Sunday, July 19, 2009

ಹಳ್ಳಿ ಥೇಟರ್‌ನ ಪವಾಡ ಮತ್ತು ಪ್ರಸಾದ್

ಪತ್ರಿಕೆ, ಚಳವಳಿ, ಸಂಘಟನೆ ಇತ್ಯಾದಿಗಳಲ್ಲಿ ಹೊರಳಿಕೊಂಡು, ಆದರ್ಶದ ಹುಮ್ಮಸ್ಸಿನಲ್ಲಿ ಓಡಾಡುವಾಗ ನಮ್ಮ ಕಣ್ಣಿಗೆ ಬಿದ್ದವರು ರಕ್ಷಿದಿ ಪ್ರಸಾದ್. ಅವತ್ತಿಗೆ ಅವರು ನಮಗೆ ಒಂಥರ ನಿಗೂಢ ವ್ಯಕ್ತಿ. ದಿನವೂ ಪತ್ರಿಕೆಗಳನ್ನು ಕೊಳ್ಳಲು ಗೆಳೆಯ ನಜರುಲ್ಲಾ ಅವರ ಅಂಗಡಿಗೆ ಅವರು ಬರುತ್ತಿದ್ದರು. ಅವತ್ತು ಹೊಸದಾಗಿ ಬಂದ ಎಲ್ಲ ಪತ್ರಿಕೆಗಳನ್ನೂ ಅವರು ಕೊಳ್ಳುತ್ತಿದ್ದರು. ಸ್ವಲ್ಪ ಹೊತ್ತು ಅಲ್ಲೇ ಹರಟೆ, ಒಂದಷ್ಟು ಓಡಾಟ, ನಂತರ ಬಂದ ಬೈಕ್‌ನಲ್ಲೇ ವಾಪಾಸು ಬೆಳ್ಳೇಕೆರೆಗೆ ಹೋಗುತ್ತಿದ್ದರು.

ಸಕಲೇಶಪುರದ ಮೂಡಿಗೆರೆಗೆ ಹೋಗುವ ರಸ್ತೆಯಲ್ಲಿ ಹಾನುಬಾಳಿಗೂ ಮುನ್ನ ಸಿಗುವ ಬೆಳ್ಳೇಕೆರೆಯಲ್ಲಿ `ಜೈ ಕರ್ನಾಟಕ ಸಂಘದ ಬೋರ್ಡನ್ನು ಆಗಾಗ ನೋಡಿದ್ದೆವು, ಆ ಸಂಘದಲ್ಲಿ ಪ್ರಸಾದ್ ಕ್ರಿಯಾಶೀಲರು ಎಂಬುದು ಗೊತ್ತಿತ್ತು. ನಂತರ ನಿಧಾನವಾಗಿ ಪ್ರಸಾದರ ಎಲ್ಲ ಚಟುವಟಿಕೆಗಳು ಗೊತ್ತಾಗತೊಡಗಿದಾಗಿನಿಂದ ಈ ವ್ಯಕ್ತಿ ಮತ್ತಷ್ಟು ನಿಗೂಢ ಅನಿಸತೊಡಗಿತ್ತು.

ಸಕಲೇಶಪುರದಂಥ ಪಟ್ಟಣದಲ್ಲಿ ಒಂದು ಸಂಘಟನೆಯನ್ನು ಕಟ್ಟಿ ಬೆಳೆಸಲು ನಾವು ಪಟ್ಟ ಪರದಾಟಗಳನ್ನು ನೆನಪಿಸಿಕೊಂಡರೆ ಮೈ ಜುಮ್ಮೆನಿಸುತ್ತದೆ. ಆದರೆ ಪ್ರಸಾದ್ ಬೆಳ್ಳೇಕೆರೆಯಂಥ ಕುಗ್ರಾಮದಲ್ಲಿ ಪವಾಡವನ್ನೇ ಸಾಧಿಸಿದ್ದರು.

ಪ್ರಸಾದ್ ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್ ಕೃತಿಯನ್ನು ಎರಡೆರಡು ಬಾರಿ ಓದಿದೆ. ಅವರ ಮೇಲಿದ್ದ ಗೌರವ ಇಮ್ಮಡಿಯಾಯಿತು ಎಂದಷ್ಟೆ ಹೇಳಿದರೆ ಕ್ಲೀಷೆ ಅನಿಸುತ್ತದೆ. ಹೆಗ್ಗೋಡಿನಲ್ಲಿ ಕುಳಿತು ಸುಬ್ಬಣ್ಣ ಮಾಡಿದ್ದನ್ನೇ ರಕ್ಷಿದಿ ಪ್ರಸಾದ್ ಬೆಳ್ಳೇಕೆರೆಯಲ್ಲಿ ಮಾಡಿದರು. ಸುಬ್ಬಣ್ಣ ಅವರಿಗಿದ್ದ ಆರ್ಥಿಕ ಅನುಕೂಲಗಳು, ಸಾಂಸ್ಕೃತಿಕ ಲೋಕದ ದಿಗ್ಗಜರ ಬೆಂಬಲ ಪ್ರಸಾದ್ ಅವರಿಗಿರಲಿಲ್ಲ. ಆದರೂ ಅವರು ಎದೆಗುಂದಲಿಲ್ಲ. ವಿಶ್ವಾಸ ಕಳೆದುಕೊಳ್ಳಲಿಲ್ಲ. ಅವರ ಜತೆಗಾರರು ಸಹ ಅವರನ್ನು ಕೈಬಿಡಲಿಲ್ಲ. ಎಲ್ಲ ಅಡೆ ತಡೆಗಳ ನಡುವೆಯೂ ಅವರು ಬೆಳ್ಳೇಕೆರೆಯನ್ನು ಕನ್ನಡ ರಂಗಭೂಮಿಯ ಭೂಪಟದಲ್ಲಿ ತಂದು ನಿಲ್ಲಿಸಿದರು. ಇಂಥವು ಎಲ್ಲರಿಂದಲೂ, ಎಲ್ಲ ಕಡೆಯಲ್ಲೂ ಆಗುವುದಿಲ್ಲ. ಹೀಗಾಗಿ ಪ್ರಸಾದ್ ಹಾಗು ಬೆಳ್ಳೇಕೆರೆಯ ಹೆಸರುಗಳೇ ನನ್ನಂಥವರಿಗೆ ಹೆಮ್ಮೆಯನ್ನು ಉಕ್ಕಿಸುವ, ಸ್ಪೂರ್ತಿಯನ್ನು ಚಿಮ್ಮಿಸುವ ಸಾಧನಗಳು.

****



ಅಷ್ಟಕ್ಕೂ ಪ್ರಸಾದ್ ಬೆಳ್ಳೇಕೆರೆಯಂಥ ಕುಗ್ರಾಮದಲ್ಲಿ ಮಾಡಿದ ಪವಾಡವೇನು ಎಂಬುದನ್ನು ಅರಿಯಲು ಅವರ `ಬೆಳ್ಳೇಕೆರೆ ಹಳ್ಳಿಥೇಟರ್ ಕೃತಿಯನ್ನು ಓದಬೇಕು. ತಮ್ಮ ಕೃತಿಯನ್ನು ಅವರು `ಒಂದು ಗ್ರಾಮೀಣ ರಂಗಭೂಮಿಯ ಆತ್ಮಕಥನ ಎಂದು ಅವರು ಕರೆದುಕೊಂಡಿದ್ದಾರೆ.

ಏಕಕಾಲಕ್ಕೆ ಒಂದು ರೋಚಕ ಕಾದಂಬರಿಯೂ, ಆತ್ಮರತಿಯಿಲ್ಲದ ಆತ್ಮಚರಿತ್ರೆಯೂ, ಅಜ್ಞಾತ ಹಳ್ಳಿಯೊಂದರ ಚರಿತ್ರೆಯೂ ಆಗಿಬಿಡುವ ಈ ಕೃತಿಯ ಸೊಗಡು ಇರುವುದೇ ನಿರೂಪಣೆಯ ವಿಧಾನದಲ್ಲಿ. ನಿರುದ್ವಿಗ್ನವಾಗಿ, ಭಾವಾವೇಶವಿಲ್ಲದೆ ತಮ್ಮ ಸುತ್ತಲ ಬದುಕನ್ನು ಕಟ್ಟಿಕೊಡುವ ಪ್ರಸಾದ್ ಒಮ್ಮೊಮ್ಮೆ ತೇಜಸ್ವಿಯವರನ್ನು ನೆನಪಿಸುತ್ತಾರೆ. ಈ ಬಗೆಯ ನಿರುಮ್ಮಳ ಬರವಣಿಗೆ ಪ್ರಸಾದ್ ಅವರಿಗೆ ಸುಲಭವಾಗಿ ಒಗ್ಗಿರುವುದನ್ನು ಗಮನಿಸಿದರೆ, ಇಷ್ಟು ವರ್ಷ ನಾಟಕಗಳನ್ನು ಹೊರತುಪಡಿಸಿ ಏನನ್ನೂ ಬರೆಯಲಿಲ್ಲವೇಕೆ ಎಂಬ ವ್ಯಥೆಯೂ ಕಾಡುತ್ತದೆ.

ಡೈರಿ ಫಾರಂನ ಉದ್ಯೋಗಿಯಾಗಿ, ಇಡೀ ಕಾರ್ಮಿಕವಲಯದ ಜತೆ ಒಡನಾಡುತ್ತ, ಪ್ರಸಾದ್ ಕಟ್ಟಿಕೊಂಡ ಬದುಕೇ ಒಂದು ಕಾವ್ಯ. ಇವತ್ತಿನ ಕಾಲಘಟ್ಟಕ್ಕೆ ಒಂಥರಾ ಸಿನಿಮೀಯ ಅನಿಸುವ ಘಟನೆಗಳು ಇಲ್ಲಿವೆ. ನಿರಕ್ಷರಿ ಎನಿಸಿಕೊಳ್ಳಲು ಅವಮಾನವೆನಿಸಿ, ಅಕ್ಷರ ಕಲಿಯಲು ತೊಡಗುವ ಲಕ್ಷ್ಮಯ್ಯನಿಗೆ ಪುಟ್ಟ ವಯಸ್ಸಿನಲ್ಲೇ ಮೇಷ್ಟ್ರಾಗುವುದರೊಂದಿಗೆ ಪ್ರಸಾದ್ ಅವರ ಸಾಮಾಜಿಕ ಜೀವನ ಆರಂಭಗೊಳ್ಳುತ್ತದೆ.

ತದನಂತರ ಓದು ಬಾರದ ಕಾರ್ಮಿಕರನ್ನೆಲ್ಲ ಗುಡ್ಡೆ ಹಾಕಿ, ಅವರಿಗೆ ಅಕ್ಷರಾಭ್ಯಾಸ ಕಲಿಸುವುದು, ಅದಕ್ಕಾಗಿ ರಾತ್ರಿ ಶಾಲೆಯನ್ನು ತೆರೆಯುವುದು, ನಂತರ ಅದೇ ಜನರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟುವುದು, ಕಟ್ಟಿದ ನಾಟಕ ತಂಡವನ್ನು ರಾಜ್ಯ ಮಟ್ಟದ ಖ್ಯಾತಿಗೆ ತಂದು ನಿಲ್ಲಿಸುವುದು.... ಹೀಗೆ ಸಾಗುತ್ತದೆ ಪ್ರಸಾದ್ ಅವರ ಯಶೋಗಾಥೆ.

ಈ ದೊಡ್ಡ ಪಯಣದಲ್ಲಿ ಪ್ರಸಾದ್ ಅವರಿಗೆ ಹೆಗಲಿಗೆ ಹೆಗಲು ಕೊಟ್ಟವರು ನೂರಾರು ಮಂದಿ. ಬೌದ್ಧಿಕ ವಲಯದ ಜನರಿಗೆ ಸೀಮಿತವಾಗಿದ್ದ ಹವ್ಯಾಸಿ ರಂಗಭೂಮಿಯನ್ನು ಅನಕ್ಷರಕುಕ್ಷಿಗಳು, ಈಗಷ್ಟೆ ಅಕ್ಷರ ಕಲಿತವರು, ಅಲ್ಪಸ್ವಲ್ಪ ಓದಿಕೊಂಡವರಿಗೆ ಒಗ್ಗಿಸುವುದು ಅಷ್ಟು ಸುಲಭದ್ದೇನೂ ಅಲ್ಲ. ಅದೂ ಹೇಳಿಕೇಳಿ ಬೆಳ್ಳೇಕರೆಯಂಥ ವರ್ಷದ ಆರು ತಿಂಗಳು ಮಳೆಯಲ್ಲಿ ಮುಳುಗಿಹೋಗುವ ಮಲೆನಾಡಿನ ಪುಟ್ಟ ಹಳ್ಳಿಯಲ್ಲಿ, ಕೂಲಿಕಾರ್ಮಿಕರ ನಡುವೆ ಇಂಥದ್ದೊಂದು ತಂಡ ಅರಳುವುದು ನಿಜಕ್ಕೂ ಪವಾಡವೇ.

ಇಡೀ ಕಥನದುದ್ದಕ್ಕೂ ಪ್ರಸಾದ್ ಮತ್ತು ಅವರ ತಂಡ ಎದುರಿಸಿದ ಸವಾಲುಗಳನ್ನು ಕಾಣಬಹುದು. ಐದು ರೂಪಾಯಿ ದಿನಗೂಲಿ ಪಡೆಯುವವರಿಂದ ನಾಲ್ಕಾಣೆ ಚಂದಾ ಪಡೆದು ರಂಗಚಟುವಟಿಕೆ ನಡೆಸಿಕೊಂಡು ಬರುವುದನ್ನು ಬೆಂಗಳೂರು-ಮೈಸೂರಿನ ಹವ್ಯಾಸಿ ರಂಗತಂಡಗಳು ಕಲ್ಪಿಸಿಕೊಳ್ಳುವುದೂ ಸಾಧ್ಯವಿಲ್ಲವೇನೋ?

ಅಪಾರ ಬಡತನ, ಹಳ್ಳಿ ರಾಜಕೀಯ, ಅನಕ್ಷರತೆ, ಮೌಢ್ಯ, ಕುಡಿತ, ಜಾತಿ ಜಗಳಗಳ ನಡುವೆ ಇದೊಂದು ತಂಡ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಿಟ್ಟಿಸುವುದು, ರಂಗಾಯಣದಲ್ಲಿ ಪ್ರದರ್ಶನ ನೀಡುವುದು ಒಂದೊಳ್ಳೆ ಕಮರ್ಷಿಯಲ್ ಸಿನಿಮಾಗೆ ಅರ್ಥಪೂರ್ಣ ಕ್ಲೈಮ್ಯಾಕ್ಸ್ ಕೂಡ ಆಗಿಬಿಡಬಹುದು. ಹಾಗೆಯೇ ಜಾಗತೀಕರಣದ ಕಾಲಘಟ್ಟದಲ್ಲಿ ದೇಸೀ ಸಂಸ್ಕೃತಿಯ ಪರ್ಯಾಯ ಹುಡುಕಾಟಗಳಿಗೆ ಅರ್ಥಪೂರ್ಣ ರೂಪಕವೂ ಆಗಬಹುದು.

****

ಹಳ್ಳಿ ಥೇಟರ್ ಕೇವಲ ಬೆಳ್ಳೇಕರೆಯಲ್ಲಿ ಅರಳಿದ ರಂಗಚಟುವಟಿಕೆಗಳ ಕುರಿತ ಕೃತಿಯೇನಲ್ಲ. ತಮ್ಮ ಸಮಕಾಲೀನ ರಾಜಕೀಯ, ಸಾಮಾಜಿಕ ಸ್ಥಿತಿಗತಿಗಳನ್ನೆಲ್ಲ ಪ್ರಸಾದ್ ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಇಲ್ಲಿನ ದ್ವಿತೀಯಾರ್ಧದ ಕಥನಗಳಿಗೆ ನಾನೂ ಸಹ ಪ್ರತ್ಯಕ್ಷ ಸಾಕ್ಷಿಯೇ. ಒಂದೆರಡು ಕಡೆ ನನ್ನನ್ನೂ ಪ್ರಸಾದ್ ಉಲ್ಲೇಖಿಸಿದ್ದಾರೆ.

ಆರು ತಿಂಗಳು ಮಳೆಯಲ್ಲಿ ಮುಳುಗಿ ಹೊರಜಗತ್ತಿನಿಂದ ಸಂಪರ್ಕವನ್ನೇ ಕಡಿದುಕೊಳ್ಳುವ (ಈಗ ಪರಿಸ್ಥಿತಿ ಸ್ವಲ್ಪ ಬದಲಾಗಿದೆ.) ಮಲೆನಾಡಿನ ಜನರ ರಾಜಕೀಯ ಪ್ರಜ್ಞೆ ನಿಬ್ಬೆರಗಾಗಿಸುವಂಥದ್ದು. ಇಂದಿರಾಗಾಂಧಿ, ದೇವರಾಜ ಅರಸು ಅವರನ್ನು ಜನರು ಸ್ವೀಕರಿಸಿದ ರೀತಿ ವಿಸ್ಮಯಕಾರಿ.

ರೈತ ಸಂಘದ ನಾಟಕೀಯ ಪ್ರವೇಶ, ತದನಂತರದ ಬೆಳವಣಿಗೆಗಳನ್ನೂ ಪ್ರಸಾದ್ ಆ ಸಂಘದಲ್ಲಿ ತೊಡಗಿಕೊಂಡವರಾದ್ದರಿಂದ ಅಧಿಕೃತವಾಗಿ ಉಲ್ಲೇಖಿಸಿದ್ದಾರೆ. ತುರ್ತು ಪರಿಸ್ಥಿತಿ, ಜೆಪಿ ಚಳವಳಿಯೂ ಸೇರಿದಂತೆ ಇನ್ನಿತರ ಚಳವಳಿಗಳೂ ಇಲ್ಲಿ ಪ್ರಾಸಂಗಿಕವಾಗಿ ಬಂದುಹೋಗಿವೆ.

ಪ್ರಸಾದ್ ರೈತ ಸಂಘದಂಥ ಚಳವಳಿಗಳಲ್ಲಿ ಕ್ರಿಯಾಶೀಲರಾಗಿದ್ದವರಾದರೂ ರಾಜಕಾರಣದ ಬಗ್ಗೆ ಸಿನಿಕತನ ಇಟ್ಟುಕೊಂಡವರಲ್ಲ. ಬೆಳ್ಳೇಕೆರೆಯ ಶಾಲೆಗೆ ಒಂದೆಕರೆ ಜಾಗ ಕೊಡಲು ಅರಣ್ಯ ಇಲಾಖೆಯವರು ಕಿರಿಕಿರಿ ಮಾಡುತ್ತಿದ್ದಾಗ ಆಗಿನ ಮುಖ್ಯಮಂತ್ರಿ ಎಚ್.ಡಿ.ದೇವೇಗೌಡರು ಸಹಾಯ ಮಾಡಿದ್ದು, ಕೇವಲ ಪತ್ರವೊಂದನ್ನು ಬರೆದದಕ್ಕೆ ರಂಗಮಂದಿರ ನಿರ್ಮಾಣಕ್ಕೆ ಬಂಗಾರಪ್ಪ ತಾವು ಮುಖ್ಯಮಂತ್ರಿಯಾಗಿದ್ದಾಗ ಜಾಗ ನೀಡಿದ್ದನ್ನು ಅವರು ಇಲ್ಲಿ ಸ್ಮರಿಸಿಕೊಂಡಿದ್ದಾರೆ. ಚಳವಳಿ, ಹೋರಾಟಗಳಲ್ಲಿ ಮುಳುಗಿದವರಿಗೆ ಅಧಿಕಾರ ರಾಜಕಾರಣದಿಂದ ಏನೂ ಸಾಧ್ಯವಿಲ್ಲ ಎಂಬ ಸಿನಿಕತನ ಆವರಿಸಿರುತ್ತದೆ. ಈ ಎರಡು ಘಟನೆಗಳಲ್ಲದೆ, ತಮ್ಮೂರಿನ ಶಾಲೆ, ರಸ್ತೆ, ನೀರು, ಬಸ್‌ನಿಲ್ದಾಣ ಇತ್ಯಾದಿಗಳಿಗಾಗಿ ಪ್ರಸಾದ್ ಮತ್ತು ಗೆಳೆಯರು ಪೊಲಿಟಿಕಲ್ ಆಕ್ಟಿವಿಸಮ್‌ಗೆ ಮೊರೆ ಹೋಗುತ್ತಾರೆ; ಯಶಸ್ವಿಯೂ ಆಗುತ್ತಾರೆ.

****

ಹಳ್ಳಿ ಥೇಟರ್ ಕೇವಲ ಬೆಳ್ಳೇಕೆರೆಯ ಕಥನವೂ ಅಲ್ಲದೆ, ಇಡೀ ಸಕಲೇಶಪುರ ತಾಲ್ಲೂಕಿನ, ಇನ್ನೂ ಮುಂದುವರೆದು ಚಿಕ್ಕಮಗಳೂರು, ಸಕಲೇಶಪುರ, ಕೊಡುಗು ಜಿಲ್ಲೆಗಳಲ್ಲಿ ಹರಡಿಕೊಂಡ ಮಲೆನಾಡಿನ ಚಿತ್ರಣಗಳನ್ನೂ ನೀಡುತ್ತದೆ. ಮಲೆನಾಡಿನ ರೈತರ, ಕೂಲಿಕಾರ್ಮಿಕರ ಸಮಸ್ಯೆಗಳನ್ನು ಕೃತಿ ಎಳೆಎಳೆಯಾಗಿ ಬಿಡಿಸಿಡುತ್ತದೆ. ಮಲೆನಾಡಿನ ವೈವಿಧ್ಯಮಯ ಬದುಕಿನ ರಂಜನೀಯ ದೃಶ್ಯಗಳೂ ಇಲ್ಲಿವೆ (ಥೇಟ್ ತೇಜಸ್ವಿಯವರ ಕಾದಂಬರಿಗಳಲ್ಲಿ ಕಾಣುವಂತೆ)

ಹೇಳಿಕೇಳಿ ಮಲೆನಾಡಿನ ಜನರು ಜೀವನ್ಮುಖಿಗಳು. ಕಡುಕಷ್ಟದಲ್ಲೂ ಸುಖವನ್ನು ಹುಡುಕಿಕೊಳ್ಳುವವರು. ವಿಪರೀತ ಹಾಸ್ಯಪ್ರಿಯರು. ಇದೆಲ್ಲದರ ನಡುವೆಯೂ ಈ ಜನರು ಜಿದ್ದಿಗೆ ಬಿದ್ದರೆ, ಕುಡುಗೋಲು-ಕತ್ತಿಗಳಿಂದ ಮಾತನಾಡುವವರು. ಇದಕ್ಕೆ ಸಾಕಷ್ಟು ಉದಾಹರಣೆಗಳು ಹಳ್ಳಿಥೇಟರ್‌ನಲ್ಲಿ ಕಾಣಿಸಿಕೊಳ್ಳುತ್ತವೆ. ಜಗಳ, ಹಲ್ಲೆ, ಕೊಲೆ ಇತ್ಯಾದಿಗಳ ವಿವರಗಳ ಮಧ್ಯೆಯೂ ಇದೆಲ್ಲವನ್ನೂ ಮೀರಿ ನಿಲ್ಲುವುದು ಇಲ್ಲಿನ ಜನರ ಸಾಂಸ್ಕೃತಿಕ ಕ್ರಿಯಾಶೀಲತೆ. ಅದನ್ನು ಪ್ರಸಾದ್ ಇಲ್ಲಿ ಚೆನ್ನಾಗಿ ಹಿಡಿದಿಟ್ಟಿದ್ದಾರೆ.

****

ಕರ್ನಾಟಕ ನಾಟಕ ಅಕಾಡೆಮಿ ಏರ್ಪಡಿಸಿದ್ದ ಗ್ರಾಮೀಣ ರಂಗೋತ್ಸವದಲ್ಲಿ ಪ್ರಸಾದ್ ಬರೆದ ಮಾಯಾಮೃಗ ನಾಟಕವನ್ನು ಬೆಳ್ಳೇಕರೆಯ ಜೈ ಕರ್ನಾಟಕ ಸಂಘದವರು ಆಡಿ ರಾಜ್ಯಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸುತ್ತಾರೆ.

ವಿಶೇಷವೆಂದರೆ ನಾಟಕ ತಂಡದಲ್ಲಿ ಇದ್ದವರ ಪೈಕಿ ಮೂವರು ಬಡಗಿಗಳು, ಇಬ್ಬರು ಗಾರೆಯವರು, ನಾಲ್ಕು ಜನ ಕೂಲಿಕಾರ್ಮಿಕರು. ಒಬ್ಬ ಟೈಲರ್, ಇಬ್ಬರು ಡ್ರೈವರ್‌ಗಳು, ಒಬ್ಬರು ಶಾಲಾ ಶಿಕ್ಷಕರು-ಉಳಿದವರು ಇಂಥದೇ ಬೇರೆ ಬೇರೆ ವೃತ್ತಿಗಳಲ್ಲಿ ಇದ್ದವರು, ಜತೆಯಲ್ಲಿ ಒಂದಿಬ್ಬರು ಶಾಲಾ ಮಕ್ಕಳು!

ಇಂಥದ್ದೊಂದು ರಂಗತಂಡ ರಾಜ್ಯದ ಇನ್ಯಾವ ಮೂಲೆಯಲ್ಲಾದರೂ ಇರಬಹುದೇ? ಇದ್ದರೂ ಹತ್ತಾರು ವರ್ಷಗಳಿಂದ ಹೀಗೆ ಕ್ರಿಯಾಶೀಲವಾಗಿ ಇದ್ದಿರಲು ಸಾಧ್ಯವೇ?

ಪ್ರಸಾದ್ ಅವರ ಹಳ್ಳಿಥೇಟರ್‌ನ ಕೆಲವು ಅಧ್ಯಾಯಗಳನ್ನು ಚಂಪಕಾವತಿ ಬ್ಲಾಗ್‌ನಲ್ಲಿ ಸುಧನ್ವಾ ದೇರಾಜೆ ಪುಸ್ತಕ ಬಿಡುಗಡೆಗೂ ಮುನ್ನವೇ ಕಾಣಿಸಿದ್ದರು. ಕುತೂಹಲವಿರುವವರು ಚಂಪಕಾವತಿಗೊಮ್ಮೆ ಭೇಟಿ ಕೊಡಿ.

ಬೆಳ್ಳೇಕರೆಯಲ್ಲಿ ಎದ್ದು ನಿಂತಿರುವ ಪ್ರಕೃತಿ ರಂಗಮಂಚವೂ ಸೇರಿದಂತೆ ಆ ಊರಿನ ಸಾಂಸ್ಕೃತಿಕ ವೈಭವ ನೋಡಲು ಹೋಗುವವರಿಗೆ ಅಲ್ಲಿ ಸ್ವಾಗತ ಇದ್ದೇ ಇರುತ್ತದೆ. ಪ್ರಸಾದ್ ಜತೆ ಮಾತನಾಡಲು ಬಯಸುವವರು ೯೪೪೮೮ ೨೫೭೦೧ ಮೊಬೈಲ್ ಸಂಖ್ಯೆಗೆ ಕರೆ ಮಾಡಬಹುದು.

ಸದ್ಯಕ್ಕೆ ಪ್ರಸಾದ್ ಸಕಲೇಶಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರೂ ಹೌದು. ಕಸಾಪಗೆ ಅಧ್ಯಕ್ಷರಾದಾಗ ನಾನು ಅವರಿಗೆ ಬರೆದ ಪತ್ರ ಇಲ್ಲಿದೆ.

****

ಆತ್ಮೀಯರಾದ ಶ್ರೀ ರಕ್ಷಿದಿ ಪ್ರಸಾದ್‌ರವರಿಗೆ,

ಅಭಿನಂದನೆಗಳು ಹಾಗು ಕೃತಜ್ಞತೆಗಳು.

ಸಾಂಸ್ಕೃತಿಕ ಶ್ರೀಮಂತಿಕೆ ಹೊಂದಿರುವ ಸಕಲೇಶಪುರದಲ್ಲಿ ಸಾಹಿತ್ಯದ ಹೊಸ ಅಲೆ ಎಬ್ಬಿಸಲು ಹೊರಟಿದ್ದೀರಿ. ಬೆಳ್ಳೆಕೆರೆ ನಾಟಕ ಸಂಘದ ಮೂಲಕ ಇಡೀ ಜಗತ್ತಿನ ತಲ್ಲಣಗಳಿಗೆ ಮುಖಾಮುಖಿಯಾಗಿ, ಹಳ್ಳಿಹುಡುಗರ ಅಭಿವ್ಯಕ್ತಿಗಳಿಗೆ ದನಿಯಾದವರು ನೀವು. ಒಂದು ಪುಟ್ಟ ಹಳ್ಳಿಯನ್ನು ಅಲ್ಲಿಯ ಎಲ್ಲ ಸಂವೇದನೆಗಳು ಹಾಗು ಜೀವದ್ರವ್ಯದ ಮೂಲಕವೇ ಹೊರಜಗತ್ತಿಗೆ ತೆರೆದು ಯಾರೂ ತುಳಿಯದ ಮಾರ್ಗವನ್ನು ಹುಟ್ಟುಹಾಕಿದವರು ನೀವು. ಈ ದೃಷ್ಟಿಯಲ್ಲಿ ಹೇಳುವುದಾದರೆ ಹೆಗ್ಗೋಡು ಮತ್ತು ಬೆಳ್ಳೇಕರೆ ಬೇರೆ ಬೇರೆಯಲ್ಲ. ನೀವು ಹಾಗು ಸುಬ್ಬಣ್ಣ ಬೇರೆಯಲ್ಲ.

ಹಾಗೆ ನೋಡಿದರೆ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷರ ಹುದ್ದೆ ನಿಮಗೆ ನಿಮಿತ್ತ ಮಾತ್ರ. ಅದರ ಮೂಲಕ ತಾಲ್ಲೂಕಿನಲ್ಲಿ ಏನನ್ನೋ ಮಾಡಲು ಹೊರಟಿದ್ದೀರಿ ಎಂಬುದು ನನ್ನ ಸಂಭ್ರಮದ ಗುಮಾನಿ! ಬೆಳ್ಳೆಕೆರೆಯನ್ನು ಸಾಂಸ್ಕೃತಿಕ ಜಗತ್ತಿನ ಭೂಪಟದಲ್ಲಿ ತಂದು ನಿಲ್ಲಿಸಿದವರು ನೀವು. ಈಗ ಇಡೀ ಸಕಲೇಶಪುರವನ್ನು ಎಲ್ಲಿಗೆ ಕರೆದೊಯ್ಯುವಿರೋ ಎಂಬ ಸಂತಸದ ಪ್ರಶ್ನೆಯೂ ನನ್ನದು.

ಸಕಲೇಶಪುರದಿಂದ ಒಂದು ಸಣ್ಣ ಕಲರವ ಕೇಳಿದರೂ ಅಲ್ಲಿಂದ ಇನ್ನೂರ ಇಪ್ಪತ್ತು ಕಿ.ಮೀ. ದೂರದಲ್ಲಿ ಕುಳಿತ ನನಗೆ, ನನ್ನಂಥವರಿಗೆ ರೋಮಾಂಚನವಾಗುತ್ತದೆ. ಕರಳು ಬಳ್ಳಿಯ ಸಂಬಂಧ ಎಂದರೆ ಇದೇ ಇರಬೇಕು. ಮುಗಿಯದ ವಾಂಚ್ಯೆ, ತೀರದ ದಾಹ, ಉಳಿದೇ ಉಳಿದ ಅತೃಪ್ತ ಕನಸುಗಳು.

ನಿಮ್ಮ ನೇತೃತ್ವದ ಸಾಹಿತ್ಯ ಪರಿಷತ್ತು ಕಾಫಿಯ ನಾಡಿನಿಂದ ಎಂಬ ಪುಟ್ಟ ಖಾಸಗಿ ಪತ್ರಿಕೆ ತಂದಿರುವುದು ವಿಶೇಷವಾಗಿ ನನಗೆ ಖುಷಿ ತಂದಿದೆ. ಹಿಂದೆ ನಾವು, ಸಕಲೇಶಪುರದಲ್ಲಿ ಕ್ರಿಯಾಶೀಲರಾಗಿದ್ದ ಗೆಳೆಯರೆಲ್ಲ ಸೇರಿ ತಂದಿದ್ದ ಕೈಬರಹದ ಪತ್ರಿಕೆ (ನಂತರ ಅದು ಡಿಟಿಪಿ ಪತ್ರಿಕೆಯಾಗಿ ರೂಪಾಂತರವಾಯಿತು) `ಸಂವಹನವನ್ನು ನೆನಪಿಸಿಕೊಂಡಿರುವುದು ಸಂತೋಷವನ್ನು ಇಮ್ಮಡಿಗೊಳಿಸಿತು. ಸಂವಹನ ವೇದಿಕೆ ಒಂದು ನೆನಪಾಗಿ ಉಳಿಯಿತಲ್ಲ ಎಂಬ ಸಂಕಟದ ಜತೆಯೇ ವೇದಿಕೆಯ ದಿನಗಳ ಹಳೆಯ ನೆನಪುಗಳೆಲ್ಲ ಸಾಲುಸಾಲಾಗಿ ಬಂದುನಿಂತು ಸಂತಸವಾಯಿತು. ಸಂವಹನವನ್ನು ನೆನಪಿಸಿಕೊಂಡು ಬರೆದ ಗೆಳೆಯ ಸ.ಸು.ವಿಶ್ವನಾಥ್‌ಗೂ, ನಿಮಗೂ ಮತ್ತೊಮ್ಮೆ ಧನ್ಯವಾದಗಳು.

ನಿಮ್ಮ ಜತೆ ದೂರವಾಣಿಯಲ್ಲಿ ಮಾತನಾಡಿದಾಗ ಹೇಳಿದಂತೆ `ಕಾಫಿಯ ನಾಡಿನಿಂದ ಪತ್ರಿಕೆ ಹಾಗು ನಿಮ್ಮ ನೇತೃತ್ವದ ಕನ್ನಡ ಸಾಹಿತ್ಯ ಪರಿಷತ್ ಸಕಲೇಶಪುರವನ್ನು ಕಾಡುತ್ತಿರುವ, ತಿಂದು ತೇಗುತ್ತಿರುವ ಎಲ್ಲ ಸಮಸ್ಯೆಗಳಿಗೆ ಎದುರು ನಿಲ್ಲಬೇಕಾಗಿದೆ. ತಾಲ್ಲೂಕು ಎದುರಿಸುತ್ತಿರುವ ಎಲ್ಲ ಸವಾಲುಗಳಿಗೆ ಉತ್ತರ ಹುಡುಕುವ ಯತ್ನ ನಡೆಸಬೇಕಾಗಿದೆ. ಸಾಂಸ್ಕೃತಿಕ ಪರಿಸರ ಜಡವಾಗಿದ್ದಾಗ ಸಮಾಜವೂ ಜಡವಾಗಿರುತ್ತದೆ. ಈ ಜಡತ್ವವನ್ನು ಕೊಡವಿಕೊಂಡು ಎದ್ದೇಳಲು ನಿಮ್ಮಂಥವರ ಪ್ರೇರಣೆ, ಮಾರ್ಗದರ್ಶನ ಅತ್ಯಗತ್ಯ. ಅದು ಈಗ ಸಾಧ್ಯವಾಗಿರುವುದು ನೆಮ್ಮದಿಯ ವಿಷಯ.

ಕಸಾಪ ಹೆಚ್ಚು ಹೆಚ್ಚು ತಲುಪಬೇಕಾಗಿರುವುದು ಶಾಲೆ, ಕಾಲೇಜುಗಳನ್ನು. ಆಧುನಿಕ ಜಗತ್ತು ಹೇರಿರುವ ಲೋಭಕೇಂದ್ರಿತ ಶಿಕ್ಷಣ ವ್ಯವಸ್ಥೆ ಹೊಸಹುಡುಗರಲ್ಲಿ ಚೈತನ್ಯ ಮೂಡಿಸುವ ಬದಲು ಧನದಾಹವನ್ನು ಮೂಡಿಸುತ್ತಿದೆ. ಕೇವಲ ಉದ್ಯೋಗಕ್ಕಾಗಿ, ಆರ್ಥಿಕ ವ್ಯವಸ್ಥೆಯ ಜಾಣ್ಮೆಗಾಗಿ ಕೊಡುವ ಶಿಕ್ಷಣ ಅದು ಶಿಕ್ಷಣವೇ ಅಲ್ಲ. ಶಿಕ್ಷಣ ಮಾನವೀಯವಾಗಿ ಬದುಕುವುದನ್ನು ಕಲಿಸಬೇಕು. ಕಸಾಪ ನಮ್ಮ ಶಾಲೆಗಳಲ್ಲಿ ಓದುವ ಮಕ್ಕಳಲ್ಲಿ ಸಾಹಿತ್ಯಕ, ಸಾಂಸ್ಕೃತಿಕ ಅಭಿರುಚಿಯನ್ನು ಬೆಳೆಸುವ ಕೆಲಸ ಮಾಡಲಿ ಎಂಬುದು ನನ್ನ ಆಸೆ.

`ಕಸಾಪ ಹಾಗು `ಕಾಫಿಯ ನಾಡಿನಲಿ ಎರಡೂ ಬೆಳೆಯಲಿ, ಕಾಫಿಯ ನಾಡು ಹಿಂದೆಂದಿಗಿಂತಲೂ ಆರ್ಥಿಕವಾಗಿ, ಸಾಂಸ್ಕೃತಿಕವಾಗಿ ಶ್ರೀಮಂತವಾಗಲಿ, ಮಾನವೀಯತೆಯ ಜೀವಸೆಲೆ ಎಂದೂ ಬತ್ತದಿರಲಿ ಎಂದು ಎಲ್ಲ `ಅನಿವಾಸಿ ಸಕಲೇಶಪುರಿಗರ ಪರವಾಗಿ ಹಾರೈಸುತ್ತೇನೆ.

ಎಲ್ಲ ಗೆಳೆಯರಿಗೂ, ಹಿರಿಯರಿಗೂ ನನ್ನ ನೆನಕೆಗಳು.

ಪ್ರೀತಿಯಿಂದ
ದಿನೂ ಸ.ಚಂ. (ದಿನೇಶ್ ಕುಮಾರ್ ಎಸ್.ಸಿ.)

Wednesday, July 15, 2009

ಮಳೆ ಎಂದರೆ...

ಮಳೆ ಎಂದರೆ...
ಏನೋ ಪಿಸುಗುಡಲು ಬಂದಂತೆ ಮೋಡಗಳೊಡಲು
ಏನೋ ಗುನುಗುಡಲು ಬಂದಂತೆ ಗಾಳಿಯ ಕಡಲು
ಅಮ್ಮನ ಕಸೂತಿಯ ಸ್ವೆಟರು
ಕಾಡಿ ಬೇಡಿದ ಮೇಲೆ ಅಪ್ಪ ಕೊಡಿಸಿದ ಬಣ್ಣದ ಛತ್ರಿ
ಮಂಡಿಯವರೆಗಿನ ಕಡುಗಪ್ಪು ಬೂಟು
ತಲೆಕಾಲಿನವರೆಗೆ ಹೊದ್ದ ರೇನ್‌ಕೋಟು
ಗೊಪ್ಪೆ, ಗೊರಗ;
ಮಳೆಗನ್ನೆಯರು ತೊಟ್ಟ ಪ್ಯಾಶ್ಲಿಕ್ಕಿನ ಹೊದಿಕೆ


(ಮಳೆಯಲ್ಲಿ ನೆನೆದು ತೊಪ್ಪೆಯಾಗಿರುವ ಸಕಲೇಶಪುರದ ಚಿತ್ರವಿದು. ಹೇಮಾವತಿ ಇಡೀ ಊರನ್ನೇ ಬಳಸಿ ತಬ್ಬಿ ಕೇಕೆ ಹೊಡೆಯುತ್ತಿದ್ದಾಳೆ.)

ಮಳೆ ಎಂದರೆ,
ಕಪ್ಪೆಗಳ ವಟವಟ
ಹಾವುರಾಣಿಯರ ಸರಸರ
ತಾತ ಆರಿದ್ದನ್ನೆ ಉರಿಸಿ ಸೇದುವ ನಝರ್ ಬೀಡಿ
ಸುಡುಸುಡು ಬೆಲ್ಲದ ಕಾಫಿ
ಅಮ್ಮ ಕೆಂಡದಲ್ಲಿ ಸುಡುವ ಗೇರು, ಹಲಸಿನಗಾಳು
ಗದ್ದೆಯಲ್ಲಿ ಸಿಕ್ಕಿಬೀಳುವ ಏಡಿ
ಹೊಳೆಯಲ್ಲಿ ಹರಿದುಬರುವ ಮರಳಿ ಮೀನು

ಮಳೆ ಎಂದರೆ
ಹಸಿಮಣ್ಣಿನ ಘಮದೊಂದಿಗೆ ಅರಳುವ ನೆನಪು
ನೀರಮನೆಯಲ್ಲಿ ಕಾದು ಕುಳಿತ ಪುಳಕದ ಬಿಸಿನೀರು
ಒಲೆಯ ಮುಂದೆ ಬಿಸಿಕಾಯಿಸಿಕೊಳ್ಳಲು ಚಾಚಿ ಸುಟ್ಟುಕೊಂಡ ಬೆರಳು
ಕೆಂಡ ಸುರಿದು, ಬಿದರಿನ ಬುಟ್ಟಿ ಮುಚ್ಚಿ
ಅದರ ಮೇಲೆ ಯೂನಿಫಾರ್ಮ್ ಹರಡಿ ಒಣಗಿಸುವಾಗ
ಎದ್ದು ಬರುವ ಹಸಿಹಸಿ ವಾಸನೆ

ಮಳೆ ಎಂದರೆ
ಪ್ರೇಮಿಯ ಎದೆನಡುಕ
ವಿರಹಿಯ ಒಡಲ ಉರಿ
ಮೊನಾಲಿಸಾಳ ನಗೆ
ಜಗಜಿತ್‌ನ ಗಜಲ್ಲು
ರಫಿಯ ಕವ್ವಾಲಿ
ಮುಖೇಶನ ದರ್ದ್‌ಭರೆ ಹಾಡು
ಎಲಿಯಟ್ಟನ ಕಾವ್ಯ
ಶೇಕ್ಸ್‌ಪಿಯರನ ನಾಟಕ

ಮಳೆ ಎಂದರೆ
ನನ್ನ ಚಿನ್ಮಯ ಸಂಗಾತಿಯ ಮುಂಗೈ
ಅವಳ ತಲೆಗೆ ಮೆತ್ತಿದ ಸೇವಂತಿಗೆಯ ಸುವಾಸನೆ
ಅವಳ ಶ್ವಾಸ, ಮೈಗಂಧ
ಗಮ್ಮೆನ್ನುವ ಮಡಿಲು

ಮಳೆ ಎಂದರೆ
ತುಡಿತ, ಜೀವ ಮಿಡಿತ
ರಾಗಸೆಳೆತ
ಮೋಹ, ಪ್ರೇಮ-ಕಾಮಗಳ ದಾಹ
ದೇಹಾತ್ಮಗಳ ಬಿಸಿಬಿಸಿ ಮಿಲನ
ನಿಟ್ಟುಸಿರ ವಿರಹ

ಮಳೆ ಎಂದರೆ
ಸುಖ
ಅದಮ್ಯ ಚೇತರಿಕೆಯ ಧನ್ವಂತರಿ

ಮಳೆ ಎಂದರೆ
ದುಃಖ
ಒಡಲ ಮೀಟುವ ವೇದನೆ
ಮಳೆ ಎಂದರೆ
ನೂರು ಮಕ್ಕಳ ಹೆತ್ತ ಗಾಂಧಾರಿಯ ಸ್ವಗತ
ಆಕಾಶದ ರವಿಕೆ
ಭುವಿಯು ಧರಿಸಿದ ನಿಲುವಂಗಿ
ಹಸಿರ ಜಾಥಾ


ಮಳೆ ಎಂದರೆ
ತ್ಯಾಗ
ಮಮಕಾರ
ಪ್ರಾಯ
ವಿಸ್ಮಯ
ಶೃಂಗಾರ

ಮಳೆ ಎಂದರೆ
ಭೂತ, ವರ್ತಮಾನ, ಭವಿಷ್ಯ

ಮಳೆ ಎಂದರೆ
ಅಧ್ಯಾತ್ಮ, ಜಗತ್ತು, ಬ್ರಹ್ಮಾಂಡ

ಮಳೆ ಎಂದರೆ ಮಳೆ
ನಾನು ಪ್ರೀತಿಸುವ ಮಳೆ
ನನ್ನ ದೇಹಾತ್ಮಗಳ ಹಣತೆಯಾದ ಮಳೆ
ನನ್ನ ಬದುಕಿನ ಮಳೆ
ನನ್ನ ಸಾವಿನ ಮಳೆ

ಮಳೆ ಎಂದರೆ
ನನ್ನ ಸಂಗಾತಿಯ ಬೆಚ್ಚನೆ ಮಡಿಲು.

(ನಮ್ಮೂರಲ್ಲಿ ಭರ್ಜರಿ ಮಳೆ. ಆಕಾಶ ಭೂಮಿ ಒಂದಾದ ಹಾಗೆ ಮಳೆ ಸುರಿಯುತ್ತಿದೆ ಎಂದು ಗೆಳೆಯರು ಹೇಳುತ್ತಿದ್ದಾರೆ. ಮಳೆ ಕುರಿತು ಹಿಂದೆ ಒಮ್ಮೆ ಬರೆದಿದ್ದ ಹರುಕು ಮುರುಕು ಬರೆಹ ಇಲ್ಲಿದೆ. ಇದು ಕವಿತೆಯಲ್ಲ; ಹೀಗಾಗಿ ತುಂಬಾ ವಾಚ್ಯವಾಯಿತು ಎಂದು ಗೆಳೆಯರು ಆರೋಪಿಸುವಂತಿಲ್ಲ.
ಮತ್ತೊಂದು ವಿಷಯ: ದೇಸೀಮಾತು ಬ್ಲಾಗ್‌ಗೆ ಇವತ್ತಿಗೆ (ಜು.೧೫) ಸರಿಯಾಗಿ ಒಂದು ವರ್ಷ. ಹಲವು ತಿಂಗಳ ಸೋಮಾರಿತನ, ಜಡತ್ವವನ್ನು ಕೊಡವಿಕೊಂಡು ಇನ್ನು ರೆಗ್ಯುಲರ್ ಆಗಿ ಬರೆಯುತ್ತೇನೆ ಎಂದು ನಿಮ್ಮೆಲ್ಲರನ್ನು ಬೆದರಿಸುತ್ತ, ನಮ್ಮೂರಿನ ಮಳೆಯಲ್ಲಿ ಮಳೆಯಾಗುವ ಕನಸಿನಲ್ಲಿ ಜಾರುತ್ತಿದ್ದೇನೆ.)

Monday, July 13, 2009

ಹಂದಿ, ಹಿಂಸೆ ಮತ್ತು ಮುಸ್ಲಿಮರು

ಗೆಳೆಯ ಮಲ್ನಾಡ್ ಮೆಹಬೂಬ್ ಬರೆದಿರುವ ಲೇಖನ ಇಲ್ಲಿದೆ. ನನ್ನನ್ನು ತೀವ್ರವಾಗಿ ಕಾಡಿದ್ದು`ಇವರ ಮುಂದೆ ಪ್ರಾಮಾಣಿಕವಾಗಿ ನಮ್ಮ ತಲೆ ಕಡಿದು ಅವರ ಪಾದದ ಮೇಲಿಟ್ಟರೂ, ಇದು ಎಳನೀರು ಚಿಪ್ಪು' ಎಂದು ವಾದಿಸುವವರ ಮುಂದೆ ಜಾಗೃತರಾಗಿ ಬದುಕುವುದನ್ನು ಅರ್ಥಮಾಡಿಕೊಳ್ಳಬೇಕು. ಎಂಬ ಸಾಲುಗಳು.

ಇಂಥ ಸಂದರ್ಭಗಳಲ್ಲಿ ಹಿಂದೆಮುಂದೆ ನೋಡದೆ ಬೀದಿಗಳಿಯುವ
ಮುಸ್ಲಿಂ ಗೆಳೆಯರಲ್ಲಿ ಈ ಲೇಖನ ಒಂದಷ್ಟು ವಿವೇಚನೆಯನ್ನೂ, ಕೋಮುವಾದಿ ಕೊಳಕರಲ್ಲಿ ನಾಚಿಕೆಯನ್ನೂ ಮೂಡಿಸಲಿ ಎಂಬುದು ನನ್ನ ಆಶಯ.


ಥಮಸ್......

ಪ್ರಖ್ಯಾತ ಕಾದಂಬರಿ ಥಮಸ್ ಜಗತ್ತಿಗೆ, ಅದರಲ್ಲೂ ವಿಶೇಷವಾಗಿ ಮುಸ್ಲಿಂ ಸಮಾಜಕ್ಕೆ ಗಮನಾರ್ಹವಾದ ಸಂದೇಶವನ್ನು ನೀಡಿದೆ. ಹಂದಿಯ ದೇಹ ನಿಮ್ಮ ಮಸೀದಿಗೆ ಯಾರಾದರೂ ಹಾಕಿದರೆ ಇದು ಕೋಮು ಹಿಂಸೆಗೆ ಬಳಸಲಾಗಿರುವ ತಂತ್ರ ಎಂಬುದನ್ನು ಅರ್ಥಮಾಡಿಕೊಳ್ಳಿ. ಒಂದು ಪ್ರಾಣಿಯ ದೇಹದಿಂದ ಯಾವುದೆ ಧರ್ಮವು ಅಧರ್ಮವಾಗುವುದಿಲ್ಲ. ಧರ್ಮದ ಹೆಸರಿನಲ್ಲಿ ಜನರು ಸಮಾಜದಲ್ಲಿ ನೀಚ ಕೆಲಸ ಮಾಡಿದರೆ ಆಗ ಮಾತ್ರ ಧರ್ಮ ಮಲಿನವಾಗುತ್ತದೆ ಎಂದು ಅದು ವಿವರಿಸುತ್ತದೆ.

ಇಸ್ಲಾಂ ಏನು ಹೇಳುತ್ತೆ?

ಇಸ್ಲಾಂ ಧರ್ಮದ ಪ್ರವಾದಿ ಮಹಮ್ಮದ್ ಪೈಗಂಬರರವರ ಅನುಮತಿ ಪಡೆದು ಅನ್ಯ ಧರ್ಮದ ವ್ಯಕ್ತಿಯೊಬ್ಬ, ರಾತ್ರಿ ಮಸೀದಿಯಲ್ಲಿ ತಂಗುತ್ತಾನೆ. ಬೆಳಿಗ್ಗೆ ಆತ ಮಸೀದಿಯಲ್ಲಿ ಹೇಸಿಗೆ ಮಾಡಿ ಹೋಗಿರುತ್ತಾನೆ. ಇದನ್ನು ಕಂಡ ಪ್ರವಾದಿಗಳು ತಮ್ಮ ಕೈಗಳಿಂದ ಹೇಸಿಗೆಯನ್ನು ಸ್ವಚ್ಛ ಮಾಡುತ್ತಾರೆ. ಇಂಥ ಸಂದರ್ಭದಲ್ಲಿ ಹೀಗೆ ಮಾಡಬೇಕು ಎಂದು ಪ್ರವಾದಿಯವರು ಸೂಚಿಸಿರುವ ಧರ್ಮಬದ್ಧ ಪರಿಹಾರ ಇದೆಂದು ಧರ್ಮಕ್ಕೆ ಸಂಬಂಧಿಸಿದ ಗ್ರಂಥಗಳು ಹೇಳುತ್ತವೆ.
ಸ್ವಘೋಷಿತ ಧರ್ಮಪಾಲಕರು ಮಾಡುತ್ತಿರುವುದೇನು?

ಕೋಮು ಹಿಂಸಾಚಾರ ನಡಸಲು ಹಿಂದಿನಿಂದಲೂ ಬಳಸುತ್ತಿರುವ ಹಳಸಲು, ಸವಕಲು ತಂತ್ರಗಳಲ್ಲಿ ಒಂದು, ಹಂದಿ ದೇಹವನ್ನು ಮುಸ್ಲಿಂ ಪ್ರಾರ್ಥನಾ ಸ್ಥಳಗಳಲ್ಲಿ ಹಾಕುವುದು! ಇದನ್ನು ಕಂಡ ಮುಸ್ಲಿಮರು ರೊಚ್ಚಿಗೆದ್ದು ಬೀದಿಗಿಳಿದರೆ ಕೋಮುವಾದಿಗಳ ಯೋಜನೆಯನ್ನು ಸಫಲಗೊಳಿಸುವುದು. ಪ್ರಾಣ, ಆಸ್ತಿ-ಪಾಸ್ತಿ ಹಾಗು ನೆಮ್ಮದಿ ತಂತಾನೆ ಹಾಳಾಗುವುದು.

ದನ ತಿನ್ನೋರಿಗೆ ದನದ ಬುದ್ದಿ!

ವೇದ ಸುಳ್ಳಾದರು, ಗಾದೆ ಸುಳ್ಳಾಗದು ಎಂಬಂತೆ ಹಂದಿ ದೇಹ ಮಸೀದಿಗೆ ಹಾಕಿದ ಸಂದರ್ಭದಲ್ಲಿ ಮುಸ್ಲಿಂ ಸಮಾಜದ ಅನೇಕರು ದನದ ಬುದ್ಧಿ ತೋರಿಸುತ್ತಿರುವುದು ವಿಷಾಧಕರ. ಹಾಲು, ಮೊಸರು, ಬೆಣ್ಣೆಯನ್ನು ಮಾತ್ರ ತಿನ್ನುವರಿಗಿಂತ, ದನದ ಮಾಂಸ ತಿನ್ನುವರೆ ಹೆಚ್ಚು ಸಾಧನೆಗಳನ್ನು ಮಾಡಿರುವುದಕ್ಕೆ ಜಗತ್ತಿನ ಬಹುತೇಕ ವಿಜ್ಞಾನಿಗಳು, ಉದ್ಯಮಿಗಳು, ಚಿಂತಕರು ಉದಾಹರಣೆಯಾಗಿ ನಿಂತಿದ್ದಾರೆ. ಆದರೆ ಪ್ರಾರ್ಥನಾ ಸ್ಥಳಕ್ಕೆ ಮಲಿನ ಪ್ರಾಣಿಯನ್ನು ಕೋಮುವಾದಿಗಳು ದುರುದ್ದೇಶದಿಂದ ಹಾಕಿದಾಗ ಕೆಲವು ಮುಸ್ಲಿಂಮರು ದನಗಳಂತೆ ತಮ್ಮ ಬುದ್ಧಿಯನ್ನು ಶಾಂತಿ ವಿರೋಧಿಗಳಿಗೆ ಒಪ್ಪಿಸಿ ಅವರ ಷಡ್ಯಂತ್ರಕ್ಕೆ ತಕ್ಕಂತೆ ವರ್ತಿಸುವುದರ ಮೂಲಕ ದನ ತಿನ್ನುವವರಿಗೆ ದನದ ಬುದ್ಧಿ ಯೆಂಬ ಗಾದೆ ಮಾತನ್ನು ಎತ್ತಿ ಹಿಡಿಯುತ್ತಿದ್ದಾರೆ.

ಅರ್ಥವಾಗದ್ದು........

ಸಮಾಜದ ಶಾಂತಿಯನ್ನು ಕದಡುವ ಉದ್ದೇಶದಿಂದಲೇ ಮುಸ್ಲಿಮರನ್ನು ಪ್ರಚೋದಿಸಲು, ಕೋಮುಗಲಭೆ ಸೃಷ್ಟಿಸಿ, ಶಾಂತಿ ಪ್ರಿಯರ ಪ್ರಾಣ, ಆಸ್ತಿ, ಪಾಸ್ತಿ ನಷ್ಟ ಮಾಡಲು ಕಾರ್ಯತಂತ್ರ ರೂಪಿಸಿ ಪ್ರಾರ್ಥನಾ ಸ್ಥಳಗಳಲ್ಲಿ ಹಂದಿ ದೇಹ ಹಾಕಲಾಗುತ್ತದೆ ಎಂಬ ಈ ಸತ್ಯ ಇಡಿ ಸಮಾಜಕ್ಕೆ ತಿಳಿದಿದ್ದರೂ, ಇಂಥ ಸಂದರ್ಭದಲ್ಲಿ ಕಿಡಿಗೇಡಿಗಳ ಕಾರ್ಯ ತಂತ್ರಕ್ಕೆ ತಕ್ಕಂತೆ, ಮುಸ್ಲಿಂ ಜನಾಂಗದ ಕೆಲವರು ವರ್ತಿಸುವುದು ಏಕೆ? ಎಂಬುದು ಅರ್ಥವಾಗುವುದಿಲ್ಲ.

ಗಮನಿಸಬೇಕಾದ ಅಂಶ......

ದೇವನನ್ನು ನಂಬುವ, ಮಹಮ್ಮದ್ ಪೈಗಂಬರ್‌ರವರ ಜೀವನ ಕ್ರಮವನ್ನು ತಮ್ಮ ಜೀವನದ ದಿನನಿತ್ಯದ ಬದುಕಿನಲ್ಲಿ ಆಳವಡಿಸಿಕೊಂಡು ಬದುಕಿ, ಮುಕ್ತಿಕಾಣಲು ಬಯಸುವ ಮುಸ್ಲಿಮರು ಮಸೀದಿಗೆ ಮಲಿನ ಪ್ರಾಣಿಯ ದೇಹ ಹಾಕಿದಾಗ ಪ್ರವಾದಿಯ ನಡೆ ನುಡಿಯನ್ನು ಏಕೆ ಪಾಲಿಸುವುದಿಲ್ಲ ಎಂಬುದು ಗಮನಿಸಬೇಕಾದ ಅಂಶವಾಗಿದ್ದು ಇದು ತರ್ಕಕ್ಕೆ ಸಿಗುವಂಥದ್ದಲ್ಲ.

ಅರ್ಥಮಾಡಿಕೊಳ್ಳಬೇಕಾಗಿರುವುದು.......

ಇಲ್ಲಿ ಓಟಿಗಾಗಿ ದೇವರು ಧರ್ಮವನ್ನು ಬೀದಿಗೆ ತಂದು ಬೆತ್ತಲೆಗೊಳಿಸುವ ಖಾದಿಧಾರಿಗಳಿದ್ದಾರೆ. ಖಾದಿಯೂಳಗೆ ಬಚ್ಚಿಟ್ಟುಕೊಂಡಿರುವ ಕೋಮುವಾದಿಗಳಿದ್ದಾರೆ. ಒಂದು ಕೋಮಿನ ಕರಿ ಕೋಟು ಧರಿಸಿರುವ ಕಾನೂನು ಪಾಲಕರಿದ್ದಾರೆ. ಕೋಮುವಾದಿ ವ್ಯವಸ್ಥೆಯನ್ನು ಪ್ರತಿನಿಧಿಸುವ ಆಡಳಿತ ರಾಜ್ಯದಲ್ಲಿ ಜಾರಿಯಲ್ಲಿದೆ. ಇವರ ಮುಂದೆ ಪ್ರಾಮಾಣಿಕವಾಗಿ ನಮ್ಮ ತಲೆ ಕಡಿದು ಅವರ ಪಾದದ ಮೇಲಿಟ್ಟರೂ, ಇದು ಎಳನೀರು ಚಿಪ್ಪು ಎಂದು ವಾದಿಸುವವರ ಮುಂದೆ ಜಾಗೃತರಾಗಿ ಬದುಕುವುದನ್ನು ಅರ್ಥಮಾಡಿಕೊಳ್ಳಬೇಕು.

ಏನು ಮಾಡಬೇಕು?

ಮಲೀನ ಪ್ರಾಣಿಯ ದೇಹವನ್ನು ಮಸೀದಿಗೆ ಹಾಕಿದಾಗ ಪೋಲಿಸರಿಗೆ ವಿಷಯ ತಿಳಿಸಬೇಕು. ಶ್ವಾನದಳ, ಬೆರಳಚ್ಚು ತಜ್ಞರು ಸ್ಥಳ ಪರಿಶೀಲಿಸುವವರೆಗೆ ಯಾರು ಹತ್ತಿರಕ್ಕೆ ಹೋಗಬಾರದು. ಪೋಲಿಸರ ಮಾರ್ಗದರ್ಶನದಂತೆ ನಡೆದುಕೊಂಡು ಮಸೀದಿ ಸ್ವಚ್ಚಗೊಳಿಸುವುದು. ಮಾದ್ಯಮದವರಿಗೆ ವಿಷಯ ತಿಳಿಸುವುದು. ಇಂಥಹ ವಿಷಯಗಳಿಂದ ಏನೂ ಸಾಧಿಸಲು ಸಾದ್ಯವಾಗುವುದಿಲ್ಲ ಎಂಬುದನ್ನು ತಮ್ಮ ಮಾನಸಿಕ ಸ್ಥೈರ್ಯ ಹಾಗು ಧಾರ್ಮಿಕ ವಿಚಾರಧಾರೆಗಳ ಮೂಲಕ ಸಾಬೀತುಪಡಿಸುವುದು. ಪೊಲೀಸರ ಆಶ್ರಯದಲ್ಲಿ ಸೌಹಾರ್ದ ಸಭೆಯನ್ನು ವಿಶಾಲವಾದ ಸಭಾಂಗಣದಲ್ಲಿ ನಡೆಸುವುದು. ಘಟನೆಯ ಬಗ್ಗೆ ಉರಿನ ಎಲ್ಲ ವರ್ಗದ ಜನರು ಸೇರಿ ಖಂಡಿಸುವಂಥ ವಿಶ್ವಾಸಾರ್ಹ ವಾತಾವರಣ ನಿರ್ಮಿಸುವುದು. ಪ್ರ್ರಾಮಾಣಿಕವಾದ ಚರ್ಚೆಗಳ ಮೂಲಕ ಎಲ್ಲ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವುದು.

ಈ ಎಲ್ಲ ಕ್ರಿಯೆಗಳ ಮೂಲಕ ದುಷ್ಟಶಕ್ತಿಗಳ ಷಡ್ಯಂತ್ರ ವಿಫಲಗೊಳಿಸುವುದು ಹಾಗು ಜಾತ್ಯತೀತ ಶಕ್ತಿಗಳ ಧ್ವನಿಯನ್ನು ಗಟ್ಟಿಗೊಳಿಸುವುದು. ಬದುಕಿಗೆ ಶಾಂತಿ ಸೌಹಾರ್ದತೆ ಎಷ್ಟು ಮುಖ್ಯ ಎಂಬುದನ್ನು ಸಮಾಜಕ್ಕೆ ಸಾರುವುದು. ಕಿಡಿಗೇಡಿಗಳು ಯಾವುದೆ ಧರ್ಮದವರಾಗಲಿ, ಅವರ ಕುತಂತ್ರಕ್ಕೆ ಬಲಿಯಾಗದಂತಹ ವಾತಾವರಣ ನಿರ್ಮಿಸುವುದು ಅತಿ ಜರೂರಿನ ಕರ್ತವ್ಯಗಳಾಗಬೇಕು.

ಧಾರ್ಮಿಕ ಮುಖಂಡರು ಚರ್ಚೆ, ಸಂವಾದ ನಡೆಸಿ ಅರಿವು ಮೂಡಿಸಲು ಯತ್ನಿಸಬೇಕು. ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನಾತ್ಮಕ ಹಾದಿಯಲ್ಲಿ ಪರಿಹಾರ ಕಂಡುಕೊಳ್ಳಬೇಕು. ಯುವಕರಿಗೆ ಅರಿವು ಮೂಡಿಸುವ ಕೆಲಸ ಆಗಬೇಕು. ಹಿಂಸೆಗೆ ಯಾರು ಬಲಿಯಾಗದಂತೆ ಎಚ್ಚರವಹಿಸಬೇಕು .
ಹಂದಿ ಮುಸ್ಲಿಂರಿಗೆ ಹರಮ್ (ದೇವ ನಿಷೇಧ) ಆಗಿದೆ. ಆಹಾರವಾಗಿ ಸೇವಿಸುವಂತಿಲ್ಲ. ಹರಮ್ ಹಂದಿಗೆ ಮಾತ್ರ ಸೀಮಿತವಾಗಿಲ್ಲ. ಬಡ್ಡಿ ವ್ಯವಹಾರ, ಅನೈತಿಕ ಸಂಬಂಧ, ವ್ಯಭಿಚಾರ, ಮದ್ಯ ಸೇವನೆ, ಕೊಲೆ, ಸುಲಿಗೆ ಇತ್ಯಾದಿಗಳು ಕೂಡ ಹರಮ್. ಹರಮ್‌ನಲ್ಲಿ ಹಂದಿಗೆ ಹೆಚ್ಚು ಮಾನ್ಯತೆ ನೀಡಿ ಇತರೆ ವಿಷಯಗಳಿಗೇನು ಕಡಿಮೆ ಆದ್ಯತೆ ನೀಡಿಲ್ಲ. ಅರ್ಥಾತ್ ಧರ್ಮದ ದೃಷ್ಟಿಯಲ್ಲಿ ಈ ಎಲ್ಲವೂ ಒಂದೇ.

ಶೋಷಿತರು, ದೌರ್ಜನ್ಯಕ್ಕೆ ಒಳಗಾದವರು ತಮ್ಮ ಹನಿ ಹನಿ ಕಣ್ಣೀರನ್ನು, ದುಃಖವನ್ನು, ಆಕ್ರೋಶವನ್ನು ಶೇಖರಿಸಿ ಸಾಗರದ ಸುನಾಮಿ ಅಲೆಯಾಗಿಸಿಕೊಳ್ಳಬೇಕು. ಹೆದರಿಕೆಯ ಎದೆ ಬಡಿತದ ಸದ್ದನ್ನು ಅದುಮಿ ಕೂಡಿಟ್ಟು, ಗುಡುಗಾಗಿಸಿ ಮುಂದಿನ ಚುನಾವಣೆಯಲ್ಲಿ ಬ್ಯಾಲೆಟ್ ಮೇಲೆ ಪ್ರಯೋಗಿಸಬೇಕು. ಈ ವ್ಯವಸ್ಥೆಯನ್ನು ಬದಲಾಯಿಸಿ ಪ್ರ್ರಾಮಾಣಿಕ ವ್ಯಕ್ತಿಗಳಿಂದ ಕೂಡಿದ ಜನತಂತ್ರ ವ್ಯವಸ್ಥೆ ಆಡಳಿತಕ್ಕೆ ಬರುವಂತೆ ಮಾಡಿದಾಗ ಮಾತ್ರ ನ್ಯಾಯ ಪಡೆಯಲು ಸಾಧ್ಯ ಬೀದಿಯಲ್ಲಿ ಕೂಗಾಡುವುದರಿಂದ, ಕಲ್ಲೆಸೆಯುವುದರಿಂದ, ಅಮಾಯಕರನ್ನು ಇರಿಯುವುದರಿಂದ ಏನೂ ಸಾಧ್ಯವಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಸಮಾಜವನ್ನು ಹಂದಿಯ ಸುತ್ತ ಗಿರಕಿ ಹೊಡೆಯಲು ಬಿಡಬಾರದು.

-ಮಲ್ನಾಡ್ ಮೆಹಬೂಬ್ ಸಕಲೇಶಪುರ