Friday, December 19, 2008

ಸಾವು ಅಲ್ಲಿ ಮನೆಮನೆಯ ಮುಂದೆ ಗಸ್ತು ಹೊಡೆಯುತ್ತಿದೆ


ಎರಡನೇ ಮಹಾಯುದ್ಧದ ಕಾಲವದು. ನಾಜೀ ಆಧಿಪತ್ಯದ ಜರ್ಮನಿ ತನ್ನ ಸುತ್ತಮುತ್ತಲಿನ ಒಂದೊಂದೇ ರಾಷ್ಟ್ರಗಳನ್ನು ಆಕ್ರಮಿಸಿಕೊಳ್ಳುತ್ತಿತ್ತು. ಪೋಲೆಂಡ್, ಡೆನ್ಮಾರ್ಕ್, ನಾರ್ವೆ, ನೆದರ್‌ಲ್ಯಾಂಡ್, ಬೆಲ್ಜಿಯಂಗಳನ್ನು ತನ್ನ ಅಸಾಮಾನ್ಯ ಸೈನ್ಯಬಲದಿಂದ ವಶಪಡಿಸಿಕೊಂಡ ಜರ್ಮನಿ ಬಲಶಾಲಿ ಫ್ರಾನ್ಸ್ ದೇಶವನ್ನೂ ಸಹ ಆಕ್ರಮಿಸಿಕೊಂಡಿತ್ತು.

ಆ ಕಾಲಕ್ಕೆ ಜರ್ಮನಿ ‘ಅಟ್ಲಾಂಟಿಸ್ ಎಂಬ ರಹಸ್ಯ ನೌಕೆಯೊಂದನ್ನು ದಕ್ಷಿಣ ಅಟ್ಲಾಂಟಿಕ್ ಹಾಗು ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ದಾಳಿಗೆ ಇಳಿಸಿತ್ತು. ಮಹಾಯುದ್ಧದ ಮಿತ್ರರಾಷ್ಟ್ರಗಳ ಹಡಗುಗಳನ್ನು ನಾಶಗೊಳಿಸುವುದು ಈ ರಹಸ್ಯ ನೌಕೆಗೆ ನೀಡಲಾಗಿದ್ದ ಕಾರ್‍ಯಸೂಚಿ. ಇಂಥ ಹಲವು ರಹಸ್ಯ ನೌಕೆಗಳನ್ನು ಜರ್ಮನಿ ಉಪಯೋಗಿಸುತ್ತಿತ್ತಾದರೂ ಅತ್ಯಂತ ಭೀಕರ ನೌಕೆ ಎನಿಸಿಕೊಂಡಿದ್ದು ‘ಅಟ್ಲಾಂಟಿಸ್. ಅದಕ್ಕೆ ಕಾರಣ ‘ಅಟ್ಲಾಂಟಿಸ್ ನೌಕೆಯ ಕ್ಯಾಪ್ಟನ್ ಬರ್ನ್‌ಹಾರ್ಡ್ ರೋಗೆ ಎಂಬಾತನ ಅದ್ಭುತ ಸಾಮರ್ಥ್ಯ ಹಾಗು ಸಾಹಸಗಳು.

ಮಿತ್ರರಾಷ್ಟ್ರಗಳ ಹಲವಾರು ನೌಕೆಗಳನ್ನು ನಾಶಪಡಿಸಿದ ‘ಅಟ್ಲಾಂಟಿಸ್ ಹೆಸರು ಕೇಳಿದರೆ ನಡುಗುವ ಸ್ಥಿತಿ ಆಗ ನಿರ್ಮಾಣವಾಗಿತ್ತು. ಮಾಮೂಲು ಸರಕು ಸಾಗಣೆ ಹಡಗಿನಂತೆ ಕಾಣುತ್ತಿದ್ದ ಈ ನೌಕೆಯಲ್ಲಿ ಆ ಕಾಲದ ಅತ್ಯಾಧುನಿಕ ಫಿರಂಗಿಗಳು, ಮಿಷನ್ ಗನ್ನುಗಳು, ಜಲಾಂತರ್ಗಾಮಿ ವಿಮಾನಗಳನ್ನು ಅಡಗಿಸಿಡಲಾಗುತ್ತಿತ್ತು. ಎದುರಿಗೆ ಯಾವುದಾದರೂ ನೌಕೆ ಬಂದಾಗ ಹಡಗಿನ ಸ್ವರೂಪವನ್ನೇ ಬದಲಿಸಿ ಅದನ್ನು ಜಪಾನ್ ದೇಶದ ಹಡಗಿನಂತೆಯೋ, ಸೋವಿಯತ್ ದೇಶದ ಹಡಗಿನಂತೆಯೋ ಅಣಿಗೊಳಿಸಲಾಗುತ್ತಿತ್ತು. ವೈರಿ ನೌಕೆ ಹತ್ತಿರವಾಗುತ್ತಿದ್ದಂತೆ ಅದರ ಮೇಲೆ ದಾಳಿ ನಡೆಸಿ ಮುಳುಗಿಸಲಾಗುತ್ತಿತ್ತು.

ಇಷ್ಟೆಲ್ಲ ಸಾಹಸಗಳನ್ನು ಅತ್ಯಂತ ನೈಪುಣ್ಯದಿಂದ ಮಾಡುತ್ತಿದ್ದ ರೋಗೆ ಪ್ರಥಮ ವಿಶ್ವಯುದ್ಧದಲ್ಲೂ ಪಾಲ್ಗೊಂಡಿದ್ದ. ಆದರೆ ಈತ ಪ್ರವರ್ಧಮಾನಕ್ಕೆ ಬಂದಿದ್ದು ಎರಡನೇ ಮಹಾಯುದ್ಧದ ಸಂದರ್ಭದಲ್ಲಿ. ೧೯೩೯ರ ಡಿಸೆಂಬರ್‌ನಲ್ಲಿ ಜರ್ಮನಿ ‘ಅಟ್ಲಾಂಟಿಸ್ ನೌಕೆಯನ್ನು ರೂಪಿಸಿ, ೧೯೪೦ರಲ್ಲಿ ಸಾಗರದ ಕುರುಕ್ಷೇತ್ರಕ್ಕೆ ಇಳಿಸಿತ್ತು. ೧೯೪೧ರಲ್ಲಿ ನವೆಂಬರ್ ೨೨ರಂದು ಬ್ರಿಟನ್ ಯುದ್ಧನೌಕೆ ಡವಾನ್ ಶೈರ್ ದಾಳಿಗೆ ಸಿಲುಕಿ ನಾಶವಾಗುವುದಕ್ಕೆ ಮುನ್ನ ಈ ನೌಕೆ ನಡೆಸಿದ ಕಾರ್ಯಾಚರಣೆ, ತೋರಿದ ಸಾಹಸಗಳಿಗೆ ಲೆಕ್ಕವಿಲ್ಲ.

ಇದೆಲ್ಲ ರೋಗೆಯ ಸಾಹಸದ ಕಥೆಯಾಯಿತು. ಆದರೆ ಬಹುಮುಖ್ಯವಾಗಿ ಗುರುತಿಸಬೇಕಾದ ವಿಷಯವೇ ಬೇರೆ. ರೋಗೆ ಇತರ ಯುದ್ಧಪಿಪಾಸುಗಳ ಹಾಗೆ ಇರಲಿಲ್ಲ. ಆತ ಅತ್ಯಂತ ಪ್ರಾಮಾಣಿಕವಾಗಿ ಯುದ್ಧನೀತಿಯನ್ನು ಪಾಲಿಸುತ್ತಿದ್ದ. ವೈರಿನೌಕೆಗಳ ಮೇಲೆ ದಾಳಿ ನಡೆಸಿದಾಗ ಆತ ಯಾರನ್ನೂ ಕೊಲ್ಲುತ್ತಿರಲಿಲ್ಲ. ಆತ ಮಾನವಹಕ್ಕುಗಳನ್ನು ಗೌರವಿಸುತ್ತಿದ್ದ. ವೈರಿ ನೌಕೆಗಳನ್ನು ಮುಳುಗಿಸುವ ಮುನ್ನ ಅವನು ಆ ನೌಕೆಯಲ್ಲಿ ಇದ್ದ ಎಲ್ಲರನ್ನೂ ತನ್ನ ನೌಕೆಗೆ ಹತ್ತಿಸಿಕೊಳ್ಳುತ್ತಿದ್ದ. ಆ ಯುದ್ಧ ಖೈದಿಗಳಿಗೆ ಊಟ, ತಿಂಡಿ, ಮಲಗಲು ಕೋಣೆ ಎಲ್ಲವನ್ನೂ ಒದಗಿಸುತ್ತಿದ್ದ. ಯುದ್ಧ ಖೈದಿಗಳು ಎಲ್ಲರಂತೆ ಆರಾಮವಾಗಿ ಓಡಾಡಿಕೊಂಡಿರಬಹುದಾಗಿತ್ತು.

ಇನ್ನೂ ವಿಚಿತ್ರವೆಂದರೆ ರೋಗೆ ಜತೆಗಿದ್ದ ಯುದ್ಧಖೈದಿಗಳು ಅಟ್ಲಾಂಟಿಸ್‌ನಲ್ಲೇ ಒಂದು ಕ್ಲಬ್ ಮಾಡಿಕೊಂಡಿದ್ದರು. ಆ ಕ್ಲಬ್ ನಡೆಸುವ ಕಾರ್ಯಕ್ರಮಗಳಿಗೆ ರೋಗೆ ಸೇರಿದಂತೆ ಅಟ್ಲಾಂಟಿಸ್‌ನ ಅಧಿಕಾರಿಗಳು ಅತಿಥಿಗಳಾಗಿ ಬರುತ್ತಿದ್ದರು. ಯುದ್ಧಖೈದಿಗಳನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ ರೋಗೆ ಅವರಿಗೆ ಬೀಳ್ಕೊಡುಗೆ ಪಾರ್ಟಿ ಕೊಡುತ್ತಿದ್ದ.

ಇಂಥ ಮಾನವೀಯ ಗುಣಗಳಿಂದಲೇ ರೋಗೆ ಇತಿಹಾಸದ ಪುಟ ಸೇರಿಹೋದ. ಹಲವು ರಾಷ್ಟ್ರಗಳು ಆತನಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಿದವು. ಜರ್ಮನಿ ಸೋಲುಂಡರೂ ಮಿತ್ರರಾಷ್ಟ್ರಗಳು ರೋಗೆಯನ್ನು ಬಂಧಿಸಲಿಲ್ಲ. ೧೯೮೨ರ ಜೂನ್ ೨೯ರಂದು ಮೃತಪಟ್ಟ ರೋಗೆ ೮೨ ವರ್ಷಗಳ ತುಂಬು ಜೀವನವನ್ನು ನಡೆಸಿದ.

********

ಯುದ್ಧವೆಂಬುದೇ ಅಮಾನವೀಯ. ಅದರಲ್ಲಿ ರೋಗೆಯಂಥವರನ್ನು ಹುಡುಕುವುದು ಕಷ್ಟ. ಕೊಲ್ಲಿಯಲ್ಲಿ ನಡೆಯುತ್ತಿರುವ ಯುದ್ಧದ ನಡುವೆ ಇದೆಲ್ಲವೂ ನೆನಪಾಗುತ್ತಿದೆ. ಬುಷ್ ಹಾಗು ಟೋನಿ ಬ್ಲೇರ್‌ಗಳ ರಣಹದ್ದುಗಳಂಥ ಸೈನ್ಯ ಇರಾಕ್‌ನ ಮೇಲೆ ಹಗಲಿರುಳೆನ್ನದೆ ಎರಗುತ್ತಿದೆ. ಕೇವಲ ಇರಾಕಿ ಸೈನ್ಯ ಈ ಪಡೆಗಳ ಗುರಿಯಲ್ಲ. ನೇರವಾಗಿ ಅಮಾಯಕ ಇರಾಕಿ ನಾಗರಿಕರು ಬಲಿಯಾಗುತ್ತಿದ್ದಾರೆ. ಬುಷ್ ಸೈನ್ಯ ಜನವಸತಿ ಪ್ರದೇಶಗಳ ಮೇಲೆ ಮಿಸೈಲುಗಳನ್ನು ಬಿಟ್ಟು ಸಾವಿರಾರು ಮುಗ್ಧರನ್ನು ಕೊಲ್ಲುತ್ತಿದೆ.

ಪ್ರಮುಖ ಬಂದರುಗಳನ್ನು ಅಮೆರಿಕ ಹಿಡಿದಿಟ್ಟುಕೊಂಡಿರುವುದರಿಂದ ಇರಾಕ್‌ನಲ್ಲಿ ಈಗ ಜೀವನಾವಶ್ಯಕ ವಸ್ತುಗಳ ಸಾಗಣೆ ಕಾರ್ಯ ನಿಂತುಹೋಗಿದೆ. ಮಕ್ಕಳು ಹಸಿವಿನಿಂದ ಸಾಯುತ್ತಿವೆ. ಕಳೆದ ಕೊಲ್ಲಿ ಯುದ್ಧದಲ್ಲಿ ಸುಮಾರು ೨೫,೦೦೦ ಎಳೆಯ ಕಂದಮ್ಮಗಳು ಹಸಿವಿನಿಂದಲೇ ಸತ್ತು ಹೋಗಿದ್ದವು. ಈ ಬಾರಿ ಈ ಸಂಖ್ಯೆ ಇದಕ್ಕಿಂತ ಕಡಿಮೆಯಿರುವುದು ಸಾಧ್ಯವೇ ಇಲ್ಲ.

ಯುದ್ಧವೆಂಬುದಕ್ಕೆ ಮಾನವೀಯತೆ ಇರುವುದು ಸಾಧ್ಯವಿಲ್ಲ. ಧರ್ಮಸ್ಥಾಪನೆಗಾಗಿ ಯುದ್ಧ ಎಂಬ ಸ್ಲೋಗನ್ನನ್ನು ಎಲ್ಲ ಧರ್ಮಗಳು ಬಳಸುತ್ತವೆ. ಆದರೆ ಸತ್ಯ ಏನೆಂದರೆ ಎಲ್ಲ ಧರ್ಮಗಳೂ ಯುದ್ಧೋನ್ಮಾದಿಗಳು. ಅಹಿಂಸೆಯನ್ನು ಪ್ರತಿಪಾದಿಸಿದ, ಪರಿಪಾಲಿಸಿದ ಬುದ್ಧಧಮ್ಮ ನಮ್ಮ ಇಂದಿನ ರಣೋತ್ಸಾಹಿಗಳ ನಡುವೆ ಔಟ್‌ಡೇಟ್ ಆದ ಧರ್ಮ. ಹಿಟ್ಲರ್ ಮಹಾಯುದ್ಧಗಳ ಸಂದರ್ಭದಲ್ಲಿ ಜ್ಯೂಗಳ ಮಕ್ಕಳನ್ನೆಲ್ಲ ಕುರಿಗಳನ್ನು ತುಂಬುವ ಹಾಗೆ ತುಂಬಿ ಸಾಗಿಸಿ ಕೊಲ್ಲುತ್ತಿದ್ದ. ಬಹುತೇಕ ಮಕ್ಕಳು ಲಾರಿಗಳಲ್ಲೇ ಉಸಿರುಗಟ್ಟಿ ಸಾಯುತ್ತಿದ್ದವು. ಬದುಕುಳಿದವುಗಳನ್ನು ಗ್ಯಾಸ್ ಚೇಂಬರ್‌ಗಳಲ್ಲಿ ಹಾಕಿ ಸಾಯಿಸಲಾಗುತ್ತಿತ್ತು. ಈಗ ಜಾರ್ಜ್ ಬುಷ್ ಸರದಿ. ಈತ ಇರಾಕಿ ಮಕ್ಕಳನ್ನು ಹಸಿವೆಯಿಂದ ಕೊಲ್ಲುತ್ತಿದ್ದಾನೆ.

ಒಬ್ಬ ಕ್ಯಾಪ್ಟನ್ ರೋಗೆಯ ಮಾನವೀಯತೆ ಬುಷ್‌ನಲ್ಲಾಗಲೀ, ಬ್ಲೇರ್‌ನಲ್ಲಾಗಲಿ, ಸದ್ದಾಂ ಹುಸೇನ್‌ನಲ್ಲಾಗಲೀ ಇಲ್ಲವೇ ಇಲ್ಲ. ಹಾಗಾಗಿ ‘ಸಾವು ಇರಾಕ್‌ನ ಮನೆಮನೆಯ ಮುಂದೆಯೂ ಗಸ್ತು ಹೊಡೆಯುತ್ತಿದೆ. ಮುಗ್ಧಮಕ್ಕಳು ಗುಂಡಿಗೆ, ಬಾಂಬಿಗೆ, ಹಸಿವಿಗೆ ಪ್ರಾಣ ಬಿಡುತ್ತಿವೆ.
ಯುದ್ಧಕ್ಕೆ ಧಿಕ್ಕಾರವಿರಲಿ

ಏಪ್ರಿಲ್ ೧೫, ೨೦೦೩, ಅಭಿಮನ್ಯು ಪತ್ರಿಕೆ

******

ಇರಾಕ್ ಮೇಲೆ ಅಮೆರಿಕ ಮತ್ತು ಮಿತ್ರರಾಷ್ಟ್ರಗಳು ನಡೆಸಿದ ದಾಳಿ ಸಂದರ್ಭದಲ್ಲಿ ಬರೆದ ಲೇಖನವಿದು.

ಜಾರ್ಜ್ ಬುಷ್ ಮೇಲೆ ಇರಾಕಿ ಪತ್ರಕರ್ತ ಅಲ್‌ಜೈದಿ ಬೂಟು ಎಸೆದು ಸುದ್ದಿಯಾಗಿದ್ದಾನೆ. ಆತ ಮೊದಲ ಬೂಟನ್ನು ಎಸೆಯುವಾಗ ‘ಎಲೆ ನಾಯಿ, ಇರಾಕಿ ಜನರಿಂದ ಇದು ನಿನಗೆ ವಿದಾಯ ಮುತ್ತು ಎಂದು ಹೇಳಿದ್ದ. ಎರಡನೇ ಬೂಟನ್ನು ಎಸೆಯುವಾಗ ‘ವಿಧವೆಯರ, ತಬ್ಬಲಿ ಮಕ್ಕಳ, ಯುದ್ಧದಲ್ಲಿ ಸತ್ತ ಎಲ್ಲರ ಪರವಾಗಿ ನಿನಗಿದು ಕಾಣಿಕೆ ಎಂದು ಹೇಳಿದ್ದಾನೆ.

ಇರಾಕ್‌ನಲ್ಲಿ ಸಮೂಹನಾಶಕ ಶಸ್ತ್ರಾಸ್ತ್ರಗಳಿವೆ ಎಂಬ ಕುಂಟುನೆಪವನ್ನೊಡ್ಡಿ ಅಮೆರಿಕ ಆ ದೇಶದ ಮೇಲೆ ಯುದ್ಧ ಹೇರಿತು. ಜಗತ್ತಿನ ಇತರ ರಾಷ್ಟ್ರಗಳಿಗೆ ಈ ಯುದ್ಧವನ್ನು ವಿರೋಧಿಸುವ ಶಕ್ತಿಯೂ ಇರಲಿಲ್ಲ. ಯುದ್ಧ ಮುಗಿದ ಮೇಲೆ ಇರಾಕ್‌ನಲ್ಲಿ ಯಾವ ಸಮೂಹನಾಶಕ ಶಸ್ತ್ರಾಸ್ತ್ರವೂ ಲಭ್ಯವಾಗಲಿಲ್ಲ.
ಆದರೆ ಲಕ್ಷಗಟ್ಟಲೆ ಜನ ಸತ್ತು ಹೋದರು. ಕೊಲೆಗಡುಕ ಬುಷ್ ಅಮಾಯಕ ಮಕ್ಕಳನ್ನು ಹಸಿವೆಯಿಂದ ಸಾಯುವಂತೆ ಮಾಡಿದ. ಯಾವ ಕೋರ್ಟಿನಲ್ಲೂ ಈ ಕೊಲೆಗಳಿಗಾಗಿ ಬುಷ್‌ಗೆ ಶಿಕ್ಷೆಯಾಗುವುದಿಲ್ಲ. ಜೈದಿ ಬೂಟು ಎಸೆದ ತಕ್ಷಣ ಆ ಮಕ್ಕಳು ಬದುಕಿ ಬರಲಾರರು ನಿಜ, ಆದರೆ ಅಲ್‌ಜೈದಿ ಇರಾಕಿ ಜನರ ಒಡಲುರಿಯನ್ನೇ ಅಭಿವ್ಯಕ್ತಿಸಿದ್ದಾನೆ.

ಮುಂಬೈ ದಾಳಿಯ ನಂತರ ಪಾಕಿಸ್ತಾನದ ಮೇಲೆ ಯುದ್ಧ ಹೂಡಬೇಕು ಎಂದು ನಮ್ಮ ಕೆಲ ದೇಶಭಕ್ತ ಯುದ್ಧೋನ್ಮಾದಿಗಳು ಒಕ್ಕೊರಲಿನಿಂದ ಕೂಗಿಡುತ್ತಿದ್ದಾರೆ. ಬೂಟು ಪ್ರಕರಣ ಹಾಗು ಯುದ್ಧೋನ್ಮಾದಿಗಳ ಅರಚಾಟದ ನಡುವೆ ೨೦೦೩ರಲ್ಲಿ ಬರೆದಿದ್ದ ಈ ಲೇಖನ ನೆನಪಾಯಿತು. ಅದನ್ನು ಇಲ್ಲಿ ಪ್ರಕಟಿಸಿದ್ದೇನೆ.

4 comments:

Anonymous said...

ಉತ್ತಮ ಲೇಖನ. ಐದು ವರ್ಷಗಳ ಹಿಂದೆ ಬರೆದಿದ್ದರೂ ಈಗಿನ ಪರಿಸ್ಥಿತಿಗೆ ಒಪ್ಪುವಂತಿದೆ.
ಹಿಟ್ಲರ್‌ನಂಥ ರಕ್ಕಸನ ಪಡೆಯಲ್ಲಿ ರೇಗೆಯಂಥ ಮಾನವೀಯ ಮಿಲಿಟರಿ ಅಧಿಕಾರಿ ಇದ್ದ ಎಂಬುದನ್ನು ನಂಬುವುದೇ ಕಷ್ಟ.

Anonymous said...

ಯುದ್ಧಪ್ರೇಮಿ, ಮನುಷ್ಯತ್ವದ ವಿರೋಧಿ ಜಾರ್ಜ್ ಬುಷ್‌ಗೆ ಬೂಟು ಎಸೆದು ಅಲ್ ಜೈದಿ ಸರಿಯಾಗಿಯೇ ಮಾಡಿದ್ದಾನೆ. ಆತ ಮಾಡಿದ್ದು ಅನಾಗರಿಕ ವರ್ತನೆ ನಿಜ. ಆದರೆ ಬುಷ್ ಇರಾಕ್‌ನಲ್ಲಿ ನಡೆಸಿದ ನರಮೇಧಕ್ಕೆ ಹೋಲಿಸಿದರೆ ಇದು ಅಂಥ ಮಹಾಪರಾಧವೇನೂ ಅಲ್ಲ.
ಮಾನವೀಯತೆ ಉಳಿಯಲಿ, ಹಿಂಸೆ ಕೊನೆಗೊಳ್ಳಲಿ.
ವಿಶ್ವನಾಥ್

Anonymous said...

ಕೊಲೆಗಡುಕ ಬುಷ್ ಅಮಾಯಕ ಮಕ್ಕಳನ್ನು ಹಸಿವೆಯಿಂದ ಸಾಯುವಂತೆ ಮಾಡಿದ. ಯಾವ ಕೋರ್ಟಿನಲ್ಲೂ ಈ ಕೊಲೆಗಳಿಗಾಗಿ ಬುಷ್‌ಗೆ ಶಿಕ್ಷೆಯಾಗುವುದಿಲ್ಲ. ಜೈದಿ ಬೂಟು ಎಸೆದ ತಕ್ಷಣ ಆ ಮಕ್ಕಳು ಬದುಕಿ ಬರಲಾರರು ನಿಜ, ಆದರೆ ಅಲ್‌ಜೈದಿ ಇರಾಕಿ ಜನರ ಒಡಲುರಿಯನ್ನೇ ಅಭಿವ್ಯಕ್ತಿಸಿದ್ದಾನೆ.
-ನೀವು ಬರೆದಿರುವುದು ಸರಿಯಾಗಿದೆ.

Anonymous said...

bahala hinde bareda lekhanavadaru bayotpadakara attahasa mattu 3ne mahayudha sadyathe sandarbada mele nimma lekhana belaku chelluvanthide.
1-2 mahayudhadalli iddanthaha rowge yantha adikari 3ne mahayudda sambhavisidare durbhenu haki hudikidaru sigalararu allave?
*sundar