Wednesday, August 12, 2009

ತಿರುವಳ್ಳುವರ್, ಸಾಹಿತಿಗಳು, ಮಾಧ್ಯಮಗಳು, ಇತ್ಯಾದಿ...

ತಿರುವಳ್ಳುವರ್ ಪ್ರತಿಮೆ ಅನಾವರಣದ ವಿಷಯದಲ್ಲಿ ಕನ್ನಡ ಸಂಘಟನೆಗಳು ನಡೆದುಕೊಂಡ ರೀತಿಯ ಬಗ್ಗೆ ಎಲ್ಲೆಡೆ ಪುಂಖಾನುಪುಂಖ ಉಪದೇಶಗಳ ಸುರಿಮಳೆಯಾಗುತ್ತಿದೆ. ಪತ್ರಿಕೆಗಳ ವಾಚಕರ ವಾಣಿಗಳು ತುಂಬಿ ಹರಿಯುತ್ತಿವೆ. ಸಂಪಾದಕೀಯ ಪುಟಗಳಲ್ಲಿ ಸಂಪಾದಕರು, ಮುಖ್ಯ ವರದಿಗಾರರು, ಇತರ ಪತ್ರಕರ್ತರಾದಿಯಾಗಿ ಎಲ್ಲರೂ ಪುಗಸಟ್ಟೆ ಬೋಧನೆಗಳ ಜ್ಞಾನಾಮೃತವನ್ನು ಹರಿಸುತ್ತಲೇ ಇದ್ದಾರೆ. ತಿರುವಳ್ಳುವರ್ ಪ್ರತಿಮೆ ಅನಾವರಣ ಒಂದು ಐತಿಹಾಸಿಕ ಸಾಧನೆ, ಅದರಿಂದ ಕರ್ನಾಟಕ-ತಮಿಳುನಾಡು ರಾಜ್ಯಗಳ ನಡುವಿನ ದಶಕಗಳ ವಿರಸ ಕೊನೆಗೊಂಡಿದೆ, ಭಾವನಾತ್ಮಕ ಬೆಸುಗೆ ಸಾಧ್ಯವಾಗಿದೆ, ಯಡಿಯೂರಪ್ಪ ಮಹತ್ಸಾಧನೆ ಮಾಡಿದ್ದಾರೆ-ಹೀಗಾಗಿ ಅವರನ್ನು ಕನ್ನಡ ಸಂಘಟನೆಗಳು ಬೆಂಬಲಿಸಬೇಕಿತ್ತು, ಪ್ರತಿಭಟನೆಗೆ ಇಳಿಯಬಾರದಿತ್ತು ಎಂಬುದು ಈ ಎಲ್ಲ ಪಂಡಿತರ ಒಂದೇ ಗಂಟಲಿನ ಕೂಗು.

ಈ ಎಲ್ಲ ಮಹಾನುಭಾವರ ಪ್ರಕಾರ ಕನ್ನಡ ಸಂಘಟನೆಗಳ ಮುಖಂಡರಿಗೆ ಬುದ್ಧಿಯಿಲ್ಲ, ಅವರೆಲ್ಲ ಮೂರ್ಖರು. ಅವರು ಗಲಾಟೆಕೋರರು. ಎ.ಕೆ.ಸುಬ್ಬಯ್ಯ ಹೇಳುವಂತೆ ಹೊಟ್ಟೆಪಾಡಿಗಾಗಿ ಚಳವಳಿ ಮಾಡಿಕೊಂಡವರು. ಹೀಗಾಗಿ ಅವರನ್ನು `ಸರಿದಾರಿಗೆ ತರುವ ಯತ್ನದಲ್ಲಿ ಎಲ್ಲ ಬೋಧನೆಗಳು ನಡೆಯುತ್ತಿವೆ.

ನಿಜ, ಕನ್ನಡ ಸಂಘಟನೆಗಳ ಮುಖಂಡರು ಬುದ್ಧಿವಂತರು, ಮೇಧಾವಿಗಳೇನೂ ಅಲ್ಲ. ಹೀಗಾಗಿಯೇ ಕರ್ನಾಟಕದ ಇತಿಹಾಸದಲ್ಲಿ ಒಬ್ಬನೇ ಒಬ್ಬ ಕನ್ನಡ ಚಳವಳಿಗಾರನಿಗೂ ಇದುವರೆಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿಲ್ಲ. ಒಬ್ಬನೇ ಒಬ್ಬ ಚಳವಳಿಗಾರನಿಗೂ ಮುಖ್ಯಮಂತ್ರಿಗಳ ವಿವೇಚನಾ ಕೋಟಾದಡಿಯಲ್ಲಿ ಬಿಡಿಎ ಸೈಟು ನೀಡಲಾಗಿಲ್ಲ. ಕನ್ನಡ ಚಳವಳಿಗಾರರು ಅಕಾಡೆಮಿ ಅಧ್ಯಕ್ಷರಾಗಲಿಲ್ಲ, ಸರ್ಕಾರ ಮತ್ತದರ ಅಂಗಸಂಸ್ಥೆಗಳು ಕೊಡಮಾಡುವ ಪ್ರಶಸ್ತಿಗಳ ಫಲಾನುಭವಿಗಳೂ ಆಗಲಿಲ್ಲ.

ಕನ್ನಡ ಚಳವಳಿ ಮುಖಂಡರು, ಕಾರ್ಯಕರ್ತರು ನಿಜಕ್ಕೂ ದಡ್ಡರು. ಹೀಗಾಗಿಯೇ ಅವರು ತಮ್ಮ ಮೇಲೆ ಹತ್ತಾರು ಕೇಸುಗಳನ್ನು ಮೈಮೇಲೆ ಹೇರಿಕೊಂಡಿದ್ದಾರೆ. ಆಗಾಗ ಜೈಲಿಗೆ ಹೋಗಿ ಬರುತ್ತಾರೆ. ಪೊಲೀಸರ ಲಾಠಿ ರುಚಿ ಆಗಾಗ ಅನುಭವಿಸುತ್ತಾರೆ. ಕೋರ್ಟಿನಲ್ಲಿ ದಿನವೂ ಹೋಗಿ ಕೈ ಕಟ್ಟಿ ನಿಂತುಕೊಳ್ಳುತ್ತಾರೆ.

ಅವರು ಬುದ್ಧಿವಂತಲ್ಲ, ಬುದ್ಧಿವಂತರಾಗಿದ್ದರೆ, ಅವರೂ ಸಹ ಗಾಜಿನ ಮನೆಯಲ್ಲಿ ಕುಳಿತುಕೊಂಡು ಬೋಧನೆಗೆ ಇಳಿಯುತ್ತಿದ್ದರು. ಚಳವಳಿಗಾರರು ಯಾವ ವಿಷಯವನ್ನು ಚಳವಳಿಗೆ ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನು ಅಲ್ಲೇ ಕುಳಿತು ಆದೇಶ ನೀಡುತ್ತಿದ್ದರು.

****

ಅಸಲಿಗೆ ನಮ್ಮ ಮಾಧ್ಯಮಗಳು ತಿರುವಳ್ಳುವರ್ ಪ್ರತಿಮೆ ಅನಾವರಣದ ವಿಷಯದಲ್ಲಿ ಕನ್ನಡ ಸಂಘಟನೆಗಳ ನಿಲುವು ಏನಾಗಿತ್ತು ಎಂಬುದನ್ನು ಸರಿಯಾಗಿ ಬಿಂಬಿಸಲೇ ಇಲ್ಲ. ತಿರುವಳ್ಳುವರ್ ಪ್ರತಿಮೆ ಅನಾವರಣ ನಡೆಯಲು ನಮ್ಮ ಅಭ್ಯಂತರವೇನೂ ಇಲ್ಲ. ಅದಕ್ಕೂ ಮುನ್ನ ತಮಿಳುನಾಡು ಸರ್ಕಾರದ ಕಿತಾಪತಿಗಳು ನಿಲ್ಲಲಿ ಎಂಬುದು ಅವರ ಬೇಡಿಕೆಯಾಗಿತ್ತು. ತಿರುವಳ್ಳುವರ್ ಬಗ್ಗೆ ನಮಗೆ ಗೌರವವಿದೆ, ಆದರೆ ಪ್ರತಿಮೆ ಹಿಂದೆ ನಿಂತಿರುವ ಭಾಷಾಂಧ ಶಕ್ತಿಗಳನ್ನು ನಾವು ವಿರೋಧಿಸುತ್ತೇವೆ ಎಂದು ಅವರು ಪದೇ ಪದೇ ಹೇಳುತ್ತಲೇ ಬಂದರು.

ಮಾಧ್ಯಮಗಳಿಗೆ ಜಾಣ ಕುರುಡು. ಕನ್ನಡಪರ ಸಂಘಟನೆಗಳನ್ನು ಜಗಳಗಂಟರು ಎಂದು ಬಿಂಬಿಸಲು ಅವುಗಳು ನಿರ್ಧರಿಸಿಯಾಗಿತ್ತು. ಕಳೆದ ವರ್ಷ ರಾಜ್ಯೋತ್ಸವ ಪ್ರಶಸ್ತಿ ಪಡೆದ ಸಂಪಾದಕರೋರ್ವರು ತಮ್ಮ ಅಂಕಣದಲ್ಲಿ ಇದನ್ನು ಬರೆದರು. ಮತ್ತೋರ್ವ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತರು ತಮ್ಮ ಪತ್ರಿಕೆಯ ಮುಖಪುಟದಲ್ಲಿ ಇಂಥದ್ದೇ ಲೇಖನ ಬರೆದು, ತಿರುವಳ್ಳುವರ್ ಪ್ರತಿಮೆ ಅನಾವರಣಕ್ಕೆ ಮುಂದಾದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಹಾಡಿ ಕೊಂಡಾಡಿದರು. ಆನಂತರ ನಡೆದಿದ್ದೆಲ್ಲ ನಮ್ಮ ಸಾಹಿತಿ-ಪತ್ರಕರ್ತರ ಹೃದಯ ವೈಶಾಲ್ಯದ, ವಿಶ್ವ ಮಾನವ ಸಂದೇಶಗಳ, ಭಾವೈಕ್ಯತೆ, ರಾಷ್ಟ್ರೀಯತೆಯ ಅನಾವರಣ!

ಪ್ರಜಾವಾಣಿ ಹಾಗು ವಿಜಯಕರ್ನಾಟಕ ಪತ್ರಿಕೆಗಳು ತಳೆದ ನಿಲುವನ್ನೇ ಇತರ ಪತ್ರಿಕೆಗಳು ಅನುಸರಿಸಿದವು. ಕನ್ನಡ ಚಳವಳಿಯ ವಿಷಯದಲ್ಲಿ ಯಾವಾಗಲೂ ಒಂದು ಹೆಜ್ಜೆ ಕನ್ನಡಪರವಾಗೇ ಇರುವ ಕನ್ನಡಪ್ರಭವೂ ಸಹ ಇದನ್ನೇ ಮಾಡಿತು.

ಪತ್ರಿಕೆಗಳು ತನ್ನ ಒಲವು ನಿಲುವುಗಳನ್ನು ನಿರ್ಧರಿಸಲು ಸ್ವತಂತ್ರವಾಗಿರುತ್ತವೆ. ಅವುಗಳನ್ನು ಪ್ರಶ್ನಿಸುವ ಪ್ರಯತ್ನವನ್ನೇನೂ ನಾನು ಮಾಡುತ್ತಿಲ್ಲ. ಕನ್ನಡ ಸಂಘಟನೆಗಳ ನಿಲುವುಗಳನ್ನು ಪತ್ರಿಕೆಗಳು ಒಪ್ಪಬೇಕು ಎಂದೇನೂ ಇಲ್ಲ.

ಆದರೆ ಸಾಹಿತಿಗಳು-ಪತ್ರಕರ್ತರು ತೆಗೆದುಕೊಂಡ ನಿರ್ಧಾರವನ್ನೇ ಒಪ್ಪಬೇಕು ಎಂಬ ದರ್ದು ಕನ್ನಡ ಚಳವಳಿಗಾರರಿಗೂ ಇಲ್ಲ ಎಂಬುದನ್ನು ಮರೆಯುವಂತಿಲ್ಲ. ಕನ್ನಡ ಚಳವಳಿಗಳು ಸಾಹಿತಿಗಳ-ಪತ್ರಕರ್ತರ ಮರ್ಜಿಯಿಂದಲೇ, ಅವರ ಆದೇಶದಿಂದಲೇ, ಅವರ ಕುಮ್ಮಕ್ಕಿನಿಂದಲೇ ನಡೆಯಬೇಕಾಗಿಲ್ಲ. ಕನ್ನಡದ ಅತಿ ಹೆಚ್ಚು ಪ್ರಸಾರದ ಎರಡು ಪತ್ರಿಕೆಗಳ ಸಂಪಾದಕರು ತೆಗೆದುಕೊಂಡ ನಿಲುವನ್ನು ಧಿಕ್ಕರಿಸಿ, ಕನ್ನಡ ಚಳವಳಿಗಾರರು ತಮ್ಮದೇ ದಾರಿ ಹುಡುಕಿಕೊಂಡರು. ಅವರು ನಮ್ಮ ಮಾತು ಕೇಳಬೇಕಿತ್ತು ಎಂಬ ದುರಂಹಕಾರ, ಹಠ ಯಾರಿಗಾದರೂ ಇದ್ದರೆ ಅವರು ಅದನ್ನು ತೆಪ್ಪಗೆ ಕಿತ್ತು ಎಸೆಯುವುದು ಒಳ್ಳೆಯದು.

****

ತಿರುವಳ್ಳುವರ್ ಪ್ರತಿಮೆ ಅನಾವರಣ ನಮ್ಮ ಸಾಹಿತಿ ಮಹೋದಯದ ದೃಷ್ಟಿಯಲ್ಲಿ ಎರಡೂ ರಾಜ್ಯಗಳ ನಡುವಿನ ಭ್ರಾತೃತ್ವವನ್ನು ಬೆಳೆಸುವ ಯತ್ನ. ಹಳೆಯ ಜಗಳವನ್ನು ಮರೆಯುವ, ಹೊಸ ಕೊಡು-ಕೊಳ್ಳುವಿಕೆಯತ್ತ ಸಾಗುವ ಹಾದಿ. ನಿಜವಿರಬಹುದು. ಆದರೆ ತಮಿಳುನಾಡು-ಕರ್ನಾಟಕ ರಾಜ್ಯಗಳ ನಡುವೆ ಇರುವ ಎಲ್ಲ ಸಮಸ್ಯೆಗಳೂ ಒಂದೇ ಏಟಿಗೆ ಬಗೆಹರಿದುಹೋಯಿತು ಎಂಬ ಭ್ರಮೆಯನ್ನು ಬಿತ್ತುವ ಯತ್ನವನ್ನು ಇವರೆಲ್ಲರೂ ಬಿಂಬಿಸಿದರು. ೧೯ ವರ್ಷಗಳ ಹಿಂದೆ ತಿರುವಳ್ಳುವರ್ ಪ್ರತಿಮೆ ಅನಾವರಣ ವಿರೋಧಿ ಹೋರಾಟದ ಮುಂಚೂಣಿಯಲ್ಲಿದ್ದ ಚಿದಾನಂದಮೂರ್ತಿಯವರು ಒಂದು ಹೆಜ್ಜೆ ಮುಂದೆ ಹೋಗಿ, `ಯಾರು ಏನೇ ಹೇಳಿದರೂ ಇಲ್ಲಿ ತಿರುವಳ್ಳುವರ್ ಪ್ರತಿಮೆ ಅನಾವರಣವನ್ನು ಯಾರಿಂದಲೂ ತಪ್ಪಿಸಲಾಗದು ಎಂದು ಥೇಟ್ ಮುಖ್ಯಮಂತ್ರಿಯ (ಆಡಳಿತಗಾರನ ಹಾಗೆ) ಹಾಗೆ ಹೇಳಿದರು.

ಆದರೆ ಅವರೆಲ್ಲರೂ ಮರೆತ ವಿಷಯವೆಂದರೆ, ೧೮ ವರ್ಷಗಳಿಂದ ಇದ್ದ ಮುಸುಕನ್ನು ತೆಗೆಯಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇದ್ದಕ್ಕಿದ್ದಂತೆ ಯಾಕೆ ಯತ್ನಿಸಿದರು ಎಂಬುದು. ತಿರುವಳ್ಳುವರ್ ಕುರಿತು ಯಡಿಯೂರಪ್ಪನವರಿಗೆ ಇದ್ದಕ್ಕಿದ್ದಂತೆ ಗೌರವ ಹುಟ್ಟಿದ್ದೇಕೆ ಎಂಬುದರ ಕುರಿತು ಇವರೆಲ್ಲ ಯಾಕೆ ಯೋಚಿಸಲಿಲ್ಲ?

ಕನ್ನಡ ಸಂಘಟನೆಗಳು ಮುಖ್ಯಮಂತ್ರಿಗಳ `ದೂರದೃಷ್ಟಿಯನ್ನು ಚೆನ್ನಾಗಿಯೇ ಗ್ರಹಿಸಿದವು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ತಮಿಳರ ವೋಟ್‌ಬ್ಯಾಂಕ್ ಪಡೆದರೆ ಇನ್ನೂ ೨೦ ಸ್ಥಾನ ಗೆಲ್ಲುವ ಅವಕಾಶ ಇರುವುದರಿಂದಲೇ ಯಡಿಯೂರಪ್ಪ ಈ ಸಾಹಸಕ್ಕೆ ಕೈ ಹಾಕಿದ್ದಾರೆ ಎಂದು ಈ ಸಂಘಟನೆಗಳು ನೇರವಾಗಿಯೇ ಹೇಳಿದವು.

ಮಹಾಮಾನವತಾವಾದಿ ಬಸವಣ್ಣನವರ ಚಿಂತನೆಗಳನ್ನೇ ಗೌರವಿಸದ ಜನರಿಗೆ ತಿರುವಳ್ಳುವರ್ ಆದರ್ಶಗಳ ಪಾಲನೆ ಇದ್ದಕ್ಕಿದ್ದಂತೆ ನೆನಪಾಗಿದ್ದೇಕೆ ಎಂದು ಈ ಸಾಹಿತಿಗಳಿಗೆ ಅರ್ಥವಾಗಲೇ ಇಲ್ಲ. ಆದರೆ ಕನ್ನಡ ಸಂಘಟನೆಗಳು ಚೆನ್ನಾಗಿಯೇ ಇದನ್ನು ಅರ್ಥ ಮಾಡಿಕೊಂಡಿದ್ದವು. ಆದರೂ ಕನ್ನಡ ಚಳವಳಿಗಾರರೇ ದಡ್ಡರೆಂಬಂತೆ ಬಿಂಬಿಸಲಾಯಿತು.

ತಮಾಶೆಯೆಂದರೆ ಈ ಬಾರಿ ಎಡ-ಬಲ ಬೇಧವಿಲ್ಲದಂತೆ ನಮ್ಮ ಕೆಲ ಸಾಹಿತಿಗಳು ಸರ್ಕಾರದ ಪರವಾಗಿ ನಿಂತುಕೊಂಡರು. ಕೇವಲ ಸರ್ಕಾರದ ಪರ ನಿಂತುಕೊಳ್ಳದೆ, ಕನ್ನಡ ಸಂಘಟನೆಗಳ ವಿರುದ್ಧ ನಿಂತುಕೊಂಡರು. ಪ್ರಜಾವಾಣಿಯ ವಾಚಕರ ವಾಣಿಯಲ್ಲಿ ಬರೆದ ಲೋಹಿಯಾವಾದಿಯೊಬ್ಬರು ಕನ್ನಡ ಸಂಘಟನೆಗಳು ಯಾವ ವಿಷಯವನ್ನು ಚಳವಳಿಗೆ ಆಯ್ಕೆ ಮಾಡಿಕೊಳ್ಳಬಾರದು, ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಉಪದೇಶಾಮೃತ ನೀಡಿದರು. ಕನ್ನಡ ಸಂಘಟನೆಗಳನ್ನು ತಾವೇ ಸಂಬಳ ಕೊಟ್ಟು ಸಾಕಿಕೊಂಡಂತೆ ಇತ್ತು ಅವರ ವಾದಸರಣಿ. ಸಾಲದಕ್ಕೆ ಕನ್ನಡ ಸಂಘಟನೆಗಳನ್ನು ಗಲಾಟೆ ಸಂಘಟನೆಗಳು ಎಂದು ಜರಿದರು.

ಇದಕ್ಕೆ ತಕ್ಕ ಉತ್ತರವನ್ನು ಚಂಪಾ ಅದೇ ವಾಚಕರ ವಾಣಿಯಲ್ಲಿ ನೀಡಿದ್ದಾರೆ. ಚಂಪಾ ಹೀಗೆ ಹೇಳಿದ್ದಾರೆ: ಕ್ರಾಂತಿಯ ಮಿಡಿತವಿರುವ ಬುದ್ಧಿವಂತರು `ಅನುಕೂಲ ನೋಡಿಕೊಂಡು ಮಾರ್ಗದರ್ಶನ ಮಾಡಲಿ. ಇಲ್ಲವಾದರೆ ಇಂಥವರಿಗೆ `ಗಂಟಲು ಸತ್ತ ಬುದ್ಧಿವಂತರು ಎಂದು ನಾವೂ ಕರೆಯಬೇಕಾದೀತು. ಬರೀ ಮೂಗು ಮುರಿಯುತ್ತ ಕುಂತರೆ ವಿಕಾರಗೊಳ್ಳುವುದು ನಿಮ್ಮ ಮುಖವೇ! ನಿಮ್ಮ ಮಾರ್ಗವೂ ಬೇಕಾಗಿಲ್ಲ, ದರ್ಶನವೂ ಬೇಕಾಗಿಲ್ಲ!

*****

ತಿರುವಳ್ಳುವರ್ ಪ್ರತಿಮೆ ಅನಾವರಣದ ದಿನದಂದು ಎಲ್‌ಟಿಟಿಇ ಮುಖ್ಯಸ್ಥ ಪ್ರಭಾಕರನ್ ಭಾವಚಿತ್ರವನ್ನು ಹಿಡಿದು ಕೆಲ ತಮಿಳು ಭಾಷಾಂಧರು ಘೋಷಣೆ ಕೂಗುತ್ತಿದ್ದರು. ಕೆಲವು ಟಿವಿಗಳಲ್ಲೂ ಈ ದೃಶ್ಯ ಪ್ರಸಾರವಾಯಿತು. ಮುಖ್ಯಮಂತ್ರಿಯ ಭಾವಚಿತ್ರದೊಂದಿಗೆ ಪ್ರಭಾಕರನ್ ಭಾವಚಿತ್ರವನ್ನೂ ಬಳಸಿದ್ದ ಕೆಲವು ದೊಡ್ಡ ಗಾತ್ರದ ಬ್ಯಾನರ್‌ಗಳು ಕಾರ್ಯಕ್ರಮದದ ಸಭಾಂಗಣದ ಸುತ್ತ ಮಿರಿಮಿರಿ ಮಿಂಚುತ್ತಿದ್ದವು.

ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಪ್ರಭಾಕರನ್ ಘೋಷಿತ ಅಪರಾಧಿಯಾಗಿದ್ದ. ಎಲ್‌ಟಿಟಿಇ ಭಾರತದಲ್ಲಿ ನಿಷೇಧಿತ ಸಂಘಟನೆ. ಜಾಗತಿಕ ಭಯೋತ್ಪಾದನೆಯಲ್ಲಿ ಆತ್ಮಾಹುತಿ ದಳವನ್ನು ಪರಿಚಯಿಸಿದ್ದೇ ಎಲ್‌ಟಿಟಿಇ.

ಬೆಂಗಳೂರು ತಮಿಳು ಸಂಘ ಹಿಂದಿನಿಂದಲೂ ಎಲ್‌ಟಿಟಿಇ ಕುರಿತು ತಳೆದ ನಿಲುವು ಏನೆಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ತಮಿಳುನಾಡಿನಲ್ಲಿ ಎಲ್‌ಟಿಟಿಇ ಮುಖವಾಣಿಯಾಗೇ ಇರುವ ನೆಡುಮಾರನ್ ಮತ್ತಿತರರೇ ಈ ಸಂಘದ ಆದರ್ಶ. ವಿಶ್ವ ತಮಿಳು ಸಮ್ಮೇಳನದಲ್ಲಿ ಕನ್ನಡಿಗರ ವಿರೋಧದ ನಡುವೆಯೂ ನೆಡುಮಾರನ್ ಕರೆಸಿ ಭಾಷಣ ಮಾಡಿಸಿದ್ದೂ ಇದೇ ತಮಿಳು ಸಂಘವೇ. ಎಲ್‌ಟಿಟಿಇಗೆ ಬೆಂಗಳೂರಿನಲ್ಲಿ ಹಣ ಸಂಗ್ರಹಿಸಿ ದೇಣಿಗೆಯಾಗಿ ನೀಡಲಾಗುತ್ತಿತ್ತು ಎಂಬುದೂ ರಾಜೀವ್ ಹತ್ಯೆಕೋರರ ವಿರುದ್ಧ ಕಾರ್ಯಾಚರಣೆಯಲ್ಲಿ ಬಯಲಾಯಿತು.

ಡಾ.ರಾಜ್ ಕುಮಾರ್ ಅವರನ್ನು ವೀರಪ್ಪನ್ ಅಪಹರಿಸಿದ ನಂತರ ರಾಜಿಪಂಚಾಯ್ತಿಗೆ ಹೋದವರು ಯಾರು ಎಂಬುದೂ ಎಲ್ಲರಿಗೆ ಗೊತ್ತಿರುವ ವಿಷಯ. ರಾಜ್ ಬಿಡುಗಡೆಗೆ ವೀರಪ್ಪನ್ ಒಡ್ಡಿದ ಷರತ್ತುಗಳೆಲ್ಲವೂ ಬೆಂಗಳೂರಿನ ಭಾಷಾಂಧ ತಮಿಳರ ಷರತ್ತುಗಳೇ ಆಗಿದ್ದವು ಎಂಬುದನ್ನೂ ಮರೆಯುವಂತಿಲ್ಲ. ರಾಜ್ ಬಿಡುಗಡೆಗೆ ಕಳುಹಿಸಲಾದ ಕೋಟಿಗಟ್ಟಲೆ ಹಣದಲ್ಲಿ ಸಾಕಷ್ಟು ಹಣ ಬೆಂಗಳೂರಿನ ಜನರಿಗೇ ಸಂದಾಯವಾದವು ಎಂಬ ವರ್ತಮಾನವೂ ಇದೆ.

ತಿರುವಳ್ಳುವರ್ ಪ್ರತಿಮೆ ಅನಾವರಣದ ದಿನ ಇದೇ ಶಕ್ತಿಗಳು ತೋಳು, ತೊಡೆ ತಟ್ಟಿ ನಿಂತವು. ಮುಖ್ಯಮಂತ್ರಿಯ ಜತೆ ಪ್ರಭಾಕರನ್ ಫೋಟೋ ಅಂಟಿಸುವಷ್ಟು ಧೈರ್ಯವನ್ನು ಪ್ರದರ್ಶಿಸಿದವು.

ತಮಾಶೆ ಎಂದರೆ ಕನ್ನಡಪ್ರಭ, ವಾರ್ತಾಭಾರತಿ ಹೊರತು ಪಡಿಸಿ ಬೇರೆ ಪತ್ರಿಕೆಗಳು ಪ್ರಭಾಕರನ್ ಭಾವಚಿತ್ರವನ್ನು ಹೊತ್ತು ಕುಣಿಸಿದ ವಿಷಯವನ್ನು ಪ್ರಕಟಿಸಲೇ ಇಲ್ಲ. ಅದು ಇತರ ಪತ್ರಿಕೆಗಳಿಗೆ ಸುದ್ದಿಯಾಗುವಂಥ ವಿಷಯವೇ ಆಗಿರಲಿಲ್ಲವೇನೋ? ಅಥವಾ `ಹೊಸ ಶಕೆ ಆರಂಭ, `ಭಾವನಾತ್ಮಕ ಬೆಸುಗೆ ಇತ್ಯಾದಿ ತಲೆಬರೆಹದ ಸುದ್ದಿಗಳ ನಡುವೆ `ಮೊಸರಲ್ಲಿ ಕಲ್ಲು ಯಾಕೆ ಎಂದು ಅವು ನಿರ್ಧರಿಸಿಬಿಟ್ಟವೇನೋ!

ಇದೇ ಸಂದರ್ಭದಲ್ಲಿ ಅಖಿಲ ಕರ್ನಾಟಕ ಗಡಿ ಹೋರಾಟ ಸಮಿತಿ ಅಧ್ಯಕ್ಷ ರಾವ್ ಬೈಂದೂರ್ ಎಂಬ ಹಿರಿಯ ಜೀವವನ್ನು, ಅವರ ಕೆಲ ಸಂಗಡಿಗರ ಸಮೇತ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸುತ್ತಿರುವಾಗಲೇ ಬಂಧಿಸಲಾಯಿತು. ಷರತ್ತುಬದ್ಧವಾಗಿ ತಿರುವಳ್ಳುವರ್ ಪ್ರತಿಮೆ ಅನಾವರಣ ಆಗಬೇಕು ಎಂದು ಹೇಳಿದ್ದೇ ಅವರ ತಪ್ಪು. ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡು, ಎರಡು ಸಮುದಾಯಗಳ ನಡುವೆ ದ್ವೇಷ ಹಬ್ಬಿಸುವ ಯತ್ನದ ಆರೋಪದಲ್ಲಿ ರಾವ್ ಬೈಂದೂರ್ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಿದರು.

ಇತ್ತ ದೇಶದ ಮಾಜಿ ಪ್ರಧಾನಿಯನ್ನು ಕೊಂದ, ನಿಷೇಧಿತ ಸಂಘಟನೆಯ ಮುಖ್ಯಸ್ಥ, ಇತ್ತೀಚಿಗಷ್ಟೆ ಶ್ರೀಲಂಕಾ ಸೈನ್ಯದಿಂದ ಕೊಲ್ಲಲ್ಪಟ್ಟ ಪ್ರಭಾಕರನ್ ಎಂಬ ರಾಷ್ಟ್ರದ್ರೋಹಿಯ ಭಾವಚಿತ್ರದ ಮೆರವಣಿಗೆ ನಡೆಸುವವರೇ ಧನ್ಯರು. ಅವರ ಮೇಲೆ ಕೇಸೂ ಇಲ್ಲ, ದೂರೂ ಇಲ್ಲ. ನಮ್ಮ ಪತ್ರಿಕೆಗಳ ಸಂಪಾದಕೀಯ ಪುಟದಲ್ಲಿ `ಇದು ಸಲ್ಲ ಎಂಬ ಒಂದು ಸಾಲೂ ಇಲ್ಲ. ಕೆಲ ಸಾಹಿತಿಗಳದ್ದು ಯಥಾಪ್ರಕಾರ ಈ ವಿಷಯದಲ್ಲಿ ಗಂಭೀರ ಮೌನ. ಒಂದು ವೇಳೆ ಇದನ್ನೂ ಕನ್ನಡ ಸಂಘಟನೆಗಳು ಪ್ರಶ್ನಿಸಿದರೆ, ಕನ್ನಡ ಚಳವಳಿಗಾರರು ದಡ್ಡರು ಎಂದು ಅವರು ಮತ್ತೆ ಬಾಯಿಬಡಿದು ಕಿರುಚುತ್ತಾರೆ.


*****
ಕನ್ನಡ ಚಳವಳಿಗಾರರು ಬಳಸುವ ಭಾಷೆಯ ಬಗ್ಗೆ, ಉಚ್ಛಾರಣೆಯ ದೋಷದ ಬಗ್ಗೆಯೂ ಮತ್ತೆ ಕೆಲವರು ಚರ್ಚೆ ಆರಂಭಿಸಿದ್ದಾರೆ. ಈ ಕುರಿತು ನಾನು ಹಿಂದೆಯೇ ಬರೆದಿದ್ದೆ. ಸಂಸ್ಕೃತಭೂಯಿಷ್ಠವಾದ ಕನ್ನಡವನ್ನು ಮಾತನಾಡುವವರು ಮಾತ್ರ ಕನ್ನಡಿಗರು ಎಂಬುದು ಇವರ ವರಸೆ. ಹೀಗೆಲ್ಲ ಮಾತನಾಡುವವರು ಮೇಲ್ವರ್ಗಕ್ಕೆ ಸೇರಿದವರು ಎಂಬುದು ಸ್ಪಷ್ಟ.

ಮೊನ್ನೆ ಟಿವಿ ಆಂಕರ್ ಒಬ್ಬರು ಇದೇ ಪ್ರಶ್ನೆಯನ್ನು ಎತ್ತಿದರು. ಕನ್ನಡ ಚಳವಳಿಗಾರರೊಬ್ಬರಿಗೆ ಒಂದೇ ಒಂದು ವಾಕ್ಯ ತಪ್ಪಿಲ್ಲದಂತೆ ಮಾತನಾಡಲು ಬರುವುದಿಲ್ಲ. ಇವರು ಎಂಥ ಚಳವಳಿ ಮಾಡುತ್ತಾರೆ ಎಂದು ಅವರು ಮತ್ತೊಬ್ಬ ಚಳವಳಿಗಾರನಿಗೆ ಪ್ರಶ್ನಿಸುತ್ತಿದ್ದರು.

ಇದೇ ಚಾನೆಲ್‌ಗೆ ಪ್ರೈಮ್‌ಬ್ಯಾಂಡ್‌ನಲ್ಲಿ ಕೇಬಲ್ ಆಪರೇಟರ್‌ಗಳು ಅವಕಾಶ ನೀಡದೇ ಇದ್ದಾಗ, ಆ ಚಾನೆಲ್‌ಗೆ ಆಸರೆಗೆ ನಿಂತಿದ್ದು ಅದೇ ಕನ್ನಡ ಹೋರಾಟದ ಮುಖಂಡರೇ ಎಂಬುದು ವಿಚಿತ್ರ. ಆಗ ಅವರಿಗೆ ಭಾಷಾಶುದ್ಧಿಯ ಅಗತ್ಯತೆ ಕಂಡುಬಂದಿರಲಿಲ್ಲ.

ಚಳವಳಿಗಾರರನ್ನು ಕನ್ನಡದ ಹೆಸರಿನಲ್ಲಿ ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುವಾಗ ಈ ಮಂದಿಗೆ ಚಳವಳಿಗಾರರ ಭಾಷಾ ಜ್ಞಾನ, ವ್ಯಾಕರಣ ಜ್ಞಾನ ನೆನಪಿಗೆ ಬರುವುದಿಲ್ಲ.

ಕನ್ನಡ ಕಾರ್ಯಕರ್ತನೊಬ್ಬ ಈ ಬಗ್ಗೆ ನೊಂದು ಮಾತನಾಡಿದಾಗ ಆತನಿಗೆ ಹೇಳಿದೆ: ನಿಮಗೆ ಭಾಷಾ ಶುದ್ಧಿ ಇಲ್ಲ ಎಂದು ಹೇಳುವವರಿಗೆ ಹೃದಯವೇ ಶುದ್ಧವಿಲ್ಲ. ಅವರ ದೇಹದ ಭಾಷೆ(ಮ್ಯಾನರಿಸಂ)ಯನ್ನು ಗಮನಿಸಿ ನೋಡಿ. ಅಸಹ್ಯವಾಗುತ್ತದೆ. ಅಂಥವರ ನೀತಿಪಾಠ ನಿಮಗೆ ಬೇಕಾಗೂ ಇಲ್ಲ.

*****

ಬಸವಣ್ಣನ ನಾಡು ಇದು. ಪ್ರತಿಮಾ ಸಂಸ್ಕೃತಿ ನಮ್ಮ ರಾಜ್ಯಕ್ಕೆ ಒಗ್ಗಿಬರದ ವಿಷಯ. `ಸ್ಥಾವರಕ್ಕಳಿವುಂಟು, ಜಂಗಕ್ಕಳಿವಿಲ್ಲ ಎಂದವರು ನಮ್ಮ ಬಸವಾದಿ ಶರಣರು.

ಈಗಾಗಲೇ ಸ್ಥಾಪನೆಯಾಗಿರುವ ಎಲ್ಲ ಪ್ರತಿಮೆಗಳ ಮೇಲೂ ಕಾಗೆ-ಗೂಬೆಗಳು ಕೂತು-ಹೇತು ಹೋಗುತ್ತವೆ. ಒಮ್ಮೊಮ್ಮೆ ಮನುಷ್ಯರೇ ಈ ಕೆಲಸವನ್ನು ಮಾಡುತ್ತಾರೆ. ಮಲ ಸುರಿಯುತ್ತಾರೆ, ಚಪ್ಪಲಿ ಹಾರ ಹಾಕುತ್ತಾರೆ.

ಇವತ್ತು ನಮ್ಮ ಸಾಹಿತಿಗಳ ದಿವ್ಯದೃಷ್ಟಿಯಲ್ಲಿ ಸೌಹಾರ್ದತೆಯ ಸಂಕೇತವಾಗಿರುವ ತಿರುವಳ್ಳುವರ್, ಸರ್ವಜ್ಞ ಪ್ರತಿಮೆಗಳು ನಾಳೆ ದ್ವೇಷದ ರೂಪಕಗಳನ್ನೂ ಹರಡಬಹುದು.

ಅಷ್ಟಕ್ಕೂ ತಮಿಳರ ಆಕ್ರಮಣಶೀಲತೆ, ಸಾಮ್ರಾಜ್ಯಶಾಹಿ ಮನೋಭಾವದ ಪರಿಚಯ ಎಲ್ಲರಿಗೂ ಇದೆ. ತಿರುವಳ್ಳುವರ್ ಪ್ರತಿಮೆ ಅನಾವರಣವಾದ ಮಾತ್ರಕ್ಕೆ ತಮಿಳುನಾಡು ಸರ್ಕಾರ ಕಿತಾಪತಿ ಬಿಡುತ್ತದೆ ಎಂದು ಭಾವಿಸುವವನು ಶತಮೂರ್ಖನೇ ಆಗಿರಬೇಕು. ಮುಂದೆ ಕಾವೇರಿ ವಿಷಯಕ್ಕೋ, ಹೊಗೇನಕಲ್ ವಿಷಯಕ್ಕೋ ಮತ್ತೆ ವಿವಾದ ಎದ್ದು ನಿಂತಾಗ ನಮ್ಮ ವಿಶಾಲ ಹೃದಯದ ಸಾಹಿತಿ-ಪತ್ರಕರ್ತರು ಯಾವ ನಿಲುವು ತಳೆಯುತ್ತಾರೋ ಕಾದು ನೋಡಬೇಕು.

****

ಈ ಲೇಖನ ಬರೆಯುವ ಹೊತ್ತಿಗೂ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡರಿಗೆ ಜೈಲಿನಿಂದ ಬಿಡುಗಡೆಯಾಗಿರಲಿಲ್ಲ. ಜೈಲು ಚಳವಳಿಗಾರರಿಗೆ ಹೊಸದೇನೂ ಅಲ್ಲ. ಇವತ್ತು ಹೋಗುತ್ತಾರೆ, ನಾಳೆ ಬರುತ್ತಾರೆ.

ಆದರೆ ಸರ್ಕಾರದ, ಪ್ರಭುತ್ವದ ಮರ್ಜಿಗೆ ಬಿದ್ದು, ಅವಕಾಶಗಳಿಗಾಗೋ, ಬಿಟ್ಟಿ ಪ್ರಚಾರಕ್ಕಾಗೋ, ಜಾತಿಯ ಕಾರಣಕ್ಕೋ ಚಳವಳಿಗಾರರನ್ನು ನಿಂದಿಸುವ ಕಾಯಕ ಮಾಡಿಕೊಂಡು ಬರುತ್ತಿರುವ ಮೇಧಾವಿಗಳು ತಮ್ಮ ಸುತ್ತಲೇ ಒಂದು ಜೈಲನ್ನು ಕಟ್ಟಿಕೊಂಡಿದ್ದಾರೆ. ಅವರು ಅದರಿಂದ ಯಾವತ್ತೂ ಹೊರಬರಲಾರರು. ಸರ್ಕಾರದ ಜೀತಗಾರಿಕೆಯ ಬಂಧೀಖಾನೆಯಲ್ಲಿ ಅವರದು ಜೀವಾವಧಿ ಶಿಕ್ಷೆ.

*****

ಈ ಲೇಖನದ ಮೂಲಕ ಹಲವಾರು ಗೆಳೆಯರ ಮುನಿಸನ್ನು ಎದುರಿಸಬೇಕಾಗುತ್ತದೆ ಎಂಬುದು ನನಗೆ ಚೆನ್ನಾಗಿ ಗೊತ್ತಿದೆ. ಹೊಸ ಶತ್ರುಗಳು ಸೃಷ್ಟಿಯಾಗುತ್ತಾರೆ ಎಂಬುದೂ ಗೊತ್ತಿದೆ. ಆದರೆ ಕಳೆದ ಹತ್ತು ವರ್ಷಗಳಿಂದ ಕನ್ನಡ ಚಳವಳಿಗಾರರನ್ನು ತುಂಬ ಹತ್ತಿರದಿಂದ ಗಮನಿಸಿಕೊಂಡು ಬಂದಿದ್ದೇನೆ. ಅವರ ತಳಮಳ, ನೋವು ಸಂಕಟಗಳೆಲ್ಲವನ್ನೂ ನಾನು ಪ್ರತ್ಯಕ್ಷ ನೋಡಿದ್ದೇನೆ.

ಹೀಗಾಗಿ ಅವರನ್ನು ಅಪಮಾನಿಸುವ, ಅವರ ಕಾಳಜಿಯನ್ನು ಅನುಮಾನದಿಂದ ನೋಡುವ ಯಾರನ್ನೇ ಆಗಲಿ ನಾನು ವಿರೋಧಿಸುತ್ತೇನೆ. ಅದು ನನ್ನ ಕರ್ತವ್ಯವೆಂದೇ ಭಾವಿಸಿದ್ದೇನೆ.