ಪ್ರಭಾಕರನ್ ಸಾಯಿಸಿದ್ದು ಅಥವಾ ಅವನ ನಿರ್ದೇಶನದಂತೆ ಸಾಯಿಸಲ್ಪಟ್ಟವರು ಸುಮಾರು ೭೦,೦೦೦ ಜನರು ಎಂಬ ಮಾಹಿತಿಗಳಿವೆ. ಈ ಪೈಕಿ ಅತಿಹೆಚ್ಚು ಮಂದಿ ಅಮಾಯಕ ನಾಗರಿಕರೇ ಆಗಿದ್ದರು. ತಮಿಳರ ಸ್ವಾತಂತ್ರ್ಯದ ಹೋರಾಟವನ್ನು ತಾನು ಕೈಗೆತ್ತಿಕೊಂಡಿರುವುದಾಗಿ ಅವನು ಹೇಳುತ್ತ ಬಂದರೂ, ಪ್ರಭಾಕರನ್‌ನಿಂದ ಅತಿಹೆಚ್ಚು ಅನ್ಯಾಯಕ್ಕೊಳಗಾದವರು, ಹಿಂಸೆಗೊಳಗಾದವರು, ಸತ್ತವರು ತಮಿಳರೇ ಎಂಬುದು ದೊಡ್ಡ ವ್ಯಂಗ್ಯ,
ಪ್ರಭಾಕರನ್ ಪ್ರಜಾಪ್ರಭುತ್ವವಾದಿ ಮಾರ್ಗವನ್ನು ತ್ಯಜಿಸಿದ್ದ; ಆಯುಧದ ಮೂಲಕವೇ ತನ್ನ ಕನಸಿನ ತಮಿಳು ರಾಷ್ಟ್ರ ಕಟ್ಟಲು ಬಯಸಿದ್ದ. ಅದು ಅವನ ಕರ್ಮ. ಆದರೆ ಪ್ರಜಾಪ್ರಭುತ್ವವಾದಿ ಮಾರ್ಗದಲ್ಲಿ ನಡೆಯುವವರ ವಿರುದ್ಧ ಇದ್ದ ಅವನ ಅಸಹನೆಯ ಮಟ್ಟವಾದರೂ ಎಂಥದ್ದು? ಶ್ರೀಲಂಕಾದ ರಾಜಕಾರಣದಲ್ಲಿ ತೊಡಗಲು ಬಯಸಿದ, ತಮಿಳರ ಹೋರಾಟವನ್ನು ಅಹಿಂಸಾತ್ಮಕವಾಗಿ ಮುನ್ನಡೆಸಿದ ಸಾಕಷ್ಟು ತಮಿಳು ನಾಯಕರನ್ನೇ ಆತ ಆಹುತಿ ತೆಗೆದುಕೊಂಡಿದ್ದ.
ಮೂಲತಃ ಶ್ರೀಲಂಕ ದೇಶವು ಹೋರಾಟದ ಮೂಲಕ ಸ್ವಾತಂತ್ರ್ಯ ಗಳಿಸಿಕೊಂಡಿದ್ದಲ್ಲ. ಬ್ರಿಟಿಷರು ಭಾರತವನ್ನು ಬಿಟ್ಟು ಹೋದ ನಂತರ ಶ್ರೀಲಂಕಾವನ್ನೂ ಬಿಟ್ಟು ಹೋದರು. ಆದರೆ ಶ್ರೀಲಂಕ ಆಯ್ದುಕೊಂಡ ಪ್ರಜಾಪ್ರಭುತ್ವ ಎಲ್ಲರನ್ನು ಒಳಗೊಳ್ಳುವಂಥ ಅಂಶಗಳನ್ನು ಹೊಂದಿರಲಿಲ್ಲ. ಅಲ್ಲಿನ ತಮಿಳರಿಗೆ ಹಕ್ಕುಗಳನ್ನು ನಿರಾಕರಿಸಲಾಯಿತು. ಬಹುಸಂಖ್ಯಾತ ಸಿಂಹಳೀಯರ ಆರ್ಭಟದಲ್ಲಿ ಅಲ್ಪಸಂಖ್ಯಾತ ತಮಿಳರು ಸಾಕಷ್ಟು ಶೋಷಣೆಗಳಿಗೆ ಒಳಗಾಗಬೇಕಾಯಿತು. ಇದರ ವಿರುದ್ಧ ಹುಟ್ಟಿಕೊಂಡ ಎಲ್‌ಟಿಟಿಇಗೆ ತಮಿಳು ಸಮುದಾಯದಲ್ಲಿ ಸಹಾನುಭೂತಿ ಇದ್ದದ್ದು ನಿಜ. ಆದರೆ ಪ್ರಭಾಕರನ್ ತುಳಿದ ಹಾದಿ ಈ ಸಹಾನುಭೂತಿಯನ್ನು ನಾಶಪಡಿಸುತ್ತ ಬಂತು.
ಪ್ರಭಾಕರನ್ ತನ್ನ ಅರ್ಹತೆಗೆ ತಕ್ಕನಾದ ಸಾವನ್ನೇ ತಂದುಕೊಂಡಿದ್ದಾನೆ. ಹಿಂಸೆಯ ಹಾದಿಯಲ್ಲಿ ಸಾಗುವವರ ಬದುಕು ಹೀಗೇ ಅಂತ್ಯವಾಗುತ್ತದೆ ಎಂಬುದು ಜಾಗತಿಕ ಸತ್ಯ. ಅದಕ್ಕಾಗಿ ಮರುಗುವುದು ಕೊರಗುವುದು ಅನಗತ್ಯ. ಇದನ್ನು ತಮಿಳರೂ ಅರ್ಥಮಾಡಿಕೊಂಡ ಹಾಗಿದೆ.
ಪ್ರಭಾಕರನ್ ಸತ್ತರೆ ಮರುಕ ಪಡುವುದಾಗಿ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಕೆಲವು ದಿನಗಳ ಹಿಂದಷ್ಟೆ ಎನ್‌ಡಿಟಿವಿ ಜತೆಯಲ್ಲಿ ಮಾತನಾಡುತ್ತ ಹೇಳಿದ್ದರು. ಆದರೆ ಪ್ರಭಾಕರನ್ ಸತ್ತ ನಂತರ ಕರುಣಾನಿಧಿ ಆ ಕುರಿತು ಏನನ್ನೂ ಹೇಳುತ್ತಿಲ್ಲ. ಅವರು ಲಂಕಾ ತಮಿಳರ ಕುರಿತಷ್ಟೇ ಮಾತನಾಡುತ್ತಿದ್ದಾರೆ. ಎಲ್‌ಟಿಟಿಇ ಸಂಘಟನೆಯ ಉಗ್ರ ಬೆಂಬಲಿಗ ವೈಕೋ ಇತ್ತೀಚಿಗೆ ಮಾತನಾಡುತ್ತ, ಒಂದೊಮ್ಮೆ ಪ್ರಭಾಕರನ್ ಸತ್ತರೆ ತಮಿಳುನಾಡು ಹೊತ್ತುರಿಯುತ್ತದೆ ಎಂದಿದ್ದರು. ತಮಿಳುನಾಡು ಸ್ಥಬ್ದವಾಗಿದೆ. ರಕ್ತಪಾತವಿರಲಿ, ಒಂದು ಹೆದ್ದಾರಿ ಬಂದ್ ಆದ ವರದಿಗಳೂ ಕಾಣಿಸುತ್ತಿಲ್ಲ. ಲೋಕಸಭಾ ಚುನಾವಣೆಯಲ್ಲಿ ಎಲ್‌ಟಿಟಿಇ ಬೆಂಬಲಿಗ ಪಕ್ಷಗಳನ್ನು ತಮಿಳುನಾಡಿನ ಜನರು ನಿರ್ದಾಕ್ಷಿಣ್ಯವಾಗಿ ಮನೆಗೆ ಕಳುಹಿಸಿದ್ದಾರೆ.
ತಮಿಳರು ಸ್ವಾಭಾವತಃ ಭಾವುಕರು. ಆದರೆ ಪ್ರಭಾಕರನ್ ಸಾವು ಅವರನ್ನು ಅಷ್ಟಾಗಿ ಕಾಡಿಲ್ಲದೇ ಇರುವುದಕ್ಕೂ ಕಾರಣಗಳಿವೆ. ಎಲ್‌ಟಿಟಿಇ ಮತ್ತು ಪ್ರಭಾಕರನ್ ಕುರಿತಾದ ಮೋಹವನ್ನು ಬಹಳಷ್ಟು ತಮಿಳರು ತೊರೆದು ಬಹಳ ಕಾಲವೇ ಆಗಿದೆ. ರಾಜೀವ್ ಗಾಂಧಿ ಕೊಲೆ ತಮಿಳರ ಪಾಲಿಗೆ ದೊಡ್ಡ ಆಘಾತ. ಭಾಷಾ ದುರಾಂಧರನ್ನು ಹೊರತುಪಡಿಸಿದರೆ, ಸಾಮಾನ್ಯ ತಮಿಳರಿಗೆ ದೇಶದ ಮಾಜಿ ಪ್ರಧಾನಿಯ ಕೊಲೆ ಅತ್ಯಂತ ಹೀನ ಕೃತ್ಯ. ಹೀಗಾಗಿ ಪ್ರಭಾಕರನ್ ಸತ್ತಾಗ ತಮಿಳುನಾಡು ಅಲುಗಾಡದಂತೆ ಸುಮ್ಮನಿದೆ.
ಈ ಚಿತ್ರವನ್ನೊಮ್ಮೆ ನೋಡಿ.

ತಮಿಳುನಾಡಿನ ತಮಿಳರೇ ಸುಮ್ಮನಿರುವಾಗ ಬೆಂಗಳೂರಿನಲ್ಲಿ ಸಮಾನ ಮನಸ್ಕರ ವೇದಿಕೆ ಎಂಬ ಹೆಸರಿನ ಹುಸಿ ಸಂಘಟನೆಯೊಂದನ್ನು ಮಂಗಳವಾರ ಪ್ರತಿಭಟನೆ ನಡೆಸಿದೆ. ಪ್ರತಿಭಟನಾಕಾರರ ಕೈಯಲ್ಲಿ ೭೦ ಸಾವಿರ ಜನರನ್ನು ಕೊಂದ ದುಷ್ಟನ ಭಾವಚಿತ್ರ! ದೇಶದ ಮಾಜಿ ಪ್ರಧಾನಿಯನ್ನು ಕೊಂದವನ ಭಾವಚಿತ್ರವನ್ನು ಈ ಜನರು ಎಗ್ಗಿಲ್ಲದೆ, ನಾಚಿಕೆಯಿಲ್ಲದೆ ಹಿಡಿದು ನಿಂತಿದ್ದಾರೆ. ಇವರನ್ನೇನನ್ನುವುದು?
ಈ ಪ್ರತಿಭಟನೆಯನ್ನು ಆಯೋಜಿಸಿದ ಮಹಾಶಯ ಜೆಡಿಎಸ್ ಪಕ್ಷಕ್ಕೆ ಸೇರಿದವನು. ಕೆ.ಆರ್.ಪುರಂ ಜೆಡಿಎಸ್ ಘಟಕದ ಅಧ್ಯಕ್ಷ. ಆತ ಕರೆತಂದಿರುವ ಸ್ಲಮ್ಮಿನ ತಮಿಳರಿಗೆ ಪ್ರಭಾಕರನ್ ಯಾರೆಂದು ಗೊತ್ತಿದೆಯೋ ಇಲ್ಲವೋ? ತಮಿಳರ ಓಟಿಗಾಗಿ ರಾಜಕೀಯ ಪಕ್ಷಗಳು ಎಂಥ ಕೊಳಕು ಕಾರ್ಯಗಳಿಗೂ ಕೈ ಹಾಕಬಲ್ಲರು ಎಂಬುದಕ್ಕೆ ಈ ಪ್ರತಿಭಟನೆ ಸಾಕ್ಷಿ.
ದೇಶದ ಮಾಜಿ ಪ್ರಧಾನಿಯ ಕೊಲೆಗಡುಕನ ಫೋಟೋ ಹಿಡಿದು ಪ್ರತಿಭಟಿಸಲು ಬೆಂಗಳೂರು ಪೊಲೀಸರು ಅನುಮತಿ ನೀಡಿದ್ದಾದರೂ ಹೇಗೆ? ಒಂದೊಮ್ಮೆ ಗೊತ್ತಿಲ್ಲದೆ ಅನುಮತಿ ನೀಡಿದ್ದರೂ, ಇಂಥದ್ದೊಂದು ದೇಶದ್ರೋಹದ ಕೃತ್ಯವೆಸಗಿದ್ದಕ್ಕೆ ಅವರೇನು ಕ್ರಮ ಕೈಗೊಂಡರು? ಕಿಟಕಿ ಗಾಜು ಒಡೆದ ಕನ್ನಡ ಹೋರಾಟಗಾರರ ಮೇಲೆ ಗೂಂಡಾ ಕಾಯ್ದೆ ಹೇರುವ ಪೊಲೀಸರು, ಒಬ್ಬ ಜಾಗತಿಕ ಭಯೋತ್ಪಾದಕನ ಭಾವಚಿತ್ರ ಹಿಡಿದು ಪ್ರತಿಭಟಿಸುವವರನ್ನು ಹೇಗೆ ಬಿಟ್ಟು ಬಿಡುತ್ತಾರೆ?
ಮುಂಬೈ ದಾಳಿಕೋರ ಅಜ್ಮಲ್ ಅಮೀರ್ ಕಸಬ್‌ನ ಪೋಟೋ ಹಿಡಿದು ನಾಳೆ ಯಾವುದೋ ಸಂಘಟನೆಯವರು ಪ್ರತಿಭಟನೆ ಮಾಡಿದರೆ? ಆಗ ನಮ್ಮ ಸಮಾಜ ಹೇಗೆ ಸ್ವೀಕರಿಸುತ್ತದೆ? ಅಥವಾ ಒಸಾಮ ಬಿನ್ ಲ್ಯಾಡೆನ್ ಫೋಟೋ ಹಿಡಿದು ಮತ್ತಾರೋ ಧರ್ಮ ದುರಾಂಧರು ಪ್ರತಿಭಟಿಸಬಹುದು. ಮಾಲೆಗಾಂವ್ ಪ್ರಕರಣದ ಆರೋಪಿ ಸಾಧ್ವಿ ಪ್ರಜ್ಞಾ ಸಿಂಗ್ ಭಾವಚಿತ್ರ ಹಿಡಿದು ಇನ್ನ್ಯಾರೋ ಭಿಕಾರಿಗಳು ಬೀದಿಯಲ್ಲಿ ನಿಲ್ಲಬಹುದು. ಅವರನ್ನೂ ಸಹಿಸಿಕೊಳ್ಳಬೇಕೆ?
ಬೆಂಗಳೂರಿನಲ್ಲಿ ಎಲ್‌ಟಿಟಿಇ ಪರವಾದ ಒಂದು ಗುಂಪು ಮೊದಲಿನಿಂದಲೂ ಸಕ್ರಿಯವಾಗಿದೆ. ಎಲ್‌ಟಿಟಿಇ ಜತೆ ನೇರ ಸಂಪರ್ಕ ಇಟ್ಟುಕೊಂಡ ಸಾಕಷ್ಟು ಜನ ಇಲ್ಲಿದ್ದಾರೆ. ಈ ಕಾರಣಕ್ಕೇ ರಾಜೀವ್ ಹತ್ಯೆ ಆರೋಪಿಗಳು ತಮ್ಮ ಪರವಾದ ಸಹಾನುಭೂತಿ ಇರುವ ಜನರನ್ನು ಹುಡುಕಿಕೊಂಡು ಬೆಂಗಳೂರಿಗೆ ಬಂದು, ಇಲ್ಲಿ ಸಾವನ್ನಪ್ಪಿದ್ದರು. ಡಾ.ರಾಜಕುಮಾರ್ ಅಪಹರಣ ಸಂದರ್ಭದಲ್ಲಿ ಎಲ್‌ಟಿಟಿಇ ಬೇಡಿಕೆಗಳನ್ನೇ ವೀರಪ್ಪನ್ ಮುಂದಿಟ್ಟಿದ್ದರ ಹಿಂದೆಯೂ ಬೆಂಗಳೂರಿನ ಎಲ್‌ಟಿಟಿಇ ಭಕ್ತರ ಚಿತಾವಣೆ ಇತ್ತು. ವೀರಪ್ಪನ್‌ಗೆಂದು ಕಳುಹಿಸಲಾದ ಹಣದಲ್ಲಿ ಒಂದು ಭಾಗ ಈ ಜನರ ಕೈಗೂ ಸೇರಿತು ಎಂಬುದು ರಹಸ್ಯವೇನೂ ಅಲ್ಲ.
ಸದ್ಯಕ್ಕೆ ಶ್ರೀಲಂಕದಲ್ಲಿ ಸರ್ವನಾಶವಾಗಿರುವ ಎಲ್‌ಟಿಟಿಇ, ಹೊಸ ನೆಲೆಗಳನ್ನು ಹುಡುಕಿಕೊಳ್ಳಲು ಯತ್ನಿಸುವುದು ಸಹಜ. ಈಗಾಗಲೇ ಸಾಕಷ್ಟು ಮಂದಿ ಎಲ್‌ಟಿಟಿಇ ಉಗ್ರರು ತಮಿಳುನಾಡು, ಆಂಧ್ರ, ಕರ್ನಾಟಕವನ್ನು ಸೇರಿಕೊಂಡಿರುವ ಸಾಧ್ಯತೆಗಳಿವೆ ಎಂದು ಗುಪ್ತಚರ ವರದಿಗಳು ಹೇಳುತ್ತಲೇ ಬಂದಿವೆ. ಬಂದವರಿಗೆ ಬೆಂಗಳೂರಿನ ಎಲ್‌ಟಿಟಿಇ ಭಕ್ತರು ಆಶ್ರಯ ನೀಡದೇ ಇರುತ್ತಾರೆಯೇ? ಪ್ರಭಾಕರನ್ ಭಾವಚಿತ್ರ ಹಿಡಿದು ಬೀದಿಯಲ್ಲಿ ನಿಲ್ಲುವ ಧೈರ್ಯವಿರುವ ಮಂದಿ, ತಮ್ಮ ತಮ್ಮ ಮನೆಯಲ್ಲಿ ಬಂದೂಕು ಹಿಡಿದ ಉಗ್ರರನ್ನು ಇಟ್ಟುಕೊಳ್ಳಲಾರರು ಎಂದು ನಂಬುವುದಾದರೂ ಹೇಗೆ?
ಮೊನ್ನೆ ಪ್ರತಿಭಟನೆ ನಡೆಸಿ ಪೌರುಷ ತೋರಿದ ಬೆಂಗಳೂರಿನ ಹುಲಿಗಳನ್ನೆಲ್ಲ ಠಾಣೆಗೆ ಕರೆತಂದು ಪೊಲೀಸರು ಇದೆಲ್ಲ ಪ್ರಶ್ನೆಗಳನ್ನು ಕೇಳಬೇಕಾಗಿದೆ. ಒಂದೊಮ್ಮೆ ಅವರು ನಿಜವಾದ ಪ್ರಭಾಕರನ್ ಭಕ್ತರೇ ಆಗಿದ್ದರೆ, ಶ್ರೀಲಂಕ ಪೊಲೀಸರಿಗೆ ಕೊಟ್ಟು ಕೈ ತೊಳೆದುಕೊಳ್ಳುವುದು ಒಳ್ಳೆಯದು.
ಇಲ್ಲವಾದಲ್ಲಿ ಬೆಂಗಳೂರು ಮುಂದಿನ ದಿನಗಳಲ್ಲಿ ನೆಮ್ಮದಿಯಾಗಿರಲು ಸಾಧ್ಯವಿಲ್ಲ.