Tuesday, August 19, 2008

ಜಾತಿವಾರು ಸಮೀಕ್ಷೆಗೆ ಯಥಾಸ್ಥಿತಿವಾದಿಗಳ ವಿರೋಧ, ಇತ್ಯಾದಿ...

ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಲು ಉದ್ದೇಶಿಸಿರುವ ಬೃಹತ್ ಜಾತಿವಾರು ಜನಗಣತಿ ಹಾಗು ಸಮೀಕ್ಷೆ ಕುರಿತಂತೆ ಔಟ್‌ಲುಕ್‌ನ ಆಗಸ್ಟ್-೨೫ರ ಸಂಚಿಕೆಯಲ್ಲಿ ವಿಸ್ತ್ರತ ವರದಿಯೊಂದು ಪ್ರಕಟವಾಗಿದೆ. ಈ ಉದ್ದೇಶಿತ ಸಮೀಕ್ಷೆಯನ್ನು ಕಾರ್ಪರೇಟ್ ಸಂಸ್ಥೆಗಳು ಹಾಗು ರಾಜಕಾರಣಿಗಳು ಹೇಗೆ ವಿರೋಧಿಸುತ್ತಿದ್ದಾರೆ ಎಂಬುದರ ಕುರಿತು ಈ ವರದಿಯಲ್ಲಿ ಬೆಳಕು ಚೆಲ್ಲಲು ಯತ್ನಿಸಲಾಗಿದೆ. ಕಾರ್ಪರೇಟ್‌ಗಳು ಹಾಗು ರಾಜಕಾರಣಿಗಳಿಗೆ ಈ ಸಮೀಕ್ಷೆಯನ್ನು ವಿರೋಧಿಸಲು ಬೇರೆಬೇರೆಯಾದ ಕಾರಣಗಳಿವೆ. ಆದರೆ ಎರಡೂ ವಲಯದ ಅಂತಿಮ ಉದ್ದೇಶ ಒಂದೇ; ಅದು ಯಥಾಸ್ಥಿತಿವಾದ.

ಸ್ವತಂತ್ರ ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಜಾತಿವಾರು ಜನಗಣತಿಯೊಂದು ನಡೆಯುತ್ತಿದೆ. ೧೯೩೧ರಲ್ಲಿ ನಡೆದಿದ್ದ ರಾಷ್ಟ್ರಮಟ್ಟದ ಜಾತಿವಾರು ಜನಗಣತಿಯ ನಂತರ ಯಾವುದೇ ರೂಪದ ಜಾತಿವಾರು ಗಣತಿ ದೇಶದಲ್ಲಿ ನಡೆದಿಲ್ಲ. ಉದ್ದೇಶಿತ ಗಣತಿ ನಡೆದರೆ ಕರ್ನಾಟಕವೇ ಈ ಬಗೆಯ ಗಣತಿ ನಡೆಸಿದ ಮೊದಲ ರಾಜ್ಯವಾಗುತ್ತದೆ. ಬಹುಶಃ ಈ ಸಮೀಕ್ಷೆ ಇತರ ರಾಜ್ಯಗಳಿಗೆ ಮಾರ್ಗದರ್ಶಿಯೂ ಆಗುತ್ತದೆ. ಬದಲಾದ ಸಾಮಾಜಿಕ ಸ್ಥಿತಿಗತಿಗಳ ಹಿನ್ನೆಲೆಯಲ್ಲಿ ಜಾತಿವಾರು ಸ್ಥಿತಿಗತಿಗಳ ಕುರಿತು ಅವಲೋಕನ ಅನಿವಾರ್ಯ ಅಗತ್ಯ. ಅವಕಾಶ ವಂಚಿತರಿಗೆ ಉದ್ಯೋಗ, ಶಿಕ್ಷಣ, ರಾಜಕೀಯ ಇತ್ಯಾದಿ ವಲಯಗಳಲ್ಲಿ ಅವಕಾಶ ದೊರೆಯಲೇಬೇಕಾದ್ದು ಸಹಜನ್ಯಾಯ. ಹೀಗಾಗಿ ಈ ಗಣತಿ ಕಾರ್ಯ ಕರ್ನಾಟಕದಿಂದಲೇ ಆರಂಭವಾಗುತ್ತಿರುವುದು ಹೆಮ್ಮೆಯ ವಿಷಯ.

ಹೀಗಿದ್ದೂ ಈ ಬೃಹತ್ ಸಮೀಕ್ಷೆಗೆ ವಿರೋಧವೇಕೆ? ಇದು ಪ್ರಮುಖ ಪ್ರಶ್ನೆ. ಹಾಗೆ ನೋಡಿದರೆ ಮೇಲೆ ಉಲ್ಲೇಖಿಸಿದ ಎರಡೂ ವಲಯಗಳು ಸಮೀಕ್ಷೆಯನ್ನು ವಿರೋಧಿಸುತ್ತಿದ್ದರೂ, ಈ ವಿರೋಧಗಳು ನೇರವಾಗಿ ಎಲ್ಲೂ ದಾಖಲಾಗಿಲ್ಲ. ಸಮೀಕ್ಷೆ ವಿರೋಧಕ್ಕೆ ಯಾವುದೇ ಬಗೆಯ ನೈತಿಕ, ತಾಂತ್ರಿಕ ಕಾರಣಗಳಿಲ್ಲವಾದ್ದರಿಂದ ವಿರೋಧಿಗಳು ಬಹಿರಂಗವಾಗಿ ಅಖಾಡಕ್ಕೆ ಇಳಿದಿಲ್ಲ. ಆದರೆ ಸಮೀಕ್ಷೆ ಆರಂಭಗೊಂಡ ನಂತರ ಮೊಸರಲ್ಲಿ ಕಲ್ಲು ಹುಡುಕುವುದು ಕಷ್ಟವೇನಲ್ಲ. ಆಗ ಹೊಸ ಅಸ್ತ್ರಗಳು ವಿರೋಧಿಗಳ ಬತ್ತಳಿಕೆಯಲ್ಲಿ ಪ್ರತ್ಯಕ್ಷವಾಗುವುದು ಸಹಜ. ಹೀಗಾಗಿ ಇಂಥದ್ದೊಂದು ಐತಿಹಾಸಿಕ ಸಮೀಕ್ಷೆಗೆ ಪಟ್ಟಭದ್ರರು ಅವಕಾಶ ನೀಡುವರೆ ಎಂಬ ಅನುಮಾನ ಉದ್ಭವವಾಗಿದೆ.

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಹಿರಿಯ ವಕೀಲರು, ಜನಪರ ಚಿಂತಕರು ಆದ ಡಾ.ಸಿ.ಎಸ್.ದ್ವಾರಕಾನಾಥ್ ಅವರು ನೇಮಕಗೊಂಡ ನಂತರ ಸಾಕಷ್ಟು ಬೆಳವಣಿಗೆಗಳಾಗಿವೆ. ದ್ವಾರಕಾನಾಥ್ ಅವರು ಕುರ್ಚಿ ಬಿಸಿ ಮಾಡಿ ಹೋಗುವ ಜಾಯಮಾನದವರಲ್ಲ. ಆಯೋಗದಿಂದ ಆಗಬೇಕಿರುವ ಕೆಲಸಗಳನ್ನು ಆದ್ಯತೆ ಮೇರೆಗೆ ಪಟ್ಟಿ ಮಾಡಿಕೊಂಡು, ಕಿಂಚಿತ್ತೂ ಸಮಯ ಹಾಳು ಮಾಡದೆ ಕ್ರಿಯೆಗೆ ಇಳಿದವರು ಅವರು.

ನೆನೆಗುದಿಗೆ ಬಿದ್ದಿರುವ ಜಾತಿವಾರು ಸಮೀಕ್ಷೆಯನ್ನು ತಮ್ಮ ಅವಧಿಯಲ್ಲಿ ಪೂರೈಸುವ ಕಠಿಣ ಸವಾಲನ್ನು ಅವರು ಮೈ ಮೇಲೆ ಎಳೆದುಕೊಂಡರು. ವಾಸ್ತವವಾಗಿ ಈ ಸಮೀಕ್ಷೆ ಇಷ್ಟೊತ್ತಿಗಾಗಲೇ ಮುಗಿದು ಹೋಗಿರಬೇಕಿತ್ತು. ಕೇಂದ್ರ ಸರ್ಕಾರ ಸಮೀಕ್ಷೆಗೆಂದು ೨೧.೫ ಕೋಟಿ ರೂ. ನೀಡಿದೆ. ಈ ಹಣ ಈಗಾಗಲೇ ಆಯೋಗಕ್ಕೆ ವರ್ಗಾವಣೆಯಾಗಿದೆ. ಈ ಬಗೆಯ ಸಮೀಕ್ಷೆಗಾಗಿ ಕೇಂದ್ರ ಸರ್ಕಾರ ಮೊಟ್ಟಮೊದಲ ಬಾರಿಗೆ ಹಣ ಬಿಡುಗಡೆ ಮಾಡಿದ್ದು, ಮೊದಲು ಈ ಸೌಲಭ್ಯವನ್ನು ಕರ್ನಾಟಕವೇ ಪಡೆದಿರುವುದು ಒಂದು ವಿಶೇಷ. ೨೦೦೫ರಲ್ಲಿ ರಾಜ್ಯ ಸರ್ಕಾರ ೨ ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಸಮೀಕ್ಷೆ ಕಾರ್ಯ ಆರಂಭವಾದ ನಂತರ ಹೆಚ್ಚುವರಿ ೧೭.೫ ಕೋಟಿ ರೂ.ಗಳನ್ನು ಬಿಡುಗಡೆ ಮಾಡುವುದಾಗಿ ಈಗಿನ ಸರ್ಕಾರವೂ ಭರವಸೆ ನೀಡಿದೆ. ಸಮೀಕ್ಷಾ ಕಾರ್ಯ ಬಹುತೇಕ ಸೆಪ್ಟೆಂಬರ್ ತಿಂಗಳಿನಲ್ಲಿ ಆರಂಭಗೊಳ್ಳುವ ಸಾಧ್ಯತೆಗಳಿವೆ. ಇದಿಷ್ಟು ಸಮೀಕ್ಷೆ ಕುರಿತಂತೆ ನಡೆದಿರುವ ಬೆಳವಣಿಗೆಗಳು.

ಈ ಸಮೀಕ್ಷೆಗೆ ಎದ್ದಿರುವ ಹಿಂಬಾಗಿಲ ವಿರೋಧದ ಒಳಸುಳಿಗಳನ್ನು ಹುಡುಕುತ್ತ ಹೊರಟರೆ ಮುಂದೆ ಏಳಲಿರುವ ಭಾರೀ ವಿವಾದದ ಭೂತವೂ ಗೋಚರವಾಗುತ್ತದೆ.

ಆಯೋಗ ಕಳೆದ ಮಾರ್ಚ್‌ನಲ್ಲಿ ರಾಜ್ಯದ ೧೭೬ ಕಾರ್ಪರೇಟ್ ಸಂಸ್ಥೆಗಳಿಗೆ ನೋಟೀಸ್ ಒಂದನ್ನು ಜಾರಿ ಮಾಡಿತು. ಜಾತಿವಾರು ಸಮೀಕ್ಷಾ ಕಾರ್ಯ ನಡೆಯುತ್ತಿರುವುದರಿಂದ ತಮ್ಮ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳ ಧರ್ಮ ಹಾಗು ಜಾತಿವಾರು ಮಾಹಿತಿಗಳನ್ನು ನೀಡಿ ಎಂಬುದು ಈ ನೋಟೀಸ್‌ನ ಸಾರಾಂಶ. ಈ ನೋಟೀಸ್ ನೋಡಿ ಕಾರ್ಪರೇಟ್ ಸಂಸ್ಥೆಗಳು ಬೆಚ್ಚಿ ಬಿದ್ದಿವೆ. ನೋಟಿಸ್ ಕಳಿಸಲಾಗಿರುವ ಕಂಪೆನಿಗಳ ಪಟ್ಟಿಯಲ್ಲಿ ಇನ್ಫೋಸಿಸ್, ವಿಪ್ರೋ, ಐಬಿಎಂ, ಎಚ್‌ಪಿ, ಬಯೋಕಾನ್, ಯಾಹೂಗಳಂಥ ದೈತ್ಯ ಐಟಿ-ಬಿಟಿ ಸಂಸ್ಥೆಗಳ ಹೆಸರೂ ಇದೆ.

ಔಟ್‌ಲುಕ್‌ನಲ್ಲಿ ವರದಿಯಾಗಿರುವಂತೆ ಮಾರ್ಚ್‌ನಲ್ಲಿ ಜಾರಿಯಾದ ನೋಟಿಸ್‌ಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿ ಮಾಹಿತಿ ಒದಗಿಸಿರುವುದು ಕೇವಲ ೧೧ ಸಂಸ್ಥೆಗಳು! ೧೮ ಪತ್ರಗಳು ಬಟವಾಡೆಯಾಗದೆ ವಾಪಾಸ್ ಬಂದಿವೆ. ಮೂರು ಸಂಸ್ಥೆಗಳು ಈ ಬಗೆಯ ಮಾಹಿತಿಯನ್ನು ಒದಗಿಸಲು ಸಾಧ್ಯವಿಲ್ಲ ಎಂದು ಬರೆದಿವೆ. ನೋಟೀಸ್‌ಗೆ ಉತ್ತರಿಸಲು ಮೇ.೧೫ರವರೆಗೆ ಕಾಲಾವಕಾಶ ನೀಡಲಾಗಿತ್ತು. ಆದರೆ ಪ್ರತಿಕ್ರಿಯೆ ಮಾತ್ರ ನೀರಸ. ಈಗಾಗಲೇ ಆಯೋಗ ೧೫೪ ಸಂಸ್ಥೆಗಳಿಗೆ ಮತ್ತೆ ನೆನಪಿನ ಓಲೆಗಳನ್ನು ಬರೆದಿದೆ.

ಕಾರ್ಪರೇಟ್ ಸಂಸ್ಥೆಗಳು ಯಾಕೆ ಮೀನಮೇಷ ಎಣಿಸುತ್ತಿವೆ? ಯಾಕೆ ಮಾಹಿತಿ ನೀಡಲು ಹಿಂಜರಿಯುತ್ತಿವೆ? ಇದಕ್ಕೆ ಉತ್ತರವೂ ಔಟ್‌ಲುಕ್‌ನ ವರದಿಯಲ್ಲಿದೆ. “ನಮ್ಮ ಉದ್ಯೋಗಿಗಳ ಧರ್ಮ, ಜಾತಿಯನ್ನು ವಿಚಾರಿಸುವುದು ಮುಜುಗರದ ವಿಷಯ. ನಮ್ಮಲ್ಲಿ ನೇಮಕಾತಿಗಳನ್ನು ಧರ್ಮ ಅಥವಾ ಜಾತಿ ಆಧಾರದ ಮೇಲೆ ಮಾಡಿಕೊಳ್ಳಲಾಗುವುದಿಲ್ಲ. ಹೆಸರು ಹೇಳಲು ಇಚ್ಛಿಸದ ಕಾರ್ಪರೇಟ್‌ಗಳು ಮಾತನಾಡುವ ಧಾಟಿ ಇದು.

ಆದರೆ ದ್ವಾರಕಾನಾಥ್ ಅವರು ಪಟ್ಟು ಸಡಿಲಿಸುವ ಲಕ್ಷಣಗಳು ಇಲ್ಲ. ಒಂದು ವೇಳೆ ಈ ಸಂಸ್ಥೆಗಳು ಸಕಾರಾತ್ಮಕವಾಗಿ ಪ್ರತಿಕ್ರಿಯಿಸದಿದ್ದಲ್ಲಿ ಅನಿವಾರ್ಯವಾಗಿ ಸಮನ್ಸ್ ಜಾರಿಗೊಳಿಸಬೇಕಾದೀತು ಎಂದು ಈಗಾಗಲೇ ಅವರು ಎಚ್ಚರಿಸಿದ್ದಾರೆ. ಒಂದು ವೇಳೆ ಸಮನ್ಸ್ ನೀಡಿದರೂ ಪ್ರತಿಕ್ರಿಯಿಸದಿದ್ದರೆ? ಹೈಕೋರ್ಟ್ ನ್ಯಾಯಾಧೀಶರ ಹುದ್ದೆಯ ಸ್ಥಾನಮಾನ ದ್ವಾರಕಾನಾಥ್ ಅವರಿಗಿದೆ. ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸಿರುವುದು ಸರ್ಕಾರವಲ್ಲ, ಸುಪ್ರೀಂ ಕೋರ್ಟ್. ಹೀಗಾಗಿ ತಮಗೆ ದತ್ತವಾದ ಅಧಿಕಾರವನ್ನು ಬಳಸಿ ಈ ಕಾರ್ಪರೇಟ್ ಧಣಿಗಳಿಗೆ ಅವರು ವಾರಂಟ್ ಜಾರಿಗೊಳಿಸುವರೆ? ಕಾದು ನೋಡಬೇಕು!

ಈ ಮೊದಲೇ ಹೇಳಿದಂತೆ ಕಾರ್ಪರೇಟ್ ಸಂಸ್ಥೆಗಳ ಧಣಿಗಳು ಯಥಾಸ್ಥಿತಿವಾದಿಗಳು. ಆರ್ಥಿಕ ಜಗತ್ತಿನಲ್ಲಿ ಅವರು ಊರ್ಧ್ವಮುಖಿಗಳಾಗಿದ್ದರೇನು; ಸಾಮಾಜಿಕ ಬದ್ಧತೆಗಳ ವಿಷಯದಲ್ಲಿ ಅವರಿಗೆ ಯಾವ ಕಾಳಜಿಯೂ ಇಲ್ಲ. ಜಾತಿಯ ವಿಷಯ ಕೇಳುವುದು ಅವರಿಗೆ ಮುಜುಗರದ ವಿಷಯ, ಆದರೆ ಶತಶತಮಾನಗಳಿಂದ ಜಾತಿಯ ಕಾರಣಕ್ಕೆ ನಿರ್ಲಕ್ಷ್ಯಕ್ಕೆ, ತುಳಿತಕ್ಕೆ ಒಳಗಾದ ಜನರು ಅನುಭವಿಸಿರುವ ಹಿಂಸೆಯ ಎದುರಿನಲ್ಲಿ ಈ ಮುಜುಗರ ಎಲ್ಲಿಯದು ಎಂಬುದನ್ನು ಅವರು ತಮಗೆ ತಾವೇ ಯಾವತ್ತಿಗೂ ಪ್ರಶ್ನಿಸಿಕೊಂಡ ಉದಾಹರಣೆ ಇಲ್ಲ. ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿಯ ಪ್ರಸ್ತಾಪ ಎದುರಾದಾಗಲೆಲ್ಲ ಆಕಾಶ ಬೊಬ್ಬಿರಿಯುವಂತೆ, ೨೪*೭ ನ್ಯೂಸ್ ಚಾನೆಲ್‌ಗಳ ಪರದೆ ಹರಿಯುವಂತೆ ಕೂಗಾಡುವುದು ಮಾತ್ರ ಅವರಿಗೆ ಗೊತ್ತು.

ಇದು ಕಾರ್ಪರೇಟ್ ಸಂಸ್ಥೆಗಳ ವಿರೋಧದ ಕತೆಯಾಯಿತು. ರಾಜಕೀಯ ವಲಯದಲ್ಲೂ ವಿಚಿತ್ರ ಸಂಚಲನ ಉಂಟಾಗಿದೆಯಲ್ಲ, ಅದೇಕೆ ಎಂದು ಹುಡುಕುತ್ತ ಹೊರಟರೆ ಮತ್ತಷ್ಟು ದಿಗ್ಭ್ರಮೆಗೊಳಿಸುವ ಮಾಹಿತಿಗಳಿವೆ. ಜಾತಿವಾರು ಸಮೀಕ್ಷೆಯನ್ನು ನಡೆಸಲು ಯಾವುದಾದರೂ ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡಬಹುದಲ್ಲವೆ ಎಂದು ಸರ್ಕಾರ ಈಗಾಗಲೇ ಆಯೋಗವನ್ನು ಕೇಳಿದೆಯಂತೆ. ಜನಗಣತಿಗೆ ಅಗತ್ಯವಿರುವ ೫೮,೦೦೦ ಶಾಲಾಶಿಕ್ಷಕರನ್ನು ನಿಯೋಜನೆ ಮಾಡಲು ಕಷ್ಟ ಸಾಧ್ಯ ಎಂದು ಈಗಾಗಲೇ ಕೊಂಕು ತೆಗೆದಿದೆಯಂತೆ. ಆದರೆ ದ್ವಾರಕಾನಾಥ್ ಇದನ್ನು ಒಪ್ಪುತ್ತಿಲ್ಲ. ಬೇರೆ ಸಂಸ್ಥೆಗಳಿಗೆ ಗುತ್ತಿಗೆ ನೀಡುವುದು ಎಂದರೆ ಪಾರದರ್ಶಕತೆ ಹಾಗು ಉತ್ತರದಾಯಿತ್ವದೊಂದಿಗೆ ರಾಜಿ ಮಾಡಿಕೊಳ್ಳುವುದು ಎಂದರ್ಥ. ಇದು ಸಾಕಷ್ಟು ಕಾನೂನು ಸಮಸ್ಯೆಗಳನ್ನು ಹುಟ್ಟುಹಾಕುವ ಸಾಧ್ಯತೆಗಳಿವೆ ಎನ್ನುತ್ತಾರೆ ಅವರು.

ಸರ್ಕಾರ ಅಥವಾ ಸರ್ಕಾರದ ಕೆಲ ಶಕ್ತಿಗಳು ಯಾಕೆ ಇಂಥ ಖ್ಯಾತೆಗಳನ್ನು ತೆಗೆಯುತ್ತಿವೆ? ಆಯೋಗದ ಸದಸ್ಯ ಕಾರ್ಯದರ್ಶಿ ಸ್ಥಾನದಿಂದ ಡಾ.ನಾಗಲಾಂಬಿಕಾ ದೇವಿ ಇದ್ದಕ್ಕಿದ್ದಂತೆ ವರ್ಗಾವಣೆಯಾಗಿದ್ದು ಯಾಕೆ? ಎಂಬ ಪ್ರಶ್ನೆಗಳ ಹಿಂದೆಯೂ ಅದೇ ರಾಜಕೀಯ ಕೈವಾಡದ ವಾಸನೆ ಹೊಡೆಯುತ್ತಿದೆ.
ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಕೆಲ ಪ್ರಬಲ ಗುಂಪುಗಳು ಸೇರಿಕೊಂಡು, ದೊಡ್ಡಮೀನು ಸಣ್ಣ ಮೀನನ್ನು ತಿನ್ನುವಂತೆ ಎಲ್ಲ ಅನುಕೂಲಗಳನ್ನು ತಾವೇ ಕಬಳಿಸುತ್ತಿವೆ. ಈ ಸಮೀಕ್ಷೆ ಕೇವಲ ಜನಗಣತಿಯನ್ನಷ್ಟೆ ನಡೆಸದೆ ಹಿಂದುಳಿದ ವರ್ಗಗಳ ಸಮಾಜೋ-ಆರ್ಥಿಕ ಸ್ಥಿತಿಗತಿಗಳ ಅಧ್ಯಯನವನ್ನೂ ನಡೆಸುವುದರಿಂದ ಒಂದು ನೈಜ ಚಿತ್ರಣ ಹೊರಗೆ ಬರಲಿದೆ. ಜಾತಿವಾರು ಸಂಖ್ಯೆಯನ್ನು ವೈಭವೀಕರಿಸಿ, ಅವಕಾಶ ಕಬಳಿಸುವುದಕ್ಕೂ ಇನ್ನು ಅವಕಾಶವಿರುವುದಿಲ್ಲ. ಮೀಸಲಾತಿ ನೀಡಿಕೆಗೆ ಇಂಥ ವೈಜ್ಞಾನಿಕ ಸಮೀಕ್ಷೆಯ ಅಗತ್ಯ ಹಿಂದೆಯೂ ಇತ್ತು, ಇಂದೂ ಇದೆ. ಆದರೆ ಇದು ಇನ್ನೂ ಕಾರ್ಗತ್ತಲಲ್ಲಿ ಇರುವ ಸಮುದಾಯಗಳಿಗೆ ವರವಾದರೆ, ಲಾಭಗಳನ್ನು ಪಡೆದು ಮುಂದುವರೆದ ಸಮುದಾಯಗಳಿಗೆ ಶಾಪ!

ಆದರೆ ಸತ್ಯ ಎಂದಿದ್ದರೂ ಹೊರಗೆ ಬರಬೇಕಲ್ಲವೆ? ಮೀಸಲಾತಿ ಎಂಬುದು ಸತ್ಯದ ತಳಹದಿಯಲ್ಲಿ ರೂಪಿತವಾದ ಸಮೀಕ್ಷೆ, ಗಣತಿಗಳನ್ನು ಆಧರಿಸಿದ್ದರೆ ಮಾತ್ರ ಅದು ನ್ಯಾಯಯುತವಾಗಿ ಇರಲು ಸಾಧ್ಯವಲ್ಲವೆ? ಭಾರತದ ಜಾತಿವ್ಯವಸ್ಥೆಯಿಂದ ತೀರಾ ಸಂಕಷ್ಟಕ್ಕೆ ಸಿಲುಕಿದವರಿಗೆ ಹೆಚ್ಚಿನ ಅವಕಾಶಗಳು ಲಭ್ಯವಾಗಬೇಕಲ್ಲವೆ?

ಸತ್ಯವನ್ನು ಎದುರಿಸುವುದಕ್ಕೆ ಎದೆಗಾರಿಕೆ ಬೇಕು. ಇಂಥ ಎದೆಗಾರಿಕೆಯನ್ನು ರಾಜ್ಯದ ಜನತೆ, ಜನಪ್ರತಿನಿಧಿಗಳು, ಸಾಮಾಜಿಕ ತಜ್ಞರು, ಬುದ್ಧಿಜೀವಿಗಳು ಪ್ರದರ್ಶಿಸಬೇಕು. ಈ ಸಮೀಕ್ಷೆ ರಾಜ್ಯದ ಸರ್ವಜನರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಒಂದು ದಿಟ್ಟ ಯತ್ನ ಎಂಬುದನ್ನು ಎಲ್ಲರೂ ಮನಗಾಣಬೇಕು. ಒಂದು ವೇಳೆ ರಾಜಕೀಯ ಲಾಭ-ಲೆಕ್ಕಾಚಾರಗಳಿಗೆ ಈ ಸಮೀಕ್ಷೆಯನ್ನು ಬಲಿಹಾಕಲು ಯಾರಾದರೂ ಪ್ರಯತ್ನಿಸಿದರೆ, ಸಾಮಾಜಿಕ ಉನ್ನತಿಯೆಡೆಗೆ ಕ್ರಮಿಸುವ ಹಾದಿಯಲ್ಲಿ ನಾವೇ ಕಲ್ಲುಮುಳ್ಳುಗಳನ್ನು ಹಾಕಿಕೊಂಡಂತಾಗುತ್ತದೆ.

ಇತಿಹಾಸ ಎಂದೂ ನಮ್ಮನ್ನು ಕ್ಷಮಿಸಲಾರದು.
ತಂತಮ್ಮ ಲಾಭಗಳಿಗಾಗಿ ಸಮೀಕ್ಷೆಯನ್ನು ವಿರೋಧಿಸುವವರು ಇದನ್ನು ಮನಗಾಣುವರೆ?

4 comments:

Anonymous said...

ದಿನೇಶ್ ಕುಮಾರ್ ಅವರೇ
ಔಟ್‌ಲುಕ್‌ನಲ್ಲಿ ಸುಗತ ಶ್ರೀನಿವಾಸರಾಜು ಬರೆದ ಲೇಖನ ಹಾಗು ನೀವು ನಿಮ್ಮ ಬ್ಲಾಗ್‌ನಲ್ಲಿ ಬರೆದಿರುವ ಲೇಖನ ಎರಡನ್ನೂ ಓದಿದೆ. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಸಿ.ಎಸ್.ದ್ವಾರಕಾನಾಥ್ ಅವರು ನಡೆಸಲು ಉದ್ದೇಶಿಸಿರುವ ಸಮೀಕ್ಷೆಗೆ ಎದ್ದಿರುವ, ಏಳುತ್ತಿರುವ, ಏಳಬಹುದಾದ ವಿರೋಧಗಳ ಬಗ್ಗೆ ಸ್ಪಷ್ಟ ವಿಶ್ಲೇಷಣೆ ಹಾಗು ಮುನ್ಸೂಚನೆಯನ್ನು ನೀಡಿದ್ದೀರಿ.
ಯಾರು ಈ ಸಮೀಕ್ಷೆಯನ್ನು ವಿರೋಧಿಸುತ್ತಿದ್ದಾರೋ, ಮುಂದೆ ವಿರೋಧಿಸಲಿದ್ದಾರೋ ಅವರು ಯಥಾಸ್ಥಿತಿವಾದಿಗಳಷ್ಟೇ ಅಲ್ಲ, ಮೂಲಭೂತವಾದಿಗಳು.
ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಮೀಸಲಾತಿ ಅನಿವಾರ್ಯ. ಆದರೆ ಮೀಸಲಾತಿಗೆ ಯಾರು ಯೋಗ್ಯರು ಎಂಬುದನ್ನು ಗುರುತಿಸಲು ಆಗಿಂದಾಗ್ಗೆ ಈ ಬಗೆಯ ಸಮೀಕ್ಷೆಗಳು ನಡೆಯಲೇಬೇಕು. ಸಮುದಾಯಗಳ ಸಾಮಾಜಿಕ ಹಾಗು ಆರ್ಥಿಕ ಸ್ಥಿತಿಗತಿಗಳ ಕುರಿತು ಸ್ಪಷ್ಟ ಚಿತ್ರಣ ಇಲ್ಲದಿದ್ದರೆ ಮೀಸಲಾತಿಯ ಫಲಾನುಭವಿಗಳನ್ನು ಗುರುತಿಸುವುದಾದರೂ ಹೇಗೆ? ನಿಜ, ಹಿಂದುಳಿದ ವರ್ಗಗಳ ಸಮೀಕ್ಷೆ ನಡೆದರೆ ಅಗತ್ಯಕ್ಕಿಂತ ಹೆಚ್ಚು ಪ್ರಮಾಣದ ಸೌಲಭ್ಯಗಳನ್ನು ಪಡೆದ ಕೆಲವು ಸಮುದಾಯಗಳು ಅತಿ ಹಿಂದುಳಿದ ಸಮುದಾಯಗಳಿಗೆ ದಾರಿ ಮಾಡಿಕೊಡಬೇಕಾಗುತ್ತದೆ. ಇದು ಕಾಲಕಾಲಕ್ಕೆ ನಡೆಯಲೇಬೇಕಾದ ಪ್ರಕ್ರಿಯೆ. ಸರ್ವಸಮ ಸಮಾಜವನ್ನು ಕಟ್ಟುವ ನಿಟ್ಟಿನಲ್ಲಿ ಎಲ್ಲರೂ ಇದಕ್ಕೆ ಸಹಕರಿಸಬೇಕು.
ಕನ್ನಡ ಬ್ಲಾಗ್ ಗಳ ಹುಡುಕಾಟದಲ್ಲಿದ್ದಾಗ ನಿಮ್ಮ ಬ್ಲಾಗ್ ನೋಡಿದೆ. ನಿಮ್ಮ ಬರೆಹಗಳು ಆಸಕ್ತಿಕರವಾಗಿವೆ. ಅಭಿನಂದನೆಗಳು.
ಚಿನ್ನಣ್ಣ ಮಹಾಬಲ, ಬೆಂಗಳೂರು

Anonymous said...

ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಲು ಉದ್ದೇಶಿಸಿರುವ ಜಾತಿವಾರು ಜನಗಣತಿ ಹಾಗೂ ಸಮೀಕ್ಷೆಗೆ ವಿರೋಧ ವ್ಯಕ್ತವಾಗುತ್ತಿರುವುದು ಸ್ವತಂತ್ರ ಭಾರತದ ಬಹುದೊಡ್ಡ ಕಪ್ಪುಚುಕ್ಕಿ ಎಂದು ಹೇಳಿದರೆ ತಪ್ಪಾಗಲಾರದು. ಈ ಬಗ್ಗೆ ಎಸ್.ಸಿ.ದಿನೇಶ್‌ಕುಮಾರ್ ಅವರು ತಮ್ಮ ಸುದೀರ್ಘ ಲೇಖನದಲ್ಲಿ ವಿವರಿಸಿರುವಂತೆ ವಿರೋಧ ಮಾಡುತ್ತಿರುವ ವ್ಯಕ್ತಿಗಳು ಕೇವಲ ಯಥಾಸ್ಥಿತಿವಾದಿಗಳಲ್ಲ. ಬದಲಾಗಿ ಮನೋವಾದಿ ಸಂಸ್ಕೃತಿಯನ್ನು ವ್ಯವಸ್ಥೆಯಲ್ಲಿ ಮತ್ತಷ್ಟು ಗಟ್ಟಿಗೊಳಿಸುವ ಕುತಂತ್ರ ಇವರ ವಿರೋಧದ ಹಿಂದೆ ಅಡಗಿದೆ ಎಂಬುದನ್ನು ಲೇಖನದಲ್ಲಿ ಸುದೀರ್ಘವಾಗಿ ವಿವರಿಸಿರುವುದು ಸಂದರ್ಭೋಚಿತವಾಗಿದೆ.
ಈಗಾಗಲೇ ಯಾವುದೇ ರಾಜ್ಯದಲ್ಲಿ ಕಾರ್ಪರೇಟ್ ಸಂಸ್ಥೆಗಳು ಉನ್ನತ ಹಾಗೂ ಮೇಲ್ವರ್ಗ ಜಾತಿಗಳ ಸೇವೆಗೆ ಮಾತ್ರ ಸೀಮಿತವಾಗಿದ್ದು, ಕೆಲ ವರ್ಗದವರನ್ನು ನಿರಂತರವಾಗಿ ಕಡೆಗಣಿಸುತ್ತಲೇ ಬಂದಿದೆ. ಇನ್ನೊಂದೆಡೆ ರಾಜಕಾರಣಿಗಳು ಇದೇ ಕೆಲ ವರ್ಗದವರ ಹೆಸರು ಬಳಸಿಕೊಂಡು ಅಧಿಕಾರಕ್ಕೆ ಬಂದರೂ ಮತ್ತೆ ಅವರ ಅಭಿವೃದ್ಧಿ ಬಗ್ಗೆ ಮಾತನಾಡದೆ ಸರ್ಕಾರ ಕನಿಷ್ಠ ಮಟ್ಟದಲ್ಲಾದರೂ ಅವರಿಗೆ ನೀಡಿರುವ ಸೌಲಭ್ಯಗಳಿಗೆ ಅಡ್ಡಗಾಲು ಹಾಕುತ್ತಿರುವುದು ಮಾತ್ರ ವ್ಯವಸ್ಥೆಯನ್ನು ಗೇಲಿ ಮಾಡಿದಂತೆ ಕಾಣುತ್ತಿದೆ.
ಶೋಷಿತ ವರ್ಗದ ಜನತೆಯನ್ನು ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ರಾಜ್ಯ ಹಿಂದುಳಿದ ಆಯೋಗ ನಡೆಸಲು ಉದ್ದೇಶಿಸಿರುವ ಜಾತಿವಾರು ಜನಗಣತಿ ಹಾಗೂ ಸಮೀಕ್ಷೆಗೆ ಅಡ್ಡಗಾಲು ಹಾಕುತ್ತಿರುವ ಮನೋವಾದಿಗಳ ಕುತಂತ್ರವನ್ನು ನಾಡಿನ ಪ್ರಗತಿಪರ ಚಿಂತಕರು ಹಾಗೂ ಸಂಘ ಸಂಸ್ಥೆಗಳು, ಬುದ್ಧಿಜೀವಿಗಳು ತೀವ್ರವಾಗಿ ಖಂಡಿಸುವುದರ ಮೂಲಕ ತಲಾತಲಾಂತರಗಳಿಂದ ಮೂಲೆಗುಂಪಾಗಿರುವ ಜನತೆಯನ್ನು ಕೈಹಿಡಿದು ನಡೆಸಬೇಕಾಗಿದೆ.

-ಸ್ಮೃತಿ, ಮೂಡುಬಿದರೆ

Anonymous said...

ಒಳ್ಳೆಯ ಕೆಲಸಕ್ಕೆ ನೂರಾರು ವಿಘ್ನಗಳು ಎಂಬ ನಾಣ್ಣುಡಿಯನ್ನು ನೀವು ದಾಖಲಿಸಿರುವ ಜಾತಿವಾರು ಜನಗಣತಿಗೆ ಯಥಾಸ್ಥಿತಿವಾದಿಗಳ ವಿರೋಧ ಎಂಬ ಲೇಖನ ಮತ್ತೊಮ್ಮೆ ಸಾರಿ ಹೇಳಿದಂತಿತ್ತು. ಪ್ರಸ್ತುತ ಸಮಾಜದಲ್ಲಿ ಅಗತ್ಯವಿರುವುದು ಯಾವುದು ಆಗುತ್ತಿಲ್ಲ.ಆದರೂ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ದ್ವಾರಕಾನಾಥ್ ಅವರು ಕಾಳಜಿ ವಹಿಸಿ ಜಾತಿವಾರು ಜನಗಣತಿ ನಡೆಸಲು ಮುಂದಾಗಿರುವುದು ನಿಜಕ್ಕೂ ಸ್ವಾಗತಾರ್ಹ. ಆದರೆ ಇರುವ ಅಡ್ಡಿ ಆತಂಕಗಳನ್ನು ಸರಿಪಡಿಸುವ ಜವಾಬ್ದಾರಿಯನ್ನು ಎಲ್ಲಾ ಪ್ರಗತಿಪರ ಸಂಘ-ಸಂಸ್ಥೆಗಳು ನೈತಿಕತೆಯಿಂದ ನಿರ್ವಹಿಸಬೇಕಿದೆ.
ಖಾಸಗಿ ಸಂಸ್ಥೆಗಳು ಸಮೀಕ್ಷೆ ನಡೆಸಿದರೆ ಜಾತಿವಾರು ಸಮೀಕ್ಷೆಯ ಆಶಯ ನಿಜಕ್ಕೂ ಸಾರ್ಥಕ ಆಗುವುದಿಲ್ಲ. ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ನೀಡಕೂಡದು.
ಜಾತಿವಾರು ಸಮೀಕ್ಷೆ ನಡೆದರೆ ಹಿಂದುಳಿದ ಸಮುದಾಯಗಳಿಗೆ ಆಗಬಹುದಾದ ಅನುಕೂಲಗಳಿಗಿಂತ ಹೆಚ್ಚಾಗಿ ಮುಂದುವರೆದ ಸಮುದಾಯಗಳ ಶತಮಾನದ ವಂಚನೆ ಬಟಾಬಯಲಾಗಲಿರುವುದರಿಂದ ಆಯೋಗದ ಪ್ರಯತ್ನಕ್ಕೆ ಅಡ್ಡಗಾಲು ಹಾಕುವವರೆ ಹೆಚ್ಚು ನಿಜ. ಆದರೆ ಇಂದಲ್ಲ ನಾಳೆ ಜಾತಿವಾರು ಸಮೀಕ್ಷೆ ನಡೆಯಲೇ ಬೇಕಿದೆ ಎಂಬ ವಾಸ್ತವ ಅರಿತು ರಾಜ್ಯ ಸರ್ಕಾರ ಆಯೋಗದ ಈ ಸಾಹಸೀ ಪ್ರಯತ್ನಕ್ಕೆ ಸಹಕರಿಸಬೇಕಿದೆ.
ವೇದಾವತಿ ಎಂ.ಎನ್
ಮೈಸೂರು

Anonymous said...

shile said,
gurugale, bega innondu lekhana bariyiri. pratidina ella blog nodo nange, nimma blognalli dina hosadannu odo aase. neevu chanda baritiri, vishaya ayke channagirutte anno karanakke heegantidini.
"neenu ondu blog madi nodu kashta gottagatte", anta neev helbahudu. adru...tumba dina blog update madade irabedi...