುಡಿಯುವುದು ಬೆಳ್ಳಿ ಲೋಟದಲ್ಲಿ. ಗುರುವಂದನೆಯ ಹೆಸರಿನಲ್ಲಿ ರಾಶಿರಾಶಿ ಹೂವುಗಳನ್ನು ಹೆಣದ ಮೇಲೆ ಸುರಿಯುವಂತೆ ಈ ಸ್ವಾಮಿಗಳ ಮೇಲೆ ಸುರಿಯಲಾಗುತ್ತದೆ. ಇವರ ಪಾದಗಳನ್ನು ಹೆಂಗಳೆಯರು ತೊಳೆದು ಶುಭ್ರಗೊಳಿಸುತ್ತಾರೆ. (ಕೆಲ ಭಕ್ತರು ಇದನ್ನೇ ತೀರ್ಥ ಎಂದು ಭಾವಿಸಿ ಕುಡಿಯುತ್ತಾರೆ)
ಇವರು ಎಂಥ ಸಂನ್ಯಾಸಿಗಳು? ಮಠಾಧೀಶರು ಮದುವೆಯಾಗುವುದಿಲ್ಲ. ಹಾಗೆಂದ ಮಾತ್ರಕ್ಕೆ ಬ್ರಹ್ಮಾಚಾರಿಗಳೇ ಇವರು? ಶೇ.೯೦ಕ್ಕೂ ಹೆಚ್ಚು ಮಠಾಧೀಶರು ಲೈಂಗಿಕ ಕ್ರಿಯೆ-ಕರ್ಮಗಳನ್ನು ಸಾಂಗೋಪಾಂಗವಾಗಿ ನಡೆಸಿಕೊಂಡು ಬಂದವರೇ. ಪಾಪ, ಅವರೇನು ಮಾಡುತ್ತಾರೆ? ನಿಸರ್ಗ ಸಹಜವಾದ ಕಾಮನೆಗಳನ್ನು ಅದುಮಿಟ್ಟುಕೊಳ್ಳುವುದು ಸಾಧ್ಯವೆ? ಇದನ್ನೆಲ್ಲ ನೋಡಿದರೆ ನನಗನ್ನಿಸುವುದು ಇಡೀ ಮಠೀಯ ವ್ಯವಸ್ಥೆಯೇ ಆತ್ಮವಂಚನೆಯ ವ್ಯವಸ್ಥೆ. ಈ ವ್ಯವಸ್ಥೆಯ ಒಳಗೆ ಬರುವವರು ಈ ಆತ್ಮಘಾತಕತನಕ್ಕೆ ಸಜ್ಜಾಗಿಯೇ ಬರಬೇಕು.
ಈ ಆತ್ಮಘಾತಕತನ ಕೇವಲ ಮಠಾಧೀಶರ ಲೈಂಗಿಕ ಬದುಕಿಗೆ ಸಂಬಂಧಿಸಿದ್ದಲ್ಲ, ಅವರ ನಡೆ-ನುಡಿಯೇ ಆತ್ಮವಂಚನೆಯದ್ದು. ಮಠಾಧೀಶರು ಬಹಳ ಸುಲಭವಾಗಿ ತಮ್ಮ ಹೆಸರಿನೊಂದಿಗೆ ಜಗದ್ಗುರು ಎಂಬ ವಿಶೇಷಣ ಜೋಡಿಸಿಕೊಳ್ಳುತ್ತಾರೆ. ಆದರೆ ಅವರಿಗೆ ಸ್ಪಷ್ಟವಾಗಿ ಗೊತ್ತಿದೆ: ಅವರು ಜಗದ್ಗುರುಗಳಲ್ಲ, ಜಾತಿ ಗುರುಗಳು.
ಮಾನವಧರ್ಮ ಪೀಠದ ನಿಡುಮಾಮಿಡಿ ಸ್ವಾಮೀಜಿ ಮಠಾಧೀಶರ ಮರ್ಮ ಎಂಬ ತಮ್ಮ ಕೃತಿಯಲ್ಲಿ ಹೀಗೆ ಹೇಳುತ್ತಾರೆ: ‘ನಮ್ಮ ವ್ಯವಸ್ಥೆಯಲ್ಲಿ ಯಾವುದನ್ನು ಜಾತ್ಯತೀತ ಮಠವೆಂದು ಹೇಳಲಿಕ್ಕೆ ಬರುತ್ತದೆ? ಅವರವರ ಮಠಗಳಿಗೆ ಅವರವರ ಸಂಬಂಧಿಕರನ್ನು ಅದೇ ಜಾತಿಯ ಜನರನ್ನು ಉತ್ತರಾಧಿಕಾರಿಗಳನ್ನಾಗಿ ಮಾಡುತ್ತ ಬಂದಿರುವುದು ವಂಶನಿಷ್ಠ, ಜಾತಿನಿಷ್ಠೆಯನ್ನು ಹೇಳುತ್ತಿಲ್ಲವೆ? ಆದರೆ ಎಲ್ಲರೂ ಭಾಷಣಗಳಲ್ಲಿ ಉದಾರವಾಗಿ ಮಾನವತೆಯ ಬಗ್ಗೆ ಮಾತನಾಡುತ್ತಾರೆ. ವಿಶ್ವಧರ್ಮವನ್ನು ಬೋಧಿಸುತ್ತಾರೆ. ಆಸ್ತಿ ಅಧಿಕಾರದ ವಿಷಯ ಬಂದಾಗ ತಮ್ಮ ವಂಶಕ್ಕೆ ತಮ್ಮ ಜಾತಿಗೆ ಅಂಟಿಕೊಳ್ಳುತ್ತಾರೆ. ಹೀಗಿದ್ದಾಗ ಮಾನವಧರ್ಮಕ್ಕೆ ಸ್ಥಾನ ಎಲ್ಲಿಯದು? ಜಾತಿಯ ಗುರುಗಳೇ ಇಲ್ಲಿ ಜಗದ್ಗುರುಗಳಾಗಿಬಿಟ್ಟಿದ್ದಾರೆ. ಇದಕ್ಕಿಂತ ನಗೆಪಾಟಲಿನ ಸಂಗತಿ ಇನ್ನೊಂದಿಲ್ಲ. ನಮ್ಮ ದೇಶ ಇನ್ನೂ ಜಾತಿನಿಷ್ಠ ದೇಶವಾಗಿಯೇ ಉಳಿದಿವೆ. ನಮ್ಮಲ್ಲಿನ ಪ್ರತಿಯೊಂದು ಮಠ, ಆಶ್ರಮ, ಸಂಘಸಂಸ್ಥೆಗಳು ಜಾತಿನಿಷ್ಠೆಯನ್ನೇ ಪೋಷಿಸುತ್ತಿವೆ. ಹಾಗಾಗಿ ನಮ್ಮಲ್ಲಿ ಅವರು ಮಾತ್ರ ಜಾತಿವಾದಿ, ಇವರು ಜಾತಿವಾದಿ ಅಲ್ಲ ಅಂಥ ಹೇಳಲಿಕ್ಕೆ ಬಾರದು. ಕೆಲವರು ಹೆಚ್ಚು ಜಾತಿವಾದಿಗಳು. ಕೆಲವರು ಕಡಿಮೆ ಜಾತಿವಾದಿಗಳು ಆಗಿರಬಹುದು. ಈ ದೇಶದಲ್ಲಿ ಜಾತಿಯೇ ನೀತಿ, ಜಾತಿಯೇ ಧರ್ಮ, ಜಾತಿಯೇ ದೇವರು, ಜಾತಿಯೇ ಮೋಕ್ಷ.
ಮಠೀಯ ವ್ಯವಸ್ಥೆಯ ಒಳಗೆ ಇದ್ದೇ ಅಲ್ಲಿನ ಕಪಟ-ವಂಚನೆಗಳನ್ನು ಬಯಲುಮಾಡುತ್ತ ಬಂದಿರುವ ನಿಡುಮಾಮಿಡಿಯವರು ಮಠಗಳ ಜಾತಿನಿಷ್ಠೆಯ ಬಗ್ಗೆ ಬಹಿರಂಗವಾಗಿ ಹರಿಹಾಯ್ದವರು. ಅವರು ಹೇಳುವುದು ಅಕ್ಷರಶಃ ನಿಜ. ಪ್ರತಿಯೊಂದು ಮಠವೂ ಒಂದು ಜಾತಿ-ಉಪಜಾತಿಯನ್ನು ಆಧರಿಸಿ ನಿಂತಿದೆ. ಒಂದು ಜಾತಿಯ ಮಠಾಧೀಶರನ್ನು ಇನ್ನೊಂದು ಜಾತಿಯ ಭಕ್ತರು ಒಪ್ಪುವುದಿಲ್ಲ. ತಮ್ಮ ಮಠಾಧೀಶರು ತಮ್ಮ ಜಾತಿಗೇ ನಿಷ್ಠರಾಗಿರಲಿ ಎಂದು ಭಕ್ತರೂ ಬಯಸುತ್ತಾರೆ, ಮಠಾಧೀಶರೂ ಅದನ್ನೇ ಮಾಡುತ್ತಾರೆ.
ಈ ಪ್ರಶ್ನೆಗಳನ್ನು ಗಮನಿಸಿ: ಪೇಜಾವರ ಸ್ವಾಮೀಜಿಯವರು ತಮ್ಮ ಉತ್ತರಾಧಿಕಾರತ್ವವನ್ನು ಮಾಧ್ವರಲ್ಲದವರಿಗೆ ಬಿಟ್ಟುಕೊಡಲು ಸಾಧ್ಯವೆ? ರಾಘವೇಶ್ವರ ಭಾರತಿಯವರು ಹವ್ಯಕರಲ್ಲದವರಿಗೆ ತಮ್ಮ ಪೀಠದ ಉತ್ತರಾಧಿಕಾರ ನೀಡುವರೆ? ಬಾಲಗಂಗಾಧರನಾಥ ಸ್ವಾಮೀಜಿಗಳ ಉತ್ತರಾಧಿಕಾರಿಯಾಗಿ ಒಬ್ಬ ದಲಿತನನ್ನು ಕಲ್ಪಿಸಿಕೊಳ್ಳುವುದು ಸಾಧ್ಯವೆ? ಸಿರಿಗೆರೆ ಪೀಠಕ್ಕೆ ಸಾದರ ಹೊರತಾಗಿ ಬೇರೆಯವರ ಆಧಿಪತ್ಯ ಸಾಧ್ಯವೆ? ಪಂಚಾಚಾರ್ಯ ಪೀಠಗಳು ಜಂಗಮರಲ್ಲದವರನ್ನು ತಮ್ಮ ಪೀಠಕ್ಕೆ ಕೂರಿಸುವರೆ? ಶೃಂಗೇರಿ ಶಂಕರಾಚಾರ್ಯ ಪೀಠಕ್ಕೆ ವೈಷ್ಣವ ಬ್ರಾಹ್ಮಣರನ್ನು ನೇಮಿಸಲು ಭಾರತೀತೀರ್ಥ ಸ್ವಾಮೀಜಿ ಒಪ್ಪುವರೆ?
ಇಂಥ ಪ್ರಶ್ನೆಗಳನ್ನು ಮೇಲಿನ ಸ್ವಾಮೀಜಿಗಳಿಗೆ ಕೇಳುವುದೇ ಅಪರಾಧ! ಪಂಚಾಚಾರ್ಯ ಪೀಠದವರು ವಿರಕ್ತ ಸ್ವಾಮೀಜಿಗಳ ಸರಿಸಮವಾಗಿ ವೇದಿಕೆಗಳಲ್ಲಿ ಕುಳಿತುಕೊಳ್ಳಲು ಒಪ್ಪುವುದೇ ಇಲ್ಲ. ಇನ್ನು ಅವರು ವಿರಕ್ತರನ್ನು ಪೀಠಕ್ಕೆ ನೇಮಿಸುವುದೆಲ್ಲಿಂದ ಬಂತು? ಪೇಜಾವರರು ತಮ್ಮ ಜತೆಗಾರ ಅಷ್ಟಮಠದ ಸ್ವಾಮಿಗಳ ಜತೆಯೇ ಹರಿದ್ವಾರದಲ್ಲಿ ಮಠ ಕಟ್ಟುವ ವಿಚಾರಕ್ಕೆ ಜಗಳಕ್ಕೆ ಬಿದ್ದವರು. ಇನ್ನು ಮಾಧ್ವರಲ್ಲವರನ್ನು ಅವರು ಒಪ್ಪಿಯಾರೇ? ಕೃಷ್ಣ ಕೃಷ್ಣಾ.....!
ಸ್ವಾಮೀಜಿಗಳು ತಮ್ಮ ಮಠಗಳಿಗೆ ಉತ್ತರಾಧಿಕಾರಿ ಮಾಡುವಾಗ ತಮ್ಮ ಪೂರ್ವಾಶ್ರಮದ ( ಈ ಪದಬಳಕೆಯ ಕುರಿತೇ ನನಗೆ ಜಿಜ್ಞಾಸೆಗಳಿವೆ) ಅಣ್ಣತಮ್ಮಂದಿರು, ಅಕ್ಕತಂಗಿಯರ ಮಕ್ಕಳನ್ನೇ ಹುಡುಕುತ್ತಾರೆ. ಸ್ವಜಾತಿ ಒಂದೆಡೆ ಇರಲಿ, ಇವರಿಗೆ ಸ್ವವಂಶದ ಮರಿಗಳೇ ಬೇಕು. ತಾವು ಆಗಿ ಹೋದರೂ ತಮ್ಮ ವಂಶಸ್ಥರ ಕೈಗೇ ಮಠದ ಆಸ್ತಿ ಹೋಗಲಿ ಎಂಬ ಆಸೆ ಇವರದು. ಎಂಥ ಸಂನ್ಯಾಸ? ಎಂಥ ಜಗದ್ಗುರುತ್ವ?
ಹಿಂದೂ ಧರ್ಮದಲ್ಲಿ ಇವತ್ತು ಜಾತಿಗಳೇ ಧರ್ಮಗಳಾಗಿವೆ. ಜಾತಿಯನ್ನು ಒಪ್ಪಿಕೊಂಡವರಷ್ಟೆ ಈ ಧರ್ಮದಲ್ಲಿ ಇರಲು ಸಾಧ್ಯ. ಈ ಜಾತಿ ಬಂಧನದ ಧರ್ಮನೇತಾರರು ಹೇಗೆ ಜಾತ್ಯತೀತರಾಗಲು ಸಾಧ್ಯ? ಬಹುತೇಕ ವೀರಶೈವ ಮಠಾಧೀಶರು ಅಜ್ಞಾನದಿಂದಲೋ, ಅನುಕೂಲಕ್ಕಾಗಿಯೋ ವೀರಶೈವವನ್ನೂ ಹಿಂದೂ ಧರ್ಮದ ಭಾಗ ಎಂದು ಪರಿಗಣಿಸುತ್ತಾರೆ. ಹೀಗಾಗಿ ಅವರೂ ಸಹ ಈ ಜಾತಿ ವ್ಯವಸ್ಥೆಯನ್ನು ಸಾರಾಸಗಟಾಗಿ ಒಪ್ಪಿಕೊಂಡವರೇ ಆಗಿದ್ದಾರೆ. ಹೀಗಾಗಿ ಹಿಂದೂ, ವೀರಶೈವ, ಬ್ರಾಹ್ಮಣ ಹೀಗೆ ಧರ್ಮಭೇದವಿಲ್ಲದೆ ಬಹುತೇಕ ಎಲ್ಲ ಮಠಗಳಲ್ಲೂ ಇಂದಿಗೂ ಅಸ್ಪೃಶ್ಯತೆ ಜೀವಂತವಾಗಿದೆ. ಈ ಮಠಗಳಿಗೆ ಇನ್ನೂ ದಲಿತರಿಗೆ ಪ್ರವೇಶವಿಲ್ಲ. ಎಲ್ಲ ಜಾತಿಯವರನ್ನು ಒಟ್ಟಿಗೆ ಕೂರಿಸಿ ಊಟ ಹಾಕುವ ಕನಿಷ್ಠ ಮಾನವೀಯತೆಯೂ ಈ ಮಠಗಳಿಗಿಲ್ಲ.
ಈ ಮಠಗಳ ಶಿಕ್ಷಣಸಂಸ್ಥೆಗಳಲ್ಲಿ ಜಾತಿಬಂಧುಗಳಿಗೆ ಹೆಚ್ಚಿನ ಆದ್ಯತೆ, ಅದರಲ್ಲೂ ಅದೇ ಉಪಜಾತಿಯವರಿಗೆ ಮಾತ್ರ ಅಲ್ಲಿ ಅಗ್ರತಾಂಬೂಲ. ಅಲ್ಲಿನ ಗುಡಿಗುಂಡಾರಗಳಲ್ಲಿ ಪೂಜಿಸುವವರು ಆಯಾ ಜಾತಿಯವರೇ ಆಗಿರುತ್ತಾರೆ; ಅಥವಾ ವೈದಿಕಧರ್ಮದ ಗುಲಾಮಗಿರಿಯನ್ನು ಒಪ್ಪಿಕೊಂಡವರು ಬ್ರಾಹ್ಮಣರಿಂದ ಪೂಜೆ ಮಾಡಿಸುತ್ತಾರೆ.
ಇವರನ್ನು ಜಾತಿಪ್ರೇಮಿಗಳೆನ್ನದೆ ಇನ್ನೇನು ಹೇಳಲು ಸಾಧ್ಯ?
ಇಷ್ಟು ಮಾತ್ರವಲ್ಲ, ಇವತ್ತು ದೇಶದಲ್ಲಿ ಜಾತಿ ವ್ಯವಸ್ಥೆ ಇಷ್ಟು ಪ್ರಬಲವಾಗಿ ಉಳಿದುಕೊಂಡಿರುವುದಕ್ಕೆ ಕಾರಣವಾಗಿರುವುದೇ ಈ ಮಠಾಧೀಶರು. ತಂತಮ್ಮ ಜಾತಿಗಳನ್ನು ಪೋಷಿಸುತ್ತ ಜಾತಿಯ ಬಂಧನಗಳನ್ನು ಬಿಗಿಗೊಳಿಸಿರುವುದು ಈ ಮಠಾಧೀಶರೇ. ಮಠಾಧೀಶರಿಲ್ಲದೇ ಹೋಗಿದ್ದರೆ ಕಾಲಾಂತರಲ್ಲಿ ಜಾತಿ ವ್ಯವಸ್ಥೆಯೂ ಸಹಜವಾಗಿ ಶಿಥಿಲಗೊಳ್ಳುತ್ತ ಹೋಗುತ್ತಿತ್ತು. ಆಗ ಕಡೇ ಪಕ್ಷ ಸಾಮಾಜಿಕ ಶೋಷಣೆ, ಅಸಮಾನತೆಗಳಾದರೂ ದೂರವಾಗುತ್ತಿದ್ದವು.
ನಾನು ಮೊದಲೇ ಹೇಳಿದಂತೆ ಮಠೀಯ ವ್ಯವಸ್ಥೆಯೇ ಆತ್ಮವಂಚನೆಯದ್ದು. ಅದು ಯಥಾಸ್ಥಿತಿಯನ್ನು ಬಯಸುತ್ತದೆ, ಪರಿವರ್ತನೆಯನ್ನಲ್ಲ. ಪರಿವರ್ತನೆಯ ಬಗ್ಗೆ ಇವರು ಗಂಟೆಗಟ್ಟಲೆ ಮಾತನಾಡುತ್ತಾರೆ. ಆದರೆ ಅದನ್ನು ಪಾಲಿಸುವ ವಿಧಾನ ಇವರಿಗೆ ತಿಳಿದಿಲ್ಲ.
ಕುಮಾರಸ್ವಾಮಿಯವರು ಹೇಳಿದ್ದು ನಿಜ;
ಮಠಾಧೀಶರು ಜಾತಿಪ್ರೇಮಿಗಳೇ ಹೌದು. ಅದು ಈ ಕ್ಷಣದ ಕಟುಸತ್ಯ. ಇದು ಬದಲಾಗುವ ಯಾವ ಲಕ್ಷಣವೂ ಸದ್ಯಕ್ಕೆ ಕಾಣುತ್ತಿಲ್ಲ.
Subscribe to:
Posts (Atom)