
ನೀವು ಆಧುನಿಕ ದೇವತೆಗಳು
ಧರಿಸಿದ ಹಾರ ಒಣಗುವುದಿಲ್ಲ
ಪಾದ ನೆಲಕ್ಕೆ ತಾಕುವುದಿಲ್ಲ
ಕಣ್ಣ ರೆಪ್ಪೆಗಳು ಮಿಟುಕುವುದಿಲ್ಲ
ನಾವು ಕ್ಯಾಕರಿಸಿ ಉಗಿದರೂ
ಅದು ನಿಮ್ಮನ್ನು ತಲುಪುವುದಿಲ್ಲ
ಬೈದಿದ್ದು, ಕೂಗಿದ್ದು, ಚೀತ್ಕರಿಸಿದ್ದೆಲ್ಲ
ನಿಮ್ಮ ಎತ್ತೆತ್ತರದ ಮಹಲು-ಮಿನಾರುಗಳ ಗೋಡೆಗೆ ತಗುಲಿ
ವಾಪಾಸು ನಮ್ಮ ಅಂಗಳಕ್ಕೇ ಬೀಳುತ್ತದೆ
ನೀವು ಎಲ್ಲೋ ಆಕಾಶದಲ್ಲಿ ಇರುವವರು
ತಳದಲ್ಲಿ ನಾವು
ನಿಮ್ಮ ನೋಡಲು ತಲೆ ಎತ್ತಿ ಎತ್ತಿ
ನರಗಳು ಬಿಗಿದು, ಕುತ್ತಿಗೆ ನೋವು ಬಂದು
ಇದೀಗ ತಲೆ ತಗ್ಗಿಸಿ ನಿಂತಿದ್ದೇವೆ.
ತಗ್ಗಿದ ತಲೆಯೇ ನಮಗೀಗ ಖಾಯಮ್ಮು
ಆ ಕಾಲದ ದೇವತೆಯರು
ಪುಷ್ಪವೃಷ್ಟಿ ಸುರಿಸುತ್ತಿದ್ದರಂತೆ
ನಾವು ನಮ್ಮ ತಲೆಯ ಮೇಲೆ
ಈಗೀಗ ನಮ್ಮದೇ ಮಲ ಸುರಿದುಕೊಳ್ಳುತ್ತಿದ್ದೇವೆ
ನೀವು ಆಧುನಿಕ ದೇವತೆಗಳು
ವೇಷ ಮರೆಸಿಕೊಳ್ಳುವುದು ಸಲೀಸು ನಿಮಗೆ
ಗಂಡಂದಿರ ವೇಷದಲ್ಲಿ ಹೆಣ್ಣು ಮಕ್ಕಳ
ಜತೆ ಮಲಗೆದ್ದು ಬರುತ್ತೀರಿ
ದೇಶಭಕ್ತರ ಹೆಸರಿನಲ್ಲಿ
ಮಚ್ಚು, ತಲವಾರು, ಬಂದೂಕು ಹಿರಿದು
ಧರ್ಮಯುದ್ಧವಾಡುತ್ತೀರಿ
ರೈತನ ವೇಷದಲ್ಲಿ ಬಂದು
ಭೂಮಿ ಸಿಗಿದು ತಿನ್ನುತ್ತೀರಿ
ನಿಮ್ಮೆದುರು ಅಮಾಯಕವಾಗಿ ನಿಂತ
ನಮ್ಮ ತಲೆಯ ಮೇಲೆ ಕಾಲಿಟ್ಟು
ಮೂರೇ ಹೆಜ್ಜೆಗೆ ಭೂಮಂಡಳವನ್ನು ಅಳೆದು
ನಿಮ್ಮ ಹೆಸರಿಗೆ ರಿಜಿಸ್ಟರು ಮಾಡಿಕೊಂಡವರು ನೀವು
ಮುಟ್ಟಿದರೂ ಮುಟ್ಟಲಾಗದು ನಿಮ್ಮ;
ಚಣಮಾತ್ರದಲ್ಲಿ ಅಂತರ್ಧಾನರಾಗುತ್ತೀರಿ
ದೇವತೆಗಳು ನೀವು;
ಏನು ಮಾಡಿದರೂ ಅದು ಪುರಾಣೇತಿಹಾಸ
ನಾವೋ ಹುಲು ಮಾನವರು
ಪುಷ್ಪವೃಷ್ಟಿಗೆ ಕಾದು ನಿಂತು ಸೋತವರು
ಬೇಜಾರಾಗಿ ಮಲ ಸುರಿದುಕೊಂಡವರು..