ದಿವ್ಯವಾದ ಏನನ್ನೂ ಮುಟ್ಟಲಾರೆ
ಮುಟ್ಟಿದ್ದೆಲ್ಲ ಚಟಚಟನೆ ಉರಿದುಹೋಗುತ್ತದೆ
ಮಾದ್ರೀಶಾಪ
ಮುಟ್ಟಗೊಡಬೇಡ ನಿನ್ನ
ಬೆರಳು, ಹೆರಳು, ಕೊರಳ
ಸುಡುವುದು ಇಷ್ಟವಿಲ್ಲ ನನಗೆ
ನನ್ನ ನಿಟ್ಟುಸಿರು
ಈಗ ಬರಿಯಕಣ್ಣಿಗೆ ಕಾಣುವಷ್ಟು
ಮೂರ್ತ
ಹಸಿವು, ಹಸಿವು
ದೈವತ್ವ ಕಳಚಿಕೊಂಡು
ಮನುಷ್ಯನಾಗುತ್ತಿರುವ ಕುರುಹು
ಮಾದ್ರಿಯ ಬೆತ್ತಲೆ
ತೊಡೆಯ ಮೇಲೆ
ಪಾಂಡುವಿನ ಮೂಳೆಯ ಹುಡಿ
ದೂರ ನಿಲ್ಲು
ನಿನ್ನ ಅಂಗೈ ರೇಖೆಗಳ ಮೇಲೆ
ನವಿಲುಗಳು ಕುಣಿಯುತ್ತವೆ
ನವಿಲ ಪಾದಗಳಿಂದ
ಹಾಡು ಹುಟ್ಟುತ್ತದೆ
ಆ ಹಾಡಾಗಿ ನಾ ನಿನ್ನ ಮುಟ್ಟುತ್ತೇನೆ