Thursday, July 24, 2008

ಜಾಲಹಳ್ಳಿಯ ಲಕ್ಷ್ಮಿಗೆ ನ್ಯಾಯ ಕೊಡಿಸುವವರು ‍ಯಾರು?

ಆಪ್ ಕೊ ಬಿಲ್‌ಕುಲ್ ಶರಮ್ ನಹೀ ಎಂಬ ನನ್ನ ಲೇಖನಕ್ಕೆ ಡೆಕ್ಕನ್ ಹೆರಾಲ್ಡ್ ವರದಿಗಾರ ಸತೀಶ್ ಶಿಲೆ ಪ್ರತಿಕ್ರಿಯಿಸಿದ್ದಾರೆ. ಜಾಲಹಳ್ಳಿಯಲ್ಲಿ ನಡೆದ ಲಕ್ಷ್ಮಿ ಕೊಲೆಯನ್ನು ಉಲ್ಲೇಖಿಸಿ, ನಮ್ಮ ಮೀಡಿಯಾಗಳ ಇಬ್ಬಂದಿತನವನ್ನು ಬಯಲಾಗಿಸಿದ್ದಾರೆ. ಅವರ ಪ್ರತಿಕ್ರಿಯೆ ಹೀಗಿದೆ:

``write-up on arushi murder is timely. media should have little bit decensy. the whole electronic media went on putting up concocted stories on aurshi murder. but in case of gang rape and murder of 13-year old Lakshmi, daughter of poor parents in Jalahalli, the media behaved as if it is not at all concerned. If Arushi and Lakshmi had born in same place, they would have been studying in a same school. Newspapers dismissed the story as a routine crime report, while electronic media remained mum. Just because Lakshmi’s is not a high-profile case. You don’t have doctor-father for Lakshmi to drag him to the incident.
It is true hamko bilkul sharam nahi...’’

ಸತೀಶ್ ಶಿಲೆಯವರ ಅಭಿಪ್ರಾಯವನ್ನು ಮತ್ತಷ್ಟು ವಿಸ್ತರಿಸುವ ಪ್ರಯತ್ನ ಇಲ್ಲಿದೆ.

ಲಕ್ಷ್ಮಿಗೂ ನ್ಯಾಯ ಬೇಡವೇ?

ಬೆಂಗಳೂರಿನ ಜಾಲಹಳ್ಳಿಯಲ್ಲಿ ೧೩ ವರ್ಷದ ಲಕ್ಷ್ಮಿಯನ್ನು ಬಿಹಾರಿ ದುರುಳರು ಹರಿದು ತಿಂದು ಮೂರು ದಿನಗಳಾದವು. ಪೊಲೀಸ್ ಇಲಾಖೆಯ ಮಾಹಿತಿಯ ಪ್ರಕಾರ ಇದುವರೆಗೆ ಯಾರನ್ನೂ ಅಧಿಕೃತವಾಗಿ ಬಂಧಿಸಲಾಗಿಲ್ಲ.

ಕಳೆದ ಸೋಮವಾರ ಮೂಲತಃ ಗುಲ್ಬರ್ಗ ಜಿಲ್ಲೆಯ ಶಿವರಾಯಪ್ಪ ಎಂಬುವವರ ಪುತ್ರಿ ಏಳನೇ ತರಗತಿಯಲ್ಲಿ ಓದುತ್ತಿದ್ದ ಲಕ್ಷ್ಮಿ ಕೊಲೆಯಾದಳು. ಆಕೆ ಇತ್ತೀಚಿಗಷ್ಟೆ ಬೆಂಗಳೂರಿನ ಆಕೆಯ ದೊಡ್ಡಪ್ಪನ ಗುಡಿಸಲು ಸೇರಿಕೊಂಡಿದ್ದಳು. ಎಚ್.ಎಂ.ಟಿ.ಶಾಲೆಯಲ್ಲಿ ಆಕೆಯನ್ನು ಸೇರಿಸಲಾಗಿತ್ತು.

ಶಾಲೆ ಆರಂಭವಾಗುತ್ತಿದ್ದದ್ದು ಬೆಳಿಗ್ಗೆ ಏಳುವರೆ ಗಂಟೆಗೆ. ಹಾಗಾಗಿ ಆಕೆ ಆರೂವರೆಗೆ ಎದ್ದು ಬಹಿರ್ದೆಸೆಗೆ ಹೊರಟಿದ್ದಳು. ಮನೆಯೊಳಗೆ ವ್ಯವಸ್ಥೆ ಇಲ್ಲದ್ದರಿಂದ ಆಕೆಗೂ, ಆಕೆಯ ಮನೆಯವರಿಗೂ ಹೊರಗಿನ ಬಯಲೇ ಬಹಿರ್ದೆಸೆಯ ತಾಣ.

ಲಕ್ಷ್ಮಿ ವಾಸಿಸುತ್ತಿದ್ದ ಜೋಪಡಿಯ ಸಮೀಪವೇ ಅಪಾರ್ಟ್‌ಮೆಂಟ್‌ಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇಂಥ ಅಪಾರ್ಟ್‌ಮೆಂಟ್‌ಗಳ ಕಾರ್ಪೆಂಟರಿ ಕೆಲಸ, ಟೈಲ್ಸ್ ಜೋಡಿಸುವ ಕೆಲಸಗಳಿಗೆ ಬಿಲ್ಡರ್‌ಗಳು ಬಿಹಾರದ ಜನರನ್ನು ಕರೆಸುತ್ತಾರೆ. ಈ ಭಾಗದಲ್ಲೂ ಸಾವಿರಾರು ಬಿಹಾರಿ ಕೂಲಿಕಾರ್ಮಿಕರಿದ್ದಾರೆ.
ಲಕ್ಷ್ಮಿ ದಿನವೂ ಬಹಿರ್ದೆಸೆಗೆ ಬಯಲಿಗೆ ಹೋಗುವುದನ್ನು ಕೆಲ ದುರುಳರು ನೋಡಿಕೊಂಡಿದ್ದಾರೆ. ಸೋಮವಾರ ಆಕೆ ಅಲ್ಲಿ ಪೊದೆಯ ಬಳಿಗೆ ಹೋದಾಗ ಸಾಮೂಹಿಕ ಅತ್ಯಾಚಾರ ನಡೆದಿದೆ. ಸಹಾಯಕ್ಕೆ ಮೊರೆಯಿಡಲು ಆಕೆ ಕೂಗಿಕೊಂಡಾಗ ಬಾಯಿಯೊಳಗೆ ಹುಲ್ಲು ತುಂಬಿ ಆಕೆಯ ಧ್ವನಿಯನ್ನು ಅಡಗಿಸಲಾಗಿದೆ. ಅಷ್ಟಕ್ಕೆ ಬಿಡದೆ ಆಕೆಯ ಕತ್ತು ಹಿಸುಕಿ ಅಲ್ಲೇ ಕೊಂದುಹಾಕಲಾಗಿದೆ.

ಎಷ್ಟು ಹೊತ್ತಾದರೂ ಲಕ್ಷ್ಮಿ ಹಿಂದಿರುಗಿ ಬಾರದೇ ಇದ್ದಾಗ ಮನೆಯವರು ಹುಡುಕಲು ತೊಡಗಿದಾಗ ಕಂಡದ್ದು ಹೃದಯವಿದ್ರಾವಕ ದೃಶ್ಯ. ನಂತರ ಪೊಲೀಸರು ಬಂದು ಮಹಜರು ಮಾಡಿ ತನಿಖೆ ಆರಂಭಿಸಿದ್ದಾರೆ.

ಉತ್ತರಪ್ರದೇಶದ ನೋಯ್ಡಾದಲ್ಲಿ ಅರುಷಿ ಎಂಬ ಬಾಲಕಿಯ ಕೊಲೆಯೂ ಹೀಗೇ ಆಗಿತ್ತಲ್ಲವೇ? ಆಕೆಯೂ ಹೆಚ್ಚುಕಡಿಮೆ ಲಕ್ಷ್ಮಿಯ ವಯಸ್ಸಿನವಳೇ. ಅರುಷಿ ಮೇಲೆ ಅತ್ಯಾಚಾರ ಪ್ರಯತ್ನ ನಡೆಯಿತು, ಆದರೆ ಲಕ್ಷ್ಮಿ ಅತ್ಯಾಚಾರಕ್ಕೆ ಒಳಗಾದಳು. ಇಬ್ಬರೂ ಕೊಲೆಯಾದರು. ಇಬ್ಬರೂ ಭಾರತೀಯ ಹೆಣ್ಣುಮಕ್ಕಳು. ಇಬ್ಬರೂ ರಕ್ತಮಾಂಸ ಇದ್ದವರೇ.

ಆದರೆ ವಿಚಿತ್ರವೆಂದರೆ ಅರುಷಿಗೆ ನ್ಯಾಯ ಕೊಡಿಸಲು ತಿಂಗಳುಗಟ್ಟಲೆ ಹೆಣಗಾಡಿದ ಇಂಗ್ಲಿಷ್, ಹಿಂದಿ ಎಲೆಕ್ಟ್ರಾನಿಕ್ ಮಾಧ್ಯಮಗಳೆಲ್ಲ ಎಲ್ಲಿ ಹೋದವು? ೨೪ ಗಂಟೆ ಸುದ್ದಿ ಕುಟ್ಟುತ್ತಿದ್ದ ನ್ಯೂಸ್ ಚಾನೆಲ್‌ಗಳ ವರದಿಗಾರರೆಲ್ಲ ಏನಾಗಿ ಹೋದರು? ಯಾಕೆ ಲಕ್ಷ್ಮಿ ಪ್ರಕರಣ ಸುದ್ದಿ ಮಾಡುತ್ತಿಲ್ಲ? ಆಕೆಗೆ ನ್ಯಾಯ ಕೊಡಿಸಲು ಯಾರೂ ಯಾಕೆ ಮುಂದೆ ಬರುತ್ತಿಲ್ಲ? ಲಕ್ಷ್ಮಿ ಎಂಬ ೧೩ ವರ್ಷದ ಹೆಣ್ಣುಮಗಳನ್ನು ಬರ್ಬರವಾಗಿ ಅತ್ಯಾಚಾರವೆಸಗಿ ಕೊಲೆಗೈಯಲಾಯಿತು ಎಂಬ ಸಣ್ಣಸುದ್ದಿಯೂ ಹಿಂದಿ-ಇಂಗ್ಲಿಷ್ ಮಾಧ್ಯಮಗಳಲ್ಲಿ ಪ್ರಸಾರವಾಗಲಿಲ್ಲವೇಕೆ?

ಲಕ್ಷ್ಮಿ ಕೂಲಿ ಮಾಡುವ ಕುಟುಂಬ ಹುಡುಗಿ. ಆಕೆಯ ತಂದೆ ಡಾಕ್ಟರ್ ಅಥವಾ ಸಾಫ್ಟ್‌ವೇರ್ ಇಂಜಿನಿಯರ್ ಅಲ್ಲ. ನೆನಪಿಸಿಕೊಳ್ಳಿ, ಈ ಮೀಡಿಯಾಗಳು ಬೆನ್ನು ಹತ್ತಿದ ಕೊಲೆಕೇಸುಗಳಲ್ಲಿ ಸತ್ತವರು ಅಥವಾ ಸಾಯಿಸಿದವರು ಇಂಥ ಶ್ರೀಮಂತ ಹಿನ್ನೆಲೆಯವರೇ ಆಗಿದ್ದಾರೆ. ಹಿಂದೆ ಬೆಂಗಳೂರಿನ ಕಾಲ್‌ಸೆಂಟರ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಪ್ರತಿಭಾ ಎಂಬಾಕೆ ಕೊಲೆಯಾದಾಗ ಇದೇ ಮೀಡಿಯಾಗಳು ಅಬ್ಬರದ ಸುದ್ದಿಗಳನ್ನು ಮಾಡಿದ್ದವು. ಯಾಕೆಂದರೆ ಆಕೆ ಕಾರ್ಪೊರೇಟ್ ರಂಗದೊಂದಿಗೆ ನೇರ ಸಂಬಂಧವಿದ್ದಾಕೆ. ಜೆಸ್ಸಿಕಾಲಾಲ್ ಮಾಡೆಲ್ ಆಗಿದ್ದರಿಂದ, ನಿತಿಶ್ ಕಟಾರಾ ಕೊಂದವರು ರಾಜಕಾರಣಿಗಳಾಗಿದ್ದರಿಂದ ಇವೆಲ್ಲವೂ ಭರ್ಜರಿ ಸುದ್ದಿಗಳಾದವು. ಪ್ರಿಯದರ್ಶಿನಿ ಮಟ್ಟೂ ಪ್ರಕರಣವೂ ಇದಕ್ಕೆ ಹೊರತೇನಲ್ಲ.

ಬಡಪಾಯಿ ಲಕ್ಷ್ಮಿಗೆ ಯಾವ ಹಿನ್ನೆಲೆಯೂ ಇಲ್ಲ. ಆಕೆಯ ಅಪ್ಪ ಹೊಸಕೋಟೆಯ ಕೋಳಿಫಾರಂ ಒಂದರಲ್ಲಿ ಕೂಲಿ ಕೆಲಸ ಮಾಡುತ್ತಾರೆ. ದೊಡ್ಡಪ್ಪನೂ ಕೂಲಿ ಕೆಲಸವನ್ನೇ ಮಾಡುತ್ತಿದ್ದರು. ಇಂಥವರ ಕೊಲೆ ಸುದ್ದಿ ಪ್ರಸಾರ ಮಾಡಿದರೆ ಯಾವ ಚಾನೆಲ್‌ನ ಟಿಆರ್‌ಪಿ ಹೆಚ್ಚಾಗುವುದಿಲ್ಲ. ಹೀಗಾಗಿ ಸತ್ತವರು ಒಂದೇ ವಯಸ್ಸಿನ ಹೆಣ್ಣುಮಕ್ಕಳಾದರೂ ಯಾವ ಕೊಲೆಯಿಂದ ಲಾಭವೋ ಆ ಕೊಲೆಯ ಸುದ್ದಿಯಷ್ಟೆ ಪ್ರಸಾರವಾಗುತ್ತದೆ. ಲಾಭವಿಲ್ಲದ ಕೊಲೆಯ ಸುದ್ದಿ ಸತ್ತುಹೋಗುತ್ತದೆ.

ಬಿಹಾರಿಗಳಿಗೆ ಬುದ್ಧಿ ಕಲಿಸುವವರು ‍ಯಾರು?
ಲಕ್ಷ್ಮಿ ಅತ್ಯಾಚಾರ-ಕೊಲೆಯಲ್ಲಿ ಬಿಹಾರಿಗಳೇ ಪಾಲ್ಗೊಂಡಿದ್ದಾರೆ ಎಂಬುದು ಈಗಾಗಲೇ ಚಾಲ್ತಿಯಲ್ಲಿರುವ ಸುದ್ದಿ. ಪೊಲೀಸ್ ಇಲಾಖೆಯ ಮೂಲಗಳ ಪ್ರಕಾರ ಕಟ್ಟಡ ನಿರ್ಮಾಣ ಕೆಲಸ ಮಾಡುವ ಸುಮಾರು ೨೦೦ಕ್ಕೂ ಹೆಚ್ಚು ಬಿಹಾರಿ ಯುವಕರನ್ನು ಈಗಾಗಲೇ ವಿಚಾರಣೆ ಮಾಡಲಾಗಿದೆಯಂತೆ. ಆದರೂ ಕೊಲೆಗಡುಕರು ಸಿಕ್ಕಿಲ್ಲ.

ಬಿಹಾರಿಗಳ ಈ ಬಗ್ಗೆಯ ವರ್ತನೆ ಹೊಸದೇನೂ ಅಲ್ಲ. ಅವರು ಪದೇ ಪದೇ ಗುಲ್ಬರ್ಗದಿಂದ ವಲಸೆ ಬಂದಿರುವ ಕನ್ನಡಿಗ ಕಾರ್ಮಿಕರ ಜತೆ ಜಗಳಕ್ಕೆ ಬೀಳುತ್ತಾರೆ. ಹೀಗೆ ಜಗಳ ನಡೆದಾಗ ಅವರ ನಿಜವಾದ ಟಾರ್ಗೆಟ್ ಹೆಣ್ಣುಮಕ್ಕಳೇ ಆಗಿರುತ್ತಾರೆ.

ಕೆಲ ತಿಂಗಳುಗಳ ಹಿಂದೆ ಮಾರತ್‌ಹಳ್ಳಿ ರಸ್ತೆಯ ಕುಂದನಹಳ್ಳಿ ಗೇಟ್ ಸಮೀಪ ತೂಪನಹಳ್ಳಿ ಕಾಲೋನಿಯಲ್ಲಿ ಒಂದು ಪ್ರಕರಣ ನಡೆದಿತ್ತು. ಬಿಹಾರಿ ಗೂಂಡಾಗಳು ರಾತ್ರಿ ಗುಲ್ಬರ್ಗ ಮೂಲದ ಕನ್ನಡಿಗರು ವಾಸಿಸುವ ಪ್ರದೇಶದ ಮೇಲೆ ದಾಳಿ ನಡೆಸಿ, ಗಂಡಸರನ್ನು ಹಿಡಿದು ಹೊಡೆದು, ಹೆಂಗಸರ ಸೀರೆ, ಬಟ್ಟೆಗಳನ್ನು ಎಳೆದಾಡಿದ್ದರು. ಓರ್ವ ಹೆಣ್ಣುಮಗಳ ಮೇಲೆ ಅತ್ಯಾಚಾರಕ್ಕೂ ಯತ್ನಿಸಿದ್ದರು.

ಕರ್ನಾಟಕ ರಕ್ಷಣಾ ವೇದಿಕೆಯ ಬಸವರಾಜ ಪಡುಕೋಟಿ ನೇತೃತ್ವದಲ್ಲಿ ಒಂದು ಬೃಹತ್ ಹೋರಾಟವೂ ನಡೆದಿತ್ತು. ಪೊಲೀಸ್ ಠಾಣೆಯಲ್ಲಿ ಮೊಕದ್ದಮೆಯೂ ದಾಖಲಾಗಿತ್ತು.

ಈಗ ಇದೆಲ್ಲವೂ ಯಾಕೋ ಮಿತಿಮೀರುತ್ತಿರುವ ಹಾಗಿದೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಅಪರಾಧ ಪ್ರಕರಣಗಳಲ್ಲಿ ಹೆಚ್ಚು ಹೆಚ್ಚು ಭಾಗವಹಿಸುತ್ತಿರುವವರು ಬಿಹಾರ, ಉತ್ತರಪ್ರದೇಶ ಕಡೆಯಿಂದ ವಲಸೆ ಬಂದವರು. ನಾರ್ಥಿಗಳ ಈ ಬಗೆಯ ಉಪಟಳಗಳಿಂದಲೇ ಬಹುಶಃ ರಾಜ್ ಠಾಕ್ರೆ ಮಹಾರಾಷ್ಟ್ರದಲ್ಲಿ ಇವರ ವಿರುದ್ಧ ಸಮರ ಸಾರಿದ್ದಾರೆ ಎನಿಸುತ್ತದೆ.

ದುರಂತವೆಂದರೆ ಲಕ್ಷ್ಮಿ ಪ್ರಕರಣದಲ್ಲಿ ಆಕೆಯ ಪರವಾಗಿ ಧ್ವನಿಯೆತ್ತುವವರೇ ಯಾರೂ ಇಲ್ಲದಂತಾಗಿದೆ. ಆಕೆಯ ಸಾವು ಯಾರನ್ನೂ ಭಾದಿಸಿಲ್ಲವೇಕೆ ಎಂಬುದೇ ಆಶ್ಚರ್ಯ.

ಬೆಂಗಳೂರಿನ ವಿಚಿತ್ರವೆಂದರೆ ಹೊರರಾಜ್ಯಗಳಿಂದ, ದೇಶಗಳಿಂದ ಇಲ್ಲಿಗೆ ವಲಸೆ ಬಂದವರಿಗೆ ಇಲ್ಲಿ ಬಗೆಯ ರಕ್ಷಣೆ ದೊರೆಯುತ್ತದೆ. ಆದರೆ ನಮ್ಮದೇ ರಾಜ್ಯದ ಮೂಲೆಮೂಲೆಯಿಂದ ಬದುಕು ಅರಸಿ ರಾಜಧಾನಿಗೆ ಬಂದವರ ಕಷ್ಟ ಕೇಳುವವರು, ಹೇಳುವವರು ಯಾರೂ ಇಲ್ಲ.
ಇದೆಂಥ ವ್ಯಂಗ್ಯ?

ಬಿಹಾರಿಗಳೇ, ನೆಟ್ಟಗೆ ಬದುಕುವುದಾದರೆ ಇಲ್ಲಿರಿ, ಇಲ್ಲದಿದ್ದರೆ ಅಂಡಿನ ಮೇಲೆ ಒದ್ದು ಇಲ್ಲಿಂದ ಓಡಿಸುತ್ತೇವೆ ಎಂದು ಯಾರೂ ಯಾಕೆ ಹೇಳುತ್ತಿಲ್ಲ?

Wednesday, July 23, 2008

ಐಟಿ-ಬಿಟಿಗಳು ಹಾಗು ನಮ್ಮ ಮುಖ್ಯಮಂತ್ರಿಗಳು....

ಇಂದು ಸಂಜೆ (೨೩-೭-೨೦೦೮) ಎಂಟು ಗಂಟೆಗೆ ಐಟಿ ಮತ್ತು ಬಿಟಿ ಕ್ಷೇತ್ರದ ದಿಗ್ಗಜರೊಂದಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚರ್ಚೆ ನಡೆಸಲಿದ್ದಾರೆ. ಓಬೆರಾಯ್ ಹೋಟೆಲ್‌ನಲ್ಲಿ ಈ ಸಭೆ ಏರ್ಪಾಟಾಗಿದೆ.

ನೂತನ ಮುಖ್ಯಮಂತ್ರಿಗಳು ಎಲ್ಲ ಕ್ಷೇತ್ರದ ನಾಯಕರೊಂದಿಗೆ ಹೀಗೆ ಔಪಚಾರಿಕವಾಗಿ ಚರ್ಚೆ ಮಾಡುವುದು ಪರಿಪಾಠ. ಇತ್ತೀಚಿನ ವರ್ಷಗಳಲ್ಲಿ ಐಟಿ-ಬಿಟಿ ಕ್ಷೇತ್ರದವರಿಗೆ ಸರ್ಕಾರಗಳು ಹೆಚ್ಚು ಎತ್ತರದ ಮಣೆ ಹಾಕುತ್ತವೆ. ಅದು ಕೂಡ ಸಹಜವೇ. ಐಟಿ-ಬಿಟಿ ಇವತ್ತಿನ ಓಡುತ್ತಿರುವ ಕುದುರೆ. ಅದು ಓಡುತ್ತಿರುವವರೆಗೆ ಅದನ್ನು ಮುದ್ದು ಮಾಡುವವರಿಗೆ ಬರವಿರುವುದಿಲ್ಲ. ಈ ಕುದುರೆ ಯಾವತ್ತು ಕಾಲು ಮುರಿದುಕೊಳ್ಳುತ್ತದೋ, ಯಾವತ್ತು ಕುಂಟುತ್ತದೋ, ಇನ್ನ್ಯಾವತ್ತು ಸುಸ್ತಾಗಿ ಮಲಗಿಬಿಡುತ್ತದೋ (ಹಾಗಾಗದಿರಲಿ) ಗೊತ್ತಿಲ್ಲ.

ಆದರೆ ಸಮಸ್ಯೆಯಿರುವುದು ಕುದುರೆಯ ಮನೋಧರ್ಮವೇನು ಎಂಬುದು. ಸಾಕು ಸಾಕೆನ್ನುವಷ್ಟು ಮೇವು, ಉದ್ದೀಪನ ಔಷಧಗಳು ದಕ್ಕಿರುವುದರಿಂದ ಈ ಕುದುರೆ ನಮ್ಮ ಕಣ್ಣಿಗೆ ಆಗಾಗ ಹುಚ್ಚುಕುದುರೆಯಂತೆ ಕಂಡಿದ್ದೇ ಹೆಚ್ಚು. ಕುದುರೆಯನ್ನು ಪ್ರೀತಿಸೋಣ, ಆದರೆ ಹುಚ್ಚುಕುದುರೆಯನ್ನು ಯಾರಾದರೂ, ಎಂದಾದರೂ ಕಟ್ಟಿ ಹಾಕಿ ಸರಿದಾರಿಗೆ ತರಲೇಬೇಕಲ್ಲವೆ?

ಮುಖ್ಯಮಂತ್ರಿಗಳ ಸಭೆಯ ವಿಷಯಕ್ಕೆ ಬರೋಣ. ಇವತ್ತು ಸಭೆಯಲ್ಲಿ ಐಟಿ-ಬಿಟಿ ಲೀಡರುಗಳು ಏನೇನು ಮಾತನಾಡಲಿದ್ದಾರೆ ಎಂಬುದನ್ನು ಈ ರಾಜ್ಯದ ಸಾಮಾನ್ಯ ಜನರೂ ಊಹಿಸಬಲ್ಲರು. ಅವರ ಬೇಡಿಕೆಗಳೇನು ಎಂಬುದು ಎಲ್ಲರಿಗೂ ಸುಸ್ಪಷ್ಟ.

ಅವರು ಕೇಳುತ್ತಾರೆ “ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಆರಂಭವೇನೋ ಆಯಿತು. ಆದರೆ ಅಲ್ಲಿಗೆ ಹೋಗುವುದಕ್ಕೆ ರಸ್ತೆ ಸರಿಯಿಲ್ಲವಲ್ಲ, ಅದೇನು ಮಾಡ್ತೀರೋ ಗೊತ್ತಿಲ್ಲ ಮೊದಲು ಸಿಟಿಯಿಂದ ಅರ್ಧ ಗಂಟೆಯಲ್ಲಿ ಅಲ್ಲಿಗೆ ಹೋಗುವಂತೆ ಒಂದು ರಸ್ತೆ ಮಾಡಿ. ಬೆಂಗಳೂರು ತುಂಬ ರಸ್ತೆಗಳು ಕಿರಿದಾಗಿದೆ. ನೀವು ಮೆಟ್ರೋ, ಮೊನೋ ಇತ್ಯಾದಿ ರೈಲುಗಳನ್ನು ಬಿಡುವ ಮೊದಲು ಫ್ಲೈ ಓವರ್‌ಗಳನ್ನು ಮಾಡಿ. ನಮಗೂ ಈ ಟ್ರಾಫಿಕ್‌ನಲ್ಲಿ ನಿಂತುನಿಂತು ರೋಸೊತ್ತು ಹೋಗಿದ್ದೇವೆ.

ನಮ್ಮ ಇಂಟರ್‌ನ್ಯಾಷನಲ್ ಗ್ರಾಹಕರು ಬೆಂಗಳೂರಿಗೆ ಬಂದರೆ ಎಂಥ ಪರದಾಟ ನಿಮಗೆ ಗೊತ್ತೆ? ಮೂರು-ನಾಲ್ಕು ಗಂಟೆ ಟ್ರಾಫಿಕ್‌ನಲ್ಲಿ ಅವರು ಸಿಕ್ಕಿ ಬಿದ್ದರೆ ಬ್ಯಾಂಗಲೂರ್‌ನ ಇಮೇಜ್‌ನ ಗತಿಯೇನು?

ನಾವು ನಮ್ಮ ಬಿಜಿನೆಸ್ ಬೆಳೆಸಲು ಯತ್ನಿಸುತ್ತಿದ್ದೇವೆ. ಆದರೆ ನಿಮ್ಮ ಕಡೆಯಿಂದ ಬೆಂಬಲ ಇಲ್ಲ. ನಮಗೆ ಭೂಮಿ ಬೇಕು. ನಾವೇ ತೆಗೆದುಕೊಳ್ಳೋಣ ಎಂದರೆ ಭೂಮಿ ಎಲ್ಲಿದೆ? ನೀವು ಸರ್ಕಾರದವರು ರೈತರ ಭೂಮಿ ನೋಟಿಫೈ ಮಾಡಿ ನಮಗೆ ಕೊಡಿ. ಆ ರೈತರಿಗೆ ಅದೇನು ಸರ್ಕಾರಿ ಲೆಕ್ಕದಲ್ಲಿ ಕೊಡಬೇಕೋ ಕೊಡಿ. ನಾವು ದೇಶಸೇವೆಯ ಕೆಲಸ ಮಾಡುತ್ತಿರುವುದರಿಂದ ಭೂಮಿಗೆ ನಮ್ಮಿಂದ ಬೆಲೆ ಪಡೆದುಕೊಳ್ಳಬೇಡಿ. ತೆಗೆದುಕೊಂಡರೂ ನಾಮಿನಲ್ ಆಗಿ ಅದೇನು ಆಗುತ್ತದೋ ಕೊಡ್ತೀವಿ ಬಿಡಿ.

ಅದ್ಯಾಕೆ ನೀವು ಬ್ಯಾಂಗಲೂರನ್ನು ಬೆಂಗಳೂರು ಮಾಡಲು ಹೊರಟಿದ್ದೀರಿ. ಅದೆಲ್ಲ ಬೇಡ. ಬ್ಯಾಂಗಲೂರೇ ಚೆನ್ನಾಗಿದೆ. ಅದನ್ನೇ ಉಳಿಸಿಕೊಳ್ಳೋಣ. ಕನ್ನಡ, ಕನ್ನಡ ಅಂಥ ದಯಮಾಡಿ ತಲೆತಿನ್ನಬೇಡಿ. ಇದು ಇಂಗ್ಲಿಷ್ ಯುಗ. ಬೆಂಗಳೂರು ಸಂಪೂರ್ಣ ಇಂಗ್ಲಿಷ್ ಸಿಟಿಯಾಗಬೇಕು. ನಿಮ್ಮ ಸರ್ಕಾರಿ ಶಾಲೆಯಲ್ಲಿ ಕನ್ನಡ ಕಲಿಸುವ ಬದಲು ಇಂಗ್ಲಿಷ್ ಕಲಿಸಿ. ದೇಶ ಉದ್ಧಾರವಾಗುತ್ತದೆ.

ಕನ್ನಡಿಗರಿಗೆ ಉದ್ಯೋಗ ಅದೂ, ಇದೂ ಎಂದು ಹಿಂಸೆ ಕೊಡಬೇಡಿ. ನಾವು ಅರ್ಹತೆ, ಯೋಗ್ಯತೆ ಮೇಲೆ ಕೆಲಸ ಕೊಡುವವರು. ಕನ್ನಡಿಗರಿಗೆ ಅರ್ಹತೆ, ಯೋಗ್ಯತೆ ಇಲ್ಲದಿದ್ದರೆ ನಾವೇನು ಮಾಡೋದು? ಬೇರೆ ರಾಜ್ಯಗಳಿಂದ ಕರೆದುಕೊಂಡು ಬಂದು ಉದ್ಯೋಗ ಕೊಡ್ತೀವಿ.

ಸಣ್ಣ ಪುಟ್ಟ ಕೆಲಸಗಳು, ಉದಾಹರಣೆಗೆ ಕ್ಯಾಟರಿಂಗ್, ಸೆಕ್ಯುರಿಟಿ, ಮೇಟೇಂನೆನ್ಸ್ ಇತ್ಯಾದಿ ಕೆಲಸಗಳಿಗೆ ನಾವು ಹೊರರಾಜ್ಯದ ಸಂಸ್ಥೆಗಳಿಗೆ ಗುತ್ತಿಗೆ ಕೊಡ್ತಿವಿ. ಯಾಕೆಂದರೆ ಲೋಕಲ್‌ನವರಾದರೆ ಕಿರಿಕ್ಕು. ಹಾಗಾಗಿ ಡಿ ದರ್ಜೆಯ ನೌಕರಿಯೆಲ್ಲ ಬೇರೆ ರಾಜ್ಯದವರಿಗೆ ಸಿಗುತ್ತದೆ. ಬೇಜಾರು ಮಾಡಿಕೊಳ್ಳಬೇಡಿ, ಅಡ್ಜಸ್ಟ್ ಮಾಡ್ಕೊಳ್ಳಿ.

ಬೆಂಗಳೂರಿನಲ್ಲಿ ಆಗಾಗ ಕನ್ನಡ ಸಂಘದವರು, ದಲಿತರು ಪ್ರತಿಭಟನೆ, ಧರಣಿ ಮಾಡ್ತಾರೆ. ಅವರಿಗೆಲ್ಲ ಬೆಂಗಳೂರಿನ ಹೊರಗೆ ಸ್ವಲ್ಪ ಜಾಗ ಮಾಡಿಕೊಡಿ. ಅಲ್ಲಿ ಧರಣಿ ಮಾಡಿಕೊಂಡಿರಲಿ. ಈ ಪ್ರತಿಭಟನೆಗಳಿಂದ ಟ್ರಾಫಿಕ್ ಜಾಮ್ ಆದರೆ ಎಂಥ ಹಿಂಸೆ ಗೊತ್ತಾ? ಹಾಗೆ ಆಗಾಗ ಬಂದ್ ಕರೆ ಕೊಡುವವರನ್ನು ಜೈಲಿಗೆ ಹಾಕಿ. ನಮಗೆ ಒಂದು ದಿನ ಕೆಲಸ ನಿಲ್ಲಿಸಿದರೆ ಎಷ್ಟು ಕೋಟಿ ಡಾಲರ್ ಲಾಸ್ ಆಗುತ್ತೆ ಗೊತ್ತಾ?

ಹೌದಲ್ಲವೇ? ಈ ಐಟಿ-ಬಿಟಿಯವರು ಹೀಗೇ ಮಾತನಾಡುತ್ತಾರೆ ಅಲ್ಲವೆ? ಅಲ್ಲಿ ಮೀಸಲಾತಿ ಕೊಡೋದು ತಪ್ಪು, ಮಕ್ಕಳಿಗೆ ಕನ್ನಡ ಕಲಿಸೋದೇ ತಪ್ಪು ಎನ್ನುವ ನಾರಾಯಣಮೂರ್ತಿ ಥರದ ಪ್ರೆಸಿಡೆಂಟ್ ಆಫ್ ಇಂಡಿಯಾ ಕ್ಯಾಂಡಿಡೇಟುಗಳಿರುತ್ತಾರೆ. ಯು.ಆರ್.ಅನಂತಮೂರ್ತಿ ಯಾರು ಎಂದು ಪ್ರಶ್ನಿಸಿದ ತಲೆತಿರುಕ ಬಿಟಿ ದೊರೆಸಾನಿಯಂಥವರಿರುತ್ತಾರೆ. ನಿಲೇಕಣಿ, ಮೋಹನ ದಾಸ ಪೈ, ಫಣೀಶ್ ರಂಥ ಇಂಟರ್‌ನ್ಯಾಷನಲ್ ಫಿಗರ್‌ಗಳಿರುತ್ತಾರೆ. ಅವರೆಲ್ಲ ಮಾತನಾಡುವ ಧಾಟಿಯೇ ಇದು.

ನಮ್ಮ ಮುಖ್ಯಮಂತ್ರಿಗಳು ಹಳ್ಳಿಗಾಡಿನಿಂದ ಬಂದವರು. ಅವರಿಗೆ ಬಡವರ ಭಾಷೆ ಗೊತ್ತು, ರೈತರ ಭಾಷೆ ಗೊತ್ತು. ಅಮೆರಿಕನ್ ಅಕ್ಸೆಂಟ್‌ನಲ್ಲಿ ಇಂಗ್ಲಿಷ್ ಮಾತನಾಡಲು ಅವರಿಗೆ ಬರುವುದಿಲ್ಲ. ಐಟಿ-ಬಿಟಿಯವರ ಇಂಥ ಮಾತುಗಳಿಗೆ ಅವರೇನು ಹೇಳಬೇಕು ಎಂದು ನೀವು ನಾವು ಬಯಸುತ್ತೇವೆ ಗೊತ್ತೆ?

“ಅಮೆರಿಕದಿಂದ ಈಗಷ್ಟೆ ಎದ್ದು ಬಂದಿರುವ ನನ್ನ ಐಟಿ ಸ್ನೇಹಿತರೆ,

ನಿಮ್ಮ ಮಾತುಗಳನ್ನೆಲ್ಲ ಕೇಳಿದೆ. ಒಂದು ವಿಷಯ ನಿಮಗೆ ಗೊತ್ತಿರಲಿ ಕರ್ನಾಟಕ ಅಂದರೆ ಬೆಂಗಳೂರು ಮಾತ್ರವಲ್ಲ. ನಾನು ಇಡೀ ರಾಜ್ಯದ ಮುಖ್ಯಮಂತ್ರಿ. ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಇದೆ ಎಂಬುದು ಗೊತ್ತು. ರಸ್ತೆಗಳ ಸಮಸ್ಯೆಯೂ ಗೊತ್ತು. ಹಾಗೆಂದ ಮಾತ್ರಕ್ಕೆ ರಾಜ್ಯದ ಪೂರ್ತಿ ಬಜೆಟ್ಟನ್ನು ಬೆಂಗಳೂರಿಗೆ ಸುರಿಯಲು ಸಾಧ್ಯವಿಲ್ಲ.

ಬೆಂಗಳೂರಿನಲ್ಲಿ ಬರೀ ಐಟಿ-ಬಿಟಿಯವರು, ಕಾರ್ಪೊರೇಟ್ ಕಂಪೆನಿಗಳ ಕೋಟ್ಯಧೀಶರಷ್ಟೆ ಇಲ್ಲ. ಇಲ್ಲಿ ಅಂದಿನ ಬದುಕನ್ನು ಸಾಗಿಸಲು ಒದ್ದಾಡುವ ಮಧ್ಯಮವರ್ಗದವರಿದ್ದಾರೆ. ಆಟೋ ಚಾಲಕರು, ತರಕಾರಿ ಮಾರುವವರು, ಕ್ಲರ್ಕುಗಳು, ಗಾರ್ಮೆಂಟ್ಸ್‌ಗಳು-ಖಾಸಗಿ ಕಂಪೆನಿಗಳಲ್ಲಿ ದುಡಿದು ಹೈರಾಣಾಗುವ ಹೆಣ್ಣುಮಕ್ಕಳು, ಫ್ಯಾಕ್ಟರಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರು, ಸರ್ಕಾರಿ ನೌಕರಿ ಮಾಡುವವರು, ಕೂಲಿ ಮಾಡುವವರು, ಸ್ಲಂಗಳಲ್ಲಿ ವಾಸ ಮಾಡುವವರು, ಭಿಕ್ಷೆ ಬೇಡುವವರು...ಹೀಗೆ ಎಲ್ಲ ತರಹದ ಜನರೂ ಇದ್ದಾರೆ. ಅವರ ಸಮಸ್ಯೆಗಳನ್ನೂ ನಾನು ಕೇಳಬೇಕಲ್ಲವೆ?
ಒಂದು ಹೊತ್ತಿನ ಊಟಕ್ಕೆ ಪರದಾಡುವವರ ಸಮಸ್ಯೆಯ ನಡುವೆ ನಿಮ್ಮ ಟ್ರಾಫಿಕ್ ಜಾಮ್ ಸಮಸ್ಯೆ ಎಷ್ಟು ಚಿಕ್ಕದು ಎಂಬುದನ್ನು ನೀವೇ ಅರ್ಥಮಾಡಿಕೊಳ್ಳಬೇಕಲ್ಲವೆ? ಹಾಗೆ ನೋಡಿದರೆ ಬೆಂಗಳೂರಿನ ರಸ್ತೆಗಳು ನೀವು ಹೇಳುವಷ್ಟು ಹಾಳುಬಿದ್ದು ಹೋಗಿಲ್ಲ. ಒಮ್ಮೆ ದೇಶದ ಬೇರೆ ನಗರಗಳನ್ನು ಸುತ್ತಿ ಬನ್ನಿ. ಬೇರೇನೂ ಬೇಡ. ದೇಶದ ರಾಜಧಾನಿ ದೆಹಲಿಯೇ ಕೊಳಕು. ಬೆಂಗಳೂರಿಗೆ ನೀವೆಲ್ಲ ಯಾಕೆ ಮುತ್ತಿಕೊಂಡಿದ್ದೀರಿ ಎಂದರೆ ಈ ನಗರ ಒಂಥರಾ ಹವಾನಿಯಂತ್ರಿತ ಕೊಠಡಿ ಇದ್ದ ಹಾಗೆ ಇದೆ. ಇಲ್ಲಿನ ಪರಿಸರ, ಹವಾಮಾನ ಎಲ್ಲೂ ಸಿಗೋದಿಲ್ಲ. ಇಲ್ಲಿನ ಜನರೂ ಒಳ್ಳೆಯವರು. ನಿಮಗೆ ಇದುವರೆಗೆ ಕಾಟ ಕೊಟ್ಟವರಲ್ಲ.

ನೀವು ಬಳಸುತ್ತಿರುವ ಭೂಮಿ ಇಲ್ಲಿನ ರೈತರದ್ದು. ಅವರ ಬೆವರಿನ ಶ್ರಮವೂ ನಿಮ್ಮ ಕಂಪೆನಿಗಳಲ್ಲಿ ಸೇರಿ ಹೋಗಿದೆ. ಅವರಿಗೆ ಕೊಟ್ಟಿರುವುದು ಕವಡೆ ಕಿಮ್ಮತ್ತು ಅಷ್ಟೆ, ನೆನಪಿನಲ್ಲಿರಲಿ. ಮೊನ್ನೆ ಮೊನ್ನೆ ರೈತರು ಸಾಲುಸಾಲಾಗಿ ಆತ್ಮಹತ್ಯೆ ಮಾಡಿಕೊಂಡರಲ್ಲ. ಆ ವಿಷಯ ನಿಮ್ಮ ಗಮನಕ್ಕೆ ಬರಲಿಲ್ಲವೆ? ದಿನಕ್ಕೆ ಕೋಟಿ ಡಾಲರ್‌ಗಳ ಲೆಕ್ಕದಲ್ಲಿ ದುಡಿಯುವ ನೀವು ರೈತರ ಒಳಿತಿಗೆ ಏನನ್ನಾದರೂ ಕೊಡಬಹುದಿತ್ತಲ್ಲವೆ? ಒಂದು ನೆನಪಿನಲ್ಲಿಟ್ಟುಕೊಳ್ಳಿ, ನಿಮಗೆ ಇನ್ನು ರೈತರ ಭೂಮಿ ಕಿತ್ತು ಕೊಡುವುದಿಲ್ಲ. ನಿಮಗೆ ಭೂಮಿ ಬೇಕೆಂದರೆ ಸ್ಪರ್ಧಾತ್ಪಕ ಮಾರುಕಟ್ಟೆಯಲ್ಲಿ ಏನು ಬೆಲೆಯಿದೆಯೋ ಅದನ್ನು ಕೊಟ್ಟು ಕೊಂಡುಕೊಳ್ಳಿ, ಅದೂ ಯಾವ ಬಲವಂತವೂ ಇಲ್ಲದೆ.

ನಿಮಗೆ ತೆರಿಗೆ ರಜೆ, ವಿನಾಯಿತಿ, ನಿರಂತರ ವಿದ್ಯುತ್... ಇತ್ಯಾದಿ ಏನನ್ನೂ ಕೇಳಬೇಡಿ. ಬೆಂಗಳೂರಿನಲ್ಲೇ ಬೆಳೆದಿದ್ದೀರಿ. ಇನ್ನು ಯಾವ ವಿನಾಯಿತಿಯೂ ಇಲ್ಲ. ಇನ್ನೇನಿದ್ದರೂ ಸರ್ಕಾರದ ಜತೆ ಕೈಜೋಡಿಸುವುದನ್ನು, ಸಂಕಷ್ಟಗಳ ಸಂದರ್ಭದಲ್ಲಿ ಸಹಾಯಕ್ಕೆ ಬರುವುದನ್ನು ಕಲಿಯಿರಿ.
ಮಕ್ಕಳಿಗೆ ಯಾವ ಭಾಷೆಯ ಮಾಧ್ಯಮದಲ್ಲಿ ಕಲಿಸಬೇಕು ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಇದು ಕನ್ನಡ ನಾಡು. ಇಲ್ಲಿ ಕನ್ನಡವೇ ಕಡ್ಡಾಯ. ನಮ್ಮ ಮಕ್ಕಳು ಇಂಗ್ಲಿಷ್ ಕಲಿಯುವುದು ಹಾಗಿರಲಿ, ನೀವು ಮೊದಲು ಕನ್ನಡ ಕಲಿಯಿರಿ, ಕಲಿಯದಿದ್ದರೆ ಇಲ್ಲಿಂದ ತೊಲಗಿ ಹೋಗಿ.

ಕನ್ನಡ ಸಂಘದವರು, ದಲಿತ ಸಂಘದವರು ಪ್ರತಿಭಟನೆ ಮಾಡಿದರೆ ಮೂಗು ಮುರಿಯುವುದನ್ನು ಬಿಡಿ. ಅದು ಅವರ ಹಕ್ಕು. ಬಂದ್ ಆದಾಗ ಸಮಸ್ಯೆಯಾದರೆ ಭಾನುವಾರ ಕೆಲಸ ಮಾಡಿ ನಿಮ್ಮ ನಷ್ಟ ತುಂಬಿಸಿಕೊಳ್ಳಿ.

ಎಲ್ಲಕ್ಕಿಂತ ಮುಖ್ಯ ವಿಷಯವೆಂದರೆ ನಿಮ್ಮ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಕೆಲಸ ಕೊಡಿ, ದಲಿತರಿಗೆ, ಹಿಂದುಳಿದವರಿಗೆ ಮೀಸಲಾತಿ ಕೊಡಿ. ಇದು ನಿಮ್ಮ ಕರ್ತವ್ಯ. ಕನ್ನಡಿಗರ ಯೋಗ್ಯತೆ ಬಗ್ಗೆ ಮಾತನಾಡಿದರೆ ಕಪಾಳಕ್ಕೆ ಬಾರಿಸುವ ಜನರಿದ್ದಾರೆ ಎಚ್ಚರಿಕೆ. ಸಣ್ಣಪುಟ್ಟ ಕೆಲಸಗಳನ್ನು ಮಾಡಲು ಹೊರರಾಜ್ಯಗಳಿಂದ ಜನರನ್ನು ಕರೆಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ.

ಈ ರಾಜ್ಯದ ನೆಲ, ಜಲ, ವಿದ್ಯುತ್, ಜನ ಎಲ್ಲವನ್ನೂ ಬಳಸಿಕೊಳ್ಳುತ್ತಿದ್ದೀರಿ. ಅನ್ನದ ಋಣ ನಿಮ್ಮ ಮೇಲಿದೆ. ಆ ಋಣ ತೀರಿಸಲಾದರೂ ಈ ರಾಜ್ಯಕ್ಕೆ ಏನನ್ನಾದರೂ ಮಾಡಿ. ರೈತರ ಹೆಸರಿನಲ್ಲಿ ಒಂದು ನಿಧಿ ಸ್ಥಾಪಿಸಿ, ಒಂದಷ್ಟು ಶಾಲೆಗಳನ್ನು ದತ್ತು ತೆಗೆದುಕೊಳ್ಳಿ. ಒಂದಷ್ಟು ಗ್ರಾಮಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಮಾಡಿ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಇಂತಿಷ್ಟು ಹಣ ಎತ್ತಿಡಲು ನಿರ್ಧಾರ ಮಾಡಿ.

ಇದ್ಯಾವುದನ್ನೂ ಮಾಡದೆ, ಬೆಂಗಳೂರನ್ನು ಹುಟ್ಟಿಸಿದವರೇ ನಾವು ಎಂದು ಫೋಜು ಕೊಡಬೇಡಿ.

ನಮ್ಮ ಮುಖ್ಯಮಂತ್ರಿಗಳು ಹೀಗೆಲ್ಲ ಮಾತನಾಡಬೇಕು, ಐಟಿ-ಬಿಟಿ ಧಣಿಗಳ ಕಿವಿ ಹಿಂಡಬೇಕು ಎಂಬ ಆಸೆ. ಯಡಿಯೂರಪ್ಪನವರು ಹೀಗೆಲ್ಲ ಮಾತನಾಡುವರೆ?

Tuesday, July 22, 2008

...ಅಂಥ ಹೋರಾಟಗಾರನಿಗೆ ಇಂಥ ಸಾವು ನ್ಯಾಯವೆ?


ಅದು ರೇವಣಸಿದ್ಧಯ್ಯ ಅವರು ಬೆಂಗಳೂರು ನಗರ ಕಮಿಷನರ್ ಆಗಿದ್ದ ಕಾಲ. ಡಾ.ರಾಜ್ ಕುಮಾರ್ ರಸ್ತೆಯಲ್ಲಿ ಶಿವಾಸ್ ಎಂಬ ಬಾರ್ ಅಂಡ್ ರೆಸ್ಟೋರೆಂಟ್ ಸುತ್ತಮುತ್ತಲ ಜನರಿಗೆ ಕಿರಿಕಿರಿ ಹುಟ್ಟಿಸಿತ್ತು. ಶಿವಾಸ್‌ನಲ್ಲಿ ಲೈವ್ ಬ್ಯಾಂಡ್ ಸಹ ಇತ್ತು. ಬಾರ್ ಸುತ್ತ ಜನಸಾಮಾನ್ಯರು ಸಂಜೆಯ ನಂತರ ಓಡಾಡುವುದೇ ಕಷ್ಟ ಎನ್ನುವ ಪರಿಸ್ಥಿತಿ. ವಿಶೇಷವಾಗಿ ಮಹಿಳೆಯರಂತೂ ಅಲ್ಲಿ ಸುಳಿದಾಡುವಂತೆಯೇ ಇರಲಿಲ್ಲ. ಇದ್ದಕ್ಕಿದ್ದಂತೆ ಅಲ್ಲಿ ಕೆಲಸ ಮಾಡುತ್ತಿದ್ದ ಉಮಾಪತಿ ಎಂಬ ಯುವಕ ಕೊಲೆಯಾಗಿ ಹೋದ. ಬಾರ್ ನಡೆಸುತ್ತಿದ್ದವರೇ ಆ ಕೊಲೆ ಮಾಡಿದ್ದರು.

ಕೊಲೆಯಾದ ನಂತರ ಉಮಾಪತಿಯ ಶವ ಇಟ್ಟು ಅಲ್ಲಿನ ನಾಗರಿಕರು ಪ್ರತಿಭಟನೆ ನಡೆಸಿದರು. ಅಬಕಾರಿ ಲಾಬಿ ವಿರುದ್ಧ ಹೀಗೆ ರಸ್ತೆಯಲ್ಲಿ ಪ್ರತಿಭಟನೆ ಸಂಘಟಿಸಿದ್ದು ಎ.ಟಿ.ಬಾಬು ಎಂಬ ದಕ್ಷಿಣ ಕನ್ನಡ ಮೂಲದ ವ್ಯಕ್ತಿ. ಅವತ್ತಿಗೆ ಅವರು ಸಾರ್ವಜನಿಕ ಜೀವನದಲ್ಲಿ ಕಾಣಿಸಿಕೊಂಡವರಲ್ಲ. ಆದರೆ ಬಾಬು ಹೋರಾಟದ ಫಲವಾಗಿ ಸ್ವತಃ ರೇವಣಸಿದ್ಧಯ್ಯ ಸ್ಥಳಕ್ಕೆ ಬಂದು ಪ್ರತಿಭಟನಾಕಾರರನ್ನು ಸಮಾಧಾನಪಡಿಸಬೇಕಾಯಿತು. ಉಮಾಪತಿ ಹತ್ಯೆ ಪ್ರಕರಣ ನಿಷ್ಪಕ್ಷಪಾತ ತನಿಖೆ ನಡೆಸಿ, ಬಾರ್ ಲೈಸೆನ್ಸ್ ರದ್ದುಪಡಿಸಲು ಶಿಫಾರಸು ಮಾಡುವುದಾಗಿ ಭರವಸೆ ನೀಡಿದ ನಂತರವೇ ಪ್ರತಿಭಟನೆ ಅಂತ್ಯವಾಯಿತು. ರೇವಣಸಿದ್ಧಯ್ಯನವರು ಆಶ್ವಾಸನೆ ನೀಡಿದಂತೆಯೇ ಬಾರ್ ಪರವಾನಗಿ ರದ್ದಾಯಿತು.

ಎ.ಟಿ.ಬಾಬು ಎಂಬ ಅಸಾಮಾನ್ಯ ಹೋರಾಟಗಾರನ ಜೀವನದ ತುಂಬೆಲ್ಲ ಇಂಥದ್ದೇ ಘಟನೆಗಳು. ಬಾಬು ಅವರು ಕುಂದಾಪುರದಿಂದ ಬದುಕನ್ನು ಅರಸಿಕೊಂಡು ದಶಕಗಳ ಹಿಂದೆ ಬೆಂಗಳೂರಿನ ಪ್ರಕಾಶನಗರಕ್ಕೆ ಬಂದು ನೆಲೆಸಿದಾಗ ಆರಂಭಿಸಿದ್ದು, ಟೈಲರಿಂಗ್ ವೃತ್ತಿಯನ್ನು. ನಂತರ ಹೋಟೆಲ್ ತೆರೆದರು.
ಆ ಕಾಲಕ್ಕೆ ಕ್ರಿಯಾಶೀಲವಾಗಿದ್ದ ಡಾ.ರಾಜ್ ಕುಮಾರ್ ಅಭಿಮಾನಿ ಸಂಘದಲ್ಲಿ ಬಾಬು ಗುರುತಿಸಿಕೊಂಡು ಹೋರಾಟದ ಜೀವನ ಆರಂಭಿಸಿದರು. ಸಾರ್ವಜನಿಕ ಜೀವನಕ್ಕೆ ತೆರೆದುಕೊಳ್ಳುತ್ತಿದ್ದಂತೆಯೇ ಅವರು ತಮ್ಮದೇ ಆದ ಸಂಘಟನೆಯೊಂದನ್ನು ಕಟ್ಟಿ ಅದಕ್ಕೆ ಕರ್ನಾಟಕ ಸರ್ವರ ಕ್ಷೇಮಾಭಿವೃದ್ಧಿ ಸಮಿತಿ ಎಂದು ಹೆಸರಿಟ್ಟರು.
ಪ್ರಕಾಶನಗರ, ಶ್ರೀರಾಮಪುರ, ಗಾಯತ್ರಿನಗರ ಪ್ರದೇಶಗಳಲ್ಲಿ ಆಗ ಬಾರ್, ವೈನ್ ಶಾಪ್ ಹಾಗು ಸಾರಾಯಿ ಅಂಗಡಿಗಳ ಕಾಟ ವಿಪರೀತವಾಗಿತ್ತು. ಅಕ್ಷರಶಃ ಇವೆಲ್ಲವೂ ಅಪರಾಧ ಚಟುವಟಿಕೆಗಳ ಕೇಂದ್ರ ಬಿಂದುಗಳಾಗಿದ್ದವು. ಬೆಂಗಳೂರಿನ ಸಮಸ್ತ ರೌಡಿ ಚಟುವಟಿಕೆಗಳ ತವರು ನೆಲವಾದ ಈ ಭಾಗದಲ್ಲಿ ಜನಸಾಮಾನ್ಯರು, ಮಹಿಳೆಯರು ಬದುಕುವುದೇ ಕಷ್ಟಸಾಧ್ಯ ಎಂಬ ಪರಿಸ್ಥಿತಿ ಇತ್ತು.

ಬಾಬು ಇದೆಲ್ಲದರ ವಿರುದ್ಧ ಹೋರಾಡುವ ನಿರ್ಧಾರಕ್ಕೆ ಬಂದರು. ಸರ್ವರ ಕ್ಷೇಮಾಭಿವೃದ್ಧಿ ಸಂಘದ ಮೂಲಕವೇ ಹೋರಾಟ ನಡೆಸುತ್ತಿದ್ದ ಬಾಬು ಅಬಕಾರಿ ಲಾಬಿ ವಿರುದ್ಧ ಹೋರಾಡಲೆಂದು ಮದ್ಯಪಾನ ವಿರೋಧಿ ಆಂದೋಲನ ಸಮಿತಿಯನ್ನು ಸ್ಥಾಪಿಸಿದರು. ಇದು ಕಾಟಾಚಾರದ ಸಮಿತಿಯಾಗಲಿಲ್ಲ. ನೂರಾರು ಮಹಿಳೆಯರನ್ನು ಈ ಸಮಿತಿಯಲ್ಲಿ ಸಕ್ರಿಯವಾಗಿ ತೊಡಗಿಸಿದರು. ಹಲವು ಮಹಿಳಾ ಸಮಾಜಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವುಗಳನ್ನೂ ಚಳವಳಿಯ ಭಾಗವಾಗಿಸಿದರು.

ಪ್ರಕಾಶನಗರದಲ್ಲಿ ಕುಖ್ಯಾತ ಸಾರಾಯಿ ಅಂಗಡಿಯೊಂದಿತ್ತು. ಅದು ಗಾರ್ಮೆಂಟ್ಸ್ ಫ್ಯಾಕ್ಟರಿಯೊಂದಕ್ಕೆ ಅಂಟಿಕೊಂಡೇ ಇತ್ತು. ಹೀಗಾಗಿ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುವ ಮಹಿಳೆಯರು ಜೀವ ಕೈಯಲ್ಲಿ ಹಿಡಿದುಕೊಂಡೇ ಓಡಾಡಬೇಕಿತ್ತು. ಎ.ಟಿ.ಬಾಬು ಈ ಸಾರಾಯಿ ಅಂಗಡಿಯನ್ನು ಕಿತ್ತು ಹಾಕಿ ಎಂದು ಸರ್ಕಾರಕ್ಕೆ ಮನವಿ ಮಾಡಿದರು. ಆದರೆ ಅದು ಯಾವ ಅಡೆತಡೆಯೂ ಇಲ್ಲದೆ ದಂಧೆ ನಡೆಸುತ್ತಿತ್ತು. ಅಲ್ಲಿ ಅಡ್ಡ ಹಾಕುತ್ತಿದ್ದ ಪುಡಿ ರೌಡಿಗಳು ಓಡಾಡುವ ಹೆಣ್ಣುಮಕ್ಕಳನ್ನು ಕಣ್ಣುಕೆಕ್ಕರಿಸಿ ನೋಡುತ್ತಿದ್ದರು. ಆಗಾಗ ಹೊಡೆದಾಟ, ಬಡಿದಾಟ, ಕಡಿದಾಟಗಳಿಗೂ ಬರವಿರಲಿಲ್ಲ.

ಬಾಬು ಚಳವಳಿಯ ಮಾರ್ಗವನ್ನು ತುಳಿದರು. ಸಾರಾಯಿ ಅಂಗಡಿ ಮುಂದೆಯೇ ಮಹಿಳೆಯರನ್ನು ಕರೆತಂದು ಧರಣಿ ಕೂರಿಸಿದರು. ಸಾರಾಯಿ ಅಂಗಡಿಯವನ ಪ್ರಭಾವ ಎಷ್ಟಿತ್ತೆಂದರೆ ಸರ್ಕಾರ ಕ್ಯಾರೇ ಎನ್ನಲಿಲ್ಲ. ಆದರೆ ಬಾಬು ಪಟ್ಟು ಬಿಡಲಿಲ್ಲ. ದಿನದಿಂದ ದಿನಕ್ಕೆ ಚಳವಳಿ ತೀವ್ರವಾಗುತ್ತ ಹೋಯಿತು. ಸತತ ಒಂದು ತಿಂಗಳಾದರೂ ಧರಣಿ ನಿಂತಿರಲಿಲ್ಲ. ರಾಜಿಕಬೂಲಿ, ಡೀಲಿಂಗ್, ಮ್ಯಾಚ್‌ಫಿಕ್ಸಿಂಗ್‌ಗೆ ಬಾಬು ತಲೆಬಾಗಿರಲಿಲ್ಲ. ಕಡೆಗೆ ಈ ವಿಷಯ ರಾಜ್ಯಾದ್ಯಂತ ಚರ್ಚೆಯ ವಿಷಯವಾಗುತ್ತಿದ್ದಂತೆ ಸರ್ಕಾರ ಅನಿವಾರ್ಯವಾಗಿ ತೀರ್ಮಾನ ಕೈಗೊಂಡು ಸಾರಾಯಿ ಅಂಗಡಿ ಮುಚ್ಚಿತು. ಅಲ್ಲಿ ಮತ್ತೆಂದೂ ಅದು ತೆರೆಯಲಿಲ್ಲ.

ಮದ್ಯಪಾನ ವಿರೋಧದ ಚಳವಳಿಯನ್ನೇ ಪ್ರಧಾನವಾಗಿಟ್ಟುಕೊಂಡಿದ್ದ ಬಾಬು ಇತರ ಜನಪರ, ಕನ್ನಡಪರ ಚಳವಳಿಗಳಲ್ಲೂ ಭಾಗವಹಿಸುತ್ತಿದ್ದರು. ತಮ್ಮ ಕಾರ್ಯಕರ್ತರನ್ನು ತೊಡಗಿಸುತ್ತಿದ್ದರು. ಆದರೆ ಮದ್ಯಪಾನ ವಿರೋಧಿ ಚಳವಳಿ ಎಲ್ಲೇ ನಡೆಯಲಿ, ಅವರು ಅಲ್ಲಿಗೆ ದಾಪುಗಾಲು ಹಾಕಿಕೊಂಡು ಹೋಗುತ್ತಿದ್ದರು. ಬಾಬು ಅವರ ಈ ಚಟುವಟಿಕೆಗಳು ಪ್ರಕಾಶನಗರವನ್ನು ದಾಟಿ ಇಡೀ ರಾಜ್ಯಕ್ಕೆ ವಿಸ್ತರಿಸಿಕೊಂಡಿತು. ರಾಜ್ಯದ ವಿವಿಧೆಡೆ ಸಾರಾಯಿ ಅಂಗಡಿಗಳ ವಿರುದ್ಧ ಚಳವಳಿ ನಡೆಸುತ್ತಿದ್ದ ಮಹಿಳೆಯರು ಮೊದಲು ಫೋನಾಯಿಸುತ್ತಿದ್ದದ್ದು ಎ.ಟಿ.ಬಾಬು ಅವರಿಗೇ. ಬಾಬು ಸಹ ಹಿಂದೆಮುಂದೆ ನೋಡದೆ ಚಳವಳಿ ನಡೆಯುತ್ತಿದ್ದ ಸ್ಥಳಕ್ಕೆ ಓಡುತ್ತಿದ್ದರು. ಚಳವಳಿಗಾರರಿಗೆ ಮನೋಸ್ಥೈರ್ಯ, ಸಹಕಾರ ನೀಡುತ್ತಿದ್ದರು. ಚಳವಳಿಯನ್ನು ಉದ್ದೀಪನಗೊಳಿಸಿ, ಸರ್ಕಾರವನ್ನು, ಸ್ಥಳೀಯ ಆಡಳಿತವನ್ನು ಬಗ್ಗಿಸುತ್ತಿದ್ದರು.

ಅಪ್ಪಟ ಗಾಂಧಿವಾದಿಯಾದ ಎ.ಟಿ.ಬಾಬು ಎಲ್ಲರನ್ನೂ ಅಣ್ಣ, ಅಕ್ಕ ಎಂದೇ ಮಾತನಾಡಿಸುತ್ತಿದ್ದರು. ಸೌಜನ್ಯ, ವಿನಯವಂತಿಕೆ ಅವರ ರಕ್ತಗುಣ. ಅಪ್ಪಟ ಹೋರಾಟಗಾರರಾದರೂ ಕೂಗಾಡಿ, ಗದ್ದಲ ಮಾಡುವುದು ಅವರ ಸ್ವಭಾವವಾಗಿರಲಿಲ್ಲ. ಯಾರ ಜತೆಯೂ ವೈಯಕ್ತಿಕ ಸಂಘರ್ಷಕ್ಕೂ ಇಳಿದವರಲ್ಲ. ಒಂದೆರಡು ಬಾರಿ ಮಹಾನಗರ ಪಾಲಿಕೆ ಚುನಾವಣೆಗೂ ನಿಂತು ಸೋತಿದ್ದರು. ರಾಜಕಾರಣ ಚಳವಳಿಯ ಹಾಗಲ್ಲ ಎಂಬುದು ಅವರ ಅರಿವಿಗೆ ಬಂದಿತ್ತು. ಹಿಂದೆ ಕಾಂಗ್ರೆಸ್‌ನಲ್ಲಿದ್ದ ಬಾಬು ಕಳೆದ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯ ರಾಜಾಜಿನಗರ ಕ್ಷೇತ್ರದ ಅಭ್ಯರ್ಥಿ ಸುರೇಶ್ ಕುಮಾರ್, ಮಹಾಲಕ್ಷ್ಮಿಲೇಔಟ್ ಅಭ್ಯರ್ಥಿ ಆರ್.ವಿ.ಹರೀಶ್ ಪರವಾಗಿ ಕೆಲಸ ಮಾಡಿದ್ದರು.
ಬಾರ್, ವೈನ್‌ಶಾಪ್, ಸಾರಾಯಿ ವಿರುದ್ಧ ರಾಜಿರಹಿತ ಹೋರಾಟ ನಡೆಸುತ್ತಿದ್ದ ಬಾಬು ಅವರನ್ನು ದ್ವೇಷಿಸುವವರಿಗೇನು ಕೊರತೆಯಿರಲಿಲ್ಲ. ಬಾಬು ಸ್ಥಳೀಯ ಕೆಲವು ರೌಡಿಗಳನ್ನು ಮನವೊಲಿಸಿ ಅವರನ್ನು ಬದಲಾಯಿಸುವ ದುಸ್ಸಾಹಸಕ್ಕೆ ಕೈ ಹಾಕಿದ್ದರು. ಹೀಗೆ ಇವರ ಜತೆ ಓಡಾಡಿಕೊಂಡಿದ್ದ ದಾಸ ಎಂಬ ರೌಡಿ ಕೊಲೆಯಾಗಿ ಹೋದ. ಟಪ್ಪು ಎಂಬ ರೌಡಿ ಇವರ ಜತೆಯಿದ್ದವನು ಮತ್ತೆ ಬೇರೆಯಾಗಿ ಅಪರಾಧ ಚಟುವಟಿಕೆ ಮುಂದುವರೆಸಿದ್ದ.

ಇದೆಲ್ಲವೂ ಮುಂದೊಂದು ದಿನ ಪ್ರಾಣಕ್ಕೇ ಸಂಚಕಾರ ತಂದೀತೆಂದು ಬಾಬು ಭಾವಿಸಿರಲಿಲ್ಲ. ಅಬಕಾರಿ ಮಾಫಿಯಾ ಹಾಗು ರೌಡಿ ಸಾಮ್ರಾಜ್ಯ ಒಂದಾಗಿ ಬಾಬು ಮುಗಿಸಿಬಿಡಲೆಂದು ಸಂಚು ನಡೆಸಿದ್ದು ಅವರ ಗಮನಕ್ಕೇ ಬಂದಿರಲಿಲ್ಲವೆನ್ನಿಸುತ್ತದೆ. ಬಂದಿದ್ದರೂ ಅದನ್ನು ಅವರು ಲಘುವಾಗಿ ಪರಿಗಣಿಸಿದ್ದಿರಬಹುದು.
ತೀರಾ ಇತ್ತೀಚೆಗೆ ಬಾಬು ಕೆಲ ಬಾರ್ ಅಂಡ್ ರೆಸ್ಟೋರೆಂಟ್‌ಗಳ ಮೇಲೆ ಯುದ್ಧ ಆರಂಭಿಸಿದ್ದರು.

ನಿನ್ನೆ ಜು.೨೧ ಮಧ್ಯಾಹ್ನ ಬಾಬು ಮಂಡ್ಯಕ್ಕೆ ತಮ್ಮ ಮಾರುಕಿ ಓಮ್ನಿಯಲ್ಲಿ ಹೊರಟಿದ್ದರು. ರಾಮನಗರಕ್ಕೆ ಆರು-ಏಳು ಕಿ.ಮೀ ಹಿಂದೆ ಮಾಯಗಾನಹಳ್ಳಿ ಎಂಬಲ್ಲಿ ಎರಡು ದ್ವಿಚಕ್ರ ವಾಹನಗಳು ಬಾಬು ಅವರ ವಾಹನಕ್ಕೆ ಅಡ್ಡಲಾಗಿ ಬಂದಿವೆ. ಕೊಲೆಗಡುಕರು ಅತ್ಯಂತ ಪ್ರೊಫೆಷನಲ್ ಆದ ಶೈಲಿಯಲ್ಲೇ ಬಾಬು ವಿರುದ್ಧ ಜಗಳ ತೆಗೆದಿದ್ದಾರೆ. ಹೀಗೆ ಜಗಳ ನಡೆಯುತ್ತಿರುವಾಗಲೇ ಯೋಜನೆಯಂತೆ ನೀಲಿ ಬಣ್ಣದ ಸ್ಕಾರ್ಪಿಯೊದಿಂದ ಬಂದಿಳಿದ ಏಳೆಂಟು ಮಂದಿ ಬಾಬು ಅವರನ್ನು ಕೊಚ್ಚಿ ಕೊಂದು ಹೋಗಿದ್ದಾರೆ. ಬಾಬು ಜತೆಗಿದ್ದ ಮದ್ಯಪಾನ ವಿರೋಧಿ ಆಂದೋಲನ ಸಮಿತಿಯ ಇಬ್ಬರು ಮಹಿಳಾ ಸದಸ್ಯರು ಇದೆಲ್ಲಕ್ಕೂ ಮೂಕಸಾಕ್ಷಿಯಾಗಿದ್ದಾರೆ.

ಅಲ್ಲಿಗೆ ಒಂದು ಅಧ್ಯಾಯ ಮುಗಿದಿದೆ. ಬಾಬು ಅವರ ಅಸಂಖ್ಯ ವಿರೋಧಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ದುಷ್ಟರು, ನಿರ್ಲಜ್ಜರು, ಸಮಾಜಘಾತಕರಿಗೆ ಈ ಸಾವು ಅನಿವಾರ್ಯವಾಗಿ ಬೇಕಾಗಿತ್ತು. ಅದು ಒಂದೇ ನಿಮಿಷದಲ್ಲಿ ನಡೆದುಹೋಗಿದೆ.

ನಗರಕ್ಕೀಗ ಖಡಕ್ ಪೊಲೀಸ್ ಅಧಿಕಾರಿ ಶಂಕರ್ ಬಿದರಿಯವರೇ ಪೊಲೀಸ್ ಕಮಿಷನರ್. ಕೊಲೆಯಾಗಿರುವುದು ಒಬ್ಬ ಪುಡಿ ರೌಡಿಯಲ್ಲ. ಗಾಂಧಿಮಾರ್ಗದಲ್ಲಿ ಹೋರಾಟ ನಡೆಸುತ್ತಿದ್ದ ಚಳವಳಿಗಾರ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಬೇಕು. ಇಂಥ ಪ್ರಕರಣಗಳು ಮರುಕಳಿಸಿದರೆ ಇದನ್ನು ನಾಗರಿಕ ಸಮಾಜ ಎನ್ನಲು ಸಾಧ್ಯವಿಲ್ಲ.
ಅನ್ಯಾಯಗಳ ವಿರುದ್ಧ, ಅಕ್ರಮಗಳ ವಿರುದ್ಧ ಹೋರಾಡುವವರನ್ನು ಹಾಡುಹಗಲೇ ಕತ್ತರಿಸಿ ಕೊಲ್ಲುವ ಬೆಳವಣಿಗೆಗೆ ಪೊಲೀಸ್ ಇಲಾಖೆ ಮಾತ್ರವಲ್ಲ, ಸರ್ಕಾರವೇ ತಲೆತಗ್ಗಿಸಬೇಕಾಗುತ್ತದೆ.

ಎ.ಟಿ.ಬಾಬು ಸಮಾಜಕ್ಕೆ ಕಂಟಕವಾಗಿರುವವರ ವಿರುದ್ಧ ಬೀಳುತ್ತಿದ್ದರೇ ವಿನಃ ಯಾರನ್ನೂ ವಿನಾಕಾರಣ ನೋಯಿಸಿದವರಲ್ಲ. ಅವರ ಪಾರ್ಥಿವ ಶರೀರ ಬರುವ ಮುನ್ನವೇ ಅವರ ಮನೆಯ ಬಳಿ ಸಾವಿರಾರು ಮಂದಿ ನೆರೆದಿದ್ದರು. ಎಲ್ಲರದ್ದೂ ಒಂದೇ ಕೂಗು. ಕೊಲೆಗಡುಕರಿಗೆ ಗಲ್ಲು ಶಿಕ್ಷೆಯನ್ನೇ ಕೊಡಿ.

ಬಿದರಿಯವರಿಗೊಂದು ಮನವಿ: ಇದು ನಾಗರಿಕ ಸಮಾಜದ ಬುಡಕ್ಕೆ ಬೀಸಿದ ಕೊಡಲಿಪೆಟ್ಟು. ಬಾಬು ಹಂತಕರನ್ನು ಪತ್ತೆ ಹಚ್ಚಿ ಶಿಕ್ಷೆಗೆ ಒಳಪಡಿಸುವುದರ ಜತೆಗೆ ಸುಪಾರಿ ಕೊಟ್ಟವರನ್ನು ಹೆಡೆಮುರಿ ಕಟ್ಟಿ ಜೈಲಿಗೆ ಅಟ್ಟುವ ಕೆಲಸ ಆಗಬೇಕು. ಇದು ನಿಮ್ಮಿಂದ ಖಂಡಿತ ಸಾಧ್ಯ. ಅದಾಗದಿದ್ದರೆ ಜನಸಾಮಾನ್ಯರಿಗೆ ಪೊಲೀಸರು, ಸರ್ಕಾರ ಯಾವುದರ ಮೇಲೂ ವಿಶ್ವಾಸ ಉಳಿಯಲು ಸಾಧ್ಯವಿಲ್ಲ.

ಬಾಬು ಅವರನ್ನು ಹತ್ತಿರದಿಂದ ಬಲ್ಲ ನನ್ನಂಥವರಿಗೆ ಇನ್ನೂ ಅರ್ಥವಾಗದ ವಿಷಯವೆಂದರೆ ಅವರು ಕೊಲೆಯಾಗುವಂಥದ್ದೇನು ಮಾಡಿದ್ದರು? ಸಿಟ್ಟಿದ್ದರೆ ಬೇರೆ ರೀತಿಯಲ್ಲಿ ಬಡಿದಾಡಬಹುದಿತ್ತಲ್ಲವೇ? ಕೊಲ್ಲುವಂಥ ಜೀವವೇ ಅದು?
ಈ ಸಾವು ನ್ಯಾಯವೆ?

Friday, July 18, 2008

ಬಜೆಟ್: ಎರಡು ಟಿಪ್ಪಣಿ

ಮೊದಲ ತಕರಾರು: ಈ ಸಂಸ್ಕೃತ ವಿಶ್ವವಿದ್ಯಾಲಯ ಬೇಕಿತ್ತೆ? ದೇಶದ ತುಂಬೆಲ್ಲ ೧೨ ಸಂಸ್ಕೃತ ವಿಶ್ವವಿದ್ಯಾಲಯಗಳು ಇವೆಯಂತೆ. ಬೆಂಗಳೂರಿಗೆ ಮತ್ತೊಂದು ಅವಶ್ಯಕತೆಯಿತ್ತೆ? ಸತ್ತ ಭಾಷೆಗೆ ಜೀವ ಕೊಡುವ ಕಾರ್ಯ ನಮ್ಮ ನಾಡಿನಲ್ಲೇ ಆಗಬೇಕೆ? ಬಲ್ಲ ಮೂಲಗಳ ಪ್ರಕಾರ ಇದು ಆರ್‌ಎಸ್‌ಎಸ್ ಒತ್ತಡದಿಂದ ಆದ ಸೇರ್ಪಡೆಯಂತೆ. ಯಾರ ಪ್ರೇರಣೆಯೋ, ಚಿತಾವಣೆಯೋ ಈ ಘೋಷಣೆಗೆ ಕಾರಣಕರ್ತರಾದ ಎಲ್ಲರಿಗೂ ಈ ಕನ್ನಡಿಗನ ಧಿಕ್ಕಾರ.ಹಾಗೆ ಹೇಳುವುದಕ್ಕೂ ಕಾರಣಗಳಿವೆ. ರಾಜ್ಯದಲ್ಲಿರುವ ಇತರ ವಿಶ್ವವಿದ್ಯಾಲಯಗಳ ಸ್ಥಿತಿಗತಿಯೇ ನೆಟ್ಟಗಿಲ್ಲ. ಕನ್ನಡ ವಿಶ್ವವಿದ್ಯಾಲಯವನ್ನೇ ಸರಿಯಾಗಿ ಬೆಳೆಸಲು ನಮ್ಮಿಂದ ಆಗಿಲ್ಲ. ಇನ್ನು ಸಂಸ್ಕೃತ ವಿಶ್ವವಿದ್ಯಾಲಯ ಯಾವ ಪುರುಷಾರ್ಥಕ್ಕೆ? ಸಂಸ್ಕೃತ-ಹಿಂದಿಯಂಥ ಭಾಷೆಗಳನ್ನು ಕನ್ನಡಿಗರ ಮೇಲೆ ಹೇರಿಕೊಂಡು ಬಂದು ಬಹಳ ವರ್ಷಗಳೇ ಆದವು. ಹಿಂದಿಯನ್ನು ರಾಷ್ಟ್ರಭಾಷೆ ಎಂದು ಸುಳ್ಳೇ ಸುಳ್ಳು ಪ್ರಚಾರ ಮಾಡುವ ಮುಖೇಡಿಗಳಿಗೆ ನಮ್ಮಲ್ಲಿ ಬರವೇನಿಲ್ಲ. ನಾವು ಕನ್ನಡಿಗರೂ ಅಷ್ಟೆ. ಒಂದು ವೇಳೆ ಸಂಸ್ಕೃತ ವಿಶ್ವವಿದ್ಯಾಲಯದ ಬದಲಿಗೆ ತಮಿಳು ವಿಶ್ವವಿದ್ಯಾಲಯ ಸ್ಥಾಪನೆ ಮಾಡುತ್ತೇವೆ ಎಂದು ಸರ್ಕಾರದವರು ಹೇಳಿದ್ದರೆ ಸುಮ್ಮನಿರುತ್ತಿದ್ದೆವೆ? ರಾಷ್ಟ್ರಭಾಷೆಯ ಹೆಸರಿನಲ್ಲಿ ಹಿಂದಿ ಬಂದು ನಮ್ಮ ತಲೆಯ ಮೇಲೆ ಕುಳಿತಿದ್ದೂ ಹೀಗೆಯೇ.

ಸರ್ಕಾರದಿಂದಲೇ ರಿಯಲ್ ಎಸ್ಟೇಟ್: ಇದು ಮತ್ತೊಂದು ವಿಚಿತ್ರ. ಸರ್ಕಾರವೇ ರಿಯಲ್ ಎಸ್ಟೇಟ್ ನಡೆಸಲು ಹೊರಟಿದೆ. ಬಜೆಟ್ ಪುಸ್ತಿಕೆಯ ೫೫ನೇ ಪುಟದಲ್ಲಿ ಇದನ್ನು ಯಾವ ಎಗ್ಗಿಲ್ಲದೆ ಹೇಳಿಕೊಳ್ಳಲಾಗಿದೆ. “ಬೆಲೆ ಬಾಳುವ ಸರ್ಕಾರಿ ಜಮೀನುಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗಿ ವಿಲೇ ಮಾಡಿ ಅದರಿಂದ ದೊರೆಯುವ ಸಂಪನ್ಮೂಲಗಳನ್ನು ಸಂಗ್ರಹಿಸಲು ‘ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮ ಸ್ಥಾಪಿಸಲಾಗುವುದು. ೨೦೦೮-೦೯ನೇ ಸಾಲಿನಲ್ಲಿ ಬೆಂಗಳೂರು ನಗರ ಹಾಗು ನಗರದ ಸುತ್ತಮುತ್ತ ಲಭ್ಯವಿರುವ ಸರ್ಕಾರಿ ಜಮೀನುಗಳ ವಿಲೇವಾರಿಯಿಂದ ಸುಮಾರು ೩೦೦೦ ಕೋಟಿ ರೂ.ಗಳನ್ನು ಸಂಗ್ರಹಿಸಲು ಉದ್ದೇಶಿಸಲಾಗಿದೆಇದು ಯಡಿಯೂರಪ್ಪ ಸ್ಪೆಷಲ್. ರಿಯಲ್ ಎಸ್ಟೇಟ್ ದಂಧೆಯಿಂದ ಸಾವಿರಾರು ಮಂದಿ ಕಾಸು ಮಾಡುತ್ತಿರುವುದನ್ನು ಕಂಡು ಸರ್ಕಾರವನ್ನೇ ಈ ದಂಧೆಗೆ ನೂಕಿದರೆ ಹೇಗೆ ಎಂಬುದು ಯಡಿಯೂರಪ್ಪನವರ ಚಿಂತನೆಯಾಗಿರಬೇಕು.ಯೋಜನೆಯ ಪ್ರಕಾರ ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮ ಇನ್ನೇನು ರಚನೆಯಾಗುತ್ತದೆ. ಅದಕ್ಕೊಬ್ಬ ‘ಬೆಲೆಬಾಳುವ ಅಧ್ಯಕ್ಷ' (ಬೇರೆ ಪಕ್ಷದ ಶಾಸಕನಾಗಿದ್ದು ರಾಜೀನಾಮೆ ಕೊಟ್ಟು ಬಿಜೆಪಿ ಸೇರಿದವರಿಗೆ ಮೊದಲ ಆದ್ಯತೆ) ಬೆಂಗಳೂರಿನಲ್ಲಿ ಅಳಿದು ಉಳಿದಿರುವ ಸರ್ಕಾರಿ ಜಮೀನನ್ನು ಆಂಧ್ರದ, ಬಂಗಾಳದ ಬಿಲ್ಡರ್‌ಗಳಿಗೆ, ಮಾರವಾಡಿಗಳಿಗೆ, ಗುಜರಾಥಿ-ಸಿಂಧಿಗಳಿಗೆ ಸರ್ಕಾರವೇ ಮಾರುತ್ತದೆ. ಮುಂದೊಂದು ದಿನ ಸರ್ಕಾರಕ್ಕೇ ಯಾವುದೋ ಉದ್ದೇಶಕ್ಕೆ ಜಮೀನು ಬೇಕು ಎಂದರೆ ಬಡ ರೈತರ ತಲೆ ಒಡೆಯಬೇಕು. (ರೈತರು ಜಮೀನು ಉಳಿಸಿಕೊಂಡಿದ್ದರೆ)ಒತ್ತುವರಿಯಾದ ಜಮೀನನ್ನು ಬಿಡಿಸಿಕೊಂಡು ಹರಾಜು ಹಾಕಿ ಆದಾಯ ಗಳಿಸುವ ಪ್ರಕ್ರಿಯೆಯನ್ನು ಆರಂಭಿಸಿದ್ದು ಕುಮಾರಸ್ವಾಮಿಯವರ ಸರ್ಕಾರ. ಈ ನಿರ್ಧಾರಕ್ಕೆ ಒಂದು ಅರ್ಥವಾದರೂ ಇತ್ತು. ಆದರೆ ಸರ್ಕಾರದ ಒಡೆತನದಲ್ಲೇ ಭದ್ರವಾಗಿರುವ ಜಮೀನಿಗೂ ಯಡಿಯೂರಪ್ಪ ಕೈ ಹಾಕಿದ್ದಾರೆ. ಅದರರ್ಥ ಸರ್ಕಾರವೇ ಮಾರಾಟಕ್ಕಿದೆ ಎಂದಾಗುವುದಿಲ್ಲವೆ?

Tuesday, July 15, 2008

ಆಪ್ ಕೊ ಬಿಲ್‌ಕುಲ್ ಶರಮ್ ನಹೀ....

ಜು.೧೨ರಂದು ಬೆಳಿಗ್ಗೆ ಘಾಜಿಯಾಬಾದ್‌ನ ದಸ್ನಾ ಜೈಲಿನಿಂದ ಡಾ.ರಾಜೇಶ್ ತಲ್ವಾರ್ ಆರೋಪಮುಕ್ತರಾಗಿ ಹೊರಬೀಳುತ್ತಿದ್ದಂತೆ ಎಲೆಕ್ಟ್ರಾನಿಕ್ ಮಾಧ್ಯಮದ ವರದಿಗಾರರು ಮುತ್ತಿಕೊಂಡು ಮಾತನಾಡಿಸಲು ಯತ್ನಿಸುತ್ತಿದ್ದರು. ಅದು ಇತ್ತೀಚಿನ ದಿನಗಳಲ್ಲಿ ಮಾಮೂಲಿ ದೃಶ್ಯ. ನೂಕು-ನುಗ್ಗಲು, ಕೂಗಾಟ, ಚೀರಾಟ. ತನ್ನ ಚಾನೆಲ್‌ನ ಮೈಕನ್ನು ತೂರಿಸಲು ಹರಸಾಹಸ ಪಡುತ್ತಲೇ ಆಳಿಗೊಂದರಂತೆ ಪ್ರಶ್ನೆಗಳ ಬಾಣ ಎಸೆಯುವ ವರದಿಗಾರ-ಗಾರ್ತಿಯರು. ತಲ್ವಾರ್ ಮಾತ್ರ ಏನನ್ನೂ ಹೇಳುವ ಸ್ಥಿತಿಯಲ್ಲಿರಲಿಲ್ಲ. ಮುತ್ತಿಕೊಂಡವರಿಂದ ತಪ್ಪಿಸಿಕೊಂಡು ಹೋಗಲು ಸಹ ಹರಸಾಹಸ ಮಾಡಬೇಕು. ಈ ಸಂದರ್ಭದಲ್ಲಿ ತಲ್ವಾರ್ ಕುಟುಂಬ ಸದಸ್ಯರೋರ್ವರು ಹಲವು ಬಾರಿ ಕೂಗಿ ಹೇಳಿದ್ದನ್ನು ನೀವು ಚಾನೆಲ್‌ಗಳಲ್ಲಿ ಕೇಳಿರಬಹುದು: ‘ಆಪ್ ಕೊ ಬಿಲ್‌ಕುಲ್ ಶರಮ್ ನಹೀ..ಅರುಷಿ, ಹೇಮರಾಜ್ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಇಡೀ ಮಾಧ್ಯಮ ಸಮೂಹಕ್ಕೆ ಅನ್ವಯಿಸಿ ಹೇಳಿದಂತೆ ಈ ಮಾತು ಸದ್ಯದ ದುಷ್ಟ ಪತ್ರಿಕೋದ್ಯಮದ ಹಣೆಯ ಮೇಲೆ ಗೀಚಿದ ಟಿಪ್ಪಣಿಯಂತಿದೆ.

ನಿಜ, ಈ ಜನರಿಗೆ ಸ್ವಲ್ಪವಾದರೂ ನಾಚಿಕೆಯೆಂಬುದಿಲ್ಲ.ಅರುಷಿ ಪ್ರಕರಣದಲ್ಲಿ ಡಾ.ರಾಜೇಶ್ ತಲ್ವಾರ್ ಅವರು ಪಾಲ್ಗೊಂಡಿಲ್ಲ. ಮಗಳನ್ನು ಕೊಂದದ್ದು ತಂದೆಯಲ್ಲ. ತಲ್ವಾರ್ ವಿರುದ್ಧ ನಮ್ಮ ಬಳಿ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಸಿಬಿಐ ಅಧಿಕಾರಿ ಜು.೧೧ರಂದು ಪತ್ರಿಕಾಗೋಷ್ಠಿಯಲ್ಲಿ ಹೇಳುವವರೆಗೂ ಈ ಗೋಷ್ಠಿಯ ನೇರಪ್ರಸಾರ ಮಾಡುತ್ತಿದ್ದ ಚಾನೆಲ್‌ಗಳು ತಮ್ಮ ಫ್ಲಾಷ್‌ನ್ಯೂಸ್ ಏನೆಂದು ಬಿತ್ತರಿಸುತ್ತಿದ್ದವು ಗೊತ್ತೆ? ತಲ್ವಾರ್ ಬಂಧನ ಅವಧಿ ವಿಸ್ತರಿಸಲು ಸಿಬಿಐ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದಾರೆ ಎಂದು! ಇವರಿಗೆ ನಾಚಿಕೆ ಹೋಗಲಿ, ಕನಿಷ್ಠ ಮಾನವೀಯತೆ ಇದೆಯೆಂದು ಹೇಳುವುದಾದರೂ ಹೇಗೆ?

ಜು.೧೧ರಂದು ಎನ್‌ಡಿಟಿವಿ ಇಡೀ ತಲ್ವಾರ್ ಕುಟುಂಬವನ್ನು ಸ್ಟೂಡಿಯೋದಲ್ಲಿ ಕೂರಿಸಿಕೊಂಡು ತಲ್ವಾರ್ ನಿರ್ದೋಷಿಯೆಂದು ಸಾಬೀತಾಗಿರುವ ಕುರಿತು ಚರ್ಚೆ ನಡೆಸುತ್ತಿತ್ತು. ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತೆ ನಳಿನಿ ಸಿಂಗ್ ಅವರು ಒಂದು ಮಾತನ್ನು ಹೇಳಿದರು. ‘ ನಮ್ಮದು (ಮಾಧ್ಯಮದವರು) ತೀರಾ ಅತಿರೇಕವಾಯಿತು. ಇಡೀ ಮಾಧ್ಯಮ ವರ್ಗ ತಲ್ವಾರ್ ಕುಟುಂಬ ಹಾಗು ದೇಶದ ಕ್ಷಮೆ ಯಾಚಿಸಬೇಕು.ನಿಜ, ಈಗ ಎಲ್ಲಾ ಚಾನೆಲ್‌ಗಳಲ್ಲೂ ಒಂದಷ್ಟು ಆತ್ಮವಿಮರ್ಶೆಯ ಮಾತುಗಳು ಕೇಳಿಬರುತ್ತಿವೆ. ಆದರೆ ಕಂಡಕಂಡವರ ಮೇಲೆ ಅನುಮಾನಪಡುವ ಪೊಲೀಸರು, ಸುದ್ದಿದಾಹಿ ಚಾನೆಲ್ ಮಾಲೀಕರು, ಕೊಡುವ ಕೂಲಿಗಾಗಿ ಸುದ್ದಿಯಲ್ಲದ್ದನ್ನು ಸುದ್ದಿ ಮಾಡುವ ವರದಿಗಾರರು, ಅವರು ಹೇಳಿದ್ದನ್ನೇ ವೇದವಾಕ್ಯ ಎಂದು ಪರಿಗಣಿಸಿ, ಉರಿಯುವ ಬೆಂಕಿಗೆ ತುಪ್ಪ ಸುರಿಯುವ ನಿರೂಪಕಮಣಿಗಳು... ಈ ಎಲ್ಲರೂ ಸೇರಿ ಮಾಡಿದ್ದಾದರೂ ಏನು?

೧೪ರ ಬಾಲೆ ಅರುಷಿ ಕೊಲೆಯಾಗಿದ್ದು ಮೇ.೧೬ರಂದು. ಆಕೆಯ ಕೊಲೆಯಾಗಿದ್ದು, ಉತ್ತರಪ್ರದೇಶದ ನೊಯ್ಡಾದಲ್ಲಿ. ಸಣ್ಣ ಮಕ್ಕಳ ಸರಣಿ ಹತ್ಯೆಗೆ ಆಗಲೇ ಕುಖ್ಯಾತಿ ಪಡೆದಿದ್ದ ನೊಯ್ಡಾದಲ್ಲಿ ಈ ಪ್ರಕರಣ ನಡೆದಿದ್ದರಿಂದ ಸಹಜವಾಗಿಯೇ ಮಾಧ್ಯಮಗಳ ಆಸಕ್ತಿಗೆ ಕಾರಣವಾಗಿತ್ತು.ವಿಚಿತ್ರವೆಂದರೆ ನೋಯ್ಡಾ ಸರಣಿ ಹತ್ಯಾಕಾಂಡ ಪ್ರಕರಣವನ್ನು ಬಲು ಬೇಜವಾಬ್ದಾರಿಯಿಂದ ನಿಭಾಯಿಸಿದ್ದ ಇಲ್ಲಿನ ಪೊಲೀಸರು ಅರುಷಿ ಪ್ರಕರಣದಲ್ಲಿ ಅದನ್ನೇ ಮಾಡಿದರು.ಅರುಷಿ ಹತ್ಯೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ತನಿಖೆ ನಡೆಸಿದ ಪೊಲೀಸರು ಮನೆಯಲ್ಲಿ ಕೆಲಸದ ಆಳು ಹೇಮರಾಜ್ ಇಲ್ಲದ್ದನ್ನು ಗಮನಿಸಿದರು. ದಿಡೀರನೆ ಹೇಮರಾಜನೇ ಹತ್ಯೆ ಮಾಡಿ ಪರಾರಿಯಾಗಿದ್ದಾನೆ ಎಂದು ತನಿಖೆ ಭೇದಿಸಿದವರಂತೆ ಪೋಜು ನೀಡಿದರು. ಆದರೆ ಮಾರನೇ ದಿನವೇ ತಲ್ವಾರ್ ಮನೆಯ ತಾರಸಿ ಮೇಲೆ ಹೇಮರಾಜನ ಶವವೂ ಪತ್ತೆಯಾಯಿತು. ಅರುಷಿ ಹಾಗು ಹೇಮರಾಜ್ ಇಬ್ಬರೂ ಕೊಲೆಯಾಗಿದ್ದರಿಂದ ಕೊಲೆ ಮಾಡಿದವರಿಗಾಗಿ ಹುಡುಕಾಟ ಆರಂಭ.ಈ ವೇಳೆಗಾಗಲೇ ಮೀಡಿಯಾಗಳ ಒತ್ತಡ ವಿಪರೀತವಾಗಿತ್ತು. ನೋಯ್ಡಾ ಪೊಲೀಸರಿಗೆ ಯಾರನ್ನಾದರೂ ಕೇಸಿಗೆ ಫಿಟ್ ಮಾಡಿ ತಲೆ ತೊಳೆದುಕೊಳ್ಳುವ ಧಾವಂತ. ಅಷ್ಟು ಹೊತ್ತಿಗಾಗಲೇ ಮೀಡಿಯಾಗಳು ಅರುಷಿ ಮನೆಯ ಸುತ್ತಮುತ್ತಲಿನವರನ್ನು ಮಾತನಾಡಿಸಿ ಚಿತ್ರವಿಚಿತ್ರ ಸುದ್ದಿಗಳನ್ನು ಪ್ಲಾಂಟ್ ಮಾಡತೊಡಗಿದ್ದರು.

ಮೇ.೨೩ರಂದು ನೋಯ್ಡಾ ಪೊಲೀಸರು ಮಗಳ ಕೊಲೆ ಆರೋಪದ ಮೇರೆಗೆ ತಂದೆ ರಾಜೇಶ್ ತಲ್ವಾರ್‌ರನ್ನೇ ಬಂಧಿಸಿದರು.ಈ ಸಂದರ್ಭದಲ್ಲಿ ಪೊಲೀಸರು ಹಾಗು ಮೀಡಿಯಾಗಳು ಹರಡಿದ ಸುದ್ದಿಗಳನ್ನು ಒಮ್ಮೆ ಗಮನಿಸಿ ನೋಡಿ. ಅವರು ಕಟ್ಟಿಕೊಟ್ಟ ಥಿಯರಿಗಳನ್ನು ನೋಡಿ. ಇವರನ್ನು ಮನುಷ್ಯರು ಎನ್ನಲು ಸಾಧ್ಯವೇ ಎಂಬ ಅನುಮಾನ ಬಾರದೇ ಇರದು.ಮೊದಲನೇ ಥಿಯರಿ ಹೀಗೆ ಇತ್ತು:೧೪ರ ಹರೆಯದ ಅರುಷಿ ಹಾಗು ನಡುವಯಸ್ಸಿನ ಹೇಮರಾಜ್ ನಡುವೆ ಅನ್ಯೋನ್ಯ ಸಂಬಂಧವಿತ್ತು. ಅರ್ಥಾತ್ ಲೈಂಗಿಕ ಸಂಬಂಧವಿತ್ತು. ಇದರಿಂದಾಗಿ ರಾಜೇಶ್ ತಲ್ವಾರ್ ಸಿಟ್ಟಿಗೆದ್ದಿದ್ದರು. ಈ ಕಾರಣದಿಂದಲೇ ಅವರು ಮಗಳು ಹಾಗು ಆಕೆಯ ‘ಪ್ರಿಯಕರನನ್ನು ಕೊಂದು ಹಾಕಿದರು.ಈ ಮೊದಲನೇ ಥಿಯರಿ ಎಷ್ಟು ಅಸಹ್ಯಕರವೆಂದರೆ ಕಡೇ ಪಕ್ಷ ತನ್ನನ್ನು ತಾನು ನಿಷ್ಕಳಂಕೆ ಎಂದು ಸಾಬೀತುಪಡಿಸಿಕೊಳ್ಳಲು ಅರುಷಿಗೂ ಅವಕಾಶವಿರಲಿಲ್ಲ, ಹೇಮರಾಜ್‌ಗೂ ಅವಕಾಶವಿರಲಿಲ್ಲ. ಏಕೆಂದರೆ ಇಬ್ಬರೂ ಸತ್ತು ಹೋಗಿದ್ದರು.

ಎರಡನೇ ಥಿಯರಿ ಹೀಗೆ ಇತ್ತು.ದಂತವೈದ್ಯರಾಗಿರುವ ಡಾ.ರಾಜೇಶ್ ತಲ್ವಾರ್‌ಗೆ ತಮ್ಮ ಸಹೋದ್ಯೋಗಿ ವೈದ್ಯೆಯರ ಜತೆ ಲೈಂಗಿಕ ಸಂಬಂಧಗಳಿದ್ದವು. ಇದನ್ನು ಸ್ವತಃ ಅರುಷಿ ನೋಡಿದ್ದರು. ಈ ಸಂಬಂಧಗಳ ವಿಷಯ ಹೇಮರಾಜ್‌ಗೂ ಗೊತ್ತಿತ್ತು. ಈ ವಿಷಯವನ್ನು ನೂಪುರ್ ತಲ್ವಾರ್ (ರಾಜೇಶ್ ಪತ್ನಿ) ಅವರಿಗೆ ಹೇಳುವುದಾಗಿ ಇಬ್ಬರೂ ಬ್ಲಾಕ್‌ಮೇಲ್ ಮಾಡುತ್ತಿದ್ದರು. ಹೀಗಾಗಿ ತಲ್ವಾರ್ ತಮ್ಮ ಮಗಳನ್ನು ಕೊಂದು ಹಾಕಿದರು.ಈ ವಿಚಿತ್ರ ಥಿಯರಿ ಹರಡುತ್ತಿದ್ದಂತೆ ಇದನ್ನೇ ಸತ್ಯ ಎಂದು ಮೀಡಿಯಾಗಳು ಅಬ್ಬರಿಸಿದವು. ಇಡೀ ದೇಶದ ತುಂಬ ಇದೇ ಚರ್ಚೆ. ಅಣುಬಂಧ, ಹಣದುಬ್ಬರದಂತಹ ರಾಷ್ಟ್ರೀಯ ಹಿತಾಸಕ್ತಿಯ ವಿಷಯಗಳಿಗಿಂತ ಅರುಷಿ ಕೊಲೆ ಪ್ರಕರಣದ ಸಿಕ್ಕುಬಿಡಿಸುವುದೇ ಚಾನೆಲ್‌ಗಗಳಿಗೆ ಮಹತ್ವದ ವಿಷಯವಾಯಿತು. ಪ್ರತಿದಿನವೂ ಗಂಟೆಗಟ್ಟಲೇ ಇಂಥದೇ ಸುದ್ದಿ ಪ್ರಸಾರ ಮಾಡಿದ ಮಾಧ್ಯಮಗಳು ತಲ್ವಾರ್‌ಗೆ ಕೊಡಬಹುದಾದ ಶಿಕ್ಷೆಯ ಬಗ್ಗೆ ತಲೆ ಕೆಡಿಸಿಕೊಳ್ಳಲು ಆರಂಭಿಸಿದವು. ಈ ನಡುವೆ ಪ್ರಕರಣವನ್ನು ಸಿಬಿಐಗೆ ವಹಿಸಲಾಯಿತು.

ಸಿಬಿಐ ತಂಡ ಅತ್ಯಂತ ವೈಜ್ಞಾನಿಕ ರೀತಿಯಲ್ಲಿ ತನಿಖೆ ಆರಂಭಿಸಿತು. ನೋಯ್ಡಾ ಪೊಲೀಸರು ಅರುಷಿ ಪ್ರಕರಣದಲ್ಲಿ ಸರಿಯಾಗಿ ಕೇಸ್ ಡೈರಿಯನ್ನು ಸಹ ನಿರ್ವಹಿಸಿರಲಿಲ್ಲ. ಸಿಬಿಐ ಮೊದಲು ತಲ್ವಾರ್ ಅವರನ್ನು ವಿಚಾರಣೆಗೆ ಒಳಪಡಿಸಿದರು. ತಲ್ವಾರ್ ಪತ್ನಿ ನೂಪುರ್ ತಲ್ವಾರ್ ಅವರನ್ನೂ ವಿಚಾರಣೆ ಮಾಡಿದರು.ದೆಹಲಿ, ಮುಂಬೈ, ಬೆಂಗಳೂರಿನ ವಿವಿಧ ವೈಜ್ಞಾನಿಕ ಪ್ರಯೋಗಾಲಯಗಳಲ್ಲಿ ಈ ಪರೀಕ್ಷೆಗಳು ನಡೆದವು. ಮನೋವೈಜ್ಞಾನಿಕ ಪರೀಕ್ಷೆ, ಮಂಪರು ಪರೀಕ್ಷೆ, ಸುಳ್ಳು ಪತ್ತೆಗಾಗಿ ನಡೆಸುವ ಬ್ರೈನ್ ಮ್ಯಾಪಿಂಗ್ ಪರೀಕ್ಷೆಗಳೆಲ್ಲ ಆದವು. ಆದರೆ ತಲ್ವಾರ್ ದಂಪತಿಗಳ ಬಳಿ ಕೊಲೆ ಸಂಬಂಧ ಹೇಳುವುದು ಏನೂ ಇರಲಿಲ್ಲ. ಯಾಕೆಂದರೆ ಅವರಿಗೆ ಏನೇನೂ ಗೊತ್ತಿರಲಿಲ್ಲ.ಪಕ್ಕದ ಕೋಣೆಯಲ್ಲಿದ್ದ ಅರುಷಿ ಕೊಲೆಯಾದರೂ, ತಲ್ವಾರ್ ದಂಪತಿಗಳಿಗೆ ಗೊತ್ತಾಗದೇ ಹೋಗಲು ಸಾಧ್ಯವಿರಲಿಲ್ಲ ಎಂಬುದು ನೋಯ್ಡಾ ಪೊಲೀಸರ ತರ್ಕವಾಗಿತ್ತು. ಅದನ್ನು ಪರಿಹರಿಸಲೆಂದೇ ಸಿಬಿಐ ಪೊಲೀಸರು ಕೋಣೆಗಳಲ್ಲಿದ್ದ ಎಸಿಗಳನ್ನು ರಾತ್ರಿ ವೇಳೆ ಚಾಲೂ ಮಾಡಿ, ಪಕ್ಕದ ಕೋಣೆಯಲ್ಲಿ ಅಪರಾಧ ಪ್ರಕರಣದ ನಕಲಿ ಪ್ರಹಸನ ಸೃಷ್ಟಿಸಿ, ತಲ್ವಾರ್ ದಂಪತಿಗಳಿಗೆ ಯಾವ ಶಬ್ದವೂ ಕೇಳಿಸದೇ ಇರುವ ಸಾಧ್ಯತೆ ಇದೆ ಎಂಬುದನ್ನು ಮನದಟ್ಟು ಮಾಡಿಕೊಂಡಿತು.

ಸಿಬಿಐ ಪೊಲೀಸರು ನಂತರ ಬೆನ್ನುಬಿದ್ದಿದ್ದು ಆಸ್ಪತ್ರೆಯ ನೌಕರ ಕೃಷ್ಣನ ಹಿಂದೆ. ವಿಚಿತ್ರವೆಂದರೆ ಇದೇ ಕೃಷ್ಣ ಹೇಳುತ್ತಿದ್ದ ವಿಷಯಗಳನ್ನೇ ತಮ್ಮ ಚಾನೆಲ್‌ಗಳಲ್ಲಿ ಬ್ರೇಕಿಂಗ್ ನ್ಯೂಸ್ ಮಾಡಿ ತಲ್ವಾರ್ ಕುಟುಂಬಕ್ಕೆ ಅನೈತಿಕ ಸಂಬಂಧಗಳನ್ನು ಹೆಣೆಯುತ್ತಿದ್ದ ಮೀಡಿಯಾಗಳು ಕೃಷ್ಣ ಬಂಧನಕ್ಕೊಳಗಾದಾಗ ಆತ ನಿರಪರಾಧಿ ಇರಬೇಕು ಎಂಬ ವರದಿಗಳನ್ನು ಪ್ರಕಟಿಸಿದವು. ಹಾಗೆಯೇ ವಾದಿಸಿದವು. ಆದರೆ ಸಿಬಿಐ ಪೊಲೀಸರು ಕೃಷ್ಣನ ಜತೆಯಲ್ಲಿ ಪಕ್ಕದ ಮನೆಯ ಕೆಲಸದ ಆಳು ರಾಜಕುಮಾರ್ ಎಂಬಾತನನ್ನೂ ಬಂಧಿಸಿದರು. ಇಬ್ಬರಿಗೂ ಎಲ್ಲ ರೀತಿಯ ವೈಜ್ಞಾನಿಕ ಪರೀಕ್ಷೆಗಳಾದವು. ಕಡೆಗೂ ಇಬ್ಬರೂ ಮತ್ತೊಬ್ಬನೊಂದಿಗೆ ಸೇರಿ ಅರುಷಿ ಹಾಗು ಹೇಮರಾಜ್ ಅವರನ್ನು ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡರು.

ಕೃಷ್ಣನಿಗೆ ತಲ್ವಾರ್ ಮೇಲೆ ಸಿಟ್ಟಿತ್ತು. ಈ ಸಂಬಂಧ ಅವರು ಆತನಿಗೆ ಆಗಾಗ ಗದರಿಸಿದ್ದರು. ಸಿಟ್ಟಿನಲ್ಲಿದ್ದ ಕೃಷ್ಣ ಸೇಡು ತೀರಿಸಿಕೊಳ್ಳಲು ಆರಿಸಿಕೊಂಡಿದ್ದು ೧೪ರ ಹರೆಯದ ಬಾಲೆ ಅರುಷಿಯನ್ನು. ಮೇ.೧೬ರಂದು ಹೇಮರಾಜ್‌ನ ಕೊಠಡಿಯಲ್ಲಿ ಸೇರಿಕೊಂಡ ಕೃಷ್ಣ, ರಾಜಕುಮಾರ್ ಹಾಗು ವಿಜಯ ಮಂಡಲ್ ಒಟ್ಟಿಗೆ ಕುಡಿದರು. ಕುಡಿದ ಮತ್ತಿನಲ್ಲಿ ಅರುಷಿ ಕೊಠಡಿಗೆ ನುಗ್ಗಿದರು. ಪಕ್ಕದ ಕೊಠಡಿಯಲ್ಲೇ ತಲ್ವಾರ್ ದಂಪತಿಗಳು ಗಾಢ ನಿದ್ರೆಯಲ್ಲಿದ್ದರು.ಕೃಷ್ಣ ಹಾಗು ರಾಜ ಕುಮಾರ್ ಅರುಷಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದರು. ಆಕೆ ಪ್ರತಿರೋಧ ತೋರಿದಾಗ ಆಕೆಯ ಮೇಲೆ ಮಾರಕ ಆಯುಧದಿಂದ ಹೊಡೆದರು. ಈ ಸಂದರ್ಭದಲ್ಲಿ ಹೇಮರಾಜ್ ಪ್ರವೇಶವಾಗಿ ಕೃಷ್ಣನ ವಿರುದ್ಧ ತಿರುಗಿ ಬಿದ್ದ. ಹೇಮರಾಜ್‌ನನ್ನು ತಾರಸಿ ಮೇಲೆ ಎಳೆದೊಯ್ದು ಆತನನ್ನು ಕೊಂದು ಹಾಕಲಾಯಿತು. ಮತ್ತೆ ಅರುಷಿ ಕೊಠಡಿಗೆ ವಾಪಾಸು ಬಂದ ರಕ್ಕಸರು ಆಕೆ ಗಂಟಲು ಕೊಯ್ದು ಕೊಂದು ಹಾಕಿದರು.

ಇದು ವೈಜ್ಞಾನಿಕ ಪ್ರಯೋಗಗಳ ಸಂದರ್ಭದಲ್ಲಿ ಹೊರಗೆ ಬಂದಿರುವ ಸತ್ಯಗಳು. ಮಂಪರು ಪರೀಕ್ಷೆಯಲ್ಲಿ ಹೇಳಿದ ವಿಷಯಗಳನ್ನು ನ್ಯಾಯಾಲಯಗಳು ಸಾಕ್ಷ್ಯವನ್ನಾಗಿ ಪರಿಗಣಿಸುವುದಿಲ್ಲವಾದ್ದರಿಂದ ಸಿಬಿಐ ಪೊಲೀಸರು ಅನಿವಾರ್ಯವಾಗಿ ಈಗ ಇತರ ಸಾಕ್ಷ್ಯಗಳನ್ನು ಕಂಡುಹಿಡಿದು ಆರೋಪ ರುಜುವಾತುಪಡಿಸಬೇಕಾಗಿದೆ. ಈಗಾಗಲೇ ಹಲವು ಸಾಂದರ್ಭಿಕ ಸಾಕ್ಷ್ಯಗಳನ್ನು ಸಿಬಿಐ ಸಿದ್ಧಪಡಿಸಿಕೊಂಡಿರುವುದರಿಂದ ಆರೋಪ ಸಾಬೀತುಪಡಿಸುವುದು ಅಷ್ಟು ಕಷ್ಟದ ಕೆಲಸವೇನಲ್ಲ.

ಆದರೆ ಈಗ ನಿರ್ದೋಷಿ ಎಂದು ಸಾಬೀತಾಗಿರುವ ಡಾ. ರಾಜೇಶ್ ತಲ್ವಾರ್ ಕಥೆ ಏನು? ಮೇ.೧೬ರಂದು ಅರುಷಿ ಕೊಲೆಯಾದಳು. ಅದಾದ ಒಂದೇ ವಾರಕ್ಕೆ, ಮಗಳ ಸಾವಿನ ನೋವಿನಲ್ಲಿ ಪ್ರಪಾತಕ್ಕೆ ಕುಸಿದಿದ್ದ ತಲ್ವಾರ್ ಅವರನ್ನು ನೊಯ್ಡಾ ಪೊಲೀಸರು ಬಂಧಿಸಿದರು. ಮಗಳ ಸಾವಿನ ನೋವಿನ ನಡುವೆ ಕೊಲೆ ಆರೋಪಿಯ ಪಟ್ಟ. ಅದೂ ಸ್ವತಃ ಮಗಳನ್ನೇ ಕೊಂದ ಆರೋಪಿಯೆಂಬ ಬಿರುದು.ಇದು ಸಾಲದೆಂಬಂತೆ ಇಡೀ ಕುಟುಂಬದ ವೈಯಕ್ತಿಕ ಶೀಲಹರಣ. ಮಗಳಿಗೂ ಕೆಲಸದಾಳಿಗೂ ಸಂಬಂಧ ಕಲ್ಪಿಸಿದ ಚಾನೆಲ್‌ಗಳು. ಸಹವೈದ್ಯೆಯರೊಂದಿಗೆ ತಮ್ಮ ಹೆಸರು ಥಳುಕು ಹಾಕಿದ ನಂತರ ಚಾರಿತ್ರ್ಯವೇ ನಾಶವಾದ ಅನುಭವಿ.ಸಹ ವೈದ್ಯೆಯರು ಸಹ ಬೀದಿಯಲ್ಲಿ ತಿರುಗಾಡದಂತಾಯಿತು. ಎಲ್ಲರ ಮೇಲೂ ಅನುಮಾನದ ಕಣ್ಣು. ಸ್ವತಃ ತಲ್ವಾರ್ ಪತ್ನಿ ನೂಪುರ್‌ಗೆ ಪ್ರಪಂಚವೇ ತಲೆಯ ಮೇಲೆ ಬಿದ್ದ ಅನುಭವ. ಒಂದೆಡೆ ಮಗಳ ಸಾವು. ಪತಿಯೇ ಕೊಲೆಗಡುಕ. ಆತನ ಚಾರಿತ್ರ್ಯವೂ ಶುದ್ಧವಿಲ್ಲ. ಕಂಡಕಂಡವರ ಜತೆ ಸಂಬಂಧ. ೧೪ರ ಮಗಳೂ ದಾರಿ ತಪ್ಪಿದ್ದಳು. ಕೆಲಸದವನೊಂದಿಗೆ ಸಂಬಂಧ ಇಟ್ಟುಕೊಂಡಿದ್ದಳು..... ಇಂಥವೆಲ್ಲ ಆರೋಪಗಳನ್ನು, ಆಘಾತಗಳನ್ನು ಆ ಹೆಣ್ಣು ಮಗಳಾದರೂ ಹೇಗೆ ಸಹಿಸಿಕೊಂಡಳು. ನೂಪುರ್ ತನ್ನ ಪತಿಯ ಪರವಾಗಿ ಗಟ್ಟಿಯಾಗಿ ನಿಂತರು. ಎಲ್ಲ ಅವಮಾನಗಳನ್ನು ಸಹಿಸಿಕೊಂಡರು. ತನ್ನ ಪತಿ ನಿರ್ದೋಷಿ ನಿರಪರಾಧಿ ಎಂದು ಸಾರಿ ಸಾರಿ ಹೇಳಿದರು. ಆತನಿಗೆ ಯಾವುದೇ ಮಹಿಳೆಯೊಂದಿಗೆ ಅನೈತಿಕ ಸಂಬಂಧವಿರಲಿಲ್ಲ ಎಂದು ಪದೇಪದೇ ಹೇಳಿದರು. ಆದರೆ ನಂಬುವ ಸ್ಥಿತಿಯಲ್ಲಿ ನಮ್ಮ ಮೀಡಿಯಾಗಳು ಇರಲಿಲ್ಲ. ಅಸಹಾಯಕ ಭಾರತೀಯ ಹೆಣ್ಣುಮಗಳ ಬಡಬಡಿಕೆ ಇದು ಎಂದು ಮೂಗುಮುರಿದವು.ಇಡೀ ಪ್ರಕರಣದ ಕುರಿತಾದ ರಂಜಿತ ಸುದ್ದಿಗಳನ್ನು ದಿನವೂ ಟೆಲಿವಿಷನ್‌ನಲ್ಲಿ ನೋಡುತ್ತಿದ್ದ ಲಕ್ಷಾಂತರ ಎಳೆಯ ಹೆಣ್ಣುಮಕ್ಕಳ ಕಥೆ ಏನಾಗಿರಬೇಕು. ಆ ಮಕ್ಕಳ ಮನಸ್ಸಿನಲ್ಲಿ ಎಂಥ ಭಾವನೆಗಳು ಮೂಡಿರಬೇಕು.

ಸಾಧಾರಣವಾಗಿ ಭಾರತೀಯ ಹೆಣ್ಣುಮಕ್ಕಳು ತಮ್ಮ ತಂದೆಯ ಜತೆಯೇ ಹೆಚ್ಚು ಅನುಬಂಧ ಹೊಂದಿರುತ್ತಾರೆ. ಹೆಚ್ಚು ಭದ್ರತಾಭಾವ ಅನುಭವಿಸುತ್ತಾರೆ. ಆದರೆ ಇದೆಲ್ಲದರ ಬುಡವೇ ಕಿತ್ತುಬರುವಂತೆ ಮೀಡಿಯಾಗಳು ಅಬ್ಬರಿಸುತ್ತಿದ್ದವು.ಇಡೀ ಒಂದು ಕುಟುಂಬವನ್ನು ಅನೈತಿಕವೆಂದು ಜರಿದು, ಅಮಾಯಕರಿಗೆ ಕೊಲೆಗಾರರ ಪಟ್ಟ ಹೊರೆಸಿದ, ಇಡೀ ದೇಶವನ್ನು ತಿಂಗಳುಗಳ ಕಾಲ ದಿಕ್ಕುತಪ್ಪಿಸಿದ, ಲಕ್ಷಾಂತರ ಅಪ್ರಾಪ್ತ ಹೆಣ್ಣುಮಕ್ಕಳ ಭಾವನೆಗಳೊಂದಿಗೆ ಚೆಲ್ಲಾಟವಾಡಿದ- ಆ ಹೆಣ್ಣು ಮಕ್ಕಳಲ್ಲಿ ತಮ್ಮ ತಂದೆಯರ ಜತೆಯೆ ಅಭದ್ರತಾ ಭಾವ ಮೂಡಿಸಿದ ಈ ಎಲೆಕ್ಟ್ರಾನಿಕ್ ಮಾಧ್ಯಮದ ತಥಾಕಥಿಕ ಪತ್ರಕರ್ತರು, ಅವರನ್ನು ಪೊರೆಯುವ ಬಂಡವಾಳಶಾಹಿ ಮಾಲೀಕರಿಗೆ ಈಗ ಏನೆನ್ನುವುದು?ಈ ಕೊಳಕು ಕಾರ್ಯ ಮಾಡಿದವರು ದೇಶದ ಕ್ಷಮೆ ಯಾಚಿಸಬೇಕು ಅಲ್ಲವೆ? ದೇಶದ ಸಣ್ಣ ವಯಸ್ಸಿನ ಎಲ್ಲ ಹೆಣ್ಣು ಮಕ್ಕಳ ಕ್ಷಮೆ ಯಾಚಿಸಬೇಕು ಅಲ್ಲವೇ? ಮುಗ್ದ ಅರುಷಿಯನ್ನು ಯಾರೋ ಪಾಪಿಗಳು ಕೊಂದು ಹಾಕಿದರು. ಅವರಿಗೇನೋ ಶಿಕ್ಷೆಯಾಗುತ್ತದೆ. ಆದರೆ ದೇಶದ ಲಕ್ಷಾಂತರ ಹೆಣ್ಣುಮಕ್ಕಳ ಕೋಮಲ ಮನಸ್ಸನ್ನು ಕೊಂದವರಿಗೆ ಶಿಕ್ಷೆ ಕೊಡುವವರು ಯಾರು?